ಅವಿಸ್ಮರಣೀಯ ಅಮೆರಿಕ-ಎಳೆ 4

Spread the love
Share Button

ಸಪ್ತ ಸಾಗರ ದಾಟಿ…

ನಮ್ಮ ದೇಶ ಬಿಟ್ಟು  ಪರದೇಶದಲ್ಲಿ ಮೊತ್ತ ಮೊದಲ ಬಾರಿಗೆ ಕಾಲಿರಿಸಿದಾಗ ಸ್ವಲ್ಪ ವಿಚಿತ್ರವೆನಿಸಿದರೂ..ಖುಷಿಯಾಯ್ತು. ವಿಮಾನ ಇಳಿದಾಗ, ಜಗತ್ತಿನಲ್ಲಿ ಇಷ್ಟು ದೊಡ್ಡ , ಸುಂದರ ವಿಮಾನ ನಿಲ್ದಾಣವೂ  ಇರುತ್ತದೆ ಎಂಬುದನ್ನು ನಂಬಲೇ ಸಾಧ್ಯವಿಲ್ಲದಂತಾಯಿತು…

ಎಲ್ಲೆಲ್ಲಿಯೂ ಥಳಥಳ..ವೈಭವದಲಂಕಾರ! ಚೀನಾ ದೇಶದ ಈ ಹಾಂಗ್ ಕಾಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು  ಪ್ರಾಕೃತಿಕವಾದುದಲ್ಲ. ಎರಡು ಪುಟ್ಟ ದ್ವೀಪಗಳನ್ನು ಜೊತೆಗೂಡಿಸಿ, 3000 ಎಕರೆಗಳಷ್ಟು ಜಾಗದಲ್ಲಿ,1998ರಲ್ಲಿ ರೂಪುಗೊಂಡ ಈ ಅದ್ವಿತೀಯ, ಅಭೂತಪೂರ್ವ ನಿಲ್ದಾಣದಲ್ಲಿ ನೂರಕ್ಕೂ ಮಿಕ್ಕಿ ವಿವಿಧ ಏರ್ ಲೈನ್ಸ್ ಗಳು ಸುಮಾರು 180 ನಗರಗಳಿಗೆ ವಿಮಾನಗಳನ್ನು ಹಾರಿಸುತ್ತವೆ. ಅತಿ ಹೆಚ್ಚು ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಸಾಗಿಸುತ್ತಿರುವ ಹೆಗ್ಗಳಿಕೆಯಲ್ಲಿ ಜಗತ್ತಿಗೆ ಮೂರನೇ ಸ್ಥಾನದಲ್ಲಿದೆ.

ನೋಡು ನೋಡುತ್ತಿದ್ದಂತೆ, ಕ್ಷಣ ಕ್ಷಣವೂ ನೂರಾರು  ವಿಮಾನಗಳು ಬಂದು ಹೋಗುವುದು  ಅಚ್ಚರಿ ಹುಟ್ಟಿಸುತ್ತದೆ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ವಿಮಾನವನ್ನು ಅಲ್ಲಿ ಏರಬೇಕಿತ್ತು. ಸುಮಾರು ಮೂರು ತಾಸುಗಳ ಬಳಿಕ, ಅತ್ಯಂತ ದೊಡ್ಡ ವಿಮಾನದೊಳಕ್ಕೆ ಹೊಕ್ಕಾಗ..  ಅಬ್ಬಾ..ಬೇರೆಯೇ ಲೋಕವೊಂದು ಕಣ್ಣೆದುರು ತೆರೆದಿತ್ತು! ಅದು ವಾಹನವೆನಿಸದೆ, ಏನೋ ಬಹಳ ದೊಡ್ಡ ಸಭಾಂಗಣಕ್ಕೆ  ಬಂದಂತೆನಿಸಿತು. ಮುಂದಕ್ಕೆ ನೋಡಿದರೆ ಅಂತಹ ನಾಲ್ಕೈದು ಹಾಲ್ ಗಳನ್ನು ಜೋಡಿಸಿಟ್ಟಂತಿತ್ತು. ಸುಮಾರು ಒಂದೂವರೆ ಸಾವಿರದಷ್ಟು ಜನರಿಗೆ ಕುಳಿತುಕೊಳ್ಳಲು ಅವಕಾಶವಿರುವ, ಅತ್ಯಂತ ಸುಸಜ್ಜಿತ ಆಸನ ವ್ಯವಸ್ಥೆ ಹೊಂದಿರುವ ಡಬಲ್ ಡೆಕರ್(ಮೇಲಂತಸ್ಥು ಹೊಂದಿರುವ) ಜಂಬೋ ವಿಮಾನವಾಗಿತ್ತದು. ಆಸನ ಮತ್ತು ಪ್ರತೀ ಪ್ರಯಾಣಿಕನ ಎದುರಿಗಿರುವ ಟಿ.ವಿ.ಯು ಮೊದಲಿನ ವಿಮಾನದಲ್ಲಿ ಇದ್ದುದಕ್ಕಿಂತ ದೊಡ್ಡದಾಗಿತ್ತು. ವಿಮಾನದೊಳಗಿನ ಅಗಾಧತೆಯನ್ನು ಕಂಡೇ ದಂಗಾಗಿ ಹೋದೆ! ಇಂತಹ ಪ್ರಯಾಣದ ಅನುಭವ ಹೊಸದಾದ್ದರಿಂದ ಕುತೂಹಲವೂ ಹೆಚ್ಚುತ್ತಿತ್ತು.

ನಾನು ಪರಿಚಯ ಮಾಡಿಕೊಂಡಿದ್ದ ಹುಬ್ಬಳ್ಳಿ ದಂಪತಿಗಳು ಏನೋ ತಾಂತ್ರಿಕ ಕಾರಣದಿಂದಾಗಿ  ವಿಮಾನವೇರಲು ಅನುಮತಿ ದೊರೆಯದೆ ವಿಮಾನ ನಿಲ್ದಾಣದಲ್ಲಿಯೇ ಉಳಿದುಬಿಟ್ಟಿದ್ದರಿಂದ ಮುಂದಿನ ಹದಿನೆಂಟು ಗಂಟೆಗಳ ದೀರ್ಘ ಪ್ರಯಾಣವನ್ನು ನಾನೊಬ್ಬಳೇ ಅಪರಿಚಿತರ ನಡುವೆ ಕಳೆಯುವ ಅನಿವಾರ್ಯ ಪ್ರಸಂಗ ಬಂದುಬಿಟ್ಟಿತ್ತು. ಯಾರೊಡನೆ ಮಾತಾಡಲೂ ಭಯ. ಕಿಟಿಕಿ ಪಕ್ಕದ ಸೀಟು ಸಿಕ್ಕಿದುದರಿಂದ ಹಗಲು ಹೊತ್ತಲ್ಲಿ ಹೊರಗಡೆ ಕಾಣುವ ಬರೀ ಬಿಳಿ ಮೋಡವನ್ನಾದರೂ ನೋಡುವ ಅವಕಾಶ. ಕೆಲವೊಮ್ಮೆ ಅದೂ ಇಲ್ಲದ ಶುಭ್ರ ನೀಲಿಯ ಆಗಸ. ಇದನ್ನು ಕಂಡಾಗ, ಹಸಿರು ಪ್ರಕೃತಿ, ಜನ ಜಂಗುಳಿಯನ್ನು ವೀಕ್ಷಿಸಿ ಆನಂದಿಸುತ್ತಾ ಸಾಗುವ ನಮ್ಮ ಭೂಮಿ ಮೇಲಿನ ಪಯಣವೇ ಎಷ್ಟೋ ವಾಸಿ ಎಂದುಕೊಳ್ಳುತ್ತಾ  ನಿಟ್ಟುಸಿರು ಬಿಟ್ಟೆ. ನನ್ನ ಪಕ್ಕದಲ್ಲಿದ್ದ ಸಹಪ್ರಯಾಣಿಕರಿಗೆ ಅವರ ಸೀಟೇ ಅವರಿಗೆ ಸಾಲದಾಗಿತ್ತು. ಆದ್ದರಿಂದ ನನಗೆ ಸ್ವಲ್ಪ ಇರುಸು ಮುರುಸು ಆದದ್ದಂತೂ ನಿಜ. 

ಕುಳಿತ ತಕ್ಷಣ ಚಂದದ ಪರ್ಸಲ್ಲಿ ಬೆರಳುದ್ದದ ಟೂತ್ ಬ್ರಷ್, ಅದರರ್ಧದಷ್ಟಿನ ಪೇಸ್ಟ್ ಕೈಗಿತ್ತರು..ಮುಖ ತೊಳೆದು ಬರಲು. ಸ್ವಲ್ಪ ಹೊತ್ತಿನಲ್ಲಿ  ಸ್ವಲ್ಪ ಉಪ್ಪಿಟ್ಟು, ಬನ್, ಕೇಕ್, ಹಣ್ಣಿನ ಚೂರುಗಳು, ಹಾಲು, ಸಕ್ಕರೆ ಇತ್ಯಾದಿಗಳು ತುಂಬಿದ ತಟ್ಟೆಯೊಂದು ಬೆಳಗ್ಗಿನ ತಿಂಡಿಗಾಗಿ ಬಂದಾಗ, ಪೂರ್ತಿ ಅಡುಗೆ ಕೋಣೆಯೇ ನನ್ನೆದುರು ಬಂದೆಂತೆನಿಸಿತು. ಎದುರುಗಡೆ ಇರುವ ಟಿ.ವಿ. ಯಲ್ಲಿ  ಹಿಂದಿ, ಇಂಗ್ಲಿಷ್, ಮಲೆಯಾಳ, ತಮಿಳು ಹೀಗೆ ಬೇರೆಲ್ಲಾ  ಭಾಷೆಯ ಸಿನಿಮಾಗಳಿದ್ದರೂ ಕನ್ನಡ ಭಾಷೆ ಮಾತ್ರ ಕಾಣಲೇ ಇಲ್ಲ. ಇದರಲ್ಲಿ ಸಿಗುವ  ಸಿನಿಮಾಗಳನ್ನು ಬೇಕಾದಂತೆ ನೋಡಬಹುದಾದರೂ, ಅದನ್ನೂ ಗಂಟೆಗಟ್ಟಲೆ ನೋಡಲು ಸಾಧ್ಯವಾಗುವುದಿಲ್ಲವಲ್ಲ. ನನಗೆ ಅದರಲ್ಲಿ ಬರುವ ವಿಮಾನ ಹಾರಾಟದ ವಿವರಗಳು ಬಹಳ ಇಷ್ಟವಾಗಿತ್ತು. ನಾವು ಹಾರಾಡುವ ವಿಮಾನವು ಎಲ್ಲಿದೆ, ಎಷ್ಟು ಎತ್ತರದಲ್ಲಿದೆ, ಗಾಳಿಯ ವೇಗ, ವಿಮಾನದ ವೇಗ, ಅಲ್ಲಿಯ ಉಷ್ಣಾಂಶ, ಪ್ರಯಾಣಿಸಿದ ದೂರ, ಪ್ರಯಾಣಿಸಿದ ಸಮಯ, ಈಗಿನ ಸಮಯ, ಇನ್ನು ಎಷ್ಟು ಸಮಯದಲ್ಲಿ ಕೊನೆಯ ನಿಲ್ದಾಣವನ್ನು ತಲಪುವುದು ಎಂಬಿತ್ಯಾದಿ ವಿವರಗಳು ನಿರಂತರ ಮೂಡುತ್ತಿರುತ್ತವೆ. ಭೂಗೋಳದ ಚಿತ್ರದಲ್ಲಿ ವಿಮಾನವು ಹಾರಾಡುತ್ತಿರುವ ಸ್ಥಳವನ್ನು ವಿಮಾನದ ಚಿತ್ರ ಸಹಿತ ಕಾಣಬಹುದು. ನೂರಾರು ಕಿ.ಮಿ. ಗಳಷ್ಟು ಎತ್ತರಕ್ಕೆ, ಸಾವಿರಾರು ಮೈಲು ವೇಗದಲ್ಲಿ ಆಕಾಶದಲ್ಲಿ ಧಾವಿಸುತ್ತಿದ್ದೇವೆ ಎಂಬುದನ್ನು ಪರದೆಯ ಮೇಲೆ ಕಂಡು ರೋಮಾಂಚನವಾಗುತ್ತದೆ. ಆದರೆ ಹೆಚ್ಚಿನ ಹಾರಾಟವು ಮಹಾಸಮುದ್ರಗಳ ಮೇಲೆಯೇ ಆಗುತ್ತಿರುವುದನ್ನು ಯೋಚಿಸಿದಾಗ ಹೆದರಿಕೆಯೂ ಆಗುತ್ತದೆಯೆನ್ನಿ. ಚಿಕ್ಕಂದಿನಲ್ಲಿ ಓದಿದ್ದ ಕಥೆಗಳಲ್ಲಿ, ರಾಜಕುಮಾರನು ಮಾಯಾಚಾಪೆಯಲ್ಲಿ ಕುಳಿತು, ಸಪ್ತಸಾಗರ ದಾಟಿ  ರಕ್ಕಸನನ್ನು ಕೊಂದು,  ರಾಜಕುಮಾರಿಯನ್ನು ಕರೆದುತಂದುದು ನೆನಪಾಯಿತು.. ಇದೇ ಇರಬಹುದಲ್ಲವೇ ಆ ಸಪ್ತಸಾಗರ?!ಕುಳಿತು ಕುಳಿತು ಬೇಸರವಾದಾಗ ಎದ್ದು ಅಡ್ಡಾಡಲು ಅವಕಾಶವಿದೆ.  ಹಣ್ಣು, ಜ್ಯೂಸ್ ಗಳನ್ನು ಕುಳಿತಲ್ಲಿಗೇ ಗಗನಸಖಿಯರು ನಗುನಗುತ್ತಾ ತಂದುಕೊಡುವರು. ಬೇಕೆನಿಸಿದರೆ ನಾವೇ ಅಲ್ಲಿಯ ಅಡುಗೆಕೋಣೆಯಿಂದ ಬೇಕಾದುದನ್ನು ಬೇಕಾದಷ್ಟು ತೆಗೆದುಕೊಳ್ಳಬಹುದು.. ಆದರೆ ಕೆಲಸವಿಲ್ಲದೆ ಸುಮ್ಮನೆ ಕುಳಿತಿರುವ ನಮಗೆ ಯಾವುದೂ ಬೇಕೆಂದು ಅನಿಸುವುದೇ ಇಲ್ಲ. ಸಮಯಕ್ಕೆ ಸರಿಯಾಗಿ ಊಟ, ತಿಂಡಿಗಳ ಸೇವೆ ನಡೆಯುತ್ತಿರುತ್ತದೆ. ಚಳಿಗೆ ಹೊದ್ದುಕೊಳ್ಳಲು  ಉಣ್ಣೆಯ, ಚಂದದ ಕೆಂಪು ರಗ್ಗನ್ನು ಕೊಡುವಾಗ ಅಳಿಯ ಹೇಳಿದ್ದು ನೆನಪಾಯಿತು.. ಅಲ್ಲಿ ಏನೆಲ್ಲಾ ಕೊಡುತ್ತಾರೋ ಅದೆಲ್ಲಾ ನಮಗೇ! ನಿದ್ದೆ ಮಾಡುವ ಪ್ರಯತ್ನ ಮಾತ್ರ ಅಷ್ಟೊಂದು ಫಲಕಾರಿಯಾಗಲಿಲ್ಲ. ಎಲ್ಲೋ ಹಳ್ಳಿಯಲ್ಲಿದ್ದ ನಾನು ನನ್ನ ಜೀವಮಾನದಲ್ಲಿ ಇಂತಹ ಅನುಭವವನ್ನು ಪಡೆಯುತ್ತಿರುವುದು ಬಹಳ ವಿಚಿತ್ರವೆನಿಸಿತು.. ‘ಎತ್ತಣ ಮಾಮರ..ಎತ್ತಣ ಕೋಗಿಲೆ’ ಹಾಡು ನೆನಪಾಯ್ತು!

ಅಂತೂ ಹದಿನೆಂಟು ಗಂಟೆಗಳ ದೀರ್ಘ ಪ್ರಯಾಣವು ಅನೇಕ ವಿಶೇಷ ಅನುಭವಗಳೊಂದಿಗೆ ಖುಷಿಯಿಂದ ಸಾಗಿತ್ತು.  ಇಳಿಯಲು ಒಂದರ್ಧ  ಗಂಟೆ ಇದೆ ಎನ್ನುವಾಗಲೇ, ನಮ್ಮಲ್ಲಿರುವ ವಸ್ತುಗಳ ಬಗ್ಗೆ ವಿವರವನ್ನು ಬರೆದು ತಿಳಿಸುವ ಒಂದು ಅರ್ಜಿಯನ್ನು ಕೊಡುವರು..ಎಂದರೆ, ತಿಂಡಿಗಳು, ಸಾಂಬಾರ್ ಪುಡಿ, ಔಷಧಿ, ಕರಿಬೇವು ಇತ್ಯಾದಿಗಳ ಬಗ್ಗೆ  ಹೌದು ಅಥವಾ ಇಲ್ಲ ಎಂದು ಉತ್ತರಿಸಿದರೆ ಆಯ್ತು. ಒಂದು ವೇಳೆ ನಮ್ಮಲ್ಲಿ ಇದ್ದುದನ್ನು ಇಲ್ಲ ಎಂದು ನಮೂದಿಸಿ, ಅವರಿಗೆ ತಪಾಸಣೆ ಸಮಯದಲ್ಲಿ ಸಿಕ್ಕಿಬಿಟ್ಟರೆ (ನಮ್ಮ ಗ್ರಹಚಾರ ಸರಿ ಇಲ್ಲದಿದ್ದರೆ!!) ಸಾವಿರಾರು ರೂ. ದಂಡ ಹಾಕ್ತಾರೆ. ಒಂದು ಸಲ ನಮ್ಮ ಪರಿಚಯದವರು ಮಗಳಿಗಾಗಿ ಒಣಗಿಸಿದ ಕರಿಬೇವಿನ ಎಲೆ ಒಯ್ದುದನ್ನು ಅದರಲ್ಲಿ ನಮೂದಿಸದೆ, 300  ಡಾಲರ್(ಸುಮಾರು ರೂ.21000) ದಂಡ ತೆರಬೇಕಾಗಿ ಬಂದುದನ್ನು ಹೇಳಿದರು.  ಅಬ್ಬಾ.. ಬೇಕಿತ್ತಾ ಕರಿಬೇವು ಎನಿಸಿತು ನನಗೆ!!  ಅದು ನೆನಪಾಗಿ ನನಗೆ ಕೊಟ್ಟ ಫಾರ್ಮ್ ಲ್ಲಿ ಒಂದೂ ಬಿಡದೆ ಬರೆದು ಬಿಟ್ಟೆ… ಹೆದರುತ್ತಾ!

ವಿಮಾನವು  ಸ್ಯಾನ್ ಫ್ರಾನ್ಸಿಸ್ಕೋ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಇಳಿಯಲಾರಂಭಿಸಿದಾಗ ಮೈಯೆಲ್ಲಾ ಪುಳಕ ..ಜೊತೆಗೆ ಸ್ವಲ್ಪ ಭಯ ಕೂಡಾ. ನನ್ನ ಸಾಮಾನುಗಳನ್ನು ಜೊತೆಗೂಡಿಸಿ ಇಳಿಯೊಡಗಿದಾಗ ನೋಡ್ತೇನೆ..ಎಲ್ಲರೂ ರಗ್ಗನ್ನು ಅಲ್ಲಲ್ಲೇ ಬಿಟ್ಟು ಹೋಗಿದ್ದರು. ಆಳಿಯ ಹೇಳಿದ್ದು ತಮಾಶೆಗೆಂದು ಆಗ ಜ್ಞಾನೋದಯವಾಯ್ತು. ನಾನೇನಾದರೂ ಅವನ ಮಾತನ್ನು ನಂಬಿ ರಗ್ಗನ್ನು ಬ್ಯಾಗಿನೊಳಗೆ ಹಾಕಿಕೊಂಡಿದ್ದರೆ??!

ಎಲ್ಲರೂ ಇಳಿಯತೊಡಗಿದಾಗ ನನಗೋ ಆಗಲೇ ಆತಂಕ ಸುರು. ಗೊತ್ತಿಲ್ಲದ ಹೊಸ ಜಾಗ, ನಮ್ಮ ಇಂಗ್ಲಿಷ್ ಅವರಿಗೆ ಸರಿಯಾಗಿ ಅರ್ಥವಾಗುವುದಿಲ್ಲ; ಹಾಗೆಯೇ ಅವರದ್ದು ನಮಗೆ.  ವಿಮಾನದಿಂದ ಇಳಿದ ಕೂಡಲೇ ವಿಮಾನದ ಡಿಕ್ಕಿಯಲ್ಲಿದ್ದ ನನ್ನೆರಡು ಸೂಟ್ಕೇಸುಗಳನ್ನು ರಶೀದಿ ತೋರಿಸಿ ಪಡೆಯುವುದಿತ್ತು. ಅದೆಲ್ಲಿದೆಯೆಂದು ನಾವು ಅಲೆದಾಡಬೇಕಾಗಿಲ್ಲ. ತಕ್ಷಣ ನಾವು ಎಲ್ಲಿಗೆ ಹೋಗಬೇಕೆಂದು ಮಾರ್ಗಸೂಚಿ ಇರುತ್ತದೆ… ಹಾಗೆಯೇ ಸಹ ಪ್ರಯಾಣಿಕರನ್ನು ಹಿಂಬಾಲಿಸುತ್ತಾ ದೌಡಾಯಿಸಿದೆ. ಅತ್ಯಂತ ವಿಶಾಲವಾದ ಹಾಲ್ ನಲ್ಲಿ ನೂರಾರು ಜನರು ಬೇರೆ ಬೇರೆ ಸಂಖ್ಯೆಗಳನ್ನು ನಮೂದಿಸಿದ ಕಂಬಗಳ ಸುತ್ತ ತಿರುಗುತ್ತಿರುವ ಬೃಹದಾಕಾರದ ಬೆಲ್ಟಿನ ಸುತ್ತಲೂ ನಿಂತು ತಮ್ಮ ಲಗ್ಗೇಜ್ ಗಳನ್ನು ಸಂಗ್ರಹಿಸುತ್ತಿದ್ದರು. ಬೆಲ್ಟಿನ  ತುದಿಗಳು ಮರೆಯಲ್ಲಿದ್ದು, ಒಂದು ಕಡೆಯಿಂದ ಹಾಕಿದ ಲಗ್ಗೇಜ್ ಗಳು ತಿರುಗುವ ಬೆಲ್ಟಿನಲ್ಲಿ ಪ್ರಯಾಣಿಕರು ಇರುವೆಡೆ ಬಂದು ಕಂಬವನ್ನು ಸುತ್ತುವರೆದು ಪುನಃ ಮರೆಯಾಗಿ ವಾಪಾಸು ಬರುತ್ತವೆ. ಹಾಗೆಯೇ ಸುಮಾರು ಅರ್ಧ ಗಂಟೆ ತಿರುಗುತ್ತಿರುವಾಗಲೇ ಅವರವರ ಲಗ್ಗೇಜುಗಳನ್ನು ಸಂಗ್ರಹಿಸಬೇಕು. ಅಂತೆಯೇ ನಾವು ಬಂದ ವಿಮಾನದ ಲಗ್ಗೇಜ್ ಗಳು ಬರುವಂತಹ  ಜಾಗದ  ನಂಬರನ್ನು ಇಳಿಯುವಾಗಲೇ ತಿಳಿಸಿರುವುದರಿಂದ,  ಅಲ್ಲಿಗೆ ತಲಪುವುದರೊಳಗೆ, ಅಲ್ಲಿದ್ದ  ಬೆಲ್ಟ್ ತಿರುಗಲಾರಂಭಿಸಿತು. ನೋಡು ನೋಡುತ್ತಿದ್ದಂತೆಯೇ  ಅದರ ತುಂಬಾ ಸೂಟ್ಕೇಸ್ ಗಳು..ಹೆಚ್ಚಿನವೆಲ್ಲಾ ಕೆಂಪು..ಕಪ್ಪು.. ಒಂದೇ ತರಹದವು..ಆದರೆ ಅವುಗಳಲ್ಲಿ ವಿವಿಧ ಬಣ್ಣಗಳ ರಿಬ್ಬನ್ ಗಳು ಫಳಫಳ ಹೊಳೆಯುತ್ತಿದ್ದವು..ಗುರುತಿಗಾಗಿ! ಇಲ್ಲಿ  ನಾನು ನನ್ನ ಸೂಟ್ಕೇಸ್ ಗೆ ಕಟ್ಟಿದ ರಿಬ್ಬನ್ ಉಪಯೋಗಕ್ಕೆ ಬಂತು ನೋಡಿ. ಒಂದೆರಡು ಪ್ರಯತ್ನಗಳಲ್ಲಿ  ಬೇರೆಯವರ ನೆರವಿನಿಂದ ನನ್ನೆರಡು  ಸೂಟ್ಕೇಸ್ ಗಳೂ ಕೈಸೇರಿದವು. ನನ್ನ ಎಲ್ಲಾ ಸಾಮಾನುಗಳನ್ನು ದೊಡ್ಡದಾದ ತಳ್ಳುಗಾಡಿಯಲ್ಲಿ ಕಷ್ಟಪಟ್ಟು ಪೇರಿಸಿ ಹೊರಟಾಗ ಇನ್ನೊಂದು ಬಾಗಿಲಲ್ಲಿ ಪುನಃ ನಮ್ಮ ವಿಚಾರಣೆ ಶುರು..ಎಲ್ಲಿಗೆ, ಯಾಕೆ..ಇತ್ಯಾದಿ. ಅಂತೂ ಎಲ್ಲವನ್ನು ಸಮರ್ಥವಾಗಿ ಪೂರೈಸಿಕೊಂಡು ನನ್ನ ಅಪಾರ ಹೊರೆಯ ಸೂಟ್ಕೇಸುಗಳ ಸಹಿತ ಹೊರಬಂದಾಗ, ಕರೆದೊಯ್ಯಲು  ಮಗಳು ಅಳಿಯ ಬಂದಿರದಿದ್ದರೆ ಎಂಬ ಕೆಟ್ಟ ಯೋಚನೆ ಬೇರೆ!

ಆಗ ಬೆಳಗ್ಗಿನ ಹತ್ತು ಗಂಟೆ. ವಿಮಾನವು ಸಮಯಕ್ಕಿಂತ ಒಂದು ಗಂಟೆ ಮೊದಲೇ ತಲಪಿತ್ತು. ಮಣಭಾರದ ಲಗ್ಗೇಜುಗಳನ್ನು ಕೈಗಾಡಿಯಲ್ಲಿ ಪೇರಿಸಿ ತಳ್ಳಿಕೊಂಡು ಹೊರಬಂದಾಗ ಎಲ್ಲರ ಸಂಬಂಧಿಕರು, ಗೆಳೆಯರು, ಹೀಗೆ ತುಂಬಾ ಮಂದಿ ಸ್ವಾಗತ ಫಲಕ, ಬಲೂನು, ಹೂಗುಚ್ಛ ಹಿಡಿದು ನಿಂತಿದ್ದರು. ನಾನೂ ಸಂಭ್ರಮದಿಂದ ಸುತ್ತಲೂ ನೋಡಿದರೆ ಮಗಳು ಕಾಣಲೇ ಇಲ್ಲ! ನಾನು ಹೆದರಿಕೊಂಡಂತೆಯೇ ಆಗಿತ್ತು! ಮನಸ್ಸು ತಳಮಳಗೊಂಡರೂ ಸಂಭಾಳಿಸಿಕೊಂಡು ಹೇಗೋ ಹೊರಗಡೆ ಬಂದಾಯ್ತು. ಅಲ್ಲಿ ಬಂದವರೆಲ್ಲರೂ ತಮ್ಮನ್ನು ಕರೆದೊಯ್ಯಲು ಬಂದ  ಕಾರುಗಳಲ್ಲಿ ಹೊರಟು ಹೋಗುತ್ತಿದ್ದರೆ, ನಾನು ಸಪ್ಪೆ ಮುಖ ಹೊತ್ತು ಕಾಯಬೇಕಿತ್ತು! ಬಂದ ಪ್ರಯಾಣಿಕರೆಲ್ಲಾ ಹೊರಟು ಹೋಗಿ ನಿಲ್ದಾಣ ಖಾಲಿಯಾಗುತ್ತಾ ಬಂತು… ಕ್ಷಣಗಳು ಗಂಟೆಗಳಾಗಿದ್ದವು! ತಕ್ಷಣಕ್ಕೆ ಏನು ಮಾಡಬೇಕೆಂದು ತಿಳಿಯಲಿಲ್ಲ. ನನ್ನ ಬಳಿ ಅವರ ಫೋನ್ ನಂಬ್ರ ಇದ್ದರೂ ಮಾತನಾಡಲು ಫೋನ್ ಬೇಕಲ್ಲ? ಆಕಡೆ ಈಕಡೆ ಗಮನಿಸಿದಾಗ, ಆಂಗ್ಲೋ ಇಂಡಿಯನ್ ವ್ಯಕ್ತಿಯೊಬ್ಬರು ಮೊಬೈಲಿನಲ್ಲಿ ಮಾತನಾಡುವುದು ಕಂಡಿತು. ಅವರ ಬಳಿ ಸಹಾಯ ಕೇಳೋಣವೆಂದು ಹೋದಾಗ ಅವರು ನನ್ನನ್ನು ಗಮನಿಸದೆ ಹೋಗಿಬಿಟ್ಟರು. ಸರಿ..  ಕಾಯುವುದು ಬಿಟ್ಟರೆ ಬೇರೆ ಮಾರ್ಗವಿರಲಿಲ್ಲ. ಮೊದಲ ಬಾರಿಗೆ ಅಮೆರಿಕಕ್ಕೆ ಬಂದಾಗಲೇ ಹೀಗಾಗಬೇಕೇ ಅನ್ನಿಸಿತು. ಒಂದರ್ಧ ತಾಸಿನ ಬಳಿಕ ಇಬ್ಬರೂ ಬಂದರೂ ನನ್ನ ಖುಷಿ, ಉತ್ಸಾಹ,ಸಂಭ್ರಮ ಎಲ್ಲವೂ ಗಾಳಿ ಹೋದ ಬಲೂನಿನಂತಾಗಿತ್ತು. ಅವರ ಮನೆಯಿಂದ ಕಾರಿನಲ್ಲಿ ಬರುವಾಗ, ಒಂದು ತಾಸಿನ ಪ್ರಯಾಣದಲ್ಲಿ, ಟ್ರಾಫಿಕ್ ತೊಂದರೆಗಳ ಜೊತೆಗೆ  ವಿಮಾನವು ಬೇಗ ತಲಪುವ ಮಾಹಿತಿ ಇರಲಿಲ್ಲವೆಂದರು. ಆ ಮೇಲೆ ನಿರಾತಂಕವಾಗಿ ಮನೆ ಸೇರಿದರೂ ಆ ಸಂದರ್ಭದಲ್ಲಿ ನನಗಾದ ಅನುಭವ ಮಾತ್ರ ಮರೆಯುವ ಹಾಗೆಯೆ ಇಲ್ಲ..ನಿಜ..ಆದರೆ ಮಗಳ ನಗು ಮುಖ ಕಂಡು ಅವೆಲ್ಲಾ ಗಾಳಿಯಲ್ಲಿ ಕರಗಿಹೋದವು… !!

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ:  http://surahonne.com/?p=34583   

ಮುಂದುವರಿಯುವುದು………

ಶಂಕರಿ ಶರ್ಮ, ಪುತ್ತೂರು.

9 Responses

 1. ನಯನ ಬಜಕೂಡ್ಲು says:

  ಪ್ರತಿಯೊಂದು ವಿವರಣೆಯೂ ನಾವೇ ಎಲ್ಲವನ್ನು ಕಂಡಂತಹ ಭಾವವನ್ನು ನೀಡುತ್ತದೆ.

  • . ಶಂಕರಿ ಶರ್ಮ says:

   ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಯನಾ ಮೇಡಂ.

 2. ನಾಗರತ್ನ ಬಿ. ಅರ್. says:

  ನಿಮ್ಮ ಪ್ರವಾಸದ ಅನುಭವ ಓದುತ್ತಾ ಹೋದಂತೆಲ್ಲಾ ಬಹಳಷ್ಟು ಮುದಕೊಡುತ್ತದೆ.ಒಂದು ಅನುಭವ ವನ್ನು ಹೇಗೆಲ್ಲಾ ಕಟ್ಟಿಕೊಂಡು ಬಹುದು ಎನ್ನುವ ಬಗ್ಗೆ ನಿಮ್ಮ ಈ ಲೇಖನ ಉತ್ತಮ ಉದಾಹರಣೆಯಾಗಿದೆ… ಧನ್ಯವಾದಗಳು ಮೇಡಂ.

  • . ಶಂಕರಿ ಶರ್ಮ says:

   ಪ್ರೀತಿಯ ಪ್ರೋತ್ಸಾಹಕ ಹಾಗೂ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು, ನಾಗರತ್ನ ಮೇಡಂ.

 3. sudha says:

  ನಮಸ್ಕಾರ. ಬಹಳ ಚೆನ್ನಾಗಿದೆ.

  • . ಶಂಕರಿ ಶರ್ಮ says:

   ತಮ್ಮ ಪ್ರೀತಿಯ ಮೆಚ್ಚುಗೆಯ ನುಡಿಗಳಿಗೆ ಕೃತಜ್ಞತೆಗಳು, ಸುಧಾ ಮೇಡಂ,

 4. ಡಾ. ಕೃಷ್ಣಪ್ರಭ ಎಂ says:

  ಎಳೆ ಎಳೆಯಾಗಿ ಅನುಭವಗಳನ್ನು ಬಿಡಿಸಿದ ಪರಿ ಆಪ್ತವಾಗಿದೆ

  • . ಶಂಕರಿ ಶರ್ಮ says:

   ಓದಿ, ಮೆಚ್ಚಿ, ಸ್ಪಂದಿಸಿದ ತಮಗೆ ಹೃತ್ಪೂರ್ವಕ ನಮನಗಳು .. ಕೃಷ್ಣಪ್ರಭಾ ಮೇಡಂ.

 5. Padma Anand says:

  ಒಂದೊಂದು ವಿವರಣೆಯೂ ನನ್ನ ಮೊದಲ ಅಮೆರಿಕ ಪ್ರವಾಸದ ಅನುಭವವನ್ನೇ ನೆನಪಿಸುತ್ತಾ ಮುದ ನೀಡುತ್ತಿದೆ. ಸುಂದರ ನಿರೂಪಣೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: