ಯಾಗಂಟಿ-ಅಹೋಬಲ-ಬೆಲಂ ಕೇವ್ಸ್-ಭಾಗ 2

Share Button

ನವನಾರಸಿಂಹರಿಗೆ ನಮೋ ನಮ:

ಯಾಗಂಟಿಯಿಂದ ಹೊರಟ ನಾವು ಅಹೋಬಲ ತಲಪುವಾಗ ಮಧ್ಯಾಹ್ನ ಊಟದ ಸಮಯವಾಗಿತ್ತು. ಅಲ್ಲಿನ ಛತ್ರವೊಂದರಲ್ಲಿ ನಮ್ಮ ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸಲಾಗಿತ್ತು. ಛತ್ರ ತಲಪಿ ಊಟ ಮುಗಿಸಿ, ಸ್ವಲ್ಪ ವಿರಮಿಸಿ ಮುಂದಿನ ಪಯಣಕ್ಕೆ ಸಿದ್ಧರಾದೆವು.ಅಹೋಬಲ ಕ್ಷೇತ್ರವು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿದೆ. ಇಲ್ಲಿ ಕೆಳಗಿನ ಅಹೋಬಲ ( ದಿಗುವ ಅಹೋಬಿಲಂ) ಮತ್ತು ಮೇಲಿನ ಅಹೋಬಲ (ಎಗುವ ಅಹೋಬಿಲಂ) ಎಂಬ ಎರಡು ಪ್ರಸಿದ್ಧ ದೇವಾಲಯಗಳಿವೆ. ಕೆಳಗಿನ ಅಹೋಬಲದಲ್ಲಿ ಮೂಲ ವಿಗ್ರಹವನ್ನು ಚಾಲುಕ್ಯ ದೊರೆಯಾದ ವಿಕ್ರಮಾದಿತ್ಯನು ಪೂಜಿಸಿದ್ದನಂತೆ. ವಿಸ್ತಾರವಾದ ಈ ದೇವಾಲಯಗಳು ಅದ್ಭುತವಾದ ಶಿಲ್ಪಕಲೆಯನ್ನೂ ಹೊಂದಿದೆ.

ಕೆಳಗಿನ ಅಹೋಬಲ

ಇವಲ್ಲದೆ ನವಗ್ರಹಗಳಿಂದಲೇ ಆರಾಧಿಸಲ್ಪಟ್ಟ ನವನಾರಸಿಂಹ ಮೂರ್ತಿಗಳ ದೇವಾಲಯಗಳು ಹೀಗಿವೆ:

  1. ಯೋಗಮುದ್ರೆಯಲ್ಲಿದ್ದು ಅಸುರನ ಸಂಹಾರಕ್ಕಾಗಿ ಸಮಯ ಕಾಯುತ್ತಿದ್ದ ಯೋಗಾನಂದ ನರಸಿಂಹ – ಶನಿ ಗ್ರಹದ ಅಧಿದೇವತೆ
  2. ಭಕ್ತ ಪ್ರಹ್ಲಾದನ ರಕ್ಷಣೆಗಾಗಿ ಜ್ವಾಲಾಮುಖಿಯಂತೆ ಸ್ಫೋಟಿಸಿ ಪ್ರತ್ಯಕ್ಷನಾದ ಜ್ವಾಲಾ ನರಸಿಂಹ -ಮಂಗಳಗ್ರಹದ ಅಧಿದೇವತೆ
  3. ರಕ್ಕಸನ ಒಡಲನ್ನು ಬಗೆದರೂ ಆರದ ಕೋಪದ ಮೂರ್ತಿ ಅಹೋಬಲ ನರಸಿಂಹ- ಗುರುವಿನ ಅಧಿದೇವತೆ.
  4. ಲಕ್ಷ್ಮಿಯೊಂದಿಗೆ ಕಂಗೊಳಿಸುವ ಮಾಲೋಲ ನರಸಿಂಹ- ಶುಕ್ರ ಗ್ರಹದ ಅಧಿದೇವತೆ.
  5. ವೇದಗಳನ್ನು ಉದ್ಧರಿಸಿದ ವರಾಹ ನರಸಿಂಹ -ರಾಹುಗ್ರಹದ ಅಧಿದೇವತೆ.
  6. ಆಂಜನೇಯನಿಗೆ ರಾಮನಾಗಿ ಕಂಡ ಕಾರಂಜ ನರಸಿಂಹ-ಚಂದ್ರಗ್ರಹದ ಅಧಿದೇವತೆ
  7. ವಟವೃಕ್ಷದ ಕೆಳಗೆ ಸಂಗೀತವನ್ನು ಆಲಿಸುತ್ತಾ ಕುಳಿತ ಛತ್ರವಟ ನರಸಿಂಹ- ಕೇತುಗ್ರಹದ ಅಧಿದೇವತೆ
  8. ಭಾರ್ಗವ ರಾಮ ಕಂಡ ಭಾರ್ಗವ ನರಸಿಂಹ- ಸೂರ್ಯನ ಅಧಿದೇವತೆ
  9. ಭಾರದ್ವಾಜರಿಂದ ಪಾಪನಿವಾರಣೆಗಾಗಿ ಪೂಜಿಸಲ್ಪಟ್ಟ ಪಾವನ ನರಸಿಂಹ- ಬುಧನ ಅಧಿದೇವತೆ

ಸ್ಥಳಪುರಾಣದ ಪ್ರಕಾರ ಮಹಾವಿಷ್ಣುವು ಹಿರಣ್ಯಕಶಿಪುವನ್ನು ಕೊಂದು ಬಾಲಕ ಪ್ರಹ್ಲಾದನನ್ನು ಹರಸಿದ ಕ್ಷೇತ್ರವಿದು. ಹಿರಣ್ಯಕಶಿಪುವಿಗೆ ಹರಿಯ ಹೆಸರು ಕೇಳಿದರಾಗದು. ಆತನ ಮಗನಾದ ಪ್ರಹ್ಲಾದನು ‘ಅಣುರೇಣು ತೃಣಕಾಷ್ಠಗಳಲ್ಲಿಯೂ ಶ್ರೀಹರಿ ಇದ್ದಾನೆ ಎಂದು ಹೇಳಲು ಕೋಪಾವಿಷ್ಟನಾದ ಹಿರಣ್ಯಕಶಿಪುವುನಿನ್ನ ಹರಿ ನಿಜವಾಗಿಯೂ ಎಲ್ಲೆಲ್ಲೂ ಇದ್ದರೆ ಈ ಕಂಬದಲ್ಲೂ ಇರಬೇಕು, ಅವನೇ ಬಂದು ನಿನ್ನನ್ನು ಕಾಪಾಡಲಿ ಎಂದು ಕೋಪದಿಂದ ಆರ್ಭಟಿಸಿದ. ಭಕ್ತ ಪ್ರಹ್ಲಾದನ ರಕ್ಷಣೆಗಾಗಿ ಜ್ವಾಲಾಮುಖಿಯಂತೆ ಕಂಬದಿಂದ ಹೊರಬಂದ ಉಗ್ರನರಸಿಂಹನೇ ‘ಜ್ವಾಲಾನರಸಿಂಹ ಸ್ವಾಮಿ’. ಇಲ್ಲಿ ಹಿಂದೆ ಹಿರಣ್ಯಕಶಿಪುವಿನ ಅರಮನೆ ಇತ್ತಂತೆ. ಅವನ ಅರಮನೆಯ ಕಂಬವನ್ನು ನರಸಿಂಹಸ್ವಾಮಿಯು ಸೀಳಿ ಬಂದುದಕ್ಕೆ ಪುರಾವೆಯೋ ಎಂಬಂತೆ ಈಗಲೂ ಅಲ್ಲಿ ದೈತ್ಯಾಕಾರದ ಕಂಬವೊಂದಿದೆ. ಇದನ್ನು ಉಗ್ರಸ್ತಂಭವೆಂದು ಕರೆಯಲಾಗುತ್ತದೆ.

ಕೆಳಗಿನ ಅಹೋಬಲದಿಂದ ಸುಮಾರು 8  ಕಿ.ಮೀ ದೂರದಲ್ಲಿ ಮೇಲಿನ ಅಹೋಬಲ ದೇವಸ್ಥಾನವಿದೆ. ಇಲ್ಲಿಗೆ ತಲಪಲು ವಾಹನ ಸೌಕರ್ಯವಿದೆ. ಈ ದೇವಸ್ಥಾನವೂ ಬಹಳ ಸೊಗಸಾಗಿದೆ. ಆದರೆ ನವನಾರಸಿಂಹ ದೇವಾಲಯಗಳಲ್ಲಿ ಕೆಲವು ರಸ್ತೆ ಸಂಪರ್ಕ ಹೊಂದಿವೆ. ಇನ್ನು ಕೆಲವನ್ನು ತಲಪಲು ಕಾಡಿನದಾರಿಯಲ್ಲಿ ಚಾರಣ ಮಾಡಬೇಕು. ಇನ್ನು ನಾವು ಜೀಪಿನಲ್ಲಿ ಅತ್ಯಂತ ಕಡಿದಾದ ದಾರಿಯಲ್ಲಿ ಪ್ರಯಾಣಿಸಬೇಕು. ಬೆನ್ನುನೋವು, ಮಂಡಿನೋವು ಇರುವವರು ಹುಷಾರಾಗಿರಿ’ ಅಂದಿದ್ದರು ಅಯೋಜಕರು. ಜೀಪಿನಲ್ಲಿ ಹೊರಟ ನಮಗೆ ಅದರ ಅರಿವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಅಹೋಬಲದಿಂದ ಸುಮಾರು 3  ಕಿ.ಮೀ ಮುಂದೆ ನಲ್ಲಮಲ ಅರಣ್ಯ ವ್ಯಾಪ್ತಿಯಲ್ಲಿ ಹೋಗುತ್ತಿರುವಾಗ ಅದೇಕೋ ನಮ್ಮ ಜೀಪು ಕೆಟ್ಟು ಕೂತಿತು. ಇನ್ನೊಂದು ಜೀಪನ್ನು ಕರೆತಂದು ಹೊರಟಿದ್ದಾಯಿತು.

ಮೇಲಿನ ಅಹೋಬಲ

ಅದು ಕಾಡಿನ ಮಧ್ಯೆ ಇದ್ದ ಕಚ್ಚಾ ರಸ್ತೆ. ಅಲ್ಲಲ್ಲಿ ಮೇಯುತ್ತಿರುವ ಕೆಲವು ಹಸುಗಳನ್ನು ಕಂಡೆವು. ಜನವಸತಿ ಇಲ್ಲವೇ ಇಲ್ಲ ಅನ್ನುವಂತಿತ್ತು. ರಸ್ತೆಯ ಏರು ತಗ್ಗುಗಳಲ್ಲಿ ಮಳೆಯ ನೀರು ಸೇರಿ ರಸ್ತೆ ಕಂಬಳದ ಗದ್ದೆಯಂತಾಗಿತ್ತು. ಎಡಕ್ಕೂ ಬಲಕ್ಕೂ ವಾಲುತ್ತಾ ಸಾಗಿತು ನಮ್ಮ ಜೀಪು. ಅಲ್ಲಲ್ಲಿ ತಿರುವುಗಳು, ಕಲ್ಲು ಕೊಟರೆಗಳು, ಅಡ್ಡವಾಗುವ ಮರದ ದೊಡ್ಡ ಬೇರುಗಳು. ಎದುರುಗಡೆಯಿಂದ ಇನ್ನೊಂದು ಜೀಪು ಬಂದಾಗ  ದಾರಿ ಬಿಟ್ಟು ಕೊಡಲು ನಮ್ಮ ಜೀಪು ಪಡಬೇಕಿತ್ತು. ಒಟ್ಟಾರೆಯಾಗಿ, ಈ ಪಯಣಕ್ಕೆ ಜೀಪೇ ಸರಿ. ಸೋರುವ ಮಾಳಿಗೆ ಇದ್ದರೂ, ತುಕ್ಕು ಹಿಡಿದ ಜೀಪು ಆದರೂ ಅದರ ಕಾರ್ಯಕ್ಷಮತೆ ಮುಂದೆ ನವನವೀನ ಕಾರುಗಳು ಶಿರಬಾಗಲೇ ಬೇಕು!

ನಮ್ಮ ಮುಂದೆ ಹೋಗುತ್ತಿದ್ದ ಜೀಪು ಇದ್ದಕ್ಕಿದ್ದಂತೆ ಮಳೆನೀರಿನ ಹೊಂಡದಲ್ಲಿ ಜಾರುತ್ತಾ ಒಂದು ಬದಿಗೆ ವಾಲುವುದನ್ನು ಕಂಡಾಗ ರಸ್ತೆಯಲ್ಲಿಯೇ ” ಅಂಬಿಗಾ ನಾ ನಿನ್ನ ನಂಬಿದೆ” ಹಾಡು ಗುನುಗಿದೆ. ಒಂದು ಹಂತದಲ್ಲಿ ನಮ್ಮ ಜೀಪಿನ ಹಿಂದಿನ ಚಕ್ರ ಕೆಸರಿನಲ್ಲಿ ಹೂತು ಕರ್ಣನ ರಥವಾಯಿತು. ಹಿಂದಕ್ಕೂ ಮುಂದಕ್ಕೂ ಹೋಗಲಾರದ ಸ್ಥಿತಿಯಲ್ಲಿ ಜೀಪಿನ ಚಕ್ರ ಕೆಸರಿನಲ್ಲಿ ಹೂತು ಹೋಗಿತ್ತು. ನಮ್ಮ ಜೀಪನ್ನು ತಳ್ಳಲು ಇನ್ನೊಂದು ಜೀಪಿನಲ್ಲಿ ಬಂದ ಪ್ರಯಾಣಿಕರು ಸಹಾಯ ಮಾಡಿದರು. ನಮ್ಮ ಜೀಪಿನ ಸಾರಥಿಯ ಚಾಕಚಕ್ಯತೆಯನ್ನು ಇಲ್ಲಿ ಕೊಂಡಾಡಲೇ ಬೇಕು. ಚಿಕ್ಕ ವಯಸ್ಸಿನ ಆ ಡ್ರೈವರ್ ನ ಒಂದು ಕೈಗೆ ಏನೋ ಏಟಾಗಿತ್ತು. ಆದರೂ ಸಾವರಿಸಿಕೊಂಡು ನಮ್ಮನ್ನು ಸುರಕ್ಷಿತವಾಗಿ ಗುರಿ ಮುಟ್ಟಿಸಿದ್ದರು. ಹೀಗೆಲ್ಲಾ ಹರಸಾಹಸಗಳ ನಡುವೆ ಅಂದು ಸುಮಾರು 50 ಕಿ.ಮೀ ಕಾಡುದಾರಿಯ ಕೆಸರು ರಸ್ತೆಯ ಪ್ರಯಾಣ ಮಾಡಿ, ಆಮೇಲೆ ಸ್ವಲ್ಪ ಕಾಲುದಾರಿ ಮತ್ತು ಸುಮಾರು 100 ಮೆಟ್ಟಿಲುಗಳನ್ನು ಹತ್ತಿ ಪಾವನ ಮತ್ತು ಭಾರ್ಗವ ನಾರಸಿಂಹರ ದೇವಾಲಯಗಳಿಗೆ ಹೋಗಿ ಬಂದೆವು.

ಸೆಪ್ಟೆಂಬರ್ 21 ರಂದು ಬೆಳಗ್ಗೆ ಬೇಗನೇ ಎದ್ದು ಸಿದ್ಧರಾದೆವು. ಹತ್ತಿರದ ಹೋಟೆಲ್ ಒಂದರಲ್ಲಿ ಬೆಳಗ್ಗಿನ ತಿಂಡಿಗಾಗಿ ಇಡ್ಲಿ-ವಡೆ ಕಟ್ಟಿಸಿಕೊಂಡು ನಮ್ಮ ಪ್ರಯಾಣ ಮುಂದುವರೆಯಿತು. ಸುಮಾರು 8 ಕಿ.ಮೀ ಪ್ರಯಾಣಿಸಿ ಮೇಲಿನ ಅಹೋಬಲ ತಲಪಿದೆವು. ಅಲ್ಲಿ ನಮಗೆ ಒಬ್ಬರು ಗೈಡ್ ಇದ್ದರು. ಮುಂದಿನ ಕಾಡು ದಾರಿಯಲ್ಲಿ ಕೆಲವು ಕಡೆ ತೀರಾ ಕಡಿದಾದುದರಿಂದ ಕೈಲೊಂದು ಕೋಲು ಇದ್ದರೆ ಅನುಕೂಲ ಎಂದು ಗೈಡ್ ಹೇಳಿದರು. ಎಲ್ಲರೂ ಕೈಲೊಂದು ಕೋಲು ಹಿಡಿದೇ ಹೊರತೆವು. ಸುಂದರವಾದ ಪರಿಸರದಲ್ಲಿ ತಂಪಾದ ಹವೆಯಲ್ಲಿ ಚಾರಣ ಮಾಡುವುದು ಹಿತವಾಗಿತ್ತು. ಕಾಲುದಾರಿ, ಮೆಟ್ಟಿಲು, ಸೇತುವೆಗಳು ಇವನ್ನೆಲ್ಲಾ ದಾಟಿ ಸುಮಾರು 2 ಗಂಟೆಯ ಚಾರಣ ಮುಗಿಸಿ, ಕೊನೆಯದಾಗಿ ಜ್ವಾಲಾ ನರಸಿಂಹ ದೇವಾಲಯ ತಲಪಿದೆವು. ಅಲ್ಲಿ ‘ಭವನಾಶಿನಿ’ ಜಲಧಾರೆಯು ನಮಗೆ ತಂಪನ್ನೆರೆಯಿತು. ಜ್ವಾಲಾ ನರಸಿಂಹನನ್ನು ನೋಡಿ, ನಾವು ಕಟ್ಟಿಕೊಂಡು ಹೋಗಿದ್ದ ತಿಂಡಿಯನ್ನು ತಿಂದು ವಾಪಸಾದೆವು. ಹಿಂತಿರುಗಿ ಬರುವ ದಾರಿಯಲ್ಲಿ ಮಾಲೋಲ, ವರಾಹ ಮತ್ತು ಯೋಗಾನಂದ ದೇವಾಲಯಗಳಿಗೂ ಭೇಟಿ ಕೊಟ್ಟೆವು.

ಅಹೋಬಲ ತಲಪಿದ ಮೇಲೆ  ಪುನ: ಜೀಪಿನಲ್ಲಿ ಪ್ರಯಾಣಿಸಿ ಕಾರಂಜ ಮತ್ತು ಛತ್ರವಟಕ್ಕೂ ಭೇಟಿಯಿತ್ತೆವು. ಹೀಗೆ ನವನಾರಸಿಂಹರನ್ನು ದರ್ಶನ ಮಾಡಿದ ಸಂತೃಪ್ತಿಯಿಂದ ನಾವು ಉಳಕೊಂಡಿದ್ದ ಛತ್ರಕ್ಕೆ ಬರುವಷ್ಟರಲ್ಲಿ ಮಧ್ಯಾಹ್ನ 2 ಗಂಟೆ ಸಮಯ. ಅಲ್ಲಿ ಊಟ ಮುಗಿಸಿ, ಬೆಲಮ್ ಕೇವ್ಸ್ ಕಡೆಗೆ ಹೊರಟೆವು.

…………………..ಮುಂದಿನ ಭಾಗದಲ್ಲಿ ಬೆಲಮ್ ಕೇವ್ಸ್ ನಲ್ಲಿ..

– ಹೇಮಮಾಲಾ.ಬಿ

ಯಾಗಂಟಿ-ಅಹೋಬಲ-ಬೆಲಮ್ ಕೇವ್ಸ್-ಭಾಗ1 ನ್ನು ಓದಲು ಇಲ್ಲಿ ಕ್ಲಿಕ್ಕಿಸಿ:   

ಯಾಗಂಟಿ-ಅಹೋಬಲ-ಬೆಲಂ ಕೇವ್ಸ್-ಭಾಗ 3

 

4 Responses

  1. Hanumanth Gowda says:

    ಆಹೋಬಲದ ಮಾಹಿತಿಗೆ ಧನ್ಯವಾದಗಳು ..

  2. Dinesh Naik says:

    NICE ARTICLE

  3. Ghouse says:

    Beautiful article and nice experience you had. Really you admire many of us to see this kind of unknown places.

  4. sathya says:

    Very good explanation you have given madam. Thankyou madam.

Leave a Reply to sathya Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: