ಅವಿಸ್ಮರಣೀಯ ಅಮೆರಿಕ-ಎಳೆ 11

Share Button

ಸ್ಟುಡಿಯೋ ಸುತ್ತಾಟ..

ಮುಂದಿನ ನಮ್ಮ ವೀಕ್ಷಣೆಗಿತ್ತು, ನೀರಿನಲ್ಲಿ ನಡೆಯುವ ಮನೋರಂಜನೆ..ವಾಟರ್ ವರ್ಲ್ಡ್ ಲ್ಲಿ.  ಮೊದಲೆರಡು ಬಾರಿಯ ಅನುಭವದಿಂದ ಹೆದರಿದ್ದ ನಾನು, ಮಗಳಲ್ಲಿ ಕೇಳಿದಾಗ, ಅಲ್ಲಿ, ಕುಳಿತು ನೋಡುವುದು ಮಾತ್ರವೆಂದು ತಿಳಿಯಿತು. ಎದುರಿಗೆ ವಿಶಾಲವಾದ ಸ್ವಚ್ಛ ಜಾಗದಲ್ಲಿ ನೂರಾರು ಜನ ಕ್ಯೂ ನಿಂತಿದ್ದರು ಟಿಕೆಟ್ಟಿಗಾಗಿ. ಸುಮಾರು ಒಂದು ಗಂಟೆಯ ಈ ಪ್ರದರ್ಶನವು ದಿನದಲ್ಲಿ ಹಲವಾರು ಬಾರಿ ಪ್ರದರ್ಶಿಸಲ್ಪಡುತ್ತಿತ್ತು. ನಾವು ಒಳಗಡೆ ಹೋದಾಗ ಕಂಡ ದೃಶ್ಯ ನಿಜಕ್ಕೂ ಅದ್ಭುತವಾಗಿತ್ತು.. ಒಮ್ಮೆಲೇ ಸುಮಾರು ಎರಡು ಸಾವಿರ ಜನರು ಕುಳಿತುಕೊಳ್ಳಬಹುದಾದಂತಹ ಅರ್ಧ ವೃತ್ತಾಕಾರದ ಗ್ಯಾಲರಿಯಲ್ಲಿ ಅದಾಗಲೇ ಜನರು ತುಂಬಿ ಬಿಟ್ಟಿದ್ದರು. ಮಧ್ಯಭಾಗದಲ್ಲಿ ಬಹಳ ವಿಸ್ತಾರವಾದ ಸರೋವರ. ಸರೋವರದ ಮಧ್ಯ ಭಾಗದಲ್ಲಿ ಚಂದದ, ಬಾಗಿದ, ಪುಟ್ಟ ಸೇತುವೆ. ಅದರ ನಡುವೆ ನೀರಿನ ಭೋರ್ಗರೆತದ ಶಬ್ದ. ಸ್ವಲ್ಪ ಹೊತ್ತಲ್ಲಿ, ನಮ್ಮ ಮುಂದೆ ಚಂದದ ರೂಪಕವೊಂದು ಅನಾವರಣಗೊಳ್ಳಲಾರಂಭಿಸಿತು.

ರಾಣಿಯ ಪಾತ್ರಧಾರಿ ಮಹಿಳೆಯೊಬ್ಬಳು, ಅವಳ ಹಲವು ಜೊತೆಗಾತಿಯರೊಡನೆ ಚಂದದ ಪುಟ್ಟ ಯಾಂತ್ರೀಕೃತ ದೋಣಿಯಲ್ಲಿ ಸೇತುವೆಯ ಹಿಂಭಾಗದಿಂದ ಬಂದು ನೀರಿನಲ್ಲಿ ವಿಹರಿಸುತ್ತಿದ್ದಂತೆಯೇ,  ಹಡಗುಗಳ್ಳರ ವೇಷ ತೊಟ್ಟ ನಾಲ್ಕು ಮಂದಿ, ದೊಡ್ಡದಾದ ಯಾಂತ್ರೀಕೃತ ದೋಣಿಯಲ್ಲಿ ಹುಸಿಗುಂಡು ಹಾರಿಸುತ್ತಾ, ರಭಸದಿಂದ  ಬಂದು ಪ್ರೇಕ್ಷಕರೆಡೆಗೆ ನೀರು ಹಾಯಿಸಿ ಅವರನ್ನು ಒದ್ದೆಯಾಗಿಸಿ, ಆಮೇಲೆ ರಾಣಿ ಇರುವ ದೋಣಿಯನ್ನು ಸುತ್ತುವರಿದರು. ಭಯಭೀತಳಾಗಿದ್ದ ರಾಣಿಯ ದೋಣಿಗೆ ಕಳ್ಳರು ಹಾರಿ, ಅಲ್ಲಿದ್ದ ಒಡವೆಗಳನ್ನೆಲ್ಲಾ ದೋಚಿ ಪರಾರಿಯಾದರು. ಇಷ್ಟೂ ದೃಶ್ಯದಲ್ಲಿ, ಆ ಪಾತ್ರಗಳ ನೈಜ ನಟನೆಯ ಜೊತೆಗೆ ಅದಕ್ಕೆ ಪೂರಕವಾದ ಹಿನ್ನೆಲೆ ಧ್ವನಿ, ಸಂಗೀತ, ಶಬ್ದ ಸಂಯೋಜನೆಗಳು ಅದ್ಭುತವಾಗಿದ್ದವು. ಅದನ್ನು ನೋಡಿದ ನಾನಾಗಲೇ ಹೆದರಿಬಿಟ್ಟಿದ್ದೆ.. ಅಷ್ಟು ನೈಜವಾಗಿತ್ತು! ಸ್ವಲ್ಪ ಹೊತ್ತಿನಲ್ಲಿ, ಎರಡೂ ದೋಣಿಗಳಲ್ಲಿ, ರಾಣಿ, ಅವಳ ಜೊತೆಗಾತಿಯರು, ಕಳ್ಳರು ಎಲ್ಲಾ ಜೊತೆಗೂಡಿ ಪುನ: ನಮ್ಮೆದುರಿಗೆ ಬಂದರು.  ಪ್ರೇಕ್ಷಕರನ್ನು ನಗುನಗುತ್ತಾ ಮಾತನಾಡಿಸಿ ರಭಸದಿಂದ ದೋಣಿಗಳಲ್ಲಿ ಮತ್ತೆರಡು ಸುತ್ತು ಹೊಡೆದು ಹೊರಟುಹೋದರು.. ಅಂತೂ ಸುಖಾಂತ! ಇದು ನಿಜಕ್ಕೂ ಉತ್ತಮ ಮನರಂಜನೆಯನ್ನು ನೀಡಿತ್ತು.

ಮುಂದಕ್ಕೆ, ಸ್ಟುಡಿಯೊ ಸುತ್ತಾಟ. ತೆರೆದ ಟ್ರಾಂ ಗಾಡಿಯಲ್ಲಿ ಮೂವತ್ತು ಜನರನ್ನು ಕುಳ್ಳಿರಿಸಿ ಗಟ್ಟಿಯಾಗಿ ಬೆಲ್ಟ್ ನಿಂದ ಬಿಗಿದು ಕಟ್ಟಿದರು. ನಾನಾಗಲೇ ಧೈರ್ಯವಂತಳಾಗಲು ಪ್ರಯತ್ನ ಪಡುತ್ತಿದ್ದೆನಾದರೂ, ಹೆಚ್ಚು ಫಲಕಾರಿಯಾದಂತೆ ಕಾಣಲಿಲ್ಲ.. ನನಗೇ! ಎಕರೆಗಟ್ಟಲೆ ಜಾಗದಲ್ಲಿ; ಒಂದು ಕಾಲದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ, ಮಿಕ್ಕಿ ಮೌಸ್ ನಂತಹ ಕಾರ್ಟೂನ್ ಸಿನಿಮಾಗಳು, ಕಿಂಗ್ ಕಾಂಗ್ , ಜಾಸ್ ನಂತಹ ಎನಿಮೇಷನ್ ಸಿನಿಮಾಗಳನ್ನು ತಯಾರಿಸಿದ ಸ್ಥಳಗಳು ಹಾಗೂ ಅವುಗಳಲ್ಲಿ ಉಪಯೋಗಿಸಿದ ವಸ್ತುಗಳು/ ಗೊಂಬೆಗಳನ್ನು ನೋಡುವ ಅವಕಾಶವಿದೆ. ಸುಮಾರು ಒಂದು ಗಂಟೆಯ ಸುತ್ತಾಟಕ್ಕೆ ನಾವೆಲ್ಲರು ಸಜ್ಜಾದೆವು.

ಎಲ್ಲೆಂದರಲ್ಲಿ ಸಣ್ಣ ಸಣ್ಣ ಸಾದಾ ಕಟ್ಟಡಗಳು; ಅವುಗಳ ನಡುವೆ ವಾಹನ ಚಲಿಸಲು ಕಚ್ಚಾರಸ್ತೆ. ಇವುಗಳನ್ನು ನೋಡಿದಾಗ, ಇವುಗಳಲ್ಲಿ ಏನಪ್ಪಾ ವಿಶೇಷ ಎನ್ನಿಸಿತು. ಆದರೆ ಮುಂದುವರಿದಂತೆ ಒಂದೊಂದೇ ನಿಗೂಢತೆಗಳು ಬಿಚ್ಚಿಕೊಳ್ಳಲಾರಂಭಿಸಿದವು. ಹೋಗುತ್ತಾ ಎಡಬದಿಗಿರುವ ಕಟ್ಟಡದೊಳಗೆ ಕಾರ್ಟೂನ್ ಚಿತ್ರಗಳನ್ನು ರಚಿಸಲಾಯಿತಂತೆ.  ಈಗಿನಂತೆ ಕಂಪ್ಯೂಟರ್ ಇಲ್ಲದ ಕಾಲದಲ್ಲಿ ತುಂಬಾ ದಿನಗಳ ಕಾಲ ಲಕ್ಷಾಂತರ ಚಿತ್ರಗಳನ್ನು ಕೈಯಲ್ಲಿ ಬರೆದು, ಅವುಗಳನ್ನು ಜೋಡಿಸಿ, ರಭಸವಾಗಿ  ಓಡಿಸಿ ಸಿನಿಮಾ ಮಾಡುವುದೆಂದರೆ ಸುಲಭದ ಮಾತಲ್ಲ.. ಅದನ್ನು ಯೋಚಿಸಿ ಬಹಳ ಅಭಿಮಾನವೆನಿಸಿತು. ಮುಂದಕ್ಕೆ, ಇನ್ನೊಂದು ಕಟ್ಟಡದ ಮುಂಭಾಗದಲ್ಲಿ ಕಿಂಗ್ ಕಾಂಗ್  ಸಿನಿಮಾದಲ್ಲಿ ಉಪಯೋಗಿಸಿದ್ದ ದೊಡ್ಡದಾದ ಕಿಂಗ್ ಕಾಂಗ್ ಹೆಸರಿನ ಗೋರಿಲ್ಲಾ ಗೊಂಬೆಯು ನಿಂತಿತ್ತು. ನಮ್ಮ ವಾಹನ ಅದರ ಮುಂಭಾಗದಲ್ಲಿ ಹಾದುಹೋಗುವಂತೆಯೇ ಆ ಗೊಂಬೆಯು ಜೀವತಳೆದು ದೊಡ್ಡದಾದ ಶಬ್ದಮಾಡುತ್ತಾ ಬೊಬ್ಬಿಡಲಾರಂಭಿಸಿತು. ಅದರ ಶರೀರದೊಳಗಿನಿಂದ ಬೆಳಕು ಹೊರಸೂಸುತ್ತಿತ್ತು. ಅಲ್ಲದೆ, ಚಿತ್ರವಿಚಿತ್ರ ರೀತಿಯಲ್ಲಿ ಕೈಕಾಲುಗಳನ್ನು, ಶರೀರವನ್ನು ಅಲ್ಲಾಡಿಸುತ್ತಾ ಎರಡೂ ಕೈಗಳಿಂದ ತನ್ನೆದೆಗೆ ಹೊಡೆದುಕೊಂಡು ಕಿರುಚುವುದು ನೋಡಿದಾಗ ನನಗಂತೂ ಭಯವಾಯ್ತು.. ಆ ಗೊಂಬೆಯಲ್ಲಿ ಅಷ್ಟು ನೈಜತೆಯಿತ್ತು. ಮುಂದೆ ಹೋದಂತೆ ನಮ್ಮ ವಾಹನವು ಒಂದು ಸಣ್ಣ ಕೆರೆಯ ಸೇತುವೆ ಮೇಲೆ ಚಲಿಸುತ್ತಿರುವಂತೆಯೇ ದೊಡ್ಡದಾದ ಶಬ್ದ ಬರತೊಡಗಿತು. ಕೆರೆಯ ನೀರು ನೊರೆ ಚೆಲ್ಲುತ್ತಾ ಮೇಲೆದ್ದು ಬರುತ್ತಿದ್ದಂತೆಯೇ ಅದರೊಳಗಿನಿಂದ ದೊಡ್ಡ ತಿಮಿಂಗಿಲವೊಂದು ದೊಡ್ಡದಾಗಿ ಬಾಯಿ ತೆರೆದು ನಮ್ಮ ವಾಹನದತ್ತ ಬರತೊಡಗಿತು. ನಾವು ಗಾಬರಿಯಿಂದ ಬೊಬ್ಬೆ ಹೊಡೆಯುತ್ತಿರುವಂತೆಯೆ ತಿಳಿದುಹೋಯಿತು..ಅದು ಜಾಸ್(JAWS) ಸಿನಿಮಾದಲ್ಲಿ ಉಪಯೋಗಿಸಿದ್ದ ತಿಮಿಂಗಿಲದ ಪ್ರತಿರೂಪವಾಗಿತ್ತು. ಅತ್ಯಂತ ಸಹಜವಾಗಿದ್ದ ಆ ಗೊಂಬೆಯನ್ನು  ಇಂದಿಗೂ ಕಾಪಿಟ್ಟು ಅತ್ಯಂತ ನೈಜ ರೂಪದಲ್ಲಿ ಮನೋರಂಜನೆಗಾಗಿ ಪ್ರದರ್ಶಿಸುತ್ತಿರುವುದು ನಿಜಕ್ಕೂ ಸೋಜಿಗವೆನಿಸುತ್ತದೆ.

ಅಲ್ಲಿಯ ಮುಖ್ಯಉದ್ಯಮವಾದ ಪ್ರವಾಸೋದ್ಯಮವನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವುದು ಖುಷಿ ಕೊಡುತ್ತದೆ. ಸುಮಾರು ಅರ್ಧ ತಾಸು ನಡೆದ ನಮ್ಮ ಈ ವೀಕ್ಷಣೆಯಲ್ಲಿ ನಾನು ಸ್ವಲ್ಪವಾದರೂ ಖುಷಿಪಟ್ಟೆ ಎನಿಸಿತು.  ಅಂತೂ ನಮ್ಮ ಟ್ರಾಂ ಗಾಡಿಯು ವಿಶಾಲವಾದ ಹಜಾರದ ಮುಂಭಾಗದಲ್ಲಿ ಬಂದು ನಿಂತಿತು. ಮುಂದಿನ ವೀಕ್ಷಣೆಯ ಸರದಿಗಾಗಿ ಕಾದಿದ್ದ ನೂರಾರು ಜನರು ಕ್ಯೂ ಅಲ್ಲಿ ನಿಂತಿರುವುದು ಕಾಣಿಸಿತು.

ಮುಂದಕ್ಕೆ, ಹಜಾರದಿಂದ ಹೊರಗಡೆಗೆ ಬಂದಾಗ ಸೊಗಸಾದ ಹೂವಿನ ತೋಟದಲ್ಲಿದ್ದ ಸುಂದರ ಹೂಗಳು ನಮ್ಮನ್ನು ಎದುರುಗೊಂಡವು. ಸುತ್ತಲೂ ಕಣ್ಣು ಹಾಯಿಸಿದಾಗ ಎದುರಿನ ಬೆಟ್ಟದ ಮೇಲೆ ಬೆಳ್ಳಗಿನ ಅತಿ ದೊಡ್ಡ ಅಕ್ಷರಗಳಲ್ಲಿ HOLLY WOOD ಎಂದು ಬರೆದಿರುವುದು ಗೋಚರಿಸಿತು. ಇದರ ವಿಶೇಷತೆಯೆಂದರೆ ಈ ಬರಹವು ಪೂರ್ತಿ ಲಾಸ್ ಏಂಜಲ್ಸ್ ಪಟ್ಟಣಕ್ಕೇ ಗೋಚರಿಸುತ್ತದೆ! ನಮ್ಮ ಪಕ್ಕದಲ್ಲಿಯೇ ಅಲ್ಲಿಯ ಪ್ರಖ್ಯಾತ ನಟರೊಬ್ಬರ ಮಾನವ ಗಾತ್ರದ ಚಿತ್ರ..ಅದರಲ್ಲಿ ಮುಖಗಾತ್ರದ ರಂಧ್ರ. ಅದರಲ್ಲಿ ನಾವೂ ನಮ್ಮ ಮುಖವಿಟ್ಟು ಫೊಟೋ ಕ್ಲಿಕ್ಕಿಸಬಹುದು..ಮಜಾವಿರುತ್ತದೆ. ತುಂಬಾ ಮಂದಿ ಅದನ್ನೇ ಮಾಡಿ ಖುಷಿಪಡುತ್ತಿದ್ದರು.

ಮುಂದಕ್ಕೆ ನೀರಿನಲ್ಲಿ ಹೋಗುವಂತಹ ಆಟ(Water Ride), ನಾನಂತೂ ಅದಕ್ಕೆ ಹೋಗಲು ಹಿಂದೇಟು ಹಾಕಿದೆ.. ಯಾಕೆ ಗೊತ್ತಲ್ಲ…ಅದು ಕೂಡಾ ಭಯದಾಟವೇ ಆಗಿರುತ್ತದೆಯೆಂದು! ನಮ್ಮವರು ಮತ್ತು ಅಳಿಯ ಅದರಲ್ಲಿ ಹೊರಟರು. ಸುಮಾರು ಅರ್ಧ ಗಂಟೆಯ ರೈಡ್ ಆಗಿತ್ತದು. ನಾನು ಮತ್ತು ಮಗಳು ಪುಟ್ಟ ಮೊಮ್ಮಗಳ ಜೊತೆಗೆ ರೈಡ್ ನ ಕೊನೆಯ ತಾಣದಲ್ಲಿ ಕಾಯುತ್ತಾ ಕುಳಿತೆವು. ಅದಾದರೋ ಹೇಗಿತ್ತು ಅಂತೀರಿ.. ಸುಮಾರು ಇಪ್ಪತ್ತು ಅಡಿ ಎತ್ತರದಿಂದ ಜನರು ಕುಳಿತ ದೋಣಿಯು ಕೆಳಗೆ ನೀರಿಗೆ ಬಿದ್ದು ಮುಂದಕ್ಕೆ ನೀರ ಹರಿವಿನ ಜೊತೆಗೆ ಹೋಗಿ ಮೇಲೆ ಬರುವುದಿತ್ತು.  ಸರಿ, ಸುಮಾರು ಇಪ್ಪತ್ತು ಜನರನ್ನು ದೋಣಿಯಲ್ಲಿರುವ ಆಸನದಲ್ಲಿ ಬೆಲ್ಟ್, ತಲೆಗೆ ಹೆಲ್ಮೆಟ್ ನ್ನು ಭದ್ರವಾಗಿ ಬಿಗಿದು ಕೂರಿಸಿದರು. ಆಮೇಲೆ ಅರ್ಧ ಗಂಟೆಯಲ್ಲ.. ಒಂದು ಗಂಟೆ ಕಾದರೂ  ಇವರ ದೋಣಿಯ ಸುಳಿವೇ ಇಲ್ಲ! ನಮಗೆ ಗಾಬರಿಯಾಗತೊಡಗಿತು. ಯಾರಲ್ಲಾದರು ಕೇಳೋಣವೆಂದರೆ ಎಲ್ಲಿ ಕೇಳಬೇಕೆಂದೇ ತಿಳಿದಿರಲಿಲ್ಲ. ಆ ದೋಣಿಯ ವೈಶಿಷ್ಟ್ಯವೆಂದರೆ; ದೋಣಿಯು ಹುಟ್ಟು ಅಥವಾ ಇಂಜಿನಿಂದ ನಡೆಯುವುದಲ್ಲ. ನೀರ ಹರಿವಿನ ಮಾರ್ಗದಲ್ಲಿ ನೀರಿನ ಕೆಳಗಡೆಗೆ ಕಂಬಿಗಳಿರುತ್ತವೆ..ಅದರ ಮೇಲೆ ದೋಣಿ ರೂಪದ ವಾಹನ ಚಲಿಸುತ್ತದೆ. ಆದ್ದರಿಂದ ಅದು ಇಪ್ಪತ್ತು, ಮೂವತ್ತು ಅಡಿಗಳಷ್ಟು ಮೇಲೆಯೂ ಹೋಗಬಹುದು, ಹಾಗೆಯೇ ಅಷ್ಟೇ ಕೆಳಗಡೆಗೂ ಚಲಿಸಬಲ್ಲುದು. ನಾವು ಕಾದು ಕುಳಿತಲ್ಲಿದ್ದ ನೀರಿನ ಹಳ್ಳಕ್ಕೆ ಪದೇ ಪದೇ ದೋಣಿಗಳು ಜಿಗಿಯುತ್ತಿದ್ದಾಗ ಹಳ್ಳದಲ್ಲಿರುವ ನೀರು ನಮ್ಮೆತ್ತರಕ್ಕೆ ಚಿಮ್ಮಿ ಒದ್ದೆ ಮಾಡುತ್ತಿದ್ದುವು..ಅಲ್ಲದೆ ಅದರಲ್ಲಿರುವ ಜನರನ್ನು ಸೂಕ್ಷ್ಮವಾಗಿ ಗಮನಿಸುವುದೇ ಕೆಲಸವಾಯ್ತು ನಮಗೆ; ಯಾಕೆಂದರೆ ಹೆಲ್ಮೆಟ್ ನಿಂದಾಗಿ ಯಾರೆಂದೇ ತಿಳಿಯುತ್ತಿರಲಿಲ್ಲ! ಅಂತೂ ಒಂದೂವರೆ ತಾಸು ಕಳೆದಾಗ ಅವರಿರುವ ದೋಣಿ ಜಿಗಿಯಿತು..ನಮ್ಮ ಕಣ್ಣು ಅರಳಿತು. ನಮ್ಮವರಿಗಂತೂ ಸಾಕೋ ಸಾಕಾಗಿತ್ತು. ಆ ದೋಣಿಯೋ ಹತ್ತಾರು ಕಡೆಗಳಲ್ಲಿ ಹತ್ತಿ, ಇಳಿದು, ಧುಮುಕಿ, ಸುತ್ತಿ ಸುಳಿದು ಬರುತ್ತಿದ್ದಾಗ ಒಂದು ಕಡೆಯಲ್ಲಿ ಕಂಬಿಗಳು ಹಾಳಾಗಿತ್ತಂತೆ. ಅವುಗಳು ಸರಿಯಾದ ಬಳಿಕ ಬಂದುದರಿಂದ ಒಂದು ತಾಸು ತಡವಾಗಿತ್ತೆಂದು ನಮಗೆ ತಡವಾಗಿ ತಿಳಿಯಿತು…ಅಂತೂ ಸುಖಾಂತವೆನ್ನಿ!

 ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=34867

 ಮುಂದುವರಿಯುವುದು………

-ಶಂಕರಿ ಶರ್ಮ, ಪುತ್ತೂರು.

10 Responses

  1. ನಯನ ಬಜಕೂಡ್ಲು says:

    Nice

    • . ಶಂಕರಿ ಶರ್ಮ says:

      ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು

  2. Anonymous says:

    ಅಮೇರಿಕಾದ ಪ್ರವಾಸ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಶಂಕರಿಯವರೆ.

    • . ಶಂಕರಿ ಶರ್ಮ says:

      ಪ್ರೀತಿಯ ಪ್ರೋತ್ಸಾಹಕ ಹಾಗೂ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು,

  3. Anonymous says:

    ಅಮೆರಿಕದ ಪ್ರವಾಸ ಕಥನ ತುಂಬಾ ಎಳೆಯುತ್ತಾ ಸಾಗುತ್ತಾ ಹೋಗುತ್ತಿದೆ…ವಿವರಣೆ ಸಂಕ್ಷಿಪ್ತ ಮಾಡಿ ಹೇಳಿದರೆ ಚೆನ್ನಾಗಿ ಮೂಡಿ… ಲವಲವಿಕೆಯಿಂದ ಕೂಡುತ್ತದೆ ಎಂದು ನನ್ನ ಅನಿಸಿಕೆ ಪ್ರಯತ್ನಿಸಿ ನೋಡಿ ಮೇಡಂ.

    • . ಶಂಕರಿ ಶರ್ಮ says:

      ತಮ್ಮ ಪ್ರತಿಕ್ರಿಯೆ ಹಾಗೂ ಸಲಹೆಗಳಿಗೆ ಬಹಳ ಧನ್ಯವಾದಗಳು..ಖಂಡಿತಾ ಪ್ರಯತ್ನಿಸುವೆ. ನನ್ನ ಸ್ವಾನುಭವಗಳನ್ನು ತಿಳಿಸದೆ, ಬರೇ ವಿಷಯಗಳನ್ನು ತಿಳಿಸುತ್ತಾ ಹೋದರೆ ಅತಿ ನೀರಸವಾಗಬಹುದೇನೋ..?

  4. Padma Anand says:

    ಸುಂದರ ನಿರೂಪಣೆಯೊಂದಿಗೆ ಸೊಗಸಾಗಿ ಮೂಡಿ ಬರುತ್ತಿದೆ ಅಮೆರಿಕಾ ಪ್ರವಾಸ ಕಥನ. ಅಭಿನಂದನೆಗಳು.

  5. ASHA nooji says:

    ಚೆನ್ನಾಗಿದೆ ಅಕ್ಕಾ

Leave a Reply to . ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: