ಪ್ಲಾಸ್ಟಿಕ್ ಮುಕ್ತ ಊರು

Share Button

ನನ್ನ ಒಂದು ಕವನದಲ್ಲಿ ಪ್ಲಾಸ್ಟಿಕ್ಕನ್ನು ‘‘ಬಿಟ್ಟೇನೆಂದರೆ ಬಿಡದೀ ಬ್ರಹ್ಮೇತಿ’‘ ಎಂದು ವಿವರಿಸಿದ್ದೇನೆ. ಇಂದಿನ ದಿನ ಮಾನದಲ್ಲಿ ಮನೆಯ ಬಳಿಯ ಪುಟ್ಟ ಅಂಗಡಿಯಿಂದ ದೊಡ್ಡ ದೊಡ್ಡ ಅಂಗಡಿಗಳು, ಮಾಲ್‌ಗಳಲ್ಲಿ, ವಿವಿಧ ರೂಪ ತಳೆದ, ಪ್ಲಾಸ್ಟಿಕ್ ಕಸ, ನಮ್ಮ ಮನೆ ಪ್ರತಿನಿತ್ಯ ಹೊಕ್ಕುತ್ತದೆ. ಪ್ರತೀದಿನ ಪೌರಕಾರ್ಮಿಕರು, ಮನೆಮನೆಗಳಿಂದ, ಬೀದಿ ಬೀದಿಗಳಿಂದ ಕಸ ಆಯುವಾಗ, ‘ಒಣಕಸ, ಹಸಿಕಸ’ ಎಂದು ವಿಂಗಡಿಸಿಕೊಡಲು ನಮಗೆ ಹೇಳುತ್ತಾರೆ. ನಾನು ಗಮನಿಸಿದಂತೆ, ಸರಕಾರ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದ್ದರೂ, ಪ್ರತೀನಿತ್ಯ ಎಲ್ಲರ ಮನೆಯಿಂದ ಪ್ಲಾಸ್ಟಿಕ್ ಕಸದ ರಾಶಿ, ಪೌರಕಾರ್ಮಿಕರ ಗಾಡಿಗೆ ಬಂದು ಬೀಳುತ್ತವೆ. ಹೀಗೇಕೆ?. ಹಿಂದೆಲ್ಲ ಜನ ಬಟ್ಟೆಯ ಕೈ ಚೀಲಗಳನ್ನು ಮನೆಯಿಂದ ಒಯ್ದು ಅಂಗಡಿಗಳಿಂದ ಸಾಮಾನು ಮನೆಗೆ ತರುತ್ತಿದ್ದರು. ಕಡೆಯ ಪಕ್ಷ ಜೇಬಿನಲ್ಲಿದ್ದ ದೊಡ್ಡ ಕರವಸ್ತ್ರದಲ್ಲಿ ತರಕಾರಿ ತರುತ್ತಿದ್ದರು. ಈಗ ಕರವಸ್ತ್ರವೂ ಇಲ್ಲ, ಕೈಯಲ್ಲಿ ಚೀಲವೂ ಇಲ್ಲ. ಗ್ರಾಹಕರಿಗೆ ಖಾತ್ರಿಯಾಗಿರುವ ಒಂದು ವಿಷಯವೆಂದರೆ ಅಂಗಡಿಯವ ಅಥವಾ ಸೊಪ್ಪು ಮಾರುವವರು ಅಥವಾ ಯಾವುದೇ ಸಾಮಾನನ್ನು ಕಟ್ಟಿಕೊಡುವ ವಿವಿಧ ವಸ್ತುಗಳ ಮಾರಾಟಗಾರರು ತಮ್ಮ ವಸ್ತುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಕೊಟ್ಟೇ ಕೊಡುತ್ತಾರೆ ಎಂಬ ಗ್ಯಾರಂಟಿ.

ಈ ಹಿನ್ನೆಲೆಯಲ್ಲಿ ನನ್ನ ಲೇಖನದ ಹೆಸರು ಪ್ಲಾಸ್ಟಿಕ್ ಮುಕ್ತ ಊರು ಎಂದರೆ ಓದುಗರಿಗೆ ಆಘಾತವಾಗಬಹುದು. ಆದರೆ ಈ ನಿಟ್ಟಿನಲ್ಲಿ ವಿಶ್ವದಲ್ಲಿ ಆಗುತ್ತಿರುವ ಇತ್ಯಾತ್ಮಕ ಪ್ರಯತ್ನಗಳನ್ನು ಇಲ್ಲಿ ದಾಖಲಿಸಬಯಸುತ್ತೇನೆ. ಈ ನಿಟ್ಟಿನಲ್ಲಿ ಪ್ರಯತ್ನ 2011 ರಿಂದ ಆರಂಭವಾಗಿದೆ.

ವಿಶ್ವದಲ್ಲಿರುವ Plastic Free Foundation ಎಂಬ ಸಂಸ್ಥೆ ಆರಂಭವವಾಗಿರುವುದು 2017 ರಲ್ಲಿ. Plastic Free July ಯನ್ನು ಆಚರಿಸಲು, 2017 ರಿಂದ ಆರಂಭಿಸಿರುವ ಪ್ರಯತ್ನವನ್ನು ಈ ವರ್ಷವೂ ಮುಂದುವರಿಸಿದೆ. ಈ ನಿಟ್ಟಿನಲ್ಲಿ ಇವರು ನೋಡಬಯಸುವ ಪ್ರಪಂಚದಲ್ಲಿ, ಪ್ಲಾಸ್ಟಿಕ್ ತ್ಯಾಜ್ಯ ಇರಲೇಬಾರದು. ಇವರ ನಂಬಿಕೆ ಸಣ್ಣ ಬದಲಾವಣೆಗಳು ದೊಡ್ಡ ವ್ಯತ್ಯಾಸವನ್ನು ತರಬಲ್ಲದು ಎಂಬುದು. ಈ ಸಂಸ್ಥೆಯ ಸಂಸ್ಥಾಪಕರು ರೆಬೆಕ್ಕಾ ಪ್ರಿನ್ಸ್-ರುಯೀಝ್. ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಇವರೊಂದಿಗೆ ಸ್ಥಳೀಯ ಪ್ರಾದೇಶಿಕ ಸರಕಾರದ ಒಂದು ಚಿಕ್ಕ ತಂಡ ಕೆಲಸ ಆರಂಭಿಸಿದೆ. ಇದರ ಪ್ರಭಾವ ಈ ಗೋಳದ ವಿವಿಧ ಭಾಗಗಳಲ್ಲಿರುವ 177 ದೇಶಗಳ 326 ದಶಲಕ್ಷ ಜನರ ಮೇಲಾಗಿ, ಅವರೆಲ್ಲಾ ಈ ಆಹ್ವಾನವನ್ನು ಸ್ವೀಕರಿಸಿ, ಈ ಕಾರ್ಯದಲ್ಲಿ ಪ್ರತೀವರ್ಷ ಭಾಗವಹಿಸುತ್ತಿದ್ದಾರೆ. ಇವರೆಲ್ಲಾ ತಮ್ಮ ಮನೆಯ ತ್ಯಾಜ್ಯವನ್ನು ಕಡಿಮೆ ಮಾಡುತ್ತಿರುವುದಲ್ಲದೇ, ಪ್ರತೀವರ್ಷ, ಪ್ರತೀ ವ್ಯಕ್ತಿ, 21 ಕಿ.ಗ್ರಾಂ. ತ್ಯಾಜ್ಯವನ್ನು ಪುನರ್‌ಬಳಕೆಗೆ ಪರಿವರ್ತಿಸುತ್ತಿದ್ದಾರೆ. ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ ಗುರಿಗಳಾದ, ಸುಸ್ಥಿರ ನಗರಗಳು ಹಾಗೂ ಸಮುದಾಯಗಳು, ಜವಾಬ್ದಾರಿಯುತ ನಿರ್ಮಾಣ ಹಾಗೂ ಬಳಕೆ, ನೀರಿನ ಕೆಳಗಿನ ಜೀವನ ಹಾಗೂ ನೆಲದ ಮೇಲಿನ ಜೀವನ ಇವುಗಳ ಬಗ್ಗೆ, ಇಡೀ ವಿಶ್ವದ ಜನ ಗಮನಿಸಿ ತಮ್ಮ ಕೊಡುಗೆಯನ್ನು ನೀಡಬೇಕೆಂದು ತಜ್ಞರು ಹೇಳುತ್ತಾರೆ.

ಪ್ಲಾಸ್ಟಿಕ್ ಮುಕ್ತ ಊರು ಎಂಬ ವಿಶ್ವ ಆಂದೋಲನವು ಲಕ್ಷಾವಧಿ ಜನರಿಗೆ ಪ್ಲಾಸ್ಟಿಕ್ ಮಾಲಿನ್ಯ ನಿವಾರಿಸಲು ಸಹಾಯ ಮಾಡುತ್ತದೆ. ಈ ಮಾರ್ಗದಲ್ಲಿ ನಮ್ಮ ರಸ್ತೆಗಳನ್ನು, ಮಹಾಸಾಗರಗಳನ್ನು ಹಾಗೂ ಸಮುದಾಯಗಳನ್ನು ನಾವು ಸುಂದರವಾಗಿಡಬಹುದು.

ಪ್ರಿಯ ಓದುಗರೇ, ನೀವೂ ಸಹ ಈ ಪ್ಲಾಸ್ಟಿಕ್ ಮುಕ್ತ ಆಂದೋಲನದ ಭಾಗವಾಗಿ, ಏಕ ಬಳಕೆಯ ಪ್ಲಾಸ್ಟಿಕ್ಕನ್ನು ನಿರಾಕರಿಸಿ, ತ್ಯಜಿಸಬಲ್ಲಿರಾ?!. ನಿಮ್ಮ ಮನೆಗಳಲ್ಲಿ, ಕಾರ್ಯಕ್ಷೇತ್ರಗಳಲ್ಲಿ, ಶಾಲೆಯಲ್ಲಿ ಹಾಗೂ ಸ್ಥಳೀಯ ಹೊಟೇಲ್‌ಗಳಲ್ಲಿ, ಈ ತ್ಯಾಜ್ಯವನ್ನು, ಕಡಿಮೆ ಮಾಡಿ.

ಪ್ರತೀವರ್ಷ ಮಹಾನ್ ಆಂದೋಲನವಾದ,Break Free from Plastic Movement ಇದರ ಭಾಗವಾಗಿ, ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ವಿಶ್ವವನ್ನು ಭವಿಷ್ಯದಲ್ಲಿ ಕಾಣಲು, ಇಂದೇ ಚಿಂತಿಸಿ. ಕೆಲವು ದೇಶಗಳಲ್ಲಿ ಈ ಏಕ ಬಳಕೆಯ ಪ್ಲಾಸ್ಟಿಕ್ಕನ್ನು, ಪ್ರತಿಬಂಧಕಾಜ್ಞೆ, ಕರ ಹಾಕುವಿಕೆ ಹಾಗೂ ವಿವಿಧ ರೂಪಗಳ ಸ್ವಯಂಪ್ರೇರಣೆಯ ಒಪ್ಪಂದಗಳ ಮೂಲಕ, ತಡೆಯಲು ಪ್ರಯತ್ನಗಳು ಆಗುತ್ತಿವೆ. ಇಟಲಿ, ರುವಾಂಡ ಹಾಗೂ ಬಾಂಗ್ಲಾ ದೇಶಗಳಲ್ಲಿ ಪ್ಲಾಸ್ಟಿಕ್ಕನ್ನು ನಿಷೇಧಿಸಲಾಗಿದೆ. ದಯವಿಟ್ಟು ಗಮನಿಸಿ, ಸರಾಸರಿ ಕೇವಲ 25 ನಿಮಿಷಗಳಿಗಾಗಿ ಬಳಸಲ್ಪಡುವ ಈ ಪ್ಲಾಸ್ಟಿಕ್ ಚೀಲಗಳು, ಕರಗಲು 100 ರಿಂದ 500 ವರ್ಷಗಳೇ ಬೇಕು. ಸರಾಸರಿಯಾಗಿ ಪ್ರತೀವರ್ಷ, ಯುರೋಪ್ ದೇಶದ ಜನ, 500 ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಬಳಸುತ್ತಾರೆ.

ಸಾಗರದ ನೀರಿನಲ್ಲಿ 80 %ರಷ್ಟು ಪ್ಲಾಸ್ಟಿಕ್ ಕಸವಿದೆ. ಯುರೋಪಿಯನ್ ಒಕ್ಕೂಟದಲ್ಲಿ, ಪ್ರತೀವರ್ಷ 4 ದಶಲಕ್ಷ ಟನ್ ಕೊಂಡೊಯ್ಯುವ ಚೀಲಗಳು ನಿರ್ಮಾಣವಾಗುತ್ತವೆ. ಇದರ ತೂಕ 2 ದಶಲಕ್ಷ ಕಾರುಗಳ ತೂಕಕ್ಕಿಂತ ಹೆಚ್ಚು ಎಂದರೆ ನಿಮ್ಮ ಹುಬ್ಬು ಮೇಲೇರುವದಲ್ಲವೇ?!. ಏಕ ಬಳಕೆಯ ಪ್ಲಾಸ್ಟಿಕ್ ಚೀಲ, ಪರಿಸರವನ್ನು, ಮಲಿನ ಮಾಡುವುದಲ್ಲದೇ ಅನೇಕ ಜೀವಿಗಳಿಗೆ ಹಾನಿಯುಂಟು ಮಾಡುತ್ತದೆ. ಕೊಂಡು ಚೆಲ್ಲುವ ಸಂಸ್ಕೃತಿಯ ಸಮಾಜದಲ್ಲಿ ಒಳ್ಳೆಯದು ಉಳಿಯದಿದ್ದರೂ, ಕೆಟ್ಟದ್ದು ಶಾಶ್ವತವಾಗಿ ಅಥವಾ ಬಹುಕಾಲ ಉಳಿಯುತ್ತದೆ. ಕುರೂಪಿಯಾದ ಈ ಚೀಲಗಳನ್ನು ಉತ್ಪಾದಿಸುವ ವೆಚ್ಚ ಕಡಿಮೆ ಎಂದು ಇದರ ಉತ್ಪಾದಕರು ಸಾರಿದರೂ, ಅವರು ಈ ವಸ್ತುವಿನ ಬಳಕೆಯ ಪರಿಣಾಮದ ಜವಾಬ್ದಾರಿಗಳನ್ನು ಎಂದೂ ತೆಗೆದುಕೊಳ್ಳುವುದಿಲ್ಲ. ಉತ್ಪಾದನಾ ವೆಚ್ಚ ಕಡಿಮೆ ಇದ್ದರೂ, ಪರಿಸರ ಸ್ವಚ್ಛ ಮಾಡುವ ವೆಚ್ಚ ಅಪಾರ. ಈ ಗೋಳದಲ್ಲಿ ಏನನ್ನಾದರೂ ಬಳಸಿ, ಚೆಲ್ಲುವ, ಎಸೆಯುವ, ಸಂಸ್ಕೃತಿ ಪರಿಸರಕ್ಕೆ ಹಾನಿಕಾರಕವಾಗಿದೆ.

ಈ ಪ್ಲಾಸ್ಟಿಕ್ ಚೀಲಗಳು ಉಂಟು ಮಾಡುವ ಮಾಲಿನ್ಯತೆಯ ಪರಿಣಾಮದಿಂದ, ಮುಂದಿನ ತಲೆಮಾರುಗಳು ಒದ್ದಾಡುತ್ತವೆ. ಯುರೋಪಿಯನ್ ಒಕ್ಕೂಟದಲ್ಲಿ 2010 ರಲ್ಲಿ 95.5 ಬಿಲಿಯನ್ ಚೀಲಗಳಲ್ಲಿ, 92 % ಚೀಲಗಳನ್ನು ಕಚ್ಚಾ ತೈಲದಿಂದ ತಯಾರಿಸಲಾಗಿತ್ತು.


ಪ್ಲಾಸ್ಟಿಕ್ ಚೀಲಗಳ ವೈವಿಧ್ಯತೆ:-
1. ಹೆಚ್ಚು ಸಾಂದ್ರತೆಯ ಪಾಲೀಯೇಥೈಲೆನ್ ಚೀಲಗಳು:- ಇಂತಹ ಚೀಲಗಳು ಸೂಪರ್ ಮಾರುಕಟ್ಟೆ, ಸೇವಾ ಕೇಂದ್ರಗಳು ಹಾಗೂ ಆಹಾರ ಕಟ್ಟಿಕೊಡುವ ಅಂಗಡಿಗಳಲ್ಲಿ ದೊರೆಯುತ್ತವೆ. ಇದನ್ನು ಎಥೈಲೆನ್‌ದಿಂದ ತಯಾರಿಸಲಾಗುತ್ತದೆ. ಇದು ಅನಿಲ ಅಥವಾ ಸಂಸ್ಕರಿಸಿದ ತೈಲದ, ಉಪ ಉತ್ಪಾದನೆ. ಇವುಗಳು ಪುನರ್ ಬಳಕೆಯಾಗಲು ಸಾಧ್ಯವಿದೆ. ಆದರೆ ಜೈವಿಕವಾಗಿ ಇವುಗಳ ನಾಶ ಸಾಧ್ಯವಿಲ್ಲ.
2. ಕಡಿಮೆ ಸಾಂದ್ರತೆಯ ಪಾಲೀಯೇಥೈಲೆನ್ ಚೀಲಗಳು:- ಇವುಗಳೂ ಸಹ ಜೈವಿಕವಾಗಿ ನಾಶವಾಗುವುದಿಲ್ಲ. ಆದರೆ ಇವುಗಳಿಂದ ಪುನರ್ ಬಳಕೆ ಸಾಧ್ಯವಿಲ್ಲ.
3. ನೇಯದ ಪಾಲೀಪ್ರೋಪೈಲಿನ್ ಚೀಲಗಳು:- ಈ ರೀತಿಯ ಪ್ಲಾಸ್ಟಿಕ್ಕನ್ನು ಮರು ಬಳಕೆಯ ಚೀಲಗಳನ್ನು ತಯಾರಿಸಲು ಸಾಧ್ಯವಿದೆ.
4. ಕೊಳೆಯಬಲ್ಲ ಪ್ಲಾಸ್ಟಿಕ್ ಚೀಲಗಳು:– ಕೆಲವು ವಿಶೇಷ ಪರಿಸರದ ಸ್ಥಿತಿಗಳಲ್ಲಿ ತಮ್ಮ ರಾಸಾಯನಿಕ ರೂಪವಲ್ಲಿ ಬದಲಾವಣೆಯಾಗುವ ಕೊಳೆಯಬಲ್ಲ ಪ್ಲಾಸ್ಟಿಕ್ಕನ್ನು ಕೆಲವು ಕಡೆ ಈಗ ವಿನ್ಯಾಸ ಮಾಡಲಾಗಿದೆ. ಇದನ್ನು ರಾಸಾಯನಿಕ ಅಥವಾ ಜೈವಿಕ ಸಂಸ್ಕರಣಗಳಿಂದ ಒಡೆಯಲು ಸಾಧ್ಯವಿದೆ. ಇವುಗಳಲ್ಲಿ 5 ವಿಭಿನ್ನ ಪಾಲಿಮರ್‍ಸ್‌ಗಳಿವೆ.
. ಸ್ವಾಭಾವಿಕವಾಗಿ ಸೂಕ್ಷ್ಮಾಣು ಜೀವಿಗಳಾದ ಬೆಕ್ಟೀರಿಯಾ, ಶಿಲೀಂದ್ರ, ಪಾಚಿಗಳಿಂದ ಇದನ್ನು ಕೊಳೆಯಿಸಬಹುದು.
ಬ. ಮಿಶ್ರಗೊಬ್ಬರವಾಗಬಲ್ಲ ಪಾಲಿಮರ್‍ಸ್:- ಜೈವಿಕ ಸಂಸ್ಕರಣಗಳಿಂದ ಮಿಶ್ರಗೊಬ್ಬರವಾಗಿಸಬಲ್ಲ ಪ್ಲಾಸ್ಟಿಕ್ ಇದು. ನಿಗದಿತ ಪರಿಸರದಲ್ಲಿ, ಈ ಪ್ಲಾಸ್ಟಿಕ್ ಸಂಪೂರ್ಣವಾಗಿ ಕೊಳೆಯಲ್ಪಟ್ಟು ೧೮೦ ಅಥವಾ ಅದ್ಕಕಿಂತ ಕಡಿಮೆ ದಿನಗಳಲ್ಲಿ, ಇವುಗಳನ್ನು ಮತ್ತೆ ಬಳಸಬಹುದು. ಇವುಗಳನ್ನು ಆಹಾರ ಸೇವೆ, ಹುಲ್ಲುಹಾಸು, ದಿನಸಿ ಅಂಗಡಿಗಳು, ದೊಡ್ಡ ಕಿರಾಣಿ ಅಂಗಡಿಗಳು ಹಾಗೂ ಸಾಕುಪ್ರಾಣಿಗಾಗಿ ಆಗುವ ಉತ್ಪಾದನೆಗಳಲ್ಲಿ ಬಳಸಬಹುದು.
ಕ. ಆಕ್ಸಿ ಜೈವಿಕವಾಗಿ ಕೊಳೆಯಬಲ್ಲ ಪಾಲಿಮರ್‍ಸ್:– ಇದಕ್ಕೆ ಸೇರಿಸುವ ಕೆಲವು ಪದಾರ್ಥಗಳಿಂದ ನಿಯಮಿತ ಕೊಳೆಯುವಿಕೆ ಸಾಧ್ಯವಾಗಿ, ಅದು ದಿನದಿಂದ ದಿನಕ್ಕೆ, ಕೊಳೆಯುವಿಕೆಯ ವೇಗವನ್ನು ಹೆಚ್ಚಿಸುತ್ತವೆ.
ಡ. ಫೋಟೋ ಕೊಳೆಯಬಲ್ಲ ಪಾಲಿಮರ್‍ಸ್:– ನೇರಳಾತೀತ ಬೆಳಕು ಅಥವಾ ನೇರಳಾತೀತ ಬೆಳಕಿಗೆ ಸ್ಪಂಧಿಸುವ ಸೇರ್ಪಡೆಗಳನ್ನು ಸೂಕ್ಷ್ಮ ಸೇರ್ಪಡೆಗಳಿಗೆ ಬಹಿರಂಗಪಡಿಸಿದಾಗ ಈ ಚೀಲಗಳು ಕುಸಿಯುತ್ತವೆ.
ಇ. ನೀರಿನಲ್ಲಿ ಕರಗುವ ಪಾಲಿಮರ್‍ಸ್:- ನಿಗದಿತ ತಾಪಮಾನದಲ್ಲಿ ಈ ಪ್ಲಾಸ್ಟಿಕ್ ನೀರಿನಲ್ಲಿ ಕರಗುತ್ತದೆ.

-ಎನ್.ವ್ಹಿ.ರಮೇಶ್

6 Responses

  1. ಅತ್ಯುತ್ತಮ ಮಾಹಿತಿಯುಳ್ಳ ಲೇಖನ… ಧನ್ಯವಾದಗಳು ರಮೇಶ್ ಸಾರ್.

  2. padmini kadambi says:

    ಒಳ್ಳಯ ಮಾಹಿತಿ

  3. ನಯನ ಬಜಕೂಡ್ಲು says:

    Nice

  4. Padma Anand says:

    ಚಿಂತನೆಗೆ ಹಚ್ಚುವ ಮಾಹಿತಿಪೂರ್ಣ ಲೇಖನ. ವಸಂತನಾಗಮನದ ಬಗ್ಗೆ ಖುಷಿ ಪಡುವ ನಾವು ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್‌ ಮುಕ್ತ ಪರಿಸರದ ನಿರ್ಮಾಣದಲ್ಲಿ ಕೈಜೋಡಿಸೋಣ. ಅಭಿನಂದನೆಗಳು.

  5. ಶಂಕರಿ ಶರ್ಮ says:

    ದೃಢ ಸಂಕಲ್ಪವಿದ್ದರೆ ಪ್ಲಾಷ್ಟಿಕ್ ಮುಕ್ತವಾದ ಪರಿಸರವನ್ನು ನಿರ್ಮಿಸುವುದು ಕಷ್ಟವೇನಲ್ಲ….ಆದರೆ?? ಚಿಂತನಯೋಗ್ಯ ಬರೆಹ.

  6. ಉತ್ತಮವಾದ ಮಾಹಿತಿಗಳ ಲೇಖನ

Leave a Reply to gayathri sajjan Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: