ಸತ್ಯಕ್ಕೆ ಇನ್ನೊಂದು ಹೆಸರು…?

Spread the love
Share Button

          ಯಾರೋ ಮೂರನೆ ವ್ಯಕ್ತಿಯ ವಿಷಯದಲ್ಲಿ ಇಬ್ಬರು ಪರಸ್ಪರ ವಾದ ಮಾಡುತ್ತಾರೆ. ಆ ವಾದ ವಿವಾದವಾಗಿ ವಿವಾದವಾಗಿ ಸಾಕಷ್ಟು ಚರ್ಚೆಯಾಗಿ ವಿಕೋಪಕ್ಕೆ ತಿರುಗಿ ಮೈಮನಸ್ಯ, ಹಳೆದ್ವೇಷ, ಪೂರ್ವಾಗ್ರಹಗಳಿಂದ ಪೀಡಿತರಾಗಿ ಕೆರಳಿ ಕೆಂಡವಾಗುವುದು, ಶಾರೀರಕ ಮಾನಸಿಕ ಪೆಟ್ಟುಗಳೂ ಆಗಿ ಕೊನೆಗೊಳ್ಳುವುದು ಇವುಗಳೆಲ್ಲ ಪ್ರಸ್ತುತ ಸಮಾಜದಲ್ಲಿ  ಕಾಣಿಸುವ ವಿದ್ಯಮಾನಗಳೆಂದು ನಾವು ಊಹಿಸುವುದು ಸಹಜ. ಆದರೆ ಆ ದೃಷ್ಟಾಂತಗಳು ಪುರಾಣಗಳಿಂದಲೂ ಲಭ್ಯ. ಅದು ಸಾಕಷ್ಟು ಕರುಣಾಜನಕ ಕತೆಯಾಗಿ.

ಬದುಕಿಗೆ ಅರ್ಥವನ್ನು ಕೊಡುವ, ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಎಂದು ತಿಳಿಹೇಳಿ ಮಾರ್ಗದರ್ಶನ ನೀಡುವುದಕ್ಕೆ ಇಂತಹ ಕತೆಗಳು ನಮ್ಮ ಮುಂದಿವೆ. ಸತ್ಯ, ಧರ್ಮ,ತ್ಯಾಗ, ಸಂಸ್ಕೃತಿ ಮೊದಲಾದ ಸಚ್ಚಾರಿತ್ಯಕ್ಕೆ ಸಂಬಂಧಿಸಿ ಹಲವಾರು ಮಾನವೀಯ ನೆಲೆಗಳಲ್ಲಿ ನಮಗೆ ಬಿಂಬಿಸುತ್ತವೆ. ಅದೆಷ್ಟೋ ರಾಜ-ಮಹಾರಾಜರುಗಳು ನಮ್ಮ ಪುರಾಣೇತಿಹಾಸದಲ್ಲಿ ಆಗಿ ಹೋಗಿದ್ದಾರೆ. ತಮ್ಮ ನೈತಿಕ ನೆಲೆಗಳಿಂದ ರಾಜ್ಯ ಪರಿಪಾಲನೆ ಮಾಡಿದ್ದಾರೆ. ಆದರೆ ಮಹರ್ಷಿಗಳಿಂದಲೋ ದೇವತೆಗಳಿಂದಲೋ ಹಲವಾರು ಅಗ್ನಿ ಪರೀಕ್ಷೆಗೆ ಒಳಪಟ್ಟು ಅದಾವುದರಿಂದಲೂ ಧೃತಿಗೆಡದೆ ಸತ್ಯ-ಧರ್ಮಗಳನ್ನು ಕಾಪಾಡಿಕೊಂಡವರು ಕೆಲವೇ ಮಂದಿ. ಈ ನಿಟ್ಟಿನಲ್ಲಿ ಒಬ್ಬ ಸತ್ಯಸಂದ ರಾಜನಿದ್ದ. ಬಹಳ ಕಠೋರವಾದ ಸತ್ಯ ಪರೀಕ್ಷೆಗೊಳಗಾದವ, ಸತ್ಯಕ್ಕಾಗಿ ಸತಿ-ಸುತರನ್ನು ತೊರೆದವ ತನ್ನನ್ನೇ ಮಾರಿಕೊಳ್ಳಬೇಕಾಗಿ ಬಂದರೂ ನ್ಯಾಯ ಬಿಡದವ, ನಿರ್ಗತಿಕನಾಗಿ ಸ್ಮಶಾನ ಕಾಯುತ್ತಿರುವ ಕಾಯಕದಲ್ಲಿರುವಾಗ ಸ್ವಂತ ಮಗನ ಶವವನ್ನು ದಹನ  ಮಾಡಬೇಕೆಂದು ಪತ್ನಿ ಪ್ರಾರ್ಥಿಸಿದಾಗ ತೆರಿಗೆಯಿಲ್ಲದೆ ದಹನ ಮಾಡಲು ಯಜಮಾನನ ಅಪ್ಪಣೆಯಿಲ್ಲವೆಂದು ಕಳುಹಿಸಿ ನ್ಯಾಯ ಪಾಲಿಸಿದವ. ಕೆಲಸಕೊಟ್ಟ ಯಜಮಾನನ ಮಾತಿನಂತೆ ವಿಧೇಯತೆ, ಇನ್ನೂ ಇದೆ ನೋಡಿ! ಕೊಲೆ ಮಾಡಿದ್ದಾಳೆಂದು ಸುಳ್ಳು ಅಪವಾದದಿಂದ ಕರೆತರಲಾದ ತನ್ನ ಹೆಂಡತಿಯನ್ನು ಯಜಮಾನನ ಅಪ್ಪಣೆಯಂತೆ ಶಿರಚ್ಛೇದನ ಮಾಡಲೆಳಸಿದವ, ಇಷ್ಟೆ ಮಾಡಿದ್ದು ಆತನ ತಾಳ್ಮೆ, ತ್ಯಾಗ ಮೆರೆದದ್ದು ಯಾಕಾಗಿ? ಸತ್ಯ-ನ್ಯಾಯಕ್ಕಾಗಿ-ಪುರಾಣದೊಳಗಿರುವ ಇಂತಹ ಮಹಾ ಸತ್ಯಸಂದ ಯಾರು ? ಆತನ ಸತ್ಯ ಪರೀಕ್ಷೆ ನಡೆಸಿದವರಾರು ?ಯಾಕಾಗಿ ನಡೆದರು ಎಂಬುದನ್ನೆಲ್ಲ ತಿಳಿಯೋಣ. ಸತ್ಯವೇ ತಾಯಿ-ತಂದೆ, ಸತ್ಯವೇ ಬಂಧು-ಬಳಗ, ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು. ಎಂಬ ಪುಣ್ಯಕೋಟಿ ಹಸುವಿನ ಕತೆಯೂ ನಮ್ಮ ಮುಂದಿದೆ. ‘ಸತ್ಯವಾದ ಒಂದು ಮಾತು ಸಾಕು. ಅಸತ್ಯದ ನೂರು ಮಾತುಗಳೇಕೆ ಬೇಕು?’ ಎಂದು ಮಹಾತ್ಮಾ ಗಾಂಧೀಜಿಯೂ ಸಾರಿದರು. ಇದೇ ಸತ್ಯಪಥದಲ್ಲಿ ಸಾಗಬೇಕೆಂದು ಸಾರುವ ಸೂಕ್ತಿ ಮಾರ್ಗಗಳು.

ಈಗ ಹೇಳ ಹೊರಟಿರುವ ಪುರಾಣ ಪುರುಷನ ಹೆಸರೇ ಸೂಚಿಸುವಂತೆ ಸತ್ಯಹರಿಶ್ಚಂದ್ರ, ಇವನ ಕತೆಯನ್ನು ಕಾವ್ಯದ ಮೂಲಕ ಜಗತ್ತಿಗೆ ನೀಡಿದವರು ರಾಘವಾಂಕ ಕವಿ, ಸೂರ್ಯವಂಶದ ತ್ರಿಶಂಕುವಿನ ಮಗನೇ ಹರಿಶ್ಚಂದ್ರ, ತ್ರಿಶಂಕುವಿಗೆ ಸತ್ಯವ್ರತ ಎಂಬ ಹೆಸರೂ ಇದೆ. ತಾಯಿ ಸತ್ಯವ್ರತೆ. ಇಡೀ ಕುಟುಂಬ ಸತ್ಯಕ್ಕೆ ಹೆಸರಾದವರು ಎನ್ನುವಂತಿದೆ ಹೆಸರುಗಳು! ಪತ್ನಿ ಚಂದ್ರಮತಿ, ಮಗ ರೋಹಿತಾಶ್ವ.

ಒಮ್ಮೆ ಸ್ವರ್ಗದಲ್ಲಿ ದೇವೇಂದ್ರನ ಸಭೆಯಲ್ಲಿ ನಾರದ, ವಸಿಷ್ಠ ವಿಶ್ವಾಮಿತ್ರ ಮೊದಲಾದ ಮಹರ್ಷಿಗಳೂ ಸೇರಿದ್ದರು. ದೇವೇಂದ್ರನು ಸಭೆಯನ್ನುದ್ದೇಶಿಸಿ ಭೂಲೋಕದಲ್ಲಿ ನುಡಿದಂತೆ ನಡೆವ ಸತ್ಯವಂತರು ಯಾರಿದ್ದಾರೆ? ಎಂದು ಕೇಳಿದನು. ಆಗ ವಸಿಷ್ಠನು “ದೇವೇಂದ್ರ, ಅಯೋಧ್ಯೆಯನ್ನಾಳುವ ಸೂರ್ಯವಂಶದ ಅರಸನಾದ ಹರಿಶ್ಚಂದ್ರನು ಭೂಲೋಕದಲ್ಲಿ ಸತ್ಯವಂತನು. ಧರ್ಮವನ್ನು ಪರಿಪಾಲಿಸುತ್ತಿರುವ ಈತನಿಗೆ ಸರಿಸಮಾನರಿಲ್ಲ’ ಎಂದನು.

ವಸಿಷ್ಠರನ್ನು ಕಂಡರೆ ಉರಿದೇಳುತ್ತಿರುವ ವಿಶ್ವಾಮಿತ್ರರಿಗೆ ಈ ಮಾತನ್ನು ಸಹಿಸಲಾಗಲಿಲ್ಲ. ವಸಿಷ್ಠರನ್ನು ಸರಿಯಾಗಿ ಬಗ್ಗು ಬಡಿಯಬೇಕೆಂದು ಸಮಯ ಕಾಯುತ್ತಿದ್ದ ವಿಶ್ವಾಮಿತ್ರರಿಗೆ ಈ ನೆಪ ಸಿಕ್ಕಿತು. ವಸಿಷ್ಠರ ಮಾತನ್ನು ಖಂಡಿಸುತ್ತಾ ವಿಶ್ವಾಮಿತ್ರರು “ದೇವೇಂದ್ರ… ವಸಿಷ್ಠರು ತಮ್ಮ ಶಿಷ್ಯನೆಂಬ ಕಾರಣಕ್ಕಾಗಿ ಹರಿಶ್ಚಂದ್ರನನ್ನು ಹೊಗಳುತ್ತಿದ್ದಾರಲ್ಲದೆ ಆತ ಸತ್ಯವಂತನಲ್ಲ. ನುಡಿದಂತೆ ನಡೆಯುವವನೂ ಅಲ್ಲ ಎಂಬುದಾಗಿ ಹೇಳಿದರು. ಇಬ್ಬರೂ ತಮ್ಮ ತಮ್ಮ ವಾದವನ್ನು ಸಮರ್ಥಿಸುತ್ತಿರುವಾಗ ನಾರದರು ‘ಬರಿದೆ ಮಾತಾಡಿ ಚರ್ಚಿಸುವುದಕ್ಕಿಂತ ಆತನಿಗೊಂದು ಪರೀಕ್ಷೆಯೊಡ್ಡಿ ಈ ಮೂಲಕ ನಿರ್ಧರಿಸಬಹುದಲ್ಲ’ ಎಂದರು. ಆಗ ವಸಿಷ್ಠರು ಸಂತೋಷದಿಂದ “ಒಳ್ಳೆಯದು. ವಿಶ್ವಾಮಿತ್ರರೇ ಪರೀಕ್ಷಿಸಲಿ. ಒಂದು ವೇಳೆ ಹರಿಶ್ಚಂದ್ರನೇನಾದರೂ ಸುಳ್ಳಾಡಿದರೆ ನನ್ನ ಬ್ರಾಹ್ಮಣ ಧರ್ಮವನ್ನೇ ತೊರೆದು ಬಿಡುತ್ತೇನೆ’ ಎಂದರು. ಇದಕ್ಕೆ ವಿಶ್ವಾಮಿತ್ರರು ಸುಮ್ಮನಿರುತ್ತಾರೆಯೇ “ಸರಿ, ನಾನು ಪಂಥಕ್ಕೆ ಒಪ್ಪಿದೆ. ಒಂದು ವೇಳೆ ಹರಿಶ್ಚಂದ್ರನು ಸತ್ಯವಂತನೇ ಹೌದು ಎಂದಾದರೆ ನನ್ನ ತಪಸ್ಸಿನ ಪುಣ್ಯಫಲದ ಅರ್ಧಭಾಗವನ್ನು ಅವನಿಗೆ ಧಾರೆಯೆರೆಯುತ್ತೇನೆ. ಅಲ್ಲದೆ ಇದು ಇತ್ಯರ್ಥವಾಗುವ ತನಕ ನಾನು ಸ್ವರ್ಗಕ್ಕೆ ಕಾಲಿಡಲಾರೆ ಎಂಬುದಾಗಿ ಹೇಳಿದವರೇ ಅಲ್ಲಿಂದ ನಿರ್ಗಮಿಸಿದರು.

ತನ್ನ ಯೋಜನೆಗಳನ್ನು ಮೆಲುಕು ಹಾಕುತ್ತಾ ವಿಶ್ವಾಮಿತ್ರ ಋಷಿಗಳು ಭೂಲೋಕಕ್ಕೆ ಬಂದರು. ತನ್ನ ಕೆಲ ಶಿಷ್ಯರನ್ನು ಕರೆದು ಅಯೋಧ್ಯೆಗೆ ಹೋಗಿ ರಾಜ್ಯದ ಕ್ಷೇಮಕ್ಕಾಗಿ ಬಹುಸುವರ್ಣಯಾಗ ಮಾಡುವಂತೆ ಹರಿಶ್ಚಂದ್ರನಿಗೆ ತಿಳಿಸಲು ಸೂಚನೆಯಿತ್ತರು. ರಾಜ ಸುವರ್ಣಯಾಗ ಮಾಡಲು ತೊಡಗಿದ ವಿಚಾರ ತಿಳಿದ ಮುನಿವರ್ಯರು ಸ್ವತಃ ಅಲ್ಲಿಗೆ ಹೋಗಿ ನಾನೊಂದು ಮಹಾಯಜ್ಞ ಮಾಡಬೇಕೆಂದಿದ್ದೇನೆ. ಯಜ್ಞಕ್ಕೆ ಹತ್ತು ಕೋಟಿ ಚಿನ್ನದ ನಾಣ್ಯಗಳು ಬೇಕಾಗಿವೆ. ನಿನ್ನಿಂದ ಪಡೆಯಲು ಬಂದಿದ್ದೇನೆ’ ಎಂದರು. ರಾಜರು ಕೊಡಲು ಮುಂದಾದಾಗ ‘ಈಗ ಬೇಡ ಬೇಕೆಂದಾಗ ತರಿಸಿಕೊಳ್ಳುವೆನು ಈಗ ನಿನ್ನಲ್ಲೇ ಇರಲಿ’ ಎಂದು ಹೊರಟು ಹೋದರು.

ಅಲ್ಲಿಂದ ಮುಂದೆ ಒಂದೊಂದಾಗಿ ವಿಶ್ವಾಮಿತ್ರರು ಕೊಡುವ ಸತ್ಯಪರೀಕ್ಷೆಗಳು ಪ್ರಾರಂಭಗೊಂಡವು. ಜಗತ್ತಿನಲ್ಲಿ ಯಾರೂ ಕಂಡರಿಯದ, ಕೇಳಿದರೆ ಎದೆ ನಡುಗುವ ಕಷ್ಟ-ಕೋಟಲೆಗಳಿಗೆ ರಾಜನು ತಲೆಯೊಡ್ಡಬೇಕಾಯ್ತು.

ಆಶ್ರಮಕ್ಕೆ ಮರಳಿ ಬಂದ ವಿಶ್ವಾಮಿತ್ರರು ತಮ್ಮ ತಪಃಶಕ್ತಿಯಿಂದ ಅಯೋಧ್ಯೆಯ ಅರಣ್ಯದಲ್ಲಿ ಅಸಂಖ್ಯ ಕ್ರೂರಪ್ರಾಣಿಗಳನ್ನು ಸೃಷ್ಟಿಸಿದರು. ನಾನಾ ಬಗೆಯ ಕಾಡು ಮೃಗಗಳು ಪ್ರಜೆಗಳಿಗೆ ಕಾಟ ಕೊಡುವಂತೆ ಮಾಡಿದರು. ಪ್ರಜೆಗಳ ದೂರಿನನ್ವಯ ರಾಜನು ಕ್ರೂರ ಪ್ರಾಣಿಗಳ ಬೇಟೆಗೆ ಸ್ವತಃ ತೆರಳಿದ. ಒಂದು ಮುಳ್ಳು ಹಂದಿಯನ್ನು ಬೆನ್ನಟ್ಟಿಕೊಂಡು ರಾಜನು ಬಹುದೂರ ಹೋಗಬೇಕಾಯಿತು. ರಾಜನು ಅಲೆದಲೆದು ಬಂದು ಆಶ್ರಮಕ್ಕೆ ತಲುಪಿದ. ಅದು ವಿಶ್ವಾಮಿತ್ರರ ಆಶ್ರಮವೇ ಆಗಿತ್ತು. ಸ್ವಲ್ಪದರಲ್ಲಿ ಚಂದ್ರಮತಿಯೂ ರಾಜನನ್ನು ಹುಡುಕಿಕೊಂಡು ಅಲ್ಲಿಗೆ ತಲುಪಿದಳು. ಆಗ ಅಲ್ಲಿ ಮತ್ತೊಂದು ಆಶ್ಚರ್ಯ ಕಾದಿತ್ತು. ಇಬ್ಬರು ನೃತ್ಯಗಾತಿಯರು ರಾಜನ ಮುಂದೆ ಬಂದು ನಿಂತು ಆತನ ಅಪ್ಪಣೆ ಪಡೆದು ನಾಟ್ಯವಾಡಿದರು. ಪಾರಿತೋಷಕವಾಗಿ ರಾಜ ಅವರಿಗೆ ಮುತ್ತಿನ ಹಾರ ಕೊಡಲು ಮುಂದಾದಾಗ ಅವರು ಅದನ್ನ ತಿರಸ್ಕರಿಸಿ ರಾಜನ ಮುಖ್ಯ ಗುರುತಾದ ಬೆಳ್ಗೊಡೆಯನ್ನು ಕೇಳಿದರು. ‘ಇದು ರಾಜನ ಗೌರವದ ಸಂಕೇತ ಇದನ್ನು ಅನ್ಯರಿಗೆ ಕೊಡುವ ಹಾಗಿಲ್ಲ. ಬೇಕಿದ್ದರೆ ಚಿನ್ನ, ವಸ್ತ್ರ ಕೇಳಿ ಪಡೆದುಕೊಳ್ಳಿ’ ಎಂದ ರಾಜ. ‘ಅದು ಬೇಡ ಹಾಗೆ ನಮ್ಮನ್ನು ಮದುವೆಯಾಗು’ ಎಂದರವರು. ಏಕಪತ್ನಿ ವ್ರತಸ್ಥನಾದ ಹರಿಶ್ಚಂದ್ರನಿಗೆ ಇದರಿಂದ ಸಿಟ್ಟು ಬಂತು. ಸೇವಕರನ್ನು ಕರೆಸಿ ಅವರನ್ನು ಆಚೆ ಕಳುಹಿಸಿದ. ಕೆಲ ಹೊತ್ತಿನಲ್ಲೇ ವಿಶ್ವಾಮಿತ್ರರು ಬಂದು ‘ರಾಜಾ… ಬೇಟೆಯ ನೆವದಿಂದ ಈ ವನವನ್ನೆಲ್ಲಾ ಹಾಳು ಮಾಡಿದ್ದಲ್ಲದೆ ನನ್ನ ಪುತ್ರಿಯರನ್ನೂ ಅವಮಾನ ಮಾಡಿ ಕಳುಹಿಸಿದೆ. ಇದು ಯಾವ ನ್ಯಾಯ ? ಎಂದ. ರಾಜ ಎಲ್ಲವನ್ನೂ ಸವಿವರವಾಗಿ ಹೇಳಿ ವಿಶ್ವಾಮಿತ್ರರನ್ನು ಸಮಾಧಾನ ಪಡಿಸಲೆತ್ನಿಸಿದಾಗ ‘ಇವರಿಬ್ಬರನ್ನೂ ಮದುವೆಯಾಗು ನಿನ್ನ ತಪ್ಪನ್ನು ಮನ್ನಿಸುವೆನು’ ಎಂದ ಮುನಿ. ಮಹಾಮುನಿಗಳೇ ನನ್ನ ರಾಜ್ಯವನ್ನಾಗಲೀ, ಹೆಂಡತಿ, ಮಕ್ಕಳನ್ನಾಗಲಿ, ಈ ದೇಹವನ್ನಾಗಲೀ ಬಿಡು ಅಂದ್ರೆ ಬಿಡಬಹುದು. ಆದರೆ ಈ ಕೆಲಸವನ್ನು ಮಾತ್ರ ಮಾಡಲಾರೆ ಎಂದರು. ಅಷ್ಟರಲ್ಲಿ ವಿಶ್ವಾಮಿತ್ರರು ಮನಸ್ಸಿನೊಳಗೇ ಸಂತೋಷಪಟ್ಟು ‘ಆಗಲಿ ರಾಜಾ, ನಿನಗೆ ಇವರನ್ನು ಮದುವೆಯಾಗುವುದಕ್ಕೆ ಇಷ್ಟವಿಲ್ಲದೆ ಹೋದರೆ ನೀನೀಗ ಹೇಳಿದಂತೆ ನಿನ್ನ ರಾಜ್ಯ ಸಂಪತ್ತನ್ನೆಲ್ಲಾ ಕೊಡು ಎನ್ನಬೇಕೆ! ಸರಿ, ಹರಿಶ್ಚಂದ್ರ ತಡಮಾಡದೆ ರಾಜ್ಯವನ್ನು ಎಲ್ಲಾ ಸಂಪತ್ತಿನೊಂದಿಗೆ ಧಾರೆಯೆರೆದು ದಾನವಾಗಿ ಕೊಟ್ಟ ಮುನಿಗಳಿಗೆ, ರಾಜ ಪತ್ನಿ ಸಮೇತವಾಗಿ ರಾಜಧಾನಿಯಾಗಿ ಬಂದು ಎಲ್ಲ ಸಂಪತ್ತಿನೊಂದಿಗೆ ರಾಜ್ಯವನ್ನು ಬಿಟ್ಟುಕೊಟ್ಟ, ರಾಜ, ಚಂದ್ರಮತಿ, ರೋಹಿತಾಶ್ವ ಮೂವರು ತಮ್ಮ ಮೈಮೇಲಿದ್ದ ಒಡವೆ, ದಿವ್ಯವಸ್ತಗಳನ್ನು ಬಿಚ್ಚಿಟ್ಟು ಸಾಮಾನ್ಯ ಬಿಳಿಯ ವಸ್ತ್ರಗಳನ್ನು ಧರಿಸಿಕೊಂಡರು.

ಈಗ ವಿಶ್ವಾಮಿತ್ರರು ಮತ್ತೊಂದು ಕುತಂತ್ರವನ್ನೂ ರಾಜನ ಮುಂದಿಟ್ಟರು. ‘ರಾಜಾ, ಹಿಂದೆ ನಾನು ನಿನ್ನಿಂದ ಯಜ್ಞಕ್ಕಾಗಿ ಹತ್ತು ಕೋಟಿ ಚಿನ್ನದ ನಾಣ್ಯಗಳನ್ನು ತೆಗೆದುಕೊಂಡು ನಿನ್ನ ಬಳಿಯೇ ಇರಿಸಿದ್ದೆ. ಅದೀಗ ನನಗೆ ಅವಶ್ಯವಿದೆ ಕೊಡು’ ಎಂದರು. ‘ಸ್ವಾಮೀ ಅದನ್ನೂ ಭಂಡಾರದಲ್ಲಿ ಪ್ರತ್ಯೇಕವಾಗಿ ಭದ್ರಪಡಿಸಿದ್ದೇನೆ’ ಎಂದಾಗ ‘ನೀನೀಗ ರಾಜ್ಯ, ಸಂಪತ್ತು, ಧನ-ಕನಕ ಎಲ್ಲವನ್ನೂ ಧಾರೆಯೆರೆದು ಕೊಟ್ಟಿರುವೆ ತಾನೆ ಅದೆಲ್ಲಾ ಆಗಲೇ ನನಗೆ ಬಂದ ಕಾರಣ ನೀನು ಒಪ್ಪಿಕೊಂಡ ಹಣ ಪ್ರತ್ಯೇಕವಾಗಿ ನನಗೆ ಬರಲೇಬೇಕು’ ಎಂದ. ಹರಿಶ್ಚಂದ್ರನು ‘ಮಹಾಮುನಿಗಳೇ ನನಗೆ ನಲವತ್ತೆಂಟು ದಿನಗಳ ಅವಧಿ ಕೊಡಿ, ನಾನು ನಿಮಗೆ ಆ ಹಣವನ್ನು ಹಿಂತಿರುಗಿಸುತ್ತೇನೆ’ ಎಂದು ಬೇಡಿಕೊಂಡ. ಒಪ್ಪಿದ  ವಿಶ್ವಾಮಿತ್ರರು ತನ್ನ ಶಿಷ್ಯ ನಕ್ಷತ್ರಿಕನನ್ನು ಹರಿಶ್ಚಂದ್ರನಿಂದ ಸುವರ್ಣ ನಾಣ್ಯಗಳನ್ನು ವಸೂಲಿ ಮಾಡಿ ತರಲು ನೇಮಿಸಿದರು.

ರಾಜ, ಪತ್ನಿ ಸಮೇತವಾಗಿ ಮಗನೊಂದಿಗೆ ಉಟ್ಟ ಸಾಮಾನ್ಯ ಬಟ್ಟೆಯಲ್ಲೇ ಹೊರಟ. ವಿಶಾಮಿತ್ರರು ಯಾಚಿಸಿದ ಸುವರ್ಣ ನಾಣ್ಯಗಳನ್ನು ನಲವತ್ತೆಂಟು ದಿನಗಳ ಒಳಗೆ ಅವರಿಗೆ ಒಪ್ಪಿಸಬೇಕಿತ್ತು. ಈ ಮನಕಲಕುವ ದೃಶ್ಯವನ್ನು ನೋಡಿದ ಪ್ರಜೆಗಳು ಅಳುತ್ತಾ ಅವನನ್ನು ಹಿಂಬಾಲಿಸಿದರು. ರಾಜ ಅವರನ್ನು ಸಮಾಧಾನಪಡಿಸಿ ಹಿಂದಕ್ಕೆ ಕಳುಹಿಸಿದ. ಕಲ್ಲುಮುಳ್ಳು ಹಾದಿಯನ್ನು ತುಳಿಯುತ್ತಿದ್ದರೂ ನೆಮ್ಮದಿಯಿಂದಿರಗೊಡದೆ ನಕ್ಷತ್ರಿಕ  ಪೀಡಿಸುತ್ತಲೇ ಇದ್ದ. ಕಾಲ್ನಡಿಗೆಯಲ್ಲೇ ಅವರು ಕಾಶೀ ಪಟ್ಟಣಕ್ಕೆ ಬಂದು ಸೇರಿದರು. ದಿನಗಳು ಉರುಳಿದ್ದುವು . ವಿಶ್ವಾಮಿತ್ರನ ಹತ್ತು ಕೋಟಿ ನಾಣ್ಯ ಕೊಡಲು ಇನ್ನು ಒಂದು ದಿನ ಬಾಕಿ ಉಳಿದಿದೆ. ನಕ್ಷತ್ರಿಕ ಪೀಡಿಸುತ್ತಿದ್ದಾನೆ. ಈ ಹಣವನ್ನು  ಹೇಗೆ ಹೊಂದಿಸಲಿ ಯಾರಾದರೂ ಐಶ್ವರ್ಯವಂತರ ಮನೆಗೆಲಸಕ್ಕೋಸ್ಕರ ಹೆಂಡತಿ ಮಗನನ್ನು ಮಾರುವುದೆಂದು ಲೆಕ್ಕಹಾಕಿ ಅವರ ಅಭಿಪ್ರಾಯವ ಕೇಳಿದ. ಚಂದ್ರಮತಿ ಒಪ್ಪಿದಳು. ಮಾತಿಗೆ ತಪ್ಪದೆ ಹಣ ಜೋಡಿಸಲು ಈ ರೀತಿಯಾದರೂ ಮಾರ್ಗ ಹೊಳೆಯಿತಲ್ಲವೆಂದು ಆಕೆ ಸಮಾಧಾನಪಟ್ಟಳು. ಯಾರೇ ಮಹಿಳೆ ಚಂದ್ರಮತಿಯ ಸ್ಥಾನದಲ್ಲಿದ್ದುಕೊಂಡು ಊಹಿಸಿ. ತನಗೆ ಉಳಿದಿರುವುದು ಆತ್ಮಹತ್ಯೆ ಒಂದೇ ದಾರಿ ಎಂಬ ನಿರ್ಧಾರ ತೆಗೆದುಕೊಳ್ಳಬಹುದಲ್ಲವೇ ಅಥವಾ… ಇತ್ತೀಚಿನ ಕಾಲದವರು ಡೈವರ್ಸ್ ಅಲ್ಲದೆ ದಾರಿ ಇಲ್ಲ ಎನ್ನುತ್ತಾರೆ! ಅಲ್ಲವೇ?

ಕಾಲ ಕೌಶಿಕನೆಂಬ ಬ್ರಾಹ್ಮಣ ಮುಂದೆ ಬಂದು 40 ಸಾವಿರ ಚಿನ್ನದ ನಾಣ್ಯಗಳನ್ನು ಕೊಟ್ಟ ತಾಯಿ ಮಗನನ್ನು ಪಡೆದುಕೊಂಡ. ಆ ಹಣವನ್ನು ನಕ್ಷತ್ರಿಕನಿಗೆ ನೀಡುತ್ತಾ ಹರಿಶ್ಚಂದ್ರ ಮುನಿಕುಮಾರರೇ ಈ ಹಣವನ್ನು ವಿಶ್ವಾಮಿತ್ರರಿಗೆ ಒಪ್ಪಿಸಿ ಬಾಕಿ ಹಣವನ್ನು ಆದಷ್ಟು ಬೇಗ ಕೊಡುತ್ತೇನೆ ಎಂದ. ಅದಕ್ಕೆ ನಕ್ಷತ್ರಿಕ ಏನೆಂದ… ಗೊತ್ತೇ ‘ನಿನ್ನೊಂದಿಗೆ ಇಷ್ಟು ದಿನ ನಿದ್ರೆ ಆಹಾರವಿಲ್ಲದೆ ನಾನೂ ಬಳಲಿದ್ದೇನೆ. ಇದು ನನಗಾಯಿತು. ಗುರುಗಳ ಹಣವನ್ನು ಆದಷ್ಟು ಬೇಗ ಒಟ್ಟು ಮಾಡಿಕೊಡು’ ಎಂದ. ಹರಿಶ್ಚಂದ್ರನಿಗೆ ತನ್ನನ್ನು ತಾನೇ ಮಾರಿಕೊಳ್ಳದೆ ವಿಧಿ ಇಲ್ಲವಾಯಿತು. ಕಾಶೀ ಪಟ್ಟಣದಲ್ಲಿ ಚಂಡಾಲರಿರುವ ಬೀದಿಗೆ ಬಂದು ಹತ್ತು ಕೋಟಿ ಹಣವನ್ನು ಪಡೆದು ನನ್ನನ್ನು ಯಾರಾದರೂ ಕೊಳ್ಳಿರಿ ಎಂದು ಸಾರುತ್ತಾ ನಡೆದ. ವೀರಬಾಹು ಎಂಬ ಸ್ಮಶಾನದ ಕಾವಲುಗಾರ ಬಂದು ಈ ಹಣವನ್ನು ಕೊಟ್ಟು ಹರಿಶ್ಚಂದ್ರನನ್ನು ಕೊಂಡುಕೊಂಡು ಬಳಿಗೆ ಕರೆದು ‘ಇಂದಿನಿಂದ ನೀನು ನನ್ನ ದಾಸ, ಅಂದರೆ ‘ವೀರದಾಸ’ ಎನ್ನಬಹುದು. ಈ ಕಾಶೀಪಟ್ಟಣದ ಸ್ಮಶಾನವು ನನಗೆ ಸೇರಿದೆ. ಅದನ್ನು ಸರಿಯಾಗಿ ಕಾವಲು ಮಾಡುವುದು ನಿನ್ನ ಕೆಲಸ. ತರುವ ಹೆಣಗಳ ಮೇಲೆ ತೆರಿಗೆಯನ್ನು ತೆಗೆದುಕೊಂಡು ಸುಡುವುದಕ್ಕೆ ಅಪ್ಪಣೆಕೊಡಬೇಕು. ತೆರಿಗೆ ಕೊಡದವರಿಗೆ ಸುಡುವುದಕ್ಕೆ ಅವಕಾಶವಿಲ್ಲ ಬಂದ ಹಣವನ್ನು ಸರಿಯಾಗಿ ಒಪ್ಪಿಸಬೇಕು’ ಎಂದವನೇ ಅಲ್ಲಿಂದ ನಿರ್ಗಮಿಸಿದ.

ಕಾಲಕೌಶಿಕನ ಮನೆಯಲ್ಲಿ ಚಂದ್ರಮತಿ, ರೋಹಿತಾಶ್ವರು ಜೀತದಾಳುಗಳಂತೆ ದುಡಿಯುತ್ತಿದ್ದಾರೆ. ಹೊಟ್ಟೆ ತುಂಬ ಊಟವಿಲ್ಲ. ಸರಿಯಾಗಿ ಬಟ್ಟೆ ಇಲ್ಲ. ರಾತ್ರಿಯ ಸರಿಯಾಗಿ ನಿದ್ದೆ ಮಾಡಲು ಆಸ್ಪದವಿಲ್ಲ. ಹೀಗಿರಲು ಒಂದು ದಿನ ರೋಹಿತಾಶ್ವ ಹೂವು, ದರ್ಭೆ, ಸಮಿತ್ತುಗಳನ್ನು ತರಲು ಜೊತೆ ಹುಡುಗರೊಂದಿಗೆ ಕಾಡಿಗೆ ಹೋಗಿದ್ದ. ಹುತ್ತದ ಬದಿಯಲ್ಲಿದ್ದ ದರ್ಭೆಯನ್ನು ಕೊಯ್ಯುತ್ತಿದ್ದ. ಈ ಹುತ್ತದ ಒಳಗಿಂದ ಬಂದ ಹಾವೊಂದು ಅವನ ಕಾಲನ್ನು ಕಚ್ಚಿತು. ಬಾಲಕ ಮೂರ್ಛಿತನಾಗಿ ಬಿದ್ದ. ಜೊತೆಗಿದ್ದ

ಬಾಲಕರು ಓಡಿಬಂದು ಚಂದ್ರಮತಿಗೆ ವಿಷಯ ತಿಳಿಸಿದರು. ಚಂದ್ರಮತಿಯು ಕಾಡಿಗೆ ಹೋಗಿ ಮಗನನ್ನು ನೋಡಲು  ಜಮಾನಿಯ ಅಪ್ಪಣೆ ಬೇಡಿದಳು. ಮನೆಯ ಎಲ್ಲಾ ಕೆಲಸಗಳನ್ನೂ ಮಾಡಿ ಮುಗಿಸಿದ ಮೇಲೆ ಹೋಗು ಎಂದರು ಯಜಮಾನಿ. ಚಂದ್ರಮತಿಯ ಪರಿಸ್ಥಿತಿ ಹೇಗಾಗಿರಬೇಡ ನೀವೇ ಊಹಿಸಿ. ಚಂದ್ರಮತಿ ಎಲ್ಲಾ  ಕೆಲಸಗಳನ್ನು ಮಾಡಿ ಮುಗಿಸಿ ರಾತ್ರಿ ಒಬ್ಬಳೇ ಬಾಲಕರು ತಿಳಿಸಿದ ಜಾಗಕ್ಕೆ ಮಗನನ್ನು ಹುಡುಕುತ್ತಾ ಹೋಗುತ್ತಾಳೆ. ಕೊನೆಗೆ ಒಂದು ಹುತ್ತದ ಸಮೀಪ ಸತ್ತು ಬಿದ್ದಿದ್ದ ಮಗನ ಶವದ ಮೇಲೆ ಬಿದ್ದು ಬಿದ್ದು ಹೊರಳಾಡುತ್ತಾಳೆ. ಆಕೆಯ ರೋದನ ಅರಣ್ಯ ರೋದನವಾಗುತ್ತದೆ. ಎಷ್ಟೋ ಹೊತ್ತಿಗೆ ತಾನೇ ಸಮಾಧಾನ ತಂದುಕೊಂಡು ಶವವನ್ನು ಹೆಗಲಲ್ಲಿ ಹಾಕಿಕೊಂಡು ಬೆಳಗಾಗುವುದರೊಳಗೆ ಸಂಸ್ಕಾರ ಮಾಡಬೇಕೆಂದು ಸ್ಮಶಾನಕ್ಕೆ ಬಂದು ತಲುಪುತ್ತಾಳೆ. ಸ್ಮಶಾನದಲ್ಲಿ ಬೇರೆ ಹೆಣಗಳನ್ನು ಸುಟ್ಟು ಉಳಿದಿದ್ದ ಕಟ್ಟಿಗೆಯನ್ನು ಒಂದೆಡೆ ಸೇರಿಸಿ ಅದರ ಮೇಲೆ ತನ್ನ ಕಂದ ಎಳೆ ಬಾಲಕನ ಶವವನ್ನಿರಿಸಿ ಇನ್ನೇನು ಬೆಂಕಿಯಿಡಬೇಕೆನ್ನುವಷ್ಟರಲ್ಲಿ ವೀರದಾಸ (ಹರಿಶ್ಚಂದ್ರ) ಅಲ್ಲಿಗೆ ಬಂದು ತೆರಿಗೆ ಹಣವನ್ನು ಕೊಡದೆ ಶವ ದಹನಕ್ಕೆ ಬಿಡುವುದಿಲ್ಲ. ಪತಿಯ ಗುರುತು ಹಿಡಿದ ಆಕೆ ‘ಸ್ವಾಮಿ, ನಿಮ್ಮ ಮಗ ರೋಹಿತಾಶ್ವನೇ ಇವನು. ತೆರಿಗೆ ಕೊಡಲು ನನ್ನ ಬಳಿ ಚಿಕ್ಕಾಸೂ ಇಲ್ಲ’ ಎನ್ನುತ್ತಾಳೆ.

ಹರಿಶ್ಚಂದ್ರನಿಗೆ ಹೆಂಡತಿ, ಮಗನ ಗುರುತು ಸಿಕ್ಕಿದರೂ ಚಂದ್ರಮತೀ, ನಾನು ಚಂಡ ವೀರಬಾಹುವಿನ ಸೇವಕ ವೀರದಾಸ, ಅವನ ಮಾತನ್ನು ಮೀರಿ ನಡೆಯುವ ಹಾಗಿಲ್ಲ. ನೀನು ಕೆಲಸ ಮಾಡುತ್ತಿರುವ ಯಜಮಾನನ್ನೇ ಬೇಡಿ ಶವದ ತೆರಿಗೆ ತಂದುಕೊಡು. ಆಮೇಲೆ  ದಹನ ಮಾಡು’ ಎನ್ನುತ್ತಾನೆ.

ಅತಿ ಹೀನ ಕಷ್ಟಗಳ ಸರಮಾಲೆ. ಬಹುಶಃ ಹೆಣ್ಣಿಗೆ ಇದಕ್ಕಿಂತ ಮಿಗಿಲಾದ ಭಯಂಕರ ಕಷ್ಟಗಳು ಇರಲಾರವೇನೋ! ರಾಜ-ರಾಣಿಯರಾಗಿದ್ದವರು, ಅರಮನೆಯಲ್ಲಿ ಸುಖದ ಸುಪ್ಪತ್ತಿಗೆಯಲ್ಲಿರಬೇಕಾದ ಹೆಣ್ಣು! ಗಂಡನಾದವನು ತನ್ನನ್ನು ಮಾರಿದ್ದಾನೆ. ಜೀತದಾಳಾಗಿ ಯಾರದೋ ಮನೆಯಲ್ಲಿ ಅದೆಷ್ಟೋ ಕಷ್ಟಪಟ್ಟರೆ ಅರೆ ಹೊಟ್ಟೆ ಊಟ, ತನ್ನ ಕರುಳ ಕುಡಿ ಎಳೆ ಬಾಲಕನೂ ಅವರೆಲ್ಲ ಹೇಳಿದ ಕೆಲಸ ಮಾಡಿ ಬೈಗುಳ ತಿಂದು ಅರೆ ಹೊಟ್ಟೆ ಉಂಡು ಬದುಕುವ ಕಷ್ಟ ಸಾಲದೆಂಬಂತೆ ಇದ್ದ ಒಬ್ಬನೇ ಮಗ ಶವವಾಗಿ ಬಿದ್ದಿದ್ದಾನೆ. ಮಗನ ಶವ ಸಂಸ್ಕಾರ ಮಾಡುವುದಕ್ಕೂ ದುಡ್ಡಿಲ್ಲ. ದಿಕ್ಕಿಲ್ಲ. ಸ್ಮಶಾನದ ಕಾವಲುಗಾರ ತಲೆ ಕೊಡದೆ ಶವ ಸುಡಲು ಬಿಡುತ್ತಿಲ್ಲ! ಆತನು ಶವವಾಗಿ ಬಿದ್ದ ಬಾಲಕನ ಜನ್ಮದಾತನೆಂದು ಆತನಿಗೂ ತಿಳಿದಿದೆ. ಆದರೆ ಸತ್ಯಸಂಧ! ನ್ಯಾಯದಾತ!! ಯಜಮಾನನ ಆಜ್ಞಾಪಾಲಕ! ಮಧ್ಯರಾತ್ರಿ ಬೇರೆ. ಆ ಹೆಣ್ಣು ಏನು ಮಾಡಲಿ! ಇಲ್ಲಿ ತಿಳಿಯಬೇಕಾದ ಅಂಶವೆಂದರೆ ನಾವು ಕಷ್ಟಸಹಿಷ್ಣುಗಳಾಗಬೇಕು. ಜೀವನದಲ್ಲಿ ಕಷ್ಟ-ಕೋಟಲೆಗಳನ್ನು ಎದುರಿಸಬೇಕಾದರೆ ತನಗಿಂತ ದುಃಖಿತರ ನೋವನ್ನು ಅರ್ಥಮಾಡಿಕೊಳ್ಳಬೇಕು. ತಮಗಿಂತ ಸುಖಿಗಳನ್ನು ತುಲನೆ ಮಾಡಬಾರದು. ಇದಕ್ಕಾಗಿಯೇ ಪೂರ್ವಜರು ಪುರಾಣ ಕತೆಗಳನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಇಲ್ಲಿ ರಾಘವಾಂಕ ಕವಿಯೂ ಅದನ್ನೇ ಮಾಡಿದ್ದಾನೆ ಅನಿಸುತ್ತದೆ.

ಅಂತೂ ಚಂದ್ರಮತಿಗೆ ಪುತ್ರನ ಶವವನ್ನು ಸಂಸ್ಕಾರ ಮಾಡದೆ ವಿಧಿಯಿಲ್ಲ. ಕತ್ತಲಲ್ಲೇ ತಾನು ಕೆಲಸ ಮಾಡುತ್ತಿದ್ದ ಮನೆಗೆ ಹೋಗುತ್ತಾಳೆ, ದಾರಿ ಮಧ್ಯದಲ್ಲಿ ತನ್ನ ಮಗನಂತೆಯೇ ಇರುವ ಬಾಲಕ ಸತ್ತು ಬಿದ್ದಿರುವುದನ್ನು ನೋಡಿ ಒಂದು ಕ್ಷಣ ಅದರ ಬಳಿ ಕುಳಿತು ನೋಡುತ್ತಾಳೆ. ಅಷ್ಟರಲ್ಲಿ ರಾಜಭಟರು ಅವಳನ್ನೂ ಶವದ ಮೇಲಿದ್ದ ಒಡವೆಗಳನ್ನೂ ತೆಗೆದುಕೊಂಡು ಹೋಗಿ ಕಾಶೀ ರಾಜನಿಗೆ ಒಪ್ಪಿಸುತ್ತಾರೆ. ಸರಿಯಾದ ವಿಚಾರ ಮಾಡದೆ ಕಾಶೀರಾಜ ಅವಳ ತಲೆ ಕತ್ತರಿಸಿ ಹಾಕಿ ಎಂದು ಆಜ್ಞಾಪಿಸುತ್ತಾನೆ. ದೂತರು ಈ ಕೆಲಸವನ್ನು ವೀರಬಾಹುವಿಗೆ ಒಪ್ಪಿಸುತ್ತಾರೆ. ಅವನಾದರೋ ವೀರದಾಸನಿಗೆ ಒಪ್ಪಿಸುತ್ತಾನೆ.


ಹರಿಶ್ಚಂದ್ರ ತನ್ನ ಯಜಮಾನ ಹೇಳಿದ ಕೆಲಸ ನಿರ್ವಹಿಸುವುದಕ್ಕಾಗಿ ಕೈಯಲ್ಲಿ ಕತ್ತಿ ಹಿಡಿದು ನಿಂತಿದ್ದಾನೆ. ಅಷ್ಟರಲ್ಲಿ ವಿಶ್ವಾಮಿತ್ರರು ಪ್ರತ್ಯಕ್ಷರಾಗಿ ರಾಜಾ ಹರಿಶ್ಚಂದ್ರ, ನಿನ್ನ  ಧರ್ಮಪತ್ನಿಯನ್ನು ನೀನು ಕೊಲ್ಲುವುದು ಸರಿಯೇ?  ಬಿಡು  ಇವಳನ್ನು  ರಾಜ್ಯಕ್ಕೆ ಕರೆದುಕೊಂಡು ಬಾ. ನಿನ್ನ ರಾಜ್ಯವನ್ನು ನಿನಗೆ ಬಿಟ್ಟುಕೊಡುತ್ತೇನೆ. ನನ್ನ ಹೆಣ್ಣ ಮಕ್ಕಳನ್ನೂ ಮದುವೆಯಾಗಿ ಸುಖವಾಗಿರು. ಕಾಶೀರಾಜನಿಗೆ ಚಂದ್ರಮತಿಯ ತಪ್ಪನ್ನು ಮನ್ನಿಸುವಂತೆ ಹೇಳುತ್ತೇನೆ. ಈ ಕಾರ್ಯವನ್ನು ಬಿಡು’ ಎನ್ನುತ್ತಾರೆ. ಆಗ ಹರಿಶ್ಚಂದ್ರ ‘ಸ್ವಾಮೀ ನಾನು ವೀರದಾಸ. ಈಕೆ ರಾಜಪುತ್ರನನ್ನು ಕೊಂದ ಅಪರಾಧಿನಿ. ನನ್ನ ಸ್ವಾಮಿಯ ಆಜ್ಞೆಯಂತೆ ಇವಳನ್ನು ಕೊಲ್ಲುತ್ತಿದ್ದೇನೆ. ಕೊಟ್ಟ ಮಾತಿಗೆ ತಪ್ಪಲಾರೆ’ ಎನ್ನುತ್ತಾ ಕತ್ತಿ ಎತ್ತಿ ಹೊಡದೇ ಬಿಡುತ್ತಾನೆ. ಏನಾಶ್ಚರ್ಯ ಕತ್ತಿಯ ಏಟಿಗೆ ತನ್ನ ತಲೆಯನ್ನೇ ಕೊಟ್ಟ ಶಿವ ಪ್ರತ್ಯಕ್ಷನಾಗುತ್ತಾನೆ! ನನ್ನ ಅಪರಾಧವನ್ನು ಕ್ಷಮಿಸೆಂದು ಹರಿಶ್ಚಂದ್ರ ಶಿವನ ಪಾದಕ್ಕೆ ಬೀಳುತ್ತಾನೆ, ದು:ಖದ ಬೆಂಕಿಯಲ್ಲಿ ಬೇಯುತ್ತಿದ್ದ ಚಂದ್ರಮತಿಯೂ ಶಿವನನ್ನು ನೋಡಿ ಅನಂತ ಪರವಶಳಾಗಿ ಅವನ ಪಾದಗಳಿಗೆ ಬೀಳುತ್ತಾಳೆ. ಕಣ್ಣೀರ ಕೋಡಿ ಹರಿದು ಶಿವನ ಪಾದ ತೋಯಿಸುತ್ತದೆ. ಆ ಪುಣ್ಯ ದಂಪತಿಗಳನ್ನು ನೋಡಿ ದೇವತೆಗಳು ಹೂಮಳೆಗರೆಯುತ್ತಾರೆ. ವಿಶ್ವಾಮಿತ್ರರು ಪರೀಕ್ಷೆಯಲ್ಲಿ (ಪಂಥದಲ್ಲಿ) ಸೋತರೂ ಹರಿಶ್ಚಂದ್ರ ಸತ್ಯವ್ರತವನ್ನು ಮೆಚ್ಚಿ ಕೊಂಡಾಡುತ್ತಾರೆ. ಪುಟಕಿಟ್ಟ ಚಿನ್ನದಂತೆ ಹರಿಶ್ಚಂದ್ರನ ಸತ್ಯ ಜಗತ್ತಿಗೆ ತಿಳಿಯುವುದಕ್ಕಾಗಿ ಇಷ್ಟೆಲ್ಲ ಮಾಡಿದೆ ಎನ್ನುತ್ತಾರೆ. ಶಿವನೇ, ನಾನು ಕೊಟ್ಟ ಮಾತಿನಂತೆ ನಿನ್ನ ಸಮಕ್ಷಮದಲ್ಲಿ ನನ್ನ ತಪಸ್ಸಿನ ಪುಣ್ಯವನ್ನು ಧಾರೆಯೆರೆದು ಅವನ ರಾಜ್ಯವನ್ನೂ, ಚಂದ್ರಮತಿಯನ್ನೂ, ರೋಹಿತಾಶ್ವನನ್ನೂ ಒಪ್ಪಿಸುತ್ತಿದ್ದೇನೆ. ಹರಿಶ್ಚಂದ್ರ ಸಾಲಮುಕ್ತನಾಗಿದ್ದಾನೆ. ರೋಹಿತಾಶ್ವ ಎನ್ನುತ್ತಿದ್ದಂತೆ ಎದ್ದು ಬರುತ್ತಾನೆ. ಸತ್ಯ ಹರಿಶ್ಚಂದ್ರ ಎಂಬ ನಿನ್ನ ಹೆಸರು ಈ ಚಂದ್ರಾರ್ಕವಾಗಿ ಉಳಿಯಲಿ ಎಂಬುದಾಗಿ ಹೇಳಿ ಅದೃಶ್ಯನಾದ. ವಸಿಷ್ಠ-ವಿಶ್ವಾಮಿತ್ರರು ಆಶೀರ್ವದಿಸಿ ಅಯೋಧ್ಯೆಗೆ ಬೀಳ್ಕೊಟ್ಟರು. ಸತ್ಯಕ್ಕೆ ಇನ್ನೊಂದು ಹೆಸರು ಹರಿಶ್ಚಂದ್ರ ಎಂಬುದು ಚಿರಾಯುವಾಗಿ ಉಳಿಯಿತು.

 *ಸತ್ಯಮೇವ ಜಯತೇ*

ವಿಜಯಾ ಸುಬ್ರಹ್ಮಣ್ಯ, ಕುಂಬಳೆ

10 Responses

 1. ಪ್ರಕಟಿಸಿದ ಸುರಹೊನ್ನೆಯ ಅಡ್ಮಿನ್ ಹೇಮಮಾಲಾ ಹಾಗೂ ಲೇಖನವನ್ನು. ಓದಿ ಮೆಚ್ಚಿದ ಎಲ್ಲರಿಗೂ. ಧನ್ಯವಾದಗಳು.

 2. ಮಹಾಬಲ says:

  ಆದರ್ಶ‌ಕಥನ.

 3. ನಯನ ಬಜಕೂಡ್ಲು says:

  ಮಾಹಿತಿ ಪೂರ್ಣ.

 4. Hema says:

  ಎಂದೋ ಓದಿದ ಸತ್ಯಹರಿಶ್ಚಂದ್ರನ ಕಥೆ, ಯಕ್ಷಗಾನದಲ್ಲಿ ನೋಡಿದ ಚಂದ್ರಮತಿ ವಿಲಾಪ…..ಈಗ ಪುನ: ಓದುವಾಗಲೂ ಕಣ್ಣು ಮಂಜಾಯಿತು. ಇದು ಪೌರಾಣಿಕ ಕತೆಗಳ ಶಕ್ತಿ ಅಲ್ಲವೇ?

 5. Anonymous says:

  ಹೌದು ಮಾಲಾ ಸತ್ಯಹರಿಶ್ಚಂದ್ರನ ಕಥಾವಾಹಿನಿಯನ್ನು ಎಷ್ಟೇ ಸಲ ನೋಡಿದರೂ; ಕಥೆಯಲ್ಲಿ ನಾವು ತಲ್ಲೀನರಾದರೆ, ಪ್ರತಿ ಸಲವೂ ಕಣ್ಣೀರು ಬಂದೇ ಬರುತ್ತದೆ.

 6. Anonymous says:

  ಹರಿಶ್ಚಂದ್ರನ ಕಥೆ ಎಷ್ಟು ಬಾರಿ ಓದಿದರೆ, ನಾಟಕ, ಬಯಲಾಟ,ಸಿನೆಮಾ ನೋಡಿದರೆ; ಪ್ರತಿ ಸಲವೂ ನಮಗೆ ಹೃದಯ ತಲ್ಲಣಗೊಳ್ಳುತ್ತದೆ, ಕಣ್ಣು ತೇವಗೊಳ್ಳುತ್ತದೆ.

 7. ಶಂಕರಿ ಶರ್ಮ says:

  ಹೌದು..ಪೌರಾಣಿಕ ಕಥೆಗಳೆಲ್ಲಾ ಚಿರನೂತನ! ಪುಣ್ಯಕೋಟಿಯ ಹಾಡು ಕೇಳಿದರೆ ಹೇಗೆ ಈಗಲೂ ನಮ್ಮ ಕಣ್ಣಲ್ಲಿ ಕಂಬನಿ ತುಂಬುವುದೋ, ಅಂತೆಯೇ ಸತ್ಯಹರಿಶ್ಚಂದ್ರನಂತಹ ಕಥೆಗಳು ಕೂಡಾ. ಧನ್ಯವಾದಗಳು ವಿಜಯಕ್ಕ.

 8. Padma Anand says:

  ಮುನಿಗಳಿಬ್ಬರ ವಾಗ್ಯುದ್ದಕ್ಕೆ ಬಲಿಯಾಗಿ ಕಷ್ಟ ಕೋಟಲೆಗಳ ಸರಮಾಲೆಯನ್ನೇ ಎದುರಿಸಬೇಕಾಗಿ ಬಂದ ಸತ್ಯ ಹರಿಶ್ಚಂದ್ರನ ಕಥೆ ಮತ್ತೊಮ್ಮೆ ಕಣ್ಣುಗಳನ್ನು ತೇವಗೊಳಿಸಿತು.

 9. ಮಹೇಶ್ವರಿ ಯು says:

  ಕೋಣನೆರಡುಂ ಹೋರೆ ಗಿಡುವಿಂಗೆ ಮಿಳ್ತು ಎಂದು ಕವಿ ರಾಘವಾಂಕ ನುಡಿದಂತೆ ಆಯಿತಾದರೂ ಅದು ಹರಿಶ್ಚಂದ್ರನ ಸತ್ಯ ಪ್ರಕಾಶಕ್ಕೆ ನಿಮಿತ್ತ ವಾಯಿತು. ಕತೆಯ ನ್ನು ಚೆನ್ನಾಗಿ ನಿರೂಪಿಸಿದ್ದೀರಿ ವಿಜಯಕ್ಕ.

 10. ನಾಗರತ್ನ ಬಿ. ಅರ್. says:

  ಯಾರದೋ ಪೈಪೋಟಿ ಗೆ ನಲುಗಿದರೂ ಸರ್ವ ಕಾಲಕ್ಕೂ ಉದಾಹರಣೆಯಾಗಿ ನಿಲ್ಲುವ ಪೌರಾಣಿಕ ಕಥೆ.ಎಂದಿನಂತೆ ಚೊಕ್ಕ ವಾಗಿ ಮೂಡಿಬಂದಿದೆ.ಅಭಿನಂದನೆಗಳು ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: