ಮಹಾಮಹಿಮ ಋಷ್ಯಶೃಂಗ

Spread the love
Share Button

ಕೆಲವರ ಕಾಲ್ಗುಣ ಒಳ್ಳೆಯದು. ಅವರು ಹೋದಲ್ಲಿ ಸುಭಿಕ್ಷೆ, ಮುಟ್ಟಿದ್ದೆಲ್ಲ ಚಿನ್ನ. ಅವರ ಉಪಸ್ಥಿತಿಯನ್ನು ಎಲ್ಲರೂ ಬಯಸುವವರು. ಅವರ ಆಗಮನವನ್ನು ಎಲ್ಲರೂ ನಿರೀಕ್ಷಿಸುವರು. ಯಾವುದೇ ಕಾರ್ಯಕ್ರಮಕ್ಕೆ ಅವರು ಬಂದರೂಂತಂದ್ರೆ ಜನ ಜಂಗುಳಿ. ಹುಟ್ಟಿನಿಂದಲೇ ಅವರು ಲೋಕಪ್ರಿಯರು. ಇಂತಹ ಅದೃಷ್ಟವಂತರು ಕೆಲವೇ ಮಂದಿ. ಆದರೆ ಇಂತಹವರು ಹಿಂದೆ ಇದ್ದರು. ಇಂದೂ ಇದ್ದಾರೆ. ಮುಂದೆಯೂ ಇದ್ದಾರೆ. ಅಂತಹ ಒಬ್ಬ ಪುರಾಣ ಪುರುಷನನ್ನು ಈ ಬಾರಿ ಪರಿಚಯಿಸೋಣ.

ಈತನೇ ಋಷ್ಯಶೃಂಗ ಮುನಿ. ಇವನ ಜನನ ವೃತ್ತಾಂತ ಬಹಳ ವಿಚಿತ್ರವಾದುದು. ಮಾನವ ಜನನ ವಿಚಿತ್ರ ವೈವಿಧ್ಯಗಳನ್ನು ಪುರಾಣದೊಳಗೆ ನೋಡಿದ್ದೇವೆ. ಮತ್ಸ್ಯದ ಉದರದೊಳಗೆ ಜನಿಸಿದ ಮತ್ಯಗಂಧಿನಿ, ಕುಂಭದೊಳಗೆ ಜನಿಸಿದ ಅಗಸ್ಯ, ದೊನ್ನೆಯಲಿ ಜನಿಸಿದ ದ್ರೋಣರು, ತಂದೆಯ ಉದರದಲ್ಲಿ ಜನಿಸಿದ ಮಾಂಧಾತ, ಹೀಗೆ ಅದ್ಭುತ ಜನನಗಳನ್ನು ಕೇಳಿದ್ದೇವೆ. ಆದರೆ ನಮ್ಮ ಮುಂದಿರುವ ಋಷ್ಯಶೃಂಗನ ಜನನವೋ ಬೇರೊಂದು ರೀತಿಯದು. ಈತನು ಹರಿಣದ ಉದರದಲ್ಲಿ ಜನಿಸಿದನು! ಅದು ಹೇಗೆ ? ಎಂದು ಕುತೂಹಲವಾಗುತ್ತಿದೆಯಲ್ಲವೇ ? ನೋಡೋಣ.

ಋಷ್ಯಶೃಂಗನ ತಂದೆ ವಿಭಾಂಡಕ ಮುನಿ. ಒಮ್ಮೆ ವಿಭಾಂಡಕನು ನದೀ ನೀರಿನಲ್ಲಿ ಸ್ನಾನ ಮಾಡುತ್ತಿದ್ದಾಗ ಪವಿತ್ರವಾದ ಆತನ ವೀರ್ಯವು ಹೊರಗೆ ಚೆಲ್ಲಲ್ಪಟ್ಟಿತು. ದೈವ ಸಂಕಲ್ಪವೋ ಎಂಬಂತೆ ಅದು ಅಲ್ಲೇ ಕೆಳಗೆ ನೀರು ಕುಡಿಯುತ್ತಿದ್ದ ಹೆಣ್ಣು ಜಿಂಕೆಯ ಉದರವನ್ನು ಸೇರಿತು. ಕಾಲ ಕ್ರಮದಲ್ಲಿ ಆ ಜಿಂಕೆಯು ಋಷಿಯ ಆಶ್ರಮದ ಬಳಿಯಲ್ಲೇ ಮುನಿಪುತ್ರನನ್ನು ಹಡೆಯಿತು. ಈ ವಿಶೇಷವನ್ನು ವೀಕ್ಷಿಸಿದ ವಿಭಾಂಡಕನಿಗೆ ದಿವ್ಯಜ್ಞಾನದಿಂದ ಎಲ್ಲವೂ ತಿಳಿಯಿತು. ತಲೆಯ ಮೇಲೊಂದು ಮಟ್ಟಕೋಡು ಮೂಡಿದ್ದ ತನ್ನ ಕುಮಾರನಿಗೆ ವಿಭಾಂಡಕನು ಋಷ್ಯಶೃಂಗ (ಋಷ್ಯ-ಜಿಂಕೆ, ಶೃಂಗ-ಕೋಡು) ಎಂದು ಹೆಸರಿಟ್ಟು ತಾನೇ ಪೋಷಿಸಿದನು. ತನ್ನ ಪುತ್ರನಿಗೆ ಕಾಮವಿಕಾರಕ್ಕೆ ಅವಕಾಶ ಕೊಡದೇ ಆತ್ಮಬೋಧನೆಯನ್ನಿತ್ತು ಬೆಳೆಸಿದನು. ಸ್ತ್ರೀತ್ವವನ್ನರಿಯದೇ ಅದಕ್ಕೆ ತಕ್ಕಂತೆಯೇ ತಂದೆಯ ಆಶ್ರಯದಲ್ಲಿ ಗೋಪ್ಯವಾಗಿ ಋಷ್ಯಶೃಂಗ ಬೆಳೆದನು.

ಒಮ್ಮೆ  ಸಮೀಪದ ಅಂಗದೇಶದಲ್ಲಿ ರೋಮಪಾದನೆಂಬ ರಾಜನ ರಾಜ್ಯಾಡಳಿತದಲ್ಲಿ ತಾನಾಗಿ  ಕ್ಷಾಮವು ತಲೆದೋರಿತು. ಮಳೆಯಿಲ್ಲದೆ ಬೆಳೆಯಾಗಲಿಲ್ಲ. ಅರಸನು ಕಂಗೆಟ್ಟನು. ಪ್ರಜೆಗಳನ್ನು ಸಾಕಲಾರದೆ ರಾಜನು ತಹತಹಿಸಿತೊಡಗಿದನು. ಒಂದು ದಿನ ದೇವರ್ಷಿಗಳಾದ ನಾರದರು ಆಸ್ಥಾನಕ್ಕೆ ಬಂದರು. ದುಃಖತಪ್ತನಾದ ರಾಜನು ಋಷಿಯಲ್ಲಿ ತನ್ನ ಅಳಲನ್ನು ನಿವೇದಿಸಿಕೊಂಡನು. ಆಗ ನಾರದರು ಮಹಾತ್ಮನಾದ ಋಷ್ಯಶೃಂಗನನ್ನು ನಿನ್ನ ರಾಜ್ಯಕ್ಕೆ ಕರೆಸಿಕೊಂಡರೆ ಸುವೃಷ್ಟಿಯಾಗಬಲ್ಲುದು ಎಂದು ಉಪದೇಶವಿತ್ತು ನಾರದರು ಹೊರಟು ಹೋದರು. ಆದರೆ ಋಷ್ಯಶಂಗನನ್ನು ಕರೆಸುವ ಬಗೆ ಹೇಗೆ? ವಶೀಕರಣ ನಿಪುಣೆಯರಾದ ವಿಲಾಸಿನಿಯರನ್ನು ಕರೆಸಿ ಮುನಿಪುತ್ರನನ್ನು ಕರೆತರಲು ಆಜ್ಞಾಪಿಸಿದನು ರಾಜ. ಆದರೆ ಎಂತೆಂತಹ ತಪಸ್ವಿಗಳ ಮನಸ್ಸನ್ನು ಸಹ ಸೆರೆಹಿಡಿಯಬಹುದಾದ ಸ್ತ್ರೀಯರ ಮೋಹಜಾಲವು ಮುನಿಕುಮಾರನ ಮುಂದೆ ವ್ಯರ್ಥವಾಯಿತು. ಇದನ್ನು ಕಂಡು ರೋಮಪಾದನ ಸಾಕುಮಗಳಾದ ‘ಶಾಂತೆ’ಯು ರಾಜ್ಯದ ಹಿತದೃಷ್ಟಿಯಿಂದ ಸಖಿಯರೊಡನೆ ತಾನೇ ಖುದ್ದಾಗಿ ಋಷ್ಯಶೃಂಗನಲ್ಲಿಗೆ ಬಂದು ಅಲ್ಲಿ ಅವನ ನಿತ್ಯ ಸೇವೆಗಾಗಿ ನಿಂತಳು. ಸೋದರ ಭಾವದ ಸ್ನೇಹವೇ ಋಷ್ಯಶೃಂಗ-ಶಾಂತೆಯರಲ್ಲಿ ಬೆಳೆಯಿತು. ಕಾಮ ರಹಿತವಾದ ಈ ರೀತಿಯ ಒಡನಾಡಿಗಳಾಗಿ ಅವರಿಬ್ಬರು ಇದ್ದರು.

ಶಾಂತೆ ಋಷ್ಯಶೃಂಗನಲ್ಲಿಗೆ ತೆರಳಿ ಬಹುದಿನಗಳಾದುವೆಂದು ಮಗಳನ್ನು ವಾಪಾಸು ಕರೆತರುವಂತೆ ರೋಮಪಾದನು ದೂತಿಯರನ್ನು ಅಟ್ಟಿದನು. ತಾನು ಕೈಗೊಂಡ ಕೆಲಸವು ಆಗದಿದ್ದರೂ ಪಿತನ ಆಜ್ಞೆಗೆ ಮಣಿದು ಶಾಂತೆಯು ಮುನಿಪುತ್ರನಾದ ಋಷ್ಯಶೃಂಗನಲ್ಲಿ ‘ಬೇಗನೆ ಮರಳಿ ಬರುವೆನೆಂದು’ ಹೇಳಿ ಹೊರಟಳು. ಈಗ ಅವಳನ್ನು ಬಿಟ್ಟಿರಲಾರದ ಪರಿಸ್ಥಿತಿಯಲ್ಲಿದ್ದನು ಮುನಿಪುತ್ರ ತಂದೆಯಾದರೋ ಧ್ಯಾನಾಸಕ್ತನಾಗಿದ್ದನು. ತಂದೆಯನ್ನು ಕೇಳದೆ ಅವಳ ಜೊತೆ ಹೋಗುವುದೂ ಅವನ ವಿಧೇಯತೆಗೆ ಕುಂದು. ಅಂತೂ ಶಾಂತಿಯ ಅಗಲುವಿಕೆಯು ಋಷ್ಯಶೃಂಗನನ್ನು ಬಹಳ ದುಃಖಕ್ಕೀಡು ಮಾಡಿತು. ಬಹಳ ನಿರುತ್ಸಾಹದಿಂದ ಆತನು ಶಾಂತೆಯು ಯಾವಾಗ ಬಂದಾಳೋ ಎಂದು ದಿನಗಳನ್ನೆಣಿಸುತ್ತಿದ್ದನು.

ತಪಸ್ಸಿನಿಂದ ಬಹಿರ್ಮುಖವಾದ ಮುನಿ ಮಗನನ್ನು ಈ ಪರಿಸ್ಥಿತಿಯಲ್ಲಿ ನೋಡಿದ ವಿಭಾಂಡಕನು ಪರಿತಪಿಸಿದನು. ಯಾಕೆಂದರೆ ಸ್ತ್ರೀ ಸಂಪರ್ಕವೇ ಇಲ್ಲದಂತೆ ಮಗನನ್ನು ಬೆಳೆಸಿದ್ದನವನು. ಈಗ ನೋಡಿದರೆ ಒಡನಾಡಿ ಶಾಂತೆಯ ಅಗಲುವಿಕೆಯಿಂದ ಖಿನ್ನನಾಗಿದ್ದಾನೆ! ಅಷ್ಟರಲ್ಲಿ ಶಾಂತೆಯು ಮರಳಿ ಬಂದು ಆಶ್ರಮ ಸೇರಿದಳು. ಅವಳನ್ನುಕಂಡೊಡನೆ ಋಷ್ಯಶೃಂಗ ಆನಂದ ತುಂದಿಲನಾದರೆ ಆತನ ತಂದೆ ಚಿಂತಾಕ್ರಾಂತನಾದನು! ಈ ಸೂಕ್ಷ್ಮವನ್ನರಿತ ಶಾಂತೆಯು ‘ತನ್ನಿಂದೇನಾದರೂ ಕ್ಷಮಿಸಬೇಕೆಂದೂ ಋಷ್ಯಶೃಂಗನನ್ನು ನಮ್ಮ ರಾಜ್ಯಕ್ಕೆ ಕಳುಹಿಸಿಕೊಟ್ಟು ದೇಶದ ಪ್ರಜೆಗಳನ್ನು ಉದ್ದರಿಸಬೇಕೆಂದು’ ವಿನಂತಿಸಿದಳು. ಅಲ್ಲದೇ ತನ್ನ ತಂದೆಯಾದ ರೋಮಪಾದನಿಗೆ ನಾರದರು ತಿಳಿಸಿದ್ದ ವಿಷಯ, ತನ್ನ ತಂದೆಯ ಇಂಗಿತ ಎಲ್ಲ ವೃತಾಂತವನ್ನೂ ವಿಭಾಂಡಕನಿಗೆ ಅರುಹಿ ಪ್ರಾರ್ಥಿಸಿಕೊಂಡಳು. ಈಗ ವಿಭಾಂಡಕನು ತನ್ನ ದಿವ್ಯಜ್ಞಾನದಿಂದ ವಿಷಯ ಅರಿತುಕೊಂಡು ಶಾಂತೆಯ ಸಚ್ಚಾರಿತ್ರ್ಯ, ಸದ್ಗುಣಗಳನ್ನು ಮೆಚ್ಚಿಕೊಂಡು ಲೋಕಹಿತಕ್ಕಾಗಿಯೇ ಇವರಿಬ್ಬರ ಒಡನಾಟವೆಂದು ಮನಗಂಡು ಸಂತುಷ್ಟನಾದನು. ಹಾಗಿರುತ್ತಾ ಮುಂದೆ ನೀವು ದಂಪತಿಗಳಾಗಿ ಬಾಳಿರಿ ಎಂದು ಮನಃಪೂರ್ವಕವಾಗಿ ಹರಸಿ ಬೀಳ್ಕೊಟ್ಟನು. ಶಾಂತೆ ಋಷ್ಯಶೃಂಗನನ್ನು ಕರೆದುಕೊಂಡು ರಾಜ್ಯಕ್ಕೆ ಬಂದಳು. ರೋಮಪಾದ ರಾಜನು ಅತ್ಯಂತ ಸಂತೋಷದಿಂದ, ಗೌರವದಿಂದ ಮುನಿಪುತ್ರನನ್ನೂ ಸ್ವಾಗತಿಸಿದನು. ಋಷ್ಯಶೃಂಗನು ಕಾಲಿಟ್ಟ ಮೇಲೆ ಆ ರಾಜ್ಯದ ಕ್ಷಾಮವು ತೊಲಗಿ ಸುಭಿಕ್ಷವಾಯಿತು. ರೋಮಪಾದನು ತನ್ನ ಮಗಳನ್ನು ವಿಭಾಂಡಕ ಪುತ್ರ ಋಷ್ಯಶೃಂಗನಿಗೆ ಧಾರೆಯೆರೆದು ಕೊಟ್ಟು ವೈಭವದಿಂದ ವಿವಾಹ ಕಾರ್ಯ ನೆರವೇರಿಸಿದನು.

ಇಂತಹ ಮಹಾಮಹಿಮನಾದ ಋಷ್ಯಶೃಂಗನನ್ನು ದಶರಥನ ಮಂತ್ರಿಯಾದ ಸುಮಂತ್ರನು ದಶರಥನು ಮಾಡುವ ಪುತ್ರಕಾಮೇಷ್ಠಿಗೆ ವಸಿಷ್ಠರ ಬಿನ್ನಹದಂತೆ ಪುರೋಹಿತನನ್ನಾಗಿ ಕರೆಸಿದನು. ಕಾಮವಿಕಾರಕ್ಕೆ ಹೊರತಾಗಿಯೇ ಹುಟ್ಟಿ ಸ್ತ್ರೀಯರ ಸಂಪರ್ಕವಿಲ್ಲದೇ ಬೆಳೆದು ನಿರ್ವ್ಯಾಜ ಪ್ರೇಮದಿಂದ ಮಾತ್ರ ಪ್ರಪಂಚವನ್ನು ಕಂಡ ಮಹಾತ್ಮನಾದ ಋಷ್ಯಶೃಂಗನಿಗೆ, ಜಗತ್ತಿನ ಹಿತಸಾಧನಶಕ್ತಿ ತನ್ನೊಳಗೆ ಸುಪ್ತವಾಗಿತ್ತೆಂದು  ಮೊದಲಿಗೆ ತಿಳಿಯಲಿಲ್ಲ. ಮಹಾಮಹಿಮರೇ ಹಾಗೆ! ತಮ್ಮೊಳಗಿರುವ ಅಪರೂಪದ ಅದೃಷ್ಟವನ್ನೇ ಅವರು ಗಮನಿಸುವುದಿಲ್ಲ. ಹನುಮಂತನಿಗೆ ತನ್ನೊಳಗೆ ಅದ್ಭುತ ಶಕ್ತಿಯಿದೆಯೆಂದು ಜಾಂಬವಂತ ಹೇಳಿದ ಮೇಲೆಷ್ಟೇ ತಿಳಿಯಿತಲ್ಲವೇ ?

ಒಳ್ಳೆಯ ಕೆಲಸ ಮಾಡುವವರಿಗೆ, ಲೋಕ ಹಿತ ಬಯಸುವವರಿಗೆ ಎಂದು ಕೇಡಾಗದು ಎಂಬುದನ್ನು ಈ ಕಥೆಯಿಂದ  ತಿಳಿಯಬಹುದು.

ವಿಜಯಾ ಸುಬ್ರಹ್ಮಣ್ಯ, ಕುಂಬಳೆ

11 Responses

 1. ಧನ್ಯವಾದಗಳು ಹೇಮಮಾಲಾ ಹಾಗೂ ಆತ್ಮೀಯ ಓದುಗರಿಗೆ.

 2. ನಯನ ಬಜಕೂಡ್ಲು says:

  ಬಹಳ ಚೆನ್ನಾಗಿದೆ. ಮೊದಲ ಬಾರಿ ಋಷ್ಯ ಶೃಂಗರ ಕಥೆ ತಿಳಿದುಕೊಳ್ಳುತ್ತಿರುವುದು.

 3. ಋಷ್ಯಶೃಂಗನ ಬಗ್ಗೆ ಅಪೂರ್ವವಾದ ಮಾಹಿತಿ ಸೊಗಸಾದ ನಿರೂಪಣೆ ಧನ್ಯವಾದಗಳು ಸಹೋದರಿ

 4. ವಿಶೇಷಣ ಬಗ್ಗೆ ಅಪರೂಪದ ಮಾಹಿತಿ ಸೊಗಸಾದ ನಿರೂಪಣೆ ಧನ್ಯವಾದಗಳು

 5. ನಾಗರತ್ನ ಬಿ. ಅರ್. says:

  ಋಷ್ಯಶೃಂಗನ ಕಥೆ ಬಹಳ ಚೆನ್ನಾಗಿ ಮೂಡಿಬಂದಿದೆ.ಪೌರಾಣಿಕ ಕಥೆಗಳನ್ನು ಬರೆಯುವಾಗ ಅದರ ಹಿನ್ನೆಲೆ ಹೇಳಿ ಚೌಕಟ್ಟಿನಲ್ಲಿ ತರುವ ರೀತಿ ಸೊಗಸಾಗಿರುತ್ತದೆ ಧನ್ಯವಾದಗಳು ಮೇಡಂ.

 6. ಕೆ. ರಮೇಶ್ says:

  ಬಹಳ ಚೆನ್ನಾಗಿ ಮೂಡಿಬಂದಿದೆ ಮೇಡಂ. ಧನ್ಯವಾದಗಳು.

 7. ಓದಿ ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು.

 8. B c n murthy says:

  ತುಂಬಾ ಚೆನ್ನಾಗಿ ಮೂಡಿ ಬಂದಿರುವ ಲೇಖನ ಮೇಡಮ್, ಮೊದಲ ಬಾರಿಗೆ ಓದಿದೆ ಋಷ್ಯಶೃಂಗ ಮುನಿಯ ಬಗ್ಗೆ.

 9. . ಶಂಕರಿ ಶರ್ಮ says:

  ಮಹಾಮಹಿಮ ಋಷ್ಯಶೃಂಗರ ರೋಚಕ ಕಥೆಯು, ಅವರ ಹುಟ್ಟು ಬೆಳವಣಿಗೆಗಳ ಕುತೂಹಲಕಾರಿ ಘಟನೆಗಳನ್ನು ಒಳಗೊಂಡು, ಉತ್ತಮ ಸಂದೇಶವನ್ನೂ ಸಾರುವ ನಿಟ್ಟಿನಲ್ಲಿ ಅತ್ಯಂತ ಸೊಗಸಾಗಿ ಮೂಡಿಬಂದಿದೆ…ಧನ್ಯವಾದಗಳು ವಿಜಯಕ್ಕ.

 10. ಜಿ ಎಸ್ ಟಿ ಪ್ರಭು says:

  ಬಹಳ ಚೆನ್ನಾಗಿದೆ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: