“ಕಾಂತಾರ”ದ ಸುಳಿಯಲ್ಲಿ

Share Button

ಯಾರು ಕಂಡರೂ ಮಾತಾಡುವುದು ಮತ್ತು ಮಾತಾಡಿಸುವುದು ಕಾಂತಾರ ಸಿನೆಮಾದ ಬಗ್ಗೆಯೇ ಆಗಿದ್ದದ್ದು ನನ್ನಲ್ಲಿ ಕುತೂಹಲವನ್ನು ಹುಟ್ಟಿಸಿತ್ತು. ಮಗಳು ಕಾಂತಾರ ನೋಡೋದೇನೇ ಎಂದು ಎಲ್ಲರನ್ನೂ ಬಿಡದೆ ಥಿಯೇಟರಿಗೆ ಕರೆದುಕೊಂಡು ಹೋದಳು. ಒಗ್ಗರಣೆ ಸಿನೆಮಾ ನೋಡಿದ ಮೇಲೆ ಯಾವ ಸಿನೆಮಾವನ್ನು ನಾನು ನೋಡಿರಲಿಲ್ಲ. ಸಿನೆಮಾ ನೋಡಿದ ಮೇಲೆ ಯಾಕೆ ಈ ಸಿನೆಮಾ ಬಗ್ಗೆ ಇಷ್ಟೊಂದು ಸಂಭ್ರಮ ಅನ್ನೋ ಪ್ರಶ್ನೆ ನನ್ನಲ್ಲಿ ಹುಟ್ಟಿತು. 

ನಮ್ಮ ಬದುಕಿನಲ್ಲಿ ಸಿನೆಮ ಪ್ರವೇಶ ಪಡೆದದ್ದೆ ಮನರಂಜನೆಯ ಮಾಧ್ಯಮವಾಗಿ. ಸಿನೆಮಾ ನೋಡಬೇಕು ಎಂದುಕೊಳ್ಳುವುದೇ ದಿನನಿತ್ಯದ ಕೆಲಸ ಬೊಗಸೆಗಳ ಹೊರೆಯನ್ನು ಪಕ್ಕಕ್ಕೆ ಸರಿಸೋದಿಕ್ಕೇನೇ. ಮನಸ್ಸನ್ನು ಹಗುರಗೊಳಿಸುವ ಸನ್ನಿವೇಷಗಳು ಇಲ್ಲದಿದ್ದರೆ ಅಂಥ ಸಿನೆಮಾಗೆ ಸಿಗುವುದು “ಒಂದು ಸಾರಿ ನೋಡಬಹುದು” ಎನ್ನುವ ಸರ್ಟಿಫಿಕೇಟ್‌ ಅಷ್ಟೇ! ಪತ್ರಿಕೆಯಲ್ಲಿ ಬರೆಯುವ ವಿಮರ್ಶಕರನ್ನು ಬಿಟ್ಟರೆ ಇನ್ನು ಯಾರಿಗೂ ಬಹುಮಟ್ಟಿಗೆ ಸಿನೆಮ ಸಂಗತವೋ ಅಸಂಗತವೋ ಎನ್ನುವ ಚರ್ಚೆಯೇ ಅಸಂಗತ. ಆದರೆ ಒಂದು ಸಿನೆಮ ಒಂದು ಮಹಾಕಾವ್ಯದಂತೆ ಬೆಳ್ಳಿಪರದೆಯ ಮೇಲೆ ರಾರಾಜಿಸಿದರೆ!  ಅದನ್ನು ವಿಮರ್ಶಿಸುವ ಮನಸ್ಥಿತಿ ಸಹಜವಾದದ್ದೇ.

 ರಿಷಬ್‌ ಶೆಟ್ಟಿಯ ನಿರ್ದೇಶನದಲ್ಲಿ ನಿರ್ಮಾಣ ಆದ ಕಾಂತಾರ ಸಿನೆಮಾ ಸ್ವದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ, ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ಇತರೆ ಭಾರತೀಯ ಭಾಷೆಗಳಲ್ಲೂ ಒಳ್ಳೆಯ ಅಭಿನಯ, ಸ್ವಾಭಾವಿಕ ದೃಶ್ಯಾವಳಿಗಳು, ಸೂಕ್ತವಾದ ಸಹಜವಾದ ಹಾಡುಗಳು ಮತ್ತು ಸಂಭಾಷಣೆಗಳು, ಕುತೂಹಲ ಹುಟ್ಟಿಸುವ ಆರಂಭ, ಸಹಜ ಗತಿಯ ಮುನ್ನಡೆ, ರೋಚಕ ಮುಕ್ತಾಯ ಮುಂತಾದವುಗಳಿಂದ ವಿಜೃಂಭಿಸುತ್ತಿದೆ. ಅದು ಎಲ್ಲಾ ಸಿನೆಮಾಗಳಂತೆ ಒಳಿತು ಕೆಡುಕುಗಳ ವಿವೇಚನೆಯನ್ನಾಧರಿಸಿದ ನಾಯಕ-ಖಳನಾಯಕರ ನಡುವಿನ ನೇರ ಮತ್ತು ಅವರ ಪರವಾದವರನ್ನು ಒಳಗೊಳ್ಳುವ ಹೊಡೆದಾಟವನ್ನು, ಪ್ರಣಯ ಪ್ರಸಂಗಗಳನ್ನು ಮೇಳೈಸಿಕೊಂಡಿದೆ. ಎಲ್ಲಾ ಮೂರು ಗಂಟೆಯ ಅವಧಿಯ ಸಿನೆಮಾಗಳಲ್ಲಿ 2 ಗಂಟೆ 59ನಿಮಿಷಗಳ ವರೆಗೂ ಹೊಡೆದಾಟ ಬಡಿದಾಟ ಮೋಸ ಕುಯುಕ್ತಿಗಳ ಮೇಲ್ಗೈ ಇದ್ದು ಕೊನೆಯ ಒಂದು ನಿಮಿಷದಲ್ಲಿ ಒಳಿತಿಗೇ ಜಯ ಎಂದು ತೋರಿಸುವ ಹಾಗೆ ಇಲ್ಲಿಯೂ ಇದೆ. ಆದರೆ ಇಲ್ಲಿ ಮನುಷ್ಯರ ಬದುಕಿನಲ್ಲಿ ಪುರಾಣದ ಕಥೆಗಳಲ್ಲಿಯಂತೆ ದೈವದ ಪ್ರವೇಶ ನೇರವಾಗಿದೆ; ವರ್ತಮಾನದ ವಾಸ್ತವ ಸಮಸ್ಯೆಗಳ ನಿವಾರಣೆಯಲ್ಲಿ ಅದೇ ಅಂತಿಮ ನಿರ್ಣಾಯಕ ಆಗುತ್ತದೆ; ಅದಕ್ಕೆ ಪೂರಕವಾಗಿ ಕಾನೂನು ಪಾಲನೆಯೂ ಪಾತ್ರಧಾರಿಯಾಗುತ್ತದೆ. ಇವು ಕುತೂಹಲಕಾರಿಯಾಗಿವೆ.   

ಕಾಡಿನಂತೆ ಸ್ವಚ್ಛಂಧವಾಗಿ ಇರುವವರ, ಕಾಡಿನ ಪ್ರಾಣಿಗಳಂತೆ ಸದಾ ಹೊಡೆದಾಡಿಕೊಂಡೇ ಇರುವವರ ಜೀವನ ರೀತಿಯನ್ನು ಮತ್ತು ಅವರನ್ನು ವಿರೋಧಿಸುವವರನ್ನೂ ಶಕ್ತಿ-ಯುಕ್ತಿಗಳೆರಡರಿಂದಲೂ ಪಳಗಿಸುವ ಲಗಾಮು ಯಾವುದಾದೀತು ಎನ್ನುವ ಅಂಶವನ್ನು ಕಾಂತಾರ ಸಿನೆಮಾ ಪ್ರಧಾನವಾಗಿ ಪ್ರಸ್ತಾಪಿಸುವ ಹಾಗೆ ತೋರುತ್ತದೆ. ಅಧಿಕಾರ, ಸ್ವಾತಂತ್ರ್ಯ, ಹಕ್ಕುಗಳ ಚಲಾವಣೆಗೆ ಅಡ್ಡಿ ಆತಂಕಗಳಿಲ್ಲದ ರಾಜನೊಬ್ಬ ಮನಶ್ಶಾಂತಿಯಿಲ್ಲದೆ ಅದನ್ನು ಎಲ್ಲಿ, ಹೇಗೆ ಪಡೆಯಬಹುದು ಎಂದು ಹುಡುಕಾಡುತ್ತಾ ತಿರುಗಾಟದಲ್ಲಿರುವುದರಿಂದ ಸಿನೆಮಾ ಆರಂಭವಾಗುತ್ತದೆ. ಅವನು ರಾಜಶಾಹಿಯ ಗುರುತುಗಳನ್ನೆಲ್ಲಾ ಒಂದೊಂದನ್ನಾಗಿ ಕಳಚುತ್ತಾ ಕೊನೆಗೆ ಕೈಯಲ್ಲಿದ್ದ ಕತ್ತಿಯನ್ನೂ ಬಿಸಾಡಿದ ನಂತರ ಪಂಜುರ್ಲಿ ದೈವದ ಆವಾಸಸ್ಥಾನವನ್ನು ಕಾಣುತ್ತಾನೆ, ಅಲ್ಲಿ ಮನಶ್ಶಾಂತಿಯನ್ನು ಪಡೆಯುತ್ತಾನೆ. ಅವನು ಅಲ್ಲಿಯ ಜನರ ಬಳಿ ತನಗೆ ಆ ದೈವವನ್ನು ಕೊಡಬೇಕೆಂದು ಕೇಳಿಕೊಳ್ಳುತ್ತಾನೆ. ಅವರಿಗೆ ಬದುಕಲು ಅವನ ರಾಜ್ಯದ ಕಾಡಿನಲ್ಲಿ ತಾನು ಕೂಗಿದುದು ಕೇಳುವಷ್ಟು ಜಾಗವನ್ನು ಬಿಟ್ಟುಕೊಟ್ಟರೆ ತಾನು ಅವನಲ್ಲಿ ನೆಲೆಸುವುದಾಗಿ ದೈವ ಕೋಲದ ಪಾತ್ರಿಯ ಮೂಲಕ ಹೇಳುತ್ತದೆ. ಹಾಗೆಯೇ ಮುಂದಿನ ದಿನಗಳಲ್ಲಿ ಅವನಾಗಲೀ ಅವನ ಮುಂದಿನ ವಾರಸುದಾರರಾಗಲೀ ಬಿಟ್ಟುಕೊಟ್ಟ ಜಾಗದ ಮೇಲೆ ಹಕ್ಕುದಾರಿಕೆಯನ್ನು ಮಂಡಿಸಿದರೆ ಮಂಡಿಸಿದವರು ರಕ್ತಕಾರಿ ಸಾಯುತ್ತಾರೆಂಬ ಎಚ್ಚರಿಕೆಯನ್ನು ನೀಡುತ್ತದೆ.  ರಾಜ ಒಪ್ಪಿಕೊಳ್ಳುತ್ತಾನೆ. ದೈವಕ್ಕೆ ತನ್ನ ವಾಸಸ್ಥಾನದ ಬಳಿ ದೇವಾಲಯವನ್ನೂ ಕಟ್ಟಿಕೊಡುತ್ತಾನೆ.

ಮುಂದಿನ ಒಂದು ಶತಮಾನದ ನಂತರದ ರಾಜನ ತಲೆಮಾರಿನ ಒಬ್ಬನಿಗೆ ತಮ್ಮ ಹಕ್ಕಿನ ಜಾಗ ಅದಕ್ಕೆ ವಾರಸುದಾರರಲ್ಲದವರ ಬಳಿ ಇರುವುದು ಸರಿಕಾಣುವುದಿಲ್ಲ. ಕೋಲದ ಸಂದರ್ಭದಲ್ಲಿ ಆ ಜಾಗವನ್ನು ತಮಗೆ ಬಿಟ್ಟುಕೊಡಬೇಕೆಂದು ದೈವವನ್ನು ಪಾತ್ರಿಯ ಮೂಲಕ ಕೇಳುತ್ತಾನೆ. ದೈವ ಬಿಟ್ಟುಕೊಡಲು ಅಭ್ಯಂತರವಿಲ್ಲ, ಆದರೆ ತಾನು ನೀಡಿದ ಮನಶ್ಶಾಂತಿಯನ್ನು ಹಿಂದಿರುಗಿಸಬೇಕೆನ್ನುತ್ತದೆ. ಇದು ದೈವದ ಮಾತೋ, ಪಾತ್ರಿಯ ಮಾತೋ ಎಂದು ವ್ಯಂಗ್ಯವಾಗಿ ಅವನು ಹೇಳುವುದರ ಜೊತೆಗೆ ಕೋರ್ಟಿನಲ್ಲೇ ತಮ್ಮ ಜಾಗವನ್ನು ಪಡೆಯುತ್ತೇನೆ ಎಂದು ಹೇಳಿದವನು ಕೋರ್ಟಿನ ಮೆಟ್ಟಿಲುಗಳ ಮೇಲೆ ರಕ್ತಕಾರಿ ಸಾಯುತ್ತಾನೆ. ಅವನ ಅರ್ಧ ಶತಮಾನದ ಮುಂದಿನ ತಲೆಮಾರಿನವನು ದೇವೇಂದ್ರ ಸುತ್ತೂರು. ಅವನು ಜಾಗದ ಮೇಲಿನ ಹಕ್ಕುದಾರಿಕೆಯ ಸಮಸ್ಯೆಯನ್ನು ಬಗೆಹರಿಸಲು ತಂತ್ರಗಾರಿಕೆಯನ್ನು ಹೆಣೆಯುತ್ತಾನೆ. ಅವನು ಕಾಡಿನಲ್ಲಿ ವಾಸವಿದ್ದವರ ನಂಬಿಕೆಯನ್ನು ಒಂದೆಡೆ ದೃಢೀಕರಿಸುವ ಅಭಿನಯ ಮಾಡುತ್ತಾ ಅವರ ನೆಚ್ಚಿನ ಭೂಮಾಲೀಕನಾಗಿ ಕಾಣಿಸಿಕೊಳ್ಳುತ್ತಾನೆ. ಇನ್ನೊಂದೆಡೆ ಅವರ ನಂಬಿಕೆಯನ್ನು ಶಿಥಿಲಗೊಳಿಸುವ ಪ್ರಯತ್ನವನ್ನೂ ಮಾಡುತ್ತಿರುತ್ತಾನೆ. ಅವರು ತಮ್ಮ ನಂಬಿಕೆಗೆ ವಿರುದ್ಧವಾಗಿ ಮದ್ಯ ಸೇವನೆ ಮಾಡುವುದನ್ನೂ, ಹಂದಿ, ಜಿಂಕೆ ಇತ್ಯಾದಿ ಅವರಿಗೆ ಪೂಜ್ಯ ಆದ ಕಾಡು ಪ್ರಾಣಿಗಳ ಬೇಟೆಯಾಡುವುದನ್ನೂ ಪ್ರೋತ್ಸಾಹಿಸುತ್ತಾನೆ. ಕಾಡುಜನರ ನಾಯಕನೂ, ಕೋಲದ ಪಾತ್ರಿಯ ಮಗನೂ ಆದವನು ಶಿವು. ಅವನನ್ನು ಅವನ ಸಂಗಡಿಗರೊಂದಿಗೆ ಅಪಮಾರ್ಗದಲ್ಲಿ ಒಯ್ಯುವುದರಲ್ಲಿ ಯಶಸ್ವಿಯಾಗುತ್ತಾನೆ. 

ಇದಕ್ಕೆ ಸಮಾನಾಂತರವಾಗಿ ಸರ್ಕಾರ ನೇಮಿಸಿದ ಫಾರೆಸ್ಟ್ ಆಫೀಸರ್‌ ಮುರಲೀಧರ ಈ ಕಾಡಿನ ಜನ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದಾರೆಂದೂ, ಅದನ್ನು ತೆರವು ಮಾಡಬೇಕೆಂದೂ, ಆ ಜಾಗದಲ್ಲಿಯ ಯಾವುದೇ ವಸ್ತು ಅಥವಾ ಪ್ರಾಣಿಯನ್ನು ಅವರು ತಮ್ಮ ಬಳಕೆಗೆ ಒಯ್ಯುವಂತಿಲ್ಲವೆಂದೂ ಆದೇಶಿಸುತ್ತಾನೆ. ಜನ ಒಪ್ಪದಿದ್ದಾಗ ಬಲಾತ್ಕಾರದಿಂದ ಸರ್ಕಾರದ ಕಾಡಿನ ಭಾಗಕ್ಕೆ ಬೇಲಿಯನ್ನು ಹಾಕಿಸುತ್ತಾನೆ. ಈ ಅವಕಾಶವನ್ನು ಬಳಸಿಕೊಂಡ ದೇವೇಂದ್ರ ಸುತ್ತೂರು ತನ್ನ ಪ್ರಭಾವವನ್ನು ಬಳಸಿ ಅದು ತನ್ನ ಹಕ್ಕಿನ ಜಾಗವೆಂದು ಕಾಗದ ಪತ್ರ ಮಾಡಿಸಿಕೊಂಡುಬಿಡುತ್ತಾನೆ. ಎಲ್ಲರ ಎದುರಿಗೆ ಫಾರೆಸ್ಟ್‌ ಆಫೀಸರನಿಗೆ ಕಾಡು ಜನರ ದ್ವೇಷವನ್ನು ಕಟ್ಟಿಕೊಳ್ಳಬಾರದೆಂದು ವಿನಂತಿಸಿಕೊಳ್ಳುತ್ತಾನೆ, ಕಾಡಿನ ಜನರಿಗೆ ತಾನು ಅವರ ರಕ್ಷಕ ಎಂಬಂತೆ ತೋರ್ಪಡಿಸಿಕೊಳ್ಳುತ್ತಾನೆ. 

ಶಿವು ಸಾಕಷ್ಟು ಗಟ್ಟಿಯಾಗಿ ತನಗೆ ಒಪ್ಪಿಗೆ ಆಗದುದನ್ನು ಪ್ರತಿಭಟಿಸುವವನು; ಬೇಕಾದರೆ ತನಗೆ ಸರಿ ಕಂಡದ್ದಕ್ಕೆ ಪ್ರಾಣಾಂತಿಕವಾಗಿ ಹೋರಾಡುವವನೂ ಆಗಿದ್ದುದರಿಂದ ದೇವೇಂದ್ರ ಸುತ್ತೂರು ಅವನನ್ನು ಸರ್ಕಾರಿ ಜಾಗದಲ್ಲಿ ಹಂದಿ, ಜಿಂಕೆ ಬೇಟೆಯಾಡುವಂತೆ ಮಾಡಿ, ಮರಗಳನ್ನು ಕಡಿದು ಸಾಗಿಸುವಂತೆ ಪ್ರೋತ್ಸಾಹಿಸಿ, ಹಾಗೆ ಮಾಡುತ್ತಿರುವಾಗಲೇ ಅವನನ್ನು ಫಾರೆಸ್ಟ್‌ ಆಫೀಸರ್‌ ಹಿಡಿಯುವ ವ್ಯವಸ್ಥೆಯನ್ನೂ ಮಾಡುತ್ತಾನೆ. ಮುರಲೀಧರ ಬರುವ ಸಮಯಕ್ಕೆ ಸರಿಯಾಗಿ ಅವನ ಜೀಪಿನ ಮೇಲೆ ಶಿವು ಮತ್ತು ಅವನ ಸಂಗಡಿಗರು ಕಡಿಯುತ್ತಿದ್ದ ಮರ ಬಿದ್ದು ಅಟೆಂಪ್ಟ್‌ ಟು ಮರ್ಡರ್‌ ಎಂಬ ಆರೋಪ ಬರುವಂತೆ ಆಗುತ್ತದೆ. ಮುರಲೀಧರನ ಕೈಗೆ ಸಿಗದಂತೆ ತಲೆ ತಪ್ಪಿಸಿಕೊಳ್ಳಿ ಎಂದು ತಲೆತಪ್ಪಿಸಿಕೊಳ್ಳುವಂತೆ ಮಾಡಿ ಅವರು ಇದ್ದ ಜಾಗದ ಮಾಹಿತಿಯನ್ನು ಪೋಲೀಸರಿಗೆ ಕೊಟ್ಟು ಅವನನ್ನು ಮತ್ತು ಅವನ ಸಂಗಡಿಗರನ್ನು ಹಿಡಿದು ಜೈಲಿಗೆ ಹಾಕುವ ವ್ಯವಸ್ಥೆಯನ್ನೂ ಮಾಡುತ್ತಾನೆ. 

ಮೊದಲಿನಿಂದಲೂ ಶಿವೂನ ಬದಲಿಗೆ ಅವನ ದಾಯಾದಿ ಗುರುವ ಕೋಲವನ್ನು ನಡೆಸಿಕೊಂಡು ಹೋಗುತ್ತಿರುತ್ತಾನೆ. ಅವನು ಶಿವೂನನ್ನು ಜೈಲಿನಿಂದ ಬಿಡಿಸಿಕೊಡಬೇಕು ಎಂದು ದೇವೇಂದ್ರ ಸುತ್ತೂರನನ್ನು ವಿನಂತಿಸಿಕೊಳ್ಳಲು ಬಂದಾಗ ಅವನಿಗೆ ತನ್ನ ಜಾಗದಲ್ಲಿ ಐದು ಎಕರೆ ಭೂಮಿಯನ್ನು ಕೊಡುತ್ತೇನೆ ಅವನು ಕೋಲದ ಸಂದರ್ಭದಲ್ಲಿ ತನ್ನ ಹಕ್ಕಿನ ಭೂಮಿಯನ್ನು ತನಗೇ ಹಿಂದಿರುಗಿಸುತ್ತೇನೆ ಎಂದು ದೈವದ ಮಾತಿನಂತೆ ಹೇಳಬೇಕೆಂದು ಒತ್ತಾಯಿಸುತ್ತಾನೆ. ಅವನು ಹಾಗೆ ಹೇಳಲು ಬರುವುದಿಲ್ಲ. ದೈವ ಏನನ್ನು ತನ್ನ ಮೂಲಕ ಹೇಳಿಸುತ್ತದೆಯೋ ಅಷ್ಟನ್ನು ಮಾತ್ರ ಹೇಳುವವನು ಎಂದು ನಿರಾಕರಿಸುತ್ತಾನೆ. ಇದರಿಂದ ಸಿಟ್ಟುಗೊಂಡ ದೇವೇಂದ್ರ ಸುತ್ತೂರು ಗುರುವನನ್ನು ಇರಿದು ಕೊಲ್ಲುತ್ತಾನೆ, ದೈವದ ಆಲಯದ ಮುಂಭಾಗದಲ್ಲಿ ಹೆಣವನ್ನು ಹಾಕಿಸುತ್ತಾನೆ. 

ದೇವೇಂದ್ರ ಸುತ್ತೂರು ಜೈಲಿನಲ್ಲಿದ್ದ ಶಿವು ಮತ್ತು ಅವನ ಸಂಗಡಿಗರನ್ನು ಬಿಡಿಸುವ ವ್ಯವಸ್ಥೆ ಮಾಡಿ ಮುರಲೀಧರನೇ ಗುರುವನನ್ನು ಕೊಂದವನು ಎಂದು ಪ್ರಾಸಂಗಿಕವಾಗಿ ಎನ್ನುವಂತೆ ಹೇಳಿ ಶಿವು ಮುರಲೀಧರನ ಮೇಲೆ ಹಲ್ಲೆ ಮಾಡಲು ಪ್ರಚೋದಿಸುತ್ತಾನೆ. ಹಲ್ಲೆ ಮಾಡಲು ಹೋದಾಗ ಶಿವೂಗೆ ದೇವೇಂದ್ರ ಸುತ್ತೂರು ಕಾಡಿನವರ ಭೂಮಿಯೆಲ್ಲಾ ತನಗೆ ಸೇರಿದುದೆಂದು ಕಾಗದ ಪತ್ರ ಮಾಡಿಸಿಕೊಂಡಿರುವುದರ ಪ್ರತಿಯನ್ನು ಮುರಲೀಧರ ತೋರಿಸುತ್ತಾನೆ. ಕಾಡು ಸರ್ಕಾರದ್ದಾದರೂ ಅಲ್ಲಿ ವಾಸಿಸಲು ತಮಗೆ ಅನುಮತಿ ನೀಡಬೇಕೆಂದು ಸರ್ಕಾರಕ್ಕೆ ವಿನಂತಿಸಿಕೊಂಡರೆ ಅವರಿಗೆ ಅಧಿಕೃತವಾಗಿ ವಾಸಿಸುವ ಹಕ್ಕುದಾರಿಕೆಯನ್ನು ಕೊಡಿಸಿಕೊಡುತ್ತೇನೆ ಎಂದು ವಾಗ್ದಾನ ಮಾಡುತ್ತಾನೆ. 

ಶಿವು ತನಗೆ ಸರಿ ಅನ್ನಿಸಿದುದನ್ನು ಯಾವುದೇ ಮುಲಾಜಿಲ್ಲದೆ ಮಾಡುವವನು. ಅವನಿಗೆ ತಾನು ಪೋಲೀಸರಿಗೆ ಸಿಗದಂತೆ ತಲೆ ತಪ್ಪಿಸಿಕೊಂಡು ಇರುವುದು ಸರಿ ಕಾಣುವುದಿಲ್ಲ. ಅದರ ಜೊತೆಗೆ ಅವನು ಪ್ರೀತಿಸುತ್ತಿದ್ದ ಅವನ ಜನವೇ ಆದ ಲೀಲ ಫಾರೆಸ್ಟ್‌ ಗಾರ್ಡ್‌ ಆಗಿದ್ದುದರಿಂದ ಅವನ ಕಾರಣದಿಂದಾಗಿ ಅವಳಿಗೆ ತೊಂದರೆ ಆಗುತ್ತದೆಂಬ ನೋವು ಅವನಿಗೆ. ಅದರಿಂದ ಅವನು ಪೋಲೀಸರಿಗೆ ಶರಣಾಗಲು ಸಿದ್ಧನಾಗಿರುತ್ತಾನೆ. ದೇವೇದ್ರ ಸುತ್ತೂರನ ಮದ್ಯ ಸೇವನೆ, ಮಾನಿನಿ ಸಹವಾಸ, ಕಳ್ಳಬೇಟೆಯ ಮೋಜು ಈ ಅಪಮಾರ್ಗಗಳಲ್ಲಿ ಭಾಗಿಯಾದಾಗಲೆಲ್ಲ ದೈವ ಅವನನ್ನು ಎಚ್ಚರಿಸುತ್ತಿದ್ದುದರಿಂದ ಅವನು ಸರಿಯಾದ ಮಾರ್ಗದಲ್ಲಿ ನಡೆಯುವುದು ಒಳ್ಳೆಯದೆಂಬ ಮನಸ್ಥಿತಿಯಲ್ಲಿರುತ್ತಾನೆ. ದೇವೇಂದ್ರ ಸುತ್ತೂರನ ಮೋಸಗಾರಿಕೆಯ ಜಾಲದ ಅರಿವಾದಾಗ ದೇವೇಂದ್ರ ಸುತ್ತೂರನನ್ನೇ ಕೊಲ್ಲಲು ಮುಂದಾಗುತ್ತಾನೆ. ಅವನೊಂದಿಗೆ ಅವನ ಕಾಡುಜನರೆಲ್ಲಾ ಸೇರುತ್ತಾರೆ.

ದೇವೇಂದ್ರ ಸುತ್ತೂರು ಅವರ ಹಳ್ಳಿಗೆ ಬೆಂಕಿ ಹಾಕಿಸುತ್ತಾನೆ, ಬಂದೂಕಿನಿಂದ ಅವರನ್ನೆಲ್ಲಾ ಒಬ್ಬೊಬ್ಬರನ್ನಾಗಿ ಕೊಲ್ಲುತ್ತಾ ಹೋಗುತ್ತಾನೆ. ಅವನ ಜನರ ಕೈಗೆ ಸಿಕ್ಕಿಬಿದ್ದ ಶಿವು ಕಲ್ಲೊಂದರ ಮೇಲೆ ಬಿದ್ದು ಕೊನೆಯುಸಿರು ಎಳೆಯುವ ಹೊತ್ತಿನಲ್ಲಿ ಆ ಕಲ್ಲಿನಲ್ಲಿ ಪ್ರತಿಷ್ಠಾಪಿತ ಆಗಿದ್ದ ದೈವ ಶಿವೂನ ಮೈಯಲ್ಲಿ ಆವಾಹನೆಯಾಗುತ್ತದೆ. ದೇವೇಂದ್ರ ಸುತ್ತೂರನ ಸಹಿತವಾಗಿ ಅವನವರನ್ನೆಲ್ಲಾ ಬಡಿದು ಹಾಕುತ್ತದೆ. ಕಾಡಿನವರಿಗೆ ಅವರ ಜಾಗ ಉಳಿಯುತ್ತದೆ. ಮುಂದೆ ಕೋಲದ ಸಂದರ್ಭದಲ್ಲಿ ಅಲ್ಲಿಗೆ ಬಂದ ಮುರಲೀಧರನ ಕೈಯನ್ನು ಕಾಡಿನ ಜನರ ಕೈಗಳೊಂದಿಗೆ ಸೇರಿಸಿ ಅವರ ವಾಸದ ಹಕ್ಕನ್ನು ಅಧಿಕೃತಗೊಳಿಸಿಕೊಡಬೇಕೆಂದು ಮುರಲೀಧರನನ್ನು ಶಿವೂನಲ್ಲಿ ಆವಾಹನೆಯಾಗಿದ್ದ ದೈವ ಒಪ್ಪಿಸುತ್ತದೆ; ಮುರಲೀಧರನೊಂದಿಗೆ ಹೊಂದಿಕೊಂಡು ಹೋಗಲು ಕಾಡಿನ ಜನರಿಗೆ ಸೂಚಿಸುತ್ತದೆ. ಆನಂತರ ತನ್ನ ಜವಾಬ್ದಾರಿ ಮುಗಿಯಿತೆಂಬಂತೆ ಶಿವೂನ ಸಹಿತವಾಗಿ ದೈವ ಮರೆಯಾಗುತ್ತದೆ. ಇದು ಕಥೆಯ ಅಂತ್ಯ. 

ಈ ಕಥಾನಕ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಪ್ರಾರಂಭದಲ್ಲಿ ಸಂಪತ್ತು ಮಿಗಿಲೋ ಮನಶ್ಶಾಂತಿ ಮಿಗಿಲೋ; ಮನಶ್ಶಾಂತಿ ದೈವ ಕೃಪೆಯಿಂದಲೋ ಭೌತಿಕ ಸುಖ ಸಂಪತ್ತು ಸೌಲಭ್ಯ ಸೌಕರ್ಯ, ಹೆಂಡತಿ ಮಕ್ಕಳು ಮೊಮ್ಮಕ್ಕಳನ್ನೊಳಗೊಂಡ ತುಂಬಿದ ಕುಟುಂಬ ಮೊದಲಾದವುಗಳಿಂದಲೋ, ರಾಜಶಾಹಿಯ ಅಥವಾ ಅಧಿಕಾರಶಾಹಿಯ ಕುರುಹುಗಳನ್ನೆಲ್ಲಾ ಕಳಚಿಕೊಳ್ಳುವುದರಿಂದಲೋ ಎಂಬ ಪ್ರಶ್ನೆ ಎದುರಾಗುತ್ತದೆ. ಈ ಪ್ರಶ್ನೆಗೆ ಸಿನೆಮಾ – ಸಂಪೂರ್ಣವಾಗಿ ದೈವವನ್ನು ನಂಬಿ ಕಾಡಿನಲ್ಲಿ ದೊರೆಯುವ ಸಾಮಗ್ರಿಗಳಿಂದಲೇ ಬದುಕನ್ನು ನಿರ್ವಹಿಸುವವರಿಗೆ ಯಾವುದೇ ತೊಂದರೆ ಆಗದಂತೆ ಅವರು ವಾಸಿಸುವ ಕಾಡು ಅವರಿಗೇ ಸೇರಿದ್ದು ಎಂದು ಕಾಡಿನ ಭಾಗವನ್ನು ರಾಜ ಯಾವುದೇ ಶರತ್ತು ಹಾಕದೆ ಬಿಟ್ಟುಕೊಟ್ಟರೆ ಮನಶ್ಶಾಂತಿ ದೊರೆಯುತ್ತದೆ; ಹಾಗೆ ಬಿಟ್ಟುಕೊಟ್ಟ ಕಾಡಿನ ಮೇಲೆ ರಾಜನಾಗಲೀ ಅವನ ಮುಂದಿನ ತಲೆಮಾರಿನವರಾಗಲೀ ಹಕ್ಕು ಸ್ಥಾಪನೆ ಮಾಡುವಂತಿಲ್ಲ, ಮಾಡಿದರೆ ಅವರಿಗೆ ಜೀವಂತವಾಗಿ ಬದುಕುವ ಅವಕಾಶವೂ ಇರುವುದಿಲ್ಲ ಎಂಬ ಶರತ್ತುಬದ್ಧ ಉತ್ತರವನ್ನು ಕೊಡುತ್ತದೆ. ರಾಜ ಇದನ್ನು ಒಪ್ಪಿಕೊಳ್ಳುತ್ತಾನೆ ಮನಶ್ಶಾಂತಿಯನ್ನು ಪಡೆಯುತ್ತಾನೆ. ಹಾಗಾದರೆ ಮನಶ್ಶಾಂತಿ ಎಂಬುದು ಉಳ್ಳವರು ಏನೂ ಇಲ್ಲದವರಿಗೆ ತಮ್ಮಲ್ಲಿ ಇರುವದರಲ್ಲಿ ಒಂದಷ್ಟನ್ನು ತ್ಯಾಗ ಮಾಡುವುದಕ್ಕೆ, ಅಧಿಕಾರ ಚಲಾವಣೆಯನ್ನು ಬಿಟ್ಟುಕೊಡುವುದಕ್ಕೆ ಸಂಬಂಧಿಸಿದುದೇ? 

ಒಂದು ಶತಮಾನಕ್ಕೂ ಮೀರಿದ ನಂತರದ ತಲೆಮಾರಿನವರಿಗೆ ದೈವದ ಮೂಲಕ ಕಾಡಿನ ಜನರ ಮತ್ತು ರಾಜನ ನಡುವೆ ಉಂಟಾದ ಒಪ್ಪಂದ ಒಂದು ಹುಟ್ಟುಹಾಕಿದ ಕಟ್ಟುಕಥೆಯಾಗಿ ಕಾಣುತ್ತದೆಯೇ ವಿನಾ ವಾಸ್ತವ ಸಂಗತಿ ಎಂದೆನ್ನಿಸುವುದಿಲ್ಲ. ತಮ್ಮ ಭೂಮಿಯನ್ನು ಅನಧಿಕೃತವಾಗಿ ಕಾಡಿನ ಜನ ಅನುಭವಿಸುತ್ತಿದ್ದಾರೆ ಎಂದೆನ್ನಿಸುತ್ತದೆ. ದೈವ ಮನುಷ್ಯನ ಮೂಲಕವೇ ಮಾತಾಡುವುದರಿಂದ ಮನುಷ್ಯ ಆಡಿದುದು ದೈವದ ಮಾತು ಎನ್ನುವುದಕ್ಕೆ ಸಾಕ್ಷಿ ಆಧಾರವೇನು ಎಂಬ ಪ್ರಶ್ನೆ ಅವರದು. ಇದಕ್ಕೆ ವಿರುದ್ಧವಾಗಿ ಫಾರೆಸ್ಟ್‌ ಆಫೀಸರನದು ಕಾಡು ಸರ್ಕಾರಕ್ಕೆ ಸೇರಿದುದು, ಅಲ್ಲಿ ವಾಸಿಸುವವರು ಕಾಡನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕು ಎಂಬ ನಿರ್ಣಯ. ಕಾಡಿನ ಭಾಗವನ್ನು ಮೊದಲಿನ ಭೂಮಾಲೀಕ ತನ್ನದನ್ನಾಗಿಸಿಕೊಳ್ಳಲು ತಂತ್ರಗಾರಿಕೆಯನ್ನು ಹೆಣೆಯುತ್ತಿದ್ದರೆ ಕಾನೂನು ಮತ್ತು ಪೋಲೀಸ್‌ ಬಲದಿಂದ ಕಾಡನ್ನು ಸರ್ಕಾರದ ವಶಕ್ಕೆ‌ ಪಡೆಯಲು ಸರ್ಕಾರದ ಪ್ರತಿನಿಧಿ ಹೋರಾಡುತ್ತಾನೆ. ಹಾಗಾದರೆ ಕಾಡಿನ ಜನ ವಾಸಿಸುತ್ತಿರುವ, ಕಾಡಿನ ಸಂಪನ್ಮೂಲಗಳನ್ನು ಆಧರಿಸಿ ಬದುಕನ್ನು ನಡೆಸುತ್ತಿರುವ ಕಾಡು ಯಾರಿಗೆ ಸೇರಿದುದು? ದೈವಕ್ಕೋ? ಕಾಡನ್ನು ನಂಬಿ ಬದುಕುವವರಿಗೋ? ಒಂದು ಕಾಲದಲ್ಲಿ ಆ ಭೂಭಾಗದ ಒಡೆಯನಾಗಿದ್ದ ರಾಜನ ಮುಂದಿನ ತಲೆಮಾರಿನವರಿಗೋ? ರಾಜ ಮಹಾರಾಜರ ಕಾಲ ಹಿಂದಕ್ಕೆ ಸರಿದು ಆಡಳಿತ ಸೂತ್ರವನ್ನು ಪ್ರಜಾಪ್ರಭುತ್ವದ ನೆಲೆಯಲ್ಲಿ ನಿರ್ವಹಿಸುತ್ತಿರುವ ಸರ್ಕಾರಕ್ಕೋ?

ಕಾಡಿನ ಭೂಭಾಗವೊಂದರ ಹಕ್ಕುದಾರಿಕೆಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಕಾಡಿನ ಜನರೂ, ವರ್ತಮಾನದ ರಾಜನ ವಂಶಸ್ಥನೂ, ಸರ್ಕಾರದ ಪ್ರತಿನಿಧಿಯಾದ ಫಾರೆಸ್ಟ್‌ ಆಫೀಸರನೂ ತಾವೇ ಸರಿಯಾದ ನಿಲುವಿನವರು ಎಂಬುದನ್ನು ಸಾಬೀತುಪಡಿಸಲು ಸಶಸ್ತ್ರ ಹೋರಾಟಕ್ಕೂ ಸಿದ್ಧವಾಗಿದ್ದಾರೆ. ಕಾಡಿನ ಜನರಿಗೆ ಪರಂಪರಾಗತವಾದ ನಂಬಿಕೆಯ ಬಲವಿದೆ. ರಾಜನ ವಂಶಸ್ಥನಿಗೆ ಕಾಗದ ಪತ್ರದ ಆಧಾರ ಇದೆ. ಫಾರೆಸ್ಟ್‌ ಆಫೀಸರನಿಗೆ ಸರ್ಕಾರ ಸಿದ್ಧಪಡಿಸಿರುವ ಭೂಪಟದ ಬೆಂಬಲ ಇದೆ. ಈ ಮೂರರಲ್ಲಿ ಯಾವ ಆಧಾರ ಅಧಿಕೃತ (ವ್ಯಾಲಿಡ್)? ಕಾಡಿನವರ ನಾಯಕನ ಮೇಲೆ ದೈವದ ಆವಾಹನೆಯಾಗುತ್ತದೆ. ಅವನ ಮೂಲಕ ಭೂಮಾಲೀಕನನ್ನೂ ಅವನ ಕಡೆಯವರನ್ನೂ ದೈವ ಮರ್ದಿಸುತ್ತದೆ, ರಾಜನ ವಂಶಸ್ಥನ ಹಕ್ಕುದಾರಿಕೆಯ ಮಂಡನೆಯ ಸಮಸ್ಯೆಯನ್ನು ಬಗೆಹರಿಸುತ್ತದೆ. ಫಾರೆಸ್ಟ್‌ ಅಧಿಕಾರಿಗೆ ಈ ಮೊದಲೇ ಕಾಡಿನ ಜನರನ್ನು ತೀರಾ ಮೈಮೇಲೆ ಎಳೆದುಕೊಳ್ಳಬಾರದು ಎಂದು ಅರ್ಥಮಾಡಿಕೊಳ್ಳುವುದು ಅನಿವಾರ್ಯವಾಗಿರುತ್ತದೆ. ಆತ ಸರ್ಕಾರಕ್ಕೆ ಮನವಿ ಸಲ್ಲಿಸಿ ಕಾಡಿನಲ್ಲಿ ಬದುಕುಳಿಯುವ ಹಕ್ಕನ್ನು ಪಡೆದುಕೊಳ್ಳಬಹುದು ಎಂದು ಕಾಡಿನ ಜನರಿಗೆ ಸೂಚಿಸಿದುದನ್ನು ದೈವ ಒಪ್ಪಿಕೊಂಡಿತು ಎನ್ನುವಂತೆ ಕಾಡಿನ ಜನರ ಕೈಗಳನ್ನು ಫಾರೆಸ್ಟ್‌ ಆಫೀಸರಿನ ಕೈಗಳೊಂದಿಗೆ ಸೇರಿಸಿ ಒಂದು ರಾಜೀ ಸೂತ್ರವನ್ನು ಎತ್ತಿಹಿಡಿಯುತ್ತದೆ, ಹಕ್ಕುದಾರಿಕೆಯ ಬಿಕ್ಕಟ್ಟನ್ನು ಪರಿಹರಿಸುತ್ತದೆ. ಇದು ಎಲ್ಲಾ ಸಂದರ್ಭದಲ್ಲೂ ಕಾರ್ಯರೂಪಕ್ಕೆ ಬರಬಹುದಾದ ಪರಿಹಾರವಾದೀತೇ? 

ಕಾಡಿನ ಜನರ ನಾಯಕ ಶಿವು 1 ಸೆಕೆಂಡಿನ ಅಂತರದಲ್ಲಿ ಕಂಬಳ ಸ್ಪರ್ಧೆಯಲ್ಲಿ ಮುಂದಿರುತ್ತಾನೆ. ಅವನಿಗೆ ಪ್ರಥಮ ಬಹುಮಾನ ಕೊಡುವುದರ ಬದಲಿಗೆ ಅವರೆಲ್ಲರಿಗೆ ಉದಾರ ಧಣಿಯಾಗಿ ಕಾಣಿಸಿಕೊಳ್ಳುವ ದೇವೇಂದ್ರ ಸುತ್ತೂರನ ಕೋಣಗಳಿಗೆ ಪ್ರಥಮ ಬಹುಮಾನ ನೀಡುವಂತೆ ತೀರ್ಪುಗಾರರ ಮೇಲೆ ಒತ್ತಡ ಹೇರಿ ಬಹುಮಾನ ಪಡೆಯುತ್ತಾನೆ ದೇವೇಂದ್ರನ ಕೋಣಗಳನ್ನು ಸ್ಪರ್ಧೆಗೆ ಇಳಿಸಿದ ಸುಧಾಕರ. ಇದು ಗೊತ್ತಾದ ಕೂಡಲೇ ಅವನೊಂದಿಗೆ ಗುದ್ದಾಟಕ್ಕೆ ಇಳಿದ ಶಿವು ಅವನನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಾನೆ. ಇದನ್ನು ನೋಡಿದ ದೇವೇಂದ್ರ ಸುತ್ತೂರು ಶಿವೂಗೇ ಪ್ರಥಮ ಬಹುಮಾನ ಸಲ್ಲುವಂತೆ ಮಾಡುತ್ತಾನೆ. ಇಂಥ ನ್ಯಾಯದ ಪ್ರಶ್ನೆಗಳು ಮುಂದಾದಾಗ ಹೀಗೆ ಗುದ್ದಾಟಕ್ಕೇ ಇಳಿಯುವ ಶಿವೂನಂಥ ಕಾಡುಜನರು ಒಂದು ಕಡೆ ಇದ್ದಾರೆ. 

ಸರ್ಕಾರದ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಬೇಲಿ ಹಾಕುವ, ತನ್ನ ಅನುಮತಿಯಿಲ್ಲದೆ ಕಾಡಿನಿಂದ ಒಂದು ಹುಲ್ಲುಕಡ್ಡಿಯನ್ನೂ ಒಯ್ಯಬಾರದು ಎಂದು ಕಾಡಿನ ಜನರನ್ನು ನಿರ್ಬಂಧಿಸುವ, ಅನಧಿಕೃತವಾಗಿ ಹಂದಿ, ಜಿಂಕೆಗಳನ್ನು ಬೇಟೆಯಾಡಿದರೆ, ಮರಗಳನ್ನು ಕಡಿದು ಸಾಗಿಸಿದರೆ ಅಂಥವರನ್ನು ಹಿಡಿದು ಜೈಲಿಗೆ ಹಾಕಲು ಮುಂದಾಗುವ‌, ಕಾಡು ತಮ್ಮ ಹಕ್ಕಿನ ವಾಸಸ್ಥಾನ ಎಂದು ಹೊಡೆದಾಟಕ್ಕೆ ಇಳಿಯುವ ಕಾಡಿನ ಜನರನ್ನು ಮಣಿಸಲೇಬೇಕು ಎಂದು ಹೊಡೆದಾಡುವ ಸರ್ಕಾರಿ ಜನ ಇನ್ನೊಂದು ಕಡೆ ಇದ್ದಾರೆ. 

ತನ್ನ ಪಿತ್ರಾರ್ಜಿತ ಕಾಡು-ಭೂಮಿಯನ್ನು ದೈವದ ಹೆಸರಿನಲ್ಲಿ ತಮ್ಮದನ್ನಾಗಿಸಿಕೊಂಡು ಅದರ ಮೇಲೆ ತಮ್ಮ ಹಕ್ಕನ್ನು ಅನಧಿಕೃತವಾಗಿ ಪ್ರತಿಪಾದಿಸುವವರಿಂದ ಹೇಗಾದರೂ ತನ್ನದನ್ನಾಗಿಸಿಕೊಳ್ಳಲೇಬೇಕು ಎಂದು ಮೋಸದ ದಾರಿಯನ್ನು ಹಿಡಿಯುವ, ಮೋಸ ಬಯಲಾಗಿ ಕಾಡಿನ ಜನ ತಮ್ಮ ನಾಯಕ ಶಿವೂನೊಂದಿಗೆ ತನ್ನ ಮೇಲೆ ಧಾಳಿ ಮಾಡಲು ಬಂದಾಗ ಅವರ ಮನೆಗಳಿಗೆಲ್ಲ ಬೆಂಕಿ ಹಾಕಿಸುವ, ಕೋವಿಯಿಂದ ಪ್ರಾಣಿಗಳನ್ನು ಬೇಟೆಯಾಡಿದಂತೆ ಕಾಡಿನ ಜನರನ್ನು ಬೇಟೆಯಾಡುವ ದೇವೇಂದ್ರ ಸುತ್ತೂರು ಮತ್ತು ಅವನ ಚೇಲಗಳು ಮತ್ತೊಂದೆಡೆ ಇದ್ದಾರೆ. 

ಹೀಗೆ ಸದಾ ಹೊಡೆದಾಟ ಬಡಿದಾಟಗಳಲ್ಲೇ ಜೀವನ ನಡೆಸುವ ಜನರನ್ನು ಸಮಾಧಾನದ ಮನಸ್ಥಿತಿಯ ಜನರನ್ನಾಗಿ ಪರಿವರ್ತಿಸುವುದು ಯಾವುದು? ದೈವವೋ, ಕಾನೂನುಪಾಲನೆಯೋ? ಅಥವಾ ಎರಡೂನೋ? 

ಕಾಡುಜನರು ಅನುಭವಿಸುತ್ತಿರುವ ಜಾಗ ತನ್ನದು, ಅದನ್ನು ಅವರು ತನಗೆ ಹಿಂದಿರುಗಿಸಬೇಕು ಎಂದು ರಾಜನ ಮುಂದಿನ ತಲೆಮಾರಿನವನು ಒತ್ತಾಯಿಸಿದಾಗ ದೈವ ಈಗಾಗಲೇ ಅನುಭವಿಸುತ್ತಿರುವ ಮನಶ್ಶಾಂತಿಯನ್ನು ಹಿಂದಿರುಗಿಸಿದರೆ ಭೂಮಿಯನ್ನು ಹಿಂದಿರುಗಿಸಬಹುದು ಎಂದು ಉತ್ತರಿಸುತ್ತದೆ. ಈ ಮಾತು ದೈವದ್ದೋ, ದೈವದ ವೇಷ ಹಾಕಿದ ಪಾತ್ರಿಯದೋ ಎಂದು ವ್ಯಂಗ್ಯವಾಡಿದ ಆ ಹಕ್ಕುದಾರ ಕೋರ್ಟಿನ ಮೂಲಕವೇ ಅದನ್ನು ತನ್ನದಾಗಿಸಿಕೊಳ್ಳುತ್ತೇನೆ ಎಂದು ಹೊರಟದ್ದಕ್ಕೆ ದೈವ ಈ ಮುಂಚೆ ಹೇಳಿದ್ದ ಹಾಗೆ ಅವನು ರಕ್ತ ಕಾರಿ ಸಾಯುತ್ತಾನೆ. ಆದರೆ ಸರ್ಕಾರದ ಪ್ರತಿನಿಧಿಯಾದ ಮುರಲೀಧರನು ಆ ಭೂಮಿ ಸರ್ಕಾರಕ್ಕೆ ಸೇರಿದುದು ಎಂದು ಬೇಲಿಯನ್ನು ಹಾಕಿಸಿ ಹಕ್ಕುದಾರಿಕೆಯನ್ನು ಪ್ರತಿಷ್ಠಾಪಿಸಿದರೆ ದೈವ ಒಂದೂ ಮಾತನಾಡುವುದಿಲ್ಲ. ಯಾಕೆ? ಮುರಲೀಧರ ಸ್ವಾರ್ಥದ ಭಾವವಿಲ್ಲದ ನ್ಯಾಯ ಪರಿಪಾಲಕನೆಂದೇ? ಅವನನ್ನು ತನ್ನ ದಿಕ್ಕಿನಲ್ಲಿ ಕರೆದೊಯ್ಯಬಹುದೆಂದು ದೈವಕ್ಕೆ ಭರವಸೆ ಅಥವಾ ಸಾಮರ್ಥ್ಯ ಇತ್ತು ಎಂದೇ? 

ಸರ್ಕಾರಕ್ಕೆ ಮನವಿ ಸಲ್ಲಿಸಿ ಕಾಡಿನಲ್ಲಿ ಬದುಕುಳಿಯುವ ಹಕ್ಕನ್ನು ಪಡೆದುಕೊಳ್ಳಬಹುದು ಎಂದು ಫಾರೆಸ್ಟ್‌ ಆಫೀಸರ್ ಕಾಡಿನಜನರಿಗೆ ಸೂಚಿಸಿದುದನ್ನು ದೈವ ಒಪ್ಪಿಕೊಂಡಿತು ಎನ್ನುವಂತೆ ಕಾಡಿನ ಜನರ ಕೈಗಳನ್ನು ಫಾರೆಸ್ಟ್‌ ಆಫೀಸರಿನ ಕೈಗಳೊಂದಿಗೆ ಸೇರಿಸುವುದು ಸಿನೆಮಾದ ಪ್ರಧಾನ ಸಮಸ್ಯೆಯಾದ ಹಕ್ಕುದಾರಿಕೆಯ ಬಿಕ್ಕಟ್ಟನ್ನು ಅಂತಿಮವಾಗಿ ಪರಿಹರಿಸುತ್ತದೆ. ಆದರೆ ಹಲವು ಆಯಾಮಗಳ ಬದುಕಿಗೆ ಒಂದು ರೂಪಕದಂತೆ ತೋರುವ ಸಿನೆಮಾ ಹಲವು ಮುಖದ ಚರ್ಚೆಗೆ, ಒಂದು ವೈಚಾರಿಕ ಮತ್ತು ಭಾವುಕ ಚಿಂತನೆಗೆ ಗ್ರಾಸವಾಗಿಯೇ ಉಳಿಯುತ್ತದೆ. 

ಜನ ಯಾವ ಯಾವ ಕಾರಣಕ್ಕಾಗಿಯಾದರೂ ಸಿನೆಮಾವನ್ನು ಒಂದಕ್ಕಿಂತ ಹೆಚ್ಚು ಬಾರಿ ನೋಡಲಿ ರಿಷಬ್‌ ಶೆಟ್ಟಿಯವರಂತೂ ಹಣದ ಸುರಿಮಳೆ-ಜಡಿಮಳೆಯಲ್ಲಿ ತೊಯ್ದುತೊಪ್ಪೆ!  

-ಪದ್ಮಿನಿ ಹೆಗಡೆ, ಮೈಸೂರು

4 Responses

  1. ಕಾಂತಾರ ಸಿನಿಮಾ ವಿಶ್ಲೇಷಣೆ ಬಹಳ ಸೊಗಸಾಗಿ ಮೂಡಿಬಂದಿದೆ… ಧನ್ಯವಾದಗಳು ಮೇಡಂ

  2. ನಯನ ಬಜಕೂಡ್ಲು says:

    Beautiful

  3. ಶಂಕರಿ ಶರ್ಮ says:

    ಅಭೂತಪೂರ್ವ ಯಶಸ್ಸನ್ನು ಗಳಿಸಿದ ಕಾಂತಾರ ಸಿನಿಮಾದ ಕಥಾವಿಮರ್ಶೆಯು ಬಹಳ ಇಷ್ಟವಾಯ್ತು!

  4. Padmini Hegde says:

    ಆತ್ಮೀಯ ಬಿ.ಆರ್.‌ ನಾಗರತ್ನ ಮೇಡಂಗೆ, ನಯನ ಬಜಕೂಡ್ಲು ಮೇಡಂಗೆ, ಶಂಕರಿಮಶರ್ಮ ಮೇಡಂಗೆ, ಎಲ್ಲಾ ಅನಾಮಿಕ ಓದುಗರಿಗೆ ಹೃತ್ಪೂರ್ವಕ ವಂದನೆಗಳು

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: