ಈ(ಗೋ)ಗ ಬದುಕು

ಈಗೆಲ್ಲಾ ಬದುಕು
ಹಾಗೋ, ಹೀಗೋ,
ಈಗೋಗಳ ಆಗರ
ಬತ್ತಿ ಹೋಗುತ್ತಿದೆ ಪ್ರೀತಿಯ
ಸೆಲೆಯೆಲ್ಲ
ಗೆಲುವಿಗೆ ಇಲ್ಲಿ ಬೆಲೆ ಇಲ್ಲ
ಸೋಲನ್ನಾರೂ ಒಪ್ಪುತ್ತಿಲ್ಲ
ಯಾರೆಲ್ಲರಿಗಿಂತ ಎತ್ತರ
ಎನ್ನುವ ಭರಾಟೆಯಲ್ಲಿ
ಒಬ್ಬರೊಬ್ಬರ ನಡುವೆ
ದೊಡ್ಡದಾಗುತ್ತಿರುವ ಕಂದರ
ನೀ ನನಗಿದ್ದರೆ ನಾ ನಿನಗೆ
ಎಂಬುದೆಲ್ಲ ಹೋಯಿತೆಲ್ಲಿಗೆ
ಈಗೆಲ್ಲಾ ನಿನ್ನ ದಾರಿ ನಿನಗೆ
ನನ್ನ ದಾರಿ ನನಗೆ
ಬದಲಾವಣೆ ಬೇಕು ಸರಿ
ಇದಲ್ಲ ಬದಲಾಗುವ ಪರಿ
ಎತ್ತರದವರಾದರೇನು
ಮತ್ತವರಲ್ಲಿ ತೋರಿಸಿ ಕರುಣೆ
ಉತ್ತುಂಗಕ್ಕೇರಿದರೇನು
ಇರಲಿ ಸತ್ಸಂಗದಾಚರಣೆ
ಹುಟ್ಟಿ ಬೆಳೆದಳಿಯುವುದು
ಜೀವ ಜಗದ ನಿಯಮ
ಅದರೊಳಗಣ
ದಾರಿಯಾಗಬೇಕಿದೆ
ಸುಂದರ ಸುಗಮ
–ನಟೇಶ
ಸಕಾರಾತ್ಮಕ ಚಿಂತನೆಯುಳ್ಳ ಕವನ ಚೆನ್ನಾಗಿದೆ ಸಾರ್.
ಸುಂದರ ಕವನ. ಸ್ವಲ್ಪ ಬಾಗಲು ಕಲಿತಾಗ ನಿಜಕ್ಕೂ ಬದುಕು ಬಹಳ ಸುಂದರ
ಸಧ್ಯದ ವಾಸ್ತವ ಜಗತ್ತಿನ ಅನಾವರಣ ಸರಳವಾಗಿ ಸುಂದರವಾಗಿ ದೆ,
ಕೂಡಿ ಬಾಳಿದರೆ ಸ್ವರ್ಗ ಸುಖ!!.. ಸಮಾಜದಲ್ಲಿ ಸುಂದರ ಬದುಕಿಗೆ ಇರುವ ಸೂತ್ರದ ಗವಾಕ್ಷಿಯನ್ನು ತೆರೆದಿಟ್ಟ ಕವನ ಬಹಳ ಚೆನ್ನಾಗಿದೆ.
ನೇರ ದಾರಿಯನ್ನು ಬಿಟ್ಟು ಅಂಕುಡೊಂಕಾಗಿ ಓಡುತ್ತಿರುವ ಮನಗಳನ್ನು ಸರಿದಾರಿಗೆ ಹಚ್ಚುವಲ್ಲಿ ಕವನದ ಸಾಲುಗಳು ನೆರವಾಗುವಂತಿವೆ. ಸುಂದರ ಕವನ. ಅಭಿನಂದನೆಗಳು