ದಶಕಂಠನ ವೈರಿಯ ಪಿತ, ದಶರಥ

Share Button

ದುಷ್ಟರ ಶಿಕ್ಷೆಗಾಗಿ ಶಿಷ್ಟರ ರಕ್ಷೆಗಾಗಿ, ಧರ್ಮ ಸಂಸ್ಥಾಪನೆಗಾಗಿ, ಲೋಕ ಕಲ್ಯಾಣಕ್ಕಾಗಿ, ಮಹಾವಿಷ್ಣು ದಶಾವತಾರವೆತ್ತಿದ ವಿಚಾರ ನಮಗೆ ಪುರಾಣಗಳಿಂದ ಲಭ್ಯ.ದಶಾವತಾರಗಳೆಂದರೆ- ಮತ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ದ, ಕಲ್ಕಿ- ಹೀಗೆ ಹತ್ತು ಅವತಾರಗಳು. ದಶಾವತಾರಗಳಲ್ಲಿ ರಾಮಾವತಾರವು ಶ್ರೇಷ್ಠವಾದುದು. ಸಂಸ್ಕೃತ ಸಾಹಿತ್ಯಕ್ಕೆ ವಾಲ್ಮೀಕಿ ರಾಮಾಯಣವು ಭೂಷಣವಾದುದು. ಇದನ್ನೂ ಆದಿಕಾವ್ಯ ಎನ್ನುವರು. ರಾಮಾವತಾರವೆಂದರೆ ವಿಷ್ಣುವಿನ ಏಳನೇ ಅವತಾರ, ರಾಮಾಯಣವೆಂದರೆ ಮುಗಿಯದ ಕತೆ ಎಂಬ ಅರ್ಥವೂ ಇದೆ. ಅದು ನಿತ್ಯನೂತನವಾದುದು. ಮನೆಗಳಲ್ಲಿ, ಸಮಾಜದಲ್ಲಿ, ರಾಮ, ರಾವಣರಿದ್ದಾರೆ.ಸೀತೆ, ಮಂಥರೆಯರನ್ನು ಕಾಣಬಹುದಾಗಿದೆ. ‘ಕೃಷ್ಣನ ಉಪದೇಶ ಕೇಳಬೇಕು. ರಾಮನ ನೀತಿಯನ್ನು ಆಚರಿಸಬೇಕು‘ ಎಂಬ ಮಾತಿದೆ. ರಾಮಾಯಣವನ್ನು ಲೋಕಕ್ಕೆ ನೀಡಿದ ಪುರುಷರತ್ನ ವಾಲ್ಮೀಕಿಯನ್ನು ಇದೇ ಅಂಕಣದಲ್ಲಿ ಓದಿದ್ದೇವೆ. ಹಾಗೆಯೇ ರಾಮನೆಂಬ ಬತಾ ಪುರುಷ ಧರೆಗಿಳಿಯಲು ಕಾರಣರಾದ ಮಹಾನುಭಾವರ ಬಗ್ಗೆ ನಾವು ತಿಳಿಯಬೇಕಲ್ಲವೇ ಹೌದು, ಸಂಶಯವೇ ಇಲ್ಲ.

ಮಾನವ ಸ್ವರೂಪಿಯಾಗಿ ಮರ್ಯಾದಾ ಪುರುಷೋತ್ತಮನಾಗಿ, ಶ್ರೀರಾಮಚಂದ್ರನಾಗಿ ಭೂಮಿಗಿಳಿಯಲು ಕಾರಣನೆನಿಸಿದವನು ದಶರಥ, ಅರ್ಥಾತ್ ರಾಮನ ಪಿತ. ಹೆಸರೇ ಸೂಚಿಸುವಂತೆ ದಶರಥನೆಂದರೆ ದಶ ದಿಕ್ಕುಗಳಿಗೂ ರಥ ಓಡಿಸುವವನು, ಯುದ್ಧ ನೈಪುಣ್ಯನು. ಈತನ ಮೂಲ ಹೆಸರು ನೇಮಿರಾಜ. ಈತನ ತಂದೆ ‘ಅಜ’ರಾಜ. ತಾಯಿ ವಿದರ್ಭ ದೇಶದ ರಾಜಪುತ್ರಿಯಾದ ಇಂದುಮತಿ. ದಶರಥನಿಗೆ ಹಲವಾರು ವರ್ಷಗಳು ಕಳೆದರೂ ಮಕ್ಕಳಾಗದೇ ಇದ್ದುದರಿಂದ ಕುಲಪುರೋಹಿತರಾದ ವಸಿಷ್ಠರು ಪುತ್ರಕಾಮೇಷ್ಠಿ ಯಾಗವನ್ನು ಮಾಡಿಸಿದರು.

ದಶರಥನ ಪತ್ನಿಯರಲ್ಲಿ ಕೌಸಲ್ಯ ಹಿರಿಯವಳು, ಕೋಸಲ ದೇಶದ ಭಾನುಮಂತ ರಾಜನ ಮಗಳು. ಎರಡನೆಯವಳು ಸುಮಿತ್ರೆ, ಮಗಧ ದೇಶದ ಶೂರಸೇನ ರಾಜನ ಮಗಳು. ಕಿರಿಯವಳು ಹಾಗೂ ಮೂರನೆಯವಳು ಕೈಕೆ, ಕೇಕೆಯ ದೇಶದ ಅಶ್ವಪತಿ ರಾಜನ ಮಗಳು. ಕೌಸಲ್ಯಗೆ ಶ್ರೀರಾಮನೂ ಸುಮಿತ್ರೆಗೆ ಲಕ್ಷಣ – ಶತ್ರುಘ್ನರೂ ಕೈಕೆಗೆ ಭರತನೂ ಜನಿಸಿದರು. ದಶರಥನಿಗೆ ಹಿರಿಯ ಪುತ್ರನಾದ ಶ್ರೀರಾಮನಲ್ಲಿ ಅಪಾರ ಪ್ರೀತಿ.

ಒಮ್ಮೆ ಶಂಬನೆಂಬ (ತಿಮಿಧ್ವಜ) ರಾಕ್ಷಸನು ಇಂದ್ರನನ್ನು ತುಂಬಾ ಪೀಡಿಸಲು ಇಂದ್ರನು ದಶರಥನ ಸಹಾಯವನ್ನು ಕೋರಿದನು. ದಶರಥನ ಸಹಾಯದಿಂದ ಇಂದ್ರನು ಶಂಬನನ್ನು ಕೊಂದನು. ಈ ಯುದ್ಧಕ್ಕೆ ದಶರಥನು ತನ್ನ ಕಿರಿ ರಾಣಿಯಾದ ಕೈಕೆಯನ್ನು ಕರೆದುಕೊಂಡು ಹೋಗಿದ್ದನು. ಅಲ್ಲಿ ಶಂಬನ ಬಾಣದ ಹೊಡೆತದಿಂದ ಎಚ್ಚರ ತಪ್ಪಿದ ದಶರಥ, ಆತನನ್ನೂ ರಥವನ್ನು ಕೈಕೆಯು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಳು. ಇವಳ ಸಾಹಸವನ್ನು ಮೆಚ್ಚಿದ ದಶರಥನು ಎರಡು ವರಗಳನ್ನು ಕೇಳು ಕೊಡುವೆನೆಂದನು. ನೀವು ಕೊಡುವ ವರವನ್ನು ಅಗತ್ಯಬಿದ್ದಾಗ ಕೇಳಿಕೊಳ್ಳುವೆನೆಂದ ಕೈಕೆಯು ಮುಂದೆ ಶ್ರೀರಾಮನ ಪಟ್ಟಾಭಿಷೇಕದ ಕಾಲದಲ್ಲಿ ಶ್ರೀರಾಮನ ವನವಾಸಕ್ಕೆ ಕಾರಣಳಾದಳು. ಕೈಕೆಯ ದಾಸಿಯಾದ ಮಂಥರೆಯು ದುರ್ಬೋಧನೆ ನೀಡಿದುದರಿಂದ ಭರತನಿಗೆ ಪಟ್ಟಾಭಿಷೇಕವೂ ಶ್ರೀರಾಮನಿಗೆ ವನವಾಸವೂ ಆಗಬೇಕೆಂದು ಹಠ ಹಿಡಿದಳು. ಮುಂದೆ ಪಿತೃವಾಕ್ಯ ಪರಿಪಾಲನೆಗಾಗಿ ಶ್ರೀರಾಮನು ಕಾಡಿಗೆ ತೆರಳಿದನು. ಶ್ರೀರಾಮನ ವಿಯೋಗ ದುಃಖ ತಾಳಲಾರದೆ ದಶರಥನು ಸ್ವರ್ಗಸ್ಥನಾದನು.

ದಶರಥನಿಗೆ ದೃಷ್ಟಿ, ಜಯಂತ, ವಿಜಯ, ಸುರಾಷ್ಟ್ರ, ರಾಷ್ಟ್ರವರ್ಧನ, ಅಶೋಕ (ಆಕೋಪ), ಮಂತ್ರಪಾಲ ಮತ್ತು ಸುಮಂತ್ರರೆಂಬ ಎಂಟು ಮಂದಿ ಪ್ರಧಾನರಿದ್ದರು. ಅವರಲ್ಲಿ ಸುಮಂತ್ರನು ಶ್ರೇಷ್ಠನು. ದಶರಥನಿಗೆ ‘ಶಬ್ದವೇದಿ’ ಎಂಬ ಯುದ್ದದ ಕಲೆ ತಿಳಿದಿತ್ತು. ಹಿಂದೊಮ್ಮೆ ಬೇಟೆಯಾಡುವುದಕ್ಕೆಂದು ಕಾಡಿಗೆ ತೆರಳಿದ್ದಾಗ ಆಯಾಸ ಪರಿಹಾರ ಮಾಡಿಕೊಳ್ಳಲು ಒಂದೆಡೆ  ವಿಶ್ರಮಿಸಿದ್ದನು. ಆನೆಗಳನ್ನೆಲ್ಲ ಕೊಂದು ಬಿಟ್ಟೆನೆಂದು ಭಾವಿಸಿದ್ದ ರಾಜನಿಗೆ ಅಲ್ಲೇ ದೂರದಲ್ಲಿದ್ದ ಕೊಳದಿಂದ ಗುಳು ಗುಳು ಎಂಬ ಶಬ್ದ ಕೇಳಿಸಿತು. ಆನೆ ನೀರು ಕುಡಿಯುತ್ತಿದೆಯೆಂದು ಭ್ರಮಿಸಿದ ರಾಜನು ಶಬ್ದ ಬಂದ ಕಡೆಗೆ ಗುರಿಯಿಟ್ಟು ಬಾಣ ಹೊಡೆದನು. ಆ ನೀರಿನ ಸದ್ದು ಆನೆ ನೀರು ಕುಡಿಯುವ ಶಬ್ದವಾಗಿರದೇ,  ತಾಂಡವ ಮುನಿಪುತ್ರನಾದ ಶ್ರವಣಕುಮಾರನು ಬಿಂದಿಗೆಯಲ್ಲಿ ನೀರು ತುಂಬಿಸುವ ಸದ್ದಾಗಿತ್ತು. ವೃದ್ದರೂ ಕುರುಡರೂ ಆದ ತನ್ನ ತಂದೆ ತಾಯಿಯರನ್ನು ಕಾವಡಿಯಲ್ಲಿ ಕೂರಿಸಿ ಅದನ್ನು ಹೊತ್ತುಕೊಂಡು ಹೋಗುತ್ತಿದ್ದ ಶ್ರವಣನು ಬಾಯಾರಿದ ಜನನೀ ಜನಕರನ್ನು ಒಂದೆಡೆ ಕುಳ್ಳಿರಿಸಿ ಅವರ ತೃಷೆ ತೀರಿಸಲೋಸುಗ ಕೊಳದಲ್ಲಿ ನೀರು ಮೊಗೆಯುತ್ತಿದ್ದನು. ದಶರಥನ ಬಾಣವು ಶ್ರವಣಕುಮಾರನ ಎದೆಗೆ ನಾಟಿತು. ನೋವಿನಿಂದ ಚೀರಿದ ಮುನಿಪುತ್ರನಿದ್ದೆಡೆಗೆ ಬಂದ ದಶರಥನಿಗೆ ತನ್ನಿಂದಾದ ಪ್ರಮಾದದ ಅರಿವಾಯ್ತು. ‘ನಾನು ನನ್ನ ತಂದೆ-ತಾಯಿಗಳ ಸೇವೆಯನ್ನೇ ದೇವರ ಸೇವೆಯೆಂದು ತಿಳಿದು ಮಾಡುತ್ತಿರುವವನು. ನೀನು ಯಾಕೆ ನನ್ನನ್ನು ಕೊಲ್ಲುವುದಕ್ಕೆ ಹೊರಟೆ? ನನ್ನ ತಂದೆ-ತಾಯಿಗಳ ಆಸೆಯನ್ನು ನಾಶಪಡಿಸಿದೆ……..’ ಎಂದು ಚೀರುತ್ತ ಪ್ರಾಣ ತ್ಯಜಿಸಿದನು.

ದಶರಥನು ವೃದ್ಧರ ಬಳಿಗೆ ಬಂದು ನಡೆದ ಅಚಾತುರ್ಯವನ್ನು ತಿಳಿಸಿ ನಾನು ನಿಮ್ಮನ್ನು ತೀರ್ಥಕ್ಷೇತ್ರಗಳಿಗೆ ಕರೆದೊಯ್ಯುವೆನೆಂದು ತಿಳಿಸಿದಾಗ ವೃದ್ಧ ಕುರುಡರಿಗೆ ಅತೀವ ದುಃಖವುಂಟಾಗಿ ‘ನಮ್ಮ ಕೊನೆಗಾಲದಲ್ಲಿ ನಮ್ಮ ಪುತ್ರನನ್ನು ಇಲ್ಲದಂತೆ ಮಾಡಿದೆ. ನಿನ್ನ ಸಾವಿನ ಸಮಯದಲ್ಲೂ ನಿನ್ನ ಬಳಿಯಲ್ಲಿ ನಿನ್ನ ಮಕ್ಕಳು ಇಲ್ಲದಿರಲಿ. ಪುತ್ರಶೋಕದಿಂದ ನೀನು ಪ್ರಾಣ ತ್ಯಜಿಸು’ ಎಂದು ಶಾಪವಿತ್ತು ತಮ್ಮ ಪ್ರಾಣವನ್ನು ತೊರೆದರು. ಈ ತಾಂಡವ ಮುನಿ ಶಾಪವೇ ಮುಂದೆ ದಶರಥನ ಪುತ್ರವಿಯೋಗಕ್ಕೆ ಕಾರಣವಾಯಿತೆಂದೂ ರಾಮಾಯಣದಲ್ಲಿ ಉಲ್ಲೇಖವಿದೆ. ಅಂತೂ ತನ್ನ ಅಚಾತುರ್ಯಕ್ಕೆ ತೀವ್ರ ಪಶ್ಚಾತ್ತಾಪಪಟ್ಟ ದಶರಥ.

ದಶರಥ-ಕೌಸಲೈಯರು ಹಿಂದೆ ಕಶ್ಯಪ-ಅದಿತಿಯರಾಗಿದ್ದರೆಂದು ತಿಳಿದು ಬರುತ್ತದೆ. ಹಾಗೆಯೇ ದ್ವಾಪರ ಯುಗದಲ್ಲಿ ವಸುದೇವ ದೇವಕಿಯರಾದರೆಂದೂ ತಿಳಿದು ಬರುತ್ತದೆ.

ದುಷ್ಟ ದಶಕಂಠನನ್ನು ಕೊಂದ ಶ್ರೀರಾಮನ ಪಿತನಾದ ದಶರಥ ನಮಗೆ ಆದರ್ಶದ ಪ್ರತೀಕ. ರಾವಣ ವಧೆಯ ನಂತರ ಸೀತಾದೇವಿಯನ್ನು ವಾಪಾಸು ಸ್ವೀಕಾರ ಮಾಡಲು ಒಪ್ಪದಿದ್ದಾಗ ಆಕೆ ತನ್ನ ಪಾವಿತ್ರತೆಯನ್ನು ತೋರಿಸಲು ಅಗ್ನಿ ಪ್ರವೇಶ ಮಾಡುವಾಗ ದಶರಥನು ಬಂದು ಸೀತೆಯು ಪರಿಶುದ್ದಳೆಂದು ಹೊಗಳಿದ್ದನು.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

5 Responses

  1. ಧನ್ಯವಾದಗಳು ಅಡ್ಮಿನ್ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ.

  2. ನಾಗರತ್ನ ಬಿ. ಅರ್. says:

    ಎಂದಿನಂತೆ ಇಂದೂ ನಿಮ್ಮ ಪುರಾಣ ಪ್ರಸಿದ್ಧ ಕಥೆಗಳು ಮುಂದೆ ತಂದಿತು.ಧನ್ಯವಾದಗಳು ಮೇಡಂ.

  3. ನಯನ ಬಜಕೂಡ್ಲು says:

    ಪುರಾಣದ ಕಥೆಗಳಲ್ಲೂ ಒಂದು ಸೊಬಗು ಅಡಗಿದೆ, ಒಂದು ಕುತೂಹಲ ಇದೆ, ಇವುಗಳನ್ನು ಓದುವುದೂ ಹಬ್ಬವೇ ಮನಸಿಗೆ.

  4. . ಶಂಕರಿ ಶರ್ಮ says:

    ಶ್ರೀರಾಮ ಪಿತ ದಶರಥ ಮಹಾರಾಜನ ಬಗ್ಗೆ ಬಹಳಷ್ಟು ತಿಳಿದುಕೊಂಡಂತಾಯ್ತು…ಧನ್ಯವಾದಗಳು ವಿಜಯಕ್ಕ.

  5. Padma Anand says:

    ಪೌರಾಣಿಕ ಪ್ರಸಂಗಗಳನ್ನು ಧನ್ಯತೆಯಿಂದ ಓದಿಸಿಕೊಳ್ಳುವ ನಿಮ್ಮ ನಿರೂಪಣೆಯ ದಶರಥನ ಕಥಾನಕ ಸೊಗಸಾಗಿದೆ

Leave a Reply to ನಾಗರತ್ನ ಬಿ. ಅರ್. Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: