ಬಾಲ್ಯದ ನೆನಪು

Share Button


ಇದು ಸುಮಾರು 1968-69 ನೇ ಸಾಲಿನಲ್ಲಿ ನಡೆದ ಒಂದು ಘಟನೆ.  ಪೇಟೆ ಬೀದಿಯಲ್ಲಿರುವ ಸರ್ಕಾರೀ ಅನುದಾನಿತ ವಿದ್ಯಾಸಂಸ್ಥೆಯೊಂದರ ವಿಶಾಲವಾದ ಅಂಗಳದಲ್ಲಿ ಮೂರು ವಾರಗಳ ಕಾಲ ಆಗ ಪ್ರಖ್ಯಾತರಾಗಿದ್ದ ಜನಾಕರ್ಷಕರಾಗಿದ್ದ, ದೇಶ ವಿದೇಶಗಳಲ್ಲಿ ಉತೃಷ್ಟ ರೀತಿಯಲ್ಲಿ  ಸಾಮಾನ್ಯರಲ್ಲಿ ಸಾಮಾನ್ಯ ಜನಕ್ಕೂ ಮನ ಮುಟ್ಟುವಂತೆ ಉಪನ್ಯಾಸ ಮಾಲಿಕೆಗಳನ್ನು ನೀಡುತ್ತಿದ್ದ ಶ್ರೀಯುತ ಭದ್ರಗಿರಿ ಕೇಶವದಾಸರಿಂದ ಭಾಗವತ ಕಥಾ ಕಾಲಕ್ಷೇಪವು ಸಂಜೆ 6 – 7.30 ಗಂಟೆಯ ತನಕ ನಡೆಯುತಿತ್ತು.  ಮೊದಲ ನಾಲ್ಕಾರು ದಿನಗಳು ಹರಿಕಥೆಗಳಲ್ಲಿ ಆಸಕ್ತಿಯಿದ್ದ ಕೆಲವೇ ಜನರು ಹೋಗುತ್ತಿದ್ದರು.  ಆದರೆ, ಅವರ ಆಕರ್ಷಕ ಶೈಲಿ, ಹೇಳುತ್ತಿದ್ದ ಉಪಕಥೆಗಳು ಸಮಕಾಲೀನವಾಗಿಯೂ, ಭಾಗವತದ ಸಾರವನ್ನು ಅರಿಯಬೇಕಿರುವುದರ ಅಗತ್ಯ ಹಾಗೂ ತಮ್ಮ ದೇಶ ವಿದೇಶಗಳ ಪರ್ಯಟನೆಯ ಅನುಭವಗಳನ್ನು ಬೆರೆಸಿ ಪ್ರಸ್ತುತ ಪಡಿಸುತ್ತಿದ್ದ ಶೈಲಿ ಕಿವಿಯಿಂದ ಕಿವಿಗೆ ತಲುಪಿ, ಎಲ್ಲ ವಯಸ್ಸಿನವರೂ, ಎಲ್ಲ ಜನಾಂಗದವರೂ ಉಪನ್ಯಾಸ ಆರಂಭವಾಗುವ ಹಲವಾರು ನಿಮಿಷಗಳ ಮುಂಚೆಯೇ ನೆರೆಯುವಂತೆ ಮಾಡುತಿತ್ತು.  ಅಷ್ಟು ವಿಶಾಲವಾದ  ಅಂಗಳವಾದರೂ ಜನರು ಕಿಕ್ಕಿರಿದು ಸೇರುತ್ತಿದ್ದರು.  ಅವರ ವಾಕ್‌ ಪ್ರವಾಹದ ಶೈಲಿಯಿಂದಾಗಿ ಅಷ್ಟು ಜನರಿದ್ದರೂ ಅಲ್ಲಿ ಸೂಜಿ ಬಿದ್ದರೂ ಶಬ್ಧ ಕೇಳುವಷ್ಟು ನಿಶ್ಯಬ್ಧವಾಗಿರುತಿತ್ತು.  ಜನರು ತಲ್ಲೀನರಾಗಿ ಆಲಿಸುತ್ತಿದ್ದರು.  ಅರ್ಧ ಊರೇ ಅಲ್ಲಿ ನೆರೆದಿದೆಯೇನೋ ಎಂಬಂತೆ ಸುತ್ತ ಮುತ್ತಲಿನ ಬಡಾವಣೆಗಳಲ್ಲಿ ಜನ ಸಂಚಾರವೇ ವಿರಳವಾಗಿರುತಿತ್ತು. 

6-8 ನಿಮಿಷಗಳಷ್ಟು ನಡಿಗೆಯ ದೂರದಲ್ಲಿ ವಾಸವಿದ್ದ ಕಮಲಮ್ಮನವರೂ ತಮ್ಮ ಅಕ್ಕಪಕ್ಕದ ಮನೆಯವರುಗಳೊಂದಿಗೆ ಹೋಗಿ ಬರುತ್ತಿದ್ದರು.  ಉಪನ್ಯಾಸ ಮುಗಿದ ನಂತರ ಅವರಿವರುಗಳೊಂದಿಗೆ ಅಂದಿನ ಉಪನ್ಯಾಸದ ವಿಷಯಗಳ ಬಗ್ಗೆ ಚರ್ಚೆ, ವಿಮರ್ಶೆ ಮಾಡುತ್ತಾ, ಅನುಮಾನಗಳನ್ನು ಪರಿಹರಿಸಿಕೊಳ್ಳುತ್ತಾ ಸುಮಾರು 8 ಗಂಟೆಯ ಹೊತ್ತಿಗೆ ಮನೆ ತಲುಪುತ್ತಿದ್ದರು.  ಅವರ ಪತಿ ನರಸಿಂಹಯ್ಯನವರು ಸಹಕಾರಿ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದರು.  ಸುಮಾರು8.30- 8.45 ರ ಹೊತ್ತಿಗೆ ಬರುತ್ತಿದ್ದರು.  ಅವರುಗಳಿಗೆ ಇಬ್ಬರು ಮಕ್ಕಳು.  ಮೊದಲನೆಯವನು ಮಗ, ಈಗಷ್ಟೇ ವಿದ್ಯಾಭ್ಯಾಸ ಮುಗಿಸಿ, ಪರಊರಿನಲ್ಲಿ ನೌಕರಿಯಲ್ಲಿದ್ದರೆ, ಎರಡನೆಯವಳು ಮಗಳೂ, ಈಗಷ್ಟೇ ಹೈಸ್ಕೂಲು 9 ನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.  ಹಿಂದಿನ ಕಾಲದ ರೀತಿ ರಿವಾಜುಗಳಂತೆ, ಆರೆಂಟು ತಿಂಗಳುಗಳ ಹಿಂದಷ್ಟೇ ಋತುಮತಿಯಾದ ಮುಗ್ಧ ಹುಡುಗಿಯನ್ನು ಮನೆಯಲ್ಲಿ ಒಬ್ಬಳನ್ನೇ ಬಿಟ್ಟು ಹರಿಕಥೆ, ಪುರಾಣ, ಉಪನ್ಯಾಸಗಳೆಂದು ಹೋಗುವುದು ಬೇಡವೆಂದುಕೊಂಡರೂ, ದಾಸರ ಉಪನ್ಯಾಸದ ಆಕರ್ಷಕ ಶೈಲಿಗೆ ಮಾರುಹೋಗಿ, ಮಗಳಿಗೆ ಸಾಕಷ್ಟು ಬುದ್ಧಿಮಾತುಗಳನ್ನು ಹೇಳಿ, ಗೆಳತಿಯರುಗಳೊಂದಿಗೆ ಆಟ ಮುಗಿಸಿದ ತಕ್ಷಣ ಮನೆಗೆ ಬಂದು ಬಾಗಿಲನ್ನು ಸರಿಯಾಗಿ ಭದ್ರಪಡಿಸಿಕೊಂಡು ಪಾಠಪ್ರವಚನಗಳಲ್ಲಿ ತೊಡಗಿರಬೇಕೆಂದು ತಿಳಿಸಿ, ಸಾಕಷ್ಟು ಎಚ್ಚರಿಕೆಗಳನ್ನು ಕೊಟ್ಟು ಹೋಗತೊಡಗಿದರು.

8-10 ದಿನಗಳ ಪ್ರವಚನ ಸರಾಗವಾಗಿ ಸಾಗಿತು.  ಅದೊಂದು ದಿನ ಪ್ರವಚನ ಎಂದಿನಂತೆ ಮುಗಿಸಿ ಮನೆಗೆ ಬಂದು ಬಾಗಿಲು ಎಷ್ಟೇ ಬಡಿದರೂ ಮಗಳು ಬಾಗಿಲು ತೆರೆಯದಿದ್ದುದನ್ನು ನೋಡಿ ಕಮಲಮ್ಮನವರು ಗಾಭರಿಯಾದರು.  ಅಕ್ಕಪಕ್ಕದವರೆಲ್ಲಾ ಸೇರ ತೊಡಗಿದರು.  ಎಷ್ಟೇ ಬಾಗಿಲು ಬಡಿದರೂ, ಯಾರ್ಯಾರು ಯಾವ ಯಾವ ರೀತಿ ಕೂಗಿದರೂ ಬಾಗಿಲನ್ನು ತೆರೆಯಲೇ ಇಲ್ಲ. ಅವಳ ಗೆಳತಿಯರನ್ನು ವಿಚಾರಿಸಲಾಗಿ, ಎಂದಿನಂತೆ ಆಟ ಆಡಿಕೊಂಡು ಅವಳು ಮನೆಗೆ ಹೋದದ್ದಾಗಿ ತಿಳಿಸಿದರು.  ಸಮಯ ನೋಡಿಕೊಂಡರೆ ಇನ್ನೂ 8 ಗಂಟೆ 15 ನಿಮಿಷಗಳಾಗಿದೆ.  ಇವರುಗಳ ಗಾಭರಿ, ಆತಂಕಗಳನ್ನು ನೋಡಿ ಇನ್ನೂ ಒಬೊಬ್ಬರೇ ಜನ ಸೇರತೊಡಗಿದರು.  ಆಗ, ಈಗಿನಂತೆ, ಫೋನು ಗೀನುಗಳು ಸರಾಗವಾಗಿ ಸಿಗುತ್ತಿರಲಿಲ್ಲ.  ಊಹುಂ,   ಬಾಗಿಲನ್ನು ತಟ್ಟಿದರೂ, ಕುಟ್ಟಿದರೂ ಉಭ ಇಲ್ಲ, ಶುಭ ಇಲ್ಲ.  ಹಿಂದಿನ ಬಾಗಿಲಿನಿಂದ ಕೂಗಿದರೂ ಏನೂ ಪ್ರಯೋಜನವಾಗಲಿಲ್ಲ.  ಆಗೆಲ್ಲ ಇರುತ್ತಿದ್ದುದ್ದು ಸಾಲು ಮನೆಗಳಾದ ಕಾರಣ, ಈ ಮನೆಯಲ್ಲಿ ಸ್ವಲ್ಪ ಜೋರಾಗಿ ಪಿಸುಗುಟ್ಟಿದರೂ ಒಂದೇ ಗೋಡೆಯ ಆಚೆಯಿದ್ದ ಕಾರಣ, ಪಕ್ಕದ ಮನೆಗೆ ಕೇಳಿಸುತಿತ್ತು.  ಹಾಗಾಗಿ, ಅಕ್ಕಪಕ್ಕಗಳ ಮನೆಯವರುಗಳು ಅವರ ಮನೆಗಳೊಳಗೆ ಹೋಗಿ ಗೋಡೆಗೆ ಆತು ಎಷ್ಟು ಗಟ್ಟಿಯಾಗಿ ಕೂಗಿದರೂ ಇಲ್ಲ, ಕರೆದರೂ ಇಲ್ಲ.  ಹೊತ್ತಾಗುತ್ತಾ, ಆಗುತ್ತಾ ಕಮಲಮ್ಮನವರ ಜಂಘಾಬಲವೇ ಉಡುಗಲು ಪ್ರಾರಂಭವಾಯಿತು.  ಹತ್ತಿರದ ಎಲೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಆಳು ಕಾಳುಗಳೂ ಆ ರಸ್ತೆಯಲ್ಲಿಯೇ ಮನೆಗೆ ಹೋಗುತ್ತಿದ್ದವರುಗಳು ನಿಂತು, ಎಲ್ಲರೂ ಅವರವರಿಗೆ ತೋಚಿದ ಒಂದೊಂದೇ ಸಲಹೆ, ಸೂಚನೆಗಳನ್ನು ಕೊಡುವುದಲ್ಲದೆ, ಏನೇನೋ ಸಂಶಯಗಳನ್ನೂ ವ್ಯಕ್ತಪಡಿಸುತ್ತಿದ್ದರು.

ಅಷ್ಟರಲ್ಲಾಗಲೇ ಸಮಯ8-30 ನ್ನು ದಾಟಿತ್ತು.  ನರಸಿಂಹಯ್ಯನವರು ಬರುತ್ತಾರೆ! ಬೀದಿಯ ತುಂಬಾ ಜನ, ಅದೂ ತಮ್ಮ ಮನೆಯ ಮುಂದೆಯೇ, ವಿಷಯ ತಿಳಿದು ಅವರೂ ಚಿಂತೆಗೀಡಾದರು.

ಅದು ಹಿಂದಿನ ಕಾಲದ ಚಿಕ್ಕ ಚಿಕ್ಕ ಕಿಟಕಿ ಬಾಗಿಲುಗಳನ್ನು ಹೊಂದಿದ ಕುಳ್ಳಗಿನ ನಾಡ ಹೆಂಚಿನ ಮನೆ.  ಇದ್ದ ಒಂದೇ ಒಂದು ಕಿಟಕಿಯನ್ನು ಎಷ್ಟೋ ಹೊತ್ತಿನಿಂದ ನೂಕಿ, ನೂಕಿ ತೆರೆಯಲು ಪ್ರಯತ್ನಿಸುತ್ತಿದ್ದರೂ ಆಗದಿದ್ದುದು, ಒಮ್ಮೆ ಯಾವುದೋ ಕೋನದಲ್ಲಿ ನೂಕಿದಾಗ ಅರೆಬರೆ ತೆರೆದುಕೊಂಡಿತು.  ನೋಡಿದರೆ, ಕಿಟಕಿಗೆ ಚಾಚಿಕೊಂಡಿದ್ದ ರೂಮಿನಿಂದಾಚೆ ಇರುವ ಹಜಾರದ ಸೋಫಾದ ಮೇಲೆ ಬೋರಲಾಗಿ ಮಗಳು ಬಿದ್ದಿದ್ದಾಳೆ.  ಒಂದು ಕೈ ಸೋಫಾದಿಂದ ಕೆಳಗೆ ಜೋತು ಬಿದ್ದಿದೆ.  ಮೈಮೇಲೆ ಬಿಳಿಯ ವಸ್ತ್ರವೊಂದನ್ನು ಹೊದ್ದಿಸಿದಂತೆ ಕಾಣುತ್ತಿದೆ.  ಎಲ್ಲರಿಗೂ ಏನೋ, ಕೊಲೆಯೋ, ಮತ್ತೊಂದೋ ನಡೆದಿದೆಯೆನ್ನುವ ಸಂಶಯ.  ಕಮಲಮ್ಮನವರು ತಲೆಯ ಮೇಲೆ ಕೈ ಹೋತ್ತು ಭೋರೆಂದು ಅಳುತ್ತಾ ಕುಳಿತುಬಿಟ್ಟರು.  ಕೆಲವು ಘಳಿಗೆ ದಿಗ್ಭ್ರಾಂತರಾಗಿ, ಮಂಕಾಗಿ ನಿಂತಿದ್ದ ನರಸಿಂಹಯ್ಯನವರೇ ಸುಧಾರಿಸಿಕೊಳ್ಳುತ್ತಾ, ಇನ್ನೂ ಈ ಆತಂಕದಲ್ಲಿ ಹೊತ್ತು ಕಳೆಯುವುದರಲ್ಲಿ ಅರ್ಥವಿಲ್ಲ, ಬಾಗಿಲನ್ನು ಒಡೆಯೋಣವೆಂದು ನಿರ್ಧರಿಸಿದಾಗ, ಅಕ್ಕ ಪಕ್ಕದ ಕೆಲವು ಶಕ್ತಿವಂತ ಪುರುಷರು ಹಾರೆ, ಸಲಾಕೆಗಳನ್ನು ತಂದು ಮೀಟಿದಾಗಲೂ ಹಿಂದಿನ ಕಾಲದ ಗಟ್ಟಿಯಾದ ಬಾಗಿಲು ತೆರೆಯಲಾಗಲೇ ಇಲ್ಲ. 

ಅಷ್ಟರಲ್ಲೇ ಪಕ್ಕದ ಮನೆಯ ವಿಶ್ವೇಶ್ವರ – ಇರಿ, ಇದು ಆಗುವ ಹೋಗುವ ಮಾತಲ್ಲ- ಎನ್ನುತ್ತಾ, ಹಿಂದಿನ ಬೀದಿಯ ವಿಠೋಬಾರಾಯರ ಮನೆಯಿಂದ ಏಣಿಯನ್ನು ತಂದು ಹೆಂಚಿನ ಮೇಲೆ ಹತ್ತಿ ನಾಲ್ಕಾರು ಹೆಂಚುಗಳನ್ನು ಸರಿಸಿ, ಉದ್ದನೆಯ ಕೋಲನ್ನು ಕೆಳಗಿಳಿಸಿ ಒಳಗಿನಿಂದ ಬಾಗಿಲಿನ ಚಿಲಕವನ್ನು ತೆಗೆಯಲು ಪ್ರಯತ್ನಿಸಿದಾಗಲೂ ಸಾಧ್ಯವಾಗದಿದ್ದಾಗ, ಮುಂದಿನ ಮನೆಯ ಶ್ಯಾಮಸುಂದರ ಮನೆಯಲ್ಲಿದ್ದ ಗರಗಸವನ್ನು ತರಿಸಿ ಮೇಲೆ ಏರಿ ಹೆಂಚುಗಳನ್ನು ಸರಿಸಿದ್ದ ಜಾಗದಲ್ಲಿದ್ದ ಗಳುಗಳ ಚಪ್ಪರವನ್ನು ಗರಗರನೆ, ಒಬ್ಬ ಮನುಷ್ಯ ಒಳಗೆ ಇಳಿಯುವಷ್ಟು ಕೊಯ್ದು, ಏಣಿಯನ್ನು ಒಳಗೆ ಇಳಿಸಿ, ಅದರ ಮುಖಾಂತರ ತಾವೂ ಇಳಿದು ಬಾಗಿಲಿನ ಚಿಲಕವನ್ನು ತೆರೆದಾಗ, ಬೀದಿಯ ತುಂಬಾ ನೆರೆದಿದ್ದ ಜನೋಸ್ಥಮದಲ್ಲಿ ಮುಖ್ಯವಾದ ಕೆಲವರು, ಅಂದರೆ ನರಸಿಂಹಯ್ಯನವರು, ವಿಶ್ವೇಶ್ವರ ಅವರು, ಶ್ಯಾಮ ಸುಂದರ ಅವರು ಕಮಲಮ್ಮನವರು ತಮ್ಮ ಆಪ್ತ ಸ್ನೇಹಿತೆ ಸರೋಜಮ್ಮನವರೊಡಗೂಡಿ ಒಳ ಹೋದರೆ, ಮಗಳು ಒಂದೇ ಭಂಗಿಯಲ್ಲಿ ಇದದ್ದು ಕಂಡು, ಎಲ್ಲರೂ ಗಾಭರಿಯಾದರು.  ಒಳಗೆ ಯಾರು ಸೇರಿಕೊಂಡಿದ್ದಾರೋ, ಮಗು ಬದುಕಿದ್ದಾಳೋ ಇಲ್ಲವೋ ಎಂದು ಯೋಚಿಸುತ್ತಾ ಮನಸ್ಸಿನ ಸಂಕಟ, ತುಮುಲ, ಕುತೂಹಲಗಳನ್ನು ಹತ್ತಿಕ್ಕುತ್ತಾ ಕಮಲಮ್ಮನವರು ಜೋರಾಗಿ ಅಲುಗಾಡಿಸುತ್ತಾ ಕೂಗಿ ಕೂಗಿ ಕರೆದಾಗ, ಮಗಳು ಆಗ ತಾನೇ ಅರಳುವ ಮೊಗ್ಗಿನಂತೆ ನಿಧಾನವಾಗಿ ಕಣ್ಣುಗಳನ್ನು ತೆರೆದಳು.  ಯಾವ ಲೋಕದಲ್ಲಿದ್ದೇನೆ ಎಂಬುದರ ಪರಿವೆಯೇ ಇಲ್ಲದೆ ನಿಧಾನವಾಗಿ ಸುತ್ತ ನೆರೆದವರನ್ನು ನೋಡುತ್ತಾ ಪಿಳಿ ಪಿಳಿ ಕಣ್ಣಾಡಿಸಿದಳು.  

ಕಮಲಮ್ಮನವರಲ್ಲಿದ್ದ ಅರ್ಧ ಆತಂಕ ಕಡಿಮೆಯಾಗಿ ಆ ಜಾಗವನ್ನು ಕೋಪ ಆವರಿಸಿಕೊಂಡಿತು –

ಎದ್ದೇಳೇ ಮೇಲೆ, ಯಾಕೆ ಹೀಗೆ ಹೊತ್ತಲ್ಲದ ಹೊತ್ತಿನಲ್ಲಿ ಬಿದ್ದುಕೊಂಡಿದ್ದೀಯಾ – ಎಂದು ಜೋರಾಗಿ ಕಿರುಚಿದಾಗ,

ಗಾಭರಿಯಿಂದ ಮೇಲೆದ್ದ ಕುಳಿತ ಮಗಳು, ಮುಗ್ಧವಾಗಿ –

ನೀನು ಪುರಾಣಕ್ಕೆ ಹೋಗಿದ್ದಾಗ, ನಾನು ಆಟಕ್ಕೆ ಹೋಗಿದ್ದೆನಾ, ಆಟ ಆಡಿ ಮನೆಗೆ ಬಂದಾಗ ನಂಗೆ ಸೀರೆ ಉಟ್ಕೋಬೇಕು ಅನ್ನಿಸ್ತು, ಆದ್ರೆ ನಿಂದು ತುಂಬಾ ಉದ್ದ, ಅದಕ್ಕೆ ಅಪ್ಪನ ಪಂಚೆಲೇ ಸೀರೆ ಉಟ್ಕೊಂಡೆ, ಕನ್ನಡಿ ನೋಡ್ಕೊಂಡೆ, ಚೆನ್ನಾಗಿ ಕಾಣಿಸ್ತು, ಅದಕ್ಕ ಮುಖ ತೊಳ್ಕೊಂಡು ಮತ್ತೆ ಚೆನ್ನಾಗಿ ಡ್ರೆಸ್‌ ಮಾಡ್ಕೊಂಡೆ, ಆಮೇಲೆ ನೀನು ಕಲ್ಸಿ ಇಟ್ಟಿದ್ದ ಹುರಿಹಿಟ್ಟು, ಬಾಳೆ ಹಣ್ಣು ತಿಂದು, ಹಾಲು ಕುಡಿದು, ಓದ್ಕೋಳೋಣ ಅಂದ್ಕೊಂಡು ಟೈಂ ನೋಡ್ದೆ, ಆಗಲೇ ಏಳೂಕಾಲು ಆಗಿತ್ತು, ಈವತ್ತು ತುಂಬಾ ಆಟ ಆಡಿ  ಸುಸ್ತು ಆಗಿತ್ತು, ಅದಕ್ಕೆ ನೀನು ಬರೋ ತನಕ ಕಾಲೇ ಕಾಲು ಗಂಟೆ ಮಲಕ್ಕೊಂಡು, ಎದ್ದು ಬಿಡೋಣ ಅಂದ್ಕೊಂಡ್ರೆ, ಹಾಗೇ ಚನ್ನಾಗಿ ನಿದ್ದೆ ಬಂದು ಬಿಡ್ತು, ಅಷ್ಟೆ, ಅದಕ್ಯಾಕಮ್ಮ ಅಷ್ಟೊಂದು ಬೈತೀಯ, ಅದು ಸರಿ, ಇವರೆಲ್ಲಾ ಎಷ್ಟೊಂದು ಜನ ಯಾಕೆ ಬಂದಿದ್ದಾರೆ? – ಎಂದು ಮುಗ್ಧವಾಗಿ ಕೇಳಿದಾಗ,

ನೆರೆದಿದ್ದವರೆಲ್ಲಾ ಗೊಳ್‌ ಎಂದು ನಗಲಾಗಿ, ಕಮಲಮ್ಮನವರು ಅಳುವುದೋ, ನಗುವುದೋ ತಿಳಿಯದೆ ಕುರ್ಚಿಯ ಮೇಲೆ ದೊಪ್‌ ಎಂದು ಕುಕ್ಕರಿಸಿ ಕುಳಿತರು.

-ಪದ್ಮಾ ಆನಂದ್‌ , ಮೈಸೂರು                      

12 Responses

  1. Padma Anand says:

    ಲೇಖನವನ್ನು ಪ್ರಕಟಿಸಿದ್ದಕ್ಕಾಗಿ “ಸುರಹೊನ್ನೆ” ಗೆ ಧನ್ಯವಾದಗಳು.

  2. ನಿದ್ರಾದೇವಿಯ ಪರವಶತೆ ಹಾಗೂ ಬಾಲಕಿಯ ಮುಗ್ದತೆ..ಅಲ್ಲದೆ ಆ ಪರಿಸ್ಥಿತಿ ಯಲ್ಲಿ ಹೆತ್ತವರ ಅತಂಕ ಸುತ್ತಲಿನ ಜನರ ಅನಿಸಿಕೆ ಸಹಾಯ ಎಲ್ಲವೂ ಈ ಲೇಖನದಲ್ಲಿ ಸೊಗಸಾಗಿ…ನಿರೂಪಿಸಿರುವ ..ಪದ್ಮಾಮೇಡಂ ಅವರಿಗೆ..ಧನ್ಯವಾದಗಳು..

    • Padma Anand says:

      ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ವಂದನೆಗಳು.

  3. padmini kadambi says:

    ಪ್ರಹಸನ ಮಜವಾಗಿದೆ

  4. ನಯನ ಬಜಕೂಡ್ಲು says:

    ಸೊಗಸಾಗಿದೆ.

  5. Hema says:

    ಬರಹ ಮುದ ಕೊಟ್ಟಿತು. ಬಾಲಕಿಯ ನಿದ್ದೆಯಿಂದಾದ ಅವಾಂತರ ಸ್ವಾರಸ್ಯಕರವಾಗಿದೆ ಹಾಗೂ ನಿಮ್ಮ ನಿರೂಪಣೆ ಸೂಪರ್ ..

  6. ಶಂಕರಿ ಶರ್ಮ says:

    ಗಾಢವಾದ ನಿದ್ರೆಯ ಕರಾಮತ್ತು ನೋಡಿ ನಗು ಬಂದರೂ, ಕಮಲಮ್ಮನವರಿಗೆ ಆಗಿರಬಹುದಾದಂತಹ ಆತಂಕ ನನ್ನನ್ನೂ ಬಾಧಿಸಿತು!

  7. ಭಾವಪೂರ್ಣವಾದ ಪ್ರಸಂಗವನ್ನು ಸೊಗಸಾಗಿ ನಿರೂಪಿಸಿದ್ದೀರಿ ಧನ್ಯವಾದಗಳು

  8. ಮಂಜುರಾಜ್ಮೈಸೂರು (H N Manjuraj) says:

    ವಿನೋದ ಬರೆಹ ಚೆನ್ನಾಗಿದೆ. ಮೊದಲಿಗೇ ಉಸಿರು ಬಿಗಿ ಹಿಡಿದು ಓದಿದರೆ ಬರು ಬರುತ್ತಾ ಅದೇ ಉಸಿರು ನಿರಾಳವಾಗಿ ಮುಖ ಅರಳತೊಡಗಿತು. ಇದೇ ಲಾಲಿತ್ಯ ಮತ್ತು ಸಾಂಗತ್ಯ. ಇಂಥವೂ ಬೇಕು ಬಿಗಿದ ನರಗಳ ಸಡಿಲತೆಗೆ, ಮುಖ ಊದಿದವರ ನಗೆಗೆ……

    ಪದ್ಮಾ ಆನಂದರ ಕತೆಗಾರಿಕೆಯ ಶೈಲಿ ಓದಿಸಿಕೊಂಡು ಹೋಯಿತು. ಎಲ್ಲಿಯೂ ನಿಲ್ಲದ ವೇಗದೂತದ ಬಸ್ಸಿನಂತೆ. ಇಂಥವು ಅವರೆಕಾಳು ಉಪ್ಪಿಟ್ಟಿನಲ್ಲಿ ಸಿಗುವ ಸಣ್ಣ ಸಾಸುವೆ ಮತ್ತು ಹದವಾಗಿ ಕರಿದ ಕಡಲೆಬೇಳೆ ಮತ್ತು ಉದ್ದಿನಬೇಳೆಯ ತೆರದಿ ರುಚಿಯನೀವ ಸರಕು. ಒತ್ತಡದ ಬದುಕಿಗೆ ಇಂಥವು ಬೇಕು. ಬರೆದ ಪದ್ಮಾ ಅವರಿಗೆ ಪ್ರಕಟಿಸಿದ ಸುರಹೊನ್ನೆಗೆ ಧನ್ಯವಾದಗಳು.

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: