ಕ್ಷಮಿಸಲಾಗದ ಕರ್ಮ

Share Button

ಅಪ್ಪನ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಿ ಬಂದ ಮೇಲೆ ಈ ಮನೆ ನನ್ನ ಮನೆಯೆಂದೆ ಅನಿಸುತ್ತಿಲ್ಲ. ಎಲ್ಲಿ ನೋಡಿದರೂ ಅಪ್ಪನ ಮುಖವೇ ಕಾಣುತ್ತಿದೆ. ಅಪ್ಪನ ಚಾಳೀಸು, ಬಿಳಿ ಪಂಚೆ, ಶರ್ಟ್, ಅರ್ಘೆ ಪಾತ್ರೆ, ಜಪ ಮಣಿ, ಕುಳಿತುಕೊಳ್ಳುತ್ತಿದ್ದ ಕುರ್ಚಿ, ತಟ್ಟೆ, ಲೋಟ ಹೀಗೆ ಸಾಕಷ್ಟು ನಿರ್ಜೀವ ವಸ್ತುಗಳು ಅಪ್ಪನ ಜೀವನದ ಸಾಕ್ಷಿಗ ಳಂತೆ ನನ್ನ ಸುತ್ತ ಗಿರಗಿರನೆ ಸುತ್ತುತ್ತಲಿದೆ.

ಅಪ್ಪನಿಗೆ ಎಂಬತ್ತು ವರ್ಷದಾಟುತ್ತಲೇ ಆತನಲ್ಲಿ ಅದೇನೋ ವಿಚಿತ್ರ ಬದಲಾವಣೆಗಳು ಆಗ ತೊಡಗಿದ್ದವು. ಮಿತಭಾಷಿಯಾಗಿದ್ದ ಅಪ್ಪ ಅತಿಯಾಗಿ ಮಾತನಾಡುತ್ತಿದ್ದರು. ಅದೊಂದು ದಿನ ನಾನು, ‘ ಅಪ್ಪ ಆಫೀಸ್ ಕೆಲಸದ ಮೇಲೆ ಊಟಿಗೆ ಹೋಗ್ತಿದೀನಿ ‘ ಎಂದು ಹೇಳಿದ್ದೆ ತಡ ತಾನೂ ಬರಬೇಕೆಂದು ಹಿಡಿದ ಹಠ ಇಂದಿಗೂ ಮರೆಯಲು ಸಾಧ್ಯವಿಲ್ಲ. ಕೊಂಚ ನೆಗಡಿ ಆದರೂ ಸಹ ನನ್ನ ಕಚೇರಿಗೆ ಮೇಲಿಂದ ಮೇಲೆ ಕರೆ ಮಾಡಿ ವೈದ್ಯರ ಬಳಿ ಕರೆದುಕೊಂಡು ಹೋಗೆಂದು ತಾಕೀತು ಮಾಡುತ್ತಿದ್ದರು.ಕೇಳಿದ್ದನ್ನೆ ಕೇಳುವ, ಹೇಳಿದ್ದನ್ನೇ ಹೇಳುವ ಅಪ್ಪನ ಪರಿಪಾಠ ಮೊದಮೊದಲು ಕಿರಿ ಕಿರಿಯಾದರೂ ಕ್ರಮೇಣ  ಹೊಂದಿಕೊಂಡೆನು.

ಆದರೆ ನಾನು ಕಟ್ಟಿಕೊಂಡವಳು ಅಷ್ಟೊಂದು ಪ್ರಬುದ್ಧಳಾಗಿರಬೇಕಲ್ಲ! ಪ್ರತಿ ದಿನವೂ ಅಪ್ಪನ ಪುರಾಣವನ್ನೇ ಊದ ತೊಡಗಿದಳು. ‘ ನಿಮ್ಮ ಅಪ್ಪ ಈ ರೀತಿ ಮಾಡಿದ್ರು, ಆ ರೀತಿ ಮಾಡಿದ್ರು….ಅವರು ಕೆಮ್ತಾನೆ ಇರ್ತಾರೆ…. ಬಚ್ಚಲಿಗೆ ಹೋದ್ರೆ ನೀರೆ ಹಾಕಲ್ಲ…. ನನಗೆ ತುಂಬ ಕಷ್ಟ ಆಗ್ತಿದೆ’…. ಒಂದೇ ಎರಡೇ….!! ನನಗೂ ಕೇಳಿ ಕೇಳಿ ಸಾಕಾಗಿ ಹೋಗ್ತಿತ್ತು. ಆಫೀಸಿನಲ್ಲೂ ಕೆಲಸದ ಒತ್ತಡ..ಮನೆಯಲ್ಲೂ ಅಪ್ಪನ ಮೇಲೆ ದೂರುಗಳ ಮಹಾಪೂರ.. ಅಮ್ಮ ಇದ್ದಿದ್ದರೆ ಅಪ್ಪನನ್ನು ಚೆನ್ನಾಗಿ ನೋಡ್ಕೋಳ್ತಿದ್ಲು. ಈಗ ಆತನ ಸಂಪೂರ್ಣ ಜವಾಬ್ದಾರಿ ನನ್ನ ಮೇಲೆಯೇ ಇದೆ.

ಹಾಗು ಹೀಗು ದಿನ ಕಳೆದು ಹೋಗ್ತಿದ್ವು. ಆದರೆ ಆ ಕರಾಳ ದಿನ ಇಷ್ಟು ಬೇಗ ಅಪ್ಪಳಿಸಿ ಬಿಡುತ್ತೆ ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಸರಿಯಾಗಿ ಕಿವಿ ಕೇಳಿಸದ ಅಪ್ಪ ಆ ದಿನ ಟಿವಿಯ ಧ್ವನಿಯನ್ನು ಹೆಚ್ಚಿಗೆ ಮಾಡಿ ತಮ್ಮ ನೆಚ್ಚಿನ ಧಾರಾವಾಹಿಯನ್ನು ನೋಡುತಿದ್ದರು. ಪಕ್ಕದ ಮನೆಯ ರಮೇಶ ಹಾಗು ಅವನ ಹೆಂಡತಿ ಮನೆಗೆ ಬಂದು ನನ್ನಹೆಂಡತಿಯೊಂದಿಗೆ ಜಗಳ ಕಾದೇ ಬಿಟ್ಟರು. ಅವರ ಮಗಳು ಬೋರ್ಡ್ ಪರೀಕ್ಷೆಗಾಗಿ ಓದುತ್ತಿದ್ದು, ನಮ್ಮ ಮನೆಯ ಟಿವಿಯ ಏರು ಧ್ವನಿಯಿಂದಾಗಿ ಅವಳಿಗೆ ಓದಲಾಗುತ್ತಿಲ್ಲ ಎಂದು ಬಾಯಿಗೆ ಬಂದಂತೆ ಬೈದು ಹೊರಟು ಹೋಗಿದ್ದರು. ನಾನು ಮನೆಗೆ ಬಂದದ್ದೇ ತಡ, ನನ್ನ ಹೆಂಡತಿ ಅಪ್ಪನ ಅಷ್ಟೋತ್ತರ ಪಠಣ ಶುರುವಿಟ್ಟು ಕೊಂಡುಬಿಟ್ಟಳು. ಆ ದಿನ ನಾನು ಮಾನಸಿಕ ಸಮತೋಲನವನ್ನೇ ಕಳೆದುಕೊಂಡು ಬಿಟ್ಟೆ. ಅಪ್ಪನನ್ನು ಹಿಗ್ಗಾ ಮುಗ್ಗಾ ಬೈದಾಡಿ ಬಿಟ್ಟೆ.

ಕೊಂಚ ಹೊತ್ತು ಮೌನವಾಗಿ ನನ್ನೆಲ್ಲಾ ಅಸಡ್ಡಾಳತನ ವನ್ನು ನೋಡಿ ಕೇಳಿಸಿಕೊಂಡ ಅಪ್ಪ, ಅಷ್ಟೇ ಮೌನದಿಂದ ವರಾಂಡದಲ್ಲಿ ಕುರ್ಚಿಯ ಮೇಲೆ ಕಣ್ಣು ಮುಚ್ಚಿ ಕುಳಿತುಕೊಂಡು ಬಿಟ್ಟರು. ನನಗೂ ಸಾಕಾಗಿ ಹೋಗಿತ್ತು. ಸ್ವಲ್ಪ ಹೊತ್ತು ಮಲಗಲು ಹೊರಟು ಹೋದೆ.

ಕೊಂಚ ಹೊತ್ತಿನ ನಂತರ ನನ್ನ 14 ವರ್ಷದ ಮಗ ನನ್ನನ್ನು ಎಬ್ಬಿಸುತ್ತಾ ‘ ಅಪ್ಪ, ತಾತ ಎಲ್ಲೂ ಕಾಣ್ತಾ ಇಲ್ಲ! ಏಳಪ್ಪಾ ‘ ಎಂದು ಕೂಗಿ ಹೇಳುತ್ತಿದ್ದದ್ದು ಕೇಳಿ ಬರ ಸಿಡಿಲೆ ಬಡಿದ ಹಾಗೆ ಆಯ್ತು.

ಒಂದರೆಕ್ಷಣದ ಸಿಟ್ಟು ಹಾಗು ಅಸಹನೆ ಎಂತಹ ಆಪತ್ತನ್ನು ಸೃಷ್ಟಿ ಮಾಡಿ ಬಿಡ್ತು! ನನ್ನನು ನಾನು ಎಷ್ಟು ಸಾರಿ ದೂಷಿಸಿಕೊಂಡರೂ ಸಮಾಧಾನವೇ ಆಗುತ್ತಿಲ್ಲ. ಎದ್ದು ಮೂರು ಬೀದಿಗಳಲ್ಲೂ ನೋಡಿ ಬಂದಾಯ್ತು. ಸಂಬಂಧಿಕರು , ಸ್ನೇಹಿತರಿಗೂ ಫೋನಾಯಿಸಿ ಅಪ್ಪನ ಬಗ್ಗೆ ಕೇಳಿ ಆಯ್ತು. ಅಪ್ಪ ಎಲ್ಲೂ ಇಲ್ಲ. ಪೊಲೀಸ್ ಠಾಣೆಯ ಮೆಟ್ಟಿಲು ಏರಿ ದೂರು ಕೊಟ್ಟು ಬಂದಾಯ್ತು. ಅಮ್ಮನ ಫೋಟೋ ಮುಂದೆ ನಿಂತು ಬೆಳಗಿನ ಜಾವದ ತನಕ ಕ್ಷಮೆ ಕೇಳುತ್ತಾ, ಅತ್ತೂ ಅತ್ತೂ ಪಶ್ಚಾತಾಪದ ಬೆಂಕಿಯಲ್ಲಿ ಬೆಂದು ಹೋದೆ.

ಮಾರನೇ ದಿನ ಅಂದರೆ ನೆನ್ನೆ ಮಧ್ಯಾಹ್ನ ಪೊಲೀಸ್ ಠಾಣೆಯಿಂದ ಕರೆ ಬಂದಿತ್ತು. ಬೆಳ್ಳಂಬೆಳಗ್ಗೆ ಹೆದ್ದಾರಿ ದಾಟುವಾಗ ವೇಗವಾಗಿ ಚಲಿಸುತ್ತಿದ್ದ ಲಾರಿಗೆ ಸಿಲುಕಿ ಓರ್ವ ವಯೋವೃದ್ಧ ಮೃತ ಪಟ್ಟಿದ್ದಾರೆ. ಆ ವೃದ್ಧರ ಹೋಲಿಕೆ ನನ್ನ ತಂದೆಯ ಪೋಟೋವೊಂದಿಗೆ ಹೋಲುತ್ತಿದೆ. ಹಾಗಾಗಿ, ದೇಹವನ್ನು ಗುರುತಿಸಲು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಬರಬೇಕೆಂದು ಹೇಳಿದರು.

ನನ್ನ ಹೃದಯದಲ್ಲಿ ಜ್ವಾಲಾಮುಖಿಯೇ ಸ್ಪೋಟವಾದಂತೆ ಭಾಸವಾಯಿತು. ಭಾರವಾದ ಹೆಜ್ಜೆಯನ್ನು ಇಡುತ್ತಾ ಆಸ್ಪತ್ರೆಯತ್ತ ಹೆಜ್ಜೆ ಹಾಕಿದೆ. ಜೀವನದಲ್ಲಿ ಇನ್ನೊಮ್ಮೆ ಸರಿಪಡಿಸಿಕೊಳ್ಳಲಾಗದ ತಪ್ಪು ನಡೆದೇ ಹೋಗಿತ್ತು.

ಅಪ್ಪನ ನಿಸ್ತೇಜ ದೇಹ ನನ್ನೆದುರು ಮಲಗಿತ್ತು. ಅದೇ ಮೌನ ಆವರಿಸಿತ್ತು. ‘ ಅಪ್ಪ ನನ್ನನ್ನು ಕ್ಷಮಿಸಿ ಬಿಡಪ್ಪ. ನಿನ್ನ ಸಾವಿಗೆ ಆ ಲಾರಿ ಚಾಲಕ ಕಾರಣನಲ್ಲ. ನಾನೇ ನಿನ್ನ ಸಾಯಿಸಿ ಬಿಟ್ಟೆ. ಮನೆಯಲ್ಲಿ ಆರಾಮವಾಗಿ ಕೂತಿದ್ದ ನಿನ್ನ ಮೇಲೆ ವಿನಾ ಕಾರಣ ಬೈದಾಡಿ ನೀನು ಮನೆ ಬಿಟ್ಟು ಹೋಗುವ ಹಾಗೆ ಮಾಡಿದೆ ‘. ನನ್ನ ಈ ಅಳಲಿನ ಕೂಗು, ಅಪ್ಪನಿಗೆ ಹೇಗೆ ತಾನೇ ಕೇಳಿಸೀತು? ಬದುಕಿದ್ದಾಗ ಆತನ ಅಳಲನ್ನು, ವಯೋ ಸಹಜ ಗುಣ ಸ್ವಭಾವವನ್ನು ಅರ್ಥ ಮಾಡಿಕೊಳ್ಳದೆ ಹೋದೆ.

ಅಪ್ಪನ ದೇಹ ಬೂದಿಯಾಗಿ, ಆ ಬೂದಿ ತಣ್ಣಗಾಗಿ ಸಂಗಮದಲ್ಲಿ ವಿಸರ್ಜಿಸಿ ಬಂದರೂ ನನ್ನ ಮನಸ್ಸಿನಲ್ಲಿ ಅಪರಾಧಿ ಪ್ರಜ್ಞೆಯ ಜ್ವಾಲೆ ಇನ್ನೂ ಆರಿಲ್ಲ. ಬಹುಶಃ ನನ್ನ ಕೊನೆಯುಸಿರುಇರುವವರೆಗೂ ಆರುವುದಿಲ್ಲ!

ಮಾಲಿನಿ ವಾದಿರಾಜ್

14 Responses

  1. ಹೃದಯ ಹಿಂಡುವ ಮನಕಲಕುವ ಲೇಖನ
    ಅಮ್ಮನ ನೆನಪು ನನಗೂ ಕಾಡಿತ್ತು

  2. ನಯನ ಬಜಕೂಡ್ಲು says:

    ಕೆಲವು ಸನ್ನಿವೇಶಗಳನ್ನು ಎಷ್ಟು ಸಹನೆ ಹೊಂದಿ ಎದುರಿಸಿದರೂ ಸಾಲದು, ಆಡುವ ಒಂದು ದುಡುಕು ಮಾತು ಕೂಡ ಅಪಾರವಾದ ವೇದನೆಗೆ ಕಾರಣವಾಗುತ್ತದೆ.

  3. Anuradha says:

    Kathe tumba chennagidhe

  4. ನಿಮ್ಮ ಅನುಭವ ಎಚ್ಚರಿಸುವ ಸಂದೇಶ ವನ್ನು ಹೊತ್ತು ತಂದಿದೆ ಧನ್ಯವಾದಗಳು ಸೋದರಿ.

  5. Dr Krishnaprabha M says:

    ಎಂದೂ ಕಾಡುತ್ತಲೇ ಇರುವಂತಹದು. ಚಂದದ ನಿರೂಪಣೆ

  6. Jyothi Rao says:

    ಮರಯಾಲಾಗದಂತದ್ದು

  7. Hema says:

    ಆಧುನಿಕ ಜೀವನಶೈಲಿಯ ವಾಸ್ತವಕ್ಕೆ ಕನ್ನಡಿ ಹಿಡಿಯುವಂತಹ ಕತೆ..ಸೊಗಸಾದ ನಿರೂಪಣೆ.

  8. ವಿದ್ಯಾ says:

    ತುಂಬಾ ಚೆನ್ನಾಗಿ ದೆ

  9. Anonymous says:

    ಮನೆಮನೆ ಕಥೆ

  10. . ಶಂಕರಿ ಶರ್ಮ says:

    ಹಿರಿಯರ, ವಯೋವೃದ್ಧರ ಪಾಲನೆಯಲ್ಲಿ ಅಪರಿಮಿತ ಸಹನೆಯ ಅವಶ್ಯಕತೆಯಿದೆ. ಇಲ್ಲಿ, ಬಾಯಿ ತಪ್ಪಿನಿಂದ ಆದ ಅನಾಹುತ ನಿಜವಾಗಿಯೂ ಸರಿಪಡಿಸಲಾಗದಂತಹುದು…ಸೊಗಸಾದ ಕಥೆ.

  11. ಕಿಟ್ಟು says:

    ಮೇಲಿನವರು ಹೇಳಿದ ಹಾಗೆ ಮನೆಮನೆ ಕಥೆ. ಸೊಗಸಾಗಿದೆ.

  12. Anonymous says:

    Narrated very well.

  13. Anonymous says:

    Well narrated. Kudos malini.

Leave a Reply to ನಾಗರತ್ನ ಬಿ. ಆರ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: