ಮೆಡಿಕಲ್ ಸೀಟಿನ ಸುತ್ತ

Share Button

ರಜೆಯಲ್ಲಿ ಸ್ಕಾಟ್ಲ್ಯಾಂಡಿನಿಂದ ಬಂದ ಮೊಮ್ಮಗಳು ದಿಶಾ ಯುಕ್ಯಾಟ್, ಬಿಮ್ಯಾಟ್, ಗಾಮ್‌ಸ್ಯಾಟ್ ಅಂತೆಲ್ಲಾ ಅರಳು ಹುರಿದಂತೆ ಮಾತಾಡುವಾಗ ನಾನು ಬೆರಗಾಗಿ ಅವಳನ್ನೇ ನೋಡುತ್ತಿದ್ದೆ. ಏನೇ ಪುಟ್ಟ್ಟಿ ಇದು, ನರ್ಸರಿ ಮಕ್ಕಳ ಹಾಗೆ ಕ್ಯಾಟ್, ಮ್ಯಾಟ್, ಸಾಟ್ ಅಂತ ಬಡಬಡಿಸುತ್ತಿದ್ದೀಯಾ ಅಂತ ಅವಳನ್ನೇ ಕೇಳಿದಾಗ, ದಿಶಾ, ‘ಅಜ್ಜೀ, ಸ್ಕಾಟ್ಲ್ಯಾಂಡಿನ ಮೆಡಿಕಲ್ ಎಂಟ್ರೆನ್ಸ್ ಪರೀಕ್ಷೆಗಳ ಹೆಸರು ಅದು’ ಎಂದಳು. ‘ಓಹೋ, ನಮ್ಮಲ್ಲಿ ಸಿ.ಇ.ಟಿ. ನೀಟ್ ಪರೀಕ್ಷೆ ಇದ್ದ ಹಾಗೆ’ ಎನ್ನಿಸಿತ್ತು.

ಸ್ಕಾಟ್ಲ್ಯಾಂಡಿನಲ್ಲಿ ವಾಸವಾಗಿದ್ದ ಮಗ, ಕುಟುಂಬ ಸಮೇತ, ರಜೆಗೆಂದು ಊರಿಗೆ ಬಂದಿದ್ದ. ಆಗಲೇ ಮೊಮ್ಮಗಳು ಮೆಡಿಕಲ್‌ಗೆ ಸೇರುವ ಹಂತಕ್ಕೆ ಬಂದಿದ್ದಳು. ಮೊನ್ನೆ ತಾನೆ, ಅವಳ ಹದಿನೇಳನೇ ಹುಟ್ಟುಹಬ್ಬವನ್ನು ಮಾಡಿದ್ದೆವು. ಅರೆ, ನಾನೂ ಅಜ್ಜಿಯಾಗಿ ಹದಿನೇಳು ವರ್ಷವಾಯಿತಲ್ಲ. ಮಕ್ಕಳು, ಮೊಮ್ಮಕ್ಕಳು ಎಷ್ಟು ಬೇಗ ದೊಡ್ಡವರಾದರಲ್ಲ ಎನ್ನುತ್ತೇವೆ, ಆದರೆ ನಮಗೂ ವಯಸ್ಸಾಯಿತಲ್ಲ ಎಂಬುದನ್ನೇ ಮರೆತುಬಿಡುತ್ತೇವೆ.

ದಿಶಾಳ ಮಾತು ಕೇಳಿದಾಗಿನಿಂದ, ಸ್ಕಾಟ್ಲ್ಯಾಂಡಿನ ಹಾಗೂ ನಮ್ಮ ದೇಶದ ಪರೀಕ್ಷಾ ವಿಧಾನಗಳ ಬಗ್ಗೆ ಕುತೂಹಲ ಉಂಟಾಗಿತ್ತು.. ಎರಡರಲ್ಲೂ ಅಜಗಜಾಂತರ ವ್ಯತ್ಯಾಸ ಕಂಡು ಬಂತು. ನಮ್ಮಲ್ಲಿ ನರ್ಸರಿಯಿಂದ ಕಾಲೇಜು ಮಟ್ಟದವರೆಗೆ, ವಿದ್ಯಾರ್ಥಿಯ ಅರ್ಹತೆಯನ್ನು ಅಳೆಯುವುದು, ಪರೀಕ್ಷೆಗಳಲ್ಲಿ ಅವನು ಪಡೆಯುವ ಅಂಕಗಳಿಂದಲೇ ಅಲ್ಲವೇ. ಆದರಿಲ್ಲಿ ವಿದ್ಯಾರ್ಥಿಯ ಅರ್ಹತೆಯ ಮಾನದಂಡವೇ ಬೇರೆ. ಶೈಕ್ಷಣಿಕ ಚಟುವಟಿಕೆಗಳ ಜೊತೆಜೊತೆಗೇ ಪಠ್ಯೇತರ ಚಟುವಟಿಕೆಗಳ ಮಾಪನವೂ ನಡೆಯುವುದು. ಉದಾಹರಣೆಗೆ ಸಂಗೀತ, ನೃತ್ಯ, ನಾಟಕ, ಕ್ರೀಡೆಗಳು. ಹಾಗೆಯೇ, ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮನಸ್ಥಿತಿ, ಜೊತೆಯವರೊಂದಿಗೆ ಸ್ನೇಹ ಸಂಬಂಧಗಳನ್ನು ಬೆಳೆಸುವ ಪ್ರವೃತ್ತಿ, ಗುಂಪಿನ ಮುಖಂಡನಾಗುವ ಕಲೆ ಇತ್ಯಾದಿಗಳ ಮೌಲ್ಯ ಮಾಪನವೂ ನಡೆಯುವುದು.

ನಾವು ಮೆಡಿಕಲ್ ಕಾಲೇಜು ಎಂದು ಕರೆದರೆ, ಅವರು ಮೆಡಿಕಲ್ ಸ್ಕೂಲ್ ಎನ್ನುವರು. ಹೈಸ್ಕೂಲಿಗೆ ಬಂದ ನಂತರ ವಿದ್ಯಾರ್ಥಿಗಳು ಆರು ವರ್ಷಗಳ ಕಾಲ ಅಭ್ಯಾಸ ಮಾಡಬೇಕು, ನಮ್ಮ ಶಿಕ್ಷಣ ಪದ್ಧತಿಯಲ್ಲಿ, ವಿಧ್ಯಾರ್ಥಿಗಳು – ಮೂರು ವರ್ಷಗಳ ಕಾಲ ಪ್ರೌಢಶಾಲೆ, ನಂತರ ಎರಡು ವರ್ಷಗಳ ಕಾಲ ಪಿ.ಯು.ಸಿ. ಓದುವರು. ಎಸ್-5 ಮತ್ತು ಎಸ್-6 ರಲ್ಲಿ, ವಿದ್ಯಾರ್ಥಿಗಳು ವಿಜ್ಞಾನ ಅಥವಾ ಕಲಾ ವಿಭಾಗಕ್ಕೆ ಸಂಬಂಧಪಟ್ಟ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ವಿಶೇಷ ಎಂದರೆ ಪಠ್ಯಕ್ರಮದಲ್ಲಿ ಯಾವುದೇ ಭಾಷಾಪಠ್ಯ ಸೇರ್ಪಡೆಯಾಗಿರುವುದಿಲ್ಲ. ಅವರ ಮಾತೃಭಾಷೆ ಹಾಗೂ ಬೋಧನೆಯ ಮಾಧ್ಯಮ ಒಂದೇ ಆಗಿರುವುದರಿಂದ, ಅವರ ಕಲಿಕೆ ಸುಗಮವಾಗಿ ಸಾಗುವುದು. ನಮ್ಮ ಪಠ್ಯಕ್ರಮದಲ್ಲಿ, ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಮೂರು ಭಾಷೆ ಕಲಿಯಬೇಕಾಗುತ್ತದೆ – ಕನ್ನಡ/ಸಂಸ್ಕೃತ/ಉರ್ದು, ಹಿಂದಿ ಮತ್ತು ಇಂಗ್ಲಿಷ್ ಹಾಗೂ ಪಿ.ಯು.ಸಿಯಲ್ಲಿ ಎರಡು ಭಾಷೆ ಕಲಿಯಬೇಕಾಗುತ್ತದೆ. – ಇಂಗ್ಲಿಷ್ ಮತ್ತು ಕನ್ನಡ/ಸಂಸ್ಕೃತ/ಹಿಂದಿ. ವಿಜ್ಞಾನ, ಕಾಮರ್ಸ್ ಅಥವಾ ಕಲಾ ವಿಭಾಗಕ್ಕೆ ಸಂಬಂಧಿಸಿದ ವಿಷಯಗಳಿಗಿಂತ ಹೆಚ್ಚು ಸಮಯ ಬೇರೆ ಬೇರೆ ಭಾಷೆಗಳನ್ನು ಕಲಿಯುವುದರಲ್ಲೇ ವಿದ್ಯಾರ್ಥಿಗಳ ಸಮಯ ವ್ಯರ್ಥವಾಗುವುದಲ್ಲವೇ? ವಿಜ್ಞಾನ ವಿಭಾಗದಲ್ಲಿ, ಬೋಧನಾ ಮಾಧ್ಯಮ ಇಂಗ್ಲಿಷ್ ಆಗಿರುವುದರಿಂದ, ಗ್ರಾಮೀಣ ಪ್ರದೇಶದಿಂದ ಬಂದ ವಿಧ್ಯಾರ್ಥಿಗಳಿಗೆ ವಿಜ್ಞಾನ ಕಬ್ಬಿಣದ ಕಡಲೆಯಂತೆ ಭಾಸವಾಗುವುದರಲ್ಲಿ ಸಂದೇಹವಿಲ್ಲ.

ಸ್ಕಾಟ್ಲ್ಯಾಂಡಿನ ಪ್ರೌಢಶಾಲೆಗಳಲ್ಲಿ ಐದು ವಿಷಯಗಳನ್ನು ಪಠ್ಯಕ್ರಮದಲ್ಲಿ ಸೇರಿಸಲಾಗಿದೆ – ಇಂಗ್ಲಿಷ್ ಸಾಹಿತ್ಯ ಹಾಗೂ ಗಣಿತ ಶಾಸ್ತ್ರ ಕಡ್ಡಾಯ ಹಾಗೂ ಮೆಡಿಕಲ್ ಸೇರಲು ಬಯಸುವವರಿಗೆ ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರ ಕಡ್ಡಾಯ. ಯಾವುದಾದರೂ ವಿಷಯವನ್ನು ಐದನೆಯ ಪಠ್ಯವನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು. ಉದಾ: ಭೌತಶಾಸ್ತ್ರ, ದೈಹಿಕ ಶಿಕ್ಷಣ, ಅರ್ಥಶಾಸ್ತ್ರ, ಸಮಾಜ ವಿಜ್ಞಾನ, ಯಾವುದಾದರೂ ಭಾಷೆ ಇತ್ಯಾದಿ. ಎಸ್-5 ವಿದ್ಯಾರ್ಥಿಗಳಿಗೆ ಗಣಿತ ಶಾಸ್ತ್ರ, ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರ ಕಡ್ಡಾಯ ಜೊತೆಗೆ ಎರಡು ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ದಿಶಾ ಮ್ಯಾಂಡರಿನ್ (ಚೈನೀಸ್ ಭಾಷೆ) ಮತ್ತು ದೈಹಿಕ ಶಿಕ್ಷಣ ಆಯ್ಕೆ ಮಾಡಿದ್ದಳು. ಕನಿಷ್ಟ ನಾಲ್ಕು ವಿಷಯಗಳಲ್ಲಿ ‘ಎ’ ಗ್ರೇಡ್ ಹಾಗೂ ಒಂದು ವಿಷಯದಲ್ಲಿ ‘ಬಿ’ ಗ್ರೇಡ್ ಬಂದವರು ಮಾತ್ರ ಮೆಡಿಕಲ್‌ಗೆ ಅರ್ಜಿ ಹಾಕಬಹುದು. ಎಸ್-6 ರಲ್ಲಿ ಯುಕ್ಯಾಟ್/ ಬಿಮ್ಯಾಟ್/ ಗಾಮ್‌ಸ್ಯಾಟ್ ಪರೀಕ್ಷೆ ತೆಗೆದುಕೊಳ್ಳಬೇಕು. ಯುಕ್ಯಾಟ್ ಎಂದರೆ ಯೂನಿವರ್ಸಿಟಿ ಕ್ಲಿನಿಕಲ್ ಆಪ್ಟಿಟ್ಯೂಡ್ ಟೆಸ್ಟ್. ಈ ಪರೀಕ್ಷೆಯ ಜೊತೆಗೇ ಎಸ್.ಜೆ.ಟಿ ಎಂದರೆ ಸಿಚುಯೇಷನಲ್ ಜಡ್ಜ್‌ಮೆಂಟ್ ಟೆಸ್ಟ್ ಸಹ ಕಡ್ಡಾಯ. ಶೈಕ್ಷಣಿಕ ಪಠ್ಯಕ್ರಮದಲ್ಲಿ ಗಳಿಸಿದ ಅಂಕಗಳಿಗೆ 25%, ಯುಕ್ಯಾಟ್‌ಗೆ 17.5% ಹಾಗು ಎಸ್.ಜೆ.ಟಿ.ಗೆ 7.5% ಅಂಕಗಳನ್ನೂ ನಿಗದಿಗೊಳಿಸಲಾಗಿದೆ. ಉಳಿದ 50% ಅಂಕಗಳನ್ನು ವಿಧ್ಯಾರ್ಥಿ ಸಂದರ್ಶನ (ಇಂಟರ್ ವ್ಯೂ) ಕ್ಕೆ ಮೀಸಲು. ವೈದ್ಯಕೀಯ ಕ್ಷೇತ್ರದ ವಾಸ್ತವಿಕ ಚಿತ್ರಣ ಮತ್ತು ಸವಾಲುಗಳ ಅಧ್ಯಯನ ಮಾಡಿದ ನಂತರವೇ ವಿದ್ಯಾರ್ಥಿಯು ಮೆಡಿಕಲ್ ಸ್ಕೂಲಿಗೆ ಅರ್ಜಿಯನ್ನು ಸಲ್ಲಿಸಬೇಕು. ಸಂದರ್ಶನಕ್ಕೆ ಹಾಜರಾಗುವ ವಿಧ್ಯಾರ್ಥಿ ‘ಪರ್ಸ್‌ನಲ್ ಸ್ಟೇಟ್‌ಮೆಂಟ್’ ಪ್ರಸ್ತುತ ಪಡಿಸಬೇಕು. ‘ನಾನು ಏಕೆ ಡಾಕ್ಟರ್ ಆಗ ಬಯಸುತ್ತೇನೆ’ ಎಂಬುದರ ಬಗ್ಗೆ ಒಂದು ಪುಟದಷ್ಟು ವೈಯುಕ್ತಿಕ ಅನಿಸಿಕೆಗಳನ್ನು ಉಲ್ಲೇಖಿಸಬೇಕು. ಈ ಹೇಳಿಕೆಯಲ್ಲಿ ವಿದ್ಯಾರ್ಥಿಯ ಸಂವಹನ ಕೌಶಲ, ಪರಸ್ಪರ ಮಾನವೀಯ ಸಂಬಂಧಗಳ ಕುರಿತ ಕಾಳಜಿ ಹಾಗೂ ರೋಗಿಗಳ ಬಗ್ಗೆ ತೋರುವ ಸಹಾನುಭೂತಿಯನ್ನು ಪರೀಕ್ಷಿಸಲಾಗುವುದು.

ವೈದ್ಯಕೀಯ ಕ್ಷೇತ್ರದಲ್ಲಿ ಕಾಲಿಡುವ ಅಪೇಕ್ಷಿಸುವ ವಿದ್ಯಾರ್ಥಿಯು, ವೈದ್ಯರ/ ವೈದ್ಯಕೀಯ ಶಿಕ್ಷಣಾರ್ಥಿಗಳ ಜೊತೆ ಒಬ್ಬ ಉತ್ತಮ ವೈದ್ಯನ ಕರ್ತವ್ಯಗಳ ಬಗ್ಗೆ ಚರ್ಚಿಸಬೇಕು. ವೈದ್ಯಕೀಯ ವಿ.ವಿ.ಗಳು ನಡೆಸುವ ಸಮ್ಮೇಳನಗಳಲ್ಲಿ ಭಾಗವಹಿಸಿ, ಮಾಹಿತಿ ಸಂಗ್ರಹಿಸಬೇಕು ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ತಪ್ಪದೇ ಓದಬೇಕು. ಒಬ್ಬ ಅಭ್ಯರ್ಥಿಗೆ ಇರಬೇಕಾದ ಆಸಕ್ತಿ, ಕುತೂಹಲವನ್ನು ಪರೀಕ್ಷಿಸಲು, ಈ ದಾಖಲೆಗಳನ್ನು ಕೇಳುವರು.

ವಿದ್ಯಾರ್ಥಿಯು ನರ್ಸಿಂಗ್ ಹೋಂ ಅಥವಾ ಕೇರ್ ಹೋಂಗಳಲ್ಲಿ, ಅಲ್ಲಿನ ವೈದ್ಯರ ತಂಡದೊಂದಿಗೆ, ನಾಲ್ಕಾರು ವಾರ ಕಾರ್ಯ ನಿರ್ವಹಿಸಿರಬೇಕು. ಈ ದೇಶದಲ್ಲಿ, ವಯಸ್ಸಾದವರಿಗೆ ಶುಶ್ರೂಷೆ ಮಾಡುವ ಕೇಂದ್ರಗಳಿಗೆ ‘ನರ್ಸಿಂಗ್ ಹೋಂ’ ಎಂದು ಕರೆಯುವರು. ವಿಶೇಷ ಚೇತನರ ಕೇಂದ್ರಗಳಲ್ಲಿ, ಅಲ್ಲಿನ ನಿಲಯ ಪಾಲಕರ ಮಾರ್ಗದರ್ಶನದೊಂದಿಗೆ ಸೇವೆ ಸಲ್ಲಿಸಬೇಕು. ರೋಗಿಗಳ ಬಗ್ಗೆ ವೈದ್ಯರಿಗೆ ಇರಬೇಕಾದ ವಿಶೇಷವಾದ ಕಾಳಜಿ, ಅಂತಃಕರಣ, ಸಹಾನುಭೂತಿಯನ್ನು ಇಲ್ಲಿ ಒರೆಗೆ ಹಚ್ಚಲಾಗುವುದು. ಈ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವಾಗ, ಅವನು ಪಡೆದ ಅನುಭವ ಹಾಗೂ ಈ ಅನುಭವ ಅವನಿಗೆ ವೈದ್ಯನಾಗಲು ನೀಡಿದ ಪ್ರೇರಣೆಯ ಬಗ್ಗೆ ಉಲ್ಲೇಖಿಸಬೇಕು.

ಮೇಲ್ಕಂಡ ಅಂಶಗಳಿಗೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಸಂದರ್ಶನದ ಸಮಯದಲ್ಲಿ ಪ್ರಸ್ತುತಪಡಿಸಬೇಕು.

ಇನ್ನು ಪಠ್ಯೇತರ ಚಟುವಟಿಕೆಗಳಲ್ಲಿ ಮಾಡಿರುವ ಸಾಧನೆಗಳನ್ನು ಉಲ್ಲೇಖಿಸುವ ಬಗ್ಗೆ ತಿಳಿಯೋಣ ಬನ್ನಿ. – ಸ್ವಯಂ ಸೇವಾ ಸಂಘಗಳ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು, ಶಾಲೆಯಲ್ಲಿ ಜವಾಬ್ದಾರಿಯುತ ಕೆಲಸಗಳನ್ನು, ಉದಾ: ಶಾಲೆಯ ಕ್ಯಾಪ್ಟನ್, ಹಾಸ್ಟೆಲ್ಲಿನಲ್ಲಿ ಪ್ರಿಫೆಕ್ಟ್ ಅಥವಾ ವಿದ್ಯಾರ್ಥಿ ತಂಡದ ಟ್ಯೂಟರ್ ಕೆಲಸ ಮಾಡುವಾಗ ತಂಡದ ನಾಯಕತ್ವವನ್ನು ಯಶಸ್ವಿಯಾಗಿ ನಿರ್ವಹಿಸಿದ ದಾಖಲೆ ನೀಡುವುದು. ಅಲ್ಪಾವಧಿ ಕೆಲಸಗಳನ್ನು ಶ್ರದ್ಧೆ, ನಿಷ್ಠೆಯಿಂದ ಮಾಡಿದ ದಾಖಲೆ ಹಾಗೂ ಸಂಘಟನಾ ಚಾತುರ್ಯದ ಬಗ್ಗೆ ಉಲ್ಲೇಖಿಸುವುದು.

ವಿದ್ಯಾರ್ಥಿಗಳಲ್ಲಿರುವ ಕೌಶಲಗಳ ಪ್ರಸ್ತುತಿ – ಸಂಗೀತ, ನೃತ್ಯ, ನಾಟಕ, ಕ್ರೀಡೆ, ಚಿತ್ರಕಲೆ, ಛಾಯಾಗ್ರಹಣ ಮುಂತಾದ ಹವ್ಯಾಸಗಳ ತರಬೇತಿಯ ಬಗ್ಗೆ ದಾಖಲೆ ಒದಗಿಸುವುದು. ವೈದ್ಯಕೀಯ ವೃತ್ತಿಯಲ್ಲಿ ಸಾಕಷ್ಟು ಒತ್ತಡಗಳು ಇರುವುದರಿಂದ, ವೃತ್ತಿಯ ಜೊತೆಗೇ ಯಾವುದಾದರೊಂದು ಹವ್ಯಾಸವಿದ್ದರೆ, ವೃತ್ತಿಯಲ್ಲಿ ಬರುವ ಸವಾಲುಗಳನ್ನು ಎದುರಿಸಲು ಶಕ್ತರಾಗುವರು ಎಂಬ ಸಿದ್ಧಾಂತ ಇವರದು.

ತಮ್ಮ ಸಹಪಾಠಿಗಳೊಂದಿಗೆ, ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ, ನೆರೆಹೊರೆಯವರೊಂದಿಗೆ ಸ್ನೇಹ, ವಿಶ್ವಾಸ ಹಾಗೂ ತಮಗೆ ವಹಿಸಿದ ಕಾರ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವ ಕಲೆ ಹೊಂದಿರುವ ದಾಖಲೆ ಪ್ರಸ್ತುತಪಡಿಸುವುದು.

ಸ್ಕಾಟ್ಲ್ಯಾಂಡಿನಲ್ಲಿ ಐದು ಮೆಡಿಕಲ್ ಕಾಲೇಜುಗಳು ಇದ್ದರೂ, ಪ್ರತಿಯೊಂದು ಕಾಲೇಜು ವಿಭಿನ್ನವಾದ ಮಾನದಂಡಗಳನ್ನು ಹೊಂದಿದೆ. ಮೇಲ್ಕಂಡ ಪೂರ್ವಾಪೇಕ್ಷಿತ ಕಾರ್ಯಗಳನ್ನು ಶಿಸ್ತುಬದ್ಧವಾಗಿ ನಿರ್ವಹಿಸಲು ತರಬೇತಿ ನೀಡುವ ಹಲವು ಸಂಸ್ಥೆಗಳು ಇವೆ. ಡ್ಯೂಕ್ ಆಫ್ ಎಡಿನ್‌ಬರೋ ಸಂಘಟನೆಯಡಿ ಮೂರು ಹಂತಗಳಲ್ಲಿ ಕೋರ್ಸ್‌ಗಳನ್ನು ನಡೆಸುತ್ತಾರೆ – ಬ್ರಾನ್ಸ್, ಸಿಲ್‌ವರ್ ಹಾಗೂ ಗೋಲ್ಡ್. ಮೆಡಿಕಲ್ ಕೋರ್ಸ್‌ಗೆ ಸೇರಲು ಅತ್ಯಗತ್ಯವಾದ ಎಲ್ಲಾ ಚಟುವಟಿಕೆಗಳನ್ನೂ ಹಾಗೂ ಸಂದರ್ಶನವನ್ನು ಎದುರಿಸಲು ಸೂಕ್ತವಾದ ಮಾರ್ಗದರ್ಶನವನ್ನೂ ನೀಡುತ್ತಾರೆ.

ಒಬ್ಬ ಉತ್ತಮವಾದ ವೈದ್ಯನಾಗಬೇಕಾದರೆ, ಅವರಲ್ಲಿರಬೇಕಾದ ಮಾನವೀಯತೆ, ಕಾರ್ಯತತ್ಪರತೆ, ಶ್ರದ್ಧೆ, ಮೆರಿಟ್ ಇವುಗಳನ್ನು ಪರೀಕ್ಷಿಸಿಯೇ ಮೆಡಿಕಲ್ ಸ್ಕೂಲಿನಲ್ಲಿ ಪ್ರವೇಶ ನೀಡುವರು. ಅಭ್ಯರ್ಥಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಅಂಶಗಳನ್ನು ಗಮನಿಸಿ ಮೆಡಿಕಲ್ ಸ್ಕೂಲಿನಲ್ಲಿ ಪ್ರವೇಶ ನೀಡುವರು. ಡೊನೇಷನ್ ಸೀಟಿಗೆ ಅವಕಾಶವೇ ಇಲ್ಲ.
ನಮ್ಮಲ್ಲಿ ವಿಧ್ಯಾರ್ಥಿಗಳು ಪರೀಕ್ಷೆಗಳಲ್ಲಿ ಪಡೆದ ಅಂಕಗಳು, ಎಂಟ್ರೆನ್ಸ್ ಪರೀಕ್ಷೆಯಲ್ಲಿ ಪಡೆದ ರ್‍ಯಾಂಕ್, ಜಾತಿಯ ಆಧಾರದ ಮೇಲೆ ನೀಡಲಾದ ರಿಸರ್‍ವೇಷನ್ ಅಥವಾ ಲಕ್ಷಗಟ್ಟಲೇ ಡೊನೇಷನ್ ಮೆಡಿಕಲ್ ಸೀಟ್ ಪಡೆಯಲು ಮಾನದಂಡವಾಗಿವೆ.
ಈಗ ಹೇಳಿ ಯಾವುದು ಸೂಕ್ತವಾದ ಮಾರ್ಗ?

-ಡಾ. ಗಾಯತ್ರಿದೇವಿ ಸಜ್ಜನ್

6 Responses

  1. ಮೆಡಿಕಲ್…ಸೀಟಿನ ಸುತ್ತ..ನಮ್ಮ ದೇಶ..ವಿದೇಶಗಳಲ್ಲಿ..ನಡೆಯುವ…ವಿದ್ಯಮಾನಗಳ ಬಗ್ಗೆ.. ಒಂದು…ಕ್ಷ.ಕಿರಣ…ಉತ್ತಮ ಮಾಹಿತಿ.
    ಧನ್ಯವಾದಗಳು ಮೇಡಂ..

  2. ನಯನ ಬಜಕೂಡ್ಲು says:

    ಉತ್ತಮ ಮಾಹಿತಿ

  3. Hema says:

    ಅಂಕಗಳಿಕೆಗೂ, ಉದ್ಯೋಗದಲ್ಲಿ ಕಾರ್ಯಕ್ಷಮತೆಗೂ ನೇರ ಸಂಬಂಧವಿಲ್ಲ ಎಂಬುದು ನನ್ನ ಅನುಭವ ಕೂಡ. ಸ್ಕಾಟ್ಲೇಂಡ್ ನ ಶಿಕ್ಷಣ ಪದ್ಧತಿಯೇ ಉತ್ತಮ ಅನಿಸಿತು. ಒಳ್ಳೆಯ ಮಾಹಿತಿ.

  4. . ಶಂಕರಿ ಶರ್ಮ says:

    ಸ್ಕಾಟ್ಲ್ಯಾಂಡಿನಲ್ಲಿ ವಿದ್ಯಾಭ್ಯಾಸ ಹಾಗೂ ವೈದ್ಯಕೀಯ ಕಲಿಕೆಯ ರೀತಿ ನಿಯಮಗಳ ಕುರಿತ ಮಾಹಿತಿಪೂರ್ಣ ಲೇಖನವು ಬಹಳ ಚೆನ್ನಾಗಿದೆ… ಧನ್ಯವಾದಗಳು ಮೇಡಂ.

  5. Samatha.R says:

    ಒಳ್ಳೆಯ ಮಾಹಿತಿ…ಈ ರೀತಿ ವ್ಯವಸ್ಥೆ ನಮ್ಮ ದೇಶದಲ್ಲೂ ಇದ್ದಿದ್ದರೆ …ಅನ್ನಿಸಿತು…ಕೋಟಿಗಟ್ಟಲೆ ಹಣ ಸುರಿದು MBBS ಗೆ ಸೇರುವವರು ಎಂತಹ ವೈದ್ಯರಾಗುವರು?

  6. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

Leave a Reply to ಗಾಯತ್ರಿ ಸಜ್ಜನ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: