ಇಂಗ್ಲೆಂಡಿನ ಒಂದು ಪುಟ್ಟ ಹಳ್ಳಿ ಗ್ರೆಸೂನ್

Share Button

ಬಾನಿನಲ್ಲಿ ಚಲಿಸುವ ಮೋಡದಂತೆ ಅಲೆದಾಡುತ್ತಿದ್ದ ಕವಿಗೆ ಕಂಡಿತೊಂದು ಅದ್ಭುತವಾದ ದೃಶ್ಯಕಾವ್ಯ. ಬೀಸುವ ತಂಗಾಳಿಯ ಲಯಕ್ಕೆ ಹೆಜ್ಜೆ ಹಾಕುತ್ತಾ ನಲಿದಾಡುತ್ತಿದ್ದ ಸಾವಿರಾರು ಡ್ಯಾಫೊಡಿಲ್ಸ್ ಹೂಗಳು ಗಗನದಲ್ಲಿ ಮಿನುಗುತ್ತಿದ್ದ ಚುಕ್ಕಿಗಳಿಗೆ ಸವಾಲು ಹಾಕುವಂತೆ ಹೊಳೆಯುತ್ತಿದ್ದವು. ಸನಿಹದಲ್ಲಿದ್ದ ಸರೋವರದ ಅಲೆಗಳ ಜೊತೆ ಸ್ಪರ್ಧೆಗಿಳಿದಂತೆ ನರ್ತಿಸುತ್ತಿದ್ದವು. ವರ್ಡ್ಸ್‌ವರ್ತ್ ಕವಿಯ ಕವನದ ಸಾಲುಗಳು ನೆನಪಾಗಿದ್ದು ಇಂಗ್ಲೆಂಡಿನ ಲೇಕ್ ಪ್ರಾಂತ್ಯದ ಗ್ರೆಸೂನ್‌ಗೆ ಭೇಟಿಯಿತ್ತಾಗ. ಮಗನ ಸ್ನೇಹಿತನಾದ ರಘು ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಆ ಹಳ್ಳಿಯಲ್ಲಿಯೇ ವಾಸ್ತವ್ಯ ಹೂಡಿದ್ದನು. ರಘು ಹಾಗೂ ಅವನ ಹೆಂಡತಿ ಅರ್ಚನ – ಪಶ್ಚಿಮ ಕಂಬರ್‌ಲ್ಯಾಂಡ್‌ನ ಜಿಲ್ಲಾಸ್ಪತ್ರೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಡಾರ್‍ಲಿಂಗ್ಟನ್‌ನಲ್ಲಿದ್ದ ನನ್ನ ತಮ್ಮ ಶಿವು ಮನೆಯಿಂದ ಸುಮಾರು ನೂರು ಮೈಲಿ ದೂರದಲ್ಲಿದ್ದ ಈ ಹಳ್ಳಿಗೆ ಬರುವಾಗ ದಾರಿ ಸಾಗಿದ್ದೇ ಗೊತ್ತಾಗಲಿಲ್ಲ. ಹಸಿರು ಹೊದ್ದ ಬೆಟ್ಟ ಗುಡ್ಡಗಳು, ಝುಳು ಝುಳು ಹರಿಯುವ ಹಳ್ಳ ಕೊಳ್ಳಗಳು, ಬೇಲಿಯೊಳಗೇ ಹುಲ್ಲು ಮೇಯುತ್ತಾ ತಿರುಗಾಡುತ್ತಿದ್ದ ದನ ಕರುಗಳು, ಕುರಿಗಳು, ಬೆಟ್ಟಗಳನ್ನು ಸುತ್ತಿ ಬಳಸಿ ಸಾಗುತ್ತಿದ್ದ ಕಿರಿದಾದ ರಸ್ತೆಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದ್ದವು.. ವಿಸ್ತಾರವಾದ ಬಯಲಿನಲ್ಲಿ ಹಚ್ಚ ಹಸಿರಿನ ನಡುವೆ ಹುಲ್ಲು ಮೇಯುತ್ತಾ ತಿರುಗಾಡುತ್ತಿದ್ದ ದನ ಕರುಗಳನ್ನು ನೋಡಿ ನನ್ನ ಯಜಮಾನರು, ಇಲ್ಲಿನ ಸಾಕು ಪ್ರಾಣಿಗಳು ಪುಣ್ಯ ಮಾಡಿವೆ ಎಂದು ಉದ್ಗಾರ ತೆಗೆದರು. ಅವರ ಮೊಬೈಲಿನ ತುಂಬಾ ಆ ದನಕರುಗಳ ಫೋಟೋ ಕ್ಲಿಕ್ಕಿಸಿದರು.

ಎರಡು ಹಳ್ಳಗಳ ಮಧ್ಯೆ ಹಾಯಾಗಿ ಮಲಗಿರುವ ಪುಟ್ಟ ಗ್ರಾಮ ಗ್ರೆಸೂನ್. ‘ವೆಂಟ್’ ಎನ್ನುವ ಗುಡ್ಡ ಹಳ್ಳಿಯ ಪಕ್ಕದಲ್ಲೇ ಇದೆ. ಮಂಗಳೂರಿನ ಜನ- ಘಟ್ಟದ ಮೇಲಿನವರು ಮತ್ತು ಘಟ್ಟದ ಕೆಳಗಿನವರು – ಎಂದು ಹೇಳುವ ಹಾಗೆ ಇಲ್ಲಿನ ಜನ – ಅಪ್ ವೆಂಟ್ ಮತ್ತು ಡೌನ್ ವೆಂಟ್- ಎನ್ನುವರು. ಸುಮಾರು ನೂರ ಮೂವತ್ತೈದು ಮನೆಗಳಿರುವ ಈ ಹಳ್ಳಿಯ ಜನಸಂಖ್ಯೆ ಐನೂರು. ಹದಿನೇಳನೇ ಶತಮಾನದಲ್ಲಿದ್ದ ಕಲ್ಲಿದ್ದಲು ಗಣಿಗಳೆಲ್ಲ ಈಗ ಮುಚ್ಚಿಹೋಗಿವೆ. ಗಣಿಯ ಕಾರ್ಮಿಕರಿಗಾಗಿ ಕಟ್ಟಿದ್ದ ಸಾಲು ಸಾಲು ಮನೆಗಳು ಹಾಗೂ ಹಳ್ಳಿಯ ಮುಂಭಾಗದಲ್ಲಿ ಇರುವ ಎರಡಂತಸ್ತಿನ, ‘ಪಂಚ್‌ಬೌಲ್ ಪಬ್’ ಗತಕಾಲದ ಇತಿಹಾಸದ ಸಾಕ್ಷಿಗಳಾಗಿ ನಿಂತಿವೆ.

ನಾವು ರಘು ಮನೆ ತಲುಪಿದಾಗ ಮಧ್ಯಾನ್ಹವಾಗಿತ್ತು. ಮಕ್ಕಳು – ಹಾಸಿನಿ, ಜಾಹ್ನವಿ ಮತ್ತು ಜಯ್ ಅವರ ತಾತನೊಡನೆ ಆಲೂಗೆಡ್ಡೆ ಕೀಳುತ್ತಿದ್ದರು. ನಾವೂ ಅವರ ಜೊತೆ ಸೇರಿದೆವು. ಐದು ವರ್ಷದ ಜಯ್ ಕೋಳಿಗೂಡಿನಿಂದ ಎರಡು ಮೊಟ್ಟೆಗಳನ್ನು ತಂದು ಹೆಮ್ಮೆಯಿಂದ ನಮಗೆಲ್ಲಾ ತೋರಿಸಿದ. ಮನೆಯ ಹಿಂಭಾಗದಲ್ಲಿ ಒಂದು ಪುಟ್ಟ ಕೊಳವಿತ್ತು. ನನ್ನ ಮೊಮ್ಮಕಳು ದಿಶಾ ಮತ್ತು ಸಾಶಾ ಕೊಳದಲ್ಲಿದ್ದ ಮೀನುಗಳನ್ನು ಮತ್ತು ಆಮೆಯನ್ನು ನೋಡುತ್ತಾ ನಿಂತವರು ಹಸಿವನ್ನೂ ಮರೆತರು. ಅವರ ಕೈ ತೋಟದಲ್ಲಿ ಬೆಳೆದ ಮೂಲಂಗಿ ಹುಳಿ, ಟೊಮ್ಯಾಟೋ ತಿಳಿಸಾರು, ತೊಂಡೇಕಾಯಿ ಪಲ್ಯ ರುಚಿಯಾಗಿತ್ತು. ಬೆಂಗಳೂರಿನವನಾದ ರಘು, ಮಂಗಳೂರಿನ ಅರ್ಚನ ಅದು ಹೇಗೆ ಈ ಹಳ್ಳಿ ಆಯ್ಕೆ ಮಾಡಿದರೋ ಗೊತ್ತಿಲ್ಲ. ಸಾಮಾನ್ಯವಾಗಿ ಓದು ಕಲಿತವರೆಲ್ಲಾ ನಗರಕ್ಕೆ ಧಾವಿಸುವುದನ್ನು ನೋಡಿದ್ದ ನಮಗೆ ಅಚ್ಚರಿಯೋ ಅಚ್ಚರಿ.

ಊಟವಾಗುತ್ತಿದ್ದ ಹಾಗೇ ನಮ್ಮನ್ನು ‘ ಕ್ಯಾಟ್‌ಬೆಲ್ಸ್ ‘ ಎಂಬ ಬೆಟ್ಟ ಹತ್ತಿಸಿದರು. ಬೆಟ್ಟದ ನೆತ್ತಿಯ ಮೇಲಿನಿಂದ ಹಸಿರು ಹೊಲಗಳು, ಮರಗಿಡಗಳು, ಸರೋವರಗಳು ಹಾಗೂ ಸೂರ್ಯಾಸ್ತ ಸುಂದರವಾಗಿ ಕಾಣುತ್ತಿದ್ದವು. ತಂದೆಯ ನೆನಪಿಗಾಗಿ ಒಂದು ಕಲ್ಲು ಬೆಂಚನ್ನು ಯಾರೋ ಪುಣ್ಯಾತ್ಮ ಹಾಕಿಸಿದ್ದ. ಅಲ್ಲಿ ಕುಳಿತ ನಾವು – ಹಳ್ಳಿಯಲ್ಲಿ ಅವಶ್ಯಕವಾದ ಸೌಲಭ್ಯಗಳು ದೊರೆಯುತ್ತವೆಯೇ?- ಎಂದು ನಮ್ಮನ್ನು ಕಾಡುತ್ತಿದ್ದ ಪ್ರಶ್ನೆಗಳನ್ನು ಅವರ ಮುಂದಿಟ್ಟೆವು. ಶಾಲೆ, ಆಸ್ಪತ್ರೆ, ಅಗತ್ಯ ವಸ್ತುಗಳು, ವಿದ್ಯತ್ ಹಾಗೂ ನೀರಿನ ಸೌಲಭ್ಯ,? – ಅವರು ಕೆಲಸ ಮಾಡುತ್ತಿದ್ದ ಆಸ್ಪತ್ರೆ ಹದಿನೈದು ಮೈಲಿ ದೂರದಲ್ಲಿತ್ತು. ಅರ್ಧ ಗಂಟೆಯ ಪಯಣ. ಇನ್ನು ಮಕ್ಕಳ ಶಾಲೆ ಹತ್ತು ಮೈಲಿ ದೂರದಲ್ಲಿತ್ತು. ಶಾಲೆಯ ಬಸ್‌ನಲ್ಲಿ ಮಕ್ಕಳು ಹೋಗುತ್ತಿದ್ದರು. ವಿದ್ಯುತ್ ಮತ್ತು ನೀರಿನ ಬಗ್ಗೆ ಕೇಳಿದಾಗ ನಕ್ಕುಬಿಟ್ಟರು. ಕಾರಣ ಅಲ್ಲಿ ವಿದ್ಯುತ್ ಮತ್ತು ನೀರಿನ ಸಮಸ್ಯೆ ಯಾರಿಗೂ ಇಲ್ಲವೇ ಇಲ್ಲ. ಎನ್.ಹೆಚ್,ಎಸ್. ಸ್ಕೀಮಿನ ಅಡಿಯಲ್ಲಿ ಅಲ್ಲಿನ ಪ್ರಜೆಗಳೆಲ್ಲರಿಗೂ ಉಚಿತ ಚಿಕಿತ್ಸೆ ಲಭ್ಯ. ಆರೋಗ್ಯ ಏರುಪೇರಾದರೆ ಹದಿನೈದು ನಿಮಿಷದಲ್ಲಿ ಆಂಬ್ಯುಲೆನ್ಸ್ ಬರುವುದು. ಇನ್ನು ಎಸ್.ಎಸ್.ಎಲ್.ಸಿ. ತನಕ ವಿದ್ಯಾಭ್ಯಾಸ ಉಚಿತ. ಅಗತ್ಯ ವಸ್ತುಗಳಿಗಾಗಿ ಒಂದೆರಡು ಅಂಗಡಿಗಳೂ ಇದ್ದವು. ವೇಗವಾದ ಇಂಟರ್‌ನೆಟ್ ವ್ಯವಸ್ಥೆಯೂ ಇತ್ತು. ‘ಸೋಷಿಯಲ್ ಸೆಕ್ಯುರಿಟಿ’ ಅಡಿಯಲ್ಲಿ ಬಡವರಿಗೆ ಆಹಾರ, ವಸತಿಯ ಸೌಲಭ್ಯಗಳು ದೊರೆಯುತ್ತಿದ್ದವು. ಎಲ್ಲ ಮನೆಗಳ ಮುಂದೆ ಸುಂದರವಾದ ಹೂದೋಟ ಇದ್ದರೆ ಮನೆಯ ಹಿಂದೆ ತರಕಾರಿಗಳ ಕೈದೋಟ ಇತ್ತು. ಕೆಲವರು ‘ಗ್ರೀನ್ ಹೌಸ್’ ನಲ್ಲಿ ತರಕಾರಿ ಬೆಳೆದಿದ್ದರು. ಹಳ್ಳಿಯಲ್ಲಿದ್ದ ಎಲ್ಲರಿಗೂ ಎಲ್ಲರ ಪರಿಚಯ ಇತ್ತು. ದಾರಿಯಲ್ಲಿ ಹೋಗುವಾಗ ಬಹಳ ಆತ್ಮೀಯತೆಯಿಂದ ರಘು ದಂಪತಿಗಳನ್ನು ಮಾತನಾಡಿಸುತ್ತಿದ್ದರು. ಬಾಪೂಜಿಯವರ ಆದರ್ಶಗ್ರಾಮಗಳ ಕಲ್ಪನೆ ಇಲ್ಲಿ ಸಾಕಾರಗೊಂಡಿದ್ದವು.

ರಘು ಮನೆಗೆ ಬರುವ ತೋಟದ ಮಾಲಿ ಒಬ್ಬ ನಿವೃತ್ತ ಸೈನಿಕ. ಅವನಿಗೆ ಕೈತೋಟದಲ್ಲಿ ಕೆಲಸ ಮಾಡುವ ಹುಚ್ಚು. ಕರೆಯದೇ ಬರುವ ಅವನು ಎಂದೂ ಹಣ ಮುಟ್ಟುತ್ತಿರಲಿಲ್ಲ. ರಘು ಉಡುಗೊರೆ ಕೊಡುವ ಮೂಲಕ ಅವನ ಋಣ ತೀರಿಸಲು ಯತ್ನಿಸುತ್ತಿದ್ದ. ಅವನು ರಘು ಅತ್ತೆಯನ್ನು, “Hello, Dear Girl Friend” ಎಂದೇ ಮಾತನಾಡಿಸುತ್ತಿದ್ದ. ಕಮಲಮ್ಮನವರು ಅವನಿಗೆ ಊಟ, ತಿಂಡಿಯನ್ನು ಕೊಡದೇ ಇರುವ ದಿನವೇ ಇಲ್ಲ. ಅವನು ಒಮ್ಮೆ ತನಗೂ ರಘು ಅಂತ ಮಗನಿದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದನಂತೆ. ಇವರಿಗೆ ಇಂಗ್ಲಿಷ್ ಗೊತ್ತಿಲ್ಲ, ಅವನಿಗೆ ಕನ್ನಡ ಬರಲ್ಲ. ಆದರೂ ಅವರಿಬ್ಬರ ನಡುವೆ ಮಾತುಕತೆ ನಡೆಯುತ್ತಲೇ ಇರುತ್ತಿತ್ತು. ತಮ್ಮ ತಮ್ಮ ಕಷ್ಟ,ಸುಖ ಹಂಚಿಕೊಳ್ಳುತ್ತಿದ್ದರು. ಎಲ್ಲಿಯ ಕಮಲಮ್ಮ, ಎಲ್ಲಿಯ ಜಾನ್- ಇದೇ ಋಣಾನುಬಂಧ ಅಲ್ಲವೇ?

ಯೂರೋಪಿನ ಪ್ರವಾಸ ಮುಗಿಸಿ ಬಂದ ರಘು ತಂದೆ ತಾಯಿಗಳಿಗೆ ಮಗನ ಮನೆಯ ವಾತಾವರಣ, ಮೊಮ್ಮಕ್ಕಳ ಸಂಗ ಹಿತವಾಗಿತ್ತು. ತಂದೆಯವರು ನಿವೃತ್ತ ಎಂಜಿನಿಯರ್. ಯೋಗದ ಬಗ್ಗೆ ವಿಶೇಷ ಆಸಕ್ತಿ. ಶನಿವಾರ, ಬಾನುವಾರ ತಪ್ಪದೇ ಮೊಮ್ಮಕ್ಕಳಿಗೆ ಯೋಗಾಸನ ಕಲಿಸುತ್ತಿದ್ದರು. ರಘು ಅಂತೂ ಶೀರ್ಷಾಸನ, ಚಕ್ರಾಸನ ಮುಂತಾದ ಕ್ಲಿಷ್ಟಕರವಾದ ಆಸನಗಳನ್ನು ಸಲೀಸಾಗಿ ಮಾಡುತ್ತಿದ್ದ. ಮನೆಯ ಕೆಲಸಗಳನ್ನು ಎಲ್ಲರೂ ಸೇರಿ ಮಾಡುತ್ತಿದ್ದರು. ಬೆಳಗಾಗುತ್ತಿದ್ದ ಹಾಗೇ ರಘು ಅತ್ತೆಯವರು ಮಂತ್ರಗಳನ್ನು ಪಠಿಸುತ್ತಾ ದೇವರ ಪೂಜೆ ಮಾಡುತ್ತಿದ್ದರೆ, ಅವನ ತಂದೆಯವರು ಯೋಗಾಸನ, ಪ್ರಾಣಾಯಾಮ ಮಾಡುತ್ತಿದ್ದರು. ರಘು ತಾಯಿಯೊಡನೆ ಅಡುಗೆ ಕೆಲಸದಲ್ಲಿ ನೆರವಾಗುತ್ತಿದ್ದ. ಅರ್ಚನಳಿಗೆ ಮಕ್ಕಳನ್ನು ಎಬ್ಬಿಸಿ ಶಾಲೆಗೆ ರೆಡಿಮಾಡಿ ಕಳುಹಿಸುವ ಕೆಲಸ. ಶನಿವಾರ, ಬಾನುವಾರ ಬಂತೆಂದರೆ ಮನೆಯಲ್ಲಿ ಹಬ್ಬದ ವಾತಾವರಣ. ಮಕ್ಕಳ ಗಲಾಟೆ, ಹಿರಿಯರ ಮಾತುಕತೆ, ಜೊತೆಜೊತೆಗೇ ಬಂದು ಹೋಗುವ ಅತಿಥಿಗಳ ಕಲರವ.

ಮೊದಲನೆಯ ದಿನ ಹತ್ತಿರದಲ್ಲಿದ್ದ ಸರೋವರಕ್ಕೆ ಹೋದೆವು. ಸರೋವರದ ಸುತ್ತ ಬೆಟ್ಟ ಗುಡ್ಡಗಳು, ಪಕ್ಕದಲ್ಲೇ ಇದ್ದ ಕಾಡು, ಬಗೆ ಬಗೆಯ ಪಕ್ಷಿಗಳು, ದಡದಲ್ಲಿ ಬಿಂಕದಿಂದ ಓಡಾಡುತ್ತಿದ್ದ ಬಾತುಕೋಳಿಗಳು – ಎಂತಹವರನ್ನೂ ಮರುಳು ಮಾಡುತ್ತಿದ್ದವು. ನೀರಿಗಿಳಿದ ಮಕ್ಕಳು ದಡಕ್ಕೆ ಬರಲು ಸಿದ್ದರಿರಲಿಲ್ಲ. ರಘು ದೋಣಿವಿಹಾರಕ್ಕೆ ಟಿಕೆಟ್ ತೆಗೆದಿದ್ದ. ದೋಣಿಯಲ್ಲಿ ಹೋದಾಗಲೇ ಆ ಸರೋವರದ ಉದ್ದ ಅಗಲಗಳು ನಮಗೆ ಗೊತ್ತಾಗಿದ್ದು. ಮಕ್ಕಳು ಟಾಯ್ಲೆಟ್‌ಗೆ ಹೋಗಲು ಚಡಪಡಿಸಿದರು. ಅಲ್ಲಿದ್ದ ಟಾಯ್ಲೆಟ್‌ಗೆ ಹೋಗಲು ನಲವತ್ತು ಪೆನ್ಸ್ ಹಾಕಬೇಕಾಗಿತ್ತು. ನಿರ್ದಿಷ್ಟ ಹಣ ಹಾಕಿದರೆ ಮಾತ್ರ ಅದರ ಬಾಗಿಲು ತೆರೆಯುತ್ತಿತ್ತು. ಟಿಕೆಟ್ ನೀಡಲು ಯಾರೂ ಇರಲಿಲ್ಲ. ಯಾರ ಬಳಿಯೂ ಚಿಲ್ಲರೆ ಇರಲಿಲ್ಲ. ನನ್ನ ಬಳಿ ನಲವತ್ತು ಪೆನ್ಸ್ ಮಾತ್ರ ಇತ್ತು. ನಲವತ್ತು ಪೆನ್ಸ್ ಹಾಕಿ- ‘ಖುಲ್ ಜಾ ಸಿಮ್ ಸಿಮ್’- ಎಂದೆ. ಬಾಗಿಲು ತೆರೆಯಿತು. ನಾವು ಜಾಣತನದಿಂದ ಆ ಬಾಗಿಲನ್ನು ಮುಚ್ಚಲು ಬಿಡಲಿಲ್ಲ. ಒಬ್ಬರ ಹಿಂದೆಯೇ ಮತ್ತೊಬ್ಬರು ಅಂದರೆ ನಾವು ಎಂಟು ಮಂದಿ ಹೋಗಿ ಬಂದೆವು. ನಗಬೇಡಿ. ಮತ್ತೇನು ದಾರಿಕಾಣಲಿಲ್ಲ.

ಸಮೀಪದಲ್ಲಿ ‘ಕ್ಯಾರವಾನ್ ಕ್ಯಾಂಪ್‌ಗಳು’ ಇದ್ದವು. ತಮ್ಮ ವಾಹನಗಳಲ್ಲೇ ಅಡಿಗೆ ಮಾಡುವ ವ್ಯವಸ್ಥೆ, ಮಲಗಲು ಹಾಸಿಗೆ, ಊಟದ ಮೇಜು ಕೊನೆಗೆ ಟಾಯ್ಲೆಟ್ ವ್ಯವಸ್ಥೆಯೂ ಇರುತ್ತದೆ. ಈ ವ್ಯಾನ್‌ಗಳಿಗೇ ಸೈಕಲ್‌ಗಳನ್ನೂ, ದೋಣಿಗಳನ್ನೂ ಕಟ್ಟಿಕೊಂಡು ಬಂದಿರುತ್ತಾರೆ. ಕ್ಯಾರವಾನ್ ಪಾರ್ಕಿಂಗ್‌ಗಳಲ್ಲಿ ನೀರಿನ ವ್ಯವಸ್ಥೆ, ಅಡಿಗೆ ಗ್ಯಾಸ್ ವ್ಯವಸ್ಥೆ, ಟಾಯ್ಲೆಟ್ ವ್ಯವಸ್ಥೆ ಎಲ್ಲವೂ ಇರುವುದು. ಇಲ್ಲಿನ ಜನ ಶುಕ್ರವಾರ ಬಂತೆಂದರೆ ಪಿಕ್‌ನಿಕ್ ಹೊರಟು ಬಿಡುತ್ತಾರೆ. ಪ್ರಕೃತಿಯ ಸುಂದರ ತಾಣಗಳಲ್ಲಿ ಬೀಡು ಬಿಡುತ್ತಾರೆ. ಕಾಡಿನಲ್ಲಿ ಟ್ರೆಕ್ ಮಾಡುವವರು, ಸೈಕಲ್ ಸವಾರಿ ಮಾಡುವವರು ಮತ್ತೆ ಕೆಲವರು ತಮ್ಮದೇ ದೋಣಿಗಳಲ್ಲಿ ವಿಹರಿಸುವವರು. ಅಬ್ಬಾ ಇವರು ಬದುಕಿನ ಎಲ್ಲಾ ಕ್ಷಣಗಳನ್ನು ಆಸ್ವಾದಿಸಲೆಂದೇ ಹುಟ್ಟಿರುವರೋ ಎಂದೆನಿಸುತ್ತದೆ. ಒಂದರೆಕ್ಷಣ, ನಮ್ಮ ಬದುಕಿನ ರೀತಿ ನೀತಿಯ ಬಗ್ಗೆ ಆಲೋಚಿಸಿದೆ. ನಾವು ಗಳಿಸಿದ ಹಣದಲ್ಲಿ ಅರ್ಧಭಾಗವನ್ನು ಮಕ್ಕಳ ಓದಿಗೆಂದೋ, ಮದುವೆಗೆಂದೋ ಅಥವಾ ಏನಾದರೂ ಖಾಯಿಲೆಯಾದರೆ ಚಿಕಿತ್ಸೆಗೆಂದೋ ಉಳಿಸುತ್ತೇವೆ ಅಲ್ಲವೇ? ಪಾಶ್ಚಿಮಾತ್ಯರಲ್ಲಿ ಮಕ್ಕಳ ಮದುವೆ ಮಾಡುವ ಗೋಜಿಲ್ಲ, ಓದಿಗೆಂದು ಖರ್ಚು ಮಾಡಬೇಕಿಲ್ಲ, ಖಾಯಿಲೆಯಾದರೆ ಸರ್ಕಾರವೇ ನೋಡಿಕೊಳ್ಳವುದು – ಹಾಗಾಗಿ ಇವರು ಗಳಿಸಿದ ಹಣವನ್ನೆಲ್ಲ ಪ್ರವಾಸಗಳಿಗೇ ಸುರಿಯುವರೇನೋ ಎಂದೆನಿಸಿತು.

ಮಾರನೆಯ ದಿನ ಮುಂಜಾನೆ ವಾಕ್ ಹೋದಾಗ ಅಲ್ಲಿನ ಚರ್ಚ್ ನೋಡಿದೆವು. ಆ ದಿನ ಭಾನುವಾರ. ಕೆಲವು ಹಿರಿಯರು ಪ್ರಾರ್ಥನೆ ಸಲ್ಲಿಸಲು ಬಂದಿದ್ದರು. ಇತ್ತೀಚಿನ ದಿನಗಳಲ್ಲಿ ಚರ್ಚ್‌ಗೆ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ.. ಚರ್ಚ್‌ನ ಆವರಣದಲ್ಲಿ ಸಮಾಧಿಗಳು ಇದ್ದವು. ಕೆಲವರು ಅವರ ಕುಟುಂಬದ ಸದಸ್ಯರ ಸಮಾಧಿಗಳ ಮುಂದೆ ಪುಷ್ಪಗುಚ್ಛವಿಟ್ಟು ನಮನ ಸಲ್ಲಿಸುತ್ತಿದ್ದರು. ಅದು ಸ್ಮಶಾನದಂತೆ ಕಾಣದೆ ಒಂದು ಶಾಂತಿಧಾಮದಂತೆ ಕಂಗೊಳಿಸುತ್ತಿತ್ತು. ಜೀವನದ ಜಂಜಾಟಗಳನ್ನು ಎದುರಿಸಿ ಬದುಕಿಗೆ ವಿದಾಯ ಹೇಳಿದವರು ಅಲ್ಲಿ ತಣ್ಣಗೆ ಶಾಂತಿಯಿಂದ ಮಲಗಿದ್ದರು.
ವರ್ಡ್ಸ್‌ವರ್ತ್ ಕವಿಯ ಮನೆ ಇರುವ ಸ್ಥಳ ‘ಗ್ರಾಸಿಮಿಯರ್’. ಇದು ಬಹಳ ಸುಂದರವಾದ ತಾಣ. ಆ ಮನೆಯನ್ನು ಒಂದು ಮ್ಯೂಸಿಯಂ ಮಾಡಿದ್ದಾರೆ. ಹೆಡ್ ಫೋನಿನಲ್ಲಿ ಅವನ ಕವನಗಳನ್ನು, ಅವನ ಬದುಕಿನ ಮುಖ್ಯ ಸಂಗತಿಗಳನ್ನು ಕೇಳಿಸುತ್ತಾರೆ. ನನಗೆ ಕುವೆಂಪುರವರ ಮನೆ ಹಾಗೂ ಕವಿಶೈಲದ ನೆನಪಾಯಿತು. ವಿಂಡರ್‌ಮಿಯರ್ ಸರೋವರ ಅಲ್ಲಿನ ಬಹು ದೊಡ್ಡ ಸರೋವರ. ಅದು ಒಂದು ಸಾಗರದಂತೆ ಕಾಣುವುದು. ದೊಡ್ಡ ದೊಡ್ಡ ಅಲೆಗಳು ರಭಸವಾಗಿ ದಡಕ್ಕೆ ಅಪ್ಪಳಿಸುತ್ತಿರುತ್ತವೆ. ಅಲ್ಲಿನ ದೋಣಿವಿಹಾರ ಅವಿಸ್ಮರಣೀಯ. ಅಲ್ಲಿನ ವಿಸ್ತಾರವಾದ ಬಯಲುಗಳಲ್ಲಿ ರಾಶಿ ರಾಶಿ ಡ್ಯಾಫೊಡಿಲ್ಸ್ ಹೂಗಳು ನಸುನಗುತ್ತಿರುತ್ತವೆ. ಆ ಸುಂದರವಾದ ದೃಶ್ಯ ಮನಃಪಟಲದಲ್ಲಿ ಸೇರಿಬಿಟ್ಟಿತ್ತು. ನಗುನಗುತ್ತಾ ನಲಿಯುತ್ತಿದ್ದ ಹೂಗಳು ಮನದಾಳದಲ್ಲಿ ಸಂತಸದ ಅಲೆಗಳನ್ನು ಮೂಡಿಸುತ್ತಿದ್ದವು.

They flash upon that inward eye
Which is the bliss of solitude
And then my heart with pleasure fills
And dances with the Daffodils.

ನಾವು ಮನೆಗೆ ಹಿಂತಿರುಗಿದರೂ – ಆ ಸುಂದರವಾದ ಹಳ್ಳಿ ಗ್ರೆಸೂನ್, ಹೊಂಬಣ್ಣದ ಡ್ಯಾಫೊಡಿಲ್ಸ್ ಹೂಗಳು, ಸರೋವರಗಳು, ಬೆಟ್ಟ ಗುಡ್ಡಗಳು ಕೈ ಬೀಸಿ ಕರೆಯುತ್ತಿದ್ದವು. ನಮ್ಮ ಹುಡುಗ ರಘು ದಿಳ್ಳಿಯಿಂದ ಹಳ್ಳಿಗೆ ಹೋಗಿ ನೆಲೆ ಕಂಡುಕೊಂಡಿರುವುದು ನನಗಂತೂ ಸಂತಸದ ವಿಷಯ. ನಿಮಗೆ?

ಗಾಯತ್ರಿ ಸಜ್ಜನ್

9 Responses

  1. Y.H.Mangodi says:

    ಅಬ್ಬಾ ಎಸ್ಟೊಂದು ಸುಂದರ ತಾಣದಲ್ಲಿ ತಾವು ಭೇಟಿ ಕೊಟ್ಟಿದ್ದೀರಿ,ನಾನು ಇಲ್ಲಿಯೇ ಇದ್ದು ನಿಮ್ಮ ಜೊತೆ ಆ ಸುಂದರ ಹಳ್ಳಿಗೆ ಬಂದು ಸಂತೋಷ್ ಅನುಭವಿಸಿದೆ.
    ಸುಂದರ ಲೇಖನ,ಬರೆಯುವುದನ್ನು ಮುಂದುವರೆಸಿ ನಮ್ಮಂತವರಿಗೆ ನಿಮ್ಮ ಲೇಖನ ಮೂಲಕ ಖುಷಿಯನ್ನು ಹಂಚಿ.
    ಶುಭವಾಗಲಿ

  2. ನಾಗರತ್ನ ಬಿ. ಆರ್ says:

    ಇಂಗ್ಲೆಂಡ್ ನ ಪುಟ್ಟ ಹಳ್ಳಿ ಗ್ರೆಸೂನ್..ಪರಿಚಯ ಕಲಾತ್ಮಕವಾಗಿರುವುದಷ್ಟೇ ಅಲ್ಲದೆ ವಿಚಾರದ ಹೂರಣವನ್ನು ತುಂಬಿ ಸೊಗಸಾದ ನಿರೂಪಣೆ ಯೊಂದಿಗೆ ಮೂಡಿಬಂದಿದೆ ಧನ್ಯವಾದಗಳು ಮೇಡಂ

  3. . ಶಂಕರಿ ಶರ್ಮ says:

    ಇಂಗ್ಲೆಂಡಿನ ಸುಂದರವಾದ ಹಳ್ಳಿ ಗ್ರೆಸೂನ್ ಬಗೆಗಿನ ವಿಸ್ತೃತ ಮಾಹಿತಿಗಳು, ಪ್ರಕೃತಿಯೊಂದಿಗೆ ಮಿಳಿತಗೊಂಡ ಅಲ್ಲಿಯ ಜನರ ಸರಳ ಜೀವನ ಶೈಲಿ, ಸುಂದರ ಹೂದೋಟ…ಆಹಾ.. ಓದುತ್ತಾ ಹೋದಂತೆ ನಾನೇ ಅಲ್ಲಿರುವೆನೇನೋ ಎಂಬ ಭಾವ ಮೂಡಿ ಸಂತೋಷವಾಯ್ತು! ಧನ್ಯವಾದಗಳು ಗಾಯತ್ರಿ ಮೇಡಂ .

  4. ನಯನ ಬಜಕೂಡ್ಲು says:

    ಬಹಳ ಸುಂದರವಾಗಿದೆ ಲೇಖನ. ಸ್ನೇಹಕ್ಕೆ ಭಾಷೆಯ ಹಂಗಿಲ್ಲ, ಇಲ್ಲಿ ಮನಸುಗಳು, ತೋರಿಸುವ ಕಾಳಜಿ ಮುಖ್ಯವಾಗುತ್ತದೆ.

  5. Hema says:

    ಕುತೂಹಲಕಾರಿಯಾದ ಮಾಹಿತಿಯುಳ್ಳ ಸೊಗಸಾದ ಬರಹ..

  6. Padma Anand says:

    ಸುಂದರ ಪ್ರವಾಸೀ ಲೇಖನ ಮನಸ್ಸನ್ನು ಪ್ರಫುಲ್ಲಗೊಳಿಸಿತು.

  7. ನಿಮ್ಮ ಅಭಿಮಾನ ಪೂರ್ವ ಕ ನುಡಿಗಳಿಗೆ ಧನ್ಯವಾದಗಳು

  8. Mittur Nanajappa Ramprasad says:

    “ಗ್ರೆಸೂನ್ ‘ ಹಳ್ಳಿ
    ವಿಶದತೆಯಲ್ಲಿ ವರ್ಣಿಸಿರುವಿರಿ “ಗ್ರೆಸೂನ್ ‘ ಹಳ್ಳಿಯ ಭೂದೃಶ್ಯವ/
    ಯಥಾರ್ಥತೆಯ ನೆಲಗಾಣ್ಕೆಗಳು ಕಾಣುವುದು ವಿಸ್ತಾರದ ವರ್ಣನೆಯಲ್ಲಿ/
    ಕವಿಗಳ ಕಲ್ಪನೆಯಲ್ಲಿ ನಿರೂಪಿಸಿರುವಿರಿ ಹಳ್ಳಿಯ ನೆಲನೋಟವ/
    ವಾಸ್ತವತೆಯ ದೃಶ್ಯಾವಳಿಯು ದರ್ಶಿಸುವುದು ವಿವರತೆಯ ಬಣ್ಣನೆಯಲ್ಲಿ/

    ಹಳ್ಳಿಯ ಸಂಸ್ಕೃತಿಯ ಪರಿಗ್ರಹಿಸಿ ಸ್ವರೂಪಿಸಿರುವಿರಿ ಪರಿಪೂರ್ಣ ವಾಸ್ತವಾಂಶದಲ್ಲಿ/
    ಜನಜೀವನವ ಗಮನಿಸಿ ಸಂಗತವಾಗಿ ವಿವರಿಸಿರುವಿರಿ ಸಂಪೂರ್ಣ ಸಾರಾಂಶದಲ್ಲಿ/
    ಅವಿಸ್ಮರಣೀಯ ಪರಿಸರದ ಸೌಂದರ್ಯವ ಚಿತ್ರಿಸಿರುವಿರಿ ವನಸಿರಿಯ ಅಲ್ಲಣಿಗೆಯಲ್ಲಿ/
    ಸುತ್ತಮುತ್ತಿನ ನಿಸರ್ಗವ ಜೀವಂತವಾಗಿರಿಸಿರುವಿರಿ ಬರವಣಿಗೆಯ ಕಲಾತ್ಮಕತೆಯಲ್ಲಿ/

    ಕಿರು ಲೇಖನದಲ್ಲಿ ಅರಳುವ ಡ್ಯಾಫೊಡಿಲ್ಸ್ ಕುಸುಮಗಳ ಪರಿಮಳವ ಪ್ರಸರಿಸಿರುವಿರಿ/
    ಮನ ಮನಗಳಲ್ಲಿ ಪ್ರಕೃತಿಯ ಚೆಲುವನು ಪ್ರಶಂಶಿಸುವ ಭಾವನೆಗಳ ಅಂಕುರಿಸುರಿವಿರಿ/
    ಕಿರು ಲೇಖನದಲ್ಲಿ ಓದುವ ಕಂಗಳಿಗೆ ನಿಸರ್ಗದ ಮನೋಹರ ಚಿತ್ರವ ಅಚ್ಚೊತ್ತಿಸುರಿವಿರಿ/
    ಮನಸೆಳೆವ ಬರವಣಿಗೆಯಲ್ಲಿ ಓದುಗರಿಗೆ ವಾಸ್ತವಿಕ ನಿರಂಕುಶ ಅನುಭವವ ನೀಡಿರುವಿರಿ/

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: