ವಿದ್ಯುನ್ಮಾನ ತ್ಯಾಜ್ಯಗಳು – ಒಂದು ಚಿಂತನೆ

Share Button


ವಿದ್ಯುನ್ಮಾನ ತ್ಯಾಜ್ಯಗಳ ವಿಶ್ಲೇಷಣೆಗೆ ಮೊದಲು ಇವುಗಳ ಮೂಲದ ಬಗ್ಗೆ ತಿಳಿಯುವುದು ಅವಶ್ಯಕ. ಈ ತ್ಯಾಜ್ಯಗಳು ಪ್ರಧಾನವಾಗಿ ಶೀತಲ ಪೆಟ್ಟಿಗೆ, ಗಣಕಯಂತ್ರ, ದೂರಸಂಪರ್ಕ ಸಾಧನಗಳು, ಗ್ರಾಹಕ ವಿದ್ಯುನ್ಮಾನ ಉಪಕರಣಗಳು, (ಇವುಗಳಲ್ಲಿ ಮೊಬೈಲ್, ಸೋಲಾರ್ ಪರಿಕರಗಳು, ಇಯರ್‌ಫೋನ್, ಟೆಲಿಫೋನ್, ಟೆಲಿವಿಷನ್ ಇತ್ಯಾದಿ), ಎಲ್.ಇ.ಡಿ. ದೀಪಗಳು, ವೆಂಡಿಗ್ ಯಂತ್ರಗಳು ಮೊದಲಾದವು. ಇವುಗಳ ವಿಲೇವಾರಿಗೆ ಹಲವಾರು ವಿಧಾನಗಳಿವೆ. ಇವುಗಳಲ್ಲಿ ಮುಖ್ಯವಾದವು ತ್ಯಾಜ್ಯಗಳನ್ನು ಗುಂಡಿಯಲ್ಲಿ ಮುಚ್ಚುವುದು, ಆಮ್ಲಗಳಿಂದ ವರ್ಗೀಕರಣ, ಕುಲುಮೆಯಲ್ಲಿ ದಹನ ((Inceneration), ಮರುಬಳಕೆ, ಪುನರ್ಚಾಲನೆ ಇತ್ಯಾದಿ. ಈ ತ್ಯಾಜ್ಯಗಳಿಗೆ ಕಾರಣ ಹುಡುಕಿದರೆ ತಕ್ಷಣ ಹೊಳೆಯುವುದು ವಿದ್ಯುನ್ಮಾನ ವಿಭಾಗದಲ್ಲಿರುವ ನಾಗಾಲೋಟದ ಹೊಸ ಆವಿಷ್ಕಾರಗಳು. ಇದರಿಂದ ತ್ಯಾಜ್ಯದ ಗಾತ್ರ ಅಗಾಧವಾಗಿ ಬೆಳೆಯುತ್ತಿದೆ.

ಇನ್ನು ಇದರಿಂದ ಆಗುವ ಅನಾಹುತ ಹಾಗೂ ಪರಿಣಾಮಗಳು ಅಪಾರ. ಮಣ್ಣಿನಲ್ಲಿ ನಂಜು, ನೀರಿನ ಕಲ್ಮಶತೆ, ಸಂಪನ್ಮೂಲಗಳ ಕೊರತೆ, ಮಾನವ ಹಾಗೂ ಪ್ರಾಣಿ ಪಕ್ಷಿಗಳಲ್ಲಿ ಆರೋಗ್ಯ ಸಮಸ್ಯೆ, ಪರಿಸರದಲ್ಲಿ ಏರುಪೇರು ಇತ್ಯಾದಿ.

ಹಲವಾರು ಸಾವಯವ ಪದಾರ್ಥಗಳಿಂದಲೂ ವಿದ್ಯುನ್ಮಾನ ತ್ಯಾಜ್ಯಗಳು ಸೇರಿದರೂ ಮುಖ್ಯವಾಗಿ ಲೋಹ, ಅಲೋಹ, ಲೋಹಾಭಗಳ ಪಾತ್ರವನ್ನು ವಿಶ್ಲೇಷಿಸುವುದು ಅಗತ್ಯವೆನಿಸುತ್ತದೆ. ಭೂಮಿಯಲ್ಲಿ ಅವುಗಳ ಲಭ್ಯತೆ ಕಡಿಮೆಯಾಗುತ್ತಿರುವುದು ಇದಕ್ಕೆ ಮುಖ್ಯ ಕಾರಣ.

ಆವರ್ತಕ ಕೋಷ್ಠಕ (Periodic Table) ನಲ್ಲಿರುವ 118 ಧಾತುಗಳಲ್ಲಿ 44 (ಅಂದರೆ ಶೇಕಡ 40) ರಷ್ಟು ಧಾತುಗಳು ತೀವ್ರ ಕೊರತೆಯನ್ನು ಮುಂದಿನ ಕೆಲವು ವರ್ಷಗಳಲ್ಲಿ ಕಾಣಬಹುದು ಎಂಬುದು ವಿಜ್ಞಾನಿಗಳ ಅನಿಸಿಕೆ. ಇದರಲ್ಲಿ ಸುಮಾರು 30 ರಿಂದ 40 ಧಾತುಗಳು ಸ್ಮಾರ್ಟ್ ಫೋನ್ ಹಾಗೂ ಇನ್ನಿತರ ವಿದ್ಯುನ್ಮಾನ ಪರಿಕರಗಳಲ್ಲಿ ಇದೆ ಎಂದರೆ ಇದರ ತೀವ್ರತೆ ಅರಿವಾದೀತು. ಒಂದು ವರದಿಯ ಪ್ರಕಾರ ಜಗತ್ತಿನಲ್ಲಿರುವ ಉಪಯೋಗಕ್ಕೆ ಬರದಂಥಹ ವಿದ್ಯುನ್ಮಾನ ಉಪಕರಣಗಳು ಅಥವಾ ತ್ಯಾಜ್ಯಗಳು 2021 ನೇ ವರ್ಷದ ಪ್ರಕಾರ 57 ಮಿಲಿಯನ್ ಟನ್‌ಗಳಷ್ಟು ಎಂದರೆ ನಿಜಕ್ಕೂ ಆತಂಕ ಪಡಿಸುವಂಥದು.

ಒಂದು ಅಂದಾಜಿನಂತೆ ಜಗತ್ತಿನ ವಿದ್ಯುನ್ಮಾನ ತ್ಯಾಜ್ಯ ವಸ್ತುಗಳ ಗಾತ್ರ ಜಗತ್ಪ್ರಸಿದ್ಧವಾದ ಚೀನಾ ಗೋಡೆಗಳಿಗಿಂತ ಅಧಿಕವಾಗಿದೆಯಂತೆ.

ರಾಯಲ್ ಸೊಸೈಟಿಯ ರಸಾಯನಶಾಸ್ತ್ರ ವಿಭಾಗದ ಪ್ರಕಾರ ಭೂಮಿಯಿಂದ ಧಾತುಗಳನ್ನು ಗಣಿಗಾರಿಕೆಯಿಂದ ತೆಗೆಯುವ ಬದಲು, ಈ ತ್ಯಾಜ್ಯಗಳಿಂದ ಎಲ್ಲಾ ಲೋಹ, ಅಲೋಹ, ಲೋಹಾಭಗಳನ್ನು ಬೇರ್ಪಡಿಸಿದರೆ ಧಾತುಗಳ ಕೊರತೆ ಸ್ವಲ್ಪ ಮಟ್ಟಿಗೆ ನೀಗಬಹುದು ಎನಿಸುತ್ತದೆ.

ಇವಿಷ್ಟು ವಿದ್ಯುನ್ಮಾನ ಪರಿಕರಗಳಳ್ಲಿ ಬಳಸುವ ಕೆಲವು ಧಾತುಗಳಾದರೆ, ವಿದ್ಯುನ್ಮಾನ ತ್ಯಾಜ್ಯಗಳು ವರ್ಷಕ್ಕೆ ಸುಮಾರು ಎರಡು ಮಿಲಿಯನ್ ಟನ್‌ಗಳಷ್ಟು ಬರುತ್ತದೆ. ಆದರೆ ಇದರಲ್ಲಿ ಕೇವಲ ಶೇಕಡ 20 ರಷ್ಟು ಮಾತ್ರ ಪುನರ್ ಬಳಕೆ ಮಾಡಿ ಕೆಲವು ಲೋಹಗಳನ್ನು ಮಾತ್ರ ಅದರಿಂದ ಬೇರ್ಪಡಿಸುತ್ತಿದ್ದಾರೆ.

ನಾಲ್ಕು ದಶಕಗಳ ಹಿಂದೆಯೇ ಕ್ಯೂಟೋ ವರದಿಯು ಪಾದರಸ, ಚಿನ್ನ, ಬೆಳ್ಳಿ, ತವರ, ಸೀಸ, ಸತು, ತಾಮ್ರ, ಮ್ಯಾಂಗನೀಸ್‌ಗಳ ತೀವ್ರ ಕೊರತೆಯ ಬಗ್ಗೆ ಭವಿಷ್ಯ ನುಡಿದಿತ್ತು. ಧಾತುಗಳು ನಶಿಸಿ ಹೋಗುತ್ತವೆ ಎಂದರೆ ಭೂಮಂಡಲದಿಂದ ಸಂಪೂರ್ಣವಾಗಿ ಮಾಯವಾಗುತ್ತದೆ ಎಂದಲ್ಲ. ಜಗತ್ತಿನ ಬೇಡಿಕೆಗೆ ಪೂರಕವಾಗಿ ಸಿಗಲಾರವು ಹಾಗು ಭೂಮಿಯಲ್ಲಿರುವ ಈ ಧಾತುಗಳನ್ನು ತೆಗೆಯಲು ವೆಚ್ಚ ಬಹಳ ಹೆಚ್ಚಾದೀತು. ಖಂಡಿತವಾಗಿಯೂ ಮುಂದಿನ ನೂರು ವರ್ಷಗಳಲ್ಲಿ ಕೆಲ ಧಾತುಗಳು ಅಳಿವಿನಂಚಿಗೆ ಬರುವುದು ಸ್ಪಷ್ಟ ಎಂದು ವಿಜ್ಞಾನಿಗಳ ಅನಿಸಿಕೆ.

ಇನ್ನು ವಿದ್ಯುನ್ಮಾನ ಪರಿಕರಗಳಲ್ಲಿ ಬಳಸುವ ಕೆಲವು ಧಾತುಗಳ ವಿಶ್ಲೇಷಣೆ ಅಗತ್ಯವೆನಿಸುತ್ತದೆ.

ಗ್ಯಾಲಿಯಂ (Gallium) ಲೋಹದ ಬಳಕೆ ವಿದ್ಯುನ್ಮಾನ ಕ್ಷೇತ್ರದಲ್ಲಿ ಬಹಳ ಹೆಚ್ಚು. ಅತೀ ಸೂಕ್ಷ್ಮ ತರಂಗಜಾಲ, ಬೆಳಕು ಸೂಸುವ ಡಯೋಡ್ (LED), ಲೇಸರ್ ಡಯೋಡ್, ಸೋಲಾರ್ ಪರಿಕರಗಳಲ್ಲಿ ಬಳಕೆ. ಇದರ ಕೊರತೆ ಈಗಾಗಲೇ ಕಾಣುತ್ತಿದೆ.

ಅರ್ಮೇನಿಯಂ (Armenium) ಲೋಹ ತೋರುವ ವಕ್ರೀಭವನ (Refraction) ನ ಕಡಿಮೆ ಚದುರುವಿಕೆಯಿಂದಾಗಿ ಕ್ಯಾಮರ, ಸೂಕ್ಷ್ಮದರ್ಶಕ, ಫೈಬರ್ ಅಪ್ಟಿಕ್ ಎಳೆಗಳ ತಯಾರಿಕೆಯಲ್ಲಿ ಬಳಕೆಯಾಗುತ್ತಿದೆ.

ವಿದ್ಯುನ್ಮಾನದ ಉಪಕರಣದಲ್ಲಿ ಬಳಸುವ ಅರ್ಸೆನಿಕ್ (Arsenic) ಅನೇಕ ಕಡೆ ಉಪಯುಕ್ತ, ಕಬ್ಬಿಣ ತುಕ್ಕು ಹಿಡಿಯುವುದನ್ನು ತಡೆಯಲು ಉತ್ತಮ ಧಾತು.

ಬೆಳ್ಳಿ (Silver) ನ ಬಳಕೆ ಕನ್ನಡಿ, ಬಿಸಿಲಲ್ಲಿ ಕರಿಗಾಗುವ ಮಸೂರಗಳು, ಸೂಕ್ಷ್ಮಜೀವಿ ರಹಿತ ಬಟ್ಟೆಗಳು, ಕೈಗವಸುಗಳು, ಮೊಬೈಲ್‌ನ ಸ್ಪರ್ಷ ಪರದೆ (Touch Screen) ಉಪಯುಕ್ತ ಹಾಗೂ ಇನ್ನಿತರ ವಿದ್ಯುನ್ಮಾನ ಪರಿಕರಗಳಲ್ಲಿ ಉಪಯುಕ್ತ. ಇಂಡಿಯಂ (Indium) ಲೋಹ, ಟ್ರಾನ್ಸಿಸ್ಟರ್, ಮೈಕ್ರೊ ಚಿಪ್‌ಗಳು, ಬಾಲ್ ಬೇರಿಂಗ್‌ಗಳ ಹೊರಪದರ ಹಾಗೂ ಸೋಲಾರ್ ಪರಿಕರಗಳಲ್ಲಿ ಉಪಯೋಗಿಸಲ್ಪಡುತ್ತದೆ.

ಇಟ್ರಿಯಂ (Yttrium) ಲೋಹ ಬೆಳಕು ಹೊರ ಸೂಸುವ ಡಯೋಡ್ (LED), ಕ್ಯಾಮೆರಾಗಳ ಮಸೂರ ಹಾಗೂ ಕೆಲ ಅರ್ಬುದ ರೋಗ ಚಿಕಿತ್ಸೆಯಲ್ಲೂ ಬಳಸುತ್ತಾರೆ. ಟ್ಯಾಂಟಲಮ್ (Tantalum) ಪ್ರಧಾನವಾಗಿ, ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ದೇಹದಲ್ಲಿ ಅಳವಡಿಸುವ ಪರಿಕರಗಳು, ನಿಯಾನ್ ದೀಪದ ವಿದ್ಯುತ್ ಪ್ರವಾಹದ ನಿಯಂತ್ರಕ (Electrodes), ಟರ್ಬೈನ್‌ನ ಅಲಗುಗಳು, ರಾಕೆಟ್‌ನ ತುದಿ ಹಾಗೂ ಅದರ ಕವಚ, ಅತಿವೇಗದ ವಿಮಾನ, ಶ್ರವಣೋಪಕರಣಗಳು ಹಾಗೂ ಹೃದಯದ ಗತಿನಿಯಂತ್ರಣ ಪರಿಕರ (Pace Maker) ಗಳಲ್ಲಿ ಹೆಚ್ಚು ಬಳಕೆಯಾಗುತ್ತದೆ.

ಡಿಲ್ಸ್‌ಪ್ರೋಸಿಯಂ (Disprocium) ಲೋಹ, ಕಂಪ್ಯೂಟರ್, ಹೆಡ್‌ಫೋನ್‌ಗಳಲ್ಲಿ ಹೆಚ್ಚು ಬಳಕೆಯಾಗುತ್ತದೆ. ಹಶ್ನಿನಿಯಂ (Hesenenium) ಲೋಹ ಜೆಟ್ ಎಂಜಿನ್, ನ್ಯೂಕ್ಲಿಯಾರ್ ರಿಯಾಕ್ಟಲ್ ಸ್ಥಾವರಗಳಲ್ಲಿ ಹೆಚ್ಚು ಬಳಕೆಯಾಗುತ್ತದೆ. ಇನ್ನು ತವರ (Tin) ಹಾಗೂ ಸತು (Zinc) ಗಳು ಅನೇಕ ವಿದ್ಯುನ್ಮಾನ ಪರಿಕರಗಳಳ್ಲಿ ಬಹಳಷ್ಟು ಉಪಯೋಗಿಸಲ್ಪಡುತ್ತದೆ. ನಿಯೋಡಿಯಂ (Niodium) ಹಲವಾರು ವಿದ್ಯುನ್ಮಾನ ಪರಿಕರಗಳಲ್ಲಿ ಬಳಸುವ ಒಂದು ದುರ್ಲಭವಾದ ಲೋಹ. ಪ್ರಬಲ ಕಾಂತಗಳ ತಯಾರಿಕೆಯಲ್ಲಿ ಇದರ ಪಾತ್ರ ಪ್ರಮುಖ. ಪೆಲೇಡಿಯಂ (Palladium) ಲೋಹ ಹಲವಾರು ವಿದ್ಯುನ್ಮಾನ ಉಪಕರಣಗಳ ತಯಾರಿಕೆಯಲ್ಲಿ ಬಳಸಲ್ಪಡುತ್ತದೆ.

ಪ್ಲಾಟಿನಂ (Platinum) ಲೋಹವಂತೂ ವಿದ್ಯುನ್ಮಾನದ ಹಲವಾರು ಪರಿಕರಗಳಲ್ಲಿ ಬಳಸಲಾಗುವ ಒಂದು ಅತ್ಯಂತ ದುಬಾರಿಯ ಹಾಗೂ ದುರ್ಲಭ ಲೋಹ. ಟೈಟಾನಿಯಂ (Titanium) ನ ಬಳಕೆ ಹಲವಾರು ವಿದ್ಯುನ್ಮಾನ ಪರಿಕರಗಳಲ್ಲಿ, ಶಸ್ತ್ರಚಿಕಿತ್ಸೆಯ ವೇಳೆ ದೇಹದೊಳಗೆ ಅಳವಡಿಸುವ ಉಪಾಂಗಗಳಲ್ಲಿ ಬಳಸುತ್ತಾರೆ.

ಲಿಥಿಯಂ ಲೋಹ ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿಗಳು ಹಾಗೂ ಹಲವಾರು ವಿದ್ಯುನ್ಮಾನ ಉಪಕರಣಗಳಲ್ಲಿ ಬಹಳಷ್ಟು ಉಪಯೋಗದಲ್ಲಿದೆ. ಇದರ ಬೆಲೆ ಈಗಾಗಲೇ 2022 ರಲ್ಲಿ 500 ಪಟ್ಟು ಜಾಸ್ತಿಯಾಗಿದೆ. ವಿದ್ಯುನ್ಮಾನ ತ್ಯಾಜ್ಯಗಳು ಎಲ್ಲಾ ಮನೆಗಳಲ್ಲೂ ಕೆ.ಜಿ.ಗಟ್ಟಲೆ ಇರುವುದು ಒಂದು ವಿಷಾದದ ಸಂಗತಿ. ಇದು ವಿಶ್ವದಾದ್ಯಂತ ಸುಮಾರು ಮಿಲಿಯನ್ ಟನ್‌ಗಳಷ್ಟಾಗಬಹುದು.

ವಿದ್ಯುನ್ಮಾನ ತ್ಯಾಜ್ಯಗಳಲ್ಲಿನ ಧಾತುಗಳನ್ನು ಬೇರ್ಪಡಿಸುವ ಕೆಲಸ ತ್ವರಿತ ಬಗೆಯಿಂದ ಸಾಗಬೇಕಾಗಿದೆ. ವಿದ್ಯುನ್ಮಾನ ಉಪಕರಣದ ಬಳಕೆಯನ್ನು ಆದಷ್ಟು ದೀರ್ಘಕಾಲ ಮುಂದೂಡಿದರೆ ಧಾತುಗಳನ್ನು ಸ್ವಲ್ಪಮಟ್ಟಿಗೆ ಉಳಿಸಬಹುದು. ವಿದ್ಯುನ್ಮಾನ ತ್ಯಾಜ್ಯಗಳಲ್ಲಿನ ಧಾತುಗಳನ್ನು ಬೇರ್ಪಡಿಸುವುದರಿಂದ ಪರಿಸರ ಮಾಲಿನ್ಯ, ಸ್ಥಿರತೆ ಕಾಪಾಡಬಹುದು. ಧಾತುಗಳ ಪ್ರಮಾಣ ಭೂಮಿಯಲ್ಲಿ ಕುಸಿಯುತ್ತಿರುವುದರಿಂದ ಅವುಗಳ ಪುನರ್ಬಳಕೆಯ ಕಡೆಗೆ ಗಮನಹರಿಸುವುದು ಶ್ರೇಯಸ್ಕರ. ಮಾರಾಟಗಾರರು ಹಾಗೂ ತಯಾರಕರು ತ್ಯಾಜ್ಯವನ್ನು ಬಳಕೆದಾರರಿಂದ ವಾಪಸ್ ಪಡೆಯುವ ಒಂದು ವ್ಯವಸ್ಥೆಯನ್ನು ಮಾಡಿದರೆ ಮನೆಗಳಲ್ಲಿ ತ್ಯಾಜ್ಯ ವಸ್ತುವಿನ ಶೇಖರಣೆಗೆ ಕತ್ತರಿ ಬೀಳಬಹುದು. ಈ ವಿದ್ಯುನ್ಮಾನ ಪರಿಕರಗಳಿಗೆ ಕಡಿತ (Reduce), ಮರುಬಳಕೆ (Reuse), ಹಾಗೂ ಪುನರ್ಚಾಲನೆ (Recycle) ಪ್ರತಿನಿತ್ಯದ ಮಂತ್ರವಾಗಬೇಕು.


ಇದಲ್ಲದೆ ಲೋಹಗಳಾದ ಸತು (Zinc), ಕ್ಯಾಡ್‌ಮಿಯಂ (Cadmium ), ಮೆಗ್ನಿಷಿಯಂ (Magnasium), ಚಿನ್ನ (Auram), ನಿಕ್ಕಲ್ (Nickel), ಸೆಲೆನಿಯಂ (Selenium), ಕ್ರೋಮಿಯಂ (Chromium) ಮತ್ತು ಪಾದರಸ (Mercury)) ಹಲವಾರು ವಿದ್ಯುನ್ಮಾನ ತಯಾರಿಕೆಯಲ್ಲಿ ಬಳಸಲ್ಪಡುತ್ತವೆ. ಇವುಗಳ ಪರಿಮಾಣ ಸ್ವಲ್ಪವಾದರೂ ವಿದ್ಯುನ್ಮಾನ ಪರಿಕರಗಳ ಉತ್ಪಾದನೆ ಮಿಲಿಯನ್‌ಗಳಷ್ಟು ಇರುವುದರಿಂದ ಒಟ್ಟಾರೆ ಇವುಗಳ ಬಳಕೆಯ ಪ್ರಮಾಣ ಗಣನೀಯವಾದುದು. ಇವುಗಳ ಲಭ್ಯತೆ ಕುಸಿದಿದೆ.
ಸರಕಾರ ಈ ವಿದ್ಯುನ್ಮಾನ ತ್ಯಾಜ್ಯದ ಬಗ್ಗೆ ಗಮನಹರಿಸಿ ಒಂದು ನಿಯಮಾವಳಿ ರೂಪಿಸಿದರೆ ತ್ಯಾಜ್ಯಗಳ ವಿಲೇವಾರಿ ಹಾಗೂ ಮರುಬಳಕೆಗೆ ಒಂದು ವ್ಯವಸ್ಥಿತವಾದ ದಾರಿಯಾದೀತು. ಇಲ್ಲದಿದ್ದರೆ ಇನ್ನು ಐವತ್ತು ವರ್ಷಗಳಲ್ಲಿ ನಾವು ವಿದ್ಯುನ್ಮಾನ ತಯಾರಿಕೆಯನ್ನು ಸ್ಥಗಿತಗೊಳಿಸಿ ಮತ್ತೆ ಶಿಲಾಯುಗವನ್ನು ಪ್ರವೇಶಿಸಬೇಕಾದೀತು.

ಕೆ. ರಮೇಶ್

7 Responses

  1. ಮಹೇಶ್ವರಿ ಯು says:

    ನಿಜ.ಮಾಹಿತಿ ಪೂಣ೯ ಬರಹ. ಚಿಂತನಾಹ೯.ಗಮನಹರಿಸಲೇಬೇಕಾದ್ದು

  2. Anonymous says:

    ಲೇಖನವನ್ನು ಪ್ರಕಟಿಸಿದ್ದಕ್ಕೆ ಅನಂತ ಧನ್ಯವಾದಗಳು ಮೇಡಂ
    ಕೆ.ರಮೇಶ್

  3. ಮಾಹಿತಿ ಪೂರ್ಣ ಲೇಖನ ಬರೆದು ನಮ್ಮ ನ್ನು ಚಿಂತನೆ ಗೆ ಹಚ್ಚಿದ ನಿಮಗೆ ಧನ್ಯವಾದಗಳು ರಮೇಶ್ ಸಾರ್.

  4. padmini kadambi says:

    ಒಳ್ಳೆಯ ಮಾಹಿತಿ

  5. ನಯನ ಬಜಕೂಡ್ಲು says:

    ಮಾಹಿತಿಪೂರ್ಣ

  6. Padma Anand says:

    ವಿದ್ಯನ್ಮಾನ ತ್ಯಾಜ್ಯಗಳಿಂದ ಪರಿಸರದ ಮೇಲೆ ಉಂಟಾಗುವ ಭೀಕರ ಪರಿಣಾಮಗಳನ್ನು ಲೇಖನ ಪ್ರಭಾವಶಾಲಿಯಾಗಿ ನಿರೂಪಿಸಿದೆ. ಅಭಿನಂದನೆಗಳು.

  7. ಶಂಕರಿ ಶರ್ಮ says:

    ಸತ್ಯವಾಗಿಯೂ ಸತ್ಯಾಸತ್ಯದ ಬಗ್ಗೆ ತಾವು ಬರೆದ ಲೇಖನ ಸೊಗಸಾಗಿದೆ ಮೇಡಂ

Leave a Reply to padmini kadambi Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: