ಅಕ್ಷರ ಸಂತ ಹಾಜಬ್ಬ

Share Button
ನ್ಯೂಪಡ್ಪು’ಎಂಬಲ್ಲಿ ಹರೇಕಳ ಹಾಜಬ್ಬ ಅವರು ಸ್ಥಾಪಿಸಿದ ಶಾಲೆ, PC: Internet

“ಚಿತ್ತುಪ್ಪುಳಿ ಬೋಡಯೇ?…ಇಂದೇ..ಎಡ್ಡೆ ಚೀಪೆ ಉಂಡು!” (ಕಿತ್ತಳೆ ಹಣ್ಣು ಬೇಕಾ?..ಇಕೊಳ್ಳಿ..ಒಳ್ಳೆ ಸಿಹಿ ಇದೆ!)..ಇದು 1978 ನೇ ಇಸವಿಯ ಸುಮಾರಿಗೆ, ದಕ್ಷಿಣ ಕನ್ನಡ ಜಿಲ್ಲೆಯ ಮುಖ್ಯಪಟ್ಟಣ ಮಂಗಳೂರಿನ ಕೇಂದ್ರಸ್ಥಾನವಾದ ಹಂಪನಕಟ್ಟೆಯಲ್ಲಿ, ಬಿದಿರಿನಬುಟ್ಟಿ ತುಂಬಾ ಕಿತ್ತಳೆಹಣ್ಣನ್ನು ತುಂಬಿಕೊಂಡು, ತಲೆ ಮೇಲೆ ಹೊತ್ತು, ರಸ್ತೆ ಪಕ್ಕದಲ್ಲಿ ಓಡಾಡುತ್ತಾ ಮಾರಾಟ ಮಾಡುತ್ತಿದ್ದ, ಶಾಲೆಯ ಮುಖವನ್ನೇ ನೋಡದ ಮಧ್ಯವಯಸ್ಕರೊಬ್ಬರಿಗೆ ಆದಂತಹ ಸಣ್ಣ ಅನುಭವವೊಂದು, ಅವರಲ್ಲಿ ಎಂತಹ ಅದ್ಭುತ ಕಾರ್ಯವೊಂದನ್ನು ಮಾಡಲು ಪ್ರೇರೇಪಿಸಿತು… ರಾಷ್ಟ್ರಮಟ್ಟದ ಖ್ಯಾತಿಯನ್ನು ಪಡೆಯಲು ಕಾರಣವಾಯಿತು ಎಂಬುದನ್ನು ಯೋಚಿಸಿದರೆ ನಿಜಕ್ಕೂ ಬಹಳ ಆಶ್ಚರ್ಯವಾಗದಿರದು!…ಅವರೇ ಈ ಸಲದ ಪದ್ಮಶ್ರೀ ಪುರಸ್ಕೃತರಲ್ಲಿ ಒಬ್ಬರಾದ ಸಮಾಜ ಸೇವಕ, ಅಕ್ಷರ ಸಂತ  ಹರೇಕಳ ಹಾಜಬ್ಬ; ದುಡಿಮೆಯ ಎಲ್ಲ ಹಣವನ್ನೂ ಸುರಿದು ಶಿಕ್ಷಣ ದೇಗುಲ ಕಟ್ಟಿದ ಅಕ್ಷರ ಸಂತ!

ಮಂಗಳೂರಿನ ತಾಲೂಕಿನ ಕೊಣಾಜೆ ಸಮೀಪದ ನ್ಯೂಪಡ್ಪು(ಪೊಸಪಡ್ಪು) ಎಂಬ ಕುಗ್ರಾಮದ ಹರೇಕಳದಲ್ಲಿ ವಾಸವಾಗಿರುವ ಹಾಜಬ್ಬನವರದು, ಪತ್ನಿ , ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಪುತ್ರನಿರುವ, ಮುಸ್ಲಿಂ ಸಮುದಾಯದ ಅತ್ಯಂತ ಬಡಕುಟುಂಬ. ಊಟಕ್ಕೂ ಪರದಾಟ.. ದೈನಂದಿನ ಜೀವನಕ್ಕಾಗಿ ಬೀಡಿ ಸುತ್ತಿ ಜೀವನ ನಡೆಸುವ ಇವರಿಗೆ ನಿಶ್ಚಿತ ಆದಾಯವಿಲ್ಲ. ಜೊತೆಗೆ ಹಲವಾರು ವರ್ಷಗಳಿಂದ ಹಾಸಿಗೆ ಹಿಡಿದ ಪತ್ನಿಯನ್ನೂ ಜತನದಿಂದ ನೋಡಿಕೊಳ್ಳುವ ಹಾಗೂ ಮಕ್ಕಳಿಗೆ ಮದುವೆ ಮಾಡುವ  ಜವಾಬ್ದಾರಿಯೂ ಇದೆ. ಬೀಡಿ ಸುತ್ತುವ ದುಡಿಮೆಯಲ್ಲಿ ಆದಾಯ ಸಾಲದಾಗ ಇವರು ಕಂಡ ಇನ್ನೊಂದು ಮಾರ್ಗವೇ ಕಿತ್ತಳೆ ಹಣ್ಣಿನ ವ್ಯಾಪಾರ.

1978 ರ ವೇಳೆ, ಒಮ್ಮೆ ಕಿತ್ತಳೆ ಹಣ್ಣಿನ ಬುಟ್ಟಿ ಮುಂದೆ ಇಟ್ಟು ವ್ಯಾಪಾರಕ್ಕೆ ಕುಳಿತಿದ್ದಾಗ, ವಿದೇಶೀಯರೊಬ್ಬರು, “How much?” ಎಂಬುದಾಗಿ ಹಣ್ಣಿನ ಬೆಲೆಯನ್ನು ಆಂಗ್ಲಭಾಷೆಯಲ್ಲಿ ಕೇಳುತ್ತಾರೆ. ಅದು ಅರ್ಥವಾಗದೆ, ಹಾಜಬ್ಬನವರ ಮನಸ್ಸಿಗೆ ಬಹಳ ಅವಮಾನವೆನಿಸಿ ಕೀಳರಿಮೆ ಕಾಡುತ್ತದೆ, ಖೇದವೆನಿಸಿತ್ತದೆ. ಮಾತ್ರವಲ್ಲದೆ, ಭಾಷೆ ತಿಳಿಯದೆ ಒಳ್ಳೆ ಗಿರಾಕಿಯನ್ನು ಕಳೆದುಕೊಂಡ ನೋವು ಬಾಧಿಸುತ್ತದೆ. ಹಾಜಬ್ಬನವರ ಮನಸ್ಸಿನಲ್ಲಿ  “ನಾನಂತೂ ಶಿಕ್ಷಣ ಪಡೆಯಲಾಗಲಿಲ್ಲ;  ಕೊನೆಪಕ್ಷ ನಮ್ಮ ಹಳ್ಳಿಯ ಮಕ್ಕಳಾದರು ಶಿಕ್ಷಣ ಪಡೆಯಲಿ; ಅದಕ್ಕಾಗಿ ನಾನೊಂದು ಶಾಲೆಯನ್ನು ಕಟ್ಟಲೇಬೇಕು” ಎಂಬ  ದೃಢ ನಿರ್ಧಾರವನ್ನು ಕೈಗೊಳ್ಳುತ್ತಾರೆ. ಅದು ಮನದಲ್ಲೇ ಮಂಥನಕ್ಕೊಳಗಾಗಿ  17 ವರ್ಷಗಳ ನಂತರ;  ಅಂದರೆ 1995 ರಲ್ಲಿ ಮತ್ತೆ ಚಿಗುರೊಡೆಯುತ್ತದೆ. ಜೊತೆಗೇ ಶಾಲೆ ಪ್ರಾರಂಭಿಸಲು ಸರಕಾರದ ಅನುಮತಿಗಾಗಿ, ಜಿಲ್ಲಾ ಪಂಚಾಯತಿ, ಜಿಲ್ಲಾಧಿಕಾರಿ, ಕೊನೆಗೆ ಬಿ.ಇ.ಒ ವರೆಗೆ  ಎಡೆಬಿಡದೆ ಓಡಾಟ ನಡೆಸಿದರೂ, ಅನುಮತಿ ಮಾತ್ರ ದೊರೆಯುವುದಿಲ್ಲ. ಕೊನೆಗೆ, ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ಪ್ರಾಥಮಿಕ ಶಾಲೆ ಪ್ರಾರಂಭಿಸಲು ಅನುಮತಿ ದೊರೆತಾಗ, ಹಾಜಬ್ಬನರ ಕನಸಿನ ಕೂಸಿನ ಜನನವು 1999ರ ಜೂನ್ 6ರಂದು ಆಗುವುದರೊಂದಿಗೆ, ತನ್ನ ನ್ಯೂಪಡ್ಪು ಗ್ರಾಮದ ಮದರಸದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಬಹಳ ಸ್ವಲ್ಪ ಮಕ್ಕಳೊಂದಿಗೆ, ತನ್ನ ಕನಸಿನ ಶಾಲೆಯನ್ನು ಆರಂಭಿಸಿಯೇ ಬಿಡುತ್ತಾರೆ!

ತಾವು ಕಿತ್ತಳೆಹಣ್ಣು ಮಾರಿ ಬಂದ ದುಡ್ಡಿನಲ್ಲೇ ಸ್ವಲ್ಪಾಂಶವನ್ನು ಉಳಿತಾಯ ಮಾಡುತ್ತಾ, ಸ್ವಲ್ಪ ಸಮಯದ ಬಳಿಕ, ಕಷ್ಟಪಟ್ಟು ಕೈಯಲ್ಲಿ ಕೂಡಿ ಹಾಕಿದ ₹25,000/- ಹಣದೊಂದಿಗೆ ಸ್ವಂತ ಶಾಲಾಕಟ್ಟಡಕ್ಕಾಗಿ ಸರಕಾರೀ ನಿವೇಶನದ ಹುಡುಕಾಟದಲ್ಲಿ ತೊಡಗಿದರು. ಸರಕಾರಿ ಜಾಗವನ್ನು ಕೆಲವರು ಒತ್ತುವರಿ ಮಾಡಿ ಬೇನಾಮಿಯಾಗಿ ಉಪಯೋಗಿಸುತ್ತಿರುವ ಬಗ್ಗೆ ತಿಳಿದು, ತಮ್ಮ ಎಡೆಬಿಡದ ಪ್ರಯತ್ನದಿಂದ ಶಾಲೆಗಾಗಿ ಸರಕಾರಿ ಜಾಗವನ್ನು ಪಡೆಯುವಲ್ಲಿ ಯಶಸ್ವಿಯಾದರು. ಊರ, ಪರವೂರವರ ಸಹಕಾರದಿಂದ ಶಾಲಾ ಕಟ್ಟಡವು ರೂಪುಗೊಂಡು, ಮೊದಲು 1ನೇ ತರಗತಿಯಿಂದ ಆರಂಭವಾದ ಶಾಲೆಯಲ್ಲೀಗ 10ನೇ ತರಗತಿ ವರೆಗೆ ಮಕ್ಕಳು ಕಲಿಯುತ್ತಿದ್ದಾರೆ. 28 ಮಕ್ಕಳಿಂದ ಆರಂಭವಾದ ಶಾಲೆಯು ಇದೀಗ 164 ಮಕ್ಕಳಿಗೆ ವಿದ್ಯೆ ನೀಡುತ್ತಿದೆ! ಮುಂದೆ  ಬಡ ಮಕ್ಕಳ ಶಿಕ್ಷಣಕ್ಕೆ ಪೂರಕ ಸರಕಾರಿ ಪದವಿ ಪೂರ್ವ ಕಾಲೇಜು, ಐಟಿಐ ಆರಂಭಿಸುವ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ  ಇಂದಿಗೂ ದಣಿಯದೆ ಹಗಲಿರುಳು ಶ್ರಮಿಸುತ್ತಿದ್ದಾರೆ ಕೂಡ!

ಇಂತಹ ಅಕ್ಷರ ಸಂತನಿಗೆ ಸಮಸ್ಯೆಗಳೇ ಇಲ್ಲವೆಂದಲ್ಲ,  ಈಗಾಗಲೇ ಅವರಿಗೆ ಅರವತ್ತೇಳು ದಾಟಿದೆ. ವಯೋಮಾನಕ್ಕೆ ತಕ್ಕಂತೆ  ಅನಾರೋಗ್ಯ,  ಕಳೆದ ಇಪ್ಪತ್ತು ವರ್ಷಗಳಿಂದಲೂ ಹಾಸಿಗೆ ಹಿಡಿದ ಪತ್ನಿ,  ಮದುವೆಯಾಗದ ಮಕ್ಕಳು ಹೀಗೆ  ವೈಯಕ್ತಿಕ ಹಲವು ಸಮಸ್ಯೆಗಳು  ಕಾಡುತ್ತಿವೆ.  ಈ ಎಲ್ಲಾ ಕಷ್ಟಗಳ ಮಧ್ಯೆಯೂ ತಮ್ಮ ಸಂಕಲ್ಪವನ್ನು ಈಡೇರಿಸಲು ಇಂದಿಗೂ ಹಗಲು ರಾತ್ರಿ ದುಡಿಯುತ್ತಿದ್ದಾರೆ ಈ ಬರಿಗೈ ಸಂತ!

ದುಡಿಮೆಯ ಎಲ್ಲ ಹಣವನ್ನೂ ಸುರಿದು ಶಿಕ್ಷಣ ದೇಗುಲ ಕಟ್ಟಿದ ಅಕ್ಷರ ಸಂತ, ‘ಕನ್ನಡಪ್ರಭ’ ವರ್ಷದ ವ್ಯಕ್ತಿಯಾಗಿ ಗುರುತಿಸಿದೆ. ಇವರ ಈ ಅಭೂತಪೂರ್ವ ನಿಸ್ವಾರ್ಥ ಸೇವೆಗಾಗಿ 2020ರಲ್ಲಿಯೇ  ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟು  ಗೌರವಯುತವಾದ, ಉನ್ನತ ಪದ್ಮಶ್ರೀ ಪ್ರಶಸ್ತಿಗಾಗಿ ಆಯ್ಕೆಯಾಗಿದ್ದರೂ, ಕೊರೊನಾ ಪೀಡೆಯ ಪ್ರಯುಕ್ತ ಅದನ್ನು ಇದೇ 08-11-2021ರಂದು ನೀಡಿ ಗೌರವಿಸಲಾಯಿತು. 

ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ರಾಷ್ಟ್ರಪತಿಯವರಿಂದ ಪದ್ಮಶ್ರೀ ಪ್ರಶಸ್ತಿ ಪ್ರದಾನ, 08/11/2021

ಸಾರ್ವಜನಿಕವಾಗಿಯೂ ನೂರಾರು ಸನ್ಮಾನಗಳಿಂದ  ಪುರಸ್ಕೃತರಾಗಿರುವ ಇವರು, ರಾಜ್ಯೋತ್ಸವ ಪ್ರಶಸ್ತಿ, ಸಿಎನ್ಎನ್-ಐಬಿಎನ್ ಪ್ರಶಸ್ತಿ ಮಾತ್ರವಲ್ಲದೆ, ಮಂಗಳೂರು ವಿಶ್ವವಿದ್ಯಾನಿಲಯ, ಹಂಪಿ ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ ಮತ್ತು  ಕೇರಳದ ಕನ್ನಡ ಶಾಲೆಯ ಪಠ್ಯದಲ್ಲಿ ಹಾಜಬ್ಬನವರ ಪಾಠಗಳನ್ನು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂಬುದು ನಿಜಕ್ಕೂ ಅವರಿಗೆ ಸಂದ ಗೌರವವೇ ಸರಿ.     

ಹಾಜಬ್ಬನವರ ಈ  ಸತತ  40 ವರ್ಷಗಳ ಸಾರ್ಥಕ ಸೇವೆಯ ಹಾದಿಯಲ್ಲಿ ಒಮ್ಮೆ ನಿಂತು ಹಿಂತಿರುಗಿ ನೋಡಿದಾಗ ಅನ್ನಿಸುವುದಿಷ್ಟೆ; ಜೀವನ  ಸಾರ್ಥಕತೆಯಲ್ಲಿ ನಿಜಕ್ಕೂ ಸಾಕ್ಷರತೆಯ ಅಥವಾ ಶಿಕ್ಷಣದ ಪಾಲೇನು ? ಎಷ್ಟೆಲ್ಲಾ ಕಲಿತು, ಎಷ್ಟೆಲ್ಲಾ ಗಳಿಸಿದ  ಜನ  ಶೂನ್ಯ ಸಾಧನೆಯಲ್ಲಿರುವಾಗ, ಅಕ್ಷರವೇ ಕಾಣದ ಈ ಸಂತ  ಜೀವನವಿಡೀ ಕಡುಬಡತನದಲ್ಲಿ ಜೀವನವನ್ನು ದೂಡಿ,   ಮುಗ್ದ ನಡೆಯನ್ನು ಬಿಟ್ಟು ಕೊಡದೇ  ಸಮಾಜದ ಹಿತಕ್ಕಾಗಿಯೇ ಜೀವನ ಸವೆಸಿದ್ದು ಮಾತ್ರ  ಸೋಜಿಗವೇ ಸರಿ! ಇಷ್ಟೆಲ್ಲಾ  ಪ್ರಶಸ್ತಿ,  ಗೌರವಗಳು ಬಂದರೂ ತನ್ನ ಮುಗ್ಧತೆಯನ್ನು ಇನ್ನೂ ಕಾಪಾಡಿಕೊಂಡು ಬಂದಿರುವ   ಹಾಜಬ್ಬನಲ್ಲಿರುವ ಮತ್ತೊಂದು ವಿಶೇಷತೆಯೆಂದರೆ ಸರಳತೆ, ಬದುಕಿನ ವಿಧಾನ ಮತ್ತು  ಅದೇ ಅತೀ ಸರಳ ಉಡುಪು! ಯಾರಾದರೂ ಸನ್ಮಾನಿಸಲು ಕಾರು ಕಳಿಸುವುದಾಗಿ ಹೇಳಿದರೆ ಅದನ್ನು ನಯವಾಗಿ ತಿರಸ್ಕರಿಸಿ ಬಸ್ಸಿನಲ್ಲೇ ಪ್ರಯಾಣ ಮಾಡುತ್ತಾರೆ. ಮೂರ್ನಾಲ್ಕು ವಿದೇಶಗಳಿಗೆ ಹೋಗಿ ಬಂದಿರುವ ಹಾಜಬ್ಬನವರು ಅಲ್ಲಿನ ವಿಲಾಸಿ ಹೋಟೆಲ್ ಗಳಲ್ಲಿ ತಂಗಲು ಮುಜುಗರಕ್ಕೀಡಾಗುತ್ತಾರೆ ಮತ್ತು ದುಬಾರಿ  ತಿಂಡಿಯ ಬಗ್ಗೆ ತಿಳಿದಾಗಲಂತೂ  ತಿನ್ನಲೂ  ಹಿಂಜರಿಯುತ್ತಾರೆ! ಹಾಜಬ್ಬನವರಿಂದ  ಇನ್ನಷ್ಟು ಒಳ್ಳೆಯ ಕಾರ್ಯಗಳಾಗಲಿ, ಇವರ ಜೀವನ ಇತರರಿಗೆ  ಸ್ಫೂರ್ತಿಯಾಗಲಿ ಎಂದು ಹಾರೈಸೋಣ ಅಲ್ಲವೇ?

-ಶಂಕರಿ ಶರ್ಮ, ಪುತ್ತೂರು.

11 Responses

  1. Hema says:

    ಚೆಂದದ ಸಾಂದರ್ಭಿಕ ಬರಹ. ಹರೇಕಳ ಹಾಜಬ್ಬ ಅವರ ಶ್ರೇಷ್ಠವಾದ ಸಮಾಜಸೇವೆಗೆ ಶರಣು. ಪದ್ಮಶ್ರೀ ಪ್ರಶಸ್ತಿ ಪಡೆದ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

    • . ಶಂಕರಿ ಶರ್ಮ says:

      ಬರಹವನ್ನು ಪ್ರಕಟಿಸಿ, ಮೆಚ್ಚಿ ಪ್ರೋತ್ಸಾಹಿಸಿದ ಹೇಮಮಾಲಾ ಅವರಿಗೆ ಧನ್ಯವಾದಗಳು.

  2. ಇಂತಹ ಮಹನೀಯರು ಜನಿಸಿದ ನಮ್ಮ ನಾಡು ಧನ್ಯ
    ನಾವು ಅಕ್ಷರ ಸೇವೆ ಮಾಡೋಣ

    • . ಶಂಕರಿ ಶರ್ಮ says:

      ಪ್ರೀತಿಯ ಪ್ರೋತ್ಸಾಹಕ ಹಾಗೂ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು, ಗಾಯತ್ರಿ
      ಮೇಡಂ ಅವರಿಗೆ.

  3. ನಾಗರತ್ನ ಬಿ. ಅರ್. says:

    ನಿಸ್ವಾರ್ಥ ಸೇವೆಯ ಹರೇಕಳ ಹಾಜಬ್ಬ ಅವರು ಪರಿಚಯ ಸಕಾಲಿಕ ವಾದದ್ದು ಅವರಿಗೆ ಪದ್ಮಶ್ರೀ ಸಂದಿದ್ದು ಬಹಳಷ್ಟು ಸಂತೋಷ ಹೆಮ್ಮೆ ತಂದಿದೆ.ಇಂಥ ಲೇಖನ ಬರೆದ ನಿಮಗೆ ನನ್ನ ಧನ್ಯವಾದಗಳು ಮೇಡಂ.

    • . ಶಂಕರಿ ಶರ್ಮ says:

      ಪ್ರೀತಿಯ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು, ನಾಗರತ್ನಾ ಮೇಡಂ ಅವರಿಗೆ.

  4. ನಯನ ಬಜಕೂಡ್ಲು says:

    ಬಹಳ ಸುಂದರ ಲೇಖನ.

    • . ಶಂಕರಿ ಶರ್ಮ says:

      ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಯನಾ ಮೇಡಂ.

  5. ಹರೇಕಳ ಶ್ರೀ ಹಾಜಬ್ಬನವರ ಬಗ್ಗೆ ಬರೆದ ಶ್ರೀಮತಿ ಶಂಕರಿಯವರ ಲೇಖನ ತುಂಬಾ ಹಿಡಿಯಿತು.
    ದಿನಕ್ಕೆ ಬರಿಯ ನೂರು ಅಥವಾ ನೂರೈವತ್ತು ರೂಪಾಯಿ ಸಂಪಾದನೆ ಮಾಡುವ ಹಾಜಬ್ಬ ನಿಜವಾಗಿಯೂ ಅಕ್ಷರ ಸಂತನೇ ಸರಿ.
    ಒಳ್ಳೆಯ ಕೆಲಸ ಮಾಡಲು ದುಡ್ಡಿಗಿಂತ ಮನಸ್ಸೇ ಮುಖ್ಯವೆನ್ನುವುದು ಇಲ್ಲಿ ಇನ್ನೊಮ್ಮೆ ಸಾಬೀತಾಗಿದೆ.
    ಒಳ್ಳೆಯ ಕೆಲಸ ಮಾಡಲು ನಮ್ಮ ಬ್ಯಾಂಕ್ ಬ್ಯಾಲೆನ್ಸ್ ಆಗಲಿ ವಿದ್ಯಾರ್ಹತೆಯ ಡಿಗ್ರೀಗಳಾಗಲಿ ಯಾವುದೇ ಸಾರ್ಥಕತೆಯನ್ನು ಪಡೆಯುವುದಿಲ್ಲ.
    ಶಂಕರಿಯವರೆ, ನಿಮ್ಮ ಲೇಖನ ಓದಿ, ಹಾಜಪ್ಪನವರ ಮುಂದೆ ನಾವು ಕುಬ್ಜರಾಗಿ ಹೋದೆವು ಎಂದೆನಿಸಿ, ಕಣ್ಣು ಕೂಡಾ ತೇವವಾಯಿತು. ಹಾಜಪ್ಪ ಕೆಲವು ಜನರ ಕಣ್ಣು ತೆರೆಯಲು ಕಾರಣರಾದರು.

  6. ಮಹೇಶ್ವರಿ ಯು says:

    ನಿಜ. ಅವರ ಸಾಧನೆಯ ಮುಂದೆ ನಾವು ತುಂಬಾ ಸಣ್ಣ ವರು. ಊರಿನ ಒಳಿತಿಗಾಗಿ ಅಷ್ಟೊಂದು ತ್ಯಾಗ ಮಾಡಿದ ಅವರ ಸಾಂಸಾರಿಕ ಬದುಕು ಹಸನಾಗಿ ಎಂದು ಮನಸಾರೆ ಹಾರೈಸುತ್ತೇನೆ.

  7. Padma Anand says:

    ನಮಗೆ ಸಾಮಾಜಿಕ ನೆಲೆಗಟ್ಟನ್ನು ಕೊಟ್ಟಿರುವ ಸಮಾಜಕ್ಕೆ ಸೇವೆ ಸಲ್ಲಿಸಲು ದೃಡನಿಶ್ವಯವೊಂದಿದ್ದರೆ ಸಾಕು ಎಂಬ ಸರಳ ಸತ್ಯವನ್ನು ಮತ್ತೊಮ್ಮೆ ನಿರೂಪಿಸುವ ಶ್ರೀ ಹಾಜಬ್ಬನವರ ಕುರಿತಾದ ತಮ್ಮ ಆಪ್ತ ಲೇಖನ ಅವರಿಗೆ ಪದ್ಮಶ್ರೀ ಪುರಸ್ಕಾರ ದೊರೆತಿರುವ ಈ ಸಂದರ್ಭದಲ್ಲಿ ಸಮಯೋಚಿತವಾಗಿದೆ.

Leave a Reply to . ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: