ಅವಿಸ್ಮರಣೀಯ ಅಮೆರಿಕ-ಎಳೆ 22

Share Button

ಸಾಂತಾಕ್ರೂಝ್ ಕಡಲಕಿನಾರೆಯಲ್ಲಿ …..

ಮೂರು ತಿಂಗಳ ಮೊಮ್ಮಗಳು ಕವುಚಲಾರಂಭಿಸಿದ ಸಂಭ್ರಮದ ನಡುವೆಯೇ ಅಲ್ಲಿದ್ದ ಪರಿಚಿತ ಕುಟುಂಬಗಳಿಗೆ ಭೇಟಿ ಕೊಡುತ್ತಾ, ಅವರ ಆದರಾತಿಥ್ಯಗಳನ್ನು ಸವಿಯುತ್ತಾ, ವಾರದ ಕೊನೆಯಲ್ಲಿ ಹೊಸ ಜಾಗಗಳಿಗೆ ಹೋಗಿ ಸುತ್ತಾಡುವುದು ನಡೆದಿತ್ತು… ಅವುಗಳಲ್ಲೊಂದು ಸಾಂತಾಕ್ರೂಝ್.

ಸಾಂತಾಕ್ರೂಝ್ ಪ್ರಾಂತ್ಯದ ಅದೇ ಹೆಸರಿನ ಅತ್ಯಂತ ದೊಡ್ಡ ಪಟ್ಟಣವಾದ ಇದು ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಅತ್ಯಂತ ಅಹ್ಲಾದಕರ ಹವೆ, ರೆಡ್ ವುಡ್ ಮರಗಳ ಕಾಡು, ಮಾಂಟೆರೆ (Monterey) ಸಮುದ್ರದ ಸುಂದರವಾದ ಸಾಂತಾಕ್ರೂಝ್ ಕಡಲಕಿನಾರೆ, ಅದರಲ್ಲಿರುವ ಮನರಂಜನಾ ತಾಣ, ಪ್ರಾಕೃತಿಕವಾಗಿ ರೂಪುಗೊಂಡ ಕಲ್ಲಿನ ವಿವಿಧ ಆಕೃತಿಗಳು ಇತ್ಯಾದಿಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಇವುಗಳಲ್ಲದೆ, ಕ್ಯಾಲಿಫೋರ್ನಿಯಾ ರಾಜ್ಯದ ವಿಶ್ವವಿದ್ಯಾನಿಲಯ ಹಾಗೂ ಸಂಶೋಧನಾ ಕೇಂದ್ರವಿರುವುದರಿಂದ ಬಹುದೊಡ್ಡ ವಿದ್ಯಾಕೇಂದ್ರವಾಗಿಯೂ ಪ್ರಸಿದ್ಧಿ ಪಡೆದಿದೆ.    

ನಮ್ಮ ಕುಟುಂಬ ಸ್ನೇಹಿತರೊಡನೆ  ಮಧ್ಯಾಹ್ನ 12:30ಕ್ಕೆ ಕಡಲತಡಿಗೆ, ಪುಟ್ಟ ಮಗುವಿನೊಂದಿಗೆ ತಲಪಿದ ನಾವು, ಮಕ್ಕಳಿಗಾಗಿ ನಮ್ಮೊಂದಿಗಿದ್ದ ಚಂದದ ರೆಡಿಮೇಡ್ ಡೇರೆಯನ್ನು ಹರಡಿ, ಅದರೊಳಗೆ ಮಗುವನ್ನು ಸುರಕ್ಷಿತವಾಗಿ ಇರಿಸಲಾಯಿತು. ಮಂದ ಬಿಸಿಲಿನಲ್ಲಿ ಹಲವರು ಬಿಸಿಲಸ್ನಾನ ಮಾಡುತ್ತಿದ್ದರೆ, ಮಕ್ಕಳ ಮರಳು ಮನೆಗಳು ಅಲ್ಲಲ್ಲಿ ಎದ್ದು ನಿಲ್ಲುತ್ತಿದ್ದವು. ಕಡಲಕಿನಾರೆಯಲ್ಲಿ  ಯಾವುದೋ ಕಳೆ ರಾಶಿ ರಾಶಿ ಬಿದ್ದು ಸ್ವಲ್ಪ ದುರ್ನಾತ ಬೀರುವುದನ್ನು ಕಂಡು, ನನಗೆ ಇಲ್ಲಿಯೂ ಇದೇನು ಹೊಲಸು ಎನ್ನಿಸಿದ್ದು ಸುಳ್ಳಲ್ಲ. ಮತ್ತೆ ತಿಳಿಯಿತು..ಅದು ಸಮುದ್ರ ಕಳೆಯೆಂದು (Seaweed). ಉಪ್ಪು ನೀರಿನಲ್ಲಿ ಅನುಕೂಲಕರವಾದ ವಾತಾವರಣದ ಕೆಲವು ಕಡೆಗಳಲ್ಲಿ ಮಾತ್ರ ಅಗಾಧವಾಗಿ, ಪಾಚಿಯಂತಹ ಉದ್ದುದ್ದ ಹುಲ್ಲಿನಾಕಾರದಲ್ಲಿ , ವಿಶಾಲವಾದ ಸಮುದ್ರ ನೀರಿನ ಮೇಲ್ಪದರಲ್ಲಿ ತೇಲುತ್ತಿರುವಾಗ, ಅಲ್ಲಿನ ನೀರು ಪೂರ್ತಿ ಹಸಿರು ಮಿಶ್ರಿತ ಹಳದಿ ಬಣ್ಣದಿಂದ ಗೋಚರಿಸುವುದು ವಿಶೇಷ. ನೂರಾರು ಪ್ರಭೇದಗಳನ್ನು ಹೊಂದಿರುವ ಈ ಕಳೆಯು,  ಮೀನಿನ ಬೆಳವಣಿಗೆಗೆ ಉತ್ತಮ ಪೂರಕ ಆಹಾರ ಮಾತ್ರವಲ್ಲದೆ ಮನುಷ್ಯ ಮತ್ತು ಪ್ರಾಣಿಗಳಿಗೂ ಅತ್ಯುತ್ತಮ ಪೌಷ್ಟಿಕ ಆಹಾರವಾಗಿದೆ. ಇಲ್ಲಿನ ಆಹಾರಗಳಲ್ಲಿ ಇದನ್ನು ಬಳಸುವುದೂ ರೂಢಿಯಲ್ಲಿದೆ.

ಅಲ್ಲೇ  ಪಕ್ಕದಲ್ಲಿ ಚಂದದ ಕಲ್ಲಿನ ಕಮಾನೊಂದು, ತೆರೆಗಳ ಹೊಡೆತಕ್ಕೆ ಮಿಂದೇಳುತ್ತಾ ಅನಂದದಿಂದ ನಿಂತಿತ್ತು. ಪ್ರಾಕೃತಿಕವಾಗಿ ಕಮಾನಿನಾಕಾರ ಹೊಂದಿದ್ದ ಈ ಕಲ್ಲು, ಪ್ರವಾಸಿಗರ ಆಕರ್ಷಣೆಯಾಗಿದೆ. ಎಲ್ಲರಂತೆ ನಾವೂ ಅದರ ಹಿನ್ನೆಲೆಯಲ್ಲಿ ನಿಂತು ಫೋಟೋ ತೆಗೆಯಲು ಮರೆಯಲಿಲ್ಲ. ಅತ್ಯಂತ ಅಹ್ಲಾದಕರವಾದ  ವಾತಾವರಣದಲ್ಲಿ ತೆರೆಗಳೊಂದಿಗೆ ಆಟವಾಡುತ್ತಾ ನಮ್ಮ ಮಧ್ಯಾಹ್ನದ ಊಟವನ್ನು ಮುಗಿಸಿದೆವು.

ಮುಂದಕ್ಕೆ, ಅಲ್ಲಿ ಇನ್ನೊಂದು ಪಕ್ಕದಲ್ಲಿದ್ದ ಮನರಂಜನಾ ತಾಣದ(Amusement Park) ಭೇಟಿ. ಪುಟ್ಟ ಪಟ್ಟಣದಲ್ಲಿ, ಹಲವಾರು ಆಕರ್ಷಕ ಮೋಜಿನ ಆಟಗಳಿಗೆ ಆಕಾಶದೆತ್ತರ ನಿಂತಿದ್ದವು, ಲಾಸ್ ಏಂಜಲ್ಸ್ ನಲ್ಲಿ ಇದ್ದಂತಹ ತರೆಹೇವಾರಿ ರೋಲರ್ ಕೋಸ್ಟರ್, ಜೈಂಟ್ ವೀಲ್, ಇತ್ಯಾದಿಗಳು. ಸಾವಿರಾರು ಜನರ ಓಡಾಟ, ನಗೆ, ಆಟ ನಡೆದಿತ್ತು..ನೋಡಿ ಖುಷಿಯಾಯ್ತು. ನಿಗದಿತ ದರವನ್ನು ಕೊಟ್ಟು, ಅವರವರ ವಯಸ್ಸಿಗನುಗುಣವಾಗಿ ಬೇಕಾದ ಆಟಗಳನ್ನು ಆರಿಸಿಕೊಳ್ಳಬಹುದು. ಮಕ್ಕಳಿಗಾಗಿ ಇರುವ ಬಣ್ಣ ಬಣ್ಣದ ತಿರುಗುವ ತೊಟ್ಟಿಲುಗಳಲ್ಲಿ ನಾವೂ ಕುಳಿತು ಮಜಾ ಮಾಡುವ ಆಸೆಯಾಗುವುದು ಸುಳ್ಳಲ್ಲ. ನಾವು ಟಿಕೇಟಿಗಾಗಿ ಕ್ಯೂನಲ್ಲಿದ್ದಾಗ ಅಳಿಯ ಹೇಳಿದ ವಿಷಯ ಕೇಳಿ ನಮಗೆ ನಿಜವಾಗಿಯೂ ಹೆದರಿಕೆಯಾಯಿತು. ಅಲ್ಲಿ, ನಮ್ಮ ಮನೆಯಲ್ಲಿ ಕತ್ತಿ, ಚೂರಿಗಳು ಇರುವಂತೆ, ಪಿಸ್ತೂಲು, ಗನ್ನುಗಳು ಬಹಳ ಸುಲಭವಾಗಿ ಸಿಗುತ್ತವೆ.. ಯಾವುದೇ ಲೈಸನ್ಸ್ ಬೇಡ. ಆ ಸಮಯದಲ್ಲಿ, ಅಲ್ಲಲ್ಲಿ ಗುಂಡಿನ ಹಾವಳಿ ತಲೆಯೆತ್ತಿತ್ತು. ಜನಸಂದಣಿಯ ಜಾಗಗಳಲ್ಲಿ, ವಿನಾಕಾರಣವಾಗಿ ಗುಂಡು ಹಾರಿಸುವ ವಿಕೃತ ಸಂತೋಷಿಗಳ ಸಂಖ್ಯೆ ಹೆಚ್ಚಿತ್ತು. ಆದ್ದರಿಂದ ಅಂತಹ ಘಟನೆ ಏನಾದರೂ ಘಟಿಸುವ ಸೂಚನೆಯಿದ್ದರೆ, ತಕ್ಷಣ ನೆಲದಲ್ಲಿ ಬೋರಲು ಮಲಗಲು ಸೂಚಿಸಿದ. ನಾನು ತಕ್ಷಣ, “ಏನೂ ಬೇಡ..ಹಿಂತಿರುಗಿ ಹೋಗೋಣ” ಎಂದಾಗ ಧೈರ್ಯ ಹೇಳಿದವನೂ ಅವನೇ. ಅಲ್ಲಿ ಯಾವುದೇ ಭಯವಿಲ್ಲದೆ, ಸಂತೋಷದಿಂದ ಜಿಗಿದಾಡುವ ಮಕ್ಕಳು, ಉತ್ಸಾಹದಲ್ಲಿರುವ ಜನರನ್ನು ಕಂಡು ಸ್ವಲ್ಪ ಧೈರ್ಯ ಬಂತು. ಹಾಗೆಯೇ, ಇಲ್ಲಿಯೂ ನಮ್ಮ ಸುರಕ್ಷತೆ ಬಗ್ಗೆ ಸಂಶಯ ಪಡುವಂತಾಯಿತೇ ಎಂದು ಬೇಸರವಾದುದು ಸುಳ್ಳಲ್ಲ.

ಬಹಳ ಎತ್ತರದಲ್ಲಿ, ಅಕ್ಕಪಕ್ಕದಲ್ಲಿ, ಎರಡು ಶಕ್ತಿಯುತವಾದ ಸಮಾನಾಂತರವಾದ ಉಕ್ಕಿನ ಹಗ್ಗಗಳಲ್ಲಿ(Ropeway)  ಚಲಿಸುವಂತಹ, ಇಬ್ಬರು ಕುಳಿಕೊಳ್ಳಬಹುದಾದ ಚಲಿಸುವ ಕುರ್ಚಿಗಳಲ್ಲಿ ಬಹು ಎತ್ತರದಲ್ಲಿ ಕುಳಿತು ಸಮುದ್ರದ ಸೊಬಗನ್ನು ಕಣ್ತುಂಬಿಕೊಳ್ಳುವ, ಸರಳ ಮನೋರಂಜನೆಯ ಅವಕಾಶ ನಮಗಿಬ್ಬರಿಗೆ  ಲಭಿಸಿತು. ಅಷ್ಟು ಜನದಟ್ಟಣೆ ಇದ್ದರೂ, ಸ್ವಲ್ಪವೂ ಗಡಿಬಿಡಿ ಇಲ್ಲ. ಶಾಂತವಾಗಿ ಸರತಿಯಲ್ಲಿ ನಿಂತು ಹೋಗುವುದು ನೋಡುವುದೇ ಚಂದ. ನಮ್ಮ ಸರದಿ ಬಂದಾಗ, ಸುರಕ್ಷತೆಗೆ ಹೆಚ್ಚಿನ ಮಹತ್ವ ಕೊಟ್ಟು, ನಮ್ಮನ್ನು ಕುರ್ಚಿಯಲ್ಲಿ ಕೂರಿಸಿ, ಗಟ್ಟಿಯಾದ ಬೆಲ್ಟಿನಲ್ಲಿ ಬಂಧಿಸಿ, ಮತ್ತೊಮ್ಮೆ ಪರೀಕ್ಷಿಸಿ ಕಳುಹಿಸುವರು. ಒಂದು ತಂತಿಯಲ್ಲಿ ಹೋಗುವುದಾದರೆ, ಇನ್ನೊಂದರಲ್ಲಿ ಬರುವುದು ನಡೆದಿತ್ತು.. ಐದಾರು ನಿಮಿಷಗಳ ಆ ಪಯಣ ಮರೆಯುವಂತೆಯೇ ಇಲ್ಲ. ನಮ್ಮೊಂದಿಗಿದ್ದ ಇತರರು, ತಮ್ಮ ಇಷ್ಟದ ಮನೋರಂಜನೆಗಳಲ್ಲಿ ತಲ್ಲೀನರಾಗಿದ್ದರು.

ಸಾಂತಾಕ್ರೂಝ್ ಕಡಲ ತಡಿಯಲ್ಲಿ…

ನಮ್ಮೂರ ಜಾತ್ರೆಯಂತೆ, ಅಲ್ಲಲ್ಲಿ ಅದೃಷ್ಟದಾಟಗಳು(Lucky Games) ನಡೆದಿದ್ದವು. ಬಹಳ ಜನ, ಮಕ್ಕಳು ಮುದುಕರೆನ್ನದೆ ತಮ್ಮ ಅದೃಷ್ಟ ಪರೀಕ್ಷೆಯಲ್ಲಿ ತೊಡಗಿದ್ದರು. ಪಕ್ಕದ ಗಾಡಿಯೊಂದರಲ್ಲಿ ಎಳೆ ಜೋಳವನ್ನು ಸುಟ್ಟು, ಖಾರ, ಹುಳಿ ಸೇರಿಸಿ ಕೊಡುತ್ತಿದ್ದುದರ ರುಚಿ ಸವಿದೆವು. ಇನ್ನೊಂದೆಡೆ, ಅರೆ ಕತ್ತಲೆಯ ವಿಶಾಲವಾದ ಕೋಣೆಯಲ್ಲಿ, ಭಯಾನಕ ಭೂತ, ಪಿಶಾಚಿಯ  ಗೊಂಬೆಗಳನ್ನು ಇರಿಸಿದ ಜಾಗವು ನಿಜವಾಗಿಯೂ ಭಯ ಹುಟ್ಟಿಸಿತು. ಕತ್ತಲೆ ಬೆಳಕಿನ ಅದ್ಭುತ ಸಂಯೋಜನೆಯ ಜೊತೆ ವಿಕಾರ ಧ್ವನಿಗಳ ಅಟ್ಟಹಾಸ, ಅವುಗಳ ವಿಚಿತ್ರ ಚಲನೆ ಎದೆ ನಡುಗಿಸಿತು! ಹೆದರಿಕೊಂಡೇ ಹೊರಗೆ ಬಂದಾಯ್ತು..

ಅಂತೂ, ನಮ್ಮ ಸಾಂತಾಕ್ರೂಝ್ ವೀಕ್ಷಣೆಯು ಮರೆಯಲಾಗದ ಅನುಭವವನ್ನು ನೀಡಿತು.

ಸ್ಯಾನ್ ಫ್ರಾನ್ಸಿಸ್ಕೋ(SFO)

ಮುಂದಿನ ವಾರ ನಮ್ಮ ಭೇಟಿ ನಿಗದಿಯಾದುದು, ಅಲ್ಲಿಯ ಮುಖ್ಯ ಪಟ್ಟಣವಾದ ಸ್ಯಾನ್ ಫ್ರಾನ್ಸಿಸ್ಕೋ(SFO)ಗೆ..ಯಾಕೆ ಗೊತ್ತೇ?.. ಜುಲೈ 4, ಅಮೆರಿಕದ ಸ್ವಾತಂತ್ರೋತ್ಸವದ ದಿನ. ಅದು ಆದಿತ್ಯವಾರವಾದ್ದರಿಂದ ಸೋಮವಾರ ರಜೆ. ಶನಿವಾರ, ಆದಿತ್ಯವಾರದ ರಜೆಗಳ ಜೊತೆ ಸೇರಿ, ವಾರದ ಕೊನೆಯ ದೀರ್ಘ ರಜಾಕಾಲ(Long weekend)ವನ್ನು ಸವಿಯಲು, ಅಲ್ಲಿಯವರು ತುಂಬಾ ಮೊದಲೇ ಯೋಜನೆ ಮಾಡಿ, ದೂರದ ಪ್ರವಾಸವನ್ನು ನಿರ್ಧರಿಸುವರು. ರಜೆಯ ಹಿಂದಿನ ದಿನ ರಾತ್ರಿ ಮನೆ ಬಿಟ್ಟರೆ, ಪುನ: ಮನೆ ಸೇರುವುದು, ರಜೆ ಮುಗಿದ ಮರುದಿನ..ಈ ರೀತಿ ಅಲ್ಲಿಯ ಜನರು ಜೀವನವನ್ನು ಆನಂದಿಸುವ ರೀತಿ ನಿಜಕ್ಕೂ ಮೆಚ್ಚುವಂತಹುದು. ನಾವಂತೂ, SFO ದಲ್ಲಿ ನಡೆಯುವ ಸ್ವಾತಂತ್ರೋತ್ಸವದ ಸಡಗರದಲ್ಲಿ ಪಾಲ್ಗೊಳ್ಳುವ ಅವಕಾಶವೂ ನಮ್ಮದಾಗಿಸಿಕೊಳ್ಳಲು ಕಾತುರರಾಗಿದ್ದೆವು.

ಸುಮಾರು 3000 BCಯಷ್ಟು ಹಿಂದೆಯೇ SFO ದಲ್ಲಿ ಜನವಾಸವಿದ್ದ ಬಗ್ಗೆ ಮಾಹಿತಿಯಿದ್ದರೂ, 1769ರಲ್ಲಿ ಹೊರನಾಡಿನಿಂದ ಬಂದ ಸ್ಪಾನಿಷ್ ಜನರು ತಮ್ಮ ಮೊದಲ ಹೆಜ್ಜೆ ಇಲ್ಲಿ ಇರಿಸಿದ್ದೂ ಅಲ್ಲದೆ, 1775ನೇ ಇಸವಿಯಲ್ಲಿ ಅವರ ಮೊದಲನೇ ಹಡಗು ಇಲ್ಲಿಯ ಸಮುದ್ರ ತೀರದಲ್ಲಿ ಲಂಗರು ಹಾಕಿ, 1776 ರಲ್ಲಿ ಅವರು ತಮ್ಮ ಆಡಳಿತವನ್ನೂ ಇಲ್ಲಿ ಪ್ರಾರಂಭಿಸಿದರು. ಆ ದಿನಗಳಲ್ಲಿ, SFO ಮೆಕ್ಸಿಕೋ ದೇಶದ ಒಂದು ಭಾಗವಾಗಿತ್ತು. 1821ರ ಸ್ವಾತಂತ್ರ್ಯಾ ನಂತರದಲ್ಲಿ ಅಮೆರಿಕವು, 1846ರಲ್ಲಿ ನಡೆದ ಮೆಕ್ಸಿಕೋ ಯುದ್ಧದಲ್ಲಿ ಜಯಗಳಿಸಿ ಈ ಭೂಭಾಗವನ್ನು ತನ್ನ ಸ್ವಾಧೀನಪಡಿಸಿಕೊಂಡು ಸ್ಯಾನ್ ಫ್ರಾನ್ಸಿಸ್ಕೋ ಎಂದು ಪುನರ್ನಾಮಕರಣ ಮಾಡಿತು. ಆ ದಿನಗಳಲ್ಲಿ ಬರೇ 1000 ಜನಸಂಖ್ಯೆ ಇದ್ದಂತಹ ಪ್ರದೇಶವು, 1849ರಲ್ಲಿ, ಕ್ಯಾಲಿಫೋರ್ನಿಯ ಗೋಲ್ಡ್ ರಶ್ ಎಂದೇ ಪ್ರಸಿದ್ಧವಾದ ಚಿನ್ನದ ಹುಡುಕಾಟದ ಸಮಯದಲ್ಲಿ ಒಮ್ಮೆಲೇ ಬೇರೆ ಬೇರೆ ದೇಶಗಳಿಂದ ಜನರು ಬರತೊಡಗಿ, ಜನಸಂಖ್ಯೆಯು ಅತ್ಯಲ್ಪ ಕಾಲದಲ್ಲಿ 25,000ವನ್ನು ದಾಟಿತು. ಆ ಬಳಿಕ, ಇದು ಸಂಪದ್ಭರಿತ ಪ್ರದೇಶಗಳಲ್ಲಿ ಒಂದಾಗಿರುವುದು ಇದರ ಹೆಗ್ಗಳಿಕೆ.

SFO ದ ಸುಮಾರು  122 ಚ. ಕಿ.ಮೀ. ವಿಸ್ತೀರ್ಣವಿರುವ ಭೂಭಾಗದ 80%  ಕಡಲಿನಿಂದ ಆವೃತವಾಗಿದ್ದು, ಅತ್ಯಂತ ಸುಂದರವಾದ, ಉದ್ದವಾದ ಕಡಲಕಿನಾರೆಯನ್ನು ಹೊಂದಿದೆ..ನಮ್ಮ ದೇಶದಂತೆ. ಹೆಚ್ಚಿನ ದಿನಗಳಲ್ಲಿ ಮಂಜು ಮುಸುಕಿದ ವಾತಾವರಣವಿರುವ ಇದು, ಉತ್ತರ ಅಮೆರಿಕದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಪಟ್ಟಣವಾಗಿದ್ದು, ಇಲ್ಲಿಯ ರಿಯಲ್ ಎಸ್ಟೇಟ್ ಬೆಲೆಯು ಅತ್ಯಂತ ಹೆಚ್ಚು. ಸಾಂಸ್ಕೃತಿಕ, ವಾಣಿಜ್ಯ, ಹಣಕಾಸಿನ ವಹಿವಾಟುಗಳಿಗೆ SFO ಬಹಳ ಪ್ರಸಿದ್ಧ.  ದೇಶಕ್ಕೆ ಅತೀ ಹೆಚ್ಚು ಆದಾಯ ತರುವ ಪಟ್ಟಣಗಳಲ್ಲೊಂದಾಗಿರುವ ಇದರಲ್ಲಿ ಈಗ ಸುಮಾರು 8,05,500 ಜನರು ವಾಸವಾಗಿದ್ದಾರೆ. ಇಲ್ಲಿಯ ಜನದಟ್ಟಣೆಯು ಅತೀ ಹೆಚ್ಚಿದ್ದು, ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಸಮುದ್ರತೀರದ ಗಗನಚುಂಬಿ ಕಟ್ಟಡಗಳು ನಗರದ ಅಂದವನ್ನು ಹೆಚ್ಚಿಸಿವೆ. ಎಷ್ಟೇ ಸಂಪದ್ಭರಿತವಾಗಿದ್ದರೂ, ಆಗಾಗ ಪ್ರಬಲ ಭೂಕಂಪಕ್ಕೆ ಒಳಗಾಗಿ, ಪ್ರಕೃತಿಯ ಬಲವಾದ ಹೊಡೆದಕ್ಕೆ ಸಿಕ್ಕಿ ನಲುಗುವುದು ತಪ್ಪಿದ್ದಲ್ಲ. ನಮ್ಮ ಮನೆ SFO ದಿಂದ ಸುಮಾರು ಎಪ್ಪತ್ತೈದು ಕಿ.ಮೀ ದೂರದಲ್ಲಿದ್ದರೂ, ಒಂದು ಮಧ್ಯರಾತ್ರಿಯಲ್ಲಿ ಆದಂತಹ ಸಣ್ಣದೊಂದು ಭೂಕಂಪವು  ನನ್ನ ಅರಿವಿಗೆ ಬಂದಿರಲಿಲ್ಲ. ಬೆಳಿಗ್ಗೆ ಅದರ ಬಗ್ಗೆ ಸುದ್ದಿ ತಿಳಿದಾಗ, ಹಿಂದಿನ ದಿನ ರಾತ್ರಿ ಮೈಯಿಡೀ ಸ್ವಲ್ಪ ಓಲಾಡಿ, ತಲೆ ಸುತ್ತಿದ ಅನುಭವವಾದುದು ಇದರ ಪ್ರಭಾವವೆಂದು ತಿಳಿಯಿತು! ಈ ಪ್ರದೇಶವು,1906ರಲ್ಲಿ ಭಯಾನಕ ಭೂಕಂಪಕ್ಕೆ ಒಳಗಾಗಿ, ಅತೀ ಕಡಿಮೆ ಸಮಯದಲ್ಲಿ ಅಷ್ಟೇ ವೇಗವಾಗಿ ಮೇಲೆದ್ದು ಬಂದುದು ಅಲ್ಲಿಯ ಜನರ ಮನೋಬಲಕ್ಕೆ ಸಾಕ್ಷಿಯಾಗಿದೆಯಲ್ಲವೇ?

ಮುಂದುವರಿಯುವುದು…..

 ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ :http://surahonne.com/?p=35373

–ಶಂಕರಿ ಶರ್ಮ, ಪುತ್ತೂರು.                                                  

6 Responses

  1. ಪ್ರವಾಸ ಕಥನ ಎಂದಿನಂತೆ ಓದಿಸಿಕೊಂಡು ಹೋಯಿತು. ಇಂದಿನ ಸಾಂತಾಕ್ರೋಝ..ಮತ್ತು ಸ್ಯಾನ್ ಪ್ರಾನ್ಸ್ ಸ್ಕೊ…ಸ್ಥಳ ಪರಿಚಯ…ಅದರ ಅನುಭವ.. ಚಿತ್ರ ನಮ್ಮ ಮನದ ಮುಂದೆ ತಂದಿಟ್ಟಿರುವ ರೀತಿ ಮುದತಂದಿತು..
    ಧನ್ಯವಾದಗಳು ಮೇಡಂ

    • . ಶಂಕರಿ ಶರ್ಮ says:

      ತಮ್ಮ ಪ್ರೀತಿಯ ಮೆಚ್ಚುಗೆಯ ನುಡಿಗಳಿಗೆ ಕೃತಜ್ಞತೆಗಳು ಮೇಡಂ.

  2. ನಯನ ಬಜಕೂಡ್ಲು says:

    Nice

  3. Padma Anand says:

    ಪ್ರವಾಸದಲ್ಲಿ ಗಮನಕ್ಕೆ ಬರುವ ಎಲ್ಲ ಮಜಲುಗಳನ್ನೂ ಸುಂದರವಾಗಿ ಕಟ್ಟಿಕೊಡುತ್ತಿರುವ ನಿಮಗೆ ತುಂಬು ಮನದ ವಂದನೆಗಳು.

    • . ಶಂಕರಿ ಶರ್ಮ says:

      ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು ಮೇಡಂ.

Leave a Reply to ನಾಗರತ್ನ ಬಿ. ಆರ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: