ಏನಿದ್ದರೇನು……..?
ತಾಳು ಮನವೇ ತಾಳು ಆಲಿಸೆನ್ನಯ ಗೋಳು
ಕಣ್ತೆರೆದು ಮೌನ ಮುರಿದು ಪ್ರೇಮಿಸೆನ್ನಯ ಬಾಳು…!
ಹೆರುವವಳು ತಾಯವ್ವ, ನಡೆಸುವಳು ಅಕ್ಕವ್ವ
ಆಟದೊಳಗೆ ನೋವ ಮರೆಸುವಳು ತಂಗವ್ವ
ದುಖಃ ನುಂಗಿ ಬೆಳೆಸುವವಳು ಸಾಕವ್ವ
ಏನಿದ್ದರೇನು… ಭುವಿಗಿಳಿಯುವ ಮೊದಲೇ
ಬ್ರೂಣದೊಳಗಿನ ಹತ್ಯೆ ಯಾಕವ್ವ….?
ಪ್ರೀತಿಸೋಕೆ ಬೇಕು, ರಮಿಸೋಕೂ ಬೇಕಯ್ಯ
ಸುಖವ ನೀಡಿ ಸಲಹುವವಳು ಅವಳಯ್ಯ
ಜೀವನದೆತ್ತರಕೂ ಅವಳದೇ ನೆರಳಯ್ಯ
ಏನಿದ್ದರೇನು… ಹಣದಾಸೆಗೆ, ಕಾಮದಾಹಕೆ
ಅವಳ ಹತ್ಯೆ ಯಾಕಯ್ಯ….?
ವಿದ್ಯೆಯಲೂ ಹಿಂದಿಲ್ಲ, ಬುದ್ದಿಯಲೂ ಹಿಂದಿಲ್ಲ
ಪ್ರತೀ ರಂಗದಲೂ ಸಾಧನೆಗೆ ಬರವಿಲ್ಲ
ಹೆಣ್ಣಿರದ ಜಗಕೆ ಜೀವವೇ ಇಲ್ಲ
ಏನಿದ್ದರೇನು… ಅನಾಚಾರ, ಅತ್ಯಾಚಾರ
ಹಿಂಸೆಗೆ ಬಲಿಯಿನ್ನೂ ತಪ್ಪಿಲ್ಲ…..!
ಅಶೋಕ್. ಕೆ. ಜಿ. ಮಿಜಾರು.