ಅವಿಸ್ಮರಣೀಯ ಅಮೆರಿಕ-ಎಳೆ 37

Share Button
Antelope Canyon-1

ಪ್ರಕೃತಿ ಚಿತ್ರಗಳ ನಡುವೆ…!

ಏನೂ ವಿಶೇಷವೆನಿಸದ, ಒಮ್ಮೆಗೆ ಒಂದಿಬ್ಬರು ಮಾತ್ರ ನುಗ್ಗಬಲ್ಲ ಆ ಗುಹಾದ್ವಾರದ ಸಮೀಪ, ನಾವು ಬಂದಿದ್ದ ವಾಹನದ ಚಾಲಕನೇ ನಮ್ಮ ಮೇಲ್ವಿಚಾರಕ, ಗೈಡ್ ಆಗಿ ನಿಂತು ನಮ್ಮನ್ನು ಕರೆದು ಕೆಲವು ಮಾರ್ಗಸೂಚಿಗಳನ್ನಿತ್ತು, ಸರಿಯಾಗಿ ಒಂದೂವರೆ ತಾಸಿನ ಬಳಿಕ ಅಲ್ಲೇ ಬಂದು ಸೇರಲು ಸೂಚಿಸಿ, ನಾವು ಎಂಟು ಮಂದಿಯನ್ನು ಒಂದು ಗುಂಪಾಗಿ ನಿಲ್ಲಿಸಿದನು. ಅದಾಗಲೇ ಬೇರೆ ವಾಹನಗಳಲ್ಲಿ ಬಂದಿದ್ದ ಪ್ರವಾಸಿಗರು ಆ ಗುಹೆಯೊಳಗೆ ನೆರೆದಿದ್ದರು. ಅಯಾಯ ತಂಡದವರನ್ನು ಸರದಿಯಂತೆ ಒಳಬಿಡುವುದರಿಂದ, ನಮ್ಮ ಸರದಿಗಾಗಿ ಸ್ವಲ್ಪ ಹೊತ್ತು ಕಾಯಬೇಕಾಯಿತು…ಹಾಗೆಯೇ, ನನ್ನ ಕುತೂಹಲವೂ ಹೆಚ್ಚುತ್ತಿತ್ತು!

ಒಳ ಹೊಕ್ಕಾಗ, ನಮ್ಮ ಇಕ್ಕೆಲಗಳಲ್ಲಿ, ಸುಮಾರು 15ರಿಂದ 20ಅಡಿಗಳಷ್ಟು ಎತ್ತರಕ್ಕೆ ವಿಚಿತ್ರ ರೀತಿಯ, ವಕ್ರವಾದ ಗೋಡೆಗಳು ಗೋಚರಿಸಿದವು. ಈ ಸುರಂಗದ ಮೇಲ್ಭಾಗದಲ್ಲಿ ಅಲ್ಲಲ್ಲಿ, ಸುಮಾರು 4ರಿಂದ 5 ಅಡಿಗಳಷ್ಟು ಅಗಲಕ್ಕೆ ಇರುವ ರಂಧ್ರಗಳ ಮೂಲಕ ಸೂರ್ಯನ ಬೆಳಕು ಗವಿಯೊಳಗೆ ಪ್ರವೇಶಿಸುತ್ತಿತ್ತು. ಇಲ್ಲೇ ಇರುವುದು ಗಮ್ಮತ್ತು! ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1ಗಂಟೆಯ ವರೆಗೆ ವಿವಿಧ ಕೋನಗಳಲ್ಲಿ ಬೀಳುವ ಬೆಳಕಿನ ಕಿರಣಗಳು, ಗೋಡೆಯ ವಕ್ರ ಮೈಮೇಲಿನ, ಅಲೆಯಾಕಾರದ ಆಕೃತಿಗಳ, ವಿವಿಧ ಬಣ್ಣಗಳ ಶಿಲಾಪದರಗಳ ಮೇಲೆ ಬಿದ್ದು ಪ್ರತಿಫಲಿಸಿದಾಗ ಬಣ್ಣದ ಲೋಕದ ಬಾಗಿಲು ತೆರೆಯುತ್ತದೆ…ಆ ದೃಶ್ಯ ವೈಭವವನ್ನು ನಾನು ಕಣ್ಣು ಬಾಯಿ ಬಿಟ್ಟು ನೋಡಿದ್ದೇ ನೋಡಿದ್ದು! (ತೆರೆದ ಕಣ್ಣು ಬಾಯಿಗಳನ್ನು ಬೇಗನೆ ಮುಚ್ಚಲೇಬೇಕಿತ್ತು…ಜನರ ಪಾದಾಘಾತದಿಂದ ನೆಲದಿಂದೆದ್ದ ಮರಳು ಮಿಶ್ರಿತ ಧೂಳು ಅವುಗಳೊಳಗೆ ಪ್ರವೇಶಿಸಿಲಾರಂಭಿಸಿತ್ತು!) ಈ ಊಹಾತೀತ ಕೃತಿಯನ್ನು ಅಕ್ಷರಗಳಲ್ಲಿ ಹಿಡಿದಿಡಲು ಸಾಧ್ಯವಾಗುವಂತಿದ್ದರೆ…!!? ಪ್ರತಿ ಇಂಚಿನಲ್ಲೂ ನೂರಾರು ರೀತಿಯ ಚಿತ್ರಗಳನ್ನು ಸೆರೆಹಿಡಿಯಬಹುದು. ಕಣ್ಣಿಗೆ ಕಾಣುವ ವರ್ಣದೃಶ್ಯಗಳು; ಛಾಯಾಚಿತ್ರಗಳಲ್ಲಿ ನೂರುಪಟ್ಟು ಹೆಚ್ಚು ಸುಂದರವಾಗಿ, ವಿವಿಧ ವರ್ಣವಿನ್ಯಾಸಗಳಲ್ಲಿ ಮೂಡಿಬರುವುದು ಇಲ್ಲಿಯ ವಿಶೇಷತೆ! …ಇದು ನಿಜಕ್ಕೂ ವರ್ಣನಾತೀತ!! ನಾವು ಒಂದು ಜಾಗದಲ್ಲಿ ನಿಂತು ಫೋಟೋ ಕ್ಲಿಕ್ಕಿಸಿದರೆ, ಅದೇ ಜಾಗದಲ್ಲಿ ನಮ್ಮ ಗೈಡ್ ತೆಗೆದ ಚಿತ್ರವು ಅತ್ಯದ್ಭುತ ಕಲಾಕೃತಿಯಾಗಿ ಮೂಡಿಬಂತು! ಸೂರ್ಯನ ಬೆಳಕು ಬೀಳುವ ಕಡೆ, ಧೂಳಿನಂತಹ ಮರಳನ್ನು ಚೆಲ್ಲಿದಾಗ, ಅದು ಅದ್ಭುತ ಜಲಪಾತದಂತೆ, ಇಲ್ಲಿ ಕಿರಣಪಾತವಾಗಿ ರೂಪುಗೊಳ್ಳುವ ಪರಿ…ಆಹಾ..! ಈ ಪ್ರಯೋಗಾತ್ಮಕ ದೃಶ್ಯವನ್ನು ನೋಡುತ್ತಾ, ಅದನ್ನು ಪುನ: ಪುನ: ನಾನೇ ಮಾಡಲು ಪ್ರಯತ್ನಿಸಿ, ಗೈಡ್ ಮಾಡಿದಷ್ಟು ಚಂದಕ್ಕೆ ಬಾರದಿದ್ದರೂ, ಅಲ್ಲಿ ಬಂದವರಿಗೆ ನಾನೇ ಅದನ್ನು ಮಾಡಿ ತೋರಿಸುತ್ತಾ ಹೆಮ್ಮೆಯಿಂದ ಬೀಗುತ್ತಾ ನಿಂತವಳಿಗೆ, ನಮ್ಮ ತಂಡ ಮುಂದಕ್ಕೆ ಹೋದುದೂ ತಿಳಿಯಲಿಲ್ಲ!

ಈ ಗವಿಯು ಅಂಕುಡೊಂಕಾಗಿ ಸಾಗುತ್ತಾ, ಮುಂದೆ ಸುಮಾರು 300ಅಡಿಗಳಷ್ಟು ದೂರದಲ್ಲಿ ಖಾಲಿ ಬೆಟ್ಟದ ಕಣಿವೆಯತ್ತ ಸಾಗುತ್ತದೆ. ಇದರೊಳಗಿನ ಗೋಡೆಗಳು  ಕೆಲವು ಕಡೆಗಳಲ್ಲಿ, ಸುಮಾರು 120ಅಡಿಗಳಷ್ಟು ಎತ್ತರವಿರುವುದನ್ನೂ ಕಾಣಬಹುದು. ಒಂದು ಕಡೆಯಲ್ಲಿ, ದೊಡ್ಡದಾದ ಮರದ ದಿಮ್ಮಿಯೊಂದು, ಬಾಗಿದ ಗೋಡೆಯ ಮಧ್ಯೆ ತೂಗಾಡುತ್ತಿದ್ದುದು ಕಂಡುಬಂತು. ಮಳೆಗಾಲದಲ್ಲಿ ನುಗ್ಗಿದ ನೀರಿನ ಜೊತೆಗೆ ಬಂದು ಇಲ್ಲಿ ಸಿಕ್ಕಿಹಾಕಿಕೊಂಡು, ತ್ರಿಶಂಕು ಸ್ವರ್ಗಸುಖ ಅನುಭವಿಸುತ್ತಿತ್ತು! ಇಲ್ಲಿಯ ಇನ್ನೊಂದು ಅಪಾಯದ ಬಗ್ಗೆಯೂ ಗೈಡ್ ಇತ್ತ  ಎಚ್ಚರಿಕೆಯ ಮಾತು ನಿಜಕ್ಕೂ ಭಯಪಡುವಂತಹುದಾಗಿದೆ. ಕೆಲವೊಮ್ಮೆ, ಲವಲೇಶವೂ ಮುನ್ಸೂಚನೆಯಿಲ್ಲದೆ, ದೂರದಲ್ಲೆಲ್ಲೋ  ಸುರಿದ ಮಳೆಯ ನೀರು, ಕ್ಷಣಮಾತ್ರದಲ್ಲಿ ಈ ಗವಿಯೊಳಗೆ ನುಗ್ಗಿ, ಒಳಗಿದ್ದವರಿಗೆ ಹೊರಹೋಗಲೂ ಸಮಯನೀಡದೆ,  ಮಾರಣಾಂತಿಕ ಪರಿಣಾಮವನ್ನುಂಟು ಮಾಡುತ್ತದೆಯಂತೆ! ಆಗ ಮಾತ್ರ ನಮ್ಮೆಲ್ಲರಿಗೂ ದೇವರು ನೆನಪಾದುದು ಮಾತ್ರ ನಿಜ! ನನಗಂತೂ, ತನ್ಮಯಳಾಗಿ ನೋಡುತ್ತಾ ಆನಂದಿಸುತ್ತಿದ್ದವಳಿಗೆ, ಈ ಕಹಿ ವಿಷಯವನ್ನು ಅರಗಿಸಿಕೊಳ್ಳಲು ಸ್ವಲ್ಪ ಕಷ್ಟವಾಯಿತು. ಮನದೊಳಗೆ ಕೊಂಚ ಭಯವೂ ಮನೆ ಮಾಡಿದುದರಿಂದ, ಆದಷ್ಟು ಬೇಗ ಹೊರಹೋದರೆ ಸಾಕೆನ್ನುವಂತಾಯಿತು. ಆದರೆ ಬುದ್ಧಿ ಕೇಳಬೇಕಲ್ಲಾ..? ಅಲ್ಲಿಯ ಸುಂದರ, ವರ್ಣಮಯ ಲೋಕದಿಂದ ಹೊರಬರಲು ಮನಸ್ಸೊಪ್ಪದು. 

Antelope Canyon-2

ಸುರಂಗದೊಳಗೆ ಕೆಲವು ಕಡೆಗಳಲ್ಲಿ ಒಬ್ಬರೇ ನುಸುಳಿಕೊಂಡು ಹೋಗುವಷ್ಟು ಜಾಗವಿದ್ದರೆ; ಇನ್ನು ಕೆಲವು ಕಡೆ, ಮೂರ್ನಾಲ್ಕು ಜನರು ಆರಾಮವಾಗಿ ಸುಳಿದಾಡಬಹುದು. ಈ ಸಮಯವು ಅಲ್ಲಿಯ ವೀಕ್ಷಣೆಗೆ ಅತ್ಯಂತ ಹೆಚ್ಚು ಸೂಕ್ತವಾಗಿದ್ದುದರಿಂದ, ದಟ್ಟ ಜನಸಂದಣಿಯ ನಡುವೆಯೇ ಓಡಾಡಬೇಕಾಯಿತು. ನಾನಂತೂ, ಸಿಕ್ಕಿದ್ದೇ ಲಾಭ ಎನ್ನುವಂತೆ, ಆ ಕಡೆಯಿಂದ ಈ ಕಡೆಗೆ  ಎರಡೆರಡು ಸಲ ಸುತ್ತಿ ಬಂದೆ! ಸುಮಾರು ಒಂದೂವರೆ ಗಂಟೆ ಸಮಯ ನಡೆದ ನಮ್ಮ ಈ ವೀಕ್ಷಣೆಯು ಜೀವನದಲ್ಲಿ ಮರೆಯಲಾಗದ ಅತ್ಯದ್ಭುತ ಕ್ಷಣಗಳಲ್ಲೊಂದು! 

ಈ ಕಣಿವೆಯು ಸಮುದ್ರಮಟ್ಟದಿಂದ ಸುಮಾರು 4000ಅಡಿಗಳಷ್ಟು ಎತರದಲ್ಲಿದ್ದು, ಬೇಸಿಗೆಯಲ್ಲಿ ಇಲ್ಲಿಯ ಉಷ್ಣತೆಯು ಊಹಿಸಲಾರದಷ್ಟು.. ಅಂದರೆ 111°c ನಷ್ಟು ಹೆಚ್ಚಿರುತ್ತದೆ. ಅದೇ, ಚಳಿಗಾಲದಲ್ಲಿ ತದ್ವಿರುದ್ಧವಾಗಿ  ಸುಮಾರು -10°c ನಷ್ಟು ಕಡಿಮೆ! ಈ ಹುಲ್ಲೆ ಕಣಿವೆಯು ನಾವೆಹೊ ಜನಾಂಗದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕೇಂದ್ರವೆಂದು ಪರಿಗಣಿಸಲಾಗಿದೆ. ಆದ್ದರಿಂದ ಸ್ಥಳೀಯರಿಗೆ ಇದರ ಬಗ್ಗೆ ಬಹಳ ಪೂಜ್ಯ ಭಾವನೆಯಿದೆ. ಅಲ್ಲದೆ ಇದು ಒಂದು ಪಾರಂಪರಿಕ  ಸ್ಮಾರಕವಾಗಿಯೂ ಪ್ರಸಿದ್ಧಿ ಪಡೆದಿದೆ. ಅಂತೂ ಮನಸ್ಸಿಲ್ಲದ ಮನಸ್ಸಿನಿಂದ ಹೊರಬಂದಾಗ, ನಾನೇ ನಮ್ಮ ತಂಡದಲ್ಲಿ ಕೊನೆಯವಳಾಗಿದ್ದು, ಉಳಿದವರು ನನಗಾಗಿ ಕಾಯುತ್ತಿದ್ದರು! ಹೌದು..‌.ಈ ಅದ್ಭುತ ಪ್ರಪಂಚದ ನಡುವೆ, ನನ್ನಲ್ಲಿ ನಾನೇ ಕಳೆದುಹೋಗಿದ್ದೆ..!!

ಹುಲ್ಲೆಗಳಿಲ್ಲದ ಹುಲ್ಲೆ ಕಣಿವೆಯಿಂದ ಹಿಂತಿರುಗಿದಾಗ ಮಧ್ಯಾಹ್ನದ ಬಿಸಿಲು ಚುರುಗುಟ್ಟುತ್ತಿತ್ತು… ಹೊಟ್ಟೆಯೂ ತಾಳ ಹಾಕುತ್ತಿತ್ತು. ನಾವು ಹೋಟೆಲಿನಿಂದ, ಮುಂದಿನ ಪ್ರಯಾಣಕ್ಕೆ ಸಜ್ಜಾಗಿಯೇ ಬಂದುದರಿಂದ, ಯಥಾಪ್ರಕಾರ, ಕೈಚೀಲದಲ್ಲಿದ್ದ ನನ್ನ ಪ್ರೀತಿಯ ಮೊಸರನ್ನ, ಪುಳಿಯೊಗರೆ, ಚಿಪ್ಸ್ ಗಳ ಪೊಟ್ಟಣಗಳು ಆ ಪಟ್ಟಣದ ಸೊಗಸಾದ ಪಾರ್ಕಿನಲ್ಲಿ ನಮ್ಮ ಸುತ್ತಲು ಹರಡಿ ಕುಳಿತಾಗ, ಅಳಿಯನ ಮುಖ ಹುಳ್ಳಗಾಗಬೇಕೇ?! ಅವನಿಗಂತೂ ಇವುಗಳನ್ನು, ಹೆಚ್ಚು ಕಡಿಮೆ, ದಿನಾ ತಿಂದೂ ತಿಂದೂ ಬಾಯಿ ಜಡ್ಡು ಕಟ್ಟಿತ್ತು ಎನಿಸುತ್ತದೆ.  ಎಲ್ಲೋ ಹೋಗಿ ಪಿಜ್ಜಾ ಕಟ್ಟಿಸಿಕೊಂಡು ಬಂದುದನ್ನು ಅವನೊಬ್ಬನೇ ತಿನ್ನಬೇಕಾಯ್ತೆನ್ನಿ! ಅಲ್ಲೇ ಪಕ್ಕದಲ್ಲಿದ್ದ ಕ್ರೈಸ್ತ ಸಮುದಾಯದವರ ಧಾರ್ಮಿಕ ಕೇಂದ್ರದಲ್ಲಿ ವಿಶ್ರಾಂತಿ ಕೊಠಡಿಯನ್ನು ಉಪಯೋಗಿಸಿ, ಉತ್ಸಾಹವನ್ನು ತುಂಬಿಕೊಂಡು, ಮಧ್ಯಾಹ್ನ ಎರಡು ಗಂಟೆ ಹೊತ್ತಿಗೆ ನಮ್ಮ  ಪ್ರಯಾಣ ಮುಂದುವರೆಯಿತು. 

ರಸ್ತೆಯ ಇಕ್ಕೆಲಗಳಲ್ಲಿ, ಮರುಭೂಮಿಯಂತೆ ಬರೀ ಬರಡು ಭೂಮಿಯಾಗಿದ್ದರೂ, ಅದರದೇ ಆದ ಸೊಗಸಾದ ನೋಟವು ಕಣ್ಣಿಗೆ ಮುದನೀಡುತ್ತಿದ್ದುದು ಸುಳ್ಳಲ್ಲ. ದೂರ ದೂರಕ್ಕೆ, ಅಲ್ಲಲ್ಲಿ ತಲೆ ಎತ್ತಿ ನಿಂತಿದ್ದ ವಿಚಿತ್ರಾಕಾರದ ಮೃದುಕಲ್ಲಿನ ದಿಬ್ಬಗಳನ್ನು ನೋಡಲು ಕೌತುಕವೆನಿಸುತ್ತಿತ್ತು. ಮಾರ್ಗಮಧ್ಯೆ, ಈ ಅರಿಜೋನ ರಾಜ್ಯದ ಇನ್ನೊಂದು ಬಹು ದೊಡ್ಡದಾದ ರಾಷ್ಟ್ರೀಯ ಉದ್ಯಾನವಾಗಿರುವ Monument Valleyಯನ್ನು ನೋಡಬೇಕೆಂದುಕೊಂಡು, ರಸ್ತೆ ಪಕ್ಕದಲ್ಲೇ ಇದ್ದ ಪ್ರವೇಶದ್ವಾರದ ಬಳಿ ವಿಚಾರಿಸಿದಾಗ, ಅಲ್ಲಿಂದ ಪುನ: ಒಂದು ತಾಸು ಬಸ್ಸಿನಲ್ಲಿ ಪಯಣಿಸಿದ ಬಳಿಕವೇ ಕಣಿವೆಯ ದರ್ಶನಭಾಗ್ಯ  ಲಭಿಸುವುದೆಂದು ತಿಳಿಯಿತು. ನಮ್ಮ ಮುಂದಿನ ಗುರಿ, ವಿಶೇಷವಾದ ಇನ್ನೊಂದು ಆಶ್ಚರ್ಯಕರವಾದ ಕಣಿವೆಯನ್ನು ನೋಡುವುದಾಗಿತ್ತು. ಅಲ್ಲದೆ, ಅಲ್ಲೇ ನಾವು ತಂಗುವ ವ್ಯವಸ್ಥೆಯೂ ಆಗಿತ್ತು. ರಾತ್ರಿಯಾಗುವ ಮುನ್ನ ಅಲ್ಲಿಗೆ ತಲಪಬೇಕಾದುದರಿಂದ ಇಲ್ಲಿಯ ವೀಕ್ಷಣೆಯನ್ನು ರದ್ದು ಪಡಿಸುವುದೇ ಒಳಿತೆನ್ನಿಸಿ, ನಮ್ಮ ವಾಹನವನ್ನು ಮುಂದೋಡಿಸಲಾಯಿತು. ಮಾರ್ಗಮಧ್ಯೆ ಸಿಕ್ಕಿದ ಪುಟ್ಟ ಹೋಟೆಲ್ ಒಂದರಲ್ಲಿ ದೊಡ್ಡದಾದ ಲೋಟ ತುಂಬಾ ಕಾಫಿಯನ್ನು ಖರೀದಿಸಿ, ಪಯಣಿಸುತ್ತಾ ಹೀರುವ ಅನುಭವವೇ ವಿಶೇಷದ್ದು. ಇಲ್ಲಿ ಒಂದು ವಿಷಯ ಹೇಳಲೇಬೇಕು. ದೂರ ಪ್ರಯಾಣದ ಸಮಯ, ರಸ್ತೆ ಪಕ್ಕ ಸಿಗುವ ಪಟ್ಟಣಗಳಲ್ಲಿ ಇಂತಹ Star Bucks ಎನ್ನುವ ಕಾಫಿ ಕೇಂದ್ರಗಳಿರುತ್ತವೆ. ಸ್ವಲ್ಪ ತುಟ್ಟಿಯಾದರೂ, ರುಚಿಕರವಾದ ಕಾಫಿ ಸಿಗುವುದರಿಂದ, ಪ್ರವಾಸಿಗರು ತಮ್ಮ ಆಯಾಸ ಪರಿಹರಿಸಿಕೊಳ್ಳಲು ಇದರೊಳಗೆ ನುಗ್ಗಿಯೇ  ಬಿಡುವರು. ಅರ್ಧಅಡಿ ಎತ್ತರದ, ದಪ್ಪ ಕಾಗದದ ಲೋಟದಲ್ಲಿ ಬಿಸಿ ಬಿಸಿ ಕಾಫಿಗೆ ಮುಚ್ಚಳ ಸಹಿತ ಹೀರುಗೊಳವೆ ಜೋಡಿಸಿ ಕೊಡುವರು. ಇದು ಪಯಣಿಸುತ್ತ ಬಳಸಲು ಬಹುಯೋಗ್ಯವಾಗಿದೆ. ನಾವು ಹೋಗುತ್ತಿದ್ದ ರಸ್ತೆಯು ನೂಲು ಹಿಡಿದಂತೆ ಅತ್ಯಂತ ನೇರವಾಗಿ, ಮುಂಭಾಗದಲ್ಲಿ ಚಾಚಿಕೊಂಡಿರುವ ರಸ್ತೆಯು, ದಿಗಂತದಂಚಿಗೆ ತಾಗುವಂತೆ ಗೋಚರಿಸುತ್ತಿತ್ತು! ಎಂತಹ ನಿರ್ಜನ ಪ್ರದೇಶದಲ್ಲೂ, ದಾರಿ ಸೂಚಕವು(GPS) ತನ್ನ ಕೆಲಸವನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸುತ್ತಿದ್ದುದರಿಂದ, ದಾರಿ ತಪ್ಪುವ ಪ್ರಮೇಯವೇ ಇರಲಿಲ್ಲ. ಆಯಾಸವೆಂಬುದು ಹತ್ತಿರಕ್ಕೆ ಸುಳಿಯಲು ಹೆದರಿತ್ತು…. ಆನಂದದಾಯಕವಾದ ನಮ್ಮ ಪ್ರಯಾಣವು ಇನ್ನೊಂದು ಅಮೋಘ, ಆಶ್ಚರ್ಯಕರ ಕಣಿವೆಯತ್ತ ಸಾಗಿತ್ತು…  

ಯಾವುದು ಆ ಕಣಿವೆ…?? ನೋಡೋಣ ಮುಂದಿನ ಎಳೆಯಲ್ಲಿ…ಆಗದೇ?

(ಮುಂದುವರಿಯುವುದು……)

 ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ:  http://surahonne.com/?p=36080

–ಶಂಕರಿ ಶರ್ಮ, ಪುತ್ತೂರು.

6 Responses

  1. ನಯನ ಬಜಕೂಡ್ಲು says:

    Nice

  2. ಅಮೆರಿಕ ಪ್ರವಾಸ… ಸುಂದರ.. ವರ್ಣನೆ…ಬಹಳ ಮುದತಂದಿತು…ಚಿತ್ರ ಗಳು…ಪೂರಕವಾಗಿ ಬಂದಿದೆ…ಧನ್ಯವಾದಗಳು ಮೇಡಂ.

  3. Padmini Hegade says:

    ಸುಂದರ ವರ್ಣನೆ

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: