ಆಕಾಶವೆಂಬ ಲೋಕದಲ್ಲಿ

Share Button


ಆಕಾಶ ನೋಡೋಕೆ ನೂಕುನುಗ್ಗಲೇಕೆ?-ಎನ್ನುವ ಮಾತನ್ನು ಕೇಳಿದಾಗಲೆಲ್ಲ, ಆಕಾಶವನ್ನು ಅದೇಕೆ ಇಷ್ಟೊಂದು ಅಗ್ಗವೆಂದು ಭಾವಿಸಿದ್ದಾರೆ ಎನ್ನುವ ಅನುಮಾನ ಮೂಡುವುದರ ಜೊತೆಗೆ ಸಿಟ್ಟೂ ಬರುತ್ತದೆ. ನನ್ನದೇನಿದ್ದರೂ ಸಾತ್ವಿಕ ಸಿಟ್ಟು ಅಷ್ಟೇ. ವಿಸ್ತೀರ್ಣದಲ್ಲಿ ಮತ್ತು ಸೌಂದರ್ಯದಲ್ಲಿ ಭೂಮಿಯ ಜೊತೆಗೆ ಸ್ಪರ್ಧಿಸುವಂತಿರುವ ಆಕಾಶದ ಬಗೆಗೆ ಉದಾಸೀನತೆಯ ಭಾವ ಸರಿಯೇ? ಇದು ನನ್ನನ್ನು ಕಾಡುವ ಪ್ರಶ್ನೆಯಾಗಿದೆ. ಆಕಾಶವೇ ಒಂದು ವಿಶೇಷವಾದ ಯಕ್ಷಣಿಯ ಲೋಕವೆನಿಸಿದೆ. ಸ್ಥಿರವಾಗಿರುವ ಸೂರ್ಯ ಚಲಿಸುವಂತೆ ಕಾಣುತ್ತಾನೆ. ಸಂಜೆಯಾಗುತ್ತಿದ್ದಂತೆ ಸೂರ್ಯ ಕೆಳಗಿಳಿಯುತ್ತಿರುವಂತೆ ಕಂಡರೂ ಭೂಮಿಯತ್ತ ಬರಲಾರ. ಹುಣ್ಣಿಮೆಯ ರಾತ್ರಿಗಳಲ್ಲಿ ಪೂರ್ಣಚಂದ್ರ ಮನೆಯ ಮುಂದೆಯೇ ಬಂದು ಕೈಗೆಟುಕುವಂತೆ ಕಂಡರೂ ನೋಟಕ್ಕಲ್ಲದೆ ಹಿಡಿತಕ್ಕೆ ಸಿಗಲಾರ. ಇರುಳಿನ ಆ ನೀರವತೆಯಲ್ಲಿ ಆಕಾಶದಲ್ಲಿ ಮಿನುಗುವ ನಕ್ಷತ್ರಗಳನ್ನು ನೋಡಿದಾಗಲೆಲ್ಲ, ಅವುಗಳಲ್ಲಿ ಒಂದನ್ನಾದರೂ ಮುಡಿಯಲ್ಲಿಟ್ಟು ಸಂಭ್ರಮಿಸಬೇಕೆನ್ನುವ ಆಸೆಯಾಗುತ್ತದೆ. ನಾನಂತೂ ಇದನ್ನು ಕಲ್ಪಸಿಕೊಂಡೇ ಸಂಭ್ರಮಿಸಿದ್ದೇನೆ. ಸುಂದರವಾದ ಆಕಾಶವನ್ನು ಎಷ್ಟು ಬಾರಿ ನೋಡಿದರೂ ಮನ ತಣಿಯದು. ಮತ್ತೆ ಮತ್ತೆ ನೋಡಬೇಕೆನ್ನುವ ಹುಚ್ಚು ಆಸೆ ಮನಸ್ಸಿಗೆ. ಆದರೆ ಸೂರ್ಯ ಸ್ವಲ್ಪ ಮೇಲೇರಿದ ನಂತರ ಆಕಾಶದತ್ತ ನೋಡಿದರೆ ಕಣ್ಣು ಚುಚ್ಚಿದಂತಾಗಿ ಭೂಮಿಯತ್ತ ನೋಡುವಂತಾಗುತ್ತದೆ. ಆದರೂ ಆಗಾಗ ಬಣ್ಣ ಬದಲಿಸುವ ಅದರ ವ್ಯವಸ್ಥೆಗೆ ಅಚ್ಚರಿಯೆನಿಸುತ್ತದೆ.  ಕತ್ತಲೆ ತುಂಬಿದ ಆಕಾಶವನ್ನು ನೋಡುತ್ತಿದ್ದರೆ ಇದೇನು, ಬೆಳಗಾಗುವುದು ತಡವಾಗುತ್ತದೇನೋ ಎಂದು ಅನ್ನಿಸಿದರೂ ನೋಡುನೋಡುತ್ತಿದ್ದಂತೆ ಮೂಡಣದಲ್ಲಿ ಬೆಳಕಿನ ಪರ್ವ ಪ್ರಾರಂಭವಾಗುತ್ತದೆ.

ಮೂಡಣದ ಬಾಗಿಲು ಒಂದು ಮಹಾದ್ವಾರ. ಅದು ತೆರೆದೊಡನೆ ಸಪ್ತಾಶ್ವಗಳ ರಥವನ್ನೇರಿ ಅರುಣಸಾರಥಿಯಾಗಿ ರುವ ಸೂರ್ಯ ತೇಜಸ್ಸಿನ ಹರಿಕಾರ. ಈ ಕಲ್ಪನೆಯಲ್ಲಿ ನಾವು ಆಕಾಶವನ್ನು ನೋಡಬೇಕು. ಕಪ್ಪು ಬಣ್ಣ ಸರಿಯುತ್ತ ಬಂದು ಮಬ್ಬಾದ ಬಿಳುಪು ಹರಡುತ್ತಿದ್ದಾಗಲೇ ಸೂರ್ಯ ಬರುತ್ತಿರುವುದನ್ನು ಆಕಾಶ ತಿಳಿಸಿಬಿಡುತ್ತದೆ. ಆಕಾಶದತ್ತ ನೋಡುತ್ತಿರುವವರಿಗೆ ಅದು ಈಗಷ್ಟೇ ಎದ್ದು ಮುಖ ತೊಳೆದು ಫ಼ೇರ್ ಎಂಡ್ ಲವ್ಲೀ ಹಚ್ಚುತ್ತ ಜನರಿಗೆ ಮುಖ ತೋರಿಸಲು ಸಜ್ಜಾಗುತ್ತಿದೆಯೇನೋ ಎನ್ನುವ ಭಾವ ಮೂಡುತ್ತದೆ. ನೋಡುನೋಡುತ್ತಿದ್ದಂತೆ ಪೂರ್ವದಲ್ಲಿ ಕೆಂಪಾದ ಛಾಯೆ ಮೂಡುತ್ತಲೇ ಬೆಳಕು ಸುತ್ತಲೂ ಹರಡಿಕೊಳ್ಳುತ್ತದೆ. ಕೆಂಪುವರ್ಣದ ಸೂರ್ಯ ಮೆಲ್ಲನೆ ಮೂಡುತ್ತ ಮೇಲೆ ಸಾಗಿ ಹೊನ್ನಿನ ವರ್ಣವನ್ನು ತಳೆದು ಪ್ರಕಾಶಿಸುವಾಗ ಇಡೀ ಆಕಾಶವೇ ಹಳದಿಯಾಗುತ್ತ ಬಿಸಿಲನ್ನು ಸುರಿಸಲು ಪ್ರಾರಂಭಿಸುತ್ತದೆ. ಸೂರ್ಯ ಪಶ್ಚಿಮದತ್ತ ಸಾಗುತ್ತಿದ್ದಂತೆ ಮತ್ತೆ ಆಕಾಶದಲ್ಲಿ ಕೆಂಪುವರ್ಣದ ಓಕುಳಿ ಚೆಲ್ಲಿದಂತೆ ಕಾಣುತ್ತ ಸೂರ್ಯ ದೃಷ್ಟಿಯಿಂದ ಮರೆಯಾಗುತ್ತಿದ್ದಂತೆ ಬೆಳಕು ಕ್ಷೀಣಿಸುತ್ತ ಕೊನೆಗೊಮ್ಮೆ ಎಲ್ಲೆಡೆ ಕತ್ತಲೆ ಮುಸುಕುತ್ತದೆ. ಈಗ ಗಗನದಲ್ಲಿ ನಕ್ಷತ್ರಗಳ ಸಂತೆ ತೆರೆದುಕೊಳ್ಳುತ್ತದೆ. ಸಂಜೆಯ ನಂತರ ಅಥವಾ ಬೆಳಗಿನ ಜಾವದಲ್ಲಿ ಪ್ರಯಾಣಿಸುತ್ತ ಆಕಾಶದತ್ತ ನೋಡುವವರಿಗೆ ಆಕಾಶದಲ್ಲಿನ ಇಂತಹ ಬದಲಾವಣೆ ಗೋಚರಿಸುತ್ತದೆ. ನಮ್ಮದೇ ಆದ ವ್ಯಸನಗಳಲ್ಲಿ ಮತ್ತು ಚಿಂತೆಗಳಲ್ಲಿ ಮುಳುಗಿರುವ ನಾವು ಪ್ರಯಾಣಿಸುವಾಗಲೂ ಮೊಬೈಲ್‌ನತ್ತ ಚಿತ್ತ ಹರಿಸುತ್ತ ಅದರ ಪರದೆಯನ್ನು ವೀಕ್ಷಿಸುತ್ತ ಅಥವಾ ಸಂಭಾಷಣೆಯಲ್ಲಿ ತೊಡಗುತ್ತ ನಮ್ಮದೇ ಲೋಕದಲ್ಲಿ ಮುಳುಗಿರುತ್ತೇವೆ. ಇದರ ನಡುವೆ ಅಕಾಶವನ್ನು ನೋಡಬೇಕೆಂಬ ಅಪೇಕ್ಷೆ ಮೂಡುವುದಾದರೂ ಹೇಗೆ ಸಾಧ್ಯ?

ದಿನದಲ್ಲಿ ಹಲವು ಬಾರಿ ಬಣ್ಣ ಬದಲಿಸುವ ಆಕಾಶ ಋತುಮಾನಕ್ಕೆ ತಕ್ಕಂತೆ ಪರಿವರ್ತನೆಯನ್ನು ಪ್ರದರ್ಶಿಸುತ್ತದೆ. ಮಳೆಗಾಲದ ದಿನಗಳಲ್ಲಿ ಕಾರ್ಮೋಡಗಳು ಆಕಾಶವನ್ನು ಆವರಿಸಿದಾಗ ಇತ್ತ ಭೂಮಿಯಲ್ಲೂ ಕತ್ತಲೆ ಮುಸುಕಿದಂತಾಗಿರುತ್ತದೆ. ಭಾವುಕರಿಗೆ ಆ ಮಳೆಯ ಮೇಘಗಳಲ್ಲಿ ಘನಶ್ಯಾಮನೂ ಕಾಣಬಹುದು. ಮಳೆಗಾಲದ ಪ್ರಾರಂಭದ ದಿನಗಳಲ್ಲಿ ಹನಿಯುವ ಆ ತುಂತುರು ಹನಿಗಳು ಸೋನೆಮಳೆಯಾಗಿ ಸುರಿದು ಆಹ್ಲಾದವನ್ನುಂಟುಮಾಡುತ್ತ, ಮುಂದುವರಿದು ದಪ್ಪ ಹನಿಗಳು ಗಾಳಿಯೊಂದಿಗೆ ಮೇಳ ಕಟ್ಟುವಾಗ, ಅಯ್ಯೋ! ಸಾಕಪ್ಪಾ ಸಾಕು ಈ ಮಳೆ-ಎಂದು ಸಾಮಾನ್ಯ ಜನರು ಉದ್ಗರಿಸಿದರೆ, ರೈತಾಪಿಗಳು ಮುಂಗಾರಿನ ಮಳೆಯಿಂದಾಗಿ ಈ ಬಾರಿ ಬೆಳೆದ ಬೆಳೆ ಎಷ್ಟು ಲಾಭ ತರಬಹುದು ಎನ್ನುವ ಲೆಕ್ಕಾಚಾರದಲ್ಲಿ ಮುಳುಗಿ ಸಂಭ್ರಮಿಸುತ್ತಾರೆ. ನಮ್ಮ ಮಲೆನಾಡಿನಲ್ಲಿ ಸುರಿಯುವ ಮುಸಲಧಾರೆಯನ್ನು ನೋಡಿ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಇತ್ತ ಸಾಗಿ ಬರುತ್ತದೆ. ಮಳೆ ಮುಗಿದು ಛಳಿಗಾಲ ಕಾಲಿಟ್ಟಾಗ ಧರೆಯ ಮೇಲೆ ಹಿಮದ ಕಾರುಬಾರು. ಡಿಸೆಂಬರ್‌ನ ನಡುಗಿಸುವ ಛಳಿಯೊಂದಿಗೆ ಹಿಮವೂ ಸೇರಿ ಮತ್ತಷ್ಟು ತಣ್ಣನೆಯ ವಾತಾವರಣವನ್ನು ಸೃಷ್ಟಿಸುತ್ತದೆ. ಆಕಾಶದಿಂದಿಳಿಯುತ್ತ ಬೆಟ್ಟದ ಮೇಲಿಂದ ಹಿಮದ ಪರದೆ ಜಾರಿದಂತೆ ಭಾಸವಾಗುವ ಈ ಹೊತ್ತಿನಲ್ಲಿ ಗಿಡ ಮರಗಳು, ಎಲೆ ಹೂವುಗಳು ಇಬ್ಬನಿಯ ಕಣಗಳನ್ನು ಹೊತ್ತು ಧರೆಯ ಮೇಲೆ ಒಂದು ಸುಂದರ ಲೋಕವನ್ನೇ ಸೃಷ್ಟಿಸುತ್ತವೆ. ಇವುಗಳ ನಡುವೆ ನಡೆಯುತ್ತ ಸಾಗುವಾಗ ಯಾವುದೋ ಸ್ವಪ್ನಲೋಕದಲ್ಲಿ ಸಾಗಿದ ಅನುಭವವಾಗುತ್ತದೆ. ಮನದಲ್ಲಿ ಹೊಸ ಆಲೋಚನೆಗಳು ಮೂಡಿ ನಮ್ಮನ್ನೇ ನಾವು ಮರೆಯುತ್ತೇವೆ.

ಬೆಳಗಿನ ಜಾವದಲ್ಲಿ ಕಿಟಕಿಯಿಂದ ಸುಳಿವ ತಂಗಾಳಿ ‘ಬೆಳಗಾಯಿತು, ಏಳು’- ಎಂದರೂ ದೇಹಕ್ಕೆ ಮಾತ್ರ ಮತ್ತಷ್ಟು ಹೊತ್ತು ಬೆಚ್ಚಗೆ ಮಲಗಬೇಕೆನ್ನುವ ಆಸೆ. ಉದುರಿದ ಎಲೆಗಳಿಗೆ ಸಾಂತ್ವನ ನೀಡುವಂತೆ ಮಂದವಾದ ಬಿಸಿಲು ಧರೆಯನ್ನು ಮುಟ್ಟುತ್ತದೆ. ಫಾಲ್ಗುಣದ ಸೂರ್ಯನ ಚೆಲುವು ಇಮ್ಮಡಿಸಿ ಮನಸ್ಸನ್ನು ಸೆಳೆಯುವಾಗ ಬಿಳಿಮೋಡಗಳ ನಡುವೆ ಹಾದು ಬರುವ ಅವನ ಸೌಂದರ್ಯವನ್ನು ನೋಡದಿರಲಾಗುವುದೇ? ಬೇಸಿಗೆಯಲ್ಲಿ ಉರಿಕಂಗಳಿಂದ ನೋಡುವ ಸೂರ್ಯನನ್ನು ಲೆಕ್ಕಿಸದೆ ಹಪ್ಪಳ ಸಂಡಿಗೆಗಳನ್ನು ತಯಾರಿಸಿ ತಾರಸಿಯ ಮೇಲೆ ಒಣಗಿಸುವ ಮಹಿಳೆಯರ ಕಾರ್ಯಕುಶಲತೆಯನ್ನು ನೋಡಿ ಮೆಚ್ಚಿ ಅವನೂ ನಕ್ಕಿರಬಹುದು. ಅಚ್ಚರಿಯ ವಿಷಯವೆಂದರೆ ಮಳೆಯನ್ನು ಸುರಿಸುವ ಆಕಾಶ ಬಿಸಿಲನ್ನೂ ಸುರಿಸುತ್ತದೆ ಹಾಗೂ ಬಿಸಿಲಿನ ಸಮಯದಲ್ಲಿ ತನ್ನತ್ತ ನೋಡಲಾಗದಂತೆ ಕಣ್ಣುಕುಕ್ಕುವ ಆಕಾಶ ಸಂಜೆಯಲ್ಲಿ ಮತ್ತು ರಾತ್ರಿಯಲ್ಲಿ ಹಾಗಿರಲೇ‌ಇಲ್ಲವೇನೋ ಎನ್ನುವಂತೆ ಆತ್ಮೀಯವಾಗಿ ತೋರುತ್ತದೆ. ಸೂರ್ಯ ಚಂದ್ರರ ಬೈತಲೆಬೊಟ್ಟನ್ನು ತೊಟ್ಟು, ನಕ್ಷತ್ರಗಳನ್ನು ಮುಡಿದು, ನಕ್ಷತ್ರಪುಂಜಗಳ ಜಡೆಬಿಲ್ಲೆಯನ್ನು ತೊಟ್ಟು, ವರ್ಣಮಯ ಪತ್ತಲಗಳನ್ನುಟ್ಟ ಆಕಾಶವನ್ನು ಸ್ತ್ರೀ ಎಂದು ಭಾವಿಸಬಹುದಲ್ಲವೇ? ಅಲಂಕಾರಕ್ಕೆ ಇದಕ್ಕಿಂತ ಹೆಚ್ಚು ಇನ್ನೇನು ಬೇಕು?

ಆಕಾಶಮಾರ್ಗದ ಯಾನವೆಂದರೆ ಅದು ಭೂಮಿಯ ಮೇಲಿನ ನಡಿಗೆಯಂತಿರದೆ ಸಾಹಸಗಾಥೆಯಾಗಿದೆ. ಗುರುತ್ವಾಕರ್ಷಣೆಯ ಶಕ್ತಿಗೆ ಒಳಪಡದೆ, ಕಾಳಿದಾಸನ ಮೇಘದೂತ ಕಾವ್ಯದಲ್ಲಿನ ಮೇಘದಂತೆ ತೇಲುತ್ತ ಸಾಗುವುದನ್ನು ಊಹಿಸಿಕೊಂಡರೆ ಮೈ ನವಿರೇಳುತ್ತದೆ. ಅಂತೆಯೇ ನನ್ನ ಕಲ್ಪನೆಯೂ ಗರಿಗೆದರಿ ಅಲ್ಲೇ ದಿಕ್ಪಾಲಕರ ಅರಮನೆಗಳನ್ನೂ ಊಹಿಸುತ್ತಲೇ ಕುಬೇರ ತನ್ನ ಧನಸಂಗ್ರಹವನ್ನು ಅಲ್ಲಿಟ್ಟಿರಬಹುದೇ ಎಂದು ಭಾವಿಸಿ ಸಂಭ್ರಮಿಸುತ್ತೇನೆ. ಆಕಾಶವನ್ನು ಕುರಿತಾದ ಇನ್ನೂ ಅನೇಕ ಕಲ್ಪನೆಗಳು ನಮ್ಮಲ್ಲಿವೆ. ದೇವತೆಗಳು ಆಕಾಶದಿಂದ ಹೂಮಳೆಗರೆದರು ಎನ್ನುವ ಸಾಲನ್ನು ಓದಿದಾಗಲೆಲ್ಲ ಆಕಾಶದಲ್ಲಿನ ದೇವಲೋಕ ಮನದೆದುರು ತೆರೆದುಕೊಳ್ಳುತ್ತದೆ. ತನ್ನ ಒಂದು ಪಾದದಿಂದ ಆಕಾಶವನ್ನೆಲ್ಲಾ ವ್ಯಾಪಿಸಿ ಬಲಿಯನ್ನು ಪಾತಾಳಲೋಕದ ಅಧಿಪತಿಯನ್ನಾಗಿ ಮಾಡಿದ ವಾಮನನ ಬಗೆಗೆ ಪುರಾಣದಲ್ಲಿ ಉಲ್ಲೇಖವಾಗಿದೆ. ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ, ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ-ಎನ್ನುವ ವಾಕ್ಯದಲ್ಲಿ ಅಕಾಶದಿಂದ ಬೀಳುವ ನೀರು ಹೇಗೆ ಸಮುದ್ರವನ್ನು ಸೇರುತ್ತದೋ ಹಾಗೆಯೇ ಎಲ್ಲ ದೇವರಿಗೆ ಮಾಡಿದ ನಮಸ್ಕಾರಗಳೂ ಕೇಶವನಿಗೆ ಅರ್ಪಿತವಾಗುತ್ತವೆ ಎನ್ನುವ ಸುಂದರ ಉಪಮಾನವಿದೆ. ಅಳಿದ ಪ್ರೀತಿಪಾತ್ರರನ್ನು ನಕ್ಷತ್ರಗಳಲ್ಲಿ ಅರಸುವವರಿದ್ದಾರೆ. ಚಂದ್ರನಲ್ಲಿ ಪ್ರಿಯರ ಮುಖವೇ ಕಾಣುತ್ತದೆ, ಚಕೋರ ಬೆಳದಿಂಗಳಿಗಾಗಿ ಕಾಯುತ್ತದೆ, ಕ್ಷಿತಿಜದಲ್ಲಿ ಭೂಮ್ಯಾಕಾಶಗಳು ಸಂಧಿಸುವಂತೆ ಕಾಣುತ್ತದೆ, ಧೂಮಕೇತು ಕಾಣಿಸಿಕೊಳ್ಳುವುದು ಅಶುಭಸೂಚಕ-ಮುಂತಾದ ಭಾವನೆಗಳು ಜನರ ಮನದಲ್ಲಿ ಬೇರೂರಿವೆ. ಇದಕ್ಕೆ ಕಾರಣ ಆಕಾಶವನ್ನು ವೈಜ್ಞಾನಿಕ ದೃಷ್ಟಿಯಲ್ಲಿ ನೋಡುವುದಕ್ಕಿಂತ ನಾವು ಭಾವನಾತ್ಮಕ ದೃಷ್ಟಿಯಲ್ಲಿ ನೋಡುವುದನ್ನು ಇಷ್ಟಪಡುತ್ತೇವೆ ಎನ್ನುವುದಾಗಿದೆ.

ಆಕಾಶ ಭೂಮಿಗಳ ಸಂಬಂಧ ಸೃಷ್ಟಿಯ ನಿಯಮಕ್ಕೊಳಪಟ್ಟು ನಡೆಯುತ್ತ ಬಂದಿದೆ. ತನ್ನ ಒಂದು ಗುಡುಗಿನ ಮೂಲಕವೇ ಮಾತನಾಡುವ ಆಕಾಶ ಮಳೆಯನ್ನು ಸುರಿಸುವ ಮೂಲಕ ಭೂಮಿಯನ್ನು ಕುರಿತು ಪ್ರೀತಿಯನ್ನು ವ್ಯಕ್ತಪಡಿಸುತ್ತ ಭೂಮಿಯ ಮೇಲಿನ ಜೀವಿಗಳನ್ನೂ ಸಲಹುತ್ತಿದೆ. ಈ ಮೌನದ ಭಾಷೆಗೆ ಬೇರೆ ಯಾವ ಮಾತು ಸಾಟಿಯಾಗಬಲ್ಲದು? ಆಕಾಶದಲ್ಲೊಂದು ಮನೆಯ ಮಾಡಿ ಮೋಡಗಳ ನಡುವೆ ತೂರಿಕೊಳ್ಳುತ್ತ ನಡೆಯುವುದನ್ನು ಊಹಿಸಿಕೊಂಡಾಗ ಹೃದಯದ ಅರಳುವಿಕೆಯನ್ನು ಅನುಭವಿಸಬಹುದು, ಏನಂತೀರಿ?

-ಲಲಿತ ಎಸ್ , ಸಕಲೇಶಪುರ

5 Responses

  1. ನಾಗರತ್ನ ಬಿ.ಆರ್ says:

    ತಮ್ಮದೇ ದೃಷ್ಟಿ ಕೋನದಿಂದ ನೋಡುತ್ತಾ ತಮಗನ್ನಿಸಿ ಭಾವನೆಗಳನ್ನು ಅಭಿವ್ಯಕ್ತಿ ಸಿರುವ ಆಕಾಶವೆಂಬ ಲೇಖನ ಚಿಂತನೆಗೆ ಹೆಚ್ಚುವಂತೆ ಮೂಡಿ ಬಂದಿದೆ.ಅಭಿನಂದನೆಗಳು ಲಲಿತಾ ಮೇಡಂ.

  2. Padma Anand says:

    ಆಕಾಶದ ಮನೆಗೆ ಮೋಡಗಳ ನಡುವೆ ತೂರಿಕೊಳ್ಳುತ್ತಾ ನಡೆಯುವಾಗ ನಾನೂ ಜೊತೆ ಬರಲೆ? ಎಷ್ಟು ಸುಂದರವಾದ ಕಲ್ಪನೆ. ಭಾವಜೀವಿಗಳ ಕಲ್ಪನಾ ವಿಹಾರಕ್ಕೆ ಮುಖ್ಯ ಭೂಮಿಕೆಯಾಗುವ ಆಕಾಶದ ವಿಹಾರ ಸೊಗಸಾಗಿದೆ. ಅಂತೂ ನಮ್ಮ ಸೂರ್ಯನಿಗೂ ಫೇರ್‌ ಅಂಡ್‌ ಲವ್ಲಿ ಹಚ್ಚಿಬಿಟ್ಟಿರಿ. ಲಹರಿ ಮುದ ನೀಡಿತು.

  3. ನಯನ ಬಜಕೂಡ್ಲು says:

    ಬಹಳ ಸುಂದರವಾಗಿದೆ ಲೇಖನ

  4. Anonymous says:

    ಮುಕ್ತಮನದಿಂದ ಅನಿಸಿಕೆಗಳನ್ನು ತಿಳಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು.

  5. ಶಂಕರಿ ಶರ್ಮ says:

    ಆಕಾಶದಲ್ಲಿ ಗಮಿಸುತ್ತಾ, ಅಲ್ಲೇ ಸುಳಿದಾಡುತ್ತಾ, ಭಾವನಾಲೋಕದಲ್ಲಿ ವಿಹರಿಸಿದ ಬಗೆ ಬಹಳ ಸೊಗಸಾಗಿದೆ ಮೇಡಂ..ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: