ಕಾದಂಬರಿ: ನೆರಳು…ಕಿರಣ 20

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
ಅಡುಗೆ ಮನೆಯಲ್ಲಿ ನಾರಾಣಪ್ಪನೊಡನೆ ಮಾತನಾಡುತ್ತಾ ರಾತ್ರಿಯ ಅಡುಗೆಗೆ ಸಹಾಯ ಹಸ್ತ ಚಾಚಿದ್ದ ಭಾಗ್ಯಾಳಿಗೆ ಹಾಲಿನಲ್ಲಿ ಕುಳಿತಿದ್ದ ಮಾವನವರಿಂದ ಕರೆ ಬಂತು. ಆಲಿಸಿದ ನಾರಾಣಪ್ಪ “ಚಿಕ್ಕಮ್ಮಾವ್ರೇ, ಮಾವನವರು ಕರೆಯುತ್ತಿದ್ದಾರೆ ಅದೇನು ಹೋಗಿ ಕೇಳಿ” ಎಂದರು. ಅಷ್ಟರಲ್ಲಿ ಸೀತಮ್ಮನವರೇ ಅಲ್ಲಿಗೆ ಬಂದರು. “ಭಾಗ್ಯಾ ಬೇಗ ಬಾ, ನಿಮ್ಮ ಮಾವನವರು ತಂಬೂರಿ ಹಿಡಿದು ಕುಳಿತಿದ್ದಾರೆ” ಎಂದರು.

“ಹೌದೇ ! ಏನಂತೆ ಅತ್ತೆ, ಹಾಡುತ್ತಾರೇನು?” ಎಂದು ಕೇಳಿದಳು ಭಾಗ್ಯ.

“ಹಾಡುವುದೇನು, ಎಲ್ಲರೂ ಹಾಡಬೇಕಂತೆ. ನಾಳೆ ನಿನ್ನ ಜೊತೆ ನಿನ್ನ ಸೋದರಿಯರೆಲ್ಲ ಅಮ್ಮನ ಮನೆಗೆ ಹೊರಟಿದ್ದಾರೆ. ನೀನೇನೋ ಈ ಮನೆ ಸೊಸೆ, ಮತ್ತೆ ಹೊಳ್ಳಿ ಬರಲೇಬೇಕು. ಬರುತ್ತೀಯೆ. ಆ ಮಕ್ಕಳು ಮತ್ತೆ ಯಾವಾಗ ಬರುತ್ತಾರೋ. ಎಲ್ಲರ ಹತ್ತಿರ ಇನ್ನೊಮ್ಮೆ ಹಾಡು ಕೇಳುವ ಆಸೆಯಂತೆ ನಿಮ್ಮ ಮಾವನವರಿಗೆ. ಬಾ..ಬಾ..ಶ್ರೀನಿಯೂ ಅಲ್ಲೇ ಇದ್ದಾನೆ” ಎಂದು ಅವಸರ ಮಾಡಿದರು.

ಸರಿ ಎಲ್ಲರೂ ಸೇರಿ ಯಾವ ಬಿಂಕ ಬಿಗುಮಾನವಿಲ್ಲದೆ ಹಾಡಿದರು. ಭಾಗ್ಯಳ ಕಂಠಸಿರಿಗೆ ಜೋಯಿಸರು ಮಾರುಹೋದರು. “ಅಬ್ಬಾ ! ಎಷ್ಟು ಚೆನ್ನಾಗಿ ಹಾಡುತ್ತೀಯೆ ತಾಯೀ” ಎಂದು ಹೊಗಳಿದರು.

“ಹೌದು ಮಾವಯ್ಯಾ, ನನಗೆ ಸಂಗೀತಾಂದ್ರೆ ಪ್ರಾಣ. ಅದರಲ್ಲಿ ಸೀನಿಯರ್ ಪರೀಕ್ಷೆಯನ್ನು ಪಾಸು ಮಾಡಿದ್ದೇನೆ. ವಿದ್ವತ್ ಮಾಡಬೇಕೆಂಬ ಆಸೆಯಿದೆ. ನೀವೆಲ್ಲ ಅನುಮತಿ ಕೊಟ್ಟರೆ”

ಜೋಯಿಸರು ತಮ್ಮ ಹೆಂಡತಿ, ಮಗನ ಮುಖಗಳನ್ನು ನೋಡಿದರು. ಅವರಿಬ್ಬರೂ ನಾವೇನೂ ಹೇಳಿಲ್ಲವೆಂಬಂತೆ ಸಂಜ್ಞೆ ಮಾಡಿದರು. ಹಾಗಾದರೆ ಎಂದುಕೊಂಡು ಸೊಸೆಯ ಕಡೆ ತಿರುಗಿದರು. ಅವಳ ಗಂಭೀರ ಮುಖಭಾವದಲ್ಲಿ ಅವರಿಗೆ ಏನನ್ನೂ ಕಾಣಲಾಗಲಿಲ್ಲ. ಆದರೂ ಅಂದು ನಾವೆಲ್ಲ ಮಾತನಾಡಿದ್ದನ್ನೇನಾದರೂ ಕೇಳಿಸಿಕೊಂಡಳೇ ಅಥವಾ ಅವಳ ಸೋದರಿಯರ ಮೂಲಕ ಏನಾದರೂ ಸುಳಿವು ಸಿಕ್ಕಿತೇ, ಛೇ..ಛೇ ಹಾಗಿರಲಾರದು. ಮಾತನಾಡುವ ಸಮಯದಲ್ಲಿ ಸೀತಾಳೇ ಯಾರ್‍ಯಾರು ಎಲ್ಲಿದ್ದರೆಂಬುದನ್ನು ಗಮನಿಸಿದ್ದಳು.  ಏನಾದರಾಗಲೀ “ನಮ್ಮನ್ನು ಈ ಸಂದಿಗ್ಧತೆಯಿಂದ ಪಾರು ಮಾಡಿದಳು ಈ ಹುಡುಗಿ” ಎಂದುಕೊಂಡರು. “ಭಾಗ್ಯಮ್ಮ ಇದಕ್ಕೆ ನಮ್ಮ ಕಡೆಯಿಂದ ಯಾವ ನಿರ್ಬಂಧವೂ ಇಲ್ಲಮ್ಮ.” ಎಂದು ಹೇಳಿದರು ಜೋಯಿಸರು.

“ಹೌದಾ ಹಾಗಾದರೆ ನಾಳೆ ಹೇಗೂ ಅಮ್ಮನ ಮನೆಗೆ ಹೋಗುತ್ತಿದ್ದೇನೆ. ಅಲ್ಲಿಂದ ಸಂಗೀತದ ಪರೀಕ್ಷೆ ಪಾಸುಮಾಡಿದ ಸರ್ಟಿಫಿಕೇಟುಗಳಿವೆ. ಅವುಗಳನ್ನು ತಂದುಬಿಡುತ್ತೇನೆ. ಇಲ್ಲೇ ಸಮೀಪದಲ್ಲಿ ಡಾ.ವಸುಂಧರಾ ಎಂಬುವವರು ‘ನಿನಾದ’ ಎಂಬ ಸಂಗೀತಶಾಲೆಯನ್ನು ನಡೆಸುತ್ತಿದ್ದಾರೆ. ಅಲ್ಲಿ ವಿಚಾರಿಸಿ ಸೇರಿಕೊಳ್ಳಲೇ?”

“ಭಾಗ್ಯಾ, ನಿನ್ನ ತೀರ್ಮಾನವೇನೋ ಸರಿಯಾದದ್ದೇ. ಒಳ್ಳೆಯದೇ, ಆದರೆ ನೀನು ಸಂಗೀತಶಾಲೆಗೇ ಹೋಗಬೇಕಾಗಿಲ್ಲ. ನನಗೆ ಗೊತ್ತಿರುವ ಒಂದಿಬ್ಬರು ಸಂಗೀತಸಾಧಕರು ಇದ್ದಾರೆ. ಅವರುಗಳಲ್ಲಿ ಯಾರನ್ನಾದರೂ ಮನೆಗೇ ಬಂದು ಪಾಠ ಹೇಳಿಕೊಡುವಂತೆ ಒಪ್ಪಿಸುತ್ತೇನೆ.” ಎಂದನು ಶ್ರೀನಿವಾಸ.

ಗಂಡ ಹೆಳಿದ ಮಾತನ್ನು ಕೇಳಿದ ಭಾಗ್ಯ ಮನಸ್ಸಿನಲ್ಲಿ “ಹೂಂ ನನ್ನನ್ನು ಮನೆಯಲ್ಲಿಯೇ ಕಟ್ಟಿಹಾಕಲು ಈ ಹುನ್ನಾರ. ನನಗೆ ತಿಳಿಯುವುದಿಲ್ಲವೇ. ಮದುವೆಯಾಗಿ ಹದಿನೈದು ದಿನಗಳಷ್ಟೇ ಆಗಿದ್ದರೂ ನಿಮ್ಮ ಸ್ವಭಾವ, ಹೆಂಡತಿಯನ್ನು ಮುಷ್ಟಿಯಲ್ಲಿ ಇಟ್ಟುಕೊಳ್ಳಬೇಕೆಂಬ ಹಂಬಲ. ಹೆಣ್ಣುಮಕ್ಕಳ ಹಣೆಯ ಬರಹವೇ ಇಷ್ಟು. ಹೆತ್ತವರಿಗೆ ಜವಾಬ್ದಾರಿಯನ್ನು ಕಳೆದುಕೊಳ್ಳುವ ಆತುರ, ಕಟ್ಟಿಕೊಂಡವರಿಗೆ ಅವರಿಷ್ಟದಂತೆಯೇ ನಡೆಯಬೇಕೆಂಬ ಯೋಚನೆ. ಒಟ್ಟಿನಲ್ಲಿ ನಮ್ಮ ಆಸೆ ಆಕಾಂಕ್ಷೆಗಳೂ ಧೂಳಿಪಟ. ಪುಣ್ಯಕ್ಕೆ ಮನೆಯಲ್ಲಿ ಎಲ್ಲರಿಗೂ ಸಂಗೀತವೆಂದರೆ ಪರಮಪ್ರೀತಿ, ಇದನ್ನೇ ನಾನೇಕೆ ಭದ್ರವಾಗಿ ಹಿಡಿದುಕೊಳ್ಳಬಾರದು. ಕನಸಿನ ಗಂಟಿಗಿಂತ ವಾಸ್ತವದ ಬದುಕಿಗೆ ಹೊಂದಿಕೊಳ್ಳುವುದೇ ಉತ್ತಮ. ಹೆಚ್ಚು ವಾದವಿವಾದಕ್ಕೆ ನಿಂತರೆ ಬಾಳದೋಣಿಯೇ ಮೊಗಚೀತು. ಇದರಿಂದ ನನ್ನ ಉಳಿದ ತಂಗಿಯರ ಬಾಳಿಗೆ ತೊಡಕಾಗಬಾರದು. ಎಂದು ನಿರ್ಧಾರ ಮಾಡಿದಳು”

“ಭಾಗ್ಯಾ..ಭಾಗ್ಯಮ್ಮಾ, ಏಕಮ್ಮಾ ಏನೂ ಮಾತನಾಡುತ್ತಿಲ್ಲ. ಶ್ರೀನಿ ಹೇಳಿದ್ದು ನಿನಗೆ ಇಷ್ಟವಾಗಲಿಲ್ಲವೇ?” ಎಂದು ಪ್ರಶ್ನಿಸಿದರು ಸೀತಮ್ಮ.

ಅವರ ಮಾತಿನಿಂದ ಎಚ್ಚೆತ್ತ ಭಾಗ್ಯ “ಅಯ್ಯೋ ತಪ್ಪು ತಿಳಿಯಬೇಡಿ ಅತ್ತೆ. ನನ್ನಾಸೆ ಇಷ್ಟು ಸುಲಭವಾಗಿ ಕೈಗೂಡಿತಲ್ಲಾ ಎಂಬ ಸಂತೋಷದಿಂದ ಮಾತೇ ಹೊರಡುತ್ತಿಲ್ಲ” ಎಂದಳು. ಅಷ್ಟರಲ್ಲಿ ನಾರಾಣಪ್ಪ “ಅಡುಗೆ ಆಗಿದೆ ಎಲ್ಲರೂ ಊಟಕ್ಕೆ ಬನ್ನಿ” ಎಂದು ಕರೆದರು. ಅವನ ಕರೆಗೆ ಓಗೊಡುವಂತೆ ತಂಬೂರಿಯನ್ನು ಅದರ ಜಾಗದಲ್ಲಿಟ್ಟು “ಕೈಕಾಲು ತೊಳೆದುಕೊಂಡು ಎಲ್ಲರೂ ಊಟಕ್ಕೆ ಒಟ್ಟಿಗೇ ಕುಳಿತುಬಿಡೋಣ. ನಾವು ನಾವೇ ತಾನೇ, ನಾಣಿ ಬಡಿಸುತ್ತಾನೆ” ಎಂದರು ಜೋಯಿಸರು.

ಇಲ್ಲಿಗೆ ಬಂದಾಗಿನಿಂದ ಎಲ್ಲವನ್ನೂ ಗಮನಿಸುತ್ತಿದ್ದ ಭಾವನಾ “ಅಕ್ಕ ಪುಣ್ಯ ಮಾಡಿದ್ದಾಳೆ. ಕಾಲೇಜಿಗೆ ಸೇರುತ್ತೇನೆಂದಿದ್ದರೆ ಸೇರಿಸುತ್ತಿದ್ದರೋ ಏನೋ..ಕಾಲೇಜಿಗೆ ಹೋಗುತ್ತಲೇ ಸಂಗೀತವನ್ನೂ ಮುಂದುವರೆಸಿಕೊಳ್ಳಬಹುದಿತ್ತು. ಅಕ್ಕ ಮದುವೆಯಾದಮೇಲೆ ಉಳಿದವರ ಜೊತೆ ಕಾಲೇಜಿಗೆ ಹೋಗಲು ಮುಜುಗರವೆನ್ನಿಸಿ ಕೇಳಲಿಲ್ಲವೆನ್ನಿಸುತ್ತದೆ. ಅಥವಾ ಬೇರೇನೋ ಕಾರಣವಿರಬಹುದೇ. ಏಕೆಂದರೆ ಆಕೆ ಬಹಳ ಸೂಕ್ಷ್ಮವಾಗಿ ಎಲ್ಲವನ್ನೂ ಗಮನಿಸುತ್ತಾಳೆ. ಒಟ್ಟಿನಲ್ಲಿ ಸುಖವಾಗಿದ್ದುಕೊಂಡು ಏನನ್ನಾದರೂ ಸಾಧಿಸುವಂತಾಗಲಿ” ಎಂದುಕೊಂಡಳು.

ಸಾಲಾಗಿ ಕುಳಿತವರಿಗೆ ಬಡಿಸಲು ನಿಂತರು ನಾರಾಣಪ್ಪ. ಬಡಿಸುತ್ತಾ “ಯಜಮಾನರೇ ದೇವಸ್ಥಾನದ ಪೂಜೆಗೆ ವಿರಾಮ ಕೊಟ್ಟಂತೆ ಕಾಣಿಸುತ್ತಿದೆ” ಎಂದು ಜ್ಞಾಪಿಸಿದರು.

“ಹೂಂ. ಮದುವೆ ಮಗನಿಗೆ, ರಜೆ ಅಪ್ಪನಿಗೆ. ನಾನು ಮದುವೆಯಾದಾಗಲೂ ಇಷ್ಟೊಂದು ದಿನ ರಜೆ ಹಾಕಿರಲಿಲ್ಲ ಗೊತ್ತಾ ನಾರಾಣಪ್ಪ” ಎಂದು ನಕ್ಕರು ಸೀತಮ್ಮ.

“ಅರೆ ನಿಮ್ಮಿಬ್ಬರಿಗ್ಯಾಕಿಷ್ಟು ನನ್ನ ಮೇಲೆ ಹೊಟ್ಟೆಕಿಚ್ಚು. ಮನೆಯಲ್ಲಿ ಎಷ್ಟೋ ವರ್ಷಗಳ ನಂತರ ಶುಭಕಾರ್ಯ. ನೆಂಟರಿಷ್ಟರುಗಳ ಆಗಮನ, ಸ್ವಲ್ಪ ಆರಾಮವಾಗಿರೋಣವೆಂದು ರಜೆ ತೆಗೆದುಕೊಂಡೆ. ಅಲ್ಲದೆ ಈಗ ದೇವಸ್ಥಾನದ ಪೂಜಾಕಾರ್ಯದಲ್ಲಿ ಸಹಾಯಕರು ಒಬ್ಬರಲ್ಲ ಇಬ್ಬರಿದ್ದಾರೆ. ಆತಂಕವೇನಿಲ್ಲ. ನಾಡಿದ್ದು ಹಾಜರಾಗಬೇಕಪ್ಪ. ನಿನಗೆ ಈಗ ಸಂತೋಷವಾಯಿತೇ? ಸೀತೂ ನಿನಗೆ?”ಎಂದರು ಜೋಯಿಸರು.

“ಅಯ್ಯೋ ತಪ್ಪು ತಿಳೀಬೇಡಿ ಯಜಮಾನರೇ, ಸುಮ್ಮನೆ ಗಮ್ಮತ್ತು ಮಾಡಿದೆ.”ಎಂದರು ನಾರಾಣಪ್ಪ. ಅದೂ ಇದೂ ಮಾತನಾಡುತ್ತಾ ಊಟ ಮುಗಿಸಿದರು.

ಊಟದ ಮನೆಯಿಂದ ಹೊರಬಂದ ಅಪ್ಪ ಮಕ್ಕಳಿಬ್ಬರೂ ಕೈತೊಳೆದುಕೊಂಡು ಮನೆಯ ಮುಂದಿನ ಅಂಗಳದಲ್ಲಿ ಅಡ್ಡಾಡುತ್ತಾ “ನಾಳೆ ಭಾಗ್ಯಳನ್ನು ತವರುಮನೆಗೆ ಕರೆದುಕೊಂಡು ಹೋಗುವ ಬಗ್ಗೆ ಮಾತನಾಡಿದರು. ಆಗ ಶ್ರೀನಿವಾಸ “ಅಪ್ಪಾ ಭಾಗ್ಯಳನ್ನು ಸ್ವಲ್ಪ ದಿನ ಅವಳ ತಾಯಿ ಮನೆಯಲ್ಲಿಯೇ ಬಿಟ್ಟು ಬರುತ್ತೇನೆ. ಟಿ.ನರಸೀಪುರದಲ್ಲಿ ಒಂದು ಮಂಡಲಪೂಜೆ ಒಪ್ಪಿಕೊಂಡಿದ್ದೇನೆ. ಆ ವಿಷಯ ನಿಮಗೂ ಗೊತ್ತಲ್ಲವಾ? ಅದನ್ನು ಮುಗಿಸಿ ಅಲ್ಲಿಯೇ ಒಂದೆರಡು ಹೋಮ, ಹವನಗಳನ್ನು ನೆರವೇರಿಸಿಕೊಡಲು ಕೆಲವರು ಕೇಳಿಕೊಂಡಿದ್ದಾರೆ. ಅವನ್ನೆಲ್ಲ ಮುಗಿಸಿ ಬರುವವರೆಗೂ ಅವಳು ಅಲ್ಲಿಯೇ ಇರಲಿ. ಅಷ್ಟರಲ್ಲಿ ಭಾಗ್ಯಳ ಮಾಕ್ಸ್‌ಕಾರ್ಡ್ ಕೂಡ ಬಂದಿರುತ್ತದೆ. ಅದನ್ನು ಮತ್ತು ಟಿ.ಸಿ. ಇತರೆ ಸರ್ಟಿಫಿಕೇಟುಗಳನ್ನು ತೆಗೆದುಕೊಂಡು ಬರಲು ಅನುಕೂಲವಾಗುತ್ತದೆ.” ಎಂದು ಹೇಳಿದ.

ಮಗನು ಹೇಳಿದ್ದೆಲ್ಲವನ್ನೂ ಕೇಳಿದ ಜೋಯಿಸರು “ಹೂ..ಮದುವೆಯಾಗಿ ಹದಿನೈದು ದಿನಗಳೂ ಆಗಿಲ್ಲ. ಆಗಲೇ ಹೆಂಡತಿಯನ್ನು ತವರಿನಲ್ಲಿ ಬಿಟ್ಟು ಹೊರಹೋಗುವತ್ತ ಗಮನ, ಎಲ್ಲ ನನ್ನ ಮುತ್ತಾತನ ಅಪರಾವತಾರವೇ. ಕೆಲಸ ಮುಖ್ಯ, ಮನೆಯ ಹೆಂಗಸರು ತಮಗಾಗಿ ಕಾಯಬೇಕಷ್ಟೇ ಎಂಬ ಮನೋಭಾವ. ಅವರೂ ಮದುವೆಯಾದ ಮೂರನೆಯ ದಿನಕ್ಕೇ ಎಲ್ಲೋ ಪೂಜೆಮಾಡಿಸಲು ಹೊರಟಿದ್ದರಂತೆ. ಆಗ ಅವರ ಮನೆಯಲ್ಲಿದ್ದ ಹಿರಿಯರು “ಬೇಡ ಮಗು, ಇನ್ನೂ ಹಸಿಮಯ್ಯಿ,” ಎಂದದ್ದಕ್ಕೆ “ವಲ್ಲಿ ಕೊಡಿ ಚೆನ್ನಾಗಿ ಒರೆಸಿಕೊಂಡು ಹೋಗುತ್ತೇನೆ” ಎಂದು ಹಾಸ್ಯ ಮಾಡಿ ಹೊರಟಿದ್ದರಂತೆ. “ಆಹಾ ಎಲ್ಲದ್ದಕ್ಕೂ ಘಳಿಗೆ, ಶಾಸ್ತ್ರ, ಸಂಪ್ರದಾಯ, ಮಡಿಹುಡಿ ಎಂದೆಲ್ಲಾ ಹಾರಾಡುವ ಇವನಿಗೆ ಗೊತ್ತಾಗದ ಸಂಗತಿಗಳೇ. ಎಡವಟ್ಟು ನನ್ಮಗ ಇವನಿಗೆ ಬೇಕಾದಂತೆ ಶಾಸ್ತ್ರ” ಎಂದು ಗೊಣಗಾಡುತ್ತ ಸುಮ್ಮನಾಗಿದ್ದರಂತೆ. ಅವರಿಗೆ ಹೇಳುವ, ತಡೆಯುವ ಧೈರ್ಯ ಯಾರೋ ಮಾಡಲಿಲ್ಲವಂತೆ. ಹಾಗೇ ನನ್ನ ಇಂದಿನ ಪರಿಸ್ಥಿತಿ. ಹುಡುಗಿ ಬಹಳ ಸ್ವಾಭಿಮಾನಿ. ಹೇಗೆ ಇವನ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಾಳೋ ದೇವರೇ ಬಲ್ಲ ಎಂದು ಮನದಲ್ಲಿ ಚಿಂತಿಸಿ “ಅಲ್ಲಾ ಶ್ರೀನಿ, ಈ ಪೂಜೆಯನ್ನು ಪೋಸ್ಟಪೋನ್ ಮಾಡಬಹುದಲ್ಲಾ? ಆಗದಿದ್ದರೆ ಬೇರೆ ಯಾರಿಗಾದರೂ ಒಪ್ಪಿಸಬಹುದಲ್ಲಾ?” ಎಂದರು.

“ಇಲ್ಲಾ ಅಪ್ಪ, ಅವರು ನೀವೇ ಬರಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಇಲ್ಲಿ ಕುಳಿತು ಕೂಡ ಏನು ಮಾಡೋದಿದೆ. ಮದುವೆ ಸಂಬಂಧದ ಶಾಸ್ತ್ರಗಳೆಲ್ಲಾ ಮುಗಿಯಿತಲ್ಲಾ. ಜಮೀನಿನ ಕೆಲಸವೂ ಸದ್ಯಕ್ಕೆ ಇಲ್ಲ” ಎಂದ ಶ್ರೀನಿವಾಸ.

“ಆಯಿತು ಹೊರಟಿದ್ದೀಯೆ, ಹೋಗಿ ಬಾ, ಅಂದಹಾಗೆ ಒಂದುಮಾತು, ಭಾಗ್ಯಳಿಗೆ ಹೇಳಿದಂತೆ ಸಂಗೀತಪಾಠಕ್ಕೆ ಆಷಾಢ ಆದಮೇಲೆ ಮೇಷ್ಟ್ರನ್ನು ಗೊತ್ತು ಮಾಡೋಣ. ನಿನ್ನ ದೃಷ್ಟಿಯಲ್ಲಿ ಯಾರಿದ್ದಾರೆ? ಅವರಿಗೆ ಆಗುತ್ತಾ ಎಂದು ವಿಚಾರಿಸಿಟ್ಟಿರು. ನನಗೂ ಒಂದಿಬ್ಬರು ಗೊತ್ತು, ಅವರನ್ನು ವಿಚಾರಿಸುತ್ತೇನೆ.” ಎಂದರು ಜೋಯಿಸರು.

“ಆಯಿತಪ್ಪ ಶುಭರಾತ್ರಿ” ಎಂದು ಹೇಳಿ ತನ್ನ ರೂಮಿನ ಕಡೆಗೆ ನಡೆದನು.

ಅಪ್ಪನಿಂದ ಬೀಳ್ಕೊಂಡು ಮಹಡಿಹತ್ತಿ ತನ್ನ ರೂಮಿಗೆ ಬಂದ ಶ್ರೀನಿವಾಸ ಅಲ್ಲಿದ್ದ ಕಿಟಕಿಯ ಕಡೆ ನಡೆದ. ಅಲ್ಲಿ ಹೊರಗಿನಿಂದ ಬೀಸುತ್ತಿದ್ದ ತಂಗಾಳಿಗೆ ಮುಖವನ್ನೊಡ್ಡಿ ನಿಂತುಕೊಂಡ. ಹಾಗೆಯೇ ರಾತ್ರಿ ಊಟಕ್ಕೆ ಮೊದಲು ನಡೆದ ಪ್ರಸಂಗದತ್ತ ಚಿತ್ತ ಹರಿಯಿತು. ಹೆಂಡತಿ ತನ್ನ ಪರೀಕ್ಷೆಯ ಫಲಿತಾಂಶ ಬರುವುದಕ್ಕೆ ಮೊದಲೇ ತೆಗೆದುಕೊಂಡ ತೀರ್ಮಾನ ಅವನಿಗೆ ಅಚ್ಚರಿ ಉಂಟು ಮಾಡಿತ್ತು. ಅಮ್ಮ ಮತ್ತು ನಾನು ಯಾವುದೇ ಸುಳಿವನ್ನು ಬಿಟ್ಟಿರಲಿಲ್ಲ. ಮದುವೆಯ ಮಂಟಪದಲ್ಲಿ ಹಿರಿಯಜ್ಜ ಹೇಳಿದ ಮಾತುಗಳನ್ನು ಕೇಳಿಸಿಕೊಂಡೇನಾದರೂ ಹೀಗೆ ಮಾಡಿದಳೇ? ಇಲ್ಲ ಹದಿನೈದು ದಿನಗಳಿಂದ ನಡೆದ ಇಲ್ಲಿನ ವಿದ್ಯಮಾನಗಳಲ್ಲಿ ಬಂದಿದ್ದ ನೆಂಟರಿಷ್ಟರಲ್ಲಿ ಯರಾದರೂ, ಏನಾದರೂ ಅಂದರೇ, ಏನಾದರಾಗಲೀ ತಾನೇ ಇದನ್ನು ಆಯ್ಕೆ ಮಾಡಿಕೊಂಡಿದ್ದಾಳೆ. ಅದನ್ನೇ ಭದ್ರವಾಗಿ ಪರಿಗಣಿಸಿ ಸೂಕ್ತ ಉತ್ತೇಜನ ಕೊಟ್ಟರಾಯಿತು. ಇದರಿಂದ ನನ್ನಿಚ್ಛೆಗೂ ಪುಷ್ಠಿ ಸಿಕ್ಕಂತಾಯಿತು.

“ಏನಿವತ್ತು ವ್ಯಾಸಪೀಠವನ್ನು ಬಿಟ್ಟು ಕಿಟಕಿಯ ಹತ್ತಿರ ನಿಂತಿದ್ದೀರಾ?” ಎಂಬ ಪ್ರಶ್ನೆ ಅವನ ಆಲೋಚನೆಗೆ ತಡೆಯೊಡ್ಡಿತು. “ಏಕೆ ಭಾಗ್ಯಾ, ನನ್ನ ಓದುವ ಅಭ್ಯಾಸದಿಂದ ನಿನಗೇನಾದರೂ ತೊಂದರೆಯಾಯಿತೇ?” ಎಂದು ಕೇಳಿದ ಶ್ರೀನಿವಾಸ.

“ಛೇ..ಛೇ.. ಇಲ್ಲಪ್ಪ, ಸಾಮಾನ್ಯವಾಗಿ ಇಲ್ಲಿ ನಾನು ಇಷ್ಟುದಿನಗಳು ಕಂಡಂತೆ ಮಲಗುವ ಮೊದಲು ಓದುತ್ತಿರುತ್ತೀರಲ್ಲ, ಅದರಿಂದ ಸಹಜವಾಗಿ ಕೇಳಿದೆ. ನಮ್ಮ ಮನೆಯಲ್ಲೂ ನಮ್ಮ ಅಪ್ಪ, ಅಮ್ಮ ಮಲಗುವ ಮುನ್ನ ಅವರವರ ಇಷ್ಟದೈವದ ಪ್ರಾರ್ಥನೆಯಿರುವ ಪುಸ್ತಕವನ್ನು ಓದುತ್ತಾರೆ. ನಂತರ ಸ್ವಲ್ಪ ಹೊತ್ತು ಧ್ಯಾನಮಾಡಿಯೆ ಮಲಗುತ್ತಾರೆ. ಯಾರ ಇಷ್ಟವನ್ನು ಯಾರಮೇಲೂ ಹೇರುವುದಿಲ್ಲ. ಅದೇ ನನಗೂ ಅಭ್ಯಾಸವಾಗಿದೆ” ಎಂದಳು ಭಾಗ್ಯ.

ಅದು ಸಹಜವೋ ವ್ಯಂಗ್ಯವೋ ತಿಳಿಯದೆ ಅವಳೆಡೆಗೆ ನೋಡಿದ ಶ್ರೀನಿವಾಸ. ಆದರೆ ಅಲ್ಲಿ ತಾನು ತಂದಿದ್ದ ನೀರಿನ ಜಗ್ಗು ಮತ್ತು ಲೋಟವನ್ನು ಮೇಜಿನಮೇಲೆ ಇರಿಸುವುದರಲ್ಲಿ ಮಗ್ನಳಾಗಿದ್ದಳು ಭಾಗ್ಯ. ಅವಳ ಮುಖಭಾವ ಅವನಿಗೆ ಕಾಣಿಸಲಿಲ್ಲ. ಸದ್ಯಕ್ಕೆ ಆ ವಿಷಯವನ್ನು ಮುಂದುವರೆಸುವುದು ಬೇಡವೆಂದು ನಾಳೆಯ ಕಾರ್ಯಕ್ರಮದ ನಂತರ ತನ್ನ ಕೆಲಸದ ಬಗ್ಗೆ ಹೇಳಿ ಬಾಳಸಂಗಾತಿಯ ಒಡನಾಟದಲ್ಲಿ ಮೈಮರೆತ. ಇದನ್ನರಿತ ಭಾಗ್ಯ “ಅಬ್ಬಾ ! ಬಹಳ ಚತುರ ನನ ಗಂಡ” ಎಂದುಕೊಂಡಳು.

ಮಾರನೆಯ ಬೆಳಗ್ಗೆ ಬೇಗನೇ ಎದ್ದು ಭಾಗ್ಯ ತನ್ನ ಪ್ರಾತಃವಿಧಿಗಳನ್ನು ಮುಗಿಸಿ ಸ್ನಾನಮಾಡಿ ತಾನೇ ವಹಿಸಿಕೊಂಡಿದ್ದ ಪೂಜಾಕೋಣೆಯ ಸ್ವಚ್ಛತೆಮಾಡಿ, ಪೂಜೆಗೆ ಎಲ್ಲವನ್ನೂ ಅಣಿಮಾಡಿ ಅಡುಗೆ ಕೋಣೆಗೆ ಬಂದಳು. ನಾಣಜ್ಜ ಕೊಟ್ಟ ಕಷಾಯ ಕುಡಿದು ಅವರ ಕೆಲಸದಲ್ಲಿ ನೆರವಾಗುತ್ತಿದ್ದಳು. ಅವಳಿಗೆ ಹೊರಗಿನ ಪೇಪರ್ ಎಂಬ ಕೂಗಿನ ಕಡೆಗೇ ಗಮನ. ಇವತ್ತು ತನ್ನ ಪರೀಕ್ಷೆಯ ಫಲಿತಾಂಶ ಬರುವ ದಿನ. ಈ ವಿಷಯದ ಬಗ್ಗೆ ಆಸಕ್ತಿಯೆ ಇಲ್ಲವೆನ್ನುವಂತಿತ್ತು ವಾತಾವರಣ. ಮಾವ, ಗಂಡ, ಇವತ್ತು ಭಾವನಾ ಕೂಡ ವಾಕಿಂಗ್ ಹೋಗಿದ್ದುದು ನಾಣಜ್ಜನಿಂದ ತಿಳಿದಿತ್ತು. ಹೋಗಿಬರುವಾಗ ಅತ್ತಿತ್ತ ಯಾರಾದರೂ ಕಣ್ಣು ಹಾಯಿಸಿದ್ದರೆ ಪತ್ರಿಕೆ ಸಿಗುತ್ತಿತ್ತು. ಇವತ್ತು ರಿಜಲ್ಟ್ ಇರುವುದರಿಂದ ಪತ್ರಿಕೆಗಳಿಗೆ ಬೇಡಿಕೆ ಹೆಚ್ಚು. ನಮ್ಮ ಮನೆಗೆ ಎಷ್ಟು ಹೊತ್ತಿಗೆ ಬರುತ್ತಾನೋ. ಫಲಿತಾಂಶದಿಂದ ತನ್ನ ನಿರ್ಧಾರವೇನೂ ಬದಲಾಗುವುದಿಲ್ಲ. ಆದರೆ ತನ್ನ ಪ್ರಯತ್ನಕ್ಕೆ ಪ್ರತಿಫಲ ಎಂಥದ್ದೋ ತಿಳಿಯುವ ಕುತೂಹಲವಷ್ಟೇ. ಹೀಗೇ ವಿಚಾರಲಹರಿ ಹರಿಸಿದ್ದಳು.

“ಭಾಗ್ಯಾ,,ಭಾಗ್ಯಮ್ಮಾ,” ಎಂಬ ಕರೆ ಅವಳನ್ನು ಎಚ್ಚರಿಸಿತು. “ಓ ಪೂಜೆ ಮುಗಿಯಿತೂ ಅಂತ ಕಾಣುತ್ತೇ, ಮಂಗಳಾರತಿ ತೆಗೆದುಕೊಳ್ಳಲು ಕರೆಯುತ್ತಿರಬಹುದು. ಎಂದು ಕೈಯಲ್ಲಿದ್ದ ಪಾತ್ರೆಯನ್ನು ಅಲ್ಲಿಯೇ ಕಟ್ಟೆಯಮೇಲಿಟ್ಟು ಕೈ ತೊಳೆದುಕೊಂಡು ಪೂಜಾಕೊಣೆಗೆ ಅಡಿಯಿಟ್ಟಳು. ಅವಳ ನಿರೀಕ್ಷೆಯಂತೆ ದೇವರಿಗೆ ಮಂಗಳಾರತಿ ಮಾಡುತ್ತಿದ್ದರು. ಊದುಬತ್ತಿಯ, ತುಪ್ಪದ ದೀಪದ ಸುವಾಸನೆ, ಮಲ್ಲಿಗೆ, ಸಂಪಿಗೆ ಹೂಗಳ ಪರಿಮಳ ವಾತಾವರಣವನ್ನು ಹಿತವಾಗಿಸಿದ್ದವು. ಗಂಡ ಶ್ರೀನಿವಾಸ ಹೇಳುತ್ತಿದ್ದ ಮಂಗಳಾರತಿಯ ಮಂತ್ರೋಚ್ಛಾರ, ತನ್ನತ್ತೆ ಮತ್ತು ಸೋದರಿಯರು ತನ್ಮಯರಾಗಿ ನೋಡುತ್ತಾ ನಿಂತ ರೀತಿ, ಭಕ್ತಿಭಾವವನ್ನು ಪ್ರೇರೇಪಿಸುತ್ತಿತ್ತು. ಆಗ ತಾನೆ ಬಂದ ನಾಣಜ್ಜನವರ “ದೇವರೇ ಎಲ್ಲರನ್ನೂ ರಕ್ಷಿಸಪ್ಪಾ” ಎಂಬ ಸರಳ ಪ್ರಾರ್ಥನೆ, ಅಷ್ಟರಲ್ಲಿ “ಏ ಹುಡುಗಿ, ಮಂಗಳಾರತಿ ತೊಗೋ, ಯಾವ ಲೋಕದಲ್ಲಿದ್ದೀ ಮಾರಾಯತೀ” ಎಂದ ಶ್ರೀನಿವಾಸ. ಅಲ್ಲಿದ್ದವರೆಲ್ಲ ನಗುವ ಸದ್ದು ಕಿವಿಗೆ ಬಿದ್ದಾಗ ಗಲಿಬಿಲಿಗೊಂಡು ಎಚ್ಚೆತ್ತಳು ಭಾಗ್ಯ.

ಮಂಗಳಾರತಿಯ ನಂತರ ತೀರ್ಥ ಪ್ರಸಾದದ ಹೂ ಮತ್ತು ನೈವೇದ್ಯ ಮಾಡಿದ್ದ ಸಜ್ಜಿಗೆಯ ಉಂಡೆ ತೆಗೆದುಕೊಂಡು ಹೊರಬಂದಳು ಭಾಗ್ಯ. ಹೂವನ್ನು ಮುಡಿಗೇರಿಸಿಕೊಂಡು ಸಜ್ಜಿಗೆಯನ್ನು ಬಾಯಿಗೆ ಹಾಕಿಕೊಂಡಳು. ಕೈತೊಳೆಯಲು ತಿರುಗಿದಾಗ ಅಲ್ಲೇ ಇದ್ದ ಸೀತಮ್ಮನವರು “ಭಾಗ್ಯಾ ಬಚ್ಚಲಿರುವುದು ಹಿತ್ತಲಕಡೆ, ನೀನ್ಯಾಕೆ ಹೊರಬಾಗಿಲ ಹತ್ತಿರ ಹೋಗುತ್ತಿದ್ದೀಯೆ” ಎಂದರು.

ಇವರ್ಯಾರಿಗೂ ಏಕೆ ನನ್ನ ಚಡಪಡಿಕೆ ಅರ್ಥವಾಗುತ್ತಿಲ್ಲ. ಅವರುಗಳು ಹೋಗಲೀ, ನನ್ನ ನೆಚ್ಚಿನ ತಂಗಿ ಭಾವನಾಳಿಗೇನಾಗಿದೆ, ಛೇ..ಅಂದುಕೊಂಡು ಈ ಪೇಪರ್ ಹುಡುಗನೂ ಪತ್ತೆಯಿಲ್ಲ. ಎಂದು ಗೊಣಗಾಡುತ್ತಾ ಹಿತ್ತಲಿಗೆ ಹೋಗಿ ಕೈತೊಳೆದು ಅಡುಗೆ ಮನೆಯತ್ತ ಹೆಜ್ಜೆ ಹಾಕಿದಳು. ಒಂದೆರಡು ನಿಮಿಷವೂ ಕಳೆದಿಲ್ಲ ಮತ್ತೆ ಮಾವನವರಿಂದ ಕರೆಬಂತು. “ಅರೆ ಮತ್ತೇನಪ್ಪಾ” ಎಂದುಕೊಳ್ಳುತ್ತಲೇ ಹಾಲಿಗೆ ಬಂದಳು.

ಆಗಲೇ ಪೂಜೆಗಾಗಿ ಉಟ್ಟಿದ್ದ ರೇಷಿಮೆ ಮುಗುಟವನ್ನು ಬದಲಾಯಿಸಿ ಬೇರೆ ಬಟ್ಟೆಯನ್ನು ತೊಟ್ಟು ಜೋಕಾಲಿಯ ಮೇಲೆ ಕುಳಿತಿದ್ದ ಅಪ್ಪ, ಮಗನನ್ನು ಕಂಡಳು ಭಾಗ್ಯ.

“ಬಾ ತಾಯಿ ಬಾ, ಸೀತೂ, ಭಾವನಾ, ಪುಟಾಣಿಗಳಾ, ನಾಣೀ ಎಲ್ಲರೂ ಬನ್ನಿ” ಎಂದು ಕೂಗಿ ಕರೆದರು.

“ಅಪ್ಪಾ ಅವರೆಲ್ಲ ಇಲ್ಲಿಯೇ ಇದ್ದಾರೆ, ಬೇಗ ಅದೇನು ಹೇಳಿಬಿಡಿ” ಎಂದ ಶ್ರೀನಿವಾಸ.

(ಮುಂದುವರಿಯುವುದು)

ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=35487

ಬಿ.ಆರ್.ನಾಗರತ್ನ, ಮೈಸೂರು

5 Responses

  1. ನಯನ ಬಜಕೂಡ್ಲು says:

    ಸೊಗಸಾದ ಕಥೆ

  2. Padma Anand says:

    ಕಾದಂಬರಿ ಸುಂದರವಾಗಿ, ಸಹಜವಾಗಿ ಮುಂದುವರಿಯುತ್ತಿದೆ.

  3. . ಶಂಕರಿ ಶರ್ಮ says:

    ಚಂದದ ಕಥಾಹರಿವು ಆತ್ಮೀಯವಾಗಿ ಓದಿಸುತ್ತಾ ಸಾಗಿದೆ…ಧನ್ಯವಾದಗಳು ಮೇಡಂ.

  4. ಸಹೃದಯ ಪ್ರತಿಕ್ರಿಯೆಗಳನ್ನು ನೀಡಿರುವ,ಪದ್ಮಾ ಮೇಡಂ, ಶಂಕರಿ ಮೇಡಂ ಅವರುಗಳಿಗೆ….ನನ್ನ ಹೃತ್ಪರ್ವಕ ಧನ್ಯವಾದಗಳು.

  5. ನಯನ ಮೇಡಂ ಗೂ ಧನ್ಯವಾದಗಳು.

Leave a Reply to ನಾಗರತ್ನ ಬಿ. ಆರ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: