ಶ್ರೀರಾಮ ಸಖ ಸುಗ್ರೀವ

Share Button

ಮಾನವ ಒಂಟಿ ಜೀವಿಯಲ್ಲ. ಸಂಘಜೀವಿ, ಮನೆಯೊಳಗೆ ಸಹಕುಟುಂಬಿಕರು ಇದ್ದರೆ ಹೊರಗೆ ಸ್ನೇಹಿತರು ಇದ್ದಾರೆ. ಗೆಳೆತನ ಎಂಬುದು ಪವಿತ್ರವಾದ ಬಂಧನ. ಗೆಳೆತನವು ಸಮಾನ ವಯಸ್ಕರಲ್ಲಿ, ಒಂದೇ ಅಭಿರುಚಿ ಉಳ್ಳವರಲ್ಲಿ, ಸಮಾನ ಹವ್ಯಾಸಿಗಳಲ್ಲಿ, ಹೀಗೆ ವಿವಿಧ ಮೆಟ್ಟಲುಗಳಲ್ಲಿ ತಲೆದೋರಬಹುದು ಹಾಗೂ ಗಟ್ಟಿಯಾಗಿ ತಳವೂರಬಹುದು. ಹಾಗೆಯೇ ಗೆಳೆತನ ಮಾಡುವಾಗಲೂ ಜಾಗರೂಕರಾಗಿರಬೇಕಾದದ್ದು ಅವಶ್ಯ. ಎಷ್ಟೋ ವೇಳೆ ಸಹವಾಸ ದೋಷದಿಂದ ಒಳ್ಳೆಯವರು ಕೆಟ್ಟವರಾಗಬಹುದು. ಮೋಸಹೋಗಬಹುದು. ತನ್ಮೂಲಕ ಭವಿಷ್ಯ ನರಕವಾಗಬಹುದು.

ಬಾಲ್ಯ ಸ್ನೇಹಿತರನ್ನು ನಾವು ಎಂದಿಗೂ ಮರೆಯುವುದಿಲ್ಲ. ಹಾಗೆ ನೆಂಟಸ್ತಿಕೆ ಸಂಬಂಧದಿಂದ ಸ್ನೇಹತ್ವದ ಬಂಧುತ್ವವೇ ಗಟ್ಟಿಯಾದುದು. ಆಪ್ತ ಸ್ನೇಹಿತರಲ್ಲಿ ಗುಪ್ತವಾಗಿ ಉಳಿಯುವ ವಿಷಯವೆಂಬುದಿಲ್ಲ. ಎಲ್ಲವೂ ತೆರೆದ ಹೃದಯದ ಹಂಚಿಕೆಗಳು. ಸೋತಾಗ, ಕಷ್ಟ ಬಂದಾಗ, ಆಪತ್ಕಾಲದಲ್ಲಿ ನೆರವಾಗುವವನೇ ನಿಜವಾದ ಗೆಳೆಯ ಎನ್ನುತ್ತಾರೆ. ಈ ನಿಟ್ಟಿನಲ್ಲಿ ‘ಸಂಗಾತಿ ಗುಣ ಸೋತು ನೋಡು’ ಎಂಬ  ನುಡಿಗಟ್ಟು ಜನಪದೀಯರಲ್ಲಿ ಬಳಕೆಯಲ್ಲಿದೆ. ಗೆಳೆತನಕ್ಕೆ ದೇಶ, ಕಾಲ, ಜಾತಿ, ಲಿಂಗ ಎಂಬ ಬೇಧವಿಲ್ಲ. ಕುಟಿಲತೆ ಹಾಗೂ ಕೃತ್ರಿಮವಿಲ್ಲದ ನಿಷ್ಕಲ್ಮಶ ಗೆಳೆತನವು ಎಲ್ಲಾ ಕಾಲಕ್ಕೂ ಶ್ರೇಷ್ಠವಾದುದು. ಇಂತಹ ಗೆಳೆಯನೊಬ್ಬ ಅವತಾರ ಪುರುಷನಾದ ಶ್ರೀರಾಮನಿಗೆ ದೊರಕಿದ. ಆತನೇ ಸುಗ್ರೀವ. ಇವರು ಪರಸ್ಪರ ಗೆಳೆಯರಾದಂದಿನಿಂದ ಸುಗ್ರೀವನ ಸಮಸ್ಯೆಯನ್ನು ಬಗೆಹರಿಸಲು ಶ್ರೀರಾಮ ನೆರವಾದರೆ ಸೀತಾನ್ವೇಷಣೆಯಲ್ಲಿ ಸುಗ್ರೀವ ಸಹಾಯ ಹಸ್ತ ನೀಡಿದ.

ಸುಗ್ರೀವನು ಸೂರ್ಯಪುತ್ರನಾದ ವಾನರ, ಇವನ ಜನ್ಮ ವೃತ್ತಾಂತವೂ ಕುತೂಹಲವಾದುದು. ಋಕ್ಷರಜಸ್ಸು ಎಂಬ ವಾನರ ವೀರನು ಸಂತಾನವಿಲ್ಲದೆ ಬಹುಕಾಲ ಶಿವನನ್ನು ಆರಾಧಿಸುತ್ತಿದ್ದನು. ತಪಸ್ಸು ಮಾಡುತ್ತಿದ್ದನು.   ಹೀಗೊಂದು ದಿನ ಅವನು ಸರೋವರವೊಂದರಲ್ಲಿ ಸ್ನಾನ ಮಾಡುತ್ತಿರಲಾಗಿ ತನ್ನಿಂತಾನೇ ಸ್ತ್ರೀಯಾಗಿ ಮಾರ್ಪಟ್ಟನು. ಇದನ್ನೇ ದೈವಲೀಲೆ ಎನ್ನುವುದು, ಆತನು ನೀರಿನಿಂದ ಮೇಲೇಳುವಾಗ ಸ್ತ್ರೀಯಾಗಿದ್ದನು ತಾನೇ! ಆಕಾಶ ಮಾರ್ಗದಲ್ಲಿದ್ದ ಇಂದ್ರನೂ, ಸೂರ್ಯನೂ  ಒಮ್ಮೆಲೇ ನೋಡಿ ಸಂತಾನ ಅನುಗ್ರಹಿಸಿದರಂತೆ. ಆ ವಾನರ ಸ್ತ್ರೀಗೆ ಇಂದ್ರನಿಂದ ವಾಲಿಯೂ, ಸೂರ್ಯನಿಂದ  ಸುಗ್ರೀವನೂ ಜನಿಸಿದರಂತೆ. ಋಕ್ಷರಜಸುವು ಆ ಮಕ್ಕಳನ್ನು ಪೋಷಿಸಿದಳು. ಆದರೆ ಈ ರೂಪದಿಂದ ಪತ್ನಿಯೊಂದಿಗೆ ಸೇರಲು ಅನಾನುಕೂಲವಾದಾಗ ಪರಿತಪಿಸಿದನು. ಆಗ ‘ ವಾಪಸು ಅದೇ ಸರೋವರದಲ್ಲಿ ಸ್ನಾನ ಮಾಡು ಎಂಬುದಾಗಿ’ ಅಶರೀರವಾಣಿಯಾಯಿತು. ಋಕ್ಷರಜಸ್ಸು ಹಾಗೇ ಮಾಡಲು ಪುನಃ ಪುರುಷ ರೂಪವನ್ನೇ ಪಡೆದು ಮುಂದೆ  ಇವನಿಗೆ ಧರ್ಮಪತ್ನಿಯಲ್ಲಿ ಅಂಜನೆ ಎಂಬ ಮಗಳು ಜನಿಸುತ್ತಾಳೆ. ಆ ಅಂಜನೆಯೇ ಮುಂದೆ ರಾಮಭಕ್ತ ಹನುಮಂತನ ತಾಯಿ ಎಂಬ ಕತೆ ನೀವು ಇದೇ ಅಂಕಣದಲ್ಲಿ ಕೇಳಿದ್ದೀರಿ.  ವಾಲಿ, ಸುಗ್ರೀವರು ಸಹೋದರರಾದರೂ ಅವರಿಬ್ಬರಲ್ಲಿ ಬಹಳಷ್ತು ವ್ಯತ್ಯಾಸಗಳಿದ್ದುವು. ಒಂದೇ ಮಾತಿನಲ್ಲಿ ಹೇಳುವುದಾದರೆ ವಾಲಿ ಕೆಟ್ಟವ. ಸುಗ್ರೀವ ಒಳೆಯವ. ವಾಲಿ ಮಹಾ ಬಲಿಷ್ಠನೂ ರಾಕ್ಷಸ ಪ್ರವೃತ್ತಿಯವನೂ ಆಗಿದ್ದು ಸೌಮ್ಯ ಸ್ವಭಾವದ ಸುಗ್ರೀವನನ್ನು ಸೋಲಿಸುತ್ತಿದ್ದ. ಕ್ರೂರಿಯಾದ ವಾಲಿ, ಸುಗ್ರೀವನ  ಹೆಂಡತಿ ರುಮೆಯನ್ನು ಅಪಹರಿಸಿ ತನ್ನರಮನೆಯಲ್ಲಿ ಇಟ್ಟುಕೊಂಡಿದ್ದ.

ವಾಲಿಗೆ ಸುಗ್ರೀವನಲ್ಲಿ ದ್ವೇಷ ಬೆಳೆಯಲು ಒಂದು ಕಾರಣವೂ ಇತ್ತು. ಒಮ್ಮೆ ಮಾಯಾವಿಯೆಂಬ ರಾಕ್ಷಸನು ವಾಲಿಯೊಡನೆ ಅವನ ಗುಹೆಯಲ್ಲಿ ಯುದ್ಧ ಮಾಡಲು ರಕ್ತ ಪ್ರವಾಹವೇ ಗುಹೆಯಿಂದ ಹೊರಗೆ ಹರಿದು ಬಂತು. ಬಹುಕಾಲ ವಾಲಿಯು ಅದರಿಂದ ಹೊರಗೆ ಬರಲಿಲ್ಲ. ಸುಗ್ರೀವನು ತನ್ನಣ್ಣ ಸ್ವರ್ಗಸ್ಥನಾದನೆಂದೇ ತಿಳಿದ. ವಾಲಿಯ ಉತ್ತರ ಕ್ರಿಯಾದಿಗಳನ್ನೆಲ್ಲ ಮಾಡಿ ಮುಗಿಸಿದ ಸುಗ್ರೀವ ಪ್ರಜೆಗಳ ಅಭಿಮತದಂತೆ ರಾಜನಾದ. ಸ್ವಲ್ಪ ಕಾಲದ ಮೇಲೆ ಗುಹೆಯಿಂದ ಹೊರಗೆ ಬಂದ ವಾಲಿಯು ಸುಗ್ರೀವನನ್ನೋಡಿಸಿ ತಾನು ಸಿಂಹಾಸನವನ್ನೇರಿದ. ಮುಂದೆ ಸುಗ್ರೀವನು ತನ್ನಳಿಯನಾದ ಹನುಮ ಮೊದಲಾದವರೊಡನೆ ಋಷ್ಯಮೂಕ ಪರ್ವತವನ್ನು ಸೇರಿ ಅಲ್ಲಿ ರಾಜನಾದ.

ಶ್ರೀರಾಮನು ಸೀತಾದೇವಿಯನ್ನು ಹುಡುಕುತ್ತಾ ಋಷ್ಯಮೂಕಪರ್ವತದ ದಾರಿಯಾಗಿ ಬಂದಾಗ ಸುಗ್ರೀವನ ಪರಿಚಯವಾಗುತ್ತದೆ. ಪರಿಣಾಮವಾಗಿ ಅವರಿಬ್ಬರಲ್ಲಿ ಸ್ನೇಹ ಬೆಳೆಯುತ್ತದೆ. ಸುಗ್ರೀವನು ಸೀತೆಯನ್ನು ಹುಡುಕುವುದಕ್ಕಾಗಿ ಕಪಿನಾಯಕರನ್ನು ಎಲ್ಲಾ ದಿಕ್ಕುಗಳಿಗೂ ಕಳುಹಿಸುತ್ತಾನೆ. ಹಾಗೆಯೇ ಹನುಮಂತನನ್ನು ಲಂಕೆಗೆ ಕಳುಹಿಸಿ ಸೀತೆಯನ್ನು ಅಲ್ಲಿ ಪತ್ತೆ ಮಾಡಿ ಬಂದು ರಾಮನಿಗೆ ತಿಳಿಸುತಾನಷ್ಟೇ? ಸುಗ್ರೀವನು ಶ್ರೀರಾಮನ ಸಹಾಯದಿಂದ ವಾಲಿಯನ್ನು ಸಂಹರಿಸುತ್ತಾನೆ. ಹಾಗೂ ವಾಲಿಯ ಪತ್ನಿ ತಾರೆಯನ್ನು ಪೋಷಿಸುತ್ತಾನೆ. ಮುಂದೆ ಸುಗ್ರೀವನ ಮೇಲುಸ್ತುವಾರಿಯಲ್ಲಿ  ಕಪಿಸೇನೆಯ ಸಹಾಯದಿಂದ ಭಾರತದಿಂದ ಶ್ರೀಲಂಕೆಗೆ ರಾಮಸೇತುವು ನಿರ್ಮಾಣವಾಗುತ್ತದೆ. ಈ ರಾಮಸೇತುವಿನ ಮೂಲಕ ಕಪಿಸೈನ್ಯ ಸಹಿತ ರಾಮ, ಲಕ್ಷ್ಮಣರು , ರಾವಣ, ಕುಂಭಕರ್ಣರನ್ನು ಸಂಹರಿಸಿ ಸೀತೆಯನ್ನು ಅಯೋಧ್ಯೆಗೆ ಮರಳಿ ತರುವುದು ನಮಗೆ ತಿಳಿದಿರುವ ವಾಲ್ಮೀಕಿ ರಾಮಯಣದ ಕಥೆ, ಸೇತುವೆಯಲ್ಲಿ ಸುಗ್ರೀವ, ಹನುಮರ ಪಾತ್ರ ಹಿರಿದಾದುದು. ಸೇತುವೆ ನಿರ್ಮಾಣದಲ್ಲಿ ಪುಟ್ಟ ಅಳಿಲು ಕೂಡಾ ತನ್ನ ಬೆನ್ನ ಮೇಲೆ ಹಿಡಿಸುವಷ್ಟು ಮಣ್ಣು ಹೊತ್ತೊಯ್ದು ಸೇತುವೆಗೆ ಕೊಡವಿ ಹಾಕುವುದರ ಮೂಲಕ ತನ್ನ ರಾಮಸೇವೆಯನ್ನು ಮಾಡಿದೆ. ಇದನ್ನೇ ಇಂದಿಗೂ ಪುಟ್ಟದಾದರೂ  ಮೆಚ್ಚುವಂತ ಪ್ರಾಮಾಣಿಕ ಕಾರ್ಯವನ್ನು ‘ಅಳಿಲುಸೇವೆ’ ಎಂದು ಕೊಂಡಾಡುತ್ತಾರೆ.

ರಾಮಸೇತು ಎಂದರೆ ಧರ್ಮಸೇತು. ಸಮಸ್ತ ದೇಶ, ಭಾಷೆ, ಸಾಹಿತ್ಯದಲ್ಲಿ ಬೆಳಗಿರುವ ರಾಮಾಯಣದ ದೋತಕವಾಗಿ ಇಂದಿಗೂ ಇದೆ. ಸಹಸ್ರ ಸಹಸ್ರ ವರ್ಷಗಳ ಹಿಂದೆ ನಿರ್ಮಿತವಾದ ಈ ಸೇತುಬಂಧವು ಈಗಲೂ ಅಚ್ಚಳಿಯದೆ ಉಳಿದಿದೆ ಎಂದಾಗ  ಬಲು ಅಚ್ಚರಿಯಾಗುತ್ತಿದೆ. ಪ್ರತಿಯೊಬ್ಬ ವಾನರನಿಗೂ ಕೆಲಸವು ಹೇಗೆ ಕೈಗೂಡಬೇಕೆಂದು  ಆಜ್ಞೆಯಿತ್ತು ಮಾಡಿಸಿದವ ಸುಗ್ರೀವ. ಕಾರ್ಯಕರ್ತನು ಕೆಲಸ ಮಾಡಿಸುವ ವೇಳೆ ಕೆಲಸಗಾರರಿಗೆ ಕಟ್ಟಪ್ಪಣೆ ಮಾಡಿಸುವುದಕ್ಕೆ ಈಗಲೂ ಸುಗ್ರೀವಾಜ್ಞೆ ಎನ್ನುತ್ತಾರೆ. ಸಾವಿರಾರು ವರ್ಷಗಳ ಹಿಂದೆ ಸುಗ್ರೀವಾಜ್ಞೆಯ ಮೂಲಕ ಹನುಮಂತ, ಅಂಗದ, ನೀಲ ಮೊದಲಾದ ಕಪಿವೀರರ ನಾಯಕತ್ವದಲ್ಲಿ ನಿರ್ಮಿತವಾದ ರಾಮಸೇತುವನ್ನು ಹಾಳುಗೆಡಹುವ ಹುನ್ನಾರವೂ ಇತ್ತೀಚೆಗೆ ಕೇಳಿಬರುತ್ತಿದೆ. ರಾಜಕೀಯದ ಕೆಲಧುರೀಣರಿಗೆ ಇಂತಹ ದುಷ್ಟ ಬುದ್ದಿಯು ತೊಲಗಿ ಸುದ್ದುದ್ಧಿಯನ್ನು ಶ್ರೀರಾಮಚಂದ್ರನು ದಯಪಾಲಿಸಲಿ ಎಂದು ಪ್ರಾರ್ಥಿಸೋಣ.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

10 Responses

  1. Anonymous says:

    ಧನ್ಯವಾದಗಳು ಸುರಹೊನ್ನೆ ಹೇಮಮಾಲಾ ಹಾಗೂ ಓದುಗರಿಗೆ.

  2. Anonymous says:

    ಹರೇರಾಮ.

  3. Anonymous says:

    ಲಾಯಿಕಾಯಿದು ವಿಜಯಕ್ಕಾ

  4. ನಯನ ಬಜಕೂಡ್ಲು says:

    ತುಂಬಾ ಚೆನ್ನಾಗಿದೆ

  5. ವಿಜಯಾಸುಬ್ರಹ್ಮಣ್ಯ says:

    ವಿಜಯಾಸುಬ್ರಹ್ಮಣ್ಯ ಕುಂಬಳೆ. ಓದುಗರಿಗೆ ಧನ್ಯವಾದಗಳು

  6. ನಾಗರತ್ನ ಬಿ.ಆರ್. says:

    ಎಂದಿನಂತೆ ಪೌರಾಣಿಕ ಕಥೆ ಓದಿಸಿಕೊಂಡು ಹೋಯಿತು. ಧನ್ಯವಾದಗಳು ಮೇಡಂ.

  7. . ಶಂಕರಿ ಶರ್ಮ says:

    ಬಹಳ ಸೊಗಸಾದ ಕಥಾನಿರೂಪಣೆ…ಧನ್ಯವಾದಗಳು ವಿಜಯಕ್ಕಾ.

  8. Padma Anand says:

    ಗೆಳೆತನದ ಮಹತ್ವವನ್ನೂ ಸಹ ಪುರಾಣ ಕಥೆಯೊಂದಿಗೆ ಸೊಗಸಾಗಿ ನಿರೂಪಿಸಿದ್ದೀರಿ. ಅಭಿನಂದನೆಗಳು.

  9. Mittur Nanajappa Ramprasad says:

    ಸಹಜದ ಸ್ನೇಹಕ್ಕೆ ಸೀಮಿತವಿಲ್ಲ/
    ಅಂತರಾತ್ಮದ ಅಮರತ್ವವು/
    ಸಹಜದ ಸ್ನೇಹಕ್ಕೆ ಸೀಮಿತವಿಲ್ಲ/
    ಅಂತರಂಗದ ಅನುಬಂಧವು/

    ಘನತೆಯ ಗೆಳೆತನ ಗಣ್ಯವು/
    ಹೃದಯಗಳ ಸಾಂಗತ್ಯವು
    ಘನತೆಯ ಗೆಳೆತನ ಗಣ್ಯವು/
    ಭಾವನೆಗಳ ಸೌಹಾರ್ದವು/

    ನಿಷ್ಕಪಟ ಮೈತ್ರಿಯು ಸಿರಿಸಂಪತ್ತು/
    ಮಿಗಿಲಾದ ದೈವದಾಶೀರ್ವಾದವು /
    ನಿಷ್ಕಪಟ ಮೈತ್ರಿಯು ಸಿರಿಸಂಪತ್ತು/
    ಹೊರತಾದ ದೈವಾದಾನುಗ್ರಹವು

  10. Vijayasubrahmanya says:

    ಎಲ್ಲರೂ ಉತ್ತಮ ಪ್ರತಿಕ್ರಿಯೆ ನೀಡಿ ಪ್ರೋತ್ಸಾಹಿಸಿದ್ದೀರಿ.
    ಮಿತ್ತೂರು ನಂಜಪ್ಪ ಪ್ರಸಾದ್ ಅಂತೂ ಕವನದ ಮೂಲಕ ಪ್ರತಿಕ್ರಿಯೆ ಮಾಡಿದ್ದೀರಿ. ಧನ್ಯವಾದಗಳು.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: