ಅಂತರ್ಜಲಕ್ಕಾಗಿ ಭೂಮಿಯ ಒಳಕ್ಕೆ ಚಾಚಿದ ಹಸ್ತ.

Share Button

ಬಾವಿ ಎಂದಕೂಡಲೇ ಕಣ್ಣಮುಂದೆ ತರಹೇವಾರಿ ಬಾವಿಗಳ ಚಿತ್ರ ಮೂಡುತ್ತದೆ. ಸೇದುವ ಬಾವಿ, ಏತದ ಬಾವಿ, ಕಪಿಲೆ ಬಾವಿ, ಪಂಪ್‌ಸೆಟ್ ಬಾವಿ. ಕೊಳವೆ ಬಾವಿ ಇತ್ಯಾದಿ. ಇವುಗಳಿಂದ ಕುಡಿಯಲು ಮನೆಬಳಕೆಗೆ ನೀರು, ವ್ಯವಸಾಯಕ್ಕೆ ನೀರು ದೊರೆಯುತ್ತದೆ.

ಇಷ್ಟೆಲ್ಲ ಉಪಯೋಗಗಳು ಇರುವ ಬಾವಿಯ ಪರಿಕಲ್ಪನೆ ಮನುಷ್ಯನಿಗೆ ಆದಿಯಲ್ಲಿ ಹೇಗೆ ಬಂದಿರಬಹುದು? ಆತನು ತೊರೆ, ಹಳ್ಳ, ನದಿಗಳಿಂದ ನೀರನ್ನು ಬಳಸುತ್ತಿದ್ದ. ಇವುಗಳೆಲ್ಲ ಪ್ರಕೃತಿದತ್ತವಾದವು. ಇವುಗಳಿಗೆಲ್ಲ ಆಧಾರವೆಂದರೆ ಆಗಸದಿಂದ ಬೀಳುವ ಮಳೆ. ಮಳೆ ನೀರು ಎಲ್ಲಿಯಾದರೂ ತಗ್ಗಾದ, ಅಥವಾ ಗುಂಡಿಬಿದ್ದ ಸ್ಥಳಗಳಲ್ಲಿ ನಿಂತು ಸಣ್ಣದಾದ ಕೊಳಗಳಾಗುತ್ತವೆ. ಇಲ್ಲಿನ ನೀರು ಮಳೆಗಾಲ ಮುಗಿದ ನಂತರ ಆವಿಯಾಗಿಯೋ, ಬಳಕೆಯಾಗಿಯೋ, ಋತುಮಾನ ಬದಲಾವಣೆಯಾದಂತೆ ಖಾಲಿಯಾಗುತ್ತದೆ. ಆದ್ದರಿಂದ ಇದರಲ್ಲಿ ನಿರಂತರವಾಗಿ ನೀರನ್ನು ಸಂಗ್ರಹ ಮಾಡಿ ಇಟ್ಟುಕೊಳ್ಳಲಾಗದು. ನಂತರ ಮಳೆನೀರು ನೆಲದೊಳಕ್ಕೆ ಇಂಗಿಹೋಗಿ ಆಳದಲ್ಲಿ ಭೂಪದರಗಳ ನಡುವೆ ಬಹು ಕಾಲದವರೆಗೆ ಇರುತ್ತದೆ ಎಂಬ ತಿಳುವಳಿಕೆ ಬಂದನಂತರ ಆಳವಾಗಿ ಬಾವಿಗಳನ್ನು ತೋಡಲು ಮತ್ತು ಅಂತರ್ಜಲದ ಬಳಕೆಯನ್ನು ಮಾಡಲು ಉಪಕ್ರಮಿಸಿರಬಹುದು. ಇದೇ ಅಂತರ್ಜಲದ ಉಪಯೋಗಕ್ಕೆ ಚಾಚಿದ ಕೈ -ಬಾವಿ. ಹೀಗೆ ಸತತ ಪ್ರಯತ್ನದಿಂದ ಮನುಷ್ಯ ಬಾವಿತೋಡುವ ಕಲೆಯನ್ನು ಮೈಗೂಡಿಸಿಕೊಂಡನು.

ಇನ್ನು ಬಾವಿಯು ಹೇಗಿರಬೇಕು? ಮೊದಲು ಅಗಲವಾದ ಬಾಯಿಯ ಆಳವಾದ ಗುಂಡಿಯನ್ನು ತೆಗೆದು ಬಾವಿಗಳನ್ನು ನಿರ್ಮಿಸಲಾಯಿತು. ಇವುಗಳ ಆಳ ಬಹಳವಾಗಿರಲಿಲ್ಲ. ಆದರೆ ಇವುಗಳಿಂದ ನೀರನ್ನು ಬೇಸಾಯಕ್ಕೆ ಮತ್ತು ಇತರ ಉಪಯೋಗಕ್ಕೆ ಬಳಸಬಹುದಾಗಿತ್ತು. ನೀರನ್ನು ಮೇಲಕ್ಕೆಳೆದುಕೊಳ್ಳಲು ಮೊದಲು ಚರ್ಮದಚೀಲವನ್ನು ಬಳಸುತ್ತಿದ್ದರು. ಆದರೆ ಕ್ರಮೇಣ ಕೊಡಗಳನ್ನು ಮಣ್ಣು ಮತ್ತು ಲೋಹಗಳಿಂದ ತಯಾರಿಸಿ ಅದರಿಂದ ನೀರೆತ್ತುತ್ತಿದ್ದರು. ವ್ಯವಸಾಯಕ್ಕೆ ಬಳಸಲು ಹೆಚ್ಚಿನ ಪ್ರಮಾಣದ ನೀರೆತ್ತಲು ಅತ್ಯಂತ ಸರಳವಾದ ಸಾಧನ ಏತವನ್ನು ಬಳಸಿದರು, ಇದನ್ನು ಸುಧಾರಿಸುತ್ತಾ ಕಪಿಲೆಯನ್ನು ಬಳಸಿದರು. ಮೊದಲು ಚರ್ಮದ ಕಪಿಲೆಯನ್ನೇ ಹಗ್ಗದ ಸಹಾಯದಿಂದ ಬಾವಿಯ ಇಕ್ಕೆಲಗಳಲ್ಲಿ ಸ್ಥಾಪಿಸಿದ ಕಂಬಗಳಿಗೆ ಅಡ್ಡಲಾಗಿ ಹಾಕಿದ ಮರದ, ಅಥವಾ ಕಲ್ಲಿನ ತೊಲೆಗೆ ಸಿಕ್ಕಿಸಿದ ರಾಟೆ/ಗಡಗಡೆಯ ಹಗ್ಗದಿಂದ ಮೇಕ್ಕೆ ಎಳೆದುಕೊಳ್ಳಲು ಸಾಧ್ಯವಾಗುವಂತೆ ಮಾಡುತ್ತಿದ್ದರು. ನೀರನ್ನು ಮೊಗೆದು ತುಂಬಿಕೊಂಡ ಚೀಲವನ್ನು ಜೋಡೆತ್ತುಗಳ ಸಹಾಯದಿಂದ ಮೇಲಕ್ಕೆಳೆದುಕೊಳ್ಳುತ್ತಿದ್ದರು. ಮೇಲೆ ಬಂದ ಮೇಲೆ ಚೀಲದಿಂದ ನೀರು ತೋಡುದೋಣ ಗಳಿಗೆ ಸುರಿಯುತ್ತಿತ್ತು. ಅಲ್ಲಿಂದ ನೀರು ಜಮೀನಿಗೆಲ್ಲ ಹಂಚಿಹೋಗುತ್ತಿತ್ತು. ಇನ್ನೂ ಮುಂದುವರಿದು ಚರ್ಮದ ಚೀಲದ ಬದಲಾಗಿ ಸರಳವಾದ ಬಕೀಟಿನಂತಹ ತೊಟ್ಟಿಲುಗಳನ್ನು ಚಕ್ರಾಕಾರದಲ್ಲಿ ಸರಪಳಿಯಂತೆ ಹೊಂದಿಸಿ ಕಪಿಲೆ ಯಂತ್ರವನ್ನು ರೂಪಿ‌ಒಸಿದರು. ಇದರಲ್ಲಿ ಎತ್ತುಗಳು ಎಳೆದಂತೆಲ್ಲ ಬಕೀಟುಗಳು ನೀರನ್ನು ಒಂದಾದಮೇಲೊಂದರಂತೆ ಮೇಲಕ್ಕೆ ತಂದು ಸುರಿಯುವ ವ್ಯವಸ್ಥೆ ಇತ್ತು. ಇದನ್ನು ಬಕೆಟ್ ಕಪಿಲೆ ಎನ್ನುತ್ತಿದ್ದರು. ಇವೆಲ್ಲ ಸಾಧನಗಳಲ್ಲಿ ಮನುಷ್ಯ ಮತ್ತು ಪಶುಗಳ ಶಕ್ತಿ ಉಪಯೋಗವಾಗುತ್ತಿತ್ತು. ಇವುಗಳು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಉಪಯೋಗಿಸುವ ಸಾಧನಗಳಾಗಿದ್ದವು. ಈಗ ಅವುಗಳು ಕಾಣದಾಗಿವೆ. ಇನ್ನು ಸೇದುವ ಬಾವಿಗಳು ಮನೆಬಳಕೆಗಾಗಿ ಸಾಧಾರಣವಾಗಿ ಎಲ್ಲ ಕಡೆಗಳಲ್ಲಿಯೂ ಇರುತ್ತಿದ್ದವು. ಹಳ್ಳಿಗಳಲ್ಲಿ ಮನೆಮನೆಗಳಲ್ಲಿ ಕಂಡುಬರುತ್ತಿದ್ದವು. ಇವುಗಳ ವಿಶೇಷವೆಂದರೆ ಇವು ಸಣ್ಣ ವ್ಯಾಸದ ವೃತ್ತಾಕಾರ ಅಥವಾ ಚೌಕಾಕಾರವಾಗಿ ತೋಡಿದ ಬಾವಿಗಳು. ಸಾಕಷ್ಟು ಆಳವಾಗಿರುತ್ತಿದ್ದವು. ನೆಲದ ಮಟ್ಟದಲ್ಲಿ ಬಾವಿಯ ಸುತ್ತಲೂ ಬಧ್ರವಾದ ಗೋಡೆಕಟ್ಟಿ ಮಧ್ಯದಲ್ಲಿ ಮೇಲ್ಚಾವಣ ಯಂತೆ ಹಾಗಿರುವ ಒಂದು ತೊಲೆಯಿಂದ ನೇತುಹಾಕಿದ ಮರದ/ಲೋಹದ ರಾಟೆಯಿರುತ್ತದೆ. ಹಗ್ಗದ ಒಂದು ತುದಿಗೆ ನೀರುತುಂಬುವ ಬಿಂದಿಗೆಯ ಕುತ್ತಿಗೆಯನ್ನು ಕಟ್ಟಿ ಬಾವಿಯೊಳಕ್ಕೆ ಬಿಟ್ಟರೆ ಇನ್ನೊಂದು ತುದಿಯು ರಾಟೆಯ ಮೂಲಕ ಹಾದು ಸೇದಿಕೊಳ್ಳುವವರ ಕೈಯಲ್ಲಿರುತ್ತಿತ್ತು. ನೀರಿನಲ್ಲಿ ಬಿಂದಿಗೆ ತುಂಬಿ ಮುಳುಗಿದನಂತರ ಹಗ್ಗವನ್ನು ಜಗ್ಗಿ ಮೇಲಕ್ಕೆಳೆದುಕೊಳ್ಳುತ್ತಾರೆ. ಹೀಗೆ ನೀರನ್ನು ಮನೆಬಳಕೆ, ಕುಡಿಯಲು ಬಳಸುತ್ತಾರೆ.

ಗ್ರಾಮಗಳಲ್ಲಿ ಅನೇಕ ಬಾವಿಗಳಿದ್ದರೂ ಕುಡಿಯಲು ಬಳಸುವ ಸಿಹಿನೀರಿನ ಬಾವಿಗಳ ಸಂಖ್ಯೆ ಬಹಳ ವಿರಳವಾಗಿರುತ್ತಿದ್ದವು. ವೈಜ್ಞಾನಿಕವಾಗಿ ಈ ನೀರನ್ನು ಮೆದುನೀರೆನ್ನುತ್ತಾರೆ, ಉಪ್ಪುನೀರನ್ನು ಗಡಸುನೀರೆಂದು ಕರೆಯುತ್ತಾರೆ. ನಮ್ಮ ಅಜ್ಜನ ಹಳ್ಳಿಯಲ್ಲಿ ನಾವು ಬೇಸಗೆಯಲ್ಲಿ ಕಾಲಕಳೆಯಲು ಹೋದಾಗ ಈ ಸೋಜಿಗವನ್ನು ಕಂಡಿದ್ದೇನೆ. ಆ ಊರಿನಲ್ಲಿ ಒಂದೇ ಸಿಹಿನೀರಿನ ಬಾವಿ ಇತ್ತು. ಅದು ಊರಿನ ಒಂದು ಕೊನೆಯಲ್ಲಿತ್ತು. ಹಾಗಾಗಿ ಊರಿನ ಹೆಣ್ಣುಮಕ್ಕಳೆಲ್ಲಾ ದಿನಕ್ಕೆ ಒಂದುಬಾರಿ, ಜನಗಳು ಹೆಚ್ಚಿರುವ ಮನೆಗಳವರು ಒಂದಕ್ಕಿಂತ ಹೆಚ್ಚುಬಾರಿ ನೀರನ್ನು ಹೊತ್ತು ಒಯ್ಯಬೇಕಾಗುತ್ತಿತ್ತು. ಹೀಗಾಗಿ ಅವರು ಮನೆಗೂ ಸಿಹಿನೀರಿನ ಬಾವಿಗೂ ಹೋಗಿಬರುವುದು ವಾಡಿಕೆಯಾಗಿತ್ತು. ಊರಿನ ಇನ್ನೊಂದು ಮೂಲೆಯಲ್ಲಿದ್ದ ಮನೆಗಳು ಒಂದೆರಡು ಫರ್ಲಾಂಗ್ ದೂರವಿದ್ದು ಆ ಬೀದಿಯಿಂದ ಬರುತ್ತಿದ್ದ ಹೆಣ್ಣು ಮಕ್ಕಳು ಗುಂಪುಗುಂಪಾಗಿ ಕೊಡಗಳನ್ನೊತ್ತು ಬರುತ್ತಿದ್ದರು. ಇದೊಂದು ನೀರಿನ ಮೆರವಣ ಗೆಯಂತೆ ಚಿಕ್ಕವರಾಗಿದ್ದ ನಮಗೆ ಅನ್ನಿಸುತ್ತಿತ್ತು. ನಾನೂ ಕೆಲವು ಸಾರಿ ಅಜ್ಜಿಯೊಂದಿಗೆ ಪುಟ್ಟದೊಂದು ಕೊಡ ಹೊತ್ತು ನೀರನ್ನು ತಂದ ಅನುಭವ ಇನ್ನೂ ನೆನಪಿನಲ್ಲಿದೆ. ಆದರೆ ನಮ್ಮ ಮನೆಯು ಬಾವಿಗೆ ಹೆಚ್ಚು ದೂರವಿರಲಿಲ್ಲ.
ಬಾವಿಯನ್ನು ತೋಡಿದ ಮೇಲೆ ಅದರ ತಳದವರೆಗೆ ಒಳಭಾಗದ ದಡಗಳನ್ನು ಭದ್ರವಾಗಿರುವಂತೆ ಕಲ್ಲುಕಟ್ಟಡ ಕಟ್ಟುತ್ತಿದ್ದರು. ಇಲ್ಲದಿದ್ದರೆ ದಡವು ಕ್ರಮೇಣ ತೇವದಿಂದ ಮೆದುವಾಗಿ ಕುಸಿಯುತ್ತಿತ್ತು. ಬಹಳ ವರ್ಷಗಳ ನಂತರ ಕಬ್ಬಿಣ ಮತ್ತು ಕಾಂಕ್ರೀಟು ಬಳಸಿ ಚಕ್ರಾಕಾರದ ಬಳೆಗಳನ್ನು ತಯಾರಿಸಿ ಅವುಗಳನ್ನು ಒಂದರ ಮೇಲೆ ಒಂದರಂತೆ ಬಾವಿಯ ಆಳದವರೆಗೂ ಇಳಿಸುತ್ತಾ ಇದರಿಂದಲೂ ದಡಗಳನ್ನು ಭದ್ರಪಡಿಸುತ್ತಿದ್ದರು.

ಈ ಹಿನ್ನೆಲೆಯಲ್ಲಿ ನಮ್ಮ ಮನೆಯಲ್ಲಾದ ಒಂದು ಸ್ವಾರಸ್ಯಕರ ಪ್ರಸಂಗವನ್ನು ಹೇಳಲೇಬೇಕು. ನಮ್ಮ ತಾತನವರು ಶಾಲೆಯಲ್ಲಿ ಉಪಾಧ್ಯಾಯರಾಗಿದ್ದರು. ಅವರು ಆ ಊರಿಗೆ ವರ್ಗವಾಗಿ ಬಂದಾಗ ವಾಸಿಸಲು ಬಾಡಿಗೆಗೆ ಯಾವುದೂ ಮನೆ ಸಿಗಲಿಲ್ಲವಂತೆ. ಒಂದು ಮನೆಯಲ್ಲಿನ ಮಾಲೀಕರು ಕಾರಣಾಂತರ ಹೊಲದಬಳಿಯೇ ಮನೆ ಕಟ್ಟಿ ಅಲ್ಲಿಯೇ ವಾಸವಾಗಿದ್ದು ಅವರ ಮನೆಯು ಖಾಲಿಯಿತ್ತು. ಅದನ್ನು ಕೊಡಿರೆಂದು ಕೇಳಿದಾಗ ಆ ಮನೆಯಲ್ಲಿ ದೆವ್ವವಿದೆ, ಅದಕ್ಕೇ ಅಲ್ಲಿ ಯಾರೂ ವಾಸಮಾಡುತ್ತಿಲ್ಲ, ನೀವೇಕೆ ಹೋಗುತ್ತೀರಿ? ಎಂದು ಜನರು ಭಯ ಹುಟ್ಟಿಸಿದರಂತೆ. ನಮ್ಮ ತಾತ ಬಹಳ ಧೈರ್ಯಶಾಲಿಗಳು. ಹಾಗೂ ಮೂಢ ನಂಬಿಕೆಗಳಲ್ಲಿ ಅವರಿಗೆ ವಿಶ್ವಾಸವಿರಲಿಲ್ಲ. ಹಾಗಾಗಿ ಮನೆಮಾಲೀಕರು ಬಾಡಿಗೆಯನ್ನೇ ಪಡೆಯದೆ ಅಲ್ಲಿರಲು ಅನುಮತಿ ಕೊಟ್ಟರಂತೆ. ಅವರು ಅಲ್ಲಿ ವಾಸವಿದ್ದಾಗ ಕಂಡಿದ್ದು ಮಣ್ಣು ಮಾಳಿಗೆಯ ಮನೆ, ವಿಶಾಲವಾಗಿತ್ತು. ಹಿಂಭಾಗದಲ್ಲಿ ಒಂದು ಉದ್ದವಾದ ಅಂಗಳವಿತ್ತು.ಅದಕ್ಕೆ ಹೆಂಚಿನ ಮಾಡು ಇತ್ತು. ಅದರೊಳಗೇ ಒಂದು ಸೇದುವ ಬಾವಿಯಿತ್ತು. ಮನೆಬಳಕೆಗಾಗಿ ಅದರಿಂದಲೇ ನೀರು ಸೇದಿಕೊಳ್ಳುತ್ತಿದ್ದರು. ನಾವೂ ರಜೆಯ ಕಾಲದಲ್ಲಿ ಆ ಮನೆಗೆ ಹೋಗಿ ಬರುತ್ತಿದ್ದೆವು.

ವಿಶೇಷವೆಂದರೆ ಆಗೀಗ ಅವೇಳೆಯಲ್ಲಿ ಬಾವಿಯೊಳಕ್ಕೆ ಯಾರೋ ಜೋರಾಗಿ ಧುಮುಕಿದಂತೆ ಶಬ್ಧವಾಗುತ್ತಿತ್ತು. ಇದರಿಂದ ಮನೆಯವರೆಲ್ಲರೂ ಅದು ದೆವ್ವದ ಕಾಟವೇ ಇರಬಹುದೆಂದು ಭಯಪಡುತ್ತಿದ್ದರು. ತಾತನವರು ಅದನ್ನು ಪರೀಕ್ಷಿಸಲು ಹಿಂದಣ ಅಂಗಳದಲ್ಲಿಯೇ ರಾತ್ರಿ ಮಲಗುತ್ತಿದ್ದರು. ಒಂದು ರಾತ್ರಿ ಹೀಗೇ ದೊಪ್ಪೆಂದು ಭಾರೀ ಶಬ್ದವಾಯಿತು. ಬಾವಿಯೊಳಗಿನಿಂದ ನೀರು ಚಿಮ್ಮಿದ ರಭಸಕ್ಕೆ ಕೆಲ ಹನಿಗಳು ಹೊರಕ್ಕೂ ಹಾರಿದವು. ತಾತನವರು ಸೂಕ್ಷ್ಮವಾಗಿ ಟಾರ್ಚ್ ಹಿಡಿದು ಬಾವಿಯೊಳಗಿನ ದೃಷ್ಯವನ್ನು ಪರಿಶೀಲಿಸಿದರು. ಅದೊಂದು ಕಲ್ಲು ಕಟ್ಟಡ ಕಟ್ಟಿ ಭದ್ರಪಡಿಸದ ಮಣ್ಣುದಡದ ಬಾವಿಯಾಗಿತ್ತು. ಅನೇಕ ಕಡೆಗಳಿಂದ ಹೆಪ್ಪು ಹೆಪ್ಪಾಗಿ ಮಣ್ಣು ಕುಸಿದ ಗುರುತುಗಳು ಕಾಣ ಸಿದವು. ತಾತನವರು ತರ್ಕಮಾಡಿ ಈ ದಡದ ಹೆಪ್ಪು ಒಳಕ್ಕೆ ರಭಸವಾಗಿ ಬಿದ್ದದ್ದೇ ಶಬ್ಧ, ಬೇರೇನೂ ಇಲ್ಲ. ಇದನ್ನೇ ದೆವ್ವದಾಟವೆಂದು ತಪ್ಪಾಗಿ ನಂಬಿ ಜನರು ಭಯಬೀಳುತ್ತಿದ್ದಾರೆ ಎಂಬ ತೀರ್ಮಾನಕ್ಕೆ ಬಂದರು. ಕ್ರಮೇಣ ಜನಕ್ಕೂ ಇದು ಅರ್ಥವಾಗಿ ನಾವು ಬಿಟ್ಟ ನಂತರ ಮನೆಯ ಮಾಲಿಕರು ಎಷ್ಟೋ ವರ್ಷಗಳ ನಂತರ ಅದೇ ಮನೆಗೆ ವಾಸಕ್ಕೆ ಬಂದರು ಹಾಗೂ ಬಾವಿಯ ದಡವನ್ನು ಭದ್ರಪಡಿಸಿಕೊಂಡರು. ದೆವ್ವದ ಆತಂಕ ದೂರವಾಯಿತು. ನಾನು ಬರಹಗಾರಳಾದ ಮೇಲೆ ಇದೇ ಘಟನೆಯನ್ನಾಧರಿಸಿ ಸಣ್ಣ ಕಥೆಯೊಂದನ್ನು ಬರೆದು ಬಹುಮಾನವನ್ನೂ ಪಡೆದಿದ್ದೆ.

ನಾನು ಪ್ರೌಢಶಾಲೆಯ ಒಂದುವರ್ಷ ಅಂದಿನ ಕೊಲಾರ ಜಿಲ್ಲೆಯ ಚಿಕ್ಕಬಳ್ಳಾಪುರದಲ್ಲಿ ಓದಬೇಕಾಯಿತು. ಆ ಜಿಲ್ಲೆಯಲ್ಲಿ ಅತಿ ಕಡಿಮೆ ಮಳೆ. ಹಾಗಾಗಿ ಬಾವಿಗಳನ್ನು ಬಹಳ ಆಳವಾಗಿ ತೆಗೆದು ನೀರನ್ನೆತ್ತಿ ಕೃಷಿ ಬೆಳೆಗಳನ್ನು ತೆಗೆಯುತ್ತಿದ್ದರು. ಒಮ್ಮೆ ಕುತೂಹಲದಿಂದ ತೋಟವನ್ನು ಹೊಂದಿದ್ದ ಸಹಪಾಠಿಯೊಡನೆ ಅವರ ಕೃಷಿಬಾವಿಯನ್ನು ನೋಡಲು ಹೋಗಿದ್ದೆ. ಅಷ್ಟು ಬೃಹದಾಕಾರದ ಬಾವಿಯನ್ನು ಅದುವರೆಗೆ ನಾನು ನೋಡಿದ್ದೇ ಇಲ್ಲ. ಮೇಲ್ಗಡೆ ಸುಮಾರು ಮೂವತ್ತು ಅಡಿ ವ್ಯಾಸದ ಬಾವಿ ಸಾಕಷ್ಟು ಅಳದವರೆಗೆ ಇತ್ತು. ಸುತ್ತಲೂ ಕಲ್ಲು ಕಟ್ಟಡ ಭದ್ರವಾಗಿ ಕಟ್ಟಿದ ಬಾವಿ. ಆ ಬಾವಿಯೊಳಗೆ ಇನ್ನೊಂದು ಸುಮಾರು ಇಪ್ಪತ್ತು ಅಡಿ ವ್ಯಾಸದ ಬಾವಿ ಅದನ್ನೂ ಸಾಕಷ್ಟು ಆಳದ ವರೆಗೆ ತೆಗೆಸಿದ್ದರು. ಅದರ ಮಧ್ಯಬಾಗದಲ್ಲಿ ಒಂದು ಕೊಳವೆ ಬಾವಿಯನ್ನು ಕೊರೆಯಲಾಗಿತ್ತು. ಅಲ್ಲಿಂದ ಅಂತರ್ಜಲ ಬಂದು ದೊಡ್ಡ ಬಾವಿಯಲ್ಲಿ ಸಂಗ್ರಹವಾಗುತ್ತಿತ್ತು. ಅಷ್ಟು ಆಳದಿಂದ ನೀರನ್ನೆತ್ತಿ ಸುಂದರವಾದ ತರಕಾರಿಗಳ, ರೇಷಿಮೆಯ ಗಿಡಗಳ ತೋಟವನ್ನು ಮಾಡಿದ್ದರು. ಅವರ ಬೆಳೆಗಳಲ್ಲಿ ವಾಣ ಜ್ಯ ಬೆಳೆಗಳಿಗೇ ಆಧ್ಯತೆ.

ಅದೇ ಜಿಲ್ಲೆಯ ಬಾಗೇಪಲ್ಲಿ ಎಂಬ ತಾಲೂಕಿನಲ್ಲಿ ನಮ್ಮ ಮಾವನವರು ಕೆಲವು ವರ್ಷಗಳು ಸಬ್‌ಓವರ್ಸೀಯರಾಗಿ ಕೆಲಸ ಮಾಡಿದ್ದರು. ಅವರಿಂದ ತಿಳಿದ ಮಾಹಿತಿ ಇನ್ನೂ ಆಶ್ಚರ್ಯಕರವಾದುದು. ಆ ಊರಿನಲ್ಲಿ ನೀರಿಗೆ ಅಭಾವ. ಸೇದುವ ಬಾವಿಗಳಿದ್ದರೂ ಐವತ್ತು, ಅರವತ್ತು ಅಡಿ ಆಳದಲ್ಲಿ ನೀರಿರುತ್ತಿತ್ತು. ಹಾಗಾಗಿ ಒಬ್ಬರು ಕೊಡ ತೆಗೆದುಕೊಂಡು ಬಾವಿಗೆ ಹೊರಟರೆ ಹಿಂದೆ ಸೇದುವ ಹಗ್ಗವನ್ನು ಹೊತ್ತು ಇನ್ನೊಬ್ಬರು ಹೋಗಬೇಕಾಗಿತ್ತಂತೆ. ಅಷ್ಟು ಭಾರವಾದ ಹಗ್ಗ. ಸೇದುವವರ ಶಕ್ತಿ ಪರೀಕ್ಷೆ ಆಗುತ್ತಿತ್ತು. ಈ ಬವಣೆ ನೋಡಿ ಆ ಊರಿನವರಿಗೆ ಬೇರೆ ಊರಿನವರು ಹೆಣ್ಣು ಕೊಡುತ್ತಿರಲಿಲ್ಲವಂತೆ. ತಮ್ಮ ಮಗಳು ಅಲ್ಲಿಗೆ ಹೋದರೆ ನೀರು ಸೇದಿಸೇದಿ ಸುಸ್ತಾಗಿಬಿಡುತ್ತಾಳೆ ಎಂಬ ಕಾರಣಕ್ಕಾಗಿ.

ಧಾರ್ಮಿಕ ನಂಬಿಕೆಯುಳ್ಳ ನಮ್ಮವರು ದೇವಸ್ಥಾನಗಳನ್ನು ಕಟ್ಟುವಾಗ ಸಮೀಪದಲ್ಲಿಯೇ ಒಂದು ಕಲ್ಯಾಣ ಎಂದು ಕರೆಯಲ್ಪಡುವ ಬಾವಿಯನ್ನೂ ನಿರ್ಮಿಸುತ್ತಿದ್ದರು. ಇದನ್ನು ಎಲ್ಲೆಲ್ಲಿಯೂ ಕಾಣಬಹುದಾಗಿದೆ. ಅದರಲ್ಲಿಯೂ ಕಲ್ಯಾಣ ಗಳನ್ನು ಕಲಾತ್ಮಕವಾಗಿ ನಿರ್ಮಿಸಿದ್ದುದುಂಟು. ನಮ್ಮ ಊರಿಗೆ ಸಮೀಪವೇ ಇರುವ ಮೇಲುಕೋಟೆ ಚಲುವರಾಯಸ್ವಾಮಿಯ ದೇವಾಲಯದ ಸಮೀಪವಿರುವ ಕಲ್ಯಾಣ ಯನ್ನು ಉದಾಹರಣೆಯಾಗಿ ನೋಡಬಹುದು. ಇದರ ಅಂದಚಂದಗಳನ್ನು ಅನೇಕ ಚಲನಚಿತ್ರಗಳ ಹಾಡುಗಳನ್ನು ಚಿತ್ರಿಸುವಾಗ ನಯನಮನೋಹರವಾಗಿ ತೋರಿಸಿದ್ದಾರೆ. ಅದೇ ರೀತಿ ಇನ್ನೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿವಗಂಗೆ ಕ್ಷೇತ್ರದಲ್ಲಿರುವ ಕಲ್ಯಾಣ ಯೂ ಉದಾಹರಣೆಯಾಗಿದೆ.

ನನ್ನ ಅನುಭವಕ್ಕೆ ಬಂದ ಕೆಲವು ವಿಶೇಷ ಬಾವಿಗಳ ಬಗ್ಗೆ ಉಲ್ಲೇಖಿಸಬೇಕಾಗಿದೆ. ಗುಲ್ಬರ್ಗಾ ಜಿಲ್ಲೆಯ ಒಂದು ಗ್ರಾಮದಲ್ಲಿ ನಾನು ನೋಡಿದ ಸೇದುವ ಬಾವು ಬರೀ ನಾಲ್ಕು ಅಡಿಗಳಷ್ಟೇ ವ್ಯಾಸದ್ದಿತ್ತು. ನನಗೆ ಇಷ್ಟು ಚಿಕ್ಕ ವ್ಯಾಸದ ಬಾವಿಯನ್ನು ಹೇಗೆ ತೋಡಲು ಸಾಧ್ಯ ಎಂದು ವಿಚಾರಿಸಿದಾಗ ಅಲ್ಲಿನವರು ಈ ರೀತಿ ಬಾವಿಗಳನ್ನು ತೋಡುವ ಕುಶಲ ಕರ್ಮಿಗಳೇ ಇದ್ದಾರೆ. ಅವರನ್ನು ಬಿಟ್ಟು ಅಷ್ಟು ಚಿಕ್ಕ‌ಅಗಲದ ಆಳವಾದ ಬಾವಿಯನ್ನು ಬೇರೆಯವರು ನಿರ್ಮಿಸುವುದು ಅಸಾಧ್ಯವೆಂದು ಹೇಳಿದರು.
ನಾವು ಗುಜರಾತ್ ಪ್ರವಾಸಕ್ಕೆ ಹೋದಾಗ ಅಹಮದಾಬಾದಿನ ಪಾಟನ್ ಎಂಬಲ್ಲಿ ಒಂದು ಐತಿಹಾಸಿಕ ಸ್ಮಾರಕವಾದ ಬಾವಿಯನ್ನು ನೋಡಿದೆವು. ರಾಣ ಕಿ ವಾವ್ ಎಂದು ಕರೆಯಲ್ಪಡುವ ಇದರ ವಿಶೇಷವೆಂದರೆ ಈ ಬಾವಿ ಮೂರು ಅಂತಸ್ತುಗಳಲ್ಲಿದೆ. ಬಾವಿಯ ಸುತ್ತ ಭವ್ಯವಾದ ಸುಂದರ ಕೆತ್ತನೆಯ ಕಟ್ಟಡವಿದೆ. ಹನ್ನೊಂದನೆಯ ಶತಮಾನದಲ್ಲಿ ಭೀಮದೇವನೆಂಬ ಅರಸನ ಪತ್ನಿ ರಾಣ ಉದಯಮತಿ ಎಂಬುವಳು ನಿರ್ಮಿಸಿದ್ದಾಳೆ. ಇದರಲ್ಲಿ ನೀರಿದೆ. ಹಾಗೂ ಸುತ್ತಲೂ ನಿರ್ಮಿಸಿರುವ ಕಲಾತ್ಮಕ ಕಟ್ಟಡದಲ್ಲಿ ಶೈವ, ವೈಷ್ಣವ, ಸುಂದರ ಶಿಲ್ಪಗಳಿವೆ. ಶಿಲಾಬಾಲಿಕೆಯರು, ನಾಗಕನ್ನಿಕೆಯರು, ಯೋಗಿನಿಯರ ಮೂರ್ತಿಗಳಿಗೆ. ಇವೆಲ್ಲದರಿಂದ ಕೂಡಿದ ಈ ಪಾರಂಪರಿಕ ಕಟ್ಟಡ ಮನಮೋಹಕವಾಗಿದೆ. ಇದನ್ನೀಗ ವಿಶ್ವ ಪಾರಂಪರಿಕ ಕಟ್ಟಡಗಳ ಗುಂಪಿಗೆ ಸೇರಿಸಲಾಗಿದೆ.

ರಾಣಿ ಕಿ ವಾವ್ , ಅಹ್ಮದಾಬಾದ್

ಇತ್ತೀಚೆಗೆ ಕೊಳವೆಬಾವಿಗಳನ್ನು ಕೊರೆಸಿ ಅಂತರ್ಜಲವನ್ನು ಬಳಸುವುದು ಬಹಳ ಹೆಚ್ಚಾಗಿದೆ. ಇದರ ಫಲವಾಗಿ ಅಂತರ್ಜಲವೂ ಕುಸಿಯುತ್ತಿದೆ. ಕೊಲಾರ ಜಿಲ್ಲೆಯ ಕೆಲವು ಕಡೆ, ಕಡೂರು ತಾಲೂಕಿನ ಕೆಲವು ಕಡೆ ನನಗೆ ತಿಳಿದಿರುವಂತೆ ಕೊಳವೆ ಬಾವಿಗಳ ಆಳ ಆರುನೂರು ಅಡಿಗಿಂತಲೂ ಹೆಚ್ಚಾಗಿದೆಯಂತೆ. ನಗರ ಪ್ರದೇಶಗಳಲ್ಲಿ ಅಸಂಖ್ಯಾತ ಬಹುಮಹಡಿಗಳ ಕಟ್ಟಡಗಳನ್ನು ಕಟ್ಟುವವರು ಅಲ್ಲಿ ನಿರ್ಮಿಸಲಾಗುವ ನೂರಾರು ಮನೆಗಳಿಗೆ ನೀರನ್ನೊದಗಿಸಲು ಅನುಕೂಲವಾಗಲೆಂದು ಮೊದಲು ಆಳವಾದ ಕೊಳವೆಬಾವಿಗಳನ್ನು ಕೊರೆಸುತ್ತಿದ್ದಾರೆ. ಹೀಗಾಗಿ ಒಂದು ಕೊಳವೆ ಬಾವಿಗೂ ಇನ್ನೊಂದಕ್ಕೂ ಸರ್ಕಾರವು ನಿಗದಿ ಮಾಡಿದ ಕನಿಷ್ಠ ದೂರವನ್ನೂ ಪಾಲಿಸುತ್ತಿಲ್ಲ. ಇನ್ನೂ ಚೋದ್ಯವೆಂದರೆ ಕೆಲವು ಭೂ ಮಾಲೀಕರು ತಮ್ಮ ಖಾಲಿ ಜಾಗದಲ್ಲಿ ಕೊಳವೆಬಾವಿ ತೆಗೆಸಿ ಅದರಿಂದ ಎತ್ತಿದ ನೀರನ್ನು ಬೇಕಾದವರಿಗೆ ಮನೆಮನೆಗಳಿಗೆ ಮಾರಿ ಹಣ ಗಳಿಸುತ್ತಾರೆ. ಇದೊಂದು ದಂಧೆಯೇ ಆಗಿದೆ.

ಗ್ರಾಮೀಣ ಪ್ರದೇಶಗಳಲ್ಲಿನ ರೈತರು, ಆರ್ಥಿಕ ದುರ್ಬಲರಿಗೆ ತಮ್ಮ ಜಮೀನುಗಳಲ್ಲಿ ವ್ಯವಸಾಯಕ್ಕಾಗಿ ಕೊಳವೆಬಾವಿ ನಿರ್ಮಿಸಿಕೊಳ್ಳಲು ಸಹಾಯಧನವನ್ನು ನೀಡುವ ಕಾರ್ಯಕ್ರಮವನ್ನು ಸರ್ಕಾರವು ರೂಪಿಸಿದೆ. ಇದರಿಂದ ಅನೇಕ ಜನರಿಗೆ ಅನುಕೂಲವಾಗಿದೆ. ಸರ್ಕಾರಕ್ಕೆ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿದರೆ ಆಯ್ಕೆಯಾದವರಿಗೆ ಸಹಾಯಧನ ದೊರೆಯುತ್ತದೆ. ಈ ವ್ಯವಸ್ಥೆ ಎಷ್ಟು ಮಟ್ಟಿಗೆ ದುರುಪಯೋಗ ಆಗಿದೆಯೆಂದರೆ ಮಧ್ಯವರ್ತಿಗಳು, ಸಂಬಂಧಪಟ್ಟ ಅಧಿಕಾರಿವರ್ಗದವರು ಕೈಜೋಡಿಸಿ ಫಲಾನುಭವಿಗೆ ದೊರಕುವ ಸಹಾಯಧನ ಪೂರ್ತಿಯಾಗಿ ಸಲ್ಲುವುದೇ ಇಲ್ಲ. ಯಾರೋ ನಾಟಕಕಾರರು ಇದನ್ನೊಂದು ಪ್ರಹಸನದಂತೆ ರಚಿಸಿದ ಬಾವಿ ಕಳೆದು ಹೋಗಿದೆ ಎಂಬ ನಾಟಕವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಯಿತು. ಅದೇ ವಿಷಯವನ್ನಾಧರಿಸಿ ಒಂದು ಚಲನಚಿತ್ರವನ್ನೂ ತಯಾರಿಸಿದ್ದಾರೆ. ಒಬ್ಬ ಫಲಾನುಭವಿಗೆ ಅಧಿಕೃತವಾಗಿ ಮುಂಜೂರಾದ ಹಣವನ್ನು ಹಂತಹಂತವಾಗಿ ಕೊಳವೆಬಾವಿ ನಿರ್ಮಿಸಿದ್ದಕ್ಕೆ ಧೃಢೀಕರಣ ನೀಡಿದ ನಂತರವೇ ಬಿಡುಗಡೆ ಮಾಡುವುದುಂಟು. ಈ ಪ್ರಹಸನದಲ್ಲಿ ಬಾವಿ ನಿರ್ಮಿಸಬೇಕಾದ ಜಾಗದ ಪರಿಶೀಲನೆ, ಬಾವಿ ಕೊರೆದಿದ್ದಕ್ಕೆ ಪ್ರತ್ಯಕ್ಷವಾಗಿ ಪರಿಶೀಲನೆ ಮಾಡಿದ ದಾಖಲೆ, ಮತ್ತು ಅದಕ್ಕೆ ಪಂಪು ಅಳವಡಿಸಿ ಸಂಪೂರ್ಣವಾಗಿ ಕೆಲಸ ಮುಗಿದಿದೆ ಎಂಬುದಕ್ಕೆ ಸಂಬಂಧಪಟ್ಟ ಅಧಿಕಾರಿಗಳೆಲ್ಲರೂ, ಎಲ್ಲಹಂತಗಳಲ್ಲಿಯೂ ಧೃಢೀಕರಿಸುತ್ತಾರೆ. ನಂತರ ಹಣವೂ ಬಿಡುಗಡೆಯಾಗುತ್ತದೆ. ಆದರೆ ಅದು ಫಲಾನುಭವಿಗೆ ದಕ್ಕುವುದೇ ಇಲ್ಲ. ಮಧ್ಯದಲ್ಲಿಯೇ ಲಂಚದ ರೂಪದಲ್ಲಿ ಎಲ್ಲರಪಾಲಾಗಿ ಹಂಚಿಹೋಗುತ್ತದೆ. ವಾಸ್ತವಾಂಶವೆಂದರೆ ಅಲ್ಲೊಂದು ಬಾವಿಯನ್ನೇ ಕೊರೆದಿರುವುದಿಲ್ಲ. ಎಲ್ಲವೂ ಸುಳ್ಳು ಧೃಢೀಕರಣಗಳ ಆಧಾರದ ಮೇಲೇ ವ್ಯವಹಾರ ಮುಗಿದಿರುತ್ತದೆ. ಜಾಣನಾದ ಆ ಫಲಾನುಭವಿ ಸ್ವಲ್ಪ ಕಾಲದ ನಂತರ ತನ್ನ ಹೊಲದಲ್ಲಿ ಕೊರೆಸಿದ್ದ ಬಾವಿ ಕಳೆದುಹೋಗಿದೆಯೆಂದು ದೂರು ದಾಖಲಿಸುತ್ತಾನೆ. ಅದರ ನೈಜತೆಯ ಪರಿಶೀಲನೆಯಾದಾಗ ನಿಜವಾಗಿಯೂ ಬಾವಿಯನ್ನು ಕೊರೆಸಿಲ್ಲ ಎಂಬುದು ಖಾತರಿಯಾಗುತ್ತದೆ.. ಎಲ್ಲವೂ ಲಂಚಗುಳಿಗಳ ಕೈವಾಡವೆಂಬುದು ಸಾಬೀತಾಗುತ್ತದೆ. ಸರ್ಕಾರದ ಕಾರ್ಯಕ್ರಮಗಳನ್ನು ಈಡೇರಿಸುವ ಅವ್ಯವಸ್ಥೆಯನ್ನು ವ್ಯಂಗಮಾಡಿ ಕನ್ನಡಿ ಹಿಡಿದಿದ್ದಾರೆ ನಾಟಕದ ಕರ್ತೃ.

ಹೀಗೇ ನೀರಿನ. ಅಂತರ್ಜಲದ ಅತಿಬಳಕೆ ಮುಂದುವರಿದರೆ ಮುಂದಿನ ಪೀಳಿಗೆಗೆ ಅತ್ಯವಶ್ಯವಾದ ನೀರೂ ದುರ್ಲಭವಾಗುವ ಸಂಭವವಿದೆ. ಆದ್ದರಿಂದ ನೀರನ್ನು ಕಡಿಮೆ ಬಳಸಿ, ದುರ್ಬಳಕೆ ಮಾಡದಿರಿ ಎಂಬ ಎಚ್ಚರಿಕೆಯೊಡನೆ ನನ್ನ ಬಾವಿ ಪುರಾಣವನ್ನು ಇಲ್ಲಿಗೆ ಮುಕ್ತಾಯ ಮಾಡುತ್ತೇನೆ.

-ಬಿ.ಆರ್.ನಾಗರತ್ನ, ಮೈಸೂರು.

18 Responses

  1. Hema says:

    ಬಹಳ ಸೊಗಸಾದ ಬರಹ, ‘ಬಾವಿದೆವ್ವದ’ ಕತೆ ಸೂಪರ್!

  2. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಗೆಳತಿ ಹೇಮಾ

  3. ನಯನ ಬಜಕೂಡ್ಲು says:

    ಸೊಗಸಾಗಿದೆ ಬರಹ

  4. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಮೇಡಂ

  5. . ಶಂಕರಿ ಶರ್ಮ says:

    ಬಾವಿಯ ದಡದಿಂದಾದ ದೆವ್ವದ ಸದ್ದಿನ ಕಥೆ ಬಹಳ ಆಸಕ್ತಿಪೂರ್ಣವಾಗಿದೆ. ವಿವಿಧ ತರಹದ ಬಾವಿಗಳ ಬಗ್ಗೆ ವಿಶೇಷ ಮಾಹಿತಿಗಳನ್ನು ಒಳಗೊಂಡ ಸುಂದರ ಲೇಖನಕ್ಕಾಗಿ, ನಾಗರತ್ನ ಮೇಡಂ ಅವರಿಗೆ ಧನ್ಯವಾದಗಳು.

  6. ತರಹೇವಾರಿ ಬಾವಿಗಳ ಪರಿಚಯ, ಮತ್ತೆ ದೆವ್ವ, ವಿಶೇಷವಾದ ಬರಹ.

  7. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಶಂಕರಿಶರ್ಮ ಹಾಗೂ ವಿಜಯಾ ಸುಬ್ರಹ್ಮಣ್ಯ ಮೇಡಂರವರುಗಳಿಗೆ.

  8. ಸರಿತಾ ಮಧು says:

    ಚಂದವಾದ ವಿವರಣೆ..

  9. Padma Anand says:

    ಬಾವಿಯ ಅಸ್ತಿತ್ವ ಹೇಗೆ ಉಂಟಾಗಿರಬಹುದು ಎಂಬಲ್ಲಿಂದ ಹಿಡಿದು ಅವುಗಳನ್ನು ಸದುಪಯೋಗ ಪಡಿಸಿಕೊಂಡು ಸಂರಕ್ಷಿಸಬೇಕೆಂಬ ಕಿವಿಮಾತಿನವರೆಗೂ ವಿವಿಧ ಮಜಲುಗಳ ಬಾವಿಯ ಇತಿಹಾಸ, ಪುರಾಣ ಉಪಕಥೆಯೊಂದಿಗೆ ಕಚಗುಳಿಯಿಡುತ್ತಾ ಸವಿಸ್ತಾರವಾಗಿ ಚೊಕ್ಕವಾಗಿ ಮೂಡಿಬಂದಿದೆ. ಅಭಿನಂದನೆಗಳು.

  10. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಸರಿತಾ ಮಧು ಮತ್ತು ಗೆಳತಿ ಪದ್ಮಾ

  11. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಗಾಯತ್ರಿ ಮೇಡಂ

  12. padmini says:

    ಬಾವಿ ಪುರಾಣ ಚೆನ್ನಾಗಿದೆ!

  13. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಪದ್ಮಿನಿ ಮೇಡಂ.

  14. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಸುಧಾ ಮೇಡಂ

  15. ರಾಣಿ ಕಿ ವಾವ್ ಕಲ್ಪನಾ ಲೋಕಕ್ಕೆ ಕರೆದು ಕೊಂಡು ಹೋಯ್ತು, ದೆವ್ವದ ಬಾವಿ ಪುರಾಣ ಕೂಡ ಸ್ವಾರಸ್ಯಕರವಾಗಿದೆಲೇಖನ

  16. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಗೆಳತಿ ವೀಣಾ

Leave a Reply to Veena chaluvaraju Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: