ಕಾದಂಬರಿ: ನೆರಳು…ಕಿರಣ 36

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
ಮಾರನೆಯ ದಿನ ನಿಗದಿಪಡಿಸಿದಂತೆ ಮನೆಯವರೆಲ್ಲ ಕೇಶವಯ್ಯನವರ ಮನೆ ತಲುಪಿದರು. ಜೋಯಿಸರು, ಭಾಗ್ಯಳನ್ನು ಕಂಡು ಮಕ್ಕಳು ಓಡಿಬಂದು ತಮ್ಮ ಮುಂಜಿಕಾರ್ಯಕ್ರಮಕ್ಕೆ ಬರದೇ ಇದ್ದುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದರು. ವಿದುರಾಶ್ವತ್ಥ ಕ್ಷೇತ್ರಕ್ಕೆ ಮೊದಲೇ ಹೇಳಿಯಾಗಿತ್ತು. ಹೋಗಲಿಲ್ಲಾಂದರೆ ದೇವರು ಸಿಟ್ಟಾಗುತ್ತಾನಲ್ಲವಾ, ಅದಕ್ಕೇ ಹೋಗಿ ಬಂದೆವು. ಸಾರೀ..ಎಂದು ಅವರಿಬ್ಬರ ಕೈಹಿಡಿದು ಒಳನಡೆದಳು ಭಾಗ್ಯ. ಮಿಕ್ಕವರೂ ಅವರನ್ನು ಹಿಂಬಾಲಿಸಿದರು. ಪರಸ್ಪರ ಯೋಗಕ್ಷೇಮ, ಸಮಾರಂಭ, ಪೂಜೆ ಎಲ್ಲ ವಿಷಯಗಳ ಬಗ್ಗೆ ಮಾತುಕತೆಗಳಾದವು. ಅಷ್ಟರಲ್ಲಿ ಮಲಗಿದ್ದ ಕೇಶವಯ್ಯನವರ ತಾಯಿಗೆ ಎಚ್ಚರವಾಗಿ ತಾವಿದ್ದ ಕಡೆಯಿಂದಲೆ ಎಲ್ಲರನ್ನೂ ಕೂಗಿ ಕರೆದರು. ಅದನ್ನೇ ಕಾಯುತ್ತಿದ್ದರೇನೋ ಎಂಬಂತೆ ಅವರೆಲ್ಲ ರೂಮಿನೊಳಕ್ಕೆ ಹೋದರು. ಕೇಶವಯ್ಯ, ಭಾವನಾ ಅವರೆಲ್ಲರೂ ಕುಳಿತುಕೊಳ್ಳಲು ಜಮಖಾನೆ ಹಾಸಿದರು.

ಮಲಗಿದ ಕಡೆಯಿಂದಲೇ ಎಲ್ಲರನ್ನೂ ನೋಡಿದ ಗೋದಮ್ಮನವರು ಭಾಗ್ಯಳ ಕಡೆ ತಿರುಗಿ “ಒಂದೆರಡು ದಾಸರ ಪದಗಳನ್ನು ಹಾಡುತ್ತೀಯಾ ತಾಯಿ?..ಹಾಂ ಇದೇನಪ್ಪ ಮನೆಯಲ್ಲೇ ಮಗ ಸಂಗೀತದ ತರಗತಿ ನಡೆಸುತ್ತಾರೆ. ಅಥಹುದರಲ್ಲಿ ಈ ಮುದುಕಿ ನನ್ನನ್ನು ಕೆಳುತ್ತಿದ್ದಾಳೆಂದು ಅಂದುಕೋಬೇಡ. ಆದರೆ ನಿನ್ನ ಬಾಯಿಂದ ಕೇಳುವಾಸೆ” ಎಂದರು.

“ಯಾವುದನ್ನು ಹಾಡಲಿ ಹೇಳಿ. ನೀವು ಕೇಳುವುದು ಹೆಚ್ಚೋ ನಾನು ಹಾಡುವುದು ಹೆಚ್ಚೋ” ಎಂದಳು ಭಾಗ್ಯ. ಭಾವನಾ ಶೃತಿಪೆಟ್ಟಿಗೆಯನ್ನು ತಂದು ಅಕ್ಕನ ಪಕ್ಕದಲ್ಲಿ ಇರಿಸಿ “ಹಾಡೇ ಅಕ್ಕಾ, ನಾನೂ ನೀನು ಹಾಡುವುದನ್ನು ಕೇಳಿ ಬಹಳ ದಿವಸಗಳಾದವು.” ಎಂದಳು. “ನೀನೂ ಧ್ವನಿಗೂಡಿಸು” ಎಂದಳು ಭಾಗ್ಯ.

“ಊಹುಂ, ಬೇಡ ಬೇಡ ನೀನೊಬ್ಬಳೇ ಹಾಡು, ಆಕೆ ಹಾಡುವುದನ್ನು ಕೇಳುತ್ತಲೇ ಇರುತ್ತೇನೆ. ಅಂದಹಾಗೆ ‘ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ ಜೀವರಾಶಿಯನು ದಾಟಿ’ ಮತ್ತು ‘ದಾರಿ ಯಾವುದಯ್ಯಾ ವೈಕುಂಠಕೆ ದಾರಿ ತೋರಿಸಯ್ಯಾ’. ಕಾದುಕಾದು ಸಾಕಾಗಿದೆ. ಪಾಪ ನನ್ನಿಂದ ಮನೆಯವರಿಗೆಲ್ಲ ತೊಂದರೆ. ಮುಕ್ತಿ ಕೊಡಲು ಏಕೋ ಮೀನಾಮೇಷ ಎಣಿಸುತ್ತಿದ್ದಾನೆ ಆ ಶ್ರೀಹರಿ” ಎನ್ನುತ್ತಾ ಗದ್ಗದಿತರಾದರು.

ಕೂಡಲೇ ಸೀತಮ್ಮನವರು “ಭಾಗ್ಯಾ ಶುರುಮಾಡು” ಎಂದು ವಾತಾವರಣವನ್ನು ತಿಳಿಗೊಳಿಸಲು ಸೂಚಿಸಿದರು. ಅದರಂತೆ ಅಜ್ಜಿಯು ಅಪೇಕ್ಷೆ ಪಟ್ಟ ಎರಡು ದಾಸರ ಪದಗಳನ್ನು ಸುಶ್ರಾವ್ಯವಾಗಿ ಹಾಡಿದಳು. ಎಲ್ಲರ ಮನಸ್ಸುಗಳೂ ತುಂಬಿಬಂದವು. ಶ್ರೀನಿವಾಸನಂತೂ ಸಂಗೀತ ನಮ್ಮ ಮನೆತನದಲ್ಲಿ ಹೊಸದೇನಲ್ಲ. ಆದರೆ ಈ ನನ್ನ ಬಾಳಸಂಗಾತಿಯ ಹಾಡುಗಾರಿಕೆ ಅಬ್ಬಾ ! ಮನೆಯಲ್ಲಿ ನಮ್ಮದೇ ಕೆಲಸಗಳ ಗಡಿಬಿಡಿಯಲ್ಲಿ ಹೆಚ್ಚಾಗಿ ಗಮನಿಸಲಾಗಿಲ್ಲ. ಮೊದಲಿಗಿಂತಲೂ ಈಗ ತುಂಬ ಸುಧಾರಿಸಿದ್ದಾಳೆ. ಎಂದು ಮನದಲ್ಲೇ ಮೆಚ್ಚುಗೆ ಸೂಚಿಸಿದ.

ಗೋದಮ್ಮನಂತೂ ಭಾಗ್ಯಳನ್ನು ತಮ್ಮ ಸಮೀಪಕ್ಕೆ ಕರೆದು ತುಂಬು ಹೃದಯದಿಂದ ಆಶೀರ್ವದಿಸಿದರು. ನಂತರ ಮುಂಜಿ ಮಾಡಿಸಿಕೊಂಡ ಮಕ್ಕಳಿಗೆ ಹೊಸ ಬಟ್ಟೆಗಳನ್ನು, ಬೆಳ್ಳಿಯ ಲೋಟಗಳನ್ನು ಉಡುಗೊರೆಯಾಗಿ ಕೊಟ್ಟು ಆಶೀರ್ವದಿಸಿದರು ಜೋಯಿಸರ ಮನೆಯವರು. ಊಟ ಮುಗಿಸಿಯೇ ಬಂದಿದ್ದರಿಂದ ಬಹಳ ಒತ್ತಾಯ ಮಾಡಿದರೆಂದು ನಿಂಬೆ ಹಣ್ಣಿನ ಪಾನಕ ಕುಡಿದು ಅವರಿತ್ತ ತಾಂಬೂಲ ಸ್ವೀಕರಿಸಿ ಅಲ್ಲಿಂದ ಭಾಗ್ಯಳ ತಾಯಿಯ ಮನೆಗೆ ಹೊರಟರು.

ಮೊದಲೇ ಸುದ್ಧಿ ತಿಳಿದಿದ್ದ ಭಟ್ಟರು ತಮ್ಮ ಮಡದಿಯೊಂದಿಗೆ ಬಂದವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಅವರುಗಳ ಕೆಲಸಗಳ ಅರಿವಿದ್ದ ಅವರುಗಳು ಹೆಚ್ಚು ಕಾಲಹರಣ ಮಾಡದೆ ತಮ್ಮ ಜಮೀನಿನ ಸಂಗತಿ, ಅದು ಇತ್ಯರ್ಥವಾದ ಬಗ್ಗೆ ಹೇಳಿಕೊಂಡರು. ಸ್ವಲ್ಪ ಹೊತ್ತು ಯೋಗಕ್ಷೇಮ. ಅದೂ ಇದೂ ವಿಚಾರಗಳ ವಿನಿಮಯವಾಯಿತು. ಹೊರಟು ನಿಂತಾಗ ಅರಿಶಿನ ಕುಂಕುಮವಿಟ್ಟು ಹೂನೀಡಿ ಹಣ್ಣಿನ ಜೊತೆಗೆ ಭಾಗ್ಯಳಿಗೊಂದು ಲಕೋಟೆಯನ್ನು ಕೈಗಿತ್ತರು. “ತೊಗೋ ಮಗಳೇ ಇದು ನಿನ್ನ ಪಾಲು” ಎಂದರು. ಅದರೊಟ್ಟಿಗೆ ಒಂದು ಚೀಟಿಯನ್ನೂ ಅವಳ ಕೈಗಿತ್ತರು ಲಕ್ಷ್ಮಿ ಮತ್ತು ಭಟ್ಟರು.

“ಇದೇನಪ್ಪಾ ಹೀಗೆ ಧಿಢೀರನೆ ತೀರ್ಮಾನ. ನಾನೇನು ಪಾಲು ಕೇಳಿದ್ದೆನೇ? ನಿಮ್ಮ ಹತ್ತಿರವೇ ಇರಲಿ. ಈ ಚೀಟಿ ಏನು?” ಎಂದು ಕೇಳಿದಳು ಭಾಗ್ಯ.

“ತಾಮ್ರದ ಕಾಸು ತಾಯಿ ಮಕ್ಕಳನ್ನು ಕೆಡಿಸಿತು ಅಂತ ಗಾದೆಮಾತೇ ಇದೆ. ಭಾಗ್ಯಾ, ಇಂತಹದ್ದನ್ನೆಲ್ಲ ತಡಮಾಡಬಾರದು. ನಮ್ಮ ಜಮೀನಿನಿಂದ ಬಂದ ಪರಿಹಾರದ ಹಣವನ್ನು ಐದು ಬಾಗ ಮಾಡಿದ್ದೇವೆ. ಉಪನಯನದ ಹೊತ್ತಿನಲ್ಲಿ ನಾಲ್ಕೂ ಮಕ್ಕಳು ಸೇರುತ್ತೀರಿ. ಅಲ್ಲಿಯೇ ಮಾತನಾಡಿ ಕೊಡೋಣೆಂದುಕೊಂಡು ಸಿದ್ಧಪಡಿಸಿಕೊಂಡು ಇಟ್ಟಿದ್ದೆವು. ಚೀಟಿ ಇದರ ಪೂರ್ಣ ಲೆಕ್ಕಾಚಾರದ್ದು. ನೀವು ಪೂಜೆಗೆ ಹೋಗಿದ್ದರಿಂದ ಈಗ ಕೊಟ್ಟಿದ್ದೇವೆ. ಮುಂದೆ ಮಾತು ಬರಬಾರದ್ದು ನೋಡು ಅದಕ್ಕಾಗಿ ಪೂರ್ಣ ವಿವರಗಳನ್ನು ಬರೆಯಲಾಗಿದೆ.” ಎಂದರು ಲಕ್ಷ್ಮಿ. ಅದಕ್ಕೆ ಭಟ್ಟರೂ ತಲೆ ಅಲ್ಲಾಡಿಸಿದರು.

ಅದನ್ನೆಲ್ಲ ಜೋಯಿಸರು, ಅವರ ಹೆಂಡತಿ, ಮಗ ನೋಡಿದರೇ ವಿನಹ ಮಧ್ಯದಲ್ಲಿ ಯಾರೂ ಮಾತನಾಡಲಿಲ್ಲ. ಮತ್ತೊಮ್ಮೆ ನಿಧಾನವಾಗಿ ಬರುತ್ತೇವೆಂದು ಅವರುಗಳಿಂದ ಬೀಳ್ಕೊಂಡು ತಮ್ಮ ಮನೆ ತಲುಪಿದರು ಜೋಯಿಸರ ಕುಟುಂಬದವರು.

ಹೀಗೇ ಇನ್ನೊಂದೆರಡು ತಿಂಗಳುಗಳು ಕಳೆದವು. ಫೋನು ಮನೆಗೆ ಸೇರ್ಪಡೆಯಾಯಿತು. ಇವರ ಮನೆಗೆ ಬಂದಂತೆಯೇ ಕೇಶವಯ್ಯನವರ ಮನೆಗೂ ಬಂದಿತು. ಇದರಿಂದ ಭಟ್ಟರ ಮನೆಗೆ ಅನುಕೂಲವಾಯಿತು. ಅಷ್ಟರಲ್ಲಿ ಜೋಯಿಸರ ದೊಡ್ಡಪ್ಪನ ಮಗ ಭರತನ ಆಗಮನವಾಯಿತು. ಅವನೊಂದಿಗೆ ಹೊಸಸುದ್ಧಿಯೊಂದು ಬಂತು. ಅದೇನೆಂದರೆ ಊರಿನಲ್ಲಿರುವ ಹಿರಿಯಜ್ಜ ತಮ್ಮ ಕೊನೆಯ ದಿನಗಳನ್ನು ಕಾಶಿಪುಣ್ಯಕ್ಷೇತ್ರದಲ್ಲಿ ಕಳೆಯಬೇಕೆಂಬ ಅಪೇಕ್ಷೆ ವ್ಯಕ್ತ ಪಡಿಸಿದ್ದರಿಂದ ಅವರ ಮಗ ಅವರು ಅಲ್ಲಿ ತಂಗಲು ಬೇಕಾದ ಏರ್ಪಾಡುಗಳನ್ನು ಮಾಡಿದ್ದಾರೆ. ಅವರೊಟ್ಟಿಗೆ ಎಲ್ಲರೂ ಕಾಶಿಗೆ ಹೋಗಿ, ಅವರನ್ನು ಅಲ್ಲಿ ಬಿಟ್ಟು ನಾವೆಲ್ಲರೂ ಹಿಂತಿರುಗಿ ಬರೋಣ. ಮತ್ತೊಮ್ಮೆ ಇದೇ ರೀತಿ ಪ್ಲಾನ್‌ ಮಾಡಿಕೊಂಡು ರಾಮೇಶ್ವರಕ್ಕೆ ಹೋಗಿ ಬರುವ ಯೋಚನೆಯಿದೆ ಎಂದು ಹೇಳಿದನು.

“ಅದೇನೋ ಸರಿ, ಆದರೆ ಸಾವಿರಾರು ಕಿಲೋಮೀಟರ್ ಪ್ರಯಾಣ. ಹಿರಿಯರು ನೂರರ ಸಮೀಪ ಬಂದಿದ್ದಾರೆ. ಅವರಿಗೆ ದೈಹಿಕವಾದ ಖಾಯಿಲೆ ಕಸಾಲೆ ಯಾವುದೂ ಇಲ್ಲ. ಆದರೂ ಪ್ರಯಾಣದ ಆಯಾಸ, ದಾರಿಯಲ್ಲಿ ಸ್ನಾನ, ಪೂಜೆ ಇಲ್ಲದೆ ಇವರು ಏನನ್ನೂ ತಿನ್ನುವುದಿಲ್ಲ. ಅದಕ್ಕೆಲ್ಲಾ ಅನುಕೂಲಗಳೆಲ್ಲಿ. ಹೀಗಿರುವಾಗ ಕರೆದುಕೊಂಡು ಹೋಗುವುದು ಹೇಗೆ?” ಎಂದು ಕೇಳಿದರು ಜೋಯಿಸರು.

“ಓ ! ಅದನ್ನು ನಾನು ಹೇಳುವುದನ್ನೇ ಮರೆತಿದ್ದೆ. ಹಿರಿಯಜ್ಜನ ಮಗ ಒಂದು ಮಿನಿ ಬಸ್ಸನ್ನು ಗೊತ್ತು ಮಾಡಿದ್ದಾರಂತೆ. ಅದರಲ್ಲಿ ಅವರು ಮಲಗಲು ಅನುಕೂಲ ಇರುವಂತಹದ್ದನ್ನೇ ಹುಡುಕಿದ್ದಾನೆ. ಒಂದು ದಿನಕ್ಕೆ ಎಷ್ಟು ದೂರ ಹೋಗಲು ಸಾಧ್ಯವೋ ಅಷ್ಟು ಮಾತ್ರ ಪ್ರಯಾಣಿಸುವುದು. ಸಂಜೆ ಏಳುಗಂಟೆಯೊಳಗೆ ಛತ್ರ, ಮಠ, ಅಥವಾ ಪುರೋಹಿತರುಗಳ ಮನೆ ಇರುವಂತೆ ತಂಗುವುದು. ಮತ್ತೆ ಬೆಳಗ್ಗೆ ಎಲ್ಲವನ್ನೂ ಪೂರೈಸಿಕೊಂಡು ಪ್ರಯಾಣ ಮುಂದುವರೆಸಿಕೊಂಡು ಹೋಗುವುದು ಹೀಗೆ ಯೋಜನೆ ಹಾಕಿದ್ದಾರೆ. ಆಗಾಗ್ಗೆ ಆ ಸ್ಥಳಗಳಿಗೆ ಪೂಜಾಪಾಠಗಳಿಗೆ ಹೋಗುತ್ತಿರುವುದರಿಂದ ಎಲ್ಲೆಲ್ಲಿ ಏನೇನು ಸೌಲಭ್ಯಗಳಿವೆ ಎಂಬುದು ಅವರಿಗೆ ಬಾಯಿಪಾಠವಾಗಿದೆ. ಬಹಳಷ್ಟು ಸ್ಥಳೀಯರ ಪರಿಚಯವೂ ಇದೆ. ನಮ್ಮ ಜೊತೆಗೆ ಅಡುಗೆಯವರೂ ಬರುತ್ತಾರೆ. ಕಾಶಿಯಲ್ಲಿ ವಿಶ್ವನಾಥನ ದರ್ಶನ ಮಾಡಿ ಹಿಂದಿರುಗುವಾಗ ಹಿರಿಯಜ್ಜನನ್ನು ಅವರ ತಂಗುದಾಣದಲ್ಲಿ ಬಿಟ್ಟು ಹೊರಡುವುದು. ಹಿಂದಕ್ಕೆ ಪ್ರಯಾಣಿಸುವಾಗ  ದಾರಿಯಲ್ಲಿ ಸಿಕ್ಕುವ ಪುಣ್ಯಕ್ಷೇತ್ರಗಳನ್ನೆಲ್ಲಾ ನೋಡಿಕೊಂಡು ವಿರಾಮವಾಗಿ ಬರುವುದು. ಹೀಗೆಂದು ತೀರ್ಮಾನಿಸಿದ್ದಾರೆ. ನೀವಿಬ್ಬರೂ ಜೊತೆಗೆ ಹೋದರೆ ಚೆಂದ ಎಂದು ಹೇಳಿ ಒಪ್ಪಿಸಿ ಕಳುಹಿಸು ಎಂದು ಹೇಳಿದ್ದಾರೆ. ಅದಕ್ಕೇ ಬಂದೆ. ನೀವೂ ಬನ್ನಿ ಹಿರಿಯಜ್ಜನ ಜೊತೆಗೆ ಹೋದಹಾಗೂ ಆಗುತ್ತದೆ. ನೀವೂ ವಿಶ್ವನಾಥನ ದರ್ಶನ ಮಾಡಿದ ಹಾಗೂ ಆಗುತ್ತದೆ” ಎಂದನು.

“ಬರುವುದಕ್ಕೇನೋ ನಮಗೂ ಆಸೆ. ಆದರೆ ಮನೆಯ ಕಡೆ ಮಕ್ಕಳಿಬ್ಬರೇ, ಅಲ್ಲದೆ ಶೀನಿ ಅಲ್ಲಿ ಇಲ್ಲಿ ಪೂಜೆಗೇಂತ ಹೋದಾಗ ಸೊಸೆ ಭಾಗ್ಯಳೊಬ್ಬಳೇ ಆಗುತ್ತಾಳೆ” ಎಂದರು ಜೋಯಿಸರು.

“ಅಪ್ಪಾ ಒಂದೊಳ್ಳೆಯ ಸಂದರ್ಭ. ಹೋಗುತ್ತಿರುವವರೆಲ್ಲ ನಮ್ಮವರೇ. ಆತಂಕ ಪಡುವಂಥದ್ದೇನಿಲ್ಲ. ನೀವು ಹಿಂದಕ್ಕೆ ಬರುವವರೆಗೂ ನಾನು ಬೇರೆ ಊರುಗಳಿಗೆ ಪೂಜೆಗೆ ಹೋಗುವುದಿಲ್ಲ. ಅದಕ್ಕೆ ನಿಮ್ಮ ದೇವಸ್ಥಾನದ ಮೇಲ್ವಿಚಾರಕರನ್ನು ಒಪ್ಪಿಸಿ ಅಲ್ಲಿರುವ ಮತ್ತೊಬ್ಬ ಹಿರಿಯ ಅರ್ಚಕರಿಗೆಸಹಾಯ ಮಾಡಿಕೊಂಡಿರುತ್ತೇನೆ.  ಚಿಂತಿಸಬೇಡಿ. ಬೇಕಾದರೆ ಅತ್ತೆ ಮಾವನವರನ್ನು ಕೆಲವು ದಿನ ಇಲ್ಲಿಯೇ ಇರುವಂತೆ ಕೇಳುತ್ತೇನೆ. ಇಲ್ಲಿಂದಲೇ ಅವರ ವ್ಯವಹಾರವನ್ನು ನೋಡಿಕೊಳ್ಳಬಹುದು. ಹೇಗೂ ಅವರ ಬಲಗೈ ಭಂಟ ಬಸವನ ಸಾಥ್ ಅವರಿಗೆ ಇದ್ದೇ ಇರುತ್ತದೆ. ಈಗ ಫೋನ್ ಇರುವುದರಿಂದ ಅಲ್ಲಿ ಸಮಯ ದೊರಕಿದಾಗ ಮನೆಗೆ ಮಾತುಕತೆಯಾಡಬಹುದು.” ಎಂದು ಒತ್ತಾಯಿಸಿದ ಶ್ರೀನಿವಾಸ.

“ಹಾಗಾದರೆ ಸರಿ ಶೀನು ಭಾಗ್ಯ ಒಬ್ಬಳೇ ಆಗುತ್ತಾಳೆಂದು ಆತಂಕವಿತ್ತು. ಈಗ ನೀನು ಹೇಳಿದ ವ್ಯವಸ್ಥೆ ಸಮಂಜಸವಾಗಿದೆ. ಬೇಕಾದರೆ ನಾನೂ ಒಂದು ಮಾತು ಭಟ್ಟರಿಗೆ, ಲಕ್ಷ್ಮಮ್ಮನವರಿಗೆ  ಹೇಳುತ್ತೇನೆ. ಅವರು ನನ್ನ ಮಾತನ್ನು ತೆಗೆದುಹಾಕಲಾರರು. ನಡೆಯಿರಿ ಹೋಗಿದ್ದು ಬರೋಣ” ಎಂದರು ಸೀತಮ್ಮ.

“ಆಯಿತು ನಿಮ್ಮ ಗುಂಪಿನಲ್ಲಿ ನಮ್ಮಿಬ್ಬರನ್ನೂ ಸೇರಿಸಿಕೊಳ್ಳಿ. ಬೆಂಗಳೂರಿನಿಂದ ತಾನೇ ಹೊರಡುವುದು? ಖರ್ಚುವೆಚ್ಚ ಏನು ಕೊಡಬೇಕು ಹೇಳಿದರೆ ನೀನು ಊರಿಗೆ ಹೋಗುವಾಗಲೇ ಕೊಟ್ಟು ಬಿಡುತ್ತೇವೆ” ಎಂದರು ಜೋಯಿಸರು.

“ಸೀತಕ್ಕನ ಅಣ್ಣನ ಮಗ ಖರ್ಚುವೆಚ್ಚಗಳ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾನೆ. ಹೋಗಿ ಹಿಂದಿರುಗಿದನಂತರ ಎಲ್ಲವನ್ನೂ ಲೆಕ್ಕಾಚಾರ ಹಾಕಿ ಹೇಳುತ್ತಾರಂತೆ. ಈಗ ಮುಂದಾಗಿ ಯಾರೂ ಕೊಡಬೇಕಾದ ಪ್ರಮೇಯವಿಲ್ಲ. ಅವರವರ ಸ್ವಂತಕ್ಕೆ ಬೇಕಾದಷ್ಟು ದುಡ್ಡು ಇಟ್ಟುಕೊಂಡು ಬಂದರೆ ಸಾಕಂತೆ” ಎಂದು ಪಟಪಟನೆ ಪಾಠ ಒಪ್ಪಿಸಿದಂತೆ ಹೇಳಿದನು.

ಇದೆಲ್ಲವನ್ನೂ ಕೇಳಿದ ಸೀತಮ್ಮನವರಿಗೆ ತಮ್ಮ ಮದುವೆಯಾದಾಗಿನಿಂದ ಇಲ್ಲಿಯವರೆಗೆ ತನ್ನ ಬಳಗದವರಾಗಲೀ, ತನ್ನ ಗಂಡನ ಬಳಗದವರಾಗಲೀ ಪ್ರತ್ಯೇಕತೆ ಬೆಳೆಸಿಕೊಳ್ಳದೆ ಒಬ್ಬರ ಸಂಕಷ್ಟಕ್ಕೆ ಒಬ್ಬರು ನೆರವಾಗುತ್ತಾ ಪ್ರೀತಿ ವಿಶ್ವಾಸದಿಂದಿರುವುದನ್ನು ಕಂಡು ಹೃದಯ ತುಂಬಿ ಬಂತು. ಹಾಗೇ ಮನದಲ್ಲಿ ಏನೋ ಒಂದು ಅನುಮಾನದ ಎಳೆ ಬಂದು ಬಂದು ಹೋಗುತ್ತಿತ್ತು. ಭಾಗ್ಯಳ ತಿಂಗಳು ಹೊರಗಾಗುವ ಲೆಕ್ಕದಲ್ಲಿ ಏರುಪೇರಾದಂತೆ ಅನ್ನಿಸುತ್ತಿತ್ತು. ಕೇಳುವುದೋ ಬೇಡವೋ, ಹಿಂದೆಯೂ ಒಂದೆರಡು ಬಾರಿ ಸ್ವಲ್ಪ ದಿನ ಮುಂದಕ್ಕೆ ಹೋದದ್ದಿತ್ತು. ಹಾಗಾಗಿ ತುಂಬ ನೊಂದುಕೊಂಡಿದ್ದಳು. ಈ ಸಂಗತಿಯನ್ನು ಲಕ್ಷ್ಮಮ್ಮನವರಿಗೆ ತಿಳಿಸಬೇಕು. ನಾನು ಬರುವವರೆಗೆ ಕಣ್ರೆಪ್ಪೆಯಂತೆ ಜೋಪಾನಮಾಡಿರೆಂದು ಹೇಳಿಹೋಗಬೇಕು. ಈ ಸಾರಿಯಾದರೂ ನನ್ನ ನಿರೀಕ್ಷೆಯನ್ನು ಹುಸಿಮಾಡಬೇಡಪ್ಪ ಭಗವಂತ” ಎಂದು ಮನಸ್ಸಿನಲ್ಲೇ ಪ್ರಾರ್ಥಿಸಿದರು.

ನಂತರ ಸರಸರನೆ ಮುಂದಿನ ಏರ್ಪಾಡುಗಳನ್ನು ಮಾಡಿಕೊಂಡರು. ಕಾಕತಾಳೀಯವೆಂಬಂತೆ ದೇವಸ್ಥಾನದ ಇನ್ನೊಬ್ಬ ಅರ್ಚಕರ ಆರೋಗ್ಯದಲ್ಲಿ ಏರುಪೇರು ಕಂಡುಬಂದದ್ದರಿಂದ ಶ್ರೀನಿವಾಸನ ಕೋರಿಕೆಗೆ ದೇವಸ್ಥಾನದ ಆಡಳಿತ ಮಂಡಳಿಯವರು ಅಸ್ತು ಅನ್ನಬೇಕಾಯಿತು. ಅತ್ತ ಭಟ್ಟರ ಮನೆಯಕಡೆ ನಿಗಾವಹಿಸುವುದು ಮತ್ತು ಅವರ ನಿತ್ಯದ ಕಾರುಬಾರನ್ನು ರಾಮಣ್ಣನವರ ಮಗ ನೋಡಿಕೊಳ್ಳುತ್ತೇನೆ ಎಂದು ನೀಡಿದ ಆಶ್ವಾಸನೆಯಿಂದ ಲಕ್ಷ್ಮಿಯೂ ಭಟ್ಟರೊಡನೆ ಮುಂಚಿತವಾಗಿಯೇ ಮಗಳ ಮನೆಗೆ ಹಾಜರಾದರು. ನಾರಣಪ್ಪನವರು ಲಕ್ಮಮ್ಮ, ಭಾಗ್ಯಳ ನೆರವಿನಿಂದ ಒಂದಿಷ್ಟು ತಿಂಡಿತಿನಿಸುಗಳನ್ನು ಸಿದ್ಧಪಡಿಸಿದರು. ಪ್ರಯಾಣ ಹೊರಡುವ ಹಿಂದಿನ ದಿನವೇ ಹಿರಿಯಜ್ಜ ತಮ್ಮ ಸಿಬ್ಬಂದಿವರ್ಗದೊಡನೆ ಬಂದಿಳಿದರು. ಅವರ ಹಿರಿಯ ಮಗ, ಸೊಸೆ, ಸೀತಮ್ಮನ ಹಿರಿಯಣ್ಣ, ಅತ್ತಿಗೆ, ಮಗ, ಆವಶ್ಯಕ ಸರಂಜಾಮುಗಳ ಜೊತೆಗೆ ಒಂದಿಬ್ಬರು ಅಡುಗೆಯವರು, ಜೋಯಿಸರು, ಸೀತಮ್ಮ, ಇಬ್ಬರು ವಾಹನ ಚಾಲಕರು, ಗಾಡಿಯಲ್ಲಿ ಕೂಡಲು, ಮಲಗಿಕೊಳ್ಳಲು ಅನುಕೂಲವಾಗುವಂತಹ ವ್ಯವಸ್ಥಿತ ವಾಹನ ಸಿದ್ಧವಾದವು. ಇವೆಲ್ಲ ವ್ಯವಸ್ಥೆಯನ್ನು ನೋಡಿ ಶ್ರೀನಿವಾಸನಿಗೆ ಸಂತೋಷವಾಯಿತು.

ಎಲ್ಲವೂ ತಾವಂದುಕೊಂಡಂತೆ  ನಡೆದುದರಿಂದ ಸೀತಮ್ಮನವರು ನಿಶ್ಚಿಂತೆಯಿಂದ ಪ್ರವಾಸ ಹೊರಡಲು ಅಣಿಯಾದರು. ಬೀಗರಾದ ಲಕ್ಷ್ಮಮ್ಮನನ್ನು ಒತ್ತಟ್ಟಿಗೆ ಕರೆದು ತಮ್ಮ ಮನದಲ್ಲಿನ ಶಂಕೆಯನ್ನು ತಿಳಿಸಿ ಹಾಗೇನಾದರೂ ಇದ್ದಲ್ಲಿ ಜೋಪಾನವಾಗಿ ನೋಡಿಕೊಳ್ಳುವ ಬಗ್ಗೆ ಹೇಳುವುದನ್ನು ಮರೆಯಲಿಲ್ಲ.

PC : Internet

ಸೀತಮ್ಮನ ಕಳಕಳಿಯ ಹಿಂದೆ ಇದ್ದ ವಾತ್ಸಲ್ಯ, ಅಕ್ಕರೆ ಕಂಡು ಲಕ್ಷ್ಮಮ್ಮ ತನ್ನ ಮಗಳ ಅದೃಷ್ಟಕ್ಕೆ ಬೀಗುತ್ತಾ “ನೀವೇನೂ ಯೋಚಿಸಬೇಡಿ. ನಿಮಗೆ ಸೊಸೆಯಾದರೆ ನನಗೆ ಮಗಳಲ್ಲವೇ, ಖಂಡಿತ ಜೋಪಾನವಾಗಿ ನೋಡಿಕೊಳ್ಳುವ ಭಾರ ನನಗೆ ಬಿಡಿ. ನಿಶ್ಚಿಂತೆಯಾಗಿ ಹೋಗಿಬನ್ನಿ. ಒಂದುವೇಳೆ ನಿಮ್ಮ ಊಹೆ ನಿಜವಾದರೆ ಅದಕ್ಕಿಂತ ಸಂತೋಷ ಬೇರೇನಿದೆ. ಫೋನಿರುವುದರಿಂದ ಆಗಿಂದಾಗ್ಗೆ ಯೋಗಕ್ಷೇಮ, ಸಮಾಚಾರಗಳನ್ನು ತಿಳಿಸುತ್ತಿರಿ.” ಎಂದು ಹೇಳಿದರು ಲಕ್ಷ್ಮಮ್ಮ.

ಅತ್ತೆ ಮಾವನವರನ್ನು ತೀರ್ಥಯಾತ್ರೆಗೆ ಕಳುಹಿಸಿಕೊಟ್ಟ ಭಾಗ್ಯಳಿಗೆ ಮನೆ ಪಿಚ್ಚೆನ್ನಿಸಿದರೂ ತಮ್ಮೊಡನೆ ಹೆತ್ತವರಿದ್ದುದರಿಂದ ಮನೆ ಖಾಲಿಯೆಂದೆನಿಸಲಿಲ್ಲ. ಅವರೊಡನೆ ಮಾತುಕತೆ, ನಾರಣಪ್ಪನವರಿಗೆ ಅತ್ತೆಯವರ ನಿರ್ದೇಶನದಂತೆ ಪ್ರತಿದಿನ ಅಡುಗೆಗೆ ಸಾಮಗ್ರಿಗಳನ್ನು ಒದಗಿಸುವುದು, ಪಾಠಪ್ರವಚನ, ಕೈತೋಟದ ಕೆಲಸ, ಹೀಗೇ ತೊಡಗಿಸಿಕೊಂಡದ್ದರಿಂದ ದಿನಗಳು ಹೋದದ್ದೇ ಅರಿವಾಗಲಿಲ್ಲ. ಶ್ರೀನಿವಾಸ ತಾನೊಪ್ಪಿಕೊಂಡಿದ್ದ ದೇವಸ್ಥಾನದ ಪೂಜಾಪಾಠ, ಜಮೀನಿನ ಕೆಲಸಗಳ ಮೇಲ್ವಿಚಾರಣೆ, ತನ್ನ ಸಂಗೀತದ ಅಭ್ಯಾಸ ನಡೆಸಿಕೊಂಡು ಹೋಗುತ್ತಿದ್ದನು. ಇತ್ತ ಯಾತ್ರೆಗೆ ಹೋಗಿದ್ದವರಿಂದ ಪ್ರತಿದಿನ ಸುದ್ಧಿ ಸಮಾಚಾರಗಳು ತಪ್ಪದೇ ಬರುತ್ತಿದ್ದವು. ಇದರಿಂದ ಎಲ್ಲರೂ ನೆಮ್ಮದಿಯಿಂದಿದ್ದರು.

ಮಗಳ ಮನೆಗೆ ಬಂದಿದ್ದ ಭಟ್ಟರಿಗೆ ಪ್ರಾರಂಭದಲ್ಲಿ ಒಂದೆರಡು ದಿನಗಳು ಮುಜುಗರವೆನಿಸಿದರೂ ದಿನಗಳೆದಂತೆ ಪರಿಸ್ಥಿತಿಗೆ ಹೊಂದಿಕೆಯಾದರು. ಆದರೆ ಲಕ್ಷ್ಮಮ್ಮನ ಮನಸ್ಸಿನಲ್ಲಿ ಬೀಗಿತ್ತಿ ಬಿತ್ತಿ ಹೋಗಿದ್ದ ದೂರದ ನಿರೀಕ್ಷೆ ಹುಸಿಯಾದದ್ದು ಕಂಡು ಮಮ್ಮಲ ಮರುಗಿದರು. ನನ್ನ ಮಗಳು ಎಲ್ಲವನ್ನೂ ಪಡೆದು ಈ ದೃಷ್ಟಿಯಲ್ಲಿ ದುರದೃಷ್ಠವಂತೆ ಆದಳಲ್ಲಾ, ಪೂಜೆ ಪುನಸ್ಕಾರಗಳೆಲ್ಲವೂ ಆಯಿತು. ಇಬ್ಬರೂ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡರೆ ಉತ್ತಮ. ಹಾಗೆ ಹೇಳುವವರಾರು. ಯಾವುದಕ್ಕೂ ಮತ್ತೊಬ್ಬರ ಸಂಸಾರದ ವಿಷಯದಲ್ಲಿ ತಲೆಹಾಕಬಾರದು. ಇದರಿಂದ ತಮ್ಮ ಮಗಳಿಗೇ ತೊಂದರೆಯಾಗಬಹುದು. ದೈವೇಚ್ಛೆ ಏನಿದೆಯೋ ಅದರಂತೆ ಆಗಲಿ ಎಂಬ ಕಟ್ಟಪ್ಪಣೆ ಭಟ್ಟರಿಂದ ಬಂತು. ಇದರ ಪರಿಣಾಮ ಏನಾಗುತ್ತೋ ನೀನೇ ಬಲ್ಲೆ ಭಗವಂತಾ ಎಂದುಕೊಂಡಳು ಲಕ್ಷ್ಮಿ.

ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=36105

ಬಿ.ಆರ್.ನಾಗರತ್ನ, ಮೈಸೂರು

5 Responses

  1. ನಯನ ಬಜಕೂಡ್ಲು says:

    ಎಂದಿನಂತೆ ಸುಂದರ ಕಥೆ

  2. ಶಂಕರಿ ಶರ್ಮ says:

    ಚಂದದ ನಿರೂಪಣೆಯೊಂದಿಗೆ ಹರಿದು ಬರುವ ಧಾರಾವಾಹಿಯು ಬಹಳ ಆತ್ಮೀಯವೆನಿಸುತ್ತದೆ. ಭಾಗ್ಯಳಿಂದ ಸಿಹಿ ಸುದ್ದಿ ಸಿಗುವುದೋ ನೋಡೋಣ… ಮುಂದಿನ ಕಂತಲ್ಲಿ.

  3. ಧನ್ಯವಾದಗಳು.. ನಯನ ಮೇಡಂ.. ಹಾಗೂ ಶಂಕರಿ ಮೇಡಂ

  4. Padmini Hegde says:

    ಚಂದಾದ ನಿರೂಪಣೆ

  5. ಧನ್ಯವಾದಗಳು… ಪದ್ಮಿನಿ ಮೇಡಂ

Leave a Reply to ನಾಗರತ್ನ ಬಿ. ಆರ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: