ಕಾದಂಬರಿ: ನೆರಳು…ಕಿರಣ 33

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..

“ಏನೋ ಮಾವ ಸೊಸೆ ತುಂಬಾ ಗಹನವಾದ ವಿಷಯದ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಂತೆ ಕಾಣಿಸುತ್ತದೆ” ಎಂದಸು ಕೇಳಿದ ಶ್ರೀನಿವಾಸ.

“ಏ..ಅಂಥದ್ದೇನಿಲ್ಲ, ಅರವತ್ತು ವರ್ಷದ ಶಾಂತಿ ಕಾರ್ಯದ ಬಗ್ಗೆ ಕೇಳಿದ ಭಾಗ್ಯಳಿಗೆ ವಿವರಿಸಿ ಹೇಳುತ್ತಿದ್ದಾರೆ ಅಷ್ಟೇ” ಎಂದರು ಸೀತಮ್ಮ.

“ಓಹೋ ! ಭಾಗ್ಯ..ಜಾತಕ..ಒಂದಕ್ಕೊಂದು ಸಂಬಂಧವೇ ಇಲ್ಲವಲ್ಲ. ಮದುವೆಯಾಗಿ ಹತ್ತು ವರ್ಷಗಳಾದವು. ಮನೆಯಲ್ಲಿ ಬೆಳಗಿನಿಂದ ರಾತ್ರಿಯವರೆಗೂ ಜಾತಕ, ಶಾಸ್ತ್ರ, ಕುಂಡಲಿ, ತಾಯತ, ಪೂಜೆಗಳ ಬಗ್ಗೆ ನಿರಂತರವಾಗಿ ಕೆಲಸಗಳು, ಮಾತುಗಳು ನಡೆಯುತ್ತಲೇ ಇರುತ್ತವೆ. ಈಕೆ ತನಗೆ ವಹಿಸಿದ ಕೆಲಸಗಳನ್ನು ಒಪ್ಪವಾಗಿ ಮಾಡಿಕೊಂಡು ಹೋಗುತ್ತಿದ್ದಾಳೆಯೇ ಹೊರತು ಇವುಗಳ ಬಗ್ಗೆ ಚಕಾರವೆತ್ತದವಳು ಇತ್ತೀಚೆಗೆ ಅಪ್ಪ ಬರೆದಿದ್ದನ್ನೆಲ್ಲ ನಕಲು ಮಾಡಲು ಕೊಡುವುದರಿಂದ ಆಸಕ್ತಿ ಹುಟ್ಟಿಬಿಟ್ಟಿದೆಯಾ ಹೇಗೆ? ಅದು ಒಳ್ಳೆಯ ಲಕ್ಷಣವೇ, ನನಗೂ ಉಪಯೋಗವಾಗುತ್ತದೆ” ಎಂದು ನಗೆಚಟಾಕಿ ಹಾರಿಸಿದ ಶ್ರೀನಿವಾಸ.

ಶ್ರೀನಿವಾಸ ಬಂದ ಸುಳಿವನ್ನು ತಿಳಿದು ನಾರಣಪ್ಪ ಏನಾದರೂ ಬೇಕೇನೋ ಕೇಳೋಣವೆಂದು ಒಳಗಿನಿಂದ ಬರುತ್ತಲೇ ಅವನಾಡಿದ ಮಾತುಗಳನ್ನು ಕೇಳಿಸಿಕೊಂಡು “ಭೇಷಾಯಿತು ಭಾಗ್ಯಮ್ಮಾ, ಅದೂ ಒಂದು ಕೈ ನೋಡಿಬಿಡಿ. ನಿಮಗೇ ಡಿಮ್ಯಾಂಡ್ ಹೆಚ್ಚಾಗಿ ಅಪ್ಪ ಮಗನನ್ನೇ ಅಸಿಸ್ಟೆಂಟಾಗಿ ಮಾಡಿಕೊಳ್ಳಬಹುದು” ಎಂದರು.

“ಅವಳನ್ನು ಹೊಗಳುವುದೆಂದರೆ ನೀವು ಮೂರೂಜನಕ್ಕೆ ಅದೇನೋ ಹಿಗ್ಗೋ, ಅದಕ್ಕೂ ಅದೃಷ್ಟ ಮಾಡಿರಬೇಕು. ಇರಲಿ ಒಂದು ಲೋಟ ನೀರುಕೊಟ್ಟು ಈ ಚೀಲದಲ್ಲಿರುವ ಸಾಮಾನುಗಳನ್ನು ತೆಗೆದು ಒಳಗಿಡಿ ನಾಣಜ್ಜಾ” ಎಂದು ಹೇಳುತ್ತಾ ತಾನು ಅಲ್ಲಿಯೆ ಕುಳಿತ ಶ್ರೀನಿವಾಸ. ಮಗನು ತಾವಿದ್ದ ಕಡೆಯಲ್ಲಿಯೇ ಕುಳಿತದ್ದು ಕಂಡು ಜೋಯಿಸರು “ಹೋಗಿದ್ದ ಕಡೆ ಪೂಜೆಯೆಲ್ಲ ಸಾಂಗವಾಗಿ ನಡೆಯಿತೇ? ಬೇಗನೇ ಬಂದೆ” ಎಂದರು ಜೋಯಿಸರು.

“ಹೂ ಅಪ್ಪಾ, ಆ ಮನೆಯವರು ನಾನು ಹೋಗುವುದಕ್ಕಿಂತ ಮುಂಚೆಯೇ ತಯಾರಿ ಮಾಡಿಕೊಂಡಿದ್ದರು. ಅದಕ್ಕೆ ಕಾರಣ ನಿಮ್ಮ ಗೆಳೆಯರಾದ ವೆಂಕಟರಾಮು. ಅವರು ಬಂದಿದ್ದರಿಂದ ನನಗೆ ಬಹಳ ಸುಲಭವಾಯಿತು. ನಾನು ನಡೆಸಿಕೊಟ್ಟ ಪೂಜೆ ನೋಡಿ ತುಂಬ ಸಂತೋಷಪಟ್ಟರು. ನಿಮ್ಮನ್ನು, ಮನೆಯವರೆಲ್ಲರನ್ನೂ ಬಹಳ ವಿಚಾರಿಸಿಕೊಂಡರು. ನನ್ನ ಮದುವೆಯ ಸಂದರ್ಭದಲ್ಲಿ ಏನೇನೋ ತೊಂದರೆಗಳಾಗಿ ಅವರು ಬರಲಿಕ್ಕಾಗಲಿಲ್ಲವೆಂದರು. ಈಗ ಅವರು ವಿದುರಾಶ್ವತ್ಥದ ದೇಗುಲದ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದಾರಂತೆ. ನೀವೆಲ್ಲರೂ ಒಮ್ಮೆ ಬಂದು ಪೂಜೆ ಏಕೆ ಮಾಡಿಸಬಾರದು ಎಂದು ಕೇಳಿದರು. ಮುಂದಿನ ಸೋಮವಾರ ಅಲ್ಲಿ ವಿಶೇಷ ಪೂಜಾಕಾರ್ಯವಿದೆಯಂತೆ, ಬಿಡುವು ಮಾಡಿಕೊಂಡು ಹೋಗಿದ್ದು ಬರೋಣವೆಂದು ಪೂಜೆಗೆ ಬರೆಸಿ ಅಡ್ವಾನ್ಸ್ ಕೊಟ್ಟು ಬಂದಿದ್ದೇನೆ. ಕೊಡುವ ಮೊದಲು ನಿಮ್ಮನ್ನು ಒಂದು ಮಾತು ಕೇಳಿ ಕಾಗದ ಬರೆಯುತ್ತೇನೆ, ಅಥವಾ ಆ ಕಡೆಗೆ ಯಾರಾದರೂ ಬರುತ್ತಲೇ ಇರುತ್ತಾರೆ ಅವರ ಜೊತೆ ಹೇಳಿಕಳುಹಿಸುತ್ತೇನೆ ಎಂದೆ. ಅದಕ್ಕವರು ಅದೆಲ್ಲ ತಡವಾಗುತ್ತದೆ. ನಿಮ್ಮಪ್ಪನನ್ನು ಬಹಳ ವರ್ಷಗಳಿಂದ ಬಲ್ಲೆ. ಪೂಜಾಕಾರ್ಯಕ್ಕೆ ಎಂದೂ ಅವರು ಬೇಡವೆನ್ನುವುದಿಲ್ಲ. ಒಂದುವೇಳೆ ಮನೆಯ ಹೆಣ್ಣುಮಕ್ಕಳಿಗೇನಾದರೂ ತಡೆಗಳಿದ್ದರೆ ನೀವೇ ಅಪ್ಪ ಮಗ ಬನ್ನಿ. ಆ ನಂತರ ಅವರು ಬಂದಾಗ ಪ್ರತಿಷ್ಠಾಪನಾ ಕಾರ್ಯ ಇಟ್ಟುಕೊಂಡರಾಯ್ತು ಎಂದರು” ಎಂದ ಶ್ರೀನಿವಾಸ.

ಮಗನ ಮಾತು ಕೇಳಿದ ಸೀತಮ್ಮ ಮನಸ್ಸಿನಲ್ಲೇ ಸಂತಸಪಡುತ್ತಾ “ಶ್ರೀನಿ ನಮ್ಮಿಬ್ಬರದ್ದು ಸದ್ಯಕ್ಕೆ ಏನೂ ತಾಪತ್ರಯಗಳಿಲ್ಲ. ಹೋಗಿಬರೋಣ. ನೀನು ಹುಟ್ಟುವ ಮುಂಚೆ, ಆನಂತರ ಹುಟ್ಟಿದ ಮೇಲೆ ಹೋಗಿಬಂದಿದ್ದೆವು. ಬೇರೆ ಕಡೆಯಲ್ಲೆಲ್ಲ ತಿರುಗಾಡಿದ್ದಿದೆ. ಆದರೆ ಅಲ್ಲಿಗೆ ಮತ್ತೆ ಹೋಗಲಾಗಲೇ ಇಲ್ಲ.” ಎಂದರು.

“ಸರಿ ಹಾಗಾದರೆ ಹೋಗಿ ಬಂದುಬಿಡೋಣ. ಭಾಗ್ಯಮ್ಮ ನೀನು ಒಂದೆರಡು ದಿನ ಪಾಠದ ಮಕ್ಕಳಿಗೆ ರಜೆ ಕೊಡಬೇಕಾಗುತ್ತೆ” ಎಂದರು ಜೋಯಿಸರು.

“ಓ  ಕೊಡದೇ ಏನು, ಪೂಜೆ ಮುಗಿಸಿ ಬಂದಮೇಲೆ ಪಾಠದ ಸಮಯವನ್ನು ಸ್ವಲ್ಪ ಹೆಚ್ಚಿಸಿ ಹೇಳಿಕೊಟ್ಟರಾಯಿತು” ಎಂದು ಸೊಸೆಯ ಪರವಾಗಿ ತಾವೇ ಉತ್ತರ ಹೇಳಿದರು ಸೀತಮ್ಮ.

ಇವರೆಲ್ಲರ ಮಾತುಗಳನ್ನೂ, ಅವರೆಲ್ಲರ ಉತ್ಸಾಹವನ್ನೂ ನೋಡಿದ ಭಾಗ್ಯ ಆ ಕ್ಷೇತ್ರದ ಮಹಿಮೆಯ ಬಗ್ಗೆ ಕೇಳಿದ್ದಳು. ಇದನ್ನೂ ಒಮ್ಮೆ ನೋಡಿಯೇ ಬಿಡೋಣವೆಂದು “ನನ್ನದೇನೂ ಅಭ್ಯಂತರವಿಲ್ಲ. ಅತ್ತೆಯವರು ಹೇಳಿದಂತೆ ಮಾಡಿದರಾಯಿತು” ಎಂದಳು.

“ನಾಣಜ್ಜಾ ಯಾವಾಗ ಕರೆದರೂ ಏನಾದರೊಂದು ನೆಪಹೇಳಿ ತಪ್ಪಿಸಿಕೊಳ್ಳುತ್ತೀರಿ, ಈ ಸಾರಿ ನಮ್ಮೊಡನೆ ಬರಬೇಕು. ಮನೆಯಕಡೆ ಗಮನಿಸಲು ಪಕ್ಕದ ಮನೆಯವರಿಗೆ ಹೇಳಿ ಹೋದರಾಯಿತು.” ಎಂದ ಶ್ರೀನಿವಾಸ.

“ಆಯಿತು ಚಿಕ್ಕ ಯಜಮಾನರೇ, ನಾನೀಗ ಓದಲು ಪೇಪರ್ ತೆಗೆದುಕೊಂಡು ನನ್ನ ರೆಸ್ಟ್ ರೂಮಿಗೆ ಹೋಗಬಹುದೇ?” ಎಂದರು ನಾರಣಪ್ಪ ನಾಟಕೀಯವಾಗಿ.

“ಹೂಂ ಹೋಗಿ ಹೋಗಿ ಮುಂದಿನ ಎಲೆಕ್ಷನ್ನಿಗೆ ನಮ್ಮ ಬಡಾವಣೆಯಿಂದ ನಿಮ್ಮನ್ನೇ ನಿಲ್ಲಸೋಣ. ನಾನೇ ಖುದ್ದಾಗಿ ಮನೆಮನೆಗೆ ಹೋಗಿ ನಿಮಗೋಸ್ಕರ ಪ್ರಚಾರ ಮಾಡುತ್ತೇನೆ.” ಎಂದ ಶ್ರೀನಿವಾಸ.

“ಯಾಕಾಗಬಾರದು, ಟಿಕೆಟ್ ಕೊಡುತ್ತಾರಾ ಕೇಳಿ ನೋಡಿ” ಎಂದು ನಗುತ್ತಾ ತಮ್ಮ ರೂಮಿನ ಕಡೆ ನಡೆದರು ನಾರಣಪ್ಪ.

ಅಷ್ಟರಲ್ಲಿ ಜೋಯಿಸರು ಕೊಟ್ಟಿದ್ದ ಕೆಲಸವನ್ನು ಮುಗಿಸಿದ ಭಾಗ್ಯ ಅದನ್ನು ಅವರಿಗೊಪ್ಪಿಸಿ “ನಿಮಗೆ ಕುಡಿಯಲು ಪಾನಕವೇನಾದರೂ ಮಾಡಿ ಕೊಡಲೇ?” ಎಂದು ಕೇಳಿದಳು.

ಎಲ್ಲರೂ ಅವಳ ಆಹ್ವಾನವನ್ನು ನಿರಾಕರಿಸಿದರು. ಶ್ರೀನಿವಾಸನು “ನಡೆ ನಿನ್ನ ಕೈತೋಟದಲ್ಲಿ ಒಂದು ಸುತ್ತು ಹಾಕೋಣ. ಇತ್ತೀಚೆಗೆ ಅದನ್ನು ನೋಡೇ ಇಲ್ಲ. ಹೊಸದೇನು ಮಾಡಿದ್ದೀಯೆ?” ಎಂದು ಮೇಲೆದ್ದ. ಭಾಗ್ಯಳೂ “ಬನ್ನಿ ತೋರಿಸುತ್ತೇನೆ” ಎಂದು ಹೊರಟಳು. ಜೋಯಿಸರು ಸೀತಮ್ಮ ತಮ್ಮ ರೂಮಿಗೆ ಹೋದರು. ಹಿಂದುಗಡೆಯ ಬಾಗಿಲನ್ನು ತೆರೆದಾಗ ಪಕ್ಕದ ಮನೆಯಲ್ಲಿನ ಕುಟುಂಬದ ಹೆಣ್ಣುಮಕ್ಕಳು ಕಾಣಿಸಿದರು. “ಅರೇ..ಇವರೇನು ಮಾಡುತ್ತಿದ್ದಾರೆ” ಎಂದು ಅಲ್ಲೇ ನಿಂತರು. ಒಬ್ಬ ಹೆಣ್ಣುಮಗಳು ಅಲ್ಲಲ್ಲಿ ಬಿದ್ದಿದ್ದ ಕಸಕಡ್ಡಿಗಳನ್ನು ಗುಡ್ಡೆ ಮಾಡಿ ಹಾಕುತ್ತಿದ್ದಳು. ಅದನ್ನು ಮತ್ತೊಬ್ಬರು ಪುಟ್ಟಿಯಲ್ಲಿ ಎತ್ತಿ ಗೊಬ್ಬರದ ಗುಂಡಿಗೆ ಹಾಕುತ್ತಿದ್ದರು. ಮತ್ತೊಬ್ಬರು ಪಾತಿಗಳೊಳಕ್ಕೆ ನೀರು ಹಾಯಿಸುತ್ತಿದ್ದರು. ಹಾಗೇ ಅವರುಗಳ ಬಾಯಲ್ಲಿ ಜನಪದ ಹಾಡುಗಳ ಗುನುಗುವಿಕೆಯೂ ಕೇಳಿಸುತ್ತಿತ್ತು. ಅದನ್ನು ಕಂಡ ಶ್ರೀನಿವಾಸ “ಈಗ ನಾವಲ್ಲಿಗೆ ಹೋಗುವುದು ಬೇಡ ಭಾಗ್ಯ. ನಾನು ಹುಟ್ಟಿದಾಗಿನಿಂದ ಕಂಡವರೇ ಆದರೂ ನೋಡಿದರೆ ಸಂಕೋಚಪಟ್ಟುಕೊಳ್ಳುತ್ತಾರೆ. ಜಮೀನಿನ ಕೆಲಸ ಬೇಗ ಮುಗಿಸಿ ಬಂದಿದ್ದಾರೆ ಅನ್ನಿಸುತ್ತದೆ. ಅವರುಗಳ ಆನಂದಕ್ಕೆ ಭಂಗ ತರುವುದು ಬೇಡ. ಇಲ್ಲಿಂದಲೇ ಕಾಣುತ್ತಿದೆ. ಅಂತೂ ತೋಟಕ್ಕೊಂದು ಚಂದದ ರೂಪು ಕೊಟ್ಟಿದ್ದೀಯೆ” ಎಂದು ಹೊಗಳಿದ ಶ್ರೀನಿವಾಸ.

ಇದರಲ್ಲಿ ನನ್ನೊಬ್ಬಳದೇನೂ ಇಲ್ಲಾರೀ, ನಾನು ಬರೀ ಯೋಜನೆ ರೂಪಿಸಿದೆ ಅಷ್ಟೇ. ನಾಣಜ್ಜ, ಪಕ್ಕದ ಮನೆಯವರು, ಆಗಾಗ್ಗೆ ಅವರ ಮನೆಗೆ  ಬಂದು ಹೋಗುವ ಅವರೂರಿನ ಜನ, ಒಬ್ಬರೇ ಇಬ್ಬರೇ ಅವರುಗಳು ಕೊಡುವ ಸಲಹೆ ಸೂಚನೆ, ಮಾಡುವ ಪರಿಶ್ರಮ ಎಲ್ಲವೂ ಇದರಲ್ಲಿ ಸೇರಿವೆ. ಎಲ್ಲಿಯೂ ಗುಂಪಾಗದಂತೆ, ಹುಳಹುಪ್ಪಟೆ ಸೇರದಂತೆ ನಾಗದಾಳಿ ಗಿಡಗಳನ್ನು ಅಲ್ಲಲ್ಲಿ ಬೆಳೆಸಿದ್ದಾರೆ. ದಿನಕ್ಕೊಮ್ಮೆಯಾದರೂ ಇಲ್ಲಿ ಸುತ್ತು ಹಾಕಿದರೆ ಕಣ್ಣಿಗೆ ತಂಪು, ಮನಸ್ಸಿಗೆ ಹಿತ. ನೀವೂ ಅದನ್ನು ರೂಢಿ ಮಾಡಿಕೊಳ್ಳಿ. ಆಗ ನಾನು ಹೇಳಿದ ಮಾತಿನ ಅರ್ಥ ಗೊತ್ತಾಗುತ್ತದೆ” ಎಂದು ಸದ್ದಾಗದಂತೆ ಬಾಗಿಲನ್ನು ಮುಚ್ಚಿ ಒಳಬಂದರು.

ಹೊರಗಡೆ ಯಾರೋ ಬಂದಂತಾಯಿತೆಂದು ಲಗುಬಗೆಯಿಂದ ಬಾಗಿಲು ತೆರೆಯಲು ಹೋಗುವಷ್ಟರಲ್ಲಿ ಜೋಯಿಸರು ಮುಂಬಾಗಿಲನ್ನು ತೆರೆದಿದ್ದರು. ಬಂದವರನ್ನು “ ಓ ನೀವಾ ! ಬನ್ನಿ ಬನ್ನಿ, ಎನ್ನುತ್ತಾ ಸೀತೂ, ಶೀನಾ, ಭಾಗ್ಯಮ್ಮಾ ಬೇಗಬನ್ನಿ ಯಾರು ಬಂದಿದ್ದಾರೆ ನೋಡಿಬನ್ನಿ” ಎಂದು ಎಲ್ಲರನ್ನೂ ಕೂಗುತ್ತಾ ಬಂದವರನ್ನು ಸ್ವಾಗತಿಸಿದರು. ಅವರ ಅತ್ಯುತ್ಸಾಹಕ್ಕೆ ಕಾರಣರಾರು ಎಂದು ತಿಳಿಯಲು ಎಲ್ಲರೂ ಅಲ್ಲಿಗೆ ಬಂದರು. ಶ್ರೀನಿವಾಸನಂತೂ “ಗುರುಗಳೇ, ನೀವು ಇಷ್ಟು ಹೊತ್ತಿನಲ್ಲಿ ! ಈಗ ಸ್ವಲ್ಪ ಹೊತ್ತಿಗೆ ಮುಂಚೆ ನಿಮ್ಮ ಮನೆಯ ಮುಂದಿನಿಂದಲೇ ಬಂದೆ. ಬಾಗಿಲು ಮುಚ್ಚಿತ್ತು.” ಎಂದು ಹೇಳುತ್ತಾ ಬಗ್ಗಿ ಅವರ ಪಾದಗಳಿಗೆ ನಮಸ್ಕರಿಸಿ ಕೈಹಿಡಿದು ಕರೆದುಕೊಂಡು ಬಂದು ಅಲ್ಲಿ ಹಾಸಿದ್ದ ಜಮಖಾನೆಯ ಮೇಲೆ ಕೂಡಿಸಿ, ಜೋಕಾಲಿಯ ಮೇಲಿದ್ದ ಒರಗುದಿಂಬನ್ನು ಬೆನ್ನಿಗೆ ಆಸರೆಯಾಗಿರಿಸಿದ. ಅವನ ಕಾಳಜಿಯನ್ನು ನೋಡಿ ಗುರುಗಳಾದ ರಾಘವೇಂದ್ರರು “ವೆಂಕೂ ನಿನ್ನ ಮಗ ಏನೂ ಬದಲಾಗಿಲ್ಲ. ಅದೇ ಪ್ರೀತಿ, ವಿಶ್ವಾಸ, ಗೌರವವಿಟ್ಟುಕೊಂಡಿದ್ದಾನೆ. ಹಾ ! ಅಂದಹಾಗೆ ನಿಮ್ಮ ಸೊಸೆಯೆಲ್ಲಿ? ನಾನು ಆಕೆಯನ್ನು ನೋಡಲೆಂದೇ ಬಂದದ್ದು. ಮದುವೆ ಸಮಯದಲ್ಲಿ ನೋಡಿದ್ದು. ಹತ್ತು ವರ್ಷವಾಗಿರಬಹುದು. ಹೆಚ್ಚಾಗಿ ನಾನು ಹೊರಗಡೆ ಹೋಗುವುದನ್ನೇ ಬಿಟ್ಟಿದ್ದೇನೆ. ಸ್ವಲ್ಪ ಮುಂದಕ್ಕೆ ಬಾಮ್ಮಾ” ಎಂದು ಕರೆದರು.

ಅವರು ಹೇಳಿದ್ದನ್ನು ಕೇಳಿ ಸೀತಮ್ಮನವರು ಭಾಗ್ಯಳ ಕಡೆ ತಿರುಗಿ ಸನ್ನೆ ಮಾಡಿದರು. ಭಾಗ್ಯಳು ಮುಂದೆ ಬಂದು ಗುರುಗಳ ಕಾಲಿಗೆ ನಮಸ್ಕರಿಸಿ “ನಾನು ಭಾಗ್ಯ ಈ ಮನೆಯ ಸೊಸೆ” ಎಂದು ಹೇಳಿದಳು. ಜೋಯಿಸರು, ಸೀತಮ್ಮನವರೂ ಕೂಡಿ ನಮಸ್ಕಾರ ಮಾಡಿದರು.

“ಹಲೋ ನಾನು ಒಳಗೆ ಬರಬಹುದೇ?” ಎಂಬ ಧ್ವನಿ ಕೇಳಿ ತಿರುಗಿದ ಶ್ರೀನಿವಾಸ “ಓ ಸೋ ಸಾರಿ, ನಿಮ್ಮನ್ನು ಗಮನಿಸಲೇ ಇಲ್ಲ, ಬನ್ನಿ ಪ್ಲೀಸ್” ಎಂದು ಆಹ್ವಾನಿಸಿದ.

“ಅಯ್ಯೋ ಅದಕ್ಯಾಕೆ ಅಷ್ಟು ಸಂಕೋಚ ಪಡುತ್ತೀರಿ, ನಾನು ಅಪ್ಪನನ್ನು ಮನೆಯ ಮುಂದೆ ಇಳಿಸಿ ನಂತರ ಗಾಡಿಯನ್ನು ಪಕ್ಕದಲ್ಲಿ ನಿಲ್ಲಿಸಿ ಈಗಷ್ಟೇ ಬಂದೆ” ಎಂದರು.

“ ಲಕ್ಷ್ಮಣಾ ಬಂದ್ಯಾ, ಬ್ಯಾಗೂ ತಂದ್ಯಾ? ಕೊಡಿಲ್ಲಿ” ಎಂದು ಹೇಳಿ “ಬನ್ನಿ ಇಲ್ಲಿ ನನ್ನ ಮುಂದೆ ಕುಳಿತುಕೊಳ್ಳಿ. ನೀನೂ ಕುಳಿತುಕೋ” ಎಂದು ಮಗನಿಗೂ ಹೇಳಿದರು. ಹೆಚ್ಚು ಕಾಲಹರಣ ಮಾಡುವುದಿಲ್ಲ ವೆಂಕೂ, ನಿನಗೆ ದೇವಸ್ಥಾನದ ಕೆಲಸ, ಶೀನೂ ಭಾಗ್ಯಮ್ಮನಿಗೆ ಸಂಗೀತದ ಕೆಲಸವಿದೆ. ನನಗೆ ಗೊತ್ತು. ನೇರವಾಗಿ ವಿಷಯಕ್ಕೆ ಬರುತ್ತೇನೆ. ಸೀತಮ್ಮ ಒಂದು ತಟ್ಟೆ ಕೊಡಮ್ಮ” ಎಂದು ಕೇಳಿದರು.

ಏನು ಎತ್ತ ಎಂದು ತಿಳಿಯದ ಅವರು ಜೋಯಿಸರ ಕಡೆಗೆ ಮುಖ ಮಾಡಿದರು. ಅವರೂ ಕಣ್ಸನ್ನೆಯಲ್ಲೇ ತರಲು ಸೂಚಿಸಿದರು. ಅಷ್ಟರಲ್ಲಿ ನಾರಣಪ್ಪನಿಂದ ಒಂದು ತಟ್ಟೆ ಸೀತಮ್ಮನವರ ಕೈಸೇರಿತ್ತು. ಅದನ್ನು ತೆಗೆದುಕೊಂಡ ಗುರುಗಳು ಮಗನ ಕಡೆಯಿಂದ ಬ್ಯಾಗಿನಲ್ಲಿದ್ದ ವಸ್ತುಗಳನ್ನು ಒಂದೊಂದೇ ತೆಗೆದು ತಟ್ಟೆಯಲ್ಲಿ ಇಡಿಸಿದರು. ಅಡಿಕೆ ವೀಳ್ಯದೆಲೆ, ಅರಿಶಿನ ಕುಂಕುಮದ ಪೊಟ್ಟಣ, ಹೂ ಹಣ್ಣುಗಳು, ಅದರ ಮೇಲೊಂದು ಲಕೋಟೆ ಇಟ್ಟು “ಸೀತಮ್ಮ ತೊಗೋ ಇದನ್ನು ನಿನ್ನ ಸೊಸೆಯ ಕೈಗಿಡು. ವೆಂಕೂ, ಶೀನಿ ನೀವೂ ಆಶೀರ್ವದಿಸಿರಿ. ನಿಜವಾಗಲೂ ಇದು ಸಲ್ಲಬೇಕಾಗಿದ್ದು ಈ ತಾಯಿಗೆ. ಗಾಭರಿಯಾಗಬೇಡಿ, ಇದೇನೆಂದು ಹೇಳಲಿಲ್ಲ ಅಲ್ಲವೇ? ಮುದುಕ, ಮರೆವು ಮೊದಲು ಕಾರಣ ಹೇಳಿ ಕೊಡಬೇಕಾಗಿತ್ತು. ಇದು ಮೂರು ಪುಸ್ತಕಗಳ ಪ್ರಕಟಣೆ ಮಾಡಿದ ಪ್ರಕಾಶಕರು ಕಳುಹಿಸಿಕೊಟ್ಟಿರುವ ಗೌರವಧನ. ಒಂದಿಷ್ಟು ಪುಸ್ತಕಗಳನ್ನು ಪಡೆದುಕೊಂಡ ನೀವು ಮತ್ತೆ ಅದರ ಬಗ್ಗೆ ವಿಚಾರಿಸಲೇ ಇಲ್ಲವಂತೆ. ಪುಸ್ತಕಗಳು ಒಳ್ಳೆಯ ಹೆಸರು ಗಳಿಸಿವೆ, ಅಷ್ಟೇ ಅಲ್ಲ, ಪ್ರತಿಗಳು ಖಾಲಿಯಾಗಿ ಈಗ ಐದನೆಯ ಮುದ್ರಣಕ್ಕೆ ಬೇಡಿಕೆ ಬಂದಿದೆ. ನಾನೇ ಇದನ್ನು ಕೈಯಾರೆ ತಲುಪಿಸುತ್ತೇನೆ ಎಂದು ಬಂದೆ. ಮರುಮುದ್ರಣದ ಖರ್ಚುವೆಚ್ಚಗಳನ್ನು ಅವರೇ ಭರಿಸಿದ್ದಾರೆ.” ಎಂದರು.

ಅವರ ಮಾತುಗಳನ್ನು ಕೇಳಿ ಭಾಗ್ಯ ಗಾಭರಿಯಿಂದ “ಅವ್ವಯ್ಯಾ ! ಬೇಡಿ ಬೇಡಿ, ನನಗ್ಯಾಕೆ ಇದೆಲ್ಲ. ಮಾವಯ್ಯನವರಿಗೆ ಸಲ್ಲಬೇಕು. ನಾನೇನೂ ಇದನ್ನು ಸ್ವಂತ ರಚನೆ ಮಾಡಿಲ್ಲ. ಅವರು ನನಗೆ ಕೊಟ್ಟಿದ್ದನ್ನು ಪ್ರತಿಮಾಡಿ ಕೊಟ್ಟನಷ್ಟೇ.” ಎಂದಳು. “ಸರಿಯಮ್ಮ ಅವುಗಳನ್ನು ನಿಮ್ಮ ಮಾವಯ್ಯ ತನ್ನ ಮುತ್ತಾತನದೆಂದು ಹೇಳಿದ್ದ. ಅದು ನನಗೂ ಗೊತ್ತು. ಎಷ್ಟೋ ವರ್ಷಗಳಿಂದ ಪೆಠಾರಿಯಲ್ಲಿ ಇಟ್ಟಿದ್ದೂ ಗೊತ್ತು. ಪುಸ್ತಕ ರೂಪಕ್ಕೆ ಮಾಡಬೇಕು, ಮಾಡುತ್ತೇನೆ ಗುರುಗಳೇ ಎಂದು ಹೇಳುತ್ತಿದ್ದನಷ್ಟೇ. ಈಗ ಅದಕ್ಕೆ ಮೋಕ್ಷ ಕೊಟ್ಟವರು ಯಾರು? ಅಷ್ಟೊಂದು ಕಠಿಣವಾದ ಕೆಲಸ, ಹಾಳೆಗಳನ್ನು ಮುಟ್ಟಿದರೆ ಎಲ್ಲಿ ಹರಿಯುತ್ತವೋ ಎಂಬ ಜೀರ್ಣಾವಸ್ಥೆ ತಲುಪಿದ್ದವು. ಅದರ ಅವಸ್ಥೆಯನ್ನು ನಾನು ಕಣ್ಣಾರೆ ಕಂಡಿದ್ದೆ. ಅದರ ಮೂಲಕ್ಕೆ ಧಕ್ಕೆ ಬಾರದಂತೆ ಜಾಗ್ರತೆಯಾಗಿ ಸೂಕ್ಷ್ಮ ಅವಲೋಕನ ಮಾಡಿ ಹೊರಜಗತ್ತಿಗೆ ಪ್ರಕಟಪಡಿಸಿದ್ದೀಯೆ. ನಿನಗೆ ಒಳ್ಳಿತಾಗಲಿ. ಆಶೀರ್ವದಿಸಿ ಕೊಡಿಸುತ್ತಿದ್ದೇನೆ ಶುಭವಾಗಲಿ ಮರುಮಾತಾಡದೆ ಸ್ವೀಕರಿಸು.” ಎಂದರು ಗುರುಗಳು. ಅವಳ ಅಸಹಾಯಕ ನೋಟವನ್ನು ಗಮನಿಸಿ ಮನೆಯವರೆಲ್ಲ ತೆಗೆದುಕೊಳ್ಳುವಂತೆ ಸನ್ನೆ ಮಾಡಿದರು. ಸೀತಮ್ಮನವರು ಪ್ರೀತಿಯಿಂದ ಅದನ್ನು ಸೊಸೆಯ ಕೈಗಿತ್ತು ಆಶೀರ್ವಾದ ಮಾಡಿದರು. ಉಳಿದವರೂ ಶುಭ ಹಾರೈಸಿದರು.

ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=36077

ಬಿ.ಆರ್.ನಾಗರತ್ನ, ಮೈಸೂರು

7 Responses

  1. ನಯನ ಬಜಕೂಡ್ಲು says:

    ಬಹಳ ಸುಂದರ ಕಾದಂಬರಿ

  2. ಧನ್ಯವಾದಗಳು… ನಯನ ಮೇಡಂ.

  3. . ಶಂಕರಿ ಶರ್ಮ says:

    ಸುಂದರವಾದ ಪೂರಕ ಚಿತ್ರದೊಂದಿಗಿನ ಕಥಾಭಾಗ ಬಹಳ ಚೆನ್ನಾಗಿದೆ, ಧನ್ಯವಾದಗಳು ನಾಗರತ್ನ ಮೇಡಂ.

  4. ಧನ್ಯವಾದಗಳು ಶಂಕರಿ ಮೇಡಂ

  5. Padmini Hegade says:

    ಕಾದಂಬರಿ ಸುಂದರವಾಗಿ ಸಾಗುತ್ತಿದೆ,

  6. ಧನ್ಯವಾದಗಳು… ಪದ್ಮಿನಿ ಮೇಡಂ

  7. Padma Anand says:

    ಭಾಗ್ಯ ಸಂತೋಷದಿಂದ ಕೈಗೊಂಡ ಕಾರ್ಯಕ್ಕೆ ಸಿಕ್ಕ ಪ್ರತಿಫಲ ಸಮಂಜಸವಾಗಿಯೇ ಇದೆ. ಸುಲಲಿತವಾಗಿ ಓದಿಸಿಕೊಂಡು ಹೋಗುತ್ತಿರುವ ಕಾದಂಬರಿ ಅತ್ಯಂತ ಮುದ ನೀಡುತ್ತಿದೆ.

Leave a Reply to Padma Anand Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: