ನನ್ನಾಕೆಯ ಸುತ್ತ

Share Button


ಎಂಟನೇ ಮಾರ್ಚ್ ಅಂತರಾಷ್ಟ್ರೀಯ ಮಹಿಳಾ ದಿನದಂದು ಬೆಳಗ್ಗೆ ನನ್ನ ತೂಗು ಕುರ್ಚಿಯಲ್ಲಿ ಕಾಫಿ ಸವಿಯುತ್ತ ದಿನಪತ್ರಿಕೆಯಲ್ಲಿ ಕಣ್ಣಾಡಿಸುತ್ತಾ ಇದ್ದೆ. ಕಾಫಿಯಂತೂ ಮಯ್ಯಾ ಕಾಫಿಯನ್ನೂ ತುಸು ಹಿಂದೆ ಹಾಕಿದಂತಿತ್ತು. ಹಾಗೇ ಮಂಪರು ಬಂದು ವಿವಿಧ ಯೋಚನಾ ಲಹರಿಗಳು ಬಿಚ್ಚಿಟ್ಟವು. ನನ್ನವಳ ಬೆಳಗಿನ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗಿನ ದಿನಚರಿಯ ಮೆಲುಕು ಹಾಕಿದಾಗ ಗರಬಡಿದಂತಾಯ್ತು.

ಬೆಳಗ್ಗೆ ಎದ್ದ ಕೂಡಲೇ ಮೊದಲಿಗೆ ಸಮಯದ ನಿರ್ವಹಣೆ (Time Management) ಮಾಡಿ ದಿನದ ವೇಳಾಪಟ್ಟಿಯನ್ನೂ ಮನದಲ್ಲೇ ತಯಾರಿಸುತ್ತಾಳೆ. ನಂತರ ದಿನದ ಎಲ್ಲಾ ಕಾರ್ಯಗಳು ಪ್ರಾರಂಭ. ಸಮಯದ ನಿಷ್ಕೃಷ್ಟತೆಯೊಂದಿಗೆ ಪ್ರಾರಂಭವಾಗುತ್ತದೆ. ಬೆಳಗಿನ ಉಪಾಹಾರ ಸರಿಯಾಗಿ ಒಂಭತ್ತು ಗಂಟೆಗೆ ತಯಾರು. ಏನು ಮಾಡಬೇಕೆಂಬುದನ್ನು ಆಕೆ ಹಿಂದಿನ ದಿನವೇ ನಿರ್ಧರಿಸಿಯಾಗಿರುತ್ತದೆ. ನಂತರ 11 ಗಂಟೆಗೆ ಏನಾದರೂ ಫಲ ಹಾಗೂ ಪಾನೀಯ ಸೇವನೆ. ಮಧ್ಯಾಹ್ನ ಊಟಕ್ಕೆ 1-30 ಕ್ಕೆ ಸರಿಯಾಗಿ ತಯಾರು. ಗಡಿಯಾರ ನೋಡುವ ಅಗತ್ಯವೇ ಇಲ್ಲ. ಈ ರುಚಿಗಳ ಬಗ್ಗೆ ಆಕೆ ಯಾವ ತೂಕ, ಗಾತ್ರಗಳ ಪರಿಕರಗಳನ್ನೂ ಉಪಯೋಗಿಸದೆ ಹೇಗೆ ತಯಾರು ಮಾಡುತ್ತಾಳೆಂಬುದು ನಿಜಕ್ಕೂ ಯಕ್ಷಪ್ರಶ್ನೆ. ರುಚಿ, ಗುಣಮಟ್ಟದ ನಿರ್ವಹಣೆ (Quality Management) ನಿಜಕ್ಕೂ ಶ್ಲಾಘನೀಯ. ಇನ್ನು ಸಂಜೆ ಟೀ ಜೊತೆಗೆ ಒಂದು ಚುರುಮುರಿ 4 ಗಂಟೆಗೆ ಪ್ರತ್ಯಕ್ಷ. ನಂತರ ಸಂಜೆ 7 ಗಂಟೆಗೆ ಗ್ರೀನ್ ಟೀ ಪೇಯ. ರಾತ್ರಿ 8.30 ಗಂಟೆಗೆ ಊಟದ ನಂತರ ದಿನದ ಕಾರ್ಯಕ್ರಮ ಮುಕ್ತಾಯ.

ಊಟದ ನಂತರ ಪಾತ್ರೆಗಳ ವಿಲೇವಾರಿ ಇದನ್ನು ಸ್ಥಳನಿರ್ವಹಣೆ (Space Management) ಎಂದು ಕರೆಯೋಣವೇ? ಇದು ನಿಜಕ್ಕೂ ಬಹಳ ಕಿರಿಕಿರಿ ನೀಡುವ ಕೆಲಸ. ಆದರೂ ತಾಳ್ಮೆಯಿಂದ ನಿರ್ವಹಿಸುತ್ತಾಳೆ. ಅಡಿಗೆ ಮಾಡುವಾಗ ಎರಡೆರಡು ಬರ್ನರ್‌ಗಳನ್ನು ಉಪಯೋಗಿಸಲು ಸಮಯ-ನಿರ್ವಹಣೆ ( Time Management ) ಗೊತ್ತಿರಬೇಕು. ಪಾತ್ರೆಗಳನ್ನು ಸುಮ್ಮನೇ ಗುಡ್ಡಹಾಕದೆ ಇದ್ದ ಪಾತ್ರೆಗಳನ್ನೇ ಬಳಸಿ ಉಪಯೋಗಿಸುವ ದ್ರವ್ಯಸಾಧನ ನಿರ್ವಹಣೆಯಲ್ಲಿ (Resource Management) ಈಕೆ ಪರಿಣಿತಳು. ಅಲ್ಲದೆ ಆಗಾಗ ಬರುವ ಫೋನ್ ಕರೆಗಳು, ಕಾಲಿಂಗ್‌ಬೆಲ್, ಪೋಸ್ಟ್‌ಮೆನ್, ಕೊರಿಯರ್ ಮೆನ್, ಸೇಲ್ಸ್‌ಮೆನ್, ಇತ್ಯಾದಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಮಲ್ಟಿ ಟಾಸ್ಕ್ ಎಬಿಲಿಟಿ ಮ್ಯಾನೇಜ್‌ಮೆಂಟ್‌ನಲ್ಲಿ (Multi Task Ability Management) ಕೂಡ ಪರಿಣಿತಳು.

ಸಣ್ಣಪುಟ್ಟ ಅವಘಡಗಳಾದಾಗ ಅದೂ ಅಡಿಗೆ ಮನೆಯಲ್ಲಿ, ಬಾತ್‌ರೂಮ್‌ಗಳಲ್ಲಿ ಗಾಭರಿಯಾಗದೆ, ಧೃತಿಗೆಡದೆ ನಿಭಾಯಿಸುವ ಸಮಯಪ್ರಜ್ಞೆ, ಸಾಮಾನ್ಯ ಜ್ಞಾನ ಸಾಕಷ್ಟಿದೆ. ಇದನ್ನೇ ಬಿಕ್ಕಟ್ಟು ನಿರ್ವಹಣೆ (Crisis Management ) ಎಂದು ಕರೆಯುವುದು. ಇನ್ನು ರಾತ್ರಿ ಊಟದ ವೇಳೆಗೆ ಅಕಸ್ಮಾತ್ ಮಾಡಿರುವ ಅಡಿಗೆ ಸ್ವಲ್ಪ ಕೊರತೆ ಉಂಟಾದರೆ ಅವುಗಳ ಎನ್‌ಲಾರ್ಜ್ ಎಡಿಷನ್ (Enlarged Edition) ಅಥವಾ Revised Enlarged Edition ಮೂಲಕ ನ್ಯೂನತೆಗಳನ್ನು ಪರಿಹರಿಸಿ ಹೊಸರುಚಿ ಉಂಟುಮಾಡುತ್ತಾಳೆ. ಇದೂ ಬಿಕ್ಕಟ್ಟು ನಿರ್ವಹಣೆಯ ಇನ್ನೊಂದು ಮುಖ.

ಅಡಿಗೆ ಮನೆಯ ದಿನಿಸು, ತರಕಾರಿ ಇತರೇ ಸಾಮಗ್ರಿಗಳ ಶೇಖರಣೆ ಹಾಗೂ ತಪಶೀಲು ಪಟ್ಟಿ (Inventory) ಜವಾಬ್ದಾರಿ ಸುಲಭವಲ್ಲ. ಇದನ್ನು ಪದಾರ್ಥ ನಿರ್ವಹಣೆ (Materials Management) ಎನ್ನುತ್ತಾರೆ. ಇದರಲ್ಲೂ ಈಕೆ ನಿಷ್ಣಾತೆ. ಈಕೆಗೆ ಜಪಾನಿನ ಜೆ.ಐ.ಟಿ. (JIT-Just in Tim) ಮ್ಯಾನೇಜ್‌ಮೆಂಟ್‌ನಲ್ಲಿ ಭಾರಿ ನಂಬಿಕೆ. ಯಾವ ಸರಕನ್ನು ಮಣಗಟ್ಟಲೇ ಶೇಖರಿಸಿಡುವ ಖಯಾಲಿ ಇಲ್ಲ. ಬೇಕಾದಾಗ ಖರೀದಿಸು, ಬಳಸು ಎಂಬ ಜಪಾನಿನ ಪ್ರಖ್ಯಾತವಾದ ವ್ಯವಸ್ಥೆಯನ್ನು ಅಕ್ಷರಶಃ ಪಾಲಿಸುತ್ತಾಳೆ.

PC: Internet

ಮನೆಯ ಎಲ್ಲ ಆರ್ಥಿಕ ವ್ಯವಹಾರಗಳು ಆರ್ಥಿಕ ನಿರ್ವಹಣೆ (Finance Management) ಕೂಡ ನನ್ನಾಕೆಯ ಹೆಗಲಿಗೆ. ಇದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾಳೆ. ತಿಂಗಳ ಆಯವ್ಯಯದ (Budget) ತಯಾರಿ ನಿರ್ವಹಣೆ ಎಲ್ಲಾ ಅವಳದೇ. ಇದುವರೆಗೂ ಕೊರತೆ ಬಜೆಟ್ ಆಗಿದ್ದು ನೆನಪಿಲ್ಲ. ಯಾವಾಗಲೂ ಉಳಿತಾಯದ ಬಜೆಟ್‌ನ್ನೇ ತಯಾರಿಸಿರುತ್ತಾಳೆ. ಇದು ಸಾಲದೆಂಬಂತೆ ತೋಟದ ನಿರ್ವಹಣೆ, ಮನೆಯ ಶುಚಿತ್ವ, ಕೆಲಸದವಳ, ತೋಟದವನ ಮೇಲ್ವಿಚಾರಣೆ, ಇವಿಷ್ಟು ಇವಳ ಹೆಗಲಿಗೆ ಏರಿದ ಜವಾಬ್ದಾರಿಗಳು. ಇದನ್ನೂ ಕಾರ್ಮಿಕ ನಿರ್ವಹಣೆ (Labour Management) ಎಂದು ಕರೆಯುತ್ತಾರೆ. ಮನೆಗೆ ಅಕಾಲಿಕ ಅತಿಥಿ / ಸ್ನೇಹಿತರ ದಂಡು ಆಗಮಿಸಿದಾಗ ಅಡಿಗೆಯ ಕ್ವಾಲಿಟಿ, ಕ್ವಾಂಟಿಟಿ ಗುಂಪು ನಿರ್ವಹಣೆಯನ್ನೂ (Crowd Management) ಅಚ್ಚುಕಟ್ಟಾಗಿ ನಿರ್ವಹಿಸುತ್ತಾಳೆ.

ಹಾಲು, ತರಕಾರಿ, ದಿನಸಿ ಇತರ ಪರಿಕರಗಳ ಖರೀದಿ ಹಾಗೂ ವ್ಯವಸ್ಥೆಗಳ (Purchase Management) ನಿರ್ವಹಣೆಯಲ್ಲಿ ಈಕೆ ಎತ್ತಿದ ಕೈ. ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾಳೆ. ಇವೆಲ್ಲವುಗಳ ನಡುವೆ ಮನೆಮಂದಿಗಳಲ್ಲಿ ಮನಸ್ತಾಪ, ತಕರಾರು ಜಗಳ ಉದ್ಭವವಾದರೆ ಇವಳ ಮದ್ಯಸ್ಥಿಕೆ ಅನಿವಾರ್‍ಯ. ಇವಳ ಜನರ ನಿರ್ವಹಣೆಯ (Personal Management) ಚತುರತೆಗೆ ಎಲ್ಲರೂ ದಂಗಾಗುತ್ತಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದು ಸಾಮರಸ್ಯ ಮೂಡುತ್ತದೆ.

ಇವೆಲ್ಲವುಗಳ ನಡುವೆ ಪ್ರವಾಸಗಳ ಗಡಿಬಿಡಿ. ಪ್ರವಾಸ ನಿರ್ವಹಣೆಯಲ್ಲೂ (Travel Management) ಈಕೆ ಎತ್ತಿದ ಕೈ. ಒಂದು ಕೈಪಿಡಿಯನ್ನೇ ತಯಾರಿಸಿ ಇಟ್ಟಿದ್ದಾಳೆ. ಅದರ ಪ್ರಕಾರ ಎಲ್ಲಾ ತಯಾರಿ ಮಾಡುತ್ತಾಳೆ.

ಮಗುವಾದ ಮೇಲಂತೂ ಅದರ ನಿರ್ವಹಣೆಯಲ್ಲಿ (Pediatric Management) ತನ್ನ ಕೌಶಲವನ್ನು ತೋರಿಸಿದ್ದಾಳೆ.
ಇಷ್ಟೆಲ್ಲದರ ಮಧ್ಯೆ ಮನೆಯಾಕೆ ಹೊರಗೆ ಹೋಗಿ 8 ಗಂಟೆಗಳ ಕಾಲ ಕಾರ್ಯನಿರ್ವಹಿಸಿ ಮನೆಯನ್ನು ಸರಿದೂಗಿಸಿಕೊಂಡು ಹೋಗುವುದು ಸಾಮಾನ್ಯರಿಂದ ಸಾಧ್ಯವಿಲ್ಲ ಎಂದು ನನ್ನ ಅನಿಸಿಕೆ. ಹೀಗೆ ಮನೆಯೊಡತಿಯ ಕಾರ್ಯ ಅದೊಂದು ಧ್ಯಾನ, ದಿನಚರಿ, ಕಲೆ, ವಿಜ್ಞಾನ, ಅನುಭೂತಿ, ಸೇವೆ, ಗೌರವ ಮೌಲ್ಯ ಎಲ್ಲವನ್ನೂ ಒಳಗೊಂಡಿದೆ.

ಇದು ನನ್ನೊಡತಿಗೆ ಮಾತ್ರವಲ್ಲ ವಿಶ್ವದ ಎಲ್ಲಾ ಮಹಿಳೆಯರಿಗೂ ಅನ್ವಯ. (Management Institute) ಆಡಳಿತ ಸಂಸ್ಥೆಗಳಲ್ಲಿ ಕಲಿಸುವ ಆದರೆ, ಅದಕ್ಕೂ ಹೆಚ್ಚಿನ ಕೌಶಲ್ಯ, ಜಾಣತನ, ಜಾಣ್ಮೆ, ಕೈಚಳಕ ಮಹಿಳೆಯಲ್ಲಿದೆ. ಈ ಸಂಸ್ಥೆಗಳಿಗೆ ಮಹಿಳೆ ಸವಾಲಿನಂತಿದ್ದಾಳೆ. ಮೇಲೆ ಒಕ್ಕಣಿಸಿದ ಸುಮಾರು ಹದಿನೈದು ಕಲಾಕೌಶಲ್ಯಗಳನ್ನು (Management Techniques) ಲೀಲಾಜಾಲವಾಗಿ ಅಳವಡಿಸಿಕೊಳ್ಳುತ್ತಾಳೆ.

ಇವರೆಲ್ಲರಿಗೂ ನನ್ನ ಒಂದು ದೊಡ್ಡ ಸಲಾಂ. ನನ್ನ ದೃಷ್ಟಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನ ಪ್ರತಿನಿತ್ಯ ಆಚರಿಸಬೇಕಾದುದು. ಇದರ ಬಗ್ಗೆ ನೀವೇನಂತೀರಿ?

ದುಂಡಿರಾಜರ ಹನಿಗವನದೊಂದಿಗೆ ಈ ಲೇಖನ ಮುಕ್ತಾಯಗೊಳಿಸೋಣವೇ?

ಪ್ರಿಯ ನಿನ್ನ
ಮುಖವೇಕೆ ಹೀಗೆ
ಕಪ್ಪಿಟ್ಟಿದೆ.
ಏನು ಮಾಡಲಿ ಪ್ರಿಯೆ
ಎದುರಿಗೆ ನೀ ಮಾಡಿದ
ಉಪ್ಪಿಟ್ಟಿದೆ!


-ಕೆ.ರಮೇಶ್.

14 Responses

  1. ನಾಗರತ್ನ ಬಿ. ಅರ್. says:

    ಲೇಖನ ನನ್ನವಳ ಸುತ್ತ ಹೆಸರೇ ಹೇಳುವಂತೆ ಮಡದಿಯ ಚಾಕಚಕ್ಯತೆ ಜಾಣ್ಮೆ ಕೌಶಲ್ಯ ಸಹನೆ.. ಎಲ್ಲವನ್ನೂ ಅನಾವರಣಗೊಳಿಸಿ … ಕೊನೆಗೆ ಕೊಟ್ಟಿರುವ ಪಂಚು..ಹಾಗೂ ಎಲ್ಲಾ ಮಹಿಳಾಮಣಿಗಳಿಗೂ ಅಭಿನಂದಿಸಿರುವ ರೀತಿ ಬಹಳ ಆಪ್ತವಾಗಿ ಮೂಡಿ ಬಂದಿದೆ ಇದರ ಬಗ್ಗೆ ಚಿಂತನೆ ನೆಡೆಸುವಂತಿದೆ.. ಧನ್ಯವಾದಗಳು ಸಾರ್

  2. ನಯನ ಬಜಕೂಡ್ಲು says:

    ಸೂಪರ್ ಸರ್. ಈ ಲೇಖನದ ಮೂಲಕ ನಿಮ್ಮವರು ಮಾತ್ರವಲ್ಲ ಪ್ರತಿಯೊಬ್ಬ ಗೃಹಿಣಿಯನ್ನು ಗೌರವಿಸಿದಂತಾಯಿತು.

  3. ಗಾಯತ್ರಿ ಸಜ್ಜನ್ says:

    ಮಹಿಳೆಯ ದಿನಚರಿಯನ್ನು ಶ್ಲಾಘಿಸಿರುವ ನಿಮಗೊಂದು ದೊಡ್ಡ ಸಲಾಂ

  4. . ಶಂಕರಿ ಶರ್ಮ says:

    ನಿಜವಾಗಿಯೂ ನಾವು(ಮಹಿಳೆಯರು) ಇಷ್ಟೆಲ್ಲಾ ಮಾಡ್ತೇವಾ? ಎಂದು ಅಚ್ಚರಿಯುಂಟಾಯ್ತು! ಸರಿಯಾಗಿ ಹೇಳಿದಿರಿ..ಯಾವುದೇ ತರಬೇತಿಯಿಲ್ಲದೆ ಸಹಜವಾಗಿಯೇ ಬರುವಂತಹ ಗುಣಗಳಿವು! ಮಹಿಳೆಯರಿಗೆಲ್ಲರಿಗೂ ಧನ್ಯವಾದ ರೂಪದಲ್ಲಿರುವ ಈ ಲೇಖನ ಬಹಳ ಚೆನ್ನಾಗಿದೆ ಸರ್.

  5. Padma Anand says:

    ಎಲ್ಲಾ ಗಂಡಸರೂ ಕಡ್ಡಾಯವಾಗಿ ಓದಲೇಬೇಕಾದ ಚಂದದ ಲೇಖನ.

  6. Padmini says:

    ಆಪ್ತವಾದ ಚಂದದ ಲೇಖನ.

  7. ಡಾ. ಕೃಷ್ಣಪ್ರಭ ಎಂ says:

    ಆಹಾ….ಚಂದದ ಬರಹ….ತುಂಬ ಇಷ್ಟವಾಯಿತು

  8. Savithri bhat says:

    ಆಹಾ..ಬಹಳ ಸುಂದರವಾಗಿ,ಗೌರವ ಪೂರ್ವಕವಾಗಿ ಮಹಿಳೆಯರ ದೈನಂದಿನ ಚಟುವಟಿಕೆ ಗಳನ್ನ ಬರೆದಿದ್ದೀರಿ..ನಿಮಗೆ ಅಭಿನಂದನೆ ಗಳು

Leave a Reply to ಕೆ. ರಮೇಶ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: