ಕಾಣದಂತೆ ಮಾಯವಾದನೋ: ಅಮರನಾಥ ಯಾತ್ರೆ,ಹೆಜ್ಜೆ 3

Share Button

ಹಿಂದಿನ ಸಂಚಿಕೆಯಿಂದ ಮುಂದುವರಿದುದು…..
ಜುಲೈ 24 ರಂದು ಬೆಳಗಿನ ಜಾವ ಐದು ಗಂಟೆಗೇ ಹೆಲಿಕಾಪ್ಟರ್ ಬೋರ್ಡಿಂಗ್ ಪಾಸ್ ಪಡೆಯಲು ಕ್ಯೂ ನಿಲ್ಲಬೇಕಾಯಿತು. ನಮ್ಮ ನಮ್ಮ ಯಾತ್ರಾ ಪರ್ಮಿಟ್‌ಗಳನ್ನು ರಿಜಿಸ್ಟರ್ ಮಾಡಿಕೊಂಡು, ನಮ್ಮ ತೂಕ ನೋಡಿ, ನಂತರ ಬೋರ್ಡಿಂಗ್ ಪಾಸ್ ನೀಡಿದರು. ಹೆಲಿಕಾಪ್ಟರ್‌ನಲ್ಲಿ ಪಯಣಿಸಲು, ನಮ್ಮ ಸರದಿಗಾಗಿ ಕಾಯುತ್ತಾ ಕುಳಿತೆವು. ಅಲ್ಲಿದ್ದ ಲಂಗರ್‌ಗಳಲ್ಲಿ, ಯಾತ್ರಿಗಳಿಗಾಗಿ ಉಚಿತವಾಗಿ ಟೀ, ಬಿಸ್ಕತ್ತು ಹಾಗೂ ಉಪಹಾರದ ವ್ಯವಸ್ಥೆಯನ್ನೂ ಮಾಡಿದ್ದರು. ಬೆಳಿಗ್ಗೆ ಆರರಿಂದ ಹೆಲಿಕಾಪ್ಟರ್‌ಗಳ ಹಾರಾಟ ಜೋರಾಗಿಯೇ ನಡೆದಿತ್ತು. ಇದ್ದಕ್ಕಿದ್ದಂತೆ ಬೆಟ್ಟದ ತಪ್ಪಲಿನಿಂದ ಮೇಲೇರಿ ಬಂದ ಮೋಡಗಳು ಹೆಲಿಕಾಪ್ಟರ್ ಹಾರಾಟಕ್ಕೆ ಅಡ್ಡಿಯನ್ನುಂಟು ಮಾಡಿದ್ದರಿಂದ, ಹೆಲಿಕಾಪ್ಟರ್ ಹಾರಾಟವನ್ನು ಸ್ಥಗಿತಗೊಳಿಸಿದರು. ಎಲ್ಲರೂ ಕಾತರದಿಂದ ಕಾಯುತ್ತಿದ್ದರು, ಕೆಲವರು ಭಜನೆ ಮಾಡಲು ಆರಂಭಿಸಿದರೆ, ಮತ್ತೆ ಕೆಲವರು ಗೂಗಲ್ ಮಹಾಶಯನ ಬಳಿ ಹವಾಮಾನದ ಬಗ್ಗೆ ವಿಚಾರಿಸುತ್ತಿದ್ದರು. ಅಂತೂ ಇಂತೂ ಹತ್ತು ಗಂಟೆಯ ವೇಳೆಗೆ ಮೋಡ ಕರಗಿತ್ತು, ಹೆಲಿಕಾಪ್ಟರ್ ಹಾರಾಟ ಪುನಃ ಆರಂಭವಾಗಿತ್ತು. ನಮ್ಮ ಸರದಿ ಬಂದಾಗ ಹನ್ನೊಂದು ಗಂಟೆಯಾಗಿತ್ತು. ನಮ್ಮ ಉತ್ಸಾಹಕ್ಕೆ ಎಲ್ಲೆಯೇ ಇರಲಿಲ್ಲ. ಎತ್ತರವಾದ ಗಿರಿ ಶಿಖರಗಳ ಮಧ್ಯೆ ತೇಲುತ್ತಾ ನಡೆದಿತ್ತು ನಮ್ಮನ್ನು ಹೊತ್ತ ಗ್ಲೋಬಲ್ ಹೆಸರಿನ ಪುಷ್ಪಕ ವಿಮಾನ. ಕೇವಲ ಏಳು ನಿಮಿಷದಲ್ಲಿ, ನಾವು ಪಂಚತಾರಿಣಿಗೆ ಬಂದು ತಲುಪಿದೆವು. ಇಂತಹ ದುರ್ಗಮ ಪ್ರದೇಶಕ್ಕೆ, ಪರಶಿವನು ತನ್ನ ಮಡದಿ ಪಾರ್ವತಿಯ ಜೊತೆ ನಂದಿಯ ಮೇಲೆ ಕುಳಿತು, ಬಂದದ್ದಾರೂ ಹೇಗೆ, ಎಂಬ ಆಲೋಚನೆ ಮನದಲ್ಲಿ ಮಿಂಚಿ ಮರೆಯಾಯಿತು. ಅಲ್ಲಿಂದ ಆರು ಕಿ.ಮೀ. ದೂರದಲ್ಲಿರುವ ಅಮರನಾಥ ಗುಹೆಗೆ ಕೆಲವರು ಕಾಲ್ನಡಿಗೆಯಲ್ಲೂ, ಮತ್ತೆ ಕೆಲವರು ಕುದುರೆಗಳ ಮೇಲೆಯೂ, ಇನ್ನೂ ಕೆಲವರು ಪಾಲ್ಕಿಗಳ ಮೇಲೆಯೂ ತಲುಪುವರು. ನನಗೋ ಕಾಲ್ನಡಿಗೆಯಲ್ಲಿ ಅಮರನಾಥನ ದರ್ಶನ ಮಾಡುವ ಆಸೆ, ಆಸೆಗಳು ನೂರೊಂದು, ಆದರೆ ಇರಬೇಕಲ್ಲ ಆಸೆಗಳನ್ನು ಪೂರೈಸಿಕೊಳ್ಳುವ ಮಾರ್ಗ. ಬೆಟ್ಟಗಳನ್ನು ಏರುವ ಕಡಿದಾದ ರಸ್ತೆ,, ಕುದುರೆ ಹಾಗೂ ಡೋಲಿಗಳ ಓಡಾಟದಿಂದ ಏಳುತ್ತಿದ್ದ ಧೂಳು, ಗಾಳಿಯಲ್ಲಿ ಆಮ್ಲಜನಕದ ಕೊರತೆ ಇದ್ದುದರಿಂದ ನಾವು ಪಾಲ್ಕಿಗಳಲ್ಲಿ ಹೊರಟೆವು. ನನಗೋ ರಾಣಿಯ ಹಾಗೆ ಪಾಲ್ಕಿಯಲ್ಲಿ ಕುಳಿತು ಸಾಗುವ ಕನಸು. ಆದರಿಲ್ಲಿ ಹೆಜ್ಜೆ ಹೆಜ್ಜೆಗೂ ಮೂಡುವ ಆತಂಕ, ಭಯ, ಕಾರಣ ಪಾಲ್ಕಿ ಹೊತ್ತು ಕಿರಿದಾದ ರಸ್ತೆಗಳಲ್ಲಿ ಓಡುತ್ತಿದ್ದ ನಾಲ್ಕು ಜನ, ಒಬ್ಬನ ಕಾಲು ಜಾರಿದರೂ, ಪ್ರಪಾತಕ್ಕೆ ಬೀಳುವುದು ನಿಶ್ಚಿತ. ಮತ್ತೆ ಅಮರನಾಥನ ಮೊರೆ ಹೊಕ್ಕೆ. ಎಲ್ಲವನ್ನೂ ಮರೆತು ಧ್ಯಾನಮಗ್ನನಾಗಿ ಕುಳಿತ ಶಿವನಿಗೆ ನಮ್ಮ ಪ್ರಾರ್ಥನೆ ಮುಟ್ಟುವುದಾದರೂ ಹೇಗೆ? ಇಲ್ಲವಾದರೆ ತಾಂಡವ ನೃತ್ಯ ಮಾಡುತ್ತಾ ಲೋಕವನ್ನೇ ಅಲ್ಲೋಲ ಕಲ್ಲೋಲ ಮಾಡುವ ಶಿವನು ನಮ್ಮ ನೆರವಿಗೆ ಧಾವಿಸಿ ಬರುವುದೆಂತು?

ನಾವು ಅಮರನಾಥ ಗುಹೆಯನ್ನು ತಲುಪಿದಾಗ ಮಧ್ಯಾನ್ಹ ಒಂದು ಗಂಟೆಯಾಗಿತ್ತು. ಪಾಲ್ಕಿಯಿಂದ ಕೆಳಗಿಳಿದು ನಾಲ್ಕು ಹೆಜ್ಜೆ ನಡೆಯುವುದರಲ್ಲಿ ಸುಸ್ತು. ಪಾಲ್ಕಿಯನ್ನು ಹೊತ್ತಿದ್ದವನೊಬ್ಬ, ನನ್ನ ಕೈ ಹಿಡಿದು ನಿಧಾನವಾಗಿ ಮೆಟ್ಟಿಲುಗಳನ್ನು ಹತ್ತಿಸುತ್ತಿದ್ದ. ಹೆತ್ತ ಮಗನಿಗಿಂತ ಹೆಚ್ಚು ಜೋಪಾನ ಮಾಡುತ್ತಿದ್ದವನನ್ನು ಕಂಡು ಬೆರಗಾಯಿತು. ಇವನ್ಯಾರು, ನಾನ್ಯಾರು – ನನ್ನ ಕಂಡು ಯಾಕಾಗಿ ಮರುಗುವನೋ? ಇವನಿಗೋ ಹೊಟ್ಟೆಪಾಡು, ನನಗೋ ಅಮರನಾಥನ ದರ್ಶನ ಮಾಡುವ ಅಮೃತಘಳಿಗೆ. ಹೆಜ್ಜೆ ಹೆಜ್ಜೆಗೂ ಸುಧಾರಿಸಿಕೊಳ್ಳುತ್ತಾ ದೇಗುಲದ ಬಳಿ ಸಾಗಿದೆ. ಪರ್ವತಗಳ ಮಧ್ಯೆ ನೆಲೆಯಾಗಿರುವ ಅಮರನಾಥನ ಹಿಮಲಿಂಗ ಮಾಯವಾಗಿತ್ತು. ಶಿವನ ಮುಂದೆ ನೆಡಲಾಗಿದ್ದ ಹತ್ತು ಅಡಿ ಎತ್ತರವಾಗಿದ್ದ ತ್ರಿಶೂಲ ನಮ್ಮನ್ನು ಸ್ವಾಗತಿಸಿತ್ತು. ಮುಗಿಲೆತ್ತರವಾದ ಗಿರಿ ಶಿಖರಗಳ ಮಧ್ಯೆ ಇದ್ದ ಗುಹಾ ದೇಗುಲವನ್ನು ಪುಷ್ಪಗುಚ್ಛಗಳಿಂದ ಸುಂದರವಾಗಿ ಅಲಂಕರಿಸಿದ್ದರು. ಗುಹೆಯೊಳಗೆಲ್ಲಾ ನೀರು ಜಿನುಗುತ್ತಿತ್ತು. ಹದಿನೈದರಿಂದ ಹದಿಮೂರು ಅಡಿ ಎತ್ತರವಾಗಿ ರೂಪುಗೊಂಡ ಹಿಮಲಿಂಗ, ಹವಾಮಾನ ವೈಪರೀತ್ಯದಿಂದ ಕರಗಿ, ಈಗ ಕೇವಲ ಒಂದು ಅಡಿಯಷ್ಟಾಗಿತ್ತು. ಗುಹೆಯ ಎಡಬದಿಯಲ್ಲಿದ್ದ ಚೌಕಾಕಾರದ ಹಿಮದ ಹಾಸನ್ನು ಪಾರ್ವತಿಯೆಂದು ಪೂಜಿಸುತ್ತಿದ್ದರು. ಭಕ್ತರು ಭಾವಪರವಶರಾಗಿ,’ಬೋಲೋ ಅಮರನಾಥ್ ಕೀ ಜೈ‘ ಎಂದು ಉದ್ಗರಿಸುತ್ತಿದ್ದರು. ಯಾತ್ರೆಯ ಕೊನೆಯ ಹಂತವಾಗಿದ್ದರಿಂದ, ಹೆಚ್ಚಿನ ಜನಸಂದಣಿ ಇರಲಿಲ್ಲ. ಗುಹೆಯ ಮೇಲ್ಭಾಗದಲ್ಲಿ ಕುಳಿತ ಪಾರಿವಾಳದ ಜೋಡಿಯೊಂದು ಯಾತ್ರಿಗಳನ್ನು ಹರಸುತ್ತಿದ್ದವು. ಶಿವನು ಪಾರ್ವತಿಗೆ ಅಮರತ್ವದ ರಹಸ್ಯವನ್ನು ಹೇಳುವಾಗ, ಅದನ್ನು ಕೇಳಿಸಿಕೊಂಡು ಅಮರವಾದ ಪಾರಿವಾಳದ ಜೋಡಿ ಎಂಬ ನಂಬಿಕೆಯೂ ಭಕ್ತರಲ್ಲಿ ಆಳವಾಗಿ ಬೇರೂರಿದೆ.

ಒಂದು ಕ್ಷಣ ಬೇಸರವಾಗಿತ್ತು. ಆರು ತಿಂಗಳಿನಿಂದ ಅಮರನಾಥನ ಜಪ ಮಾಡಿದವಳಿಗೆ ಹಿಮಲಿಂಗದ ದರ್ಶನವಾಗಲಿಲ್ಲವೆಂದು. ಅಲ್ಲಿ ಎಲ್ಲವೂ ಇತ್ತು, ಆದರೆ ಏನೂ ಇರಲಿಲ್ಲವೆಂಬ ಭಾವ ಮನದಲ್ಲಿ. ಅಮರನಾಥ ಗುಹೆಯಿಂದ ಹರಿದು ಬರುತ್ತಿದ್ದ ನೀರನ್ನು ಬಾಟಲಿಯಲ್ಲಿ ತುಂಬಿಸಿಕೊಳ್ಳುವಾಗ, ಶಿವನು ನಸುನಕ್ಕು ನುಡಿದಂತೆ ಭಾಸವಾಯಿತು, ‘ಹುಚ್ಚಿ, ನಾನು ನಿರಾಕಾರ, ಶಿವನೆಂದರೆ ಶೂನ್ಯ. ಚಳಿಗಾಲದಲ್ಲಿ ನಾನು ಘನೀಕೃತವಾಗಿ ಹಿಮಲಿಂಗವಾಗುತ್ತೇನೆ. ನಂತರದ ದಿನಗಳಲ್ಲಿ ಸೂರ್ಯನ ಶಾಖದಿಂದ ಕರಗಿ ನೀರಾಗುವೆ. ಸೃಷ್ಟಿಯ ಮೂಲದ್ರವ್ಯ ನೀರು. ನೀರಿಲ್ಲದೆ ಜೀವಿಗಳು ಬದುಕುಳಿಯಲಾರವು. ನನ್ನಲ್ಲಿ ನೀನು ಶಿವನನ್ನು ಕಾಣಲಾರೆಯಾ?’ ಕಣ್ಣೊರೆಸಿಕೊಂಡು, ಶಿವನ ನುಡಿಗಳನ್ನು ಮೆಲುಕು ಹಾಕಿದೆ. ಸುತ್ತಲೂ ಇದ್ದ ಭವ್ಯವಾದ ಶಿಖರಗಳಿಗೆ ತಲೆಬಾಗಿ ವಂದಿಸಿದೆ. ಹಿಮ ಕರಗಿ ಭುವಿಗೆ ರಭಸವಾಗಿ ಇಳಿದು ಬರುತ್ತಿದ್ದ ಗಂಗೆಗೆ ಆದರದಿಂದ ನಮಿಸಿದೆ, ಸುತ್ತಮುತ್ತ ಅರಳಿ ನಿಂತಿದ್ದ ಬಣ್ಣಬಣ್ಣದ ಹೂಗಳ ಚೆಲುವನ್ನು ಆಸ್ವಾದಿಸಿದೆ, ಅಮರನಾಥನ ದರ್ಶನ ಭಾಗ್ಯ ಲಭಿಸಿತ್ತು. ಅಮರನಾಥ ದೇಗುಲದ ಮುಂದೆ ಕುಳಿತು ಅರ್ಧ ತಾಸು ಧ್ಯಾನ ಮಾಡಿದೆ. ನನ್ನಲ್ಲಿ ಹೊಸ ಚೈತನ್ಯ, ಉಲ್ಲಾಸ ಮೂಡಿತ್ತು. ಬಾಳ ಪಯಣ ಸವಿಗನಸಿನಂತೆ ತೋರುತ್ತಿತ್ತು. ಇದೇ ಯಾತ್ರೆಯ ಪುಣ್ಯಫಲವಲ್ಲವೇ?

ಅಮರನಾಥನ ದರ್ಶನ ಮಾಡಿ ಪಾಲ್ಕಿಯಲ್ಲಿ ಕುಳಿತು ಹಿಂದಿರುಗುವಾಗ, ಯಾತ್ರಿಗಳ ಸಂಭ್ರಮ ಸಡಗರವನ್ನು ಕಂಡು ಉಲ್ಲಸಿತಳಾದೆ. ದೇಹ ದಣಿದಿತ್ತು, ಆದರೆ ಮನಸ್ಸು ಗರಿಗೆದರಿ ನರ್ತಿಸುತ್ತಿತ್ತು. ನಮ್ಮ ಹಾದಿಯಲ್ಲಿ ಬಂದ ಎಲ್ಲಾ ಸಂಕಷ್ಟಗಳನ್ನೂ ನಿವಾರಿಸಿ ದರ್ಶನ ನೀಡಿದ್ದ ಮಹಾದೇವ. ಪಂಚತಾರಿಣಿ ತಲುಪಿದಾಗ ಗಂಟೆ ನಾಲ್ಕು. ಕ್ಷಣಕ್ಕೊಮ್ಮೆ ಬದಲಾಗುವ ಹವಾಮಾನ, ಹವಾಮಾನದ ತಾಳಕ್ಕೆ ತಕ್ಕಂತೆ ಕುಣಿಯುವ ಹೆಲಿಕಾಪ್ಟರ್‌ಗಳು. ಮತ್ತೆ ನಮ್ಮನ್ನು ಕರೆದೊಯ್ಯಬೇಕಾಗಿದ್ದ ಪುಷ್ಪಕ ವಿಮಾನ ರದ್ದಾಗಿತ್ತು. ಅಂದು ಪಂಚತಾರಿಣಿಯಲ್ಲಿ ಹಾಕಿದ್ದ ಟೆಂಟ್ ಒಂದನ್ನು ಬಾಡಿಗೆಗೆ ಪಡೆದು ವಿಶ್ರಾಂತಿ ಪಡೆದೆವು. ಅಮರನಾಥ ಗುಹೆಯ ಮಡಿಲಲ್ಲಿ ಕಂಗೊಳಿಸುತ್ತಿದ್ದ ನಿಸರ್ಗದ ರಮಣೀಯತೆಯನ್ನು ಮೆಲುಕು ಹಾಕುತ್ತಾ ನಿದ್ರೆಗೆ ಜಾರಿದ್ದೆ. ಕನಸಿನಲ್ಲಿ ಭವ್ಯವಾದ ಹಿಮಲಿಂಗ ಗೋಚರಿಸಿತ್ತು. ‘ಬೋಲೋ ಅಮರನಾಥ್ ಕೀ ಜೈ’.

-ಡಾ. ಗಾಯತ್ರಿದೇವಿ ಸಜ್ಜನ್
ನಿವೃತ್ತ ಪ್ರಿನ್ಸಿಪಾಲರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

5 Responses

  1. ವಾವ್.. ನಿಮ್ಮ ಅಮರನಾಥ ಯಾತ್ರೆ ಯಲ್ಲಿ ನ ಅನುಭವದ ನಿರೂಪಣೆ ಯ ಮೂಲಕ ನಮಗೂ ಆತನ ದರ್ಶನ ಭಾಗ್ಯ ಕರುಣಿಸಿದಿರಿ ಗಾಯತ್ರಿ ಮೇಡಂ.ಧನ್ಯವಾದಗಳು.

  2. ನಯನ ಬಜಕೂಡ್ಲು says:

    ಚೆನ್ನಾಗಿದೆ

  3. dharmanna dhanni says:

    ಚೆಂದ

  4. ವಂದನೆಗಳು ಸಹೃದಯ ಓದುಗರಿಗೆ

  5. ಶಂಕರಿ ಶರ್ಮ says:

    ಸೊಗಸಾದ ನಿರೂಪಣೆ..ನಿಮ್ಮೊಂದಿಗೆ ನಮಗೂ ಅಮರನಾಥನ ದರುಶನವಾಯ್ತು … ಧನ್ಯವಾದಗಳು ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: