ಸ್ವಾವಲಂಬನೆಯಿಂದ ಅವಲಂಬನೆಯತ್ತ

Share Button


ಶಾರದ ಅಡುಗೆ ಮನೆಯಲ್ಲಿ ಕೆಲಸದಲ್ಲಿ ನಿರತಳಾಗಿದ್ದಳು. ರೂಮಿನಲ್ಲೇ ಕುಳಿತು ವರ್ಕ ಫ್ರಂ ಹೋಂ ಕೆಲಸ, ಒಂದೇ ಕಡೆಯಲ್ಲಿ ಕುಳಿತು ಮಾಡಿ, ಮಾಡಿ ಸಾಕಾಯಿತೆಂದು ಮಗ ಸತೀಶ, ತನ್ನ ಕಂಪ್ಯೂಟರ್‌, ಫೋನ್‌ ಎತ್ತಿಕೊಂಡು ಬಂದು ಡೈನಿಂಗ್‌ಹಾಲಿನಲ್ಲೇ ಕುಳಿತು ಕೆಲಸ ಮಾಡುತಿದ್ದ.

ಅವನ ಫೋನ್‌ ರಿಂಗಣಿಸಿತು. ಅವನು ಹೇಳುತಿದ್ದ – ಇರಲಿ, ಮನೆಗೆ ಹೇಗು, ಕೊನೇ ಪಕ್ಷ ಮೂರೂ ಹೊತ್ತೂ ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಸಿಗುತ್ತದಲ್ಲಾ, ನಿನಗೆ ತುಂಬಾ ಕಷ್ಟವಾದರೆ ನನಗೆ ಮೆಸೇಜ್ ಮಾಡು, ನಾನು ಪೋನ್‌ ಮಾಡಿ ನಿನ್ನನ್ನು ಹಿಂದಕ್ಕೆ ಕರೆಸಿಕೊಂಡು ಬಿಡುತ್ತೇನೆ, ನಮ್ಮ ಮ್ಯಾನೇಜರ್‌ ಸರಿಯಿಲ್ಲ ಎಂದು ನನ್ನ ಮೇಲೆ ತಪ್ಪನ್ನು ಹೊರೆಸಿ ಬಂದು ಬಿಡುವಿಯಂತೆ, ಚಿಂತಿಸದೆ ಊರಿಗೆ ಹೋಗಿ ಬಾ – ಎಂದು ಹೇಳುತ್ತಿದ್ದ..
ಇದೇನು ಕಥೆ, ಎನ್ನುತ್ತೀರಾ? ಹೇಳುತ್ತೇನೆ ಇರಿ.

ಶಾರದಳ ಮಗ, ಸತೀಶ ಒಂದು ಪ್ರತಿಷ್ಟಿತ ಸಾಫ್ಟ ವೇರ್‌ ಕಂಪನಿಯೊಂದರಲ್ಲಿ ಮ್ಯಾನೇಜರ್. ಅವನ ಟೇಂ ಮೇಟ್‌ ಒಬ್ಬ 29-30 ವರ್ಷಗಳ ಉತ್ತರ ಭಾರತದ ಹುಡುಗ ಅಶೋಕ್‌ ಜೈನ್. ಹಿಂದಿನ ರಾತ್ರಿ ಅವನ ಬಗ್ಗೆ ಸತೀಶ ಶಾರದಳಿಗೆ ತಿಳಿಸಿದ್ದ. ಅವನೊಬ್ಬ ವರ್ಕ್ ಹೋಲ್ಲಿಕ್‌ ಹುಡುಗ. ಐಐಟಿ ಇಂಜಿನಿಯರ್.
ಮೊನ್ನಿನ ಎರಡೂವರೆ ಮೂರು ದಿನಗಳು ಪೂರ್ತಿಯಾಗಿ ನಿದ್ರೆಯನ್ನೇ ಮಾಡದೆ, ಊಟದ ಪರಿವೆಯೂ ಇಲ್ಲದೆ, ಏನೊ ಒಂದು ತಿಂದುಕೊಂಡು ಯಾವುದೋ ಪ್ರಾಜೆಕ್ಟ್ ವರ್ಕ್ ಅಂತ ಕೆಲಸ ಮಾಡಿ ಮಾಡಿ ಮಧ್ಯ ರಾತ್ರಿ ಜ್ಞಾನ ತಪ್ಪಿ ಬಿದಿದ್ದನಂತೆ.


ಈ ಕೋವಿಡ್‌ ಗಲಾಟೆಯಲ್ಲಿ ರೂಂ ಮೇಟ್‌ಗಳೆಲ್ಲಾ ಊರಿಗೆ ಹೋಗಿಯಾಗಿತ್ತು. ದೊಡ್ಡ ಮನೆಯಲ್ಲಿ ಒಬ್ಬನೇ. ಹೊತ್ತು ಹೊತ್ತಿಗೆ ನಿದ್ರೆ ಊಟಗಳಿಲ್ಲದೆ, ಕುಟುಂಬದ ಜನರ ಆಪ್ಯಾಯಮಾನವಾದ ಒಡನಾಟವಿಲ್ಲದೆ, ಬರೀ ಕೆಲಸ, ಕೆಲಸದ ಬಗ್ಗೆ ಟೀಮಿನವರೊಂದಿಗೆ ಮಾತುಗಳು ಮತ್ತು ಕೋವಿಡ-19 ರ ಬಗ್ಗೆ ವಿಶ್ವದೆಲ್ಲಡೆಯ ವಿಚಾರಗಳನ್ನು ಗೂಗಲ್‌ನಲ್ಲಿ ನೋಡಿ ನೋಡಿ ವಿಪರೀತ ಹೆದರಿಕೆ. ಮನೆಯಿಂದ ಆಚೆ ಹೋಗದೆ, ಮನೆಗೆ ಯಾರನ್ನೂ ಬರಲು ಬಿಡದೆ, ತನ್ನಲ್ಲಿ ತಾನೇ ಹುದುಗಿ, ಹುದುಗಿ, ತನಗೆ ಎಲ್ಲಾ ತಿಳಿದಿದೆ, ತಾನು ಸ್ವತಂತ್ರವಾಗಿ(?) ಎಲ್ಲವನ್ನೂ ನಿಭಾಯಿಸಬಲ್ಲೆ, ತನಗೆ ಯಾರ ಅಗತ್ಯವೂ ಇಲ್ಲ ಎಂಬ ಹುಂಬತನದ ಭಾವದಿಂದ ಮತಹೀನನಾಗಹತ್ತಿದ. ಊರಿಗೆ, ಮನೆಗೆ ಒಂದೆರಡು ತಿಂಗಳುಗಳು ಹೋಗಿ ಬಾ – ಎಂದರೆ,
ಇಲ್ಲಾ, ನನಗೆ ಹದಿನಾರು ವರುಷಗಳು ಆದಾಗಿನಿಂದ, ಅಂದರೆ ಪಿಯುಸಿ ಮುಗಿದಾಗಿನಿಂದ ಮನೆಯ ಹೊರಗೇ ನನ್ನಿಚ್ಚೆ ಬಂದಂತೆ ಓದುತ್ತಾ, ಕೆಲಸ ಮಾಡುತ್ತಾ ಇದ್ದುದು ರೂಢಿಯಾಗಿ ಹೋಗಿದೆ. ಮನೆಗೆ ಹೋದರೆ, ಬೆಳಗ್ಗೆ ಬೇಗ ಏಳು, ಹೊತ್ತು ಹೊತ್ತಿಗೆ ಮನೆಯವರೊಂದಿಗೆ ಒಟ್ಟಿಗೇ ಕುಳಿತು ಊಟ ತಿಂಡಿ ಮಾಡು, ರಾತ್ರಿ ಬೇಗ ಮಲಗಿಕೋ, ಮನೆಗೆ ಯಾರಾದರೂ ನೆಂಟರಿಷ್ಟರು ಬಂದರೆ ಹೊರಗೆ ಬಂದು ಅವರೊಂದಿಗೆ ನಾಲ್ಕಾರು ಮಾತುಗಳನ್ನು ಆಡು . . . . . ಇನ್ನೂ ಮುಂತಾದ ಏನೇನೋ ನಿಬಂಧನೆಗಳಿರುತ್ತವೆ. ನನ್ನ ಸ್ವಾತಂತ್ರ್ಯಕ್ಕೆ (ಮತ್ತೆ?) .. ಅವೆಲ್ಲಾ ವಿಚಾರಗಳು ಧಕ್ಕೆ ತರುತ್ತವೆ. ಆದ್ದರಿಂದ ನಾನು ಊರಿಗೆ ಹೋಗಿ ಮನೆಯವರೊಂದಿಗೆ ಎರಡು ಮೂರು ದಿನಗಳಿಗಿಂತ ಹೆಚ್ಚಿಗೆ ಇರಲಾರೆ – ಎಂದಿದ್ದನಂತೆ. ಎಲ್ಲರಿಗೂ ಕೈ ತುಂಬಾ ಸಂಬಳ. ಮೂರ್ನಾಲ್ಕು ಹುಡುಗರು ಸೇರಿ ಅಪಾರ್ಟಮೆಂಟಿನ ದೊಡ್ಡ ಮನೆಯೊಂದನ್ನು ಬಾಡಿಗೆಗೆ ಹಿಡಿದಿದ್ದರು. ಈಗ ನೋಡಿದರೆ ಈ ಪರಿಸ್ಥಿತಿ.

ಶಾರದ ಸಾರಿಗೆ ಒಗ್ಗರಣೆ ನೀಡಿ ಆಚೆ ಬಂದು ಹಾಲಿನ ಕೌಚ್‌ ಮೇಲೆ ಕುಳಿತು ಯೋಚಸತೊಡಗಿದಳು. ಪರಿಸ್ಥಿತಿ ಎಲ್ಲಿಂದ ಎಲ್ಲಿಗೆ ಹೋಗಿ ಮುಟ್ಟುತ್ತಿದೆ? ಇಂದಿನ ಮಕ್ಕಳಿಗೆ ಕುಟುಂಬ ವ್ಯವಸ್ಥೆಯೂ ಒಂದು ಬಂಧನ ಎಂದೆನಿಸುತ್ತಿದೆಯೆ? ಆಗಲೇ ಕೂಡು ಕುಟುಂಬಗಳು ಮಾಯವಾಗಿ ಮೈಕ್ರೋ ಕುಟುಂಬಗಳು ಬಂದಾಯಿತು. ಈಗ ಅದೂ ಹೇಗಿ, ಇಂದಿನ ಜನಾಂಗ, – ನಾವು ಒಬೊಬ್ಬರೇ ಇರುತ್ತೇವೆ – ಎಂದೆನ್ನುತ್ತಿದ್ದಾರಲ್ಲಾ! ಮದುವೆ ಬೇಡ, ಮಕ್ಕಳು ಬೇಡ, ಅಪ್ಪ ಅಮ್ಮ ಮೊದಲೇ ಬೇಡ, ಒಡಹುಟ್ಟಿದವರೂ ಬೇಡ, ನಾನೇ ಎಲ್ಲಾ, ನಮ್ಮ ಅಗತ್ಯಗಳನೆಲ್ಲಾ ಹಣದಿಂದ ಪಡೆದುಕೊಳ್ಳ ಬಹುದು ಎಂದು ಯೋಚಿಸ ಹೊರಟರೆ, ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ? ಇದರ ಕೊನೆ ಯಾವುದು ಎಂದು ಭಯವಾಗುತ್ತಿದೆ.

ಮುಂಚಿನ ಕಾಲದಲ್ಲಿ ತೀರಾ ಒಬ್ಬರನೊನ್ನೊಬ್ಬರು ಅವಲಂಬಿಸುತ್ತಿದ್ದರು. ಆಗೊಂದು ರೀತಿಯ ಶೋಷಣೆಯಾಗುತಿತ್ತು. ಈಗ ತೀರಾ ಸ್ವಾವಲಂಬನೆಯಾಗಿ, ಅದು ಸ್ವೇಚ್ಛೆಯಾಗಿ ಬದಲಾಗಹತ್ತಿದೆ. ಎರಡೂ ಅತರೇಕಗಳಾದರೆ ಜೀವನ ದುಸ್ತರ ವಾಗುವುದಿಲ್ಲವೆ? ಕೆರಿಯರ್‌, ಕೆರಿಯರ್‌ ಎನ್ನುತ್ತಾ ಜೀವನದ ಬಹು ಭಾಗವನ್ನೆಲ್ಲಾ ದುಡಿಮೆಗೆ ಮೀಸಲಿಟ್ಟು ಮಿಕ್ಕೆಲ್ಲಾ ಪ್ರಾಪಂಚಿಕ ವಿಷಯಗಳಿಗೆ ಬೆನ್ನು ಹಾಕಿ ಕುಳಿತರೆ ಮನಸ್ಸಿನ ನೆಮ್ಮದಿ ಕದಡದೆ ಇರುತ್ತದೆಯೆ?
ಅವಲಂಬನೆ ಶೋಷಣೆಯತ್ತ ಬಾಗುತ್ತಿದೆ ಎನ್ನಿಸ ಹತ್ತಿದಾಗ ಅದಕ್ಕೆ ಅವಕಾಶವೀಯದಂತೆ ಸಡ್ಡು ಹೊಡೆದು ಸ್ವಾವಲಂಬಿಯಾಗುವುದು ಖಂಡಿತಾ ಅಗತ್ಯವೇ

ಹೌದು.
ಆದಾಗ್ಯೂ, ಸುಖೀ ಜೀವನಕ್ಕೆ ಅವಲಂಬನೆಯೂ ಇರಬೇಕಲ್ಲವೆ? ಗಂಡ, ಹೆಂಡತಿ, ಮಕ್ಕಳು, ತಂದೆ ತಾಯಿ, ಒಡಹುಟ್ಟಿದವರು ಇವರೆಲ್ಲರಿಗೂ ನನ್ನ ಅಗತ್ಯವಿದೆ, ಅವರೆಲ್ಲರ ಅಗತ್ಯ ನನಗೂ ಇದೆ, ಅವರಿಗೆ ನಾನು ಬೇಕು, ನನಗೂ ಅವರುಗಳಿಲ್ಲದೆ ನಡೆಯದು ಎನ್ನುವ ಆಪ್ತ ಭಾವವೇ ಜೀವನದ ಉಸಿರಲ್ಲವೆ?
ಬಂಧನವೆನ್ನಿಸದ ಕಟ್ಟುಪಾಡುಗಳು, ಮರ್ಕಟ ಮನಸ್ಸನ್ನು ಹತೋಟಿಯಲ್ಲಿಡುವ ಸಾಧನಗಳಲ್ಲವೆ?


ಇದಕ್ಕೆ ಒಂದು ಉದಾಹರಣೆ ಎಂದರೆ, ಗೆಳತಿ ಮೀನಾ ರಮ್ಯವಾದ ಕಾದಂಬರಿಗಳನ್ನೋದುತ್ತಾ ಬೆಳೆದವಳು. ಅವಳ ಕಾದಂಬರೀ ಪ್ರಪಂಚದಲ್ಲಿ, ಗಂಡ ಆಫೀಸಿಗೆ ಹೊರಡುವಾಗ, – ಬೇಗ ಮನೆಗೆ ಬನ್ನಿ – ಎಂದು ನವಿರಾಗಿ ಹೇಳುವುದು ರಸಿಕತೆಯ ಒಂದು ಭಾವ. ಅವಳ ಮದುವೆಯಾದ ಹೊಸದರಲ್ಲಿ ಹಾಗೆಯೇ ಗಂಡ ದಿನೇಶನಿಗೆ ನಾಚುತ್ತಾ, ನಾಚುತ್ತಾ ಹೇಳಿದರೆ ಅವ, – ನಾನೇನು ಆಫೀಸು ಮುಗಿದ ಮೇಲೆ ಕಸ ಗುಡಿಸುತ್ತಾ ಕುಳಿತಿರುತ್ತೇನೆಯೆ? ಬರದೇ ಎಲ್ಲೂ ಹೋಗಲ್ಲ, ನನ್ನನ್ನು ಕಂಟ್ರೋಲ್‌ ಮಾಡಲು ಪ್ರಯತ್ನಿಸಬೇಡ – ಎಂದು ಸಿಡುಕುತ್ತಿದ್ದನಂತೆ. ಇವಳಿಗೆ ಅರ್ಥವೇ ಆಗುತ್ತಿರಲಿಲ್ಲವಂತೆ, ಯಾಕೆ ಈ ಜನ ಕನ್ಸರ್ನ್ ತೋರಿಸಿದರೆ ಕಂಟ್ರೋಲ್‌ ಅಂದುಕೊಳುತ್ತಾರೆ ಅಂತ.

ಇಲ್ಲ, ನಾನು ಸರ್ವತಂತ್ರ ಸ್ವತಂತ್ರ, ನನಗೆ ಯಾರ ಅಗತ್ಯವೂ ಇಲ್ಲ, ನನಗೆ ಬೇಕೆನಿಸಿದ್ದನೆಲ್ಲಾ ನಾನೇ ಪಡೆಯುವೆ ಎಂಬ ಭಾವ ಕೆಲ ಸಮಯ ನಶೆಯೇರದ ವಿಷ ವರ್ತುಲದ ಸುಖದಲ್ಲಿ ತೇಲಾಡಿದಂತೆ ಅನ್ನಿಸಿದರೂ, ನನ್ನ ಅಗತ್ಯವೂ ಯಾರಿಗೂ ಇಲ್ಲ, ಯಾರಿಗೂ ನಾನು ಬೇಕೇ ಬೇಕು ಎನ್ನುವ ಅವಶ್ಯಕತೆಯೂ ಇಲ್ಲ ಎಂದೆನಿಸಿಬಿಟ್ಟಾಗ ಮನದಲ್ಲಿ ಶೂನ್ಯ ಆವರಸಿ ಮನಸ್ಸು ಮಂಕಾಗಿ ಬಿಡುವುದಿಲ್ಲವೆ?

ಕರೋನಾ ಮನುಷ್ಯನನ್ನು ಹಲವಾರು ಚಿಂತನ ಮಂಥನಗಳಿಗೆ ಹಚ್ಚಿದೆ.ಸ್ವೇಚ್ಛಾಚಾರವಾಗದಂಥಹ ಸ್ವಾವಲಂಬನೆ ಹಾಗೆಯೇ ಶೋಷಣೆಯಾಗದಂತಹ ಅವಲಂಬನೆಯ ನಡುವೆ ಇರುವ ತೆಳು ರೇಖೆಯ ಸೂಕ್ಷ್ಮತೆಯನ್ನು ಅರಿತು, ಅದರ ಗಡಿ ದಾಟದಂತೆ ಎಚ್ಚರ ವಹಿಸಿ ಸಮನ್ವಯತೆಯನ್ನು ಸಾಧಿಸಿ ಸುಂದರ ಜೀವನ ನಮ್ಮ ದಾಗಿಸಿಕೊಳ್ಳುವುದರ ಅವಶ್ಯಕತೆ ಇಂದಿನ ದಿನಗಳ ತುರ್ತು ಅಗತ್ಯಗಳಲ್ಲಿ ಒಂದು ಎಂದುಕೊಂಡಳು ಶಾರದ.

ಮಗ ಸತೀಶ, ಕಂಪ್ಯೂಟರ್‌ ಮುಂದಿನಿಂದ ಎದ್ದು ಬಂದು – ಅಬ್ಬಾ , ಅಶೋಕನನ್ನು ಅವನ ಊರಗೆ ಕಳುಹಿಸಲು ಒಪ್ಪಿಸಿ ನಾನೇ ಆಫೀಸಿನ ವತಿಯಿಂದ ಫ್ಲೈಟ್ ಟಿಕೆಟ್‌ ಬುಕ್ಕ್ ಮಾಡಿ ಬಿಟ್ಟೆ. ಈಗ ಕೊಂಚ ಸಮಾಧಾನವಾಯಿತು – ಎಂದಾಗ, ಶಾರದಳಿಗೆ ಮಗನ ಬಗ್ಗೆ ಹೆಮ್ಮೆಯೆನಿಸಿತು.

ಪದ್ಮಾ ಆನಂದ್, ಮೈಸೂರು

10 Responses

  1. ನಯನ ಬಜಕೂಡ್ಲು says:

    ಇಂದಿನ ಜೆನರೇಷನ್ ನ ವಾಸ್ತವವನ್ನು ಬಹಳ ಚೆನ್ನಾಗಿ ಕತೆಯ ಮೂಲಕ ತೆರೆದಿಟ್ಟಿದ್ದೀರಿ.

  2. ನಾಗರತ್ನ ಬಿ. ಅರ್. says:

    ಲೇಖನ ಚಿಕ್ಕದಾದರೂ ಚಿಂತನೆಗೆ ಹಚ್ಚುವ ರೀತಿಯಲ್ಲಿ ಸೊಗಸಾಗಿ ಮೂಡಿ ಬಂದಿದೆ.ಅವಲಂಬನ ಸ್ವಾವಲಂಬನೆ ಎರಡರಲ್ಲೂ ಲಂಬ ಎನ್ನುವ ಪದ ಅವರವರು ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತದೆ. ಧನ್ಯವಾದಗಳು ಪ್ರಿಯ ಗೆಳತಿ ಪದ್ಮಾ.

    • Padma Anand says:

      ತಮ್ಮ ಪ್ರತಿಕ್ರಿಯೆಯಾಗಿ ಧನ್ಯವಾದಗಳು ಗೆಳತಿ.

  3. Vathsala says:

    ಇಂದಿನ ಪೀಳಿಗೆಯ ಇಂಥ ವಿಪರೀತದ ವರ್ತನೆ ತುಂಬಾ
    ಹಾನಿಕರ. ಇದಕ್ಕೆಲ್ಲಾ ಕಾರಣ ಪಾಶ್ಚಿಮಾತ್ಯ ಸಂಸ್ಕೃತಿಯ
    ಹಾಗೂ ಮಾಧ್ಯಮಗಳ ಪ್ರಭಾವ. ವಿಚಾರಗಳ ಸಂಗ್ರಹ
    ಯೋಚನೆಗೆ ಹಚ್ಚುವಂತಿದೆ.

    • Padma Anand says:

      ಹೌದು, ನಿಮ್ಮ ಪ್ರತಿಕ್ರಿಯೆಗೆ ನನ್ನ ಸಹಮತವೂ ಇದೆ. ಮೆಚ್ಚುಗೆಗಾಗಿ ವಂದನೆಗಳು.

  4. ನಾಗರತ್ನ.ಎನ್ says:

    ಇಂದಿನ ಯುವಜನಾಂಗ ಏನನ್ನೋ ಸಾಧಿಸಲು ಹೋಗಿ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ. ಇದು ಸ್ವಲ್ಪ ವರ್ಷಗಳ ಕಾಲ ಚೆನ್ನಾಗಿರುತ್ತದೆ. ನಂತರ ಯಾರೂ ಇಲ್ಲದ ಬದುಕು ಶೂನ್ಯ ಎನಿಸತೊಡಗುತ್ತದೆ.

    • Padma Anand says:

      ಹೌದು, ನಿಮ್ಮ ಮಾತು ಸತ್ಯ ಮೇಡಂ, ಪ್ರತಿಕ್ರಿಯೆಗಾಗಿ ಧನ್ಯವಾದಗಳು

  5. ಶಂಕರಿ ಶರ್ಮ says:

    ಅರ್ಥವತ್ತಾದ ಕಥೆ.. ಹೊಸ ಪೀಳಿಗೆಯ ಯುವಕರ ಅಂತರ್ಯವನ್ನು ಸೊಗಸಾಗಿ ತೆರೆದಿರುವಿರಿ ಮೇಡಂ.

    • Padma Anand says:

      ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: