ತನ್ನನ್ನು ಸಜೀವವಾಗಿ ಶ್ರೀಹರಿಗೆ ಅರ್ಪಿಸಿದವ…

Share Button

ಯಾರಲ್ಲಿ ಒಳ್ಳೆಯ ಗುಣವಿದ್ದರೂ ಅವರನ್ನು ಗೌರವಿಸುವುದು, ಪೂಜಿಸುವುದು ನಮ್ಮ ಹಿಂದೂ ಸನಾತನ ಸಂಸ್ಕೃತಿ. ಅವರು  ದೇವತೆಗಳಿರಬಹುದು, ಅಸುರರಿರಬಹುದು. ಮೇಲ್ವರ್ಗ, ಕೆಳವರ್ಗ, ಯಾವುದೇ ಸ್ತರಗಳಲ್ಲಿರಬಹುದು. ಅಸುರರಾದರೂ ಅವರಲ್ಲಿ ಕೆಲವೊಂದು ಒಳ್ಳೆಯ ಗುಣಗಳಿರಬಹುದು. ಒಳ್ಳೆಯ ಗುಣಕ್ಕೆ ಮತ್ಸರವಾಗಲೀ ದ್ವೇಷವಾಗಲೀ ಇರಬಾರದೆಂಬುದು ನಮ್ಮ ಪೂರ್ವಿಕರಿಂದ ಬಂದ ಹಿತೋಪದೇಶ.

ದಾನ, ತ್ಯಾಗ ಮೊದಲಾದ ಗುಣ ಮೌಲ್ಯಗಳು ಅವನಲ್ಲಿದ್ದುವು. ಹರಿಭಕ್ತ,ಮಹಾಜ್ಞಾನಿಯಾಗಿದ್ದವನು. ವಿಶೇಷವಾಗಿ ಕೊಟ್ಟ ಮಾತಿಗೆ ತಪ್ಪದವನು. ಈ ನಿಟ್ಟಿನಲ್ಲಿ ತನ್ನ ಪ್ರಾಣಕ್ಕೆ ಸಂಚಕಾರ ಬಂದರೂ ಲೆಕ್ಕಿಸದವನು. ವರ್ಷದಲ್ಲೊಂದು ದಿನ ಆತನನ್ನು ಭೂಮಿಗೆ ಬರಮಾಡಿಕೊಳ್ಳುತ್ತೇವೆ. ಹೀಗೆ ಭೂಮಿಗೆ ಬರಲು ಆತ ತನ್ನ ಕೋರಿಕೆಯನ್ನು ನಿವೇದಿಸಿಕೊಂಡಿದ್ದ, ಯಾರಲ್ಲಿ?  ಯಾವಾಗ?   ಯಾಕೆ?  ಈತನೇ ಬಲಶಾಲಿಯಾದ ಮಹಾಬಲಿ.

 ಬಲಿಚಕ್ರವರ್ತಿ ಹಿರಣ್ಯಕಶಿಪುವಿನ ಸಂತತಿಯವನು, ಪ್ರಹ್ಲಾದನ ಮೊಮ್ಮಗ. ಹರಿಭಕ್ತಿಯಲ್ಲಿ ಕೂಡಾ ಪ್ರಹ್ಲಾದನ ಒಂದಂಶ ಇವನಲ್ಲೂ ಬಂದಿದೆ. ‘ಬಲಿ’ಯ ತಂದೆ ವಿರೋಚನ, ವಿಂದ್ಯಾವಳಿ ಬಲಿ ಚಕ್ರವರ್ತಿಯ ಪತ್ನಿ, ಅಸುರ ಕುಲದವನಾದ ಕುಲಗುರುಗಳು ಶುಕ್ರಾಚಾರ್ಯರು. ಪ್ರಯಾಣಿಕನು ಇಚ್ಛಿಸಿದಲ್ಲಿಗೆ ಚಲಿಸಬಲ್ಲ ಸುಂದರೂ ಶ್ರೇಷ್ಠವೂ ಆದ ವಿಮಾನವೊಂದನ್ನು ದಾನವರ ಶಿಲ್ಪಿಯಾದ ಮಯನು ‘ಬಲಿ’ಗೆ ನಿರ್ಮಿಸಿಕೊಟ್ಟಿದ್ದನು.

ಬಲಿ ಚಕ್ರವರ್ತಿಯು ರಾಜ್ಯಾಡಳಿತಕ್ಕೆ ಬಂದಾಗ ಅವನಲ್ಲಿ ಕೆಲವು ವಿಚಾರಗಳು ಸುಳಿದುವು. ಸಮುದ್ರ ಮಥನ ಸಂದರ್ಭದಲ್ಲಿ ಸಿಕ್ಕಿದ ಶ್ರೇಷ್ಠ ವಸ್ತುಗಳನ್ನೂ ಅಮೃತವನ್ನೂ ದೇವತೆಗಳೇ ಹಂಚಿಕೊಂಡರು. ದಾನವರಾದ ತಮಗೆ ಏನೂ ಕೊಡಲಿಲ್ಲ. ಸಹಭಾಗಿಗಳಾದ ನಮಗೆ ಸಮಪಾಲು ಕೊಡಬೇಕಿತ್ತು. ಆದರೆ ದೇವತೆಗಳು ದಾನವರಿಗೆ ವಂಚಿಸಿದರು ಎಂಬುದಾಗಿ ಚಿಂತಿಸಿದ. ಬಲೀಂದ್ರನು ದೇವತೆಗಳೊಡನೆ ಯುದ್ಧಮಾಡಿ ತಮ್ಮ ಪಾಲನ್ನು ಪಡೆಯಲೇಬೇಕೆಂದು ನಿಶ್ಚಯಿಸಿದನು. ಅಂತೆಯೇ ದಾನವರ ಸೈನ್ಯರೊಡಗೂಡಿ ದೇವತೆಗಳಲ್ಲಿ ಯುದ್ಧಕ್ಕೆ ಹೋದನು. ಸಾವಿರಾರು ರಾಕ್ಷಸರು ಕೊಲ್ಲಲ್ಪಟ್ಟರು. ಅಮೃತವನ್ನು ಕುಡಿದ ದೇವತೆಗಳು ಅಮರತ್ವವನ್ನು ಪಡೆದಿದ್ದರು. ಈ ಕುರಿತಾಗಿ ಕೋಪ ಕೆರಳಿದ ಬಲೀಂದ್ರನು ಮಯನು ತನಗೆ ನಿರ್ಮಿಸಿಕೊಟ್ಟ ವಿಮಾನವನ್ನೇರಿ ಎದುರಿಗೆ ಸಿಕ್ಕಿದ ಶತ್ರುಗಳನ್ನು ಸದೆಬಡಿಯುತ್ತಾ ದೇವತೆಗಳ ಒಡೆಯನಾದ ದೇವೇಂದ್ರನೊಡನೆ ಯುದ್ಧಕ್ಕೆ ಹೋದನು. ತಾನು ಸೋಲುವೆನೆಂದು ಖಚಿತವಾದಾಗ ಮತ್ತೆ ಮಾಯಾಯುದ್ದಕ್ಕೆ ಪ್ರಾರಂಭಿಸಿದನು. ಪರ್ವತಗಳು ಹೆಬ್ಬಂಡೆಗಳು, ದೇವತೆಗಳ ಮೇಲೆ ಬೀಳಲಾರಂಭಿಸಿದುವು . ಅದರ ಹಿಂದೆಯೇ ಕೂರ ಪ್ರಾಣಿಗಳು ಏರಿದುವು . ಇದರಿಂದ ಧೃತಿಗೆಟ್ಟ ದೇವತೆಗಳು ಮಹಾವಿಷ್ಣುವನ್ನು ಒಂದೇ ಸಮನೆ ಧ್ಯಾನ ಮಾಡುತ್ತಾ ನಿಂತರು. ಅವರ ಮಾತು ಕೇಳಿ ಶ್ರೀಮನ್ನಾರಾಯಣನು ಪ್ರತ್ಯಕ್ಷನಾಗಿ ಏನೆಂದು ವಿಚಾರಿಸಲಾಗಿ ರಾಕ್ಷಸರ ಮಾಯೆಯೆಲ್ಲ ಮಾಯವಾಯ್ತು. ‘ಸಮುದ್ರ ಮಥನದಲ್ಲಿ ಬರುವ ನೊರೆಯನ್ನುಪಯೋಗಿಸಿ ಬಲಿಯನ್ನು ಕೊಲ್ಲಬೇಕೆಂದು’ ಅಶರೀರವಾಣಿಯಾಗಲು ದೇವೇಂದ್ರನು ಹಾಗೆಯೇ ಮಾಡಲು ಬಲಿಯು ಸತ್ತನು. ಆದರೆ ಆತನ ಗುರುಗಳಾದ ಶುಕ್ರಾಚಾರ್ಯರು ಮೃತ ಸಂಜೀವಿನಿ ವಿದ್ಯೆಯಿಂದ, ಬಲೀಂದ್ರನನ್ನು ಬದುಕಿಸಿದರು. ತನಗೆ ಪ್ರಾಣದಾನ ಮಾಡಿದ ಶುಕ್ರಾಚಾರ್ಯರಲ್ಲಿ ಬಲೀಂದ್ರನಿಗೆ ಅಪಾರ ಭಕ್ತಿ, ಗೌರವ ಬೆಳೆಯಿತು.

ಶುಕ್ರಾಚಾರ್ಯರು ಬಲೀಂದ್ರನಿಂದ ‘ವಿಶ್ವಜಿತ್’ ಯಾಗವನ್ನು ಮಾಡಿಸಿದರು. ಅದರ ಕೊನೆಯಲ್ಲಿ ಯಜ್ಜದಿಂದ  ಚಿನ್ನದ ರಥ ಎದ್ದು ಬಂತು. ಕೊನೆಗೆ ಬ್ರಹ್ಮನು ಎಂದೂ ಬಾಡದ ಕಮಲದ  ಹೂವಿನ ಹಾರವನ್ನು ಬಲೀಂದ್ರನ ಕೊರಳಿಗೆ ಹಾಕಿದನು. ಈಗ ಜಯಿಸುವ ಶಕ್ತಿ ಅವನಿಗಾಗಿ ‘ಮಹಾಬಲಿ’ಯಾದನು.

ಮಹಾಬಲಿಗೆ ಸ್ವರ್ಗಲೋಕದ ಭೋಗಭಾಗ್ಯಗಳುಳ್ಳ ಅಮರಾವತಿಯ ಮೇಲೆ ಕಣ್ಣುಬಿತ್ತು. ಅಲ್ಲಿಗೆ ದಂಡೆತ್ತಲು ಉಪಕ್ರಮಿಸಿದನು. ಈ ಸೂಚನೆ ಕಂಡೊಡನೆ  ದೇವೇಂದ್ರನು ಬೃಹಸ್ಪತಿಯ ಬಳಿಗೋಡಿ ದೂರಿತ್ತನು. ಆಗ ಬೃಹಸ್ಪತಿಯು ಶುಕ್ರಾಚಾರಯರು ತಮ್ಮ   ತಪಃಶಕ್ತಿಯನ್ನೆಲ್ಲ ಇವನಲ್ಲಿ ತುಂಬಿಸಿ ಕಳುಹಿಸಿದ್ದಾರೆ. ಇವನನ್ನು ನಿಗ್ರಹಿಸಲು ಶ್ರೀಹರಿಯಿಂದ ಮಾತ್ರ ಸಾಧ್ಯ ಅಲ್ಲಿಯವರಿಗೆ ನೀನು ಕಾಯಬೇಕು ಬೇರೆ ದಾರಿಯಿಲ್ಲ ಎಂದರು. ಇಂದ್ರನು ಇತರ ದೇವತೆಗಳೊಂದಿಗೆ ಸ್ವರ್ಗದಿಂದ ತೆರಳಿ ತಲೆಮರೆಸಿಕೊಂಡನು. ಶುಕ್ರಾಚಾರ್ಯರ ನೇತೃತ್ವದಲ್ಲಿ ನೂರು ಅಶ್ವಮೇಧ ಯಾಗಗಳನ್ನು  ಮಾಡಿ ಬಲಿಯು ಇಂದ್ರ ಪದವಿಯನ್ನು ಭದ್ರಪಡಿಸಿಕೊಂಡನು.

ದೇವತೆಗಳೆಲ್ಲರೂ ಬಲೀಂದ್ರನ ಭಯದಿಂದ ದಿಕ್ಕಾಪಾಲಾದುದನ್ನು ಕಂಡು ಅವರ ಅಮ್ಮನಾದ ಅದಿತಿಯ ಸಂಕಟ ಹೇಳತೀರದಾಯಿತು. ಆ ಸಮಯಕ್ಕೆ ಆಕೆಯ ಪತಿಯಾದ ಕಶ್ಯಪನು ತಪೋಮಗ್ನರಾಗಿದ್ದರು. ಅವರು ಯೋಗ ಮುದ್ರೆಯಿಂದ ಬಹಿರ್ಮುಖರಾದ ಕೂಡಲೇ ತನ್ನ ನೋವನ್ನು ಪತಿಯೊಡನೆ ನಿವೇದಿಸಿಕೊಂಡಳು ಅದಿತಿ. ಅದಕ್ಕವರು “ಈಗ ಉಳಿದಿರುವುದು ಒಂದೇ ಮಾರ್ಗ. ಶ್ರೀಹರಿಯ ಮೊರೆಹೋಗುವುದು. ಅದಕ್ಕಾಗಿ ‘ಪಯೋವ್ರತ’ವೆಂಬ ವ್ರತವಿದೆ. ಅದನ್ನು ನಿಷ್ಠೆಯಿಂದ ಆಚರಿಸಿದರೆ ಶ್ರೀಹರಿ ಸಂತುಷ್ಟನಾಗಿ ನಿನ್ನ ಮಕ್ಕಳ ಸಂಕಷ್ಟಕ್ಕೆ ಯೋಗ್ಯ ಪರಿಹಾರ ಮಾರ್ಗ ತೋರಿಸುವನು’ ಎಂದು ಹೇಳಿ ಅದರ ಆಚರಣೆಯ ವಿವರಗಳನ್ನು ನೀಡಿದರು.

ಫಾಲ್ಗುಣ ಮಾಸದಲ್ಲಿ ಶುಕ್ಲಪಕ್ಷದ ಹನ್ನೆರಡು ದಿನ ಹಾಲನ್ನು ಮಾತ್ರ ಸೇವಿಸಿ ಶ್ರೀಹರಿಯನ್ನು ಆರಾಧಿಸಬೇಕು. ಕೊನೆಯ ದಿನ ಅತಿಥಿ ಅಭ್ಯಾಗತರನ್ನೂ ಪುರೋಹಿತರನ್ನೂ ಕರೆಸಿ ದಾನ, ದಕ್ಷಿಣೆ, ಭೋಜನಗಳನ್ನಿತ್ತು ತೃಪ್ತಿಪಡಿಸಬೇಕು. ಎಂದು ಮಂತ್ರಗಳ ಸಹಿತ ಸವಿವರಗಳನ್ನ ನೀಡಿದರು. ಅದಿತಿಯು ಪತಿಯ ಆದೇಶದಂತೆ ವ್ರತವನ್ನು ಕೈಗೊಂಡಳು. ಶ್ರೀಹರಿಯು ಆಕೆಗೆ ಪ್ರತ್ಯಕ್ಷನಾಗಿ ನಾನು ಅಣುರೂಪದಲ್ಲಿ ನಿನ್ನ ಪತಿಯ ದೇಹವನ್ನು ಪ್ರವೇಶಿಸಿ ಮತ್ತೆ ನಿನ್ನ ಹೊಟ್ಟೆಯಲ್ಲಿ ಮಗನಾಗಿ ಹುಟ್ಟಿ ನಿನ್ನ ಮಕ್ಕಳನ್ನು ಕಾಪಾಡುವೆ ಎಂದು ಅಭಯವಿತ್ತನು.

ಕಾಲಕ್ರಮದಲ್ಲಿ  ಶ್ರೀಹರಿಯು ಆದಿತಿಯ ಮಗನಾಗಿ ‘ವಾಮನ‘ ಅವತಾರವೆತ್ತಿದನು. ವಾಮನನಿಗೆ ಬ್ರಹ್ಮೋಪದೇಶ ಮಾಡುವುದಕ್ಕಾಗಿ  ಬೃಹಸ್ಪತಿಯ ಜನಿವಾರ, ಭೂದೇವಿ ಕೃಪಾಜಿನ, ಬ್ರಹ್ಮ ಹಾಗೂ ಚಂದ್ರರು ದಂಡ ಕಮಂಡಲುಗಳನ್ನು  ನೀಡಿದರೆ ಕುಬೇರನು ಭಿಕ್ಷಾಪಾತ್ರೆ ಕೊಟ್ಟನು.  ಅನ್ನಪೂರ್ಣೆ ಭಿಕ್ಷೆ ಇಕ್ಕಿದಳು. ಸೂರ್ಯದೇವನು ಗಾಯತ್ರಿ  ಮಂತ್ರ  ಉಪದೇಶ ಮಾಡಿದನು. ಅವನು ಕೆಲಕಾಲ ತಪಸ್ಸು ಮಾಡಿ ಪಡೆದ ಆಶ್ರಮಕ್ಕೆ ‘ಸಿದ್ದಾಶ್ರಮ’ ಎಂದು ಹೆಸರಾಯಿತು.

ಯಾವುದಕ್ಕೂ ಕಾಲ ಪಕ್ವವಾಗಿ ಕೂಡಿಬರಬೇಕು. ಇಷ್ಟರಲ್ಲಿ ಬಲಿಚಕ್ರವರ್ತಿಯ ಶುಕ್ರಾಚಾರ್ಯರನ್ನು ಮುಂದಿಟ್ಟು ಅಶ್ವಮೇಧಯಾಗವನ್ನು ಮಾಡಲು ಪ್ರಾರಂಭಿಸಿದನು.  ಇದನ್ನು ದೇವತೆಗಳಿಂದ ತಿಳಿದ ವಾಮನನು ನರ್ಮದಾ ನದೀ ತೀರದಲ್ಲಿ ಯಾಗ ಮಾಡುತ್ತಿರುವ ಬಲಿಚಕ್ರವರ್ತಿಯ ಯಜ್ಞ ಶಾಲೆಯನ್ನು ಪ್ರವೇಶಿಸಿದನು. ವಾಮನ ರೂಪದ ವಟುವನ್ನು ಕಂಡು ಬಲಿಚಕ್ರವರ್ತಿಗೆ ಹರ್ಷವಾಯಿತು. ಯಾಗದ ಸಮಯದಲ್ಲಿ  ವಟುವನ್ನು ಸತ್ಕರಿಸುವುದರಿಂದ ಅವನಿಗೆ ಶ್ರೇಯಸ್ಸಲ್ಲವೇ! ವಟುವಿಗೆ ಹೇಳಿದನು ‘ `ಬ್ರಹ್ಮಚಾರಿಗಳು ಭಿಕ್ಷಾಟನೆ ಮಾಡುವುದು ವಾಡಿಕೆ. ತಮಗೆ ಭಿಕ್ಷೆಯನ್ನು ಕೊಡುವುದು ನನ್ನ ಧರ್ಮ, ನಾನೀಗ ನಿನಗೆ ಏನನ್ನು ಕೊಡಲಿ ? ಎಂದು ಕೇಳಿದನು.

ಈಗ ವಾಮನನು ‘ಎಲೈ ಮಹಾರಾಜನೇ, ನಿನ್ನ ವಂಶಜರೆಲ್ಲ ಮಹಾದಾನಿಗಳು. ನಾನೀಗ ಒಂದು ರಾಜ್ಯವನ್ನೇ ಕೇಳಿದರೂ ನೀನು ಕೊಡಬಲ್ಲೆ. ಆದರೆ ನನಗೆ ಅದೇನೂ ಬೇಕಾಗಿಲ್ಲ. ನನ್ನ ಹೆಜ್ಜೆಗಳಲ್ಲಿ ಮೂರು ಹೆಜ್ಜೆಗಳಾಗುವಷ್ಟು ಭೂಮಿಯನ್ನು ಕೊಡು ಅಷ್ಟು ಸಾಕು‘ ಎಂದನು.

‘ಅಯ್ಯಾ . ವಟುವೇ ಇದೆಂತಹ ಬೇಡಿಕೆ ? ಈ ಅತ್ಯಲ್ಪ ಸ್ಥಳದಿಂದ ನಿನಗೇನು  ? ಪ್ರಯೋಜನ ಫಲವತ್ತಾದ ಯಾವುದಾದರೂ ಒಂದು ಭೂಮಿಯನ್ನು ಕೇಳಿಕೊಡುವೆನು ಎಂದನು ಬಲಿ, ಅಷ್ಟರಲ್ಲೇ ವಾಮನ ‘ರಾಜನೇ, ಅದ್ಯಾವ ದುರಾಸೆಯೂ ನನಗಿಲ್ಲ. ನಾನು ಕೇಳಿದುದನ್ನು ನೀನು ಕೊಟ್ಟರೆ ಅದರಿಂದಲೇ ತೃಪ್ತನಾಗುವೆನು’ ಎಂದುತ್ತರವಿತ್ತ  ವಾಮನ ವಟು. ಹಾಗೆಯೇ ಆಗಲಿ ಎಂದ ವಾಮನ ವಟು, ‘ನಿನ್ನಿಚ್ಚೆಯಂತಯೇ  ಆಗಲಿ’ ಎಂದು ರಾಜನು ದಾನಕೊಡಲು ಜಲಧಾರೆಪೂರ್ವಕ ಸಿದ್ದನಾದನು.

ಕೂಡಲೇ ಶುಕ್ರಾಚಾರ್ಯರು ಎಚ್ಚೆತ್ತು ‘ಮಹಾರಾಜ, ನೀನು ಮೋಸ ಹೋಗುತ್ತಿರುವೆ. ಈ ವಾಮನ ಕೇವಲ ವಟುವಾಗಿರದೆ ವಿಷ್ಣುವಿನ ಅವತಾರವಿರಬೇಕು. ದೇವತೆಗಳ ರಕ್ಷಣೆಗಾಗಿ, ಆದಿತಿಯ ಮಗನಾಗಿ ಹುಟ್ಟಿ ಈಗ ಇಲ್ಲಿ ಬಂದಿದ್ದಾನೆ. ನಿನಗೆ ಕೇಡು ನಿಶ್ಚಿತವು. ನಿನ್ನ ದಾನ ಕಾರ್ಯವನ್ನು ನಿಲ್ಲಿಸು’ ಎಂದು ಎಚ್ಚರಿಕೆ ಕೊಟ್ಟನು. ಅದಕ್ಕೆ ಬಲೀಂದ್ರನು ‘ ನಾನು ಕೊಟ್ಟ ಮಾತಿಗೆ ತಪ್ಪಲಾರೆ, ಕೊಟ್ಟ ಮಾತಿಗೆ ತಪ್ಪಿದರೆ ಅದಕ್ಕಿಂತ ದೊಡ್ಡ ಪಾತಕವಿಲ್ಲ;  ಎಂದವನೇ ದಾನ ಕೊಡಲು ಹಿಂಜರಿಯಲಿಲ್ಲ. ಆತನ ಮಡದಿ  ವಿಂದ್ಯಾವಳಿಯೂ ಅಡ್ಡಿ ವ್ಯಕ್ತಪಡಿಸಿದರೂ ಬಲೀಂದ್ರ ಕೇಳಲಿಲ್ಲ.

ತಮ್ಮ  ಮಾತನ್ನು ಶಿಷ್ಯ ಕೇಳುವುದಿಲ್ಲ. ಆದರೆ ಆಪ್ತ ಶಿಷ್ಯನಾದವನ ರಕ್ಷಣೆ  ಮಾಡುವುದು ತನ್ನ ಕರ್ತವ್ಯವೆಂದು ಮನದಟ್ಟಾದ ಶುಕ್ರಾಚಾರ್ಯರು ಸೂಕ್ಷ್ಮ ರೂಪ ತಾಳಿ ಕಮಂಡಲುವಿನ ಒಳಗೆ ಹೋಗಿ ಅದರ ಕೊಂಬಿನ ತೂತಿಗೆ ಅಡ್ಡಲಾಗಿ ಕುಳಿತರು.ದಾನ ಕೊಡಲು ಜಲಧಾರೆ ಬಾರದಾಯಿತು. 

ಇದನ್ನರಿತ ವಾಮನ ಒಂದು ದರ್ಭೆಯನ್ನು ಅಭಿಮಂತ್ರಿಸಿ ಆ ದ್ವಾರಕ್ಕೆ ಚುಚ್ಚಿದನು. ಇದರಿಂದ ಶುಕ್ರಾಚಾರ್ಯರ ಒಂದು ಕಣ್ಣು ತೂತಾಗಿ ಆ ತೂತಿನ ಮೂಲಕ ನೀರು  ಹರಿಯಿತು. ಶಿಷ್ಯನಿಗಾಗಿ ಗುರುಗಳು ಒಂದು ಕಣ್ಣು ಕಳಕೊಂಡರು. ದಾನಕೊಡುವ ಜಲಧಾರೆ ಬೀಳುತ್ತಲೇ ವಾಮನ ತ್ರಿವಿಕ್ರಮನಾಗಿ ಬೆಳೆದನು.ಒಂದು ಹೆಜ್ಜೆಯನ್ನು ಭೂಮಂಡಲಕ್ಕೂ ಇನ್ನೊಂದನ್ನು ನಭೋಮಂಡಲಕ್ಕೂ ಬೆಳೆಸಿದವನು ಮೂರನೇ ಹೆಜ್ಜೆಯನ್ನು ಎಲ್ಲಿ ಇಡಲಿ ಎಂದು ಕೇಳಿದನು. ಆಗ ಬಲಿಯು  ‘ಅಯ್ಯಾ… ವಾಮನ, ನೀನು ನನ್ನನ್ನು ಮೋಸಗೊಳಿಸಿದರೂ ನಾನು ಆಡಿದ ಮಾತಿಗೆ ತಪ್ಪುವವನಲ್ಲ. ಹರಿಭಕ್ತ ಪ್ರಹ್ಲಾದನ ಮೊಮ್ಮಗ ನಾನು! ನನ್ನ ರಾಜ್ಯ, ಕೋಶಗಳೆಲ್ಲ ಕೈತಪ್ಪಿ ಹೋದವೆಂದು ಚಿಂತಿಸುವುದಿಲ್ಲ. ಇಗೋ, ಮೂರನೇ ಹೆಜ್ಜೆಯನ್ನು ನನ್ನ ತಲೆಯ ಮೇಲಿಡು’ ಎಂದನು. ಆಗ ವಿಂದ್ಯಾವಳಿಯೂ ದುಃಖಿಸುತ್ತಾ ಶ್ರೀಹರಿಗೆ ನಮಸ್ಕರಿಸಿದಳು. ಶ್ರೀಹರಿಯು, ನಾನು ಒಡ್ಡಿದ ಹಣದಲ್ಲಿ ಈತ ಗೆದ್ದಿದ್ದಾನೆ. ಈತನಿಗೆ ಸಾಲೋಕ್ಯ ಪದವಿ ಕರುಣಿಸುತ್ತೇನೆ. ಮುಂದೆ ಸಾವರ್ಣಿ ಮನ್ವಂತರದವರೆಗೆ ಇವನು ಸುತಲದ ಒಡೆಯನಾಗಿರುವನು’ ಅಷ್ಟರಲ್ಲಿ ಬಲಿಯು ‘ದೇವಾ… ನನ್ನದೊಂದು ಬಿನ್ನಹ. ಅದೇನೆಂದರೆ ನಾನು ಆಳುತ್ತಿದ್ದ ಪ್ರಜೆಗಳನ್ನು ವರ್ಷಕ್ಕೊಮ್ಮೆ ಬಂದು ನೋಡುವುದಕ್ಕೆ ಆಸ್ಪದ ಮಾಡು’ ಎಂದು ಬೇಡಿಕೆಯಿತ್ತನು.

‘ಬಲೀಂದ್ರಾ… ನಿನ್ನ ಅಭಿಲಾಷೆ ಪೂರೈಸಿದ್ದೇನೆ. ಪ್ರತಿವರ್ಷ ಆಶ್ವೇಜ  ಬಹುಳ ಚತುರ್ದಶಿಯಿಂದ ಕಾರ್ತಿಕ ಶುದ್ಧ ಪಾಡ್ಯದ ವರೆಗೆ ಮೂದು ದಿನಗಳಲ್ಲಿ ನೀನು ಭೂಲೋಕದಲ್ಲಿ  ಸಂಚರಿಸುತ್ತಿರು. ನಿನ್ನನ್ನು ಪೂಜಿಸುವ ಪಾಡ್ಯಕ್ಕೆ ‘ಬಲಿಪಾಡ್ಯಮಿ; ಎಂದು ಹೆಸರಾಗಲಿ ಎಂದು ಹೇಳಿ ಶ್ರೀಹರಿ ಮಾಯವಾದನು.ಅಂದಿನಿಂದ ಭೂಲೋಕದ ಜನರು ವರ್ಷಕೊಮ್ಮೆ ಬಲಿಚಕ್ರವರ್ತಿಯನ್ನು ನೆನೆದು ಪೂಜಿಸುತ್ತಾರೆ. ಅಲ್ಲದೆ   ತಮ್ಮ ಜೀವನವನ್ನು ಶ್ರೇಷ್ಠ ಕಾರ್ಯಕ್ಕೆ ಅರ್ಪಣೆ ಮಾಡುವುದಕ್ಕೆ ‘ಬಲಿದಾನ’ ಎಂದು ಕರೆಯುತ್ತಾರೆ.

ವಿಜಯಾ ಸುಬ್ರಹ್ಮಣ್ಯ, ಕುಂಬಳೆ

7 Responses

  1. ಅಡ್ಮಿನ್ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ ಧನ್ಯವಾದಗಳು.

  2. ನಯನ ಬಜಕೂಡ್ಲು says:

    ಚೆನ್ನಾಗಿದೆ

  3. ನಾಗರತ್ನ ಬಿ. ಅರ್. says:

    ಎಂದಿನಂತೆ ಪುರಾಣ ಕಥೆ ಅದನ್ನು ಓದಿದ್ದರೂ ತಿಳಿದಿದ್ದರೂ ಮತ್ತೊಮ್ಮೆ ಓದುವಂತೆ ಮಾಡುತ್ತದೆ ಕಥೆ ಹೇಳುವ ನಿಮ್ಮ ನಿರೂಪಣಾ ಶೈಲಿ.. ಧನ್ಯವಾದಗಳು ಮೇಡಂ.

  4. ನಯನಾ ಹಾಗೂ ನಾಗರತ್ನ ಇಬ್ಬರು ಸೋದರಿಯರಿಗೂ ಧನ್ಯವಾದಗಳು.

  5. padmini says:

    ನಿರೂಪಣಾ ಶೈಲಿ ಚೆನ್ನಾಗಿದೆ

  6. ಶಂಕರಿ ಶರ್ಮ says:

    ದಾನಕ್ಕೆ ಇನ್ನೊಂದು ಹೆಸರೇ ಬಲಿ. ಸೊಗಸಾದ ನಿರೂಪಣೆಯೊಂದಿಗೆ ಈ ಪೌರಾಣಿಕ ಕಥೆಯನ್ನು ಮತ್ತೊಮ್ಮೆ ನೆನಪಿಸಿದ ವಿಜಯಕ್ಕನವರಿಗೆ ಧನ್ಯವಾದಗಳು.

  7. Padma Anand says:

    ಯಾವತ್ತೂ ಮನಕಲಕುವ, ಮನ ಮುಟ್ಟುವ, ಮನತಟ್ಟುವ ಬಲಿ ಚಕ್ರವರ್ತಿಯ ಕಥಾನಾಕ ಎಷ್ಟು ಸಲ ಕೇಳಿದರೂ, ಓದಿದರೂ ಮನ ಆರ್ದವಾಗುತ್ತದೆ. ಸುಂದರವಾದ ನಿರೂಪಣಾ ಶೈಲಿಯಿಂದಾಗಿ ಇಷ್ಠವಾಯಿತು.

Leave a Reply to padmini Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: