ಪ್ರಯಾಗದ ಸಿಹಿ ಕಹಿ ನೆನಪುಗಳು..

Share Button

 

Krishnaveni Kidoor

ಕೃಷ್ಣವೇಣಿ ಕಿದೂರು.

 

ಅಲಹಾಬಾದಿಗೆ ಕಾರ್ಯ ನಿಮಿತ್ತ ಹೋಗಿದ್ದೆವು .ಪ್ರಸಿದ್ದ ತ್ರಿವೇಣಿ ಸಂಗಮ  ಸ್ಠಳವಾದ ಪ್ರಯಾಗ ನೋಡಬಂದಿದ್ದೆವು .ಗಂಗಾ,ಯಮುನಾ ,ಸರಸ್ವತಿ ಸಂಗಮದ ಅಪೂರ್ವ ಪಾವಿತ್ರ್ಯದ ತಾಣ.ದೋಣಿಯವನನ್ನುಕರೆದು ಏರಿದ್ದೆವು.ಅಪರೂಪದ ಬಿಳಿಯ ಹಕ್ಕಿಗಳು ಆಹಾರದಾಸೆಯಿಂದ ಜೊತೆ ಜೊತೆಗೆ ಈಜುತ್ತಾ ಬರುತ್ತಿದ್ದುವು. ನಿರ್ಜನವಾಗಿದ್ದ ಜಾಗ.ಸಂಜೆಯ ಹೊತ್ತು .ಸುಮಾರು ದೂರ ಬಂದಾಗ ತ್ರಿವೇಣಿ ಸಂಗಮ ಸ್ಠಳಕ್ಕೆ ತಲಪಿದ್ದೆವು.  ಅಲ್ಲಿ   ಪುರೋಹಿತರು ಒಬ್ಬರು ದೋಣಿಯೊಂದರಲ್ಲಿ ಕೂತು ಕಾಯುತ್ತಿದ್ದರು.ಅವರಿದ್ದ ದೋಣಿಯಲ್ಲಿ ಸಹಾಯಕ್ಕೆ ಇನ್ನಿಬ್ಬರು.ದೋಣಿಯ ನಡುವಿನಲ್ಲಿ ಎರಡು ಅಡಿಗಳ ಸುತ್ತಳತೆಗೆ ಹಲಗೆ ತೆಗೆದು ಖಾಲಿ ಜಾಗ.ಅದು ಸಂಗಮಸ್ನಾನ ಮಾಡುವವರಿಗೆ ನೆರವಿಗೆ. ಮೇಲುಭಾಗಕ್ಕೆ ಹಿಡಿಯಲು ಕಬ್ಬಿಣದ ಹಿಡಿಗಳು.  ದೋಣಿಯ ಒಳಗಿಂದ ಸಂಗಮ ಸ್ನಾನ ಮುಗಿಸುವ ಭದ್ರ ವ್ಯವಸ್ಥೆ.

prayaagaನಮ್ಮಲ್ಲಿ ಸ್ನಾನ ಮಾಡಿದವರು ಕಮ್ಮಿ.ವಿಪರೀತ ಆಳವಿರುವ ತಾಣ ಅಲ್ಲಿ ಅಂತ ಹೇಳಿದರು.ನಸುಗೆಂಪು ಬಣ್ಣದ ಶುದ್ದನೀರು.ಅತ್ಯಂತ ರಭಸದಲ್ಲಿ ನೀರು ಹರಿಯುವುದು ತಿಳಿಯುತ್ತಿತ್ತು. ಕುಡಿಯುವ ನೀರು ಬಾಟಲಿಯಿಂದ ಚೆಲ್ಲಿ ತಿಳಿಗೆಂಪಿನ ಶುದ್ದ ಜಲ ತುಂಬಿಸಿದ್ದೆ.ಹಾಗೇ ನೆತ್ತಿಗೂ ನೀರು ಎರಚಿದ್ದೆ.ಶ್ರೀಮತಿ ಬಿ.ಕೆ. ಮೀಯುತ್ತಿದ್ದರು.ಸುತ್ತಲಿನ ನೀಲ ಜಲದ ಸೊಬಗನ್ನು  ಸವಿಯುತ್ತಿದ್ದೆವು. ಆಗ ದೂರದಿಂದ  ಮಲಯಾಳದ ಲ್ಲಿ ಸ್ವಾಮಿ ಶರಣಂ,ಅಯ್ಯಪ್ಪ ಶರಣಂ,ಸ್ವಾಮಿಯೇ ಶರಣಮ್ ಅಯ್ಯಪ್ಪ ಎನ್ನುವ ಧ್ವನಿ ಕಿವಿಗೆ ಬಿತ್ತು. ಎಲ್ಲಿಯ ಉ. ಪ್ರದೇಶ; ಎಲ್ಲಿಯ ಮಲಯಾಳಂ ? ಅಥವಾ ಎಲ್ಲಿಯ ಕೇರಳ;?

ಮೊದಲೇ ತಿಳಿಸಲಿಲ್ಲ ನಾನು. ನಮ್ಮದು ಕೇರಳ ರಾಜ್ಯ. ಇಲ್ಲಿ ಮಲಯಾಳಮ್  ಮಾತು ಎಲ್ಲ ಕಡೆಯಲ್ಲು ಇದೆ.  ನಮ್ಮದು ಕೇರಳ ರಾಜ್ಯವಾದರೂ ಕನ್ನಡದ ಮನೆ. ಮನೆಮಾತು ಕನ್ನಡವಾದರೂ ನಿತ್ಯದ ಬದುಕಲ್ಲಿ ಮಲಯಾಳಂ ಬೇಕೇ ಬೇಕು.ಕೇರಳಿಗರು ತಾಯ್ನುಡಿಯನ್ನು ಎಲ್ಲೂ ಬಿಟ್ಟು ಬಿಟ್ಟು ಅನ್ಯ ಮಾತು ಮಾತಾಡುವವರಲ್ಲ. ಅಪಾರ ಪ್ರೀತಿ ಮಲೆಯಾಳಂ ಎಂದರೆ. ಗಡಿನಾಡ ಕನ್ನಡಿಗರಾದ ನಾವೂ ಮಲಯಾಳಂ ಅಭ್ಯಾಸ ಮಾಡಿಕೊಂಡಿದ್ದೇವೆ. ಆದ್ದರಿಂದಲೇ ಕಿವಿ ನೆಟ್ಟಗಾಗಿದ್ದು ನಮಗೆಲ್ಲ .

ಆಗ ದೋಣಿಯೊಂದು ವೇಗವಾಗಿ ತ್ರಿವೇಣಿ ಸಂಗಮದೆಡೆಗೇ  ಧಾವಿಸಿ ಬರುವುದು ಕಾಣಿಸಿತು. ನದಿಯಲ್ಲಿ ನಮ್ಮೆರಡು ದೋಣಿ ಹೊರತು ಬೇರೆ ದೋಣಿಗಳೇ ಇಲ್ಲ.  ಅದರ ಹಿಂದಿಂದ ಅದೇ ವೇಗದಲ್ಲಿ ಮತ್ತೊಂದು ದೋಣಿ ಬೇರೆ ಬರುತ್ತಿತ್ತು.ಅವರು ‘ಹರಿವರಾಸನಂ ವಿಶ್ವ ಮೋಹನಮ್’ ಎಂಬ ಅಯ್ಯಪ್ಪ ಸ್ವಾಮಿಯ ಭಕ್ತಿ ಗೀತೆ ದನಿಎತ್ತಿ ಹಾಡುತ್ತಿದ್ದರು.ಜೊತೆಗೇ ‘ಸ್ವಾಮಿಶರಣಮ್ ಅಯ್ಯಪ್ಪ ಶರಣಂ,ಸ್ವಾಮಿಯೇ ಶರಣಮಯ್ಯಪ್ಪಾ’ ಅನ್ನುವ ಘೋಷಣೆ,ಕೇಳುತ್ತಾ ಕೇಳುತ್ತಾ ಅನಿರ್ವಚನೀಯ ಸಂತೋಷ, ಸಂಭ್ರಮ. ಅನ್ಯ ನಾಡಿನಲ್ಲಿ ತಾಯ್ನೆಲದ ನುಡಿ;ಊರಿನಲ್ಲಿಎಂದೂ ಈ ಪರಿಯಲ್ಲಿ ಆಪ್ತವಾಗಿದ್ದು ನೆನಪಿಲ್ಲ.

ಮಲಯಾಳದ ಕಂಪು ಉಲ್ಲಾಸ,ಉತ್ಸಾಹ,ನಮ್ಮೂರಿನವರು ಎಂಬ ಹುಮ್ಮಸ್ಸನ್ನುಮೂಡಿಸಿತ್ತು.ಸಂಗಮದಲ್ಲಿ ಸ್ನಾನಕ್ಕೆ ಅವರಿಗೆ ಸಮಯವಿರಲಿಲ್ಲ.ನೀವು ಕೇರಳದವರಾ? ನಾನು ಮಲಯಾಳದಲ್ಲಿ ಕೇಳಿದ್ದೆ.ನಮ್ಮ ಇಮ್ಮಡಿ ಉತ್ಸಾಹದಲ್ಲಿ ಅವರೂ ಪರಿಚಯಿಸಿಕೊಂಡರು.ಕಾಸರಗೋಡಿಂದ ಹಿಡಿದು ತಿರುವನಂತಪುರದ ತನಕದ ಯುವಕರು ಇದ್ದರು.ಇಲೆಕ್ಶನ್ ನಿಮಿತ್ತ ಯು.ಪಿ.ಗೆ ಬಂದ ರಿಸರ್ವ್ ಪೋಲೀಸ್  ಪಡೆ ಅದು. ಸಂಜೆ ನೀರಾಟಕ್ಕೆ ಹೊರಟ ಕೇರಳಿಗರು.ನಮ್ಮನ್ನು ವಿಚಾರಿಸಿಕೊಂಡು ಚೇಚಿ,ಏಟ,(ಅಕ್ಕ,ಅಣ್ಣ)ಎಂದು ಆಹಾರ ಹಿಡಿಸಿತ್ತಾ? ಹವೆ ಚಳಿ ಅಲ್ವಾ? ರೋಟಿ ಅಭ್ಯಾಸ ಆಯ್ತ?ಎಲ್ಲ ಕುಶಲ ಒಡಹುಟ್ಟಿದವರ ಪರಿ ತಿಳಿದುಕೊಂಡರು. ನನ್ನಲ್ಲಿದ್ದ ನಮ್ಮ ಸಂಸ್ಥೆಯ ಮಲಯಾಳಂ ಭಾಷೆಯ ಡೈರಿ.ಕೊಟ್ಟಿದ್ದೆ.ಇಲ್ಲಿ ಬಂದ ಮತ್ತೆ ಹುಣ್ಣಿಮೆ ಅಮವಾಸ್ಯೆ ಗೊತ್ತಾಗುವುದಿಲ್ಲ ಇದು ನಾವೇ ಇಟ್ಟುಕೊಳ್ಳಲಾ? ಕೇಳಿದರು.ಸುಮಾರು 20-25 ಜನರಿದ್ದರು.ಅವರೂ ಹೊರಟರು, ನಮ್ಮನ್ನೂ ಬೇಗ ಹೊರಡಲು ತಿಳಿಸಿದರು.ಅಯ್ಯಪ್ಪಸ್ವಾಮಿ ಗೀತೆ ಹಾಡುತ್ತಾ ನಮಗೆ  ಕೈ ಬೀಸಿ ವೇಗವಾಗಿ ಹೋದರು.

boatಸುತ್ತ ನೀರವತೆ,ನಿರ್ಜನ,ಅಪಾರ ಜಲರಾಶಿ;ಇಡೀ ಪರಿಸರದಲ್ಲಿ ನರಮನುಷ್ಯರಿಲ್ಲ.ದೋಣಿ ವಾಪಸ್ ದಡಕ್ಕೆ ಹೊರಟಿತು.ಊರವರನ್ನು ಅಕಸ್ಮಿಕವಾಗಿ ಕಂಡ ಹಿಗ್ಗು,ನೀರ ಯಾತ್ರೆ ಒಟ್ಟಾಗಿ ದೋಣಿ ಸಾಗಲಿ,ಮುಂದೆ ಹೋಗಲಿ, ದೂರ ತೀರವ ಸೇರಲೀ ಅಂತ ಗುನುಗುನಿಸುತ್ತಿದ್ದೆವು. ಉತ್ಸಾಹ,ಉಲ್ಲಾಸ ಸಂತೋಷ ಉಕ್ಕಿತ್ತು. ನೀರವ ನಿರ್ಜನ ಜಾಗ,ಕತ್ತಲು,ಅಪರಿಚಿತ ಸ್ಠಳ ನಮ್ಮ ಕೆ.ಎನ್.ರವರಿಗೆ ಅನುಮಾನ ತಂದಿತು.ದೋಣಿಯವನಲ್ಲಿ “ಇತರ ಯಾತ್ರಿಕರು ಯಾರೂ ಏಕೆ ಕಾಣಿಸ್ತಾ ಇಲ್ಲ.ಯಾಕೆ ಒಂದೇ ಒಂದೂ ಜನ ಕೂಡಾ ನದಿಯಲ್ಲಿ ಇಲ್ಲ?”ಎಂದು ವಿಚಾರಿಸಿದರು.ಸಾವಧಾನವಾಗಿ ನಮ್ಮತ್ತ ತಿರುಗಿಯೂ ನೋಡದೆ ಆತ ಉತ್ತರಿಸಿದ.

 

“ಸಂಜೆ ಆರು ಘಂಟೆ ಕಳೆದ ನಂತರ ದೋಣಿ ನೀರಿಗಿಳಿಸಬಾರದು ಅಂತ ಇಲ್ಲಿ ಕಾನೂನಿದೆ.ಅದಕ್ಕೇ ಇಲ್ಲೆಲ್ಲಾ ಖಾಲಿ.”

ಆಗ ನೆನಪಾಯ್ತು. ನಾವು   ದೋಣಿಗಾಗಿ ಕರೆದಾಗ ಅಲ್ಲಿದ್ದವು ಕೇವಲ  ಮೂರೋ ನಾಲ್ಕೋ ದೋಣಿಗಳಲ್ಲವಾ?ಜನರೆಲ್ಲ ವಾಪಸ್ಸಾಗುತ್ತಿದ್ದರು.ನಾವು ಗಮನಿಸಲಿಲ್ಲ ಯಾಕೆ?  

“ಹಾಗ್ಯಾಕೆ ಕಾನೂನು?”

“ಇಲ್ಲಿ ಬೇಗ ಕತ್ತಲಾಗುತ್ತದೆ.ಆರು ಘಂಟೆಗೆ ನಾವು ನಿಲ್ಲಿಸಬೇಕು. ನಂತರ ದೋಣಿವಿಹಾರ  ಮಾಡುವಾಗ ಮುಳುಗಿದರೆ  ಅವರನ್ನು ತೆಗೆಯಲೂ ಯಾರೂ ಬರುವುದಿಲ್ಲ.”

ನಿರ್ಲಿಪ್ತ ಉತ್ತರ .ನಮಗೋ ಮೈ ಎಲ್ಲ ಹೆಪ್ಪುಗಟ್ಟಿದ ಭೀತಿ.ಹೆದರಿಕೆಯಿಂದ ಉಸಿರೇ ಇಲ್ಲ.ಆವರೆಗಿನ ಉಲ್ಲಾಸ ಮಾಯ.ಮೌನ.
“ನಿನಗೆ?” ಸಾವರಿಸಿಕೊಂಡು ವಿಚಾರಿಸಿದರು.

“ನಮಗೆಲ್ಲ ಈಜು ಬರುತ್ತದೆ.”

ಅಲ್ಲಿಂದ ದಡ ತಲಪುವ ತನಕ ಹಾಡು,ನಗು ಎಲ್ಲ ನಿಂತು ಜೀವ ಕೈಲಿ ಹಿಡಿದು ದೇವರ ಸ್ಮರಣೆ ಒಂದೇ ಉಳಿದಿದ್ದು. 

ಈಗ ಸಿಹಿ ಕಹಿ ಎರಡೂ ನೆನಪು ಉಳಿದುಕೊಂಡಿದೆ!

– ಕೃಷ್ಣವೇಣಿ ಕಿದೂರು.

4 Responses

  1. Hema says:

    ವಾವ್ ! ಅನುಭವ ಚೆನ್ನಾಗಿದೆ..ಹೀಗೂ ಉಂಟೇ! ಕೆಲವು ಪ್ರವಾಸಿ ತಾಣಗಳಲ್ಲಿ ಸ್ಥಳೀಯ ಮಾಹಿತಿ ದೊರೆಯದೆ ಇರುವುದು ಪೇಚಿಗೆ ಸಿಲುಕಿಸುತ್ತದೆ.

  2. Jennifer Shawn says:

    ನಮ್ಮೂರಿನವರನ್ನು ಹೊರ ಊರಿನಲ್ಲಿ ಕಂಡಾಗ ಖುಷಿಯಾಗುವುದು ನಿಜ! ಲೇಖನ ಚೆನ್ನಾಗಿದೆ. Keep writing Madam!

  3. savithri.s.bhat says:

    ಸು೦ದರ ಭಯಾನಕ ಅನುಭವಗಳು ಹ೦ಚಿಕೊಂಡಿದ್ದಕ್ಕೆ ಧನ್ಯವಾದಗಳು

  4. Shruthi says:

    ಬರಹವು ತುಂಬಾ ಮೆಚ್ಚುಗೆಯಾಯಿತು 🙂

Leave a Reply to savithri.s.bhat Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: