ಜ್ಯೋತಿರ್ಲಿಂಗ 2-ಶ್ರೀಶೈಲ ಮಲ್ಲಿಕಾರ್ಜುನ

Share Button

ಮಹಾದೇವಿಯಕ್ಕನ ಆರಾಧ್ಯ ದೈವವಾದ ಚನ್ನಮಲ್ಲಿಕಾರ್ಜುನನ ದರ್ಶನ ಮಾಡೋಣ ಬನ್ನಿ. ಮಂಗಳಕರನೂ, ಚೆಲುವನೂ ಆದ ಶಿವನ ಜ್ಯೋತಿರ್ಲಿಂಗ ಸ್ವರೂಪನಾದ ಮಲ್ಲಿಕಾರ್ಜುನನ್ನು ಅಕ್ಕ ತನ್ನ ಕನಸಲ್ಲಿ ಕಂಡದ್ದಾದರೂ ಹೇಗೆ?

ಅಕ್ಕಾ ಕೇಳವ್ವಾ, ನಾನೊಂದ ಕನಸ ಕಂಡೆ
ಅಕ್ಕಿ, ಅಡಕೆ, ತೆಂಗಿನಕಾಯಿ ಕಂಡೇನವ್ವಾ
ಚಿಕ್ಕ ಚಿಕ್ಕ ಜಡೆಗಳ, ಸುಲಿಪಲ್ಲ ಗೊರವನು
ಬಿಕ್ಷಕೆ ಬಂದುದ ಕಂಡೇನವ್ವ
ಮಿಕ್ಕು ಮೀರಿ ಹೋಹನಾ, ಬೆಂಬತ್ತಿ ಕೈ ಹಿಡಿದೆನವ್ವ
ಚನ್ನ ಮಲ್ಲಿಕಾರ್ಜುನನ ಕಂಡು ಕಣ್ತೆರೆದೆನವ್ವ.

ಮಲ್ಲಿಕಾರ್ಜುನನ್ನು ಅರಸುತ್ತಾ, ಕಲ್ಯಾಣದಿಂದ ಶ್ರೀಶೈಲದವರೆಗೆ ಕಾಲ್ನಡಿಗೆಯಲ್ಲಿಯೇ ಬರುವ ಮಹಾದೇವಿಯಕ್ಕ, ತನ್ನ ಒಲವನ್ನು, ಭಕ್ತಿ ಶ್ರದ್ಧೆಗಳಿಂದ ನಿವೇದಿಸುವ ಬಗೆ ಅನನ್ಯ. ಶ್ರೀಶೈಲದ ಬಳಿಯಲ್ಲಿರುವ ಕದಳೀವನದಲ್ಲಿ ಮಲ್ಲಿಕಾರ್ಜುನನನ್ನು ಆರಾಧಿಸುತ್ತಾ, ಅಲ್ಲಿಯೇ ಶಿವನಲ್ಲಿ ಐಕ್ಯಳಾಗುವಳು. ಅಕ್ಕನ ಅರಿವಿನ ಒಳಗಣ್ಣು ತೆರೆಸಿದ ಮಲ್ಲಿಕಾರ್ಜುನನ ಮಹಿಮೆ ಕೇಳಿ ತಿಳಿಯೋಣ ಬನ್ನಿ.

ಆಂಧ್ರ ಪ್ರದೇಶದ, ಕರ್ನೂಲಿನ ನಲ್ಲಮಲ ಪರ್ವತಶ್ರೇಣಿಯ, ಶ್ರೀಶೈಲದಲ್ಲಿ ನೆಲೆಯಾಗಿರುವ ಈ ಜ್ಯೋತಿರ್ಲಿಂಗ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿದೆ. ಬೆಟ್ಟದ ಬುಡದಲ್ಲಿ ಹರಿಯುವ ಕೃಷ್ಣಾ ನದಿ ಆ ಸ್ಥಳವನ್ನು ಪಾವನಗೊಳಿಸಿದ್ದಾಳೆ. ಈ ಸ್ಥಳವು – ಶ್ರೀಶೈಲ, ಶ್ರೀಪರ್ವತ, ಶ್ರೀಗಿರಿ, ಶ್ರೀನಾಗ, ಶ್ರೀಧಾಮ ಎಂಬ ನಾಮಧೇಯಗಳಿಂದ ಪ್ರಸಿದ್ಧವಾಗಿದೆ. ಈ ಪ್ರದೇಶದಲ್ಲಿ ಜ್ಯೋತಿರ್ಲಿಂಗದೊಂದಿಗೇ, ಶಕ್ತಿಪೀಠವನ್ನೂ ಕಾಣುವ ಭಾಗ್ಯ ಯಾತ್ರಿಗಳದು. ಪಾರ್ವತಿಯು ‘ಮಲ್ಲಿಕ’ ಎಂದೂ, ಪರಶಿವನು ‘ಅರ್ಜುನ’ ಎಂದೂ ಕರೆಯಲ್ಪಡುತ್ತಾರೆ. ಮಲ್ಲಿಕ ಎಂದರೆ ಪಾರ್ವತಿ ಎಂದೂ, ಅರ್ಜುನ ಎಂದರೆ ದೊರೆ, ಒಡೆಯ ಎಂಬರ್ಥ. ಹಾಗಾಗಿ ಈ ಜ್ಯೋತಿರ್ಲಿಂಗವು ‘ಮಲ್ಲಿಕಾರ್ಜುನ’ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು. ಇಲ್ಲಿ, ಹಲವು ಪೌರಾಣಿಕ ಪ್ರಸಂಗಗಳು ಪ್ರಚಲಿತವಾಗಿವೆ.

ಒಮ್ಮೆ ಶಿವ ಪಾರ್ವತಿಯರು ತಮ್ಮ ಮಕ್ಕಳಾದ ಗಣಪತಿ, ಕಾರ್ತಿಕೇಯರಿಗೆ ಒಂದು ಸವಾಲನ್ನು ಹಾಕುವರು – ಈ ಲೋಕವನ್ನು ಯಾರು ಮೊದಲು ಸುತ್ತಿ ಬರುವರೋ, ಅವರಿಗೇ ಮೊದಲು ಮದುವೆ ಮಾಡಲಾಗುವುದು ಎಂದು. ಷಣ್ಮುಖನು ಉತ್ಸಾಹದಿಂದ ತನ್ನ ವಾಹನವಾದ ನವಿಲನ್ನೇರಿ ಭೂ ಪ್ರದಕ್ಷಿಣೆ ಮಾಡಲು ಹೊರಟು ಬಿಡುತ್ತಾನೆ. ಜಾಣನಾದ ಗಣಪತಿಯು ನಸುನಗುತ್ತಾ, ಜಗತ್ತಿಗೇ ಒಡೆಯರಾದ ತನ್ನ ಮಾತಾ ಪಿತೃಗಳ ಸುತ್ತ ಪ್ರದಕ್ಷಿಣೆ ಹಾಕಿ, ತಾನೇ ಪಂದ್ಯದಲ್ಲಿ ವಿಜೇತನೆಂದು ಸಾರಿದ. ಅವನ ಚಾಣಾಕ್ಷತನವನ್ನು ಮೆಚ್ಚಿದ ಮಾತಾಪಿತೃಗಳು ಗಣೇಶನ ಮದುವೆಯನ್ನು ಸಿದ್ದಿ, ಬುದ್ದಿ ಮತ್ತು ರಿದ್ದಿಯರೊಂದಿಗೆ ನೆರವೇರಿಸುವರು. ಈ ಮದುವೆಯ ಸಾಂಕೇತಿಕ ಅರ್ಥ ಹೀಗಿದೆ -ಸಿದ್ದಿ, ಬುದ್ದಿ, ರಿದ್ದಿ ಎಂದರೆ ಯಶಸ್ಸು, ವಿದ್ಯೆ ಹಾಗೂ ಸಂಪತ್ತು ಹಾಗಾಗಿ ಗಣಪತಿಯನ್ನು ನಾವು – ಸಿದ್ದಿ ವಿನಾಯಕನೆಂದೂ, ವಿದ್ಯಾಗಣಪತಿಯೆಂದೂ, ವಿಘ್ನವಿನಾಶಕನೆಂದೂ ಕರೆಯುತ್ತೇವೆ ಅಲ್ಲವೇ? ಇನ್ನು ಲೋಕವನ್ನೆಲ್ಲಾ ಸುತ್ತಿ ದಣ ದ ಕಾರ್ತಿಕೇಯನಿಗೆ, ವಿಘ್ನೇಶನ ಯಶಸ್ಸಿನ ಸಂಗತಿ ಕೇಳಿ ನಿರಾಸೆಯಾಯಿತು. ಹಿಮಾಲಯದ ಹಂದರದಲ್ಲಿದ್ದ ಕೈಲಾಸದಿಂದ ಹೊರಟು ದಕ್ಷಿಣ ಭಾರತದಲ್ಲಿದ್ದ ಕ್ರೌಂಚ ಗಿರಿ ಶಿಖರವನ್ನೇರಿ ಧ್ಯಾನಸ್ಥನಾಗಿ ಕುಳಿತ. ಶಿವ ಪಾರ್ವತಿಯರು ತಮ್ಮ ಮಗನನ್ನು ಶಾಂತಗೊಳಿಸಲು ಬಂದವರು, ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮರುಳಾಗಿ ಶ್ರೀಶೈಲ ಶಿಖರzಲ್ಲಿ ನೆಲೆಯಾದರು. ಹೀಗೆ ಭಾರತವರ್ಷದ ಉತ್ತರ ದಿಕ್ಕಿನಲ್ಲಿರುವ ಕೈಲಾಸದಲ್ಲಿ ನೆಲಸಿದ್ದ ಶಿವ ಪಾರ್ವತಿಯರು ದಕ್ಷಿಣದಲ್ಲಿರುವ ಆಂಧ್ರಕ್ಕೆ ಬಂದು ನೆಲಸಿದರು. ಹೀಗೆ ಶೈವರು, ಭಾರತದ ಉದ್ದಗಲದಲ್ಲೂ ಶಿವನ ದೇಗುಲಗಳನ್ನು ನಿರ್ಮಿಸಿ, ದೇಶವನ್ನು ಧಾರ್ಮಿಕವಾಗಿ ಒಗ್ಗೂಡಿಸುವುದರಲ್ಲಿ ಸಫಲರಾದರು.

ಶ್ರೀಶೈಲ ಮಲ್ಲಿಕಾರ್ಜುನ ದೇಗುಲ

ಇನ್ನು, ತನ್ನ ದೇಹವನ್ನೇ ದೇಗುಲವನ್ನಾಗಿ ಮಾಡಿಕೊಂಡ ಸಾಧಕನ ಕತೆಯನ್ನು ಕೇಳೋಣವೇ? – ಪರ್ವತನೆಂಬ ಮಹಾಶಿವಭಕ್ತನು ದೀರ್ಘಕಾಲ ತಪವನ್ನಾಚರಿಸಿದ. ಪರಶಿವನು ಪ್ರತ್ಯಕ್ಷನಾದಾಗ ಅವನು ಬೇಡಿದ ವರವೇನು ಗೊತ್ತೆ? ತನ್ನ ದೇಹದ ಮೇಲೆ ಶಿವನು ನೆಲೆಗೊಳ್ಳಬೇಕು. ಅಬ್ಬಾ ವಿಶ್ವಕ್ಕೇ ಒಡೆಯನಾದ ಆ ಆದಿದೈವವನ್ನು ಹೀಗೆ ಬೇಡಿದ ಭಕ್ತ, ಶಿವನು ನೆಲೆಸಲು ಸಾಧ್ಯವಾಗುವಂತೆ, ತಾನೊಂದು ಪರ್ವತವಾಗಿ ರೂಪಾಂತರ ಹೊಂದುವನು. ಅವನು ಬೇಡಿದ ಮತ್ತೆರೆಡು ವರಗಳೂ ವಿಶಿಷ್ಟವಾಗಿವೆ – ಸಮಸ್ತ ದೇವಾನು ದೇವತೆಗಳೂ ಇಲ್ಲಿ ನೆಲೆಸಲಿ, ಎಲ್ಲಾ ಪುಣ್ಯತೀರ್ಥಗಳೂ ಇಲ್ಲಿ ಉಗಮವಾಗಲಿ ಹಾಗೂ ಜಾತಿ, ಮತ, ಪಂಥಗಳ ಬೇಧವೆಣಿಸದೆ, ಇಲ್ಲಿ ಆಗಮಿಸುವ ಎಲ್ಲಾ ಭಕ್ತರಿಗೂ ಮುಕ್ತಿ ದೊರೆಯುವಂತಾಗಲಿ. ಶಿವಭಕ್ತನಾದ ಪರ್ವತನು ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ. ಮೇಲ್ವರ್ಗ, ಕೆಳವರ್ಗ ಎಂಬ ಬೇಧ ಭಾವವಿಲ್ಲದೆ, ಎಲ್ಲ ಜನಾಂಗದವರೂ, ಶಿವನಿಗೆ ಅಭಿಷೇಕ ಮಾಡಿ, ಬಿಲ್ಪತ್ರೆ ಮುಡಿಸುವ ಅವಕಾಶವಿದೆ. ಅಂದಿನ ಕಾಲದಲ್ಲೇ, ಕುಲದಲ್ಲಿ ಮೇಲಾವುದೋ ಹುಚ್ಚಪ್ಪ, ಕುಲದಲ್ಲಿ ಕೀಳಾವುದೋ? ಎಂಬ ತತ್ವವನ್ನು ಬೋಧಿಸಿದ ಮಹಾನುಭಾವ ಪರ್ವತನು. ಹಾಗಾಗಿ ಈ ಕ್ಷೇತ್ರವನ್ನು ‘ಶ್ರೀ ಪರ್ವತಸ್ವಾಮಿ ಕ್ಷೇತ್ರ’ವೆಂದು ಕರೆಯುತ್ತಾರೆ.

ಈ ಕ್ಷೇತ್ರದ ಮತ್ತೊಂದು ಐತಿಹ್ಯ ಕೇಳೋಣವೇ – ಹಾಡುತ್ತಾ, ನಲಿಯುತ್ತಾ, ಮಲ್ಲಿಗೆ ಮಾಲೆಯನ್ನು ಹೆಣೆಯುತ್ತಾ, ಶಿವನಿಗೆ ಅರ್ಪಿಸುತ್ತಿರುವವಳ ಕಾಲ್ಗೆಜ್ಜೆಯ ನಾದ ಕೇಳಿಸುತ್ತಿದೆಯಲ್ಲವೇ? ಇವಳೇ ಚಂದ್ರನಂತೆ ಶೋಭಿಸುತ್ತಿರುವ ರಾಜಕುವರಿ ಚಂದ್ರಾವತಿ. ತನ್ನ ಅರಮನೆಯಲ್ಲಿ ನಡೆದ ಕೆಲವು ಅಹಿತಕರ ಘಟನೆಗಳಿಂದ ಮನನೊಂದು, ಈ ಬೆಟ್ಟದ ಮೇಲೆ ತನ್ನ ಸಹಚರರೊಂದಿಗೆ ನೆಲಸುತ್ತಾಳೆ. ಅಲ್ಲೊಂದು ಸೋಜಿಗದ ದೃಶ್ಯವನ್ನು ಕಂಡು ವಿಸ್ಮಿತಳಾಗುತ್ತಾಳೆ. ಹಸುವೊಂದು ಲಿಂಗಾಕಾರದ ಶಿಲೆಯೊಂದರ ಮೇಲೆ ಹಾಲು ಸುರಿಸುತ್ತಿದೆ. ಮಲ್ಲಿಗೆ ಬಳ್ಳಿಗಳು ಆ ಶಿಲೆಯ ಸುತ್ತ ಹಬ್ಬಿ, ಮಲ್ಲಿಗೆ ಹೂಗಳು ಘಮ್ಮೆಂದು ಕಂಪ ಸೂಸುತ್ತಿವೆ. ಇಂತಹ ಪ್ರಕೃತಿಯ ಕೌತುಕವನ್ನು ಕಂಡ, ರಾಜಕುವರಿಯು, ಆ ಮಲ್ಲಿಗೆ ಹೂಗಳನ್ನು ಮಾಲೆ ಮಾಡಿ, ನಿತ್ಯ ಶಿವಲಿಂಗವನ್ನು ಅರ್ಚಿಸುತ್ತಾಳೆ. ಅಂದಿನಿಂದ ಸ್ವಯಂಭುವಾದ ಶಿವನು ಮಲ್ಲಿಕಾರ್ಜುನನೆಂದು ಪ್ರಖ್ಯಾತಿ ಹೊಂದುವನು. ಪ್ರಕೃತಿಯಲ್ಲಿ ದೇವರನ್ನು ಕಂಡ ಬಾಲೆ ಇವಳು. ಕವಿಗಳು ಪ್ರಕೃತಿಯ ಸೌಂದರ್ಯವನ್ನು, ತಮ್ಮ ಕವನಗಳಲ್ಲಿ ಹಾಡಿ ಹೊಗಳಿದರೆ, ಚಂದ್ರಾವತಿಯು ಕಲ್ಲಿನಲ್ಲಿ ಶಿವನನ್ನು ಕಂಡು ಆರಾಧಿಸುತ್ತಾಳೆ. ಶಿವನನ್ನು ಮಲ್ಲಿಗೆ ಮಾಲೆಯಿಂದ ಸಿಂಗರಿಸುತ್ತಾಳೆ, ಚಿನ್ನ ಬೆಳ್ಳಿಗಳಿಂದಲ್ಲ. ಪ್ರಕೃತಿಯಲ್ಲಿನ ಅಗ್ನಿ, ಪೃಥ್ವಿ, ವಾಯು, ಆಕಾಶ, ಜಲವನ್ನು ಪೂಜಿಸಿದ, ಪ್ರಾಚೀನ ಭಾರತೀಯ ಸಂಸ್ಕೃತಿಯ ಸಂಕೇತವಾಗಿ ನಿಲ್ಲುವಳು ಚಂದ್ರಾವತಿ. ವೃಷಭನು (ನಂದಿ) ಇಲ್ಲಿ ತಪಸ್ಸು ಮಾಡಿದುದರಿಂದ, ಈ ಕ್ಷೇತ್ರವನ್ನು ವೃಷಭಗಿರಿ ಎಂತಲೂ ಕರೆಯುವರು.

ಮಲ್ಲಯ್ಯ, ಮಲ್ಲಯ್ಯ ಎಂದು ಕೂಗುತ್ತಾ ಬರುತ್ತಿರುವವರು ಯಾರು ಗೊತ್ತೆ, ಇವರೇ ಚೆಂಚಿಲರು, ಶ್ರೀಶೈಲದ ಬಳಿ ಇರುವ ನಲ್ಲಮಲ ಪರ್ವತ ಶ್ರೇಣಿಯಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು ಇವರ ಆರಾಧ್ಯ ದೈವ ಚೆಂಚು ಮಲ್ಲಯ್ಯ. ಬೇಟೆಗಾರನ ವೇಷ ಧರಿಸಿ, ಈ ದಟ್ಟವಾದ ಅಡವಿಗೆ ಬಂದ ಪರಶಿವನು, ಚೆಂಚು ಕನ್ಯೆಯೊಬ್ಬಳನ್ನು ಕಂಡು ಮೋಹಿತನಾಗಿ ಅವಳನ್ನು ವರಿಸುವನು. ಹೀಗೆ ಚೆಂಚಿಲರ ನೆಂಟನಾದ ಮಲ್ಲಿಕಾರ್ಜುನನು ಮಲ್ಲಯ್ಯನಾಗುವನು. ಹಿಂದುಳಿದ ವರ್ಗಗಳೂ, ಮೇಲ್ವರ್ಗ ಎಂದು ಗುರುತಿಸಲ್ಪಟ್ಟ ಧರ್ಮದ ಜೊತೆ ನಿಕಟ ಸಂಬಂಧ ಬೆಳೆಸುವ ಪರಿ ಅದ್ಭುತ.

ಶ್ರೀಶೈಲ ಮಲ್ಲಿಕಾರ್ಜುನ

ಇನ್ನು ಮಲ್ಲಿಕಾರ್ಜುನನ ಜೊತೆ ಇಲ್ಲಿ ನೆಲಸಿರುವ ಭ್ರಮರಾಂಬಿಕೆಯ ಹಿನ್ನೆಲೆಯನ್ನು ಕೇಳೋಣ ಬನ್ನಿ. ಬ್ರಹ್ಮನಿಂದ ಯಾವುದೇ ಎರಡು ಕಾಲಿನ ಅಥವಾ ನಾಲ್ಕು ಕಾಲಿನ ಜೀವಿಯಿಂದ ತನ್ನ ಹತ್ಯೆಯಾಗುವಂತಿಲ್ಲ ಎಂಬ ವರ ಪಡೆದ, ಅರುಣಾಸುರನೆಂಬ ರಕ್ಕಸನು, ಋಷಿ, ಮುನಿಗಳನ್ನು ಪೀಡಿಸುತ್ತಾ, ಜನರನ್ನು ಹಿಂಸಿಸುತ್ತಾ ಅಟ್ಟಹಾಸದಿಂದ ಮೆರೆಯುತ್ತಿದ್ದನು. ಅವನನ್ನು ಸಂಹರಿಸಲು ಸಹಸ್ರ ಸಹಸ್ರ ಭ್ರಮರಗಳ ರೂಪದಲ್ಲಿ ಬಂದ ಆದಿಶಕ್ತಿಯು ಭ್ರಮರಾಂಬಿಕೆಯಾಗಿ ಇಲ್ಲಿಯೇ ನೆಲೆಸಿದ್ದಾಳೆ. ಇಂದಿಗೂ ಭ್ರಮರದ ನಾದ ಇಲ್ಲಿ ಕೇಳಿಬರುತ್ತಿದೆ. ದೈತ್ಯನಾದ ಅರುಣಾಸುರನನ್ನು, ಪುಟ್ಟ ಪುಟ್ಟ ಭ್ರಮರಗಳು ವಿನಾಶಗೊಳಿಸುವ ಪ್ರಸಂಗ, ಸೃಷ್ಟಿಯ ರಹಸ್ಯಗಳಲ್ಲೊಂದಾಗಿ ನಿಲ್ಲುವುದು. ಈ ಶತಮಾನದಲ್ಲಿ, ಅದ್ಭುತ ಯಶಸ್ಸು ಸಾಧಿಸಿರುವ ಮಾನವನನ್ನು ಕಂಗೆಡಿಸಿರುವ ಕೊವಿಡ್ ವೈರಾಣುವಿನ ನೆನಪಾಗುವುದಲ್ಲವೇ?

ಭಾರತವರ್ಷದ ಹಲವು ಶಕ್ತಿಪೀಠಗಳಲ್ಲೊಂದಾದ ಶ್ರೀಶೈಲದ ಶಕ್ತಿ ಪೀಠ ಇಲ್ಲಿದೆ. ದಕ್ಷನ ಯಜ್ಞಕುಂಡದಲ್ಲಿ ಆಹುತಿಯಾದ ಸತಿಯನ್ನು ಹೊತ್ತ ಶಿವನ ಕೋಪ ತಣ ಸಲು, ವಿಷ್ಣು ಸುದರ್ಶನ ಚಕ್ರವನ್ನು ಪ್ರಯೋಗಿಸಿದಾಗ, ಛಿದ್ರವಾದ ಸತಿಯ ದೇಹದ ಭಾಗಗಳು ಬಿದ್ದ ಸ್ಥಳಗಳೆಲ್ಲಾ ಶಕ್ತಿ ಪೀಠವಾಗಿ ಕಂಗೊಳಿಸುತ್ತಿವೆ. ಸತಿಯ ಕುತ್ತಿಗೆಯ ಭಾಗ ಇಲ್ಲಿ ಬಿದ್ದುದರಿಂದ, ಇದೊಂದು ಪುಣ್ಯ ಕ್ಷೇತ್ರವಾಗಿದೆ. ಹೀಗೆ ಇಲ್ಲಿ ಬರುವ ಭಕ್ತಾದಿಗಳ ಇಷ್ಟಾರ್ಥಗಳನ್ನೆಲ್ಲಾ ಈಡೇರಿಸುತ್ತಾ ಶಿವ ಪಾರ್ವತಿಯರು ನೆಲಸಿರುವ ದಿವ್ಯವಾದ ಪ್ರದೇಶ ಶ್ರೀಶೈಲ.

ಇನ್ನು ಈ ಕ್ಷೇತ್ರದ ಐತಿಹಾಸಿಕ ವಿವರಗಳನ್ನು ತಿಳಿಯೋಣ ಬನ್ನಿ. ಸುಮಾರು ಮೂವತ್ತು ನಲವತ್ತು ಸಾವಿರ ವರ್ಷಗಳಿಂದಲೂ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಹಲವು ಚಿಂತನೆಗಳನ್ನು ಮೂಡಿಸಿದ ಕೀರ್ತಿ ಈ ಕ್ಷೇತ್ರಕ್ಕೆ ಸಲ್ಲುತ್ತದೆ. ಅಗ್ನಿ ಪುರಾಣದಲ್ಲಿ ಉಲ್ಲೇಖಿಸಿರುವಂತೆ ಅಸುರ ರಾಜನಾದ ಹಿರಣ್ಯಕಶ್ಯಪು ಶಿವನನ್ನು ಕುರಿತು ಈ ಸ್ಥಳದಲ್ಲಿ ತಪಸ್ಸು ಮಾಡಿದನೆಂಬ ಪ್ರತೀತಿ ಇದೆ. ಸ್ಕಂದ ಪುರಾಣದಲ್ಲಿ ತ್ರೇತಾಯುಗದಲ್ಲಿ ಶ್ರೀರಾಮನು, ದ್ವಾಪರಯುಗದಲ್ಲಿ ಪಾಂಡವರು ಶಿವನನ್ನು ಆರಾಧಿಸಿದರೆಂದೂ ನಂಬಿಕೆ ಇದೆ. ಇನ್ನು ಕಲಿಯುಗದಲ್ಲಿ ವಚನ ಸಾಹಿತ್ಯದಲ್ಲಿ ಪ್ರಮುಖರಾದ ಸಿದ್ದರಾಮ, ಅಕ್ಕ ಮಹಾದೇವಿ, ಅಲ್ಲಮ ಪ್ರಭು, ಗುಡ್ಡಾಪುರದ ದಾನಮ್ಮ ಮುಂತಾದ ಶಿವ ಶರಣರು – ಮಲ್ಲಿಕಾರ್ಜುನನ ದರ್ಶನ ಮಾಡಿ ಪುನೀತರಾಗಿದ್ದಾರೆ. ಶಂಕರರು, ಸ್ವಲ್ಪ ಕಾಲ, ಇಲ್ಲಿಯೇ ತಂಗಿದ್ದು ಸೌಂದರ್ಯ ಲಹರಿಯನ್ನು ರಚಿಸಿದರು. ಛತ್ರಪತಿ ಶಿವಾಜಿಯು ಇಲ್ಲಿ ಧ್ಯಾನ ಮಾಡಿ, ದೇವಿಯಿಂದ ಕತ್ತಿಯನ್ನು ಪಡೆದನೆಂಬ ದಾಖಲೆಯೂ ಇದೆ.

ಪುರಾತನ ಕಾಲದಲ್ಲಿ ದೇಗುಲಗಳು ಕೇವಲ ಧಾರ್ಮಿಕ ಸ್ಥಳಗಳಾಗಿರದೆ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಪ್ರಮುಖ ಪಾತ್ರ ವಹಿಸುತ್ತಿದ್ದವು. ಪುರಾಣ, ಪ್ರವಚನಗಳನ್ನು ಪಠಿಸುವ ಪಂಡಿತೋತ್ತಮರು ನೈತಿಕ ಮೌಲ್ಯಗಳನ್ನು ಬೋಧಿಸುತ್ತಿದ್ದರು. ದೇಗುಲಗಳು – ಕಲೆ, ಸಾಹಿತ್ಯ, ಸಂಗೀತ, ನೃತ್ಯಗಳ ತವರಾಗಿತ್ತು. ಮಕ್ಕಳ ವಿದ್ಯಾಭ್ಯಾಸದ ಕೇಂದ್ರವೂ ಆಗಿತ್ತು. ಕೆಲವು ಬಾರಿ ರಾಜಸಭೆಗಳು ನಡೆಯುತ್ತಿದ್ದುದೂ ಉಂಟು.

ಈ ಕ್ಷೇತ್ರದಲ್ಲಿ – ನೂರಾ ಹದಿನಾರು ಶಿಲಾ ಶಾಸನಗಳು ದೊರೆತಿವೆ. ರಾಜ ಮಹಾರಾಜರು, ಶ್ರದ್ಧಾಭಕ್ತಿಗಳಿಂದ ತಮ್ಮ ಇಷ್ಟದೈವವನ್ನು ಪೂಜಿಸುತ್ತಿದ್ದರು. ಯುದ್ಧಗಳಲ್ಲಿ ಜಯಶಾಲಿಗಳಾದಾಗ ಸುಂದರವಾದ ದೇಗುಲಗಳನ್ನು ನಿರ್ಮಿಸುತ್ತಿದ್ದರು. ಪುಲುಮಾವಿ ಶಾಸನದಲ್ಲಿ ಉಲ್ಲೇಖಿಸಿರುವಂತೆ – ಕ್ರಿ.ಶ. ಒಂದರಿಂದ ಈ ಕ್ಷೇತ್ರವನ್ನು ಆಳಿದ ರಾಜ ವಂಶದವರ ಹೆಸರು ಹೀಗಿದೆ – ಶಾತವಾಹನರು, ಇಕ್ಷ್ವಾಕು ವಂಶದವರು (ಕ್ರಿ.ಶ. 200-300)ಪಲ್ಲವರು (248-575), ವಿಶ್ನುಕುಂಡಿ ವಂಶಸ್ಥರು (375–612) ಕದಂಬರು (340-450) ಚಾಲುಕ್ಯರು, ಕಾಕತೀಯರು, ರೆಡ್ಡಿ ವಂಶಸ್ಥರು ಹಾಗೂ ವಿಜಯನಗರದ ಅರಸರು. 1325-1448 ರವರೆಗೆ ಆಳಿದ ರೆಡ್ಡಿ ರಾಜ ವಂಶದವರ ಕಾಲವನ್ನು ಸ್ವರ್ಣಯುಗವೆಂದು ಕರೆಯಲ್ಪಟ್ಟಿದೆ. ವಿಜಯ ನಗರದ ಅರಸರಾದ ಹರಿಹರರಾಯ ಹಾಗೂ ಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ ಈ ಕ್ಷೇತ್ರದ ಕೀರ್ತಿ ಎಲ್ಲೆಡೆ ವ್ಯಾಪಿಸಿತ್ತು. ನಂತರ ಬಂದ ಮೊಗಲರ ಕಾಲದಲ್ಲಿ ಹಿಂದೂ ದೇಗುಲಗಳು ಅವನತಿ ಹೊಂದಿದವು. 1800 ರಲ್ಲಿ, ಬ್ರಿಟಿಷ್ ಮೇಜರ್ ಮನ್ರೋ ಕಾಲದಲ್ಲಿ ಈ ದೇಗುಲದ ಪುರುತ್ಥಾನವಾಯಿತು.

ಶ್ರೀಶೈಲ ಶಿಖರಂ ದೃಷ್ವಾ ಪುನರ್‌ಜನ್ಮ ನ ವಿದ್ಯತೇ‘ ಶ್ರೀಶೈಲದ ಶಿಖರವನ್ನು ದರ್ಶನ ಮಾಡಿದವರಿಗೆ ಮುಕ್ತಿ ದೊರೆಯುವುದು ಎಂಬ ನಂಬಿಕೆಯಿದೆ. ಮಲ್ಲಿಕಾರ್ಜುನ ದೇಗುಲವು ದ್ರಾವಿಡ ಶೈಲಿಯ ವಾಸ್ತು ಶಿಲ್ಪವನ್ನು ಹೊಂದಿದ್ದು, ಎಲ್ಲರ ಮನ ಸೂರೆಗೊಳ್ಳುವುದು. ದೇಗುಲದ ಪ್ರಾಂಗಣದಲ್ಲಿರುವ ಕಂಬಗಳಲ್ಲಿ ಸುಂದರವಾಗಿ ಅರಳಿರುವ ಶಿಲ್ಪಕಲೆ, ಭವ್ಯವಾದ ಮುಖಮಂಟಪ, ನಾಲ್ಕು ದಿಕ್ಕಿನಲ್ಲೂ ಕಂಗೊಳಿಸುತ್ತಿರುವ ಗೋಪುರಗಳು, ಸುತ್ತಲೂ ಕೋಟೆಯಂತಹ ಎತ್ತರವಾದ ಗೋಡೆ, ಪಾತಾಳ ಗಂಗೆಯಿಂದ ಮಲ್ಲಿಕಾರ್ಜುನನ ದೇಗುಲದವರೆಗೆ ನಿರ್ಮಿಸಲಾಗಿರುವ ಮೆಟ್ಟಿಲುಗಳು ರಾಜ ಮಹಾರಾಜರ ಕೊಡುಗೆಯನ್ನ ಸ್ಮರಿಸುತ್ತಿವೆ. ಹಸಿರು ಹೊದ್ದ ಬೆಟ್ಟ ಗುಡ್ಡಗಳು, ಝುಳು ಝುಳು ಹರಿಯುತ್ತಿರುವ ಕೃಷ್ಣ ನದಿ, ಜ್ಯೋತಿ ಸ್ವರೂಪನಾದ ಮಲ್ಲಿಕಾರ್ಜುನ, ಭ್ರಮರಾಂಬಿಕೆಯ ರೂಪದಲ್ಲಿ ಪಾರ್ವತೀ ದೇವಿ, ಪಾತಾಳ ಗಂಗೆ, ಕದಳೀವನ ಇನ್ನಿತರ ಪುಣ್ಯ ಸ್ಥಳಗಳು ಯಾತ್ರಿಗಳ ಮನದಲ್ಲಿ ಅಚ್ಚಳಿಯದ ನಿಲ್ಲುವುವು, ಮಹಾದೇವಿಯಕ್ಕ ಕಂಡ ಕನಸಿನಂತೆ ನಮ್ಮ ನಿಮ್ಮೆಲ್ಲರ ಕಣ್ತೆರೆಸುವುವು.

ಜ್ಯೋತಿರ್ಲಿಂಗ ಲೇಖನ ಸರಣಿಯ ಹಿಂದಿನ ಲೇಖನ ಇಲ್ಲಿವೆ :
1-ಸೌರಾಷ್ಟ್ರದ ಸೋಮನಾಥ http://surahonne.com/?p=34427

-ಡಾ.ಗಾಯತ್ರಿದೇವಿ ಸಜ್ಜನ್

7 Responses

  1. ನಾಗರತ್ನ ಬಿ. ಅರ್. says:

    ವಚನಾಕಾರ್ತಿ ಅಕ್ಕ ಮಹಾದೇವಿಯ ವಚನದೊಂದಿಗೆ ಅವಳು ಐಕ್ಯಳಾದ ಶ್ರೀಶೈಲ ಕ್ಷೇತ್ರದ ಹಿನ್ನೆಲೆಯನ್ನು ಐತಿಹಾಸಿಕ ಪೌರಾಣಿಕ ಕಥೆಗಳಮೂಲಕ ಶ್ರೀ ಶೈಲ ಮಲ್ಲಿಕಾರ್ಜುನನ್ನು ಪರಿಚಯಿಸಿ ರುವ ಲೇಖನ ಬಹಳ ಸೊಗಸಾಗಿ ಮೂಡಿ ಬಂದಿದೆ ಧನ್ಯವಾದಗಳು ಮೇಡಂ.

  2. ನಯನ ಬಜಕೂಡ್ಲು says:

    ಬ್ಯೂಟಿಫುಲ್. ಸೊಗಸಾದ ಪ್ರವಾಸ ಕಥನ

  3. . ಶಂಕರಿ ಶರ್ಮ says:

    ಮಹಾದೇವಿಅಕ್ಕನ ಚೆನ್ನಮಲ್ಲಿಕಾರ್ಜುನನ ಬಗ್ಗೆ ಐತಿಹಾಸಿಕ, ಪೌರಾಣಿಕ ಹಿನ್ನೆಲೆಗಳನ್ನು ಸವಿಸ್ತಾರವಾಗಿ, ಸೊಗಸಾಗಿ ಸಾದರಪಡಿಸಿರುವಿರಿ..ಧನ್ಯವಾದಗಳು…ಗಾಯತ್ರಿ ಮೇಡಂ ಅವರಿಗೆ.

  4. Padma Anand says:

    ಪುಣ್ಯಕ್ಷೇತ್ರ ಶ್ರೀಶೈಲದ ಪೌರಾಣಿಕ ಹಾಗೂ ಐತಿಹಾಸಿಕ ವಿವರಣೆಗಳೊಂದಿಗೆ ಲೇಖನ ಭಕ್ತಿಪೂರ್ವಕವಾಹಿಯೂ ಇದೆ. ಅಭಿನಂದನೆಗಳು.

  5. Padmini says:

    ಸೊಗಸಾದ ಲೇಖನ!

  6. ನಿಮ್ಮ ಅಭಿಮಾನಪೂರ್ವಕ ನುಡಿಗಳಿಗೆ ವಂದನೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: