ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 1

Share Button

1 ಹಿನ್ನೆಲೆ

ಬ್ರಿಟಿಷ್‌ ಕಾಲೂರುವಿಕೆ:

ಮೊದಲಿನಿಂದಲೂ ಭಾರತ ತನ್ನ ಅತ್ಯುನ್ನತ ಜ್ಞಾನಕ್ಕೆ, ಉದ್ಯಮ ತಾಂತ್ರಿಕತೆಗೆ, ವ್ಯವಹಾರ ಕುಶಲತೆಗೆ ಪ್ರಸಿದ್ಧವಾಗಿತ್ತು. ಇಂತಹ ಭಾರತೀಯರನ್ನು ಶಸ್ತ್ರಾಸ್ತ್ರ ಬಲದಿಂದ ತಮ್ಮ ಹತೋಟಿಯಲ್ಲಿಟ್ಟುಕೊಂಡರೆ ಭಾರತೀಯರ ಎಲ್ಲ ಹಿರಿಮೆಯ ಲಾಭಕ್ಕೆ ತಾವೇ ಒಡೆಯರಾಗುತ್ತೇವೆ ಎಂದು ಭಾರತವನ್ನು ತಮ್ಮ ಅಧೀನದಲ್ಲಿರಿಸಿಕೊಳ್ಳಲು ಯೂರೋಪಿನ ಒಂದೊಂದೇ ದೇಶದವರು ಭಾರತಕ್ಕೆ ಬರತೊಡಗಿದರು. ಇದರ ಕಲ್ಪನೆಯಿಲ್ಲದ ಭಾರತೀಯ ರಾಜರು ಅವರಿಗೆಲ್ಲ ನೆಲೆಯೂರಲು ಜಾಗ ಒದಗಿಸಿದರು. ಅವರೆಲ್ಲ ಭಾರತದೊಂದಿಗಿನ ವ್ಯಾವಹಾರಿಕ ಸಂಬಂಧಕ್ಕೆ ತಾವೊಬ್ಬರೇ ಸಾರ್ವಭೌಮರಾಗಬೇಕೆಂದು ಬಯಸಿ ಪರಸ್ಪರ ಸ್ಪರ್ಧೆಗಿಳಿದರು. ಭಾರತೀಯ ರಾಜರುಗಳಲ್ಲಿ ಒಬ್ಬೊಬ್ಬರು ಒಂದೊಂದು ಯೂರೋಪಿಯನ್‌ ಗುಂಪಿನವರೊಂದಿಗೆ ಕೈಜೋಡಿಸಿದರು. ವಿದೇಶೀಯರ ಮತ್ತು ಸ್ವದೇಶೀಯರ ಒಟ್ಟಾರೆ ಸಾರ್ವಭೌಮತ್ವದ ಆಕಾಂಕ್ಷೆಗೆ ತಡೆಯನ್ನೊಡ್ಡಲು ಪ್ರಯತ್ನಿಸಿದರು. ಆದರೆ ಇದರ ಅಂತಿಮ ಫಲಿತ ಭಾರತೀಯ ಆಡಳಿತಗಾರರೆಲ್ಲ ಬ್ರಿಟಿಷರ ಕೈಗೊಂಬೆಯಾದದ್ದು; ಬ್ರಿಟಿಷರ ಏಕಸ್ವಾಮ್ಯತ್ವಕ್ಕೆ, ಸಾರ್ವಭೌಮತ್ವಕ್ಕೆ ತಮ್ಮನ್ನು ತಾವೇ ಒಪ್ಪಿಸಿಕೊಂಡದ್ದು!

ಬ್ರಿಟಿಷರಿಗೆ ತಾವು ಭಾರತೀಯರನ್ನು ಆಳುತ್ತಿರುವುದು ಅವರ ಉದ್ಧಾರಕ್ಕಾಗಿಯೇ ಎಂಬ ನಂಬಿಕೆಯಿತ್ತು. ತಮ್ಮ ಆಡಳಿತ ತಮ್ಮ ಔದಾರ್ಯದ ಹಿರಿಮೆಯ ಒಂದು ರೂಪ ಎಂದು ಅವರು ತಿಳಿದಿದ್ದರು. ಅವರಿಗೆ ಭಾರತದ ಸರ್ವ ಸಂಪತ್ತಿನ ಮೇಲೆ ಒಡೆತನ ಸ್ಥಾಪಿಸುವುದು ಅವರ ಹಕ್ಕಾಗಿತ್ತು. ಭಾರತದಲ್ಲಿ ಅಪಾರವಾದ ಪ್ರಾಕೃತಿಕ ಸಂಪತ್ತು ಇತ್ತು. ಅದನ್ನು ಕೈಗಾರಿಕೆಗಳಿಗೆ ಕಚ್ಚಾ ವಸ್ತುವನ್ನಾಗಿ ಬಳಸಬಹುದಾಗಿತ್ತು. ಅದಕ್ಕಾಗಿ ಅವರು ಭಾರತದ ಮೇಲೆ ತಾವು ಪಡೆದ ಸಾರ್ವಭೌಮತ್ವವನ್ನು ಉಳಿಸಿಕೊಳ್ಳಬೇಕಿತ್ತು. ಆದರೆ ಅವರಿಗೆ ಹೆಜ್ಜೆ ಹೆಜ್ಜೆಗೂ ಪ್ರತಿರೋಧ ಯಾವುದಾದರೊಂದು ಮೂಲೆಯಿಂದ ಬರುತ್ತಲೇ ಇತ್ತು. ಅವರಿಗೆ ಭಾರತದ ಮೂಲೆ ಮೂಲೆಯನ್ನೂ ತಲುಪಲು ಮತ್ತು ಭಾರತೀಯ ಎನ್ನಬಹುದಾದ ಎಲ್ಲದರ ಮೇಲೆ ಗಧಾಪ್ರಹಾರ ಮಾಡಲು ವಿಜ್ಞಾನ ಸಾಧನೋಪಾಯವಾಯಿತು.

1757ರಲ್ಲಿ ಪ್ಲಾಸಿ ಕದನದಲ್ಲಿ ಬ್ರಿಟಿಷರು ಪಡೆದ ವಿಜಯ ಭಾರತದಲ್ಲಿ ಅವರ ಕಾಲೂರುವಿಕೆಯನ್ನು ಭದ್ರಗೊಳಿಸಿತು. ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪೆನಿಯು ಮೊದಲಿಗೆ 1786ರಲ್ಲಿ ಕಲ್ಕತ್ತದಲ್ಲಿ, 1796ರಲ್ಲಿ ಮದ್ರಾಸಿನಲ್ಲಿ, 1826ರಲ್ಲಿ ಬಾಂಬೆಯಲ್ಲಿ ಕಡಲು ಮತ್ತು ಒಳನಾಡಿನ ವ್ಯಾಪಾರಕ್ಕಾಗಿ ನಿರೀಕ್ಷಣಾಲಯಗಳನ್ನು (Observatories) ಸ್ಥಾಪಿಸಿತು. ಅದು ತನ್ನ ರೆವೆನ್ಯೂವನ್ನು ಹೆಚ್ಚಿಸಿಕೊಳ್ಳಲು, ತನ್ನ ಆಡಳಿತಾತ್ಮಕ ಮತ್ತು ಮಿಲಿಟರಿ ಕಾರ್ಯೋದ್ಧೇಶಗಳನ್ನು ಜಾರಿಗೆ ತರಲು ಮತ್ತು ವಿಸ್ತರಿಸಲು ಸಹಕಾರಿಯಾಗುವ ಭಾರತದ ಎಲ್ಲಾ ಭೂ ಮಾರ್ಗ, ಜಲಮಾರ್ಗಗಳ ಸರ್ವೇಕ್ಷಣೆ ಮಾಡಲು 1767ರಲ್ಲಿ “ಸರ್ವೆ ಆಫ್‌ ಇಂಡಿಯಾ” ಎಂಬ ಸಂಸ್ಥೆಯನ್ನು ಆರಂಭಿಸಿತ್ತು. ಆನಂತರದ ಹಲವು ದಶಕಗಳಲ್ಲಿ ವಿವಿಧ ರೀತಿಯ “ಟೋಪೋಗ್ರಾಫಿಕಲ್‌”, “ಜಿಯೋ ಮೆಟ್ರಿಕಲ್‌”, ಮಿಲಿಟರಿ ಮತ್ತು ರೆವೆನ್ಯೂ ಸರ್ವೇಕ್ಷಣೆಗಳನ್ನು ಮಾಡುವ ವಿವಿಧ ಸಂಸ್ಥೆಗಳನ್ನು ಸ್ಥಾಪಿಸಿತು. 

ಈ ಸಂಸ್ಥೆಗಳು ಭಾರತದ ಭೂಭಾಗದ ಎಲ್ಲಾ ದತ್ತಾಂಶಗಳನ್ನೂ ಸಂಗ್ರಹಿಸಿದವು, ಎಲ್ಲದರ ಗಣತಿಯನ್ನೂ ಮಾಡಿದವು, ಎಲ್ಲದರ ಸ್ಪಷ್ಟ ನಕಾಶೆಯನ್ನು ಸಿದ್ಧಪಡಿಸಿದವು. ಅದರ ಮೂಲಕ ಬ್ರಿಟಿಷರು ಭಾರತದ ಭೌಗೋಳಿಕ ಭೂಪಟವನ್ನು ವೈಜ್ಞಾನಿಕವಾಗಿ ರಚಿಸಿದರು. ಅದರ ಸಹಾಯದಿಂದ 1799ರ ವೇಳೆಗೆ ಇಡೀ ದಕ್ಷಿಣ ಭಾರತವನ್ನು ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪೆನಿ ತನ್ನ ವಶಕ್ಕೆ ತಂದುಕೊಂಡಿತು. 1818ರಲ್ಲಿ ಆಂಗ್ಲೊ ಮರಾಠ ಯುದ್ಧದ ನಂತರ ಸಟ್ಲೆಜ್ ನದಿಯ ದಕ್ಷಿಣದ ಸಂಪೂರ್ಣ ಭೂಭಾಗ ಕಂಪೆನಿಯ ಕೈವಶವಾಯಿತು. 

1787ರಲ್ಲಿ ಕಾಲೊನೆಲ್‌ ರಾಬರ್ಟ್‌ ರೆಡ್‌ ಎಂಬ ಬ್ರಿಟಿಷ್‌ ಆರ್ಮಿ ಆಫೀಸರ್‌ ಕಲ್ಕತ್ತ ಬಟಾನಿಕಲ್‌ ಗಾರ್ಡನ್‌ ಎಂಬ ಸಂಸ್ಥೆಯನ್ನು ಆರಂಭಿಸಿದ್ದ. ಇದಕ್ಕೆ ಭಾರತೀಯ ಸಸ್ಯಗಳನ್ನು ಅಧ್ಯಯನ ಮಾಡುವ ಉದ್ದೇಶವೇನೂ ಇರಲಿಲ್ಲ. ವಾಸ್ತವವಾಗಿ ಬ್ರಿಟಿಷರಿಗೆ ಭಾರತೀಯ ಸಸ್ಯಗಳ ವಿಷಯದಲ್ಲಿ ಯಾವ ಆಸಕ್ತಿಯೂ ಇರಲಿಲ್ಲ. ಅವರಿಗೆ ಅವರ ಹಡಗುಗಳ ನಿರ್ಮಾಣಕ್ಕೆ ಅಗತ್ಯವಾದ ತೇಗದ ಮರಗಳನ್ನು ಬೆಳೆಸುವ ಉದ್ದೇಶ ಮಾತ್ರ ಇತ್ತು. ಅವರು ಬರ್ಮಾದಿಂದ ಕೊಳ್ಳುತ್ತಿದ್ದ ತೇಗ ದುಬಾರಿ ಬೆಲೆಯದಾಗಿತ್ತು.   

1843ರಲ್ಲಿ ಗವರ್ನರ್‌ ಲಾರ್ಡ್‌ ಹಾರ್ಡಿಂಜ್‌ ದೇಶದ ವಾಣಿಜ್ಯದ ಬೆಳವಣಿಗೆಗೆ ಮತ್ತು ಸರ್ಕಾರಿ ಮತ್ತು ಮಿಲಿಟರಿ ನಿಯಂತ್ರಣಕ್ಕೆ ರೈಲ್ವೆ ಅತ್ಯಂತ ಉಪಯುಕ್ತ ಎಂದು ವಾದಿಸಿದ. ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪೆನಿ ಸರ್ಕಾರವು 1850ರ ನಂತರ ರಾಜ್ಯ ಸ್ವಾಮ್ಯ ರೈಲ್ವೆ, ರೇಡಿಯೊ, ಟೆಲಿಗ್ರಾಫ್‌, ನೀರಾವರಿ, ಗಣಿಗಾರಿಕೆ, ಪಬ್ಲಿಕ್ ವರ್ಕ್ಸ್‌ ವಿಭಾಗಗಳನ್ನು ಹುಟ್ಟುಹಾಕಿತು. 1853ರಲ್ಲಿ ಭಾರತದಲ್ಲಿ ಮೊದಲ ರೈಲು ಓಡಿತು. ಕಲ್ಲಿದ್ದಲು, ಕಬ್ಬಿಣ, ಹತ್ತಿ ಮತ್ತಿತರ ಕಚ್ಚಾ ವಸ್ತುಗಳನ್ನು ಚುರುಕಾಗಿ ಹಡಗಿನ ಮೂಲಕ ಇಂಗ್ಲೆಂಡಿಗೆ ತಲುಪಿಸಲು ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪೆನಿ ಸರ್ಕಾರವು ರೈಲ್ವೆ ವಲಯವನ್ನು ಸ್ಥಾಪಿಸಿತು. ಸರ್ಕಾರಿ ರೈಲ್ವೆ ಸ್ಟಾಕುಗಳಲ್ಲಿ ಹಣ ಹೂಡಿದವರಿಗೆ ಎರಡು ಪಟ್ಟು ಹಣ ಹಿಂತಿರುಗಿ ದೊರೆಯುವ ಭರವಸೆಯನ್ನು ಇಂಗ್ಲೆಂಡಿನ ಸರ್ಕಾರ ಕೊಟ್ಟಿತು. ಅದನ್ನು ಭಾರತೀಯ ತೆರಿಗೆದಾರರಿಂದ ವಸೂಲು ಮಾಡಿಕೊಂಡಿತು. ಭಾರತೀಯ ಟೆಲೆಗ್ರಾಫಿಕ್‌ ಇನ್ಸ್‌ಪೆಕ್ಟರ್‌ಗಳಿಂದ ಹಗಲು, ರಾತ್ರಿ ಎಂಬ ಭೇದವಿಲ್ಲದೆ ಸೇವೆಯನ್ನು ಪಡೆದು 1857ರಲ್ಲಿ ಬಂಡಾಯದ ಧ್ವಜವನ್ನು ಹಾರಿಸಿದ ಸೈನಿಕ ಕ್ರಾಂತಿಕಾರಿಗಳು ಪರಸ್ಪರ ಒಗ್ಗೂಡದಂತೆ ತಡೆದು ಅವರನ್ನು ಬಂಧಿಸುವಲ್ಲಿ ಮತ್ತು ಕ್ರಾಂತಿಯನ್ನು ಹಿಡಿತಕ್ಕೆ ತಂದುಕೊಳ್ಳುವುದರಲ್ಲಿ ಕಂಪೆನಿ ಸರ್ಕಾರವು ಸಫಲವಾಯಿತು.  

1760ರ ವೇಳೆಗೆ ಬ್ರಿಟನ್‌ನಲ್ಲಿ ಕೈಗಾರಿಕಾ ಕ್ರಾಂತಿ ಯಶಸ್ವಿಯಾಗಿತ್ತು. ಬ್ರಿಟನ್‌ ಭಾರತವನ್ನು ತನ್ನ ಕೈಗಾರಿಕಾ ಕ್ರಾಂತಿಯ ಪ್ರಯೋಗಭೂಮಿಯನ್ನಾಗಿ ಮಾಡಿಕೊಂಡಿತು.. 18ನೇ ಶತಮಾನದ ಪ್ರಾರಂಭದವರೆಗೂ ಭಾರತವು ಯೂರೋಪು, ಚೀನಾಗಳಿಗೆ ಸಮಾನವಾಗಿ ಕೈಗಾರಿಕೋದ್ಯಮಗಳಿಗೆ ಪೂರಕವಾಗಿತ್ತು. ಕೈಗಾರಿಕಾ ಕ್ರಾಂತಿಯಿಂದಾಗಿ ಯೂರೋಪಿನ ವಸಾಹತುಶಾಹಿ ನೀತಿ ಮಹತ್ವಪೂರ್ಣ ತಿರುವನ್ನು ಪಡೆಯಿತು. ಭಾರತ ಮತ್ತು ಚೀನಾದ ನೌಕಾಶಕ್ತಿ ಕುಂದಿತು. ಆರ್ಥಿಕ ಕ್ಷೇತ್ರದಲ್ಲಿ ಯೂರೋಪು ಮೇಲುಗೈ ಪಡೆಯಿತು; ಬ್ರಿಟನ್‌ ಏಕಸ್ವಾಮ್ಯವನ್ನು ಗಳಿಸಿತು. 

ಬ್ರಿಟಿಷರು ಬಂಗಾಲ ಪ್ರಾಂತ್ಯವನ್ನು 1757ರಲ್ಲಿ ವಶಪಡಿಸಿಕೊಳ್ಳುವ ಪೂರ್ವದಲ್ಲಿ ಬಂಗಾಲದ ರಫ್ತು ಆಮದಿಗಿಂತ ಅಧಿಕವಾಗಿತ್ತು. 1757-80ರ ಅವಧಿಯಲ್ಲಿ ಅಲ್ಲಿಂದ ಇಂಗ್ಲೆಂಡಿಗೆ ಹೋದ ಆದಾಯ 38 ಮಿಲಿಯನ್‌ ಸ್ಟರ್ಲಿಂಗ್‌ ಪೌಂಡ್‌ ಆಯಿತು. ಇದು ಬ್ರಿಟನ್‌ ಕೈಗಾರಿಕಾ ಕ್ರಾಂತಿಗೆ ಕಾರಕವಾದ ಅನೇಕ ಯಾಂತ್ರಿಕ ಸಂಶೋಧನೆಗಳಿಗೆ ಉರುವಲು ಆಯಿತು. ಈ ಯಶಸ್ಸಿನ ಸವಿಯನ್ನು ಸವಿದ ಇಂಗ್ಲೆಂಡ್‌ ಭಾರತವನ್ನು ಶೋಷಿಸುವ ಎಲ್ಲಾ ಉಪಾಯಗಳನ್ನು, ತಂತ್ರಗಾರಿಕೆಯನ್ನು, ಕುಟಿಲ ವ್ಯೂಹವನ್ನು ಹೂಡಿತು. ಇದಕ್ಕೆ ಸಾಧನೋಪಾಯವನ್ನಾಗಿ ಅದು ವಿಜ್ಞಾನ-ತಂತ್ರಜ್ಞಾನವನ್ನು ಬಳಸಿತು. ಭಾರತದ “ಗ್ರೇಟ್‌ ಟ್ರಿಗ್ನೊಮೆಟ್ರಿಕ್‌ ಸರ್ವೇ ಆಫ್‌ ಇಂಡಿಯಾ” ಸಂಸ್ಥೆಯು “ಮ್ಯಾನ್ಯುಯಲ್‌ ಆಫ್‌ ಇಂಡಿಯಾ”ವನ್ನು ಸಿದ್ಧಪಡಿಸಿತು. ಇದರ ಸಹಾಯದಿಂದ ಬ್ರಿಟಿಷರು ತಮ್ಮ ದೇಶದ ಅಭಿವೃದ್ದಿಗೆ ಭಾರತದಲ್ಲಿಯ ತಮ್ಮ ಆಡಳಿತಾವಧಿಯಲ್ಲಿ 45 ಟ್ರಿಲಿಯನ್‌ ಡಾಲರ್‌ ಮೌಲ್ಯದ ಭಾರತೀಯ ಸಂಪನ್ಮೂಲಗಳನ್ನು, ಪ್ರಾಕೃತಿಕ ಸಂಪತ್ತನ್ನು ಕಚ್ಚಾವಸ್ತುಗಳನ್ನಾಗಿ ರವಾನಿಸಿದರು.

ಬ್ರಿಟಿಷ್‌ ಆಧಿಪತ್ಯ: ವಿಜ್ಞಾನ-ತಂತ್ರಜ್ಞಾನ

ಬ್ರಿಟಿಷರು ವಿಜ್ಞಾನದ ಮೂಲಕ ಭಾರತದಲ್ಲಿ ತಮ್ಮ ರಾಜಕೀಯ ಮಿಲಿಟರಿ ಆಧಿಪತ್ಯವನ್ನು ಸ್ಥಿರೀಕರಿಸಿದರು. ಅದೇ ವಿಜ್ಞಾನದ ಮೂಲಕ ಭಾರತೀಯರನ್ನು ತಮ್ಮ ಅಧೀನಕ್ಕೆ ಒಳಪಡಿಸಿದರು. ತಾವು ವಿಚಾರ ಆಧಾರಿತ ವಿಜ್ಞಾನ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿರುವುದರಿಂದಲೇ ತಾವು ಪ್ರಶ್ನಾತೀತವಾಗಿ ತಮ್ಮ ಅಧೀನದಲ್ಲಿರುವ ಭಾರತೀಯರಿಗಿಂತ ಬೌದ್ಧಿಕವಾಗಿ, ಸಾಂಸ್ಕೃತಿಕವಾಗಿ, ನಾಗರಿಕವಾಗಿ ಜನಾಂಗೀಯವಾಗಿ ಶ್ರೇಷ್ಠರು ಎಂದು ಬ್ರಿಟಿಷರು ತಮ್ಮ ಹಿರಿಮೆಯ ಹಕ್ಕುದಾರಿಕೆಯನ್ನು ಮಂಡಿಸಿದರು, ಭಾರತವನ್ನು ತಮ್ಮ ವಸಾಹತನ್ನಾಗಿ ಮಾಡಿಕೊಳ್ಳುವುದನ್ನು ಆ ಹಕ್ಕುದಾರಿಕೆಯ ರೂಪವಾಗಿ ಬಿಂಬಿಸಿದರು. ಅದಕ್ಕೆ ಅವರು ಹೂಡಿದ ತಂತ್ರದ ಒಂದು ಮುಖ ಭಾರತದ ಎಲ್ಲಾ ಸಂಪತ್ತನ್ನು ತಮ್ಮ ವಶದಲ್ಲಿರಿಸಿಕೊಂಡು ಭಾರತೀಯರನ್ನು ಸಂಪೂರ್ಣವಾಗಿ ನಿರ್ಗತಿಕರನ್ನಾಗಿಸುವುದು ಮತ್ತು ನಿರ್ಗತಿಕ ಭಾರತೀಯರಿಗೆ ಬ್ರಿಟಿಷರನ್ನು ಓಲೈಸುವುದರ ಹೊರತಾಗಿ ಅನ್ಯ ಜೀವನೋಪಾಯ ಇಲ್ಲದ ಹಾಗೆ ಮಾಡುವುದು ಆಗಿತ್ತು. 

ತನಗೆ ವಿರೋಧವನ್ನು ಒಡ್ಡದ ಹಾಗೆ ಭಾರತವನ್ನು ತನ್ನ ಅಧೀನದಲ್ಲಿರಿಸಿಕೊಳ್ಳಲು ಬ್ರಿಟಿಷ್‌ ಈಸ್ಟ್‌ ಇಂಡಿಯ ಕಂಪೆನಿಯು ಅನುಸರಿಸಿದ ಕಾರ್ಯಾಚರಣೆಯ ಬಹು ಮುಖ್ಯವಾದ ಇನ್ನೊಂದು ಮುಖ ಭಾರತೀಯರಲ್ಲಿ ಎಲ್ಲಾ ಮುಖಗಳಲ್ಲಿ ಕೀಳರಿಮೆ ಹುಟ್ಟಿಸುವುದು ಆಗಿತ್ತು. ಮಕಾಲೆ 1835ರ ಶಿಕ್ಷಣದ ಮೇಲಿನ ತನ್ನ ಮಿನಟ್‌ ನಲ್ಲಿ ಎಲ್ಲಾ ಭಾರತೀಯರಿಗೆ ಇಂಗ್ಲಿಷರ ಹಿರಿಮೆಯನ್ನು ಮನಗಾಣುವಂತೆ ಶಿಕ್ಷಣ ಕೊಡಲು ಸಾಧ್ಯವಿಲ್ಲ; ದೈಹಿಕವಾಗಿ ಭಾರತೀಯರಾಗಿದ್ದು ಮಾನಸಿಕವಾಗಿ ತಮ್ಮ ಆಲೋಚನೆಯಲ್ಲಿ, ಅಭಿರುಚಿಯಲ್ಲಿ, ನೈತಿಕ ನಿಲುವಿನಲ್ಲಿ, ಚಿಂತನೆಯಲ್ಲಿ ಬ್ರಿಟಿಷರು ಆಗಿದ್ದು ತಮ್ಮ ಜೊತೆಗಾರ ಭಾರತೀಯರ ಮೇಲೆ ತಮ್ಮ ಪ್ರಭಾವ ಬೀರಬಲ್ಲ ಬೌದ್ಧಿಕ ವರ್ಗವನ್ನು ಹುಟ್ಟುಹಾಕುವ ಶಿಕ್ಷಣವನ್ನು ಮಾತ್ರ ಭಾರತೀಯರಿಗೆ ಕೊಡಬೇಕು ಎಂದು ನಿರೂಪಿಸಿದ್ದ. 

ಬ್ರಿಟಿಷ್‌ ಆಡಳಿತಗಾರರು ಮತ್ತು ಕೆಲವು ಭಾರತೀಯ ಬುದ್ಧಿಜೀವಿಗಳು ಭಾರತೀಯರು ಅವಿಚಾರಿಗಳು, ಮೂಢನಂಬಿಕೆಯವರು; ಅವರಿಗೆ ವಿಜ್ಞಾನ ಎಂದರೇನೆಂಬುದೇ ಗೊತ್ತಿಲ್ಲ ಎಂದು ಬಿಂಬಿಸಿದರು. ಆದರೆ ಆಧುನಿಕ ಪ್ರಯೋಗಾಲಯಗಳ ಸ್ಥಾಪನೆಯಾಗುವ ಪೂರ್ವದಲ್ಲಿಯೇ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅದರಲ್ಲೂ ಗಣಿತಶಾಸ್ತ್ರ, ಖಗೋಳ ಶಾಸ್ತ್ರ, ಔಷಧಿ-ವಿಜ್ಞಾನ, ಲೋಹ-ವಿಜ್ಞಾನಗಳಲ್ಲಿ ಭಾರತೀಯರು ಕ್ರಿಯಾಶೀಲ ಕೊಡುಗೆಯನ್ನು ಕೊಟ್ಟಿದ್ದರು. ಅದನ್ನು ಕಾಲ್ಪನಿಕ ಜ್ಞಾನ, ಮಿಥ್ಯಾಜ್ಞಾನ ಎಂದು ಭಾರತೀಯರೂ ಬದಿಗೆ ಸರಿಸುವಂತೆ ಅವರ ಮನಸ್ಥಿತಿ ಬದಲಾಗುವಂತೆ ಬ್ರಿಟಿಷರು ಮಾಡಿದರು. ಭಾರತೀಯರ ಗಮನಾರ್ಹ ವೈಜ್ಞಾನಿಕ ಸೇವೆಯನ್ನು ನಿರ್ದಾಕ್ಷಿಣ್ಯವಾಗಿ ನಿರ್ಲಕ್ಷಿಸಿದರು. “ಭಾರತೀಯರಲ್ಲಿ ವಿಜ್ಞಾನ ಮಿಸುಕಾಡುವುದಕ್ಕೂ ಕಾಯಬೇಕಾಗಿದೆ. ಈಗಿನ ಕೆಲವರಲ್ಲಿ ಆ ಮಿಸುಕಾಟ ಇದ್ದರೆ ಈ ದುರ್ಬಲ ಸೋದರರಿಗೆ ಸ್ವಲ್ಪ ರಿಯಾಯಿತಿ ತೋರೋಣ! ನಡೆಯಲು ಕಲಿಯುವುದಕ್ಕೆ ಮುನ್ನವೇ ಅವರು ಓಡಬೇಕೆಂದು ನಿರೀಕ್ಷಿಸಬಾರದು” ಎಂದಿದ್ದ ಹೆಚ್.‌ ಬಿ. ಮೆಡ್ಲಿಕಾಟ್.‌

PC:Internet

ವಸಾಹತುಶಾಹಿ ಆಡಳಿತಗಾರ ಬ್ರಿಟಿಷರಿಗೆ ಶುದ್ಧ ವಿಜ್ಞಾನದಲ್ಲಿ ಯಾವ ಆಸಕ್ತಿಯೂ ಇರಲಿಲ್ಲ. ಭಾರತೀಯ ಸಮಾಜವನ್ನು ವೈಜ್ಞಾನಿಕ ಸಮಾಜವನ್ನಾಗಿ, ಭಾರತೀಯ ಚಿಂತನೆಯನ್ನು ವೈಜ್ಞಾನಿಕ ಶಿಸ್ತಿಗೆ ಒಳಪಟ್ಟ ಚಿಂತನೆಯನ್ನಾಗಿ ರೂಪಾಂತರಿಸುವ ಯಾವ ಬದ್ಧತೆಯೂ ಅವರಿಗೆ ಇರಲಿಲ್ಲ. ಅವರಿಗೆ ಭಾರತದ ಹವಾಗುಣ, ಭೂಗುಣ, ಪ್ರಾಣಿ ಮತ್ತು ಸಸ್ಯವರ್ಗವೇ ಮೊದಲಾದವುಗಳ ಖಚಿತ ಜ್ಞಾನದಿಂದ ತಾವು ಮತ್ತು ತಮ್ಮವರು ಶ್ರೀಮಂತರಾಗುವುದರಲ್ಲಿ ಮಾತ್ರ ಆಸಕ್ತಿ ಇತ್ತು. 

ಈ ಎಲ್ಲ ಚಿಂತನ-ಯೋಜನಾ ಕ್ರಮಗಳಿಂದ ಬ್ರಿಟಿಷ್‌ ಆಡಳಿತ ಭಾರತದ ಸಾವಿರಾರು ವರ್ಷಗಳಷ್ಟು ಪುರಾತನವಾದ ನಾಗರಿಕತೆ, ವೈಜ್ಞಾನಿಕ ಜ್ಞಾನ, ವಿಶಿಷ್ಟ ಕೈಗಾರಿಕೆಗಳು, ಸಂಶೋಧನೆಗಳನ್ನೆಲ್ಲಾ ಹಾಳು ಮಾಡಿತು! ಭಾರತದಲ್ಲಿ ಅದು ಕೈಗೊಂಡ ಯಾವುದೇ ಅಭಿವೃದ್ಧಿ ಕಾರ್ಯದ ಹಿಂದೆ ಇದ್ದದ್ದು ಬ್ರಿಟಿಷ್‌ ಹಿತಾಸಕ್ತಿಯೇ! ಅದು ಬಳಸಿಕೊಂಡ ಪ್ರತಿಯೊಂದು ವೈಜ್ಞಾನಿಕ ಉಪಕರಣವೂ, ವೈಜ್ಞಾನಿಕ ಸಾಧನೋಪಾಯವೂ ಭಾರತದ ಶೋಷಣೆಯ ಮಾರ್ಗೋಪಾಯವೇ ಆಯಿತು.

(ಮುಂದುವರಿಯುವುದು)

-ಪದ್ಮಿನಿ ಹೆಗಡೆ 

5 Responses

  1. ನಯನ ಬಜಕೂಡ್ಲು says:

    ಸವಿಸ್ತಾರವಾದ ಮಾಹಿತಿಪೂರ್ಣ ಲೇಖನ.

  2. ಮಾಹಿತಿಪೂರ್ಣವಾದ ಲೇಖನ ಮುಂದಿನ ಕಂತಿಗಾಗಿ ಕಾಯುವಂತೆ ಮಾಡಿದೆ….ಧನ್ಯವಾದಗಳು ಮೇಡಂ

  3. ಶಂಕರಿ ಶರ್ಮ says:

    ಪ್ರಮುಖ ಐತಿಹಾಸಿಕ ಘಟನೆಗಳ ಸವಿಸ್ತಾರವಾದ ಲೇಖನವು ಸಂಗ್ರಹ ಯೋಗ್ಯವಾಗಿದೆ.

  4. Padma Anand says:

    ಬ್ರಿಟಿಷರು ಭಾರತದಲ್ಲಿ ಕಾಲೂರಲು ಬಳಸಿದ ಅನ್ಯಾಯದ ತಂತ್ರಗಳಿಗಾಗಿ ಮನ ಮಿಡಿಯುತ್ತದೆ. ಸತ್ಯವನ್ನು ಬಿಚ್ಚಿಡುತ್ತಿರುವ ಲೇಖನದ ಮುಂದಿನ ಕಂತಿಗಾಗಿ ಕಾಯುವೆ.

  5. Padmini Hegde says:

    ಆತ್ಮೀಯ ನಯನ ಬಜಕೂಡ್ಲು, ನಾಗರತ್ನ.ಬಿ.ಆರ್.‌ ಶಂಕರಿ ಶರ್ಮ, ಪದ್ಮ ಆನಂದ್‌ ಅವರಿಗೆ ಹೃತ್ಪೂರ್ವಕ ವಂದನೆಗಳು. ನಿಮ್ಮೆಲ್ಲರ ಉತ್ತಮ ಸ್ಪಂದನೆಗೆ ಹೃತ್ಪೂರ್ವಕ ಧನ್ಯವಾದಗಳು. ಪ್ರಕಟಣೆಗೆ ಸ್ವೀಕರಿಸಿದ ಸಹೃದಯಿ ಹೇಮಮಾಲಾ ಮೇಡಂಗೆ ಹೃತ್ಪೂರ್ವಕ ಕೃತಜ್ಞತೆಗಳು.

Leave a Reply to ನಾಗರತ್ನ ಬಿ. ಆರ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: