ಕಿರು ಕಾದಂಬರಿ: ಭಾವ ಸಂಬಂಧ- ಎಳೆ 5

Share Button


(ಕಳೆದ ಸಂಚಿಕೆಯಿಂದ : ವಿಶಿಷ್ಟ ಸನ್ನಿವೇಶದಲ್ಲಿ ಭೇಟಿಯಾಗಿ, ಇತ್ತೀಚೆಗೆ ಒಂದೇ ಮನೆಯಲ್ಲಿ ವಾಸಿಸಲಾರಂಭಿಸಿದ ಒಂಟಿಜೀವಗಳಾದ ಸೀತಕ್ಕ ಹಾಗೂ ನರ್ಸ್ ಸರಸ್ವತಿ ಅವರ ನಡುವೆ ಬಹಳ ಆತ್ಮೀಯವಾದ ಬಾಂಧವ್ಯ ಬೆಳೆಯುತ್ತಿದೆ.  ಸೀತಕ್ಕ ತನ್ನ ಬಗ್ಗೆ ನಾಳೆ ತಿಳಿಸುವೆನೆಂದು ನಿದ್ರೆಗೆ ಜಾರಿದರೆ, ಸರಸ್ವತಿಯ ಮನಸ್ಸಿನಲ್ಲಿ ತನ್ನ ಬಾಲ್ಯದ ಕಹಿ, ಆಸರೆ ಕೊಟ್ಟ ದಂಪತಿಯ ವಾತ್ಸಲ್ಯ,  ತಾನು ನರ್ಸಿಂಗ್ ತರಬೇತಿ ಪಡೆಯುವಂತಾದುದು   ..ಇತ್ಯಾದಿ ನೆನಪುಗಳ ಮೆರವಣಿಗೆ ಶುರುವಾಯಿತು.. …..ಮುಂದಕ್ಕೆ ಓದಿ)

ಸೇರಿದ ಎರಡು ದಿನಗಳಲ್ಲೇ ಸೀತಮ್ಮನವರ ಕರ್ತವ್ಯ ನಿಷ್ಟೆಗೆ ಇಡೀ ತಂಡವೇ ಬೆರಗಾಗಿ ಬಿಟ್ಟಿತ್ತು. ಬೇರೆ ಸೂಕ್ಷ್ಮ ಸ್ಥಿತಿಯಲ್ಲಿರುವ ರೋಗಿಗಳ ಮಲ ಎತ್ತುವುದರಿಂದ ಹಿಡಿದು, ರೋಗಿಗಳ ಮನೆಯವರುಗಳಿಗೆ ಫೋನಿನಲ್ಲಿ ಧೈರ್ಯ ಹೇಳುವ ತನಕ, ಅವರುಗಳೊಂದಿಗೆ ಕುಳಿತು ಅವರ ಕಷ್ಟ ಸುಖಗಳನ್ನು ವಿಚಾರಿಸುವುದು, ಅವರನ್ನು ಸರಳ ವ್ಯಾಯಾಮ ಮಾಡಲು ಪ್ರೇರೇಪಿಸುವುದು, ಒಂದೇ ಎರಡೇ. ಎಲ್ಲ ಕೆಲಸಗಳನ್ನು ಶ್ರದ್ಧೆಯಿಂದ ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಸತೀಶರಾಯರಿಗೂ ಹೆಂಡತಿಯ ಕಾಳಜಿ, ಪ್ರೀತಿ ಹೇರಳವಾಗಿ ಸಿಗುತ್ತಿತ್ತು. ತನಗಾಗಿ, ತನ್ನ ಜೀವವನ್ನು ಒತ್ತೆ ಇಟ್ಟು ತನ್ನ ಹಿಂದೆ ಬಂದ ಸೀತಾ, ಬೇರೆ ರೋಗಿಗಳ ಯೋಗಕ್ಷೇಮವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುವುದು ನೋಡಿ ಅವರ ಹೃದಯ ಹೆಂಡತಿಯ ಬಗ್ಗೆ ಹೆಮ್ಮೆಯಿಂದ ಬೀಗುತ್ತಿತ್ತು. ಕಣ್ಣುಗಳಲ್ಲೇ ಹೆಂಡತಿಗೆ ಮೆಚ್ಚುಗೆ, ಕೃತಜ್ಞತೆಗಳನ್ನು ತಿಳಿಸುತ್ತಿದ್ದರು.

ಒಮ್ಮೊಮ್ಮೆ ಆಯಾಸಗೊಂಡ ಸೀತಮ್ಮನವರ ಮುಖವನ್ನು ನೋಡಲಾಗದೇ ಸರಸ್ವತಿ, ಅವರನ್ನು ತನ್ನ ಕ್ವಾರ್ಟಸ್ಸಿಗೆ ಹೋಗಿ ಆರಾಮ ಮಾಡಲು ಹೇಳುತ್ತಿದ್ದಳು. ಸೀತಮ್ಮ ಸುತಾರಾಂ ಒಪ್ಪಿತ್ತಿರಲಿಲ್ಲ. ಅಲ್ಲೇ ಒಂದು ಮೂಲೆಯಲ್ಲಿ ಹಾಸಿಕೊಂಡು ಸ್ವಲ್ಪ ಹೊತ್ತು ನಿದ್ದೆ ಮಾಡಿ ಎದ್ದು ಮತ್ತೆ ಬತ್ತದಾ ಉತ್ಸಾಹದಿಂದ ಪತಿ ಹಾಗೂ ಮಿಕ್ಕ ರೋಗಿಗಳ ಸೇವೆಗೆ ಸಿದ್ದರಾಗುತ್ತಿದ್ದರು.
ವಿಧಿ ತನ್ನ ಕ್ರೂರ ಮುಖದ ಪರಿಚಯ ಕೊನೆಗೂ ಮಾಡಿಯೇ ಕೊಟ್ಟಿತು. ಆಸ್ಪತ್ರೆಗೆ ಸೇರಿದ ಆರನೆಯ ದಿನ ಸಂಜೆಯ ವೇಳೆಗೆ ಸತೀಶರಾಯರ ಪರಿಸ್ಥಿತಿ ಬಿಗಡಾಯಿಸ ಹತ್ತಿತು. ಸೀತಮ್ಮನ ಪ್ರೀತಿಯಾಗಲೀ, ಸರಸ್ವತಿಯ ಆರೈಕೆಯಾಗಲೀ, ವೈದ್ಯರು ಮತ್ತಿತರ ಸಿಬ್ಬಂದಿಯ ಚಿಕಿತ್ಸೆಯಾಗಲೀ ವಿಧಿಯ ಕ್ರೂರತ್ವದ ಮುಂದೆ ಏನೂ ಮಾಡಲಾಗದೆ ಸೋಲೊಪ್ಪಿಕೊಳ್ಳ ಬೇಕಾಯಿತು. ಮಧ್ಯಾನ ಕೂಡ ಪತ್ನಿಯ ಕೈಯಲ್ಲಿ ಅಕ್ಕರೆಯಿಂದ ಊಟ ಮಾಡಿಸಿಕೊಂಡಿದ್ದ ಸತೀಶರಾಯರು ರಾತ್ರಿ ಒಂಭತ್ತು ಗಂಟೆಯ ವೇಳೆಗೆ ಇನ್ನಿಲ್ಲವಾದರು. ಸೀತಮ್ಮ ನಿಶ್ವೇತರಾಗಿ ಬಿಟ್ಟರು. ಸರಸ್ವತಿಗೆ ತಾನು ರಾಮರಾಯರನ್ನು ಕಳೆದಕೊಂಡಾಗಿನ ಘಟನೆ ಮರುಕಳಿಸಿದಂತೆ ಆಯಿತು.

ದಾಖಲೆಗಳಲ್ಲಿ – ಕರೋನಾ ದಾಳಿಗೆ ಮತ್ತೊಂದು ಬಲಿ, ಎಂದು ಒಂದು ಸಂಖ್ಯೆ ಸೇರಿಸಲ್ಪಟ್ಟಿತು. ಮಾಧ್ಯಮಗಳಿಗೂ ವರದಿ ಹೋಯಿತು.ಇಲಾಖೆಯವರೇ ಅಂತ್ಯ ಸಂಸ್ಕಾರವನ್ನು ಮುಗಿಸಲು ತಯ್ಯಾರಾದರು. ಸೀತಮ್ಮ ಒಮ್ಮೆ ಜೋರಾಗಿ ಕಣ್ಣುಗಳನ್ನು ಅರಳಿಸಿ, ಪತಿಯ ಮುಖವನ್ನು ದೀರ್ಘವಾಗಿ ದೃಷ್ಟಿಸಿ ಖಾಲೀ ಮನದೊಂದಿಗೆ ದೂರ ಸರಿದರು. ಸತೀಶರಾಯರ ದೇಹಾತ್ಮ ಪಂಚಭೂತಗಳಲ್ಲಿ ಲೀನವಾಯಿತು.


ಸರಸ್ವತಿ ಮಾತನಾಡದೇ ಮೌನದಿಂದಲೇ ಸೀತಮ್ಮನವರನ್ನು ಸಂತೈಸಿದಳು. ಹಿರಿಯ ಅಧಿಕಾರಿಗಳ ಅಪ್ಪಣೆ ಪಡೆದು ತನ್ನ ಮನೆಗೆ ಕರೆದೊಯ್ದಳು. ಎರಡು ದಿನಗಳು ಹೊತ್ತು ಹೊತ್ತಿಗೆ ಬೇಕಾದ್ದನ್ನೆಲ್ಲಾ ಮಾಡಿ, ಅವರ ಮನ, ಪರಿಸ್ಥಿತಿಯನ್ನು ಒಪ್ಪಿಕೊಳ್ಳುವಂತೆ ಮಾಡಿದಳು.

ಮೂರನೆಯ ದಿನ ಸರಸ್ವತಿ ಏಳುವ ಮುಂಚೆಯೇ ಎದ್ದು ಸೀತಮ್ಮ ತಯ್ಯಾರಾಗಿ ಕುಳಿತರು. ಸರಸ್ವತಿ ಎದ್ದು ಬಂದೊಡನೆ ಹೇಳಿದರು – ಆಯಿತು ಸರಸ್ವತಿ, ನನ್ನ ಪ್ರಾಪ್ತಿ ಇಷ್ಟೇ ಇದ್ದದ್ದು. ಇರಲಿ, ಅವರು ಎಲ್ಲಿ ಹೋಗಿದ್ದಾರೆ, ಹುಟ್ಟಿದ ನಂತರ ಒಬ್ಬರು ಮುಂದೆ, ಒಬ್ಬರು ಹಿಂದೆ ಹೋಗಲೇ ಬೇಕಲ್ಲ. “ಜಾತಸ್ಯ ಮರಣಂ ದೃವಂ” ಅನ್ನುವಂತೆ. ರಾಜರತ್ನಂ ಅವರ ರತ್ನನ ಪದಗಳಲ್ಲಿ, ರತ್ನ ತನ್ನ ಹೆಂಡತಿ ನಂಜಿ ತೀರಿಕೊಂಡಾಗ ಹೇಳುತ್ತಾನೆ, – ಶ್ರೀರಂಗ್ ಪಟ್ಣದ ತಾವ್ ಕಾವೇರಿ ಕವ್ಲಾಗ್ ಹರಿದ್ರೂ, ಮುಂದೆ ಸಂಗಮ್ ದಾಗೆ ಒಂದಾಗಿ ಸೇರತೈತಲ್ಲ, ಹಾಗೆ ನಾನೂ ಬಂದು ನಿನ್ನ ಸೇರ್ಕೊತೀನ ಅಂತ, ಅದನ್ನೇ ನಿನ್ನೆ ರಾತ್ರಿಯೆಲ್ಲಾ ಯೋಚಿಸಿ ಮನಸ್ಸನ್ನು ಗಟ್ಟಿಮಾಡಿಕೊಂಡೆ ಸರಸ್ವತಿ. ಇಂದಿನಿಂದ ನಾನೂ ಮತ್ತೆ ಆಸ್ಪತ್ರೆಗೆ ಬರ್ತೀನಿ. ನನ್ನ ವಸ್ತು ಹೋದ ತಕ್ಷಣ, ಕೆಲಸ ನಿಲ್ಲಿಸಿ, ನನ್ನ ಕಣ್ಣಲ್ಲಿ ನಾನೇ ಸ್ವಾರ್ಥಿ, ಕೀಳುಮಟ್ಟದವಳಾಗಲಾರೆ. ಇನ್ನು ಏನಿದ್ದರೂ ನನ್ನ ಮೈಯಲ್ಲಿ ಶಕ್ತಿ ಇರುವ ತನಕ ನನ್ನ ಸೇವೆ ಈ ರೋಗಿಗಳಿಗೇ ಮೀಸಲು. ನಡೀ ತಯಾರಾಗು, ಆಸ್ಪತ್ರೆಗೆ ಹೋಗೋಣ – ಎಂದರು.

ಸರಸ್ವತಿ, ಆ ವೃದ್ಧೆಯ ಮನಸ್ಥೈರ್ಯಕ್ಕೆ, ಧೃಡನಿರ್ಧಾರಕ್ಕೆ ಒಂದು ಕ್ಷಣ ದಂಗಾಗಿ ಬಿಟ್ಟಳು. ನಂತರ ಸಾವರಿಸಿಕೊಂಡು – ನಿಮಗೆ ತುಂಬಾ, ಮಾನಸಿಕವಾಗಿ, ದೈಹಿಕವಾಗಿ ಆಯಾಸವಾಗಿದೆ. ಇನ್ನೊಂದೆರಡು ದಿನಗಳು ಸುಧಾರಿಸಿಕೊಳ್ಳಿ, ನಂತರ ಬರುವಿರಂತೆ – ಎನ್ನಲು, ಇಲ್ಲ, ಬೇಡ, ನನಗೆ ದೈಹಿಕ ಆಯಾಸವಾದಷ್ಟೂ, ಮನಸ್ಸು ಯೋಚನೆಗಳಿಂದ ಮುಕ್ತಿಹೊಂದುತ್ತೆ. ಈಗ ನಿನ್ನೊಂದಿಗೆ ಬರುತ್ತೇನೆ. ಕೈಲಿ ಆಗದಿದ್ದರೆ ವಾಪಸ್ಸು ಬಂದರಾಯಿತು – ಎಂದರು. ಸರಸ್ವತಿ ಒಪ್ಪಿ ತಲೆಯಾಡಿಸಿದಳು.

ಮುಂದಿನದೆಲ್ಲ ತನ್ನಂತಾನೇ ನಡೆದುಹೋಯಿತು. ಸೀತಮ್ಮನವರು ಸರಸ್ವತಿಗೆ ಸೀತಕ್ಕನಾದರು. ಸೀತಮ್ಮನವರಿಗೆ ಸರಸ್ವತಿ, ಸರಸೂ ಆದಳು. ಇವಳು ಅವರಲ್ಲಿ ತಾನು ಕಳೆದುಕೊಂಡ ರಾಜಮ್ಮನವರ ಛಾಪನ್ನು ಕಂಡರೆ, ಸೀತಕ್ಕ ಇವಳಲ್ಲಿ, ದೂರದಲ್ಲಿರುವ ಮಗಳ ಮಮತೆಯನ್ನು ಕಾಣಹತ್ತಿದರು.

ಸರಸು, ಸೀತಕ್ಕನನ್ನು ಒಪ್ಪಿಸಿ ತನ್ನ ಮನೆಯಲ್ಲೇ ಕರೆದುಕೊಂಡು ಬಂದು ಇಟ್ಟುಕೊಂಡಳು. ಹಿರಿಯ ಅಧಿಕಾರಿಗಳೂ ಸೀತಕ್ಕನವರ ಕೆಲಸ ಕಾರ್ಯಗಳಿಂದ ಸಂಪ್ರೀತರಾಗಿ ಅವರನ್ನು ಖಾಯಂ ಸ್ವಯಂ ಸೇವಕರು ಎಂದು ನೊಂದಾಯಿಸಿಕೊಂಡು ಅದರಂತೆ ಅವರಿಗೆ ಸಿಗಬೇಕಾದ ಸೌಲಭ್ಯಗಳು, ಕೆಲಸದ ಅವಧಿ ಎಲ್ಲವನ್ನೂ ನಿಗಧಿ ಪಡಿಸಿದರು. ಸರಸುವೂ ಆದಷ್ಟು ತಮ್ಮಿಬ್ಬರಿಗೂ ಒಂದೇ ಡ್ಯೂಟಿ ಬೀಳುವಂತೆ ನೋಡಿಕೊಳ್ಳುತ್ತಿದ್ದಳು. ಒಮ್ಮೊಮ್ಮೆ ಬೇರೆ ಹೋಗಬೇಕಾಗುತ್ತಿತ್ತು. ಇಬ್ಬರೂ ಗೊಣಗದೆ ಒಪ್ಪಿಕೊಂಡು ಹೋಗುತ್ತಿದ್ದರು.

ಸತೀಶರಾಯರು ತೀರಿಕೊಂಡ ಕೆಲವು ದಿನಗಳ ನಂತರ, ಇಬ್ಬರೂ, ಒಮ್ಮೆ ಎರಡು ದಿನಗಳ ರಜೆ ಪಡೆದು ಸೀತಕ್ಕನ ಮನೆಗೆ ಹೋಗಿ ಸಾಮಾನುಗಳನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಿ ಅವರಿಗೆ ಅಗತ್ಯ ಎನಿಸುವ ಸಾಮಾನುಗಳನ್ನು ಕ್ಷಾರ್ಟಿಸ್ಸಿಗೇ ವರ್ಗಾಯಿಸಿಕೊಂಡರು. ಹೇಗೂ ಸೀತಕ್ಕ ಇದ್ದದ್ದು ಭೊಗ್ಯಕ್ಕೆ ಹಾಕಿಕೊಂಡ ಮನೆ. ಮನೆಯ ಮಾಲೀಕರಿಗೆ ಬೀಗದ ಕೈ ಒಪ್ಪಿಸಿ ಆದಷ್ಟು ಬೇಗ ತಮಗೆ ಭೋಗ್ಯದ ಹಣ ನೀಡುವಂತೆ ಹೇಳಿದರು.

ಅವರೂ, ಇವರಂತಹ ಸಾತ್ವಿಕ ದಂಪತಿಗಳ ಸದ್ಗುಣಗಳನ್ನು ಸ್ವರಿಸುತ್ತಾ ಆದಷ್ಟು ಬೇಗ ಭೊಗ್ಯದ ಹಣವನ್ನು ತಲುಪಿಸುವುದಾಗಿ ಹೇಳಿದರು. ಮತ್ತು ಹಾಗೆಯೇ ನಡೆದುಕೊಂಡರು ಕೂಡ. ಆ ಹಣವನ್ನು ಸರಸ್ವತಿ ಸೀತಕ್ಕನವರ ಹೆಸರಿನಲ್ಲಿ ಪೋಸ್ಟ ಆಫಿಸಿನಲ್ಲಿ ಡಿಪಾಸಿಟ್ ಇಟ್ಟಳು.

ಅಲ್ಲಿಗೆ ಸೀತಮ್ಮನವರ ಹೊಸ ಅಧ್ಯಾಯ ಪ್ರಾರಂಭವಾದಂತೆ ಆಯಿತು.ಒಂದು ವಾರದ ರಜ ದಿನ ಸರಸುವಿಗೆ – ಬಾ ಸರಸು, ತಲೆಗೆ ಎಣ್ಣೆ ಇಡುತ್ತೇನೆ. ಸ್ವಲ್ಪ ಹೊತ್ತು ನೆಂದು ತಲೆ ಸ್ನಾನ ಮಾಡು, ದೇಹ ತಂಪಾಗುತ್ತೆ – ಎನ್ನುತ್ತಾ ಅಕ್ಕರೆ ತೋರಿದಾಗ ಸರಸ್ವತಿಗೆ ತಮ್ಮೀ ಬಾಂಧವ್ಯಕ್ಕೆ ಏನು ಹೆಸರು ಕೊಡಬಹುದು ಎಂದು ಯೋಚಿಸುವಂತಾಯಿತು.

ಎರಡು ಒಂಟಿ ಜೀವಗಳು ಒಂದಾಗಿ, ಒಬ್ಬರಿಗೊಬ್ಬರು ಆಸರೆಯಾಗಿ ಸೇವಾ ಮನೋಭಾವದಿಂದ ಜನಸೇವೆ ಮಾಡಿಕೊಂಡು ಜೀವನವನ್ನು ಸಾರ್ಥಕಪಡಿಸಿಕೊಳ್ಳ ತೊಡಗಿದರು.ಹಾಗೇ ಒಂದು ದಿನ, ಸೀತಕ್ಕನ ಮಡಿಲಲ್ಲಿ ತಲೆಯಿಟ್ಟು ಮಲಗಿ – ಸೀತಕ್ಕಾ ಇಂದು ನನ್ನೆಲ್ಲಾ ಹಿಂದಿನ ಕಥೆಯನ್ನು ನಿಮಗೆ ಹೇಳ ಬೇಕೆನಿಸುತ್ತಿದೆ, ಹೇಳಲೇ, ಕೇಳುವಿರಾ – ಎಂದಳು.

ಸೀತಕ್ಕ, ಒಂದು ಕ್ಷಣ ಏನೂ ಮಾತನಾಡಲಿಲ್ಲ. ಸರಸ್ವತಿಯೇ ಸೂಕ್ಮವನ್ನರಿತು ಮುಂದುವರೆದು – ಸೀತಕ್ಕಾ ನನಗೆ ಹೇಳಬೇಕು ಅನ್ನಿಸುತ್ತಿದೆ, ನಿಮಗೆ ಕೇಳೋಣ ಅನ್ನಿಸಿದರೆ ಮಾತ್ರ ಹೇಳುತ್ತೀನಿ. ಆದರೆ ನಂತರ ನಿಮ್ಮನ್ನು, ನಿಮ್ಮ ಕಥೆ ಹೇಳಿ ಎಂದು ಖಂಡಿತಾ ಪೀಡಿಸುವುದಿಲ್ಲ. ನಿಮಗೆ ಎಂದಾದರು ಹೇಳಬೇಕೆಂದು ಅನ್ನಿಸಿದರೆ ಮಾತ್ರ ಖಂಡಿತಾ ಹೇಳಿ ಕೇಳುತ್ತೇನೆ.
ನಿಮ್ಮ ಅಕ್ಕರೆಗೆ ಏಕೋ ಹೃದಯ ತುಂಬಿ ಬರುತ್ತಾ ಇದೆ. ಇದ್ಯಾವ ಬಾಂಧವ್ಯವೋ, ಬಂಧನವೋ ತಿಳಿಯದು. ನನ್ನ ಕಥೆ ಕೇಳಿದರೆ ನೀವೇ ಆಶ್ಚರ್ಯ ಪಡುತ್ತೀರಿ. ಬ್ಲಡ್ ಈಜ಼್ ಥಕ್ಕರ್ ದೆನ್ ವಾಟರ್ ಅನ್ನುತ್ತಾರೆ. ಆದರೆ ನನ್ನ ಜೀವನದಲ್ಲಿ ಮಾತ್ರ ಹಾಗಾಗಲೇ ಇಲ್ಲ. ನನ್ನ ಅಮ್ಮ, ಅಣ್ಣ, ನೀವು ಎಲ್ಲರೂ ನನಗೆ ಎಷ್ಟೊಂದು ಪ್ರೀತಿ ವಿಶ್ವಾಸಗಳನ್ನು ನೀಡುತ್ತಿದ್ದೀರಿ. ಯಾರಿಗಾದರೂ ಹೇಳಿದರೆ ನಂಬುವುದೇ ಇಲ್ಲ. ʼಏ ಹೀಗೆಲ್ಲಾ ಇರಲು ಸಾಧ್ಯವೇ?ʼ ಎನ್ನುತ್ತಾರೆ. ನನಗೇ ಒಮ್ಮೆ ಹಿಂದಿರುಗಿ ನೋಡಿದಾಗ ಆಶ್ಚರ್ಯವಾಗುತ್ತದೆ, ಎಂತೆಂಥಹ ಸಜ್ಜನರು ಇರುತ್ತಾರೆ, ನಿಮ್ಮಂತೆ ಸೀತಕ್ಕಾ – ಎಂದಳು.

ಹೇಳು ಸರಸು, ಖಂಡಿತಾ ಕೇಳುತ್ತೀನಿ. ಎಷ್ಟು ಸೂಕ್ಮಮತಿಯೇ ನೀನು, ನನ್ನ ಒಂದು ಕ್ಷಣದ ಮೌನದಿಂದಲೇ ನನ್ನ ಮನಸ್ಸನ್ನು ಅರಿತು ಬಿಟ್ಟೆಯಲ್ಲಾ! ಹೌದು ನಾನೂ ಹೇಳುತ್ತೀನೆ. ಆದರೆ ಇನ್ನೂ ಅದಕ್ಕೆ ನನ್ನ ಮನಸ್ಥಿತಿ ಸಿದ್ಧವಾಗಿಲ್ಲ. ಇರಲಿ, ಇಂದು ನಿನ್ನ ದಿನ. ನೀನು ಹೇಳು, ನಾನು ಕೇಳುತ್ತೇನೆ. ಇನ್ನು ಮುಂದೆ ನಾವಿಬ್ಬರೂ ಒಟ್ಟಿಗೇ ಇರುವುದೆಂದು ತೀರ್ಮಾನಿಸಿಯಾಗಿದೆ, ಒಬ್ಬರ ಸುಖ-ದುಃಖ, ಇನ್ನೊಬ್ಬರದೂ ಹೌದು, ಹೇಳು ಕೇಳುತ್ತೇನೆ – ಎಂದರು.

ಸರಸು ತನ್ನೆಲ್ಲಾ ಚರಿತ್ರೆಯನ್ನು ಕೂಲಂಕುಷವಾಗಿ ಹೇಳಿಕೊಂಡಳು. ಏಕೋ ಮನಸ್ಸು ಅತ್ಯಂತ್ಯ ಹಗುರವಾದಂತೆನಿಸಿತು.
ಸೀತಕ್ಕನಿಗೆ ಸರಸುವಿನ ಮೇಲಿದ್ದ ಅಭಿಮಾನಕ್ಕೆ ಗೌರವವೂ ಸೇರಿಕೊಂಡಿತು. ಹಾಲಿನೊಂದಿಗೆ ಬೆರೆತ ಜೇನಿನಂತೆ ಇಬ್ಬರೂ ಬಾಳತೊಡಗಿದರು.ಅಬ್ಬಾ, ಹಳೆಯ ನೆನಪುಗಳ ಮೆರವಣಿಗೆ ಈ ಘಟ್ಟಕ್ಕೆ ಬಂದು ನಿಲ್ಲುವ ಹೊತ್ತಿಗೆ ಪಕ್ಕದ ಕೇರಿಯ ಕೋಳಿ ಕ್ಕೋ ಕ್ಕೋ ಕ್ಕೋ ಎಂದು ಕೂಗಿತು.

ಓ, ಆಗಲೇ ಬೆಳಗಾಯಿತು, ಇರಲಿ ಇಂದು ಹೇಗೂ ಇಬ್ಬರಿಗೂ ಬೆಳಗ್ಗೆ ಎಲ್ಲಿಗೂ ಹೋಗುವ ಹಾಗೆ ಇಲ್ಲ. ಒಂದು ಗಂಟೆ ಮಲಗೋಣ, ನಾಳೆ ಸೀತಕ್ಕನ ವಿಷಯಗಳು ಬೇರೆ ತಿಳಿಯುತ್ತೆ, ಎಂದುಕೊಳ್ಳುತ್ತಾ ಮಗ್ಗುಲು ಬದಲಾಯಿಸಿ ಮುಸುಕೆಳೆದು ಮಲಗಿದವಳನ್ನು ನಿದ್ರಾದೇವಿ ನವಿರಾಗಿ ಆಲಂಗಿಸಿಕೊಂಡಳು.

ಏಳು ಗಂಟೆಯ ಹೊತ್ತಿಗೆ ಒಳ್ಳೆಯ ನಿದ್ರೆ ಮುಗಿಸಿ ಎದ್ದ ಸೀತಕ್ಕ ಪಕ್ಕಕ್ಕೆ ನೋಡಿ, ನಿರಾಳವಾಗಿ ಮಲಗಿರುವ ಸರಸ್ವತಿಯ ತಲೆಯನ್ನು ತೆಳುವಾಗಿ ಎಚ್ಚರವಾಗದಂತೆ ಒಮ್ಮೆ ಸವರಿ, ಹಾಣೆಗೆ ಹೂ ಮುತ್ತನ್ನಿತ್ತು ಹೊರ ನಡೆದರು. ಹೋಗುವಾಗ, ಪಾಪ ಮಲಗಲಿ, ಎನ್ನುತ್ತಾ ಕೋಣೆಯ ಬಾಗಿಲನ್ನು ಶಬ್ಧವಾಗದಂತೆ ಮುಂದಕ್ಕೆ ಎಳೆದುಕೊಂಡು ಪ್ರಾರ್ಥವಿಧಿಗಳೆಡೆಗೆ ಗಮನ ಕೊಟ್ಟರು.
ಬಿಸಿ ಬಿಸಿಯಾಗಿ ಒಂದು ಲೋಟ ಕಾಫಿ ಮಾಡಿಕೊಂಡು ಕುಡಿದ ಸೀತಕ್ಕ, ತಿಂಡಿಗೆಂದು ಅಕ್ಕಿರೊಟ್ಟಿಗೆ ಹಿಟ್ಟು ಕಲೆಸಿಟ್ಟು, ಸ್ವಲ್ಪ ಚಟ್ನಿ ಮಾಡಿ, ಊಟಕ್ಕೆಂದು ಬಿಸಿ ಬೇಳೆ ಬಾತ್ ಮಾಡೋಣವೆಂದು ತರಕಾರಗಳನ್ನು ಹೆಚ್ಚಿಕೊಂಡು ಕುಕ್ಕರ್ ಜೋಡಿಸಿಬಿಟ್ಟರು. ಮಧ್ಯಾನ್ಹ ಊಟಕ್ಕೆ ಬಿಸಿಬೇಳೆಬಾತ್, ಮೊಸರನ್ನ ಮಾಡಿ ನಾಲ್ಕು ಅರಳು ಸಂಡಿಗೆ ಕರಿದುಬಿಟ್ಟರೆ ಸಾಕು, ಎಂದುಕೊಳ್ಳುತ್ತಾ ಮೊಸರು ಹೆಪ್ಪಿಗೆ ಹಾಕತೊಡಗಿದರು.

ಗಡಿಯಾರ ಎಂಟೂವರೆಯ ಘಣ್ ಎಂದು ಬಾರಿಸುವುದಕ್ಕೂ, ಕುಕ್ಕರ್ ಕೂಗುವುದಕ್ಕೂ ಸರಿಹೋಯಿತು. ಎರಡೂ ಶಬ್ಧಗಲಿಂದ ಧಡಕ್ ಎಂದು ಎದ್ದ ಸರಸು, ಗಡಿಯಾರದ ಕಡೆ ನೋಡಿ, – ಅಯ್ಯೋ ಆಗಲೇ ಎಂಟೂವರೆಯಾಯಿತು. ಪಾಪ, ಸೀತಕ್ಕ ಆಗಲೇ ಎದ್ದು ಕೆಲಸಕ್ಕೆ ಶುರು ಹಚ್ಚಿಕೊಂಡು ಬಿಟ್ಟಿದ್ದಾರೆ – ಎಂದುಕೊಳ್ಳುತ್ತಾ ಆಚೆ ಬಂದಳು.

ಆಗಲೇ ಎಲ್ಲಾ ಕೆಲಸಗಳನ್ನೂ ಒಂದು ಹಂತಕ್ಕೆ ತಂದು, ಸ್ನಾನ ಮಾಡಿ, ದೇವರಿಗೆ ಸರಳ ಪೂಜೆ ಮುಗಿಸಿ, ಕೈಯಲ್ಲಿ ಪೇಪರ್ ಹಿಡಿದು, ಅದನ್ನೂ ಆಗಲೇ ಪೂರ್ತಿಯಾಗಿ ಓದಿಮುಗಿಸಿ, ಕೊನೆಯ ಹಂತವಾದ ಪದಬಂಧ, ಸುಡೋಕು ಮಾಡಲು ಪ್ರಾರಂಬಿಸಿದ್ದರು.

ಓ ಎದ್ದೆಯಾ, ಹೋಗು ಮುಖ ತೊಳೆದು ಬಾ. ಕಾಫಿ ಬಿಸಿ ಮಾಡುತ್ತೀನಿ – ಎನ್ನುತ್ತಾ ಏಳತೊಡಗಿದರು.
ಅಯ್ಯೋ ಸೀತಕ್ಕಾ, ನಿಮ್ಮ ಪದಬಂಧ, ಸುಡೋಕುವನ್ನು ಮುಂದುವರಿಸಿ. ಪಾಪ, ನಿನ್ನೆ ಮಧ್ಯಾನ್ಹದ ಡ್ಯೂಟಿ ಮಡಿಕೊಂಡು ಬಂದರೂ, ಸಹ ಆಗಲೇ ಬೇಗ ಎದ್ದು ಅರ್ಧಕ್ಕರ್ಧ ಕೆಲಸ ಮಾಡಿ ಕುಳಿತಿದ್ದೀರಿ. ನಾನು ಬಿಸಿ ಮಾಡಿಕೊಂಡು ನಿಮ್ಮದೂ ಎರಡನೆಯ ಛೊಟಾ ಡೋಸ್ ಕಾಫಿಯನ್ನಾದರೂ ನಾನು ಮಾಡಿಕೊಡುತ್ತೇನೆ, ಮುಂದುವರೆಸಿ – ಎನ್ನುತ್ತಾ ಬಚ್ಚಲ ಮನೆಯ ಕಡೆ ನಡೆದಳು.

ಮಿಕ್ಕೆಲ್ಲಾ ಕೆಲಸಗಳನ್ನು ಇಬ್ಬರೂ ಪೂರೈಸಿ, ತಿಂಡಿ ತಿಂದು ಒಬ್ಬರ ಎದುರಿಗೆ ಒಬ್ಬರು ಕುಳಿತರು. ಸೀತಮ್ಮನವರು, ಹೇಗೆ ಶುರು ಮಾಡಬೇಕೆಂದು ಭಾವನೆಗಳ ತಾಕಲಾಟದಲ್ಲಿ ಮುಳುಗೇಳುತ್ತಿದ್ದರು.

ಸರಸ್ವತಿಯೇ ಅವರ ಮನಸ್ಸನ್ನು ಹುಗುರಗೊಳಿಸಲೋ ಎಂಬಂತೆ – ಯಾಕೆ ಸೀತಕ್ಕಾ, ನನ್ನ ವೈಯುಕ್ತಿಕ ವಿಚಾರಗಳನ್ನು ಇವಳಿಗೆ ಹೇಳಲೋ, ಬೇಡವೋ ಎಂದು ಯೋಚಿಸುತ್ತಿದ್ದೀರಾ? ಈಗಲೂ ಯೋಚಿಸಿ, ಹೇಳ ಬೇಕೆನಿಸಿದರೆ ಹೇಳಿ, ಇಲ್ಲದಿದ್ದರೆ ಬೇಡಿ. ಇನ್ನು ಮುಂದೆ ನನಗೆ ನೀವು, ನಿಮಗೆ ನಾನು, ಎಂದಂತೂ ನಿರ್ಧರಿಸಿಯಾಗಿದೆ. ಅದರಲ್ಲಂತೂ ಎರಡನೆಯ ಮಾತೇ ಇಲ್ಲ. ನೀವು ಆಯಾಸಗೊಳ್ಳ ಬೇಡಿ. ಹಗುರ ಮನಸ್ಸಿನಿಂದ ಇರಿ, ಅಷ್ಟೇ ನನಗೆ ಬೇಕಿರುವುದು – ಎಂದಳು.

(ಮುಂದುವರಿಯುವುದು)

ಈ ಕಾದಂಬರಿಯ ಹಿಂದಿನ ಸಂಚಿಕೆ ಇಲ್ಲಿದೆ :    http://surahonne.com/?p=32479

-ಪದ್ಮಾ ಆನಂದ್, ಮೈಸೂರು

13 Responses

  1. ಮಹೇಶ್ವರಿ ಯು says:

    ಜೀವದೊಂದಿಗೆ ಜೀವಕೆ ಬದ್ಧ
    ಸೇವೆ ಯಿಂದ ಲಿ ಜೀವನ ಶುದ್ಧ
    ಎಂಬ ಕವಿಯ ಸಾಲುಗಳು ನೆನಪಾದವು

    • Padma Anand says:

      ಸುಂದರ ಕವಿಸಾಲುಗಳಿಂದೊಡಗೂಡಿದ ಪ್ರತಿಕ್ರಿತೆಗಾಗು ಧನ್ಯವಾದಗಳು.

  2. ಒಳ್ಳೆಯ ಕುತೂಹಲ ಭರಿತ ದಾರಾವಾಹಿ.ಪದ್ಮಾ ಅಕ್ಕನಿಗೆ ನಮೋ ನಮಃ.

  3. ಕಾದಂಬರಿಯ ಚೆನ್ನಾಗಿ ಮುಂದುವರೆಯುತ್ತಿದೆ

  4. ನಯನ ಬಜಕೂಡ್ಲು says:

    ಸಂಬಂಧ, ಬಾಂಧವ್ಯ ಗಳಿಗೆ ಪ್ರಾಮುಖ್ಯತೆ ನೀಡುತ್ತಾ ಉತ್ತಮ ಸಂದೇಶವನ್ನೂ ಹೊಂದಿರುವ ಕಥೆ ಬಹಳ ಚೆನ್ನಾಗಿ ಸಾಗುತ್ತಿದೆ.

    • Padma Anand says:

      ತಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು

  5. ಶಂಕರಿ ಶರ್ಮ says:

    ಬಹಳ ಚೆನ್ನಾಗಿ ಸಾಗುತ್ತಿರುವ, ಉತ್ತಮ ಜೀವನ ಮೌಲ್ಯಗಳನ್ನು ಹಾಗೂ ಉತ್ತಮ ಸಂದೇಶವನ್ನು ಹೊತ್ತ ಕಿರು ಕಾದಂಬರಿ ತುಂಬಾ ಇಷ್ಟವಾಯ್ತು.. ಧನ್ಯವಾದಗಳು.. ಪದ್ಮಾ ಮೇಡಂ ಅವರಿಗೆ.

    • Padma Anand says:

      ತಮ್ಮ ಸಕಾರಾತ್ಮಕ ಪ್ರತಿಕ್ರಿಯೆಗೆ ಧನ್ಯವಾದಗಳು

  6. ಶ್ಯಾಮಲ ಸುರೇಶ್ says:

    ಚೆನ್ನಾಗಿ ಬರುತ್ತಿದೆ ಶುಭಾಶಯಗಳು

  7. ಶ್ಯಾಮಲ ಸುರೇಶ್ says:

    ಚನಾಗಿ ಬರುತ್ಗಿದೆ, ಶುಭಾಶಯಗಳು

    • Padma Anand says:

      ಮೆಚ್ಧುಗೆಗಾಗಿ ಧನ್ಯವಾದಗಳು ಶ್ಯಾಮಲ ಅವರಿಗೆ. ಸುರಹೊನ್ನೆಯಿಂದಾಗಿ, ಮಸಕಾಗಿದ್ದ ಬಾಲ್ಯದ ಭಾವ ಸಂಬಂಧದ ಎಳೆಯೊಂದು ನವೀಕರಿಸಿದಂತಾಯಿತು.

Leave a Reply to ವಿಜಯಾಸುಬ್ರಹ್ಮಣ್ಯ , Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: