ಗಾಂಧಾರಿಯಲ್ಲಿ ಕ್ಷಮೆ ಕೇಳಿದ ಭೀಮ

Share Button

Rukminimala

 

ಮಹಾಭಾರತ ಯುದ್ಧದಲ್ಲಿ ದುರ್ಯೋಧನನ ವಧೆಯಾದ ಮೇಲೆ ಅದಕ್ಕಾಗಿ ಭೀಮ ಗಾಂಧಾರಿಯ ಕ್ಷಮೆ ಕೇಳಿದ ಸಂದರ್ಭ.

Bhimaಭೀಮ: ಅಮ್ಮ, ಧರ್ಮವೊ ಅಧರ್ಮವೊ ದುರ್ಯೋಧನನ ಭಯದಿಂದ ಆತ್ಮರಕ್ಷಣೆ ಮಾಡಿಕೊಳ್ಳಲಿಚ್ಛಿಸಿದ ನಾನು ಅವನ ನಾಭಿಯ ಕೆಳಗೆ ಪ್ರಹರಿಸಿ ಅವನನ್ನು ಕೊಂದೆನು. ನನ್ನ ಈ ಅಪರಾಧವನ್ನು ಮನ್ನಿಸು. ಮಹಾ ಬಲಿಷ್ಟನಾದ ನಿನ್ನ ಮಗನನ್ನು ಧರ್ಮಯುದ್ಧದಲ್ಲಿ ಸಂಹರಿಸಲು ಯಾರಿಂದಲೂ ಸಾಧ್ಯವಿರುತ್ತಿರಲಿಲ್ಲ. ಆದುದರಿಂದ ಅಧರ್ಮದಿಂದ ಈ ಕಾರ್ಯ ಮಾಡಬೇಕಾಯಿತು. ನಿನಗೆ ತಿಳಿದಿರುವಂತೆ ನಿನ್ನ ಮಗ ಯುಧಿಷ್ಟಿರನನ್ನು ಅಧರ್ಮ ಮಾರ್ಗದಿಂದಲೇ ಸೋಲಿಸಿದ್ದನು. ಮತ್ತು ನಮ್ಮನ್ನು ಯಾವಾಗಲೂ ವಂಚಿಸುತ್ತಲೇ ಇದ್ದ. ರಾಜಪುತ್ರಿ ದ್ರೌಪದಿಯ ಬಗ್ಗೆ ಬಹಳ ಕಠಿಣ ಮಾತು ಆಡಿದ್ದ. ತುಂಬಿದ ಸಭೆಯಲ್ಲಿ ದ್ರೌಪದಿಗೆ ತನ್ನ ಎಡ ತೊಡೆ ತೋರಿಸಿದ್ದ. ದುರ್ಮಾರ್ಗಿಯಾದ ನಿನ್ನ ಮಗನನ್ನು ಆಗಲೇ ಆ ಕ್ಷಣದಲ್ಲೇ ಸಂಹರಿಸಬೇಕಿತ್ತು. ಆದರೆ ಧರ್ಮರಾಜನ ಆಜ್ಞೆಯಿಂದ ನಿಯಮಕ್ಕೆ ಕಟ್ಟುಬಿದ್ದು ಸುಮ್ಮನೆ ಕುಳಿತಿದ್ದೆ. ನಾವು ಅರಣ್ಯ ವಾಸದಲ್ಲಿದ್ದಾಗಲೂ ಅನೇಕ ತೊಂದರೆಗಳನ್ನು ಕೊಟ್ಟನು. ಆಗಲೂ ನಾವು ಸುಮ್ಮನಿದ್ದೆವು. ಆ ಎಲ್ಲ ಕಾರಣಗಳಿಂದ ನಾನು ನಿನ್ನ ಮಗನನ್ನು ಕೊಲ್ಲಲೇಬೇಕಾಯಿತು.

Gandhariಗಾಂಧಾರಿ: ಮಗನೇ! ನೀನು, ನನ್ನ ಮಗನನ್ನು ಮಹಾಬಲಿಷ್ಟ, ಧರ್ಮದಿಂದ ಸಂಹರಿಸಲು ಸಾಧ್ಯವಿರುತ್ತಿರಲಿಲ್ಲ ಎಂದು ಪ್ರಶಂಸೆ ಮಾಡಿದೆಯಲ್ಲ. ಈ ಕಾರಣದಿಂದ ಅವನ ವಧೆ ಆಗಿಲ್ಲ ಎಂದು ತಿಳಿಯುತ್ತೇನೆ. ನೀನು ಹೇಳಿದಂತೆ ದುರ್ಯೋಧನ ನಿಮ್ಮ ವಿಷಯದಲ್ಲಿ ಅನೇಕ ಅಪರಾಧವೆಸಗಿದ್ದಾನೆ. ಆದರೆ ಭೀಮ! ನೀನು ದುಃಶಾಸನನನ್ನು ಕೊಂದು ಅವನ ರಕ್ತ ಕುಡಿದೆಯಲ್ಲವೆ? ಇದು ನಿನಗೆ ಯೋಗ್ಯವೆ?

ಭೀಮ: ಅಮ್ಮ ಬೇರೆಯವರ ರಕ್ತವನ್ನೇ ಕುಡಿಯಬಾರದೆಂದಿರುವಾಗ ನನ್ನ ರಕ್ತವನ್ನು ನಾನೇ ಕುಡಿಯಲು ಹೇಗೆ ಸಾಧ್ಯ? ನನಗೂ ನನ್ನ ತಮ್ಮನಿಗೂ ಯಾವ ಭೇದವೂ ಇಲ್ಲ. ಇಬ್ಬರ ರಕ್ತದಲ್ಲಿಯೂ ತಾರತಮ್ಯವಿರಲು ಕಾರಣವಿಲ್ಲ. ಅಮ್ಮ! ನಿನ್ನ ಮಗನ ರಕ್ತ ನಾನು ಕುಡಿದೆನೆಂದು ಭಾವಿಸಿ ದುಃಖಿಸಬೇಡ. ಅವನ ರಕ್ತ ನನ್ನ ತುಟಿ ಹಲ್ಲುಗಳನ್ನು ದಾಟಿ ಒಳಗೆ ಹೋಗಲೇ ಇಲ್ಲ. ಇದಕ್ಕೆ ಸೂರ್ಯಪುತ್ರನಾದ ಯಮನೇ ಸಾಕ್ಷಿ. ನನ್ನೆರಡು ಕೈಗಳು ಮಾತ್ರ ದುಃಶಾಸನನ ರಕ್ತದಿಂದ ತೋಯ್ದು ಹೋಗಿದ್ದುವು. ವೃಷಸೇನನು ನಕುಲನ ಕುದುರೆಗಳನ್ನು ಸಂಹರಿಸಿ ಅವನನ್ನು ರಥಹೀನನನ್ನಾಗಿ ಮಾಡಿದಾಗ ದುಃಶಾಸನ ಆದಿಯಾಗಿ ದುರ್ಯೋಧನನ ಎಲ್ಲ ಅನುಜರು ಪರಮಸಂತೋಷಿಗಳಾದರು. ಆಗ ಅವರಿಗೆ ಭಯ ಹುಟ್ಟಿಸುವ ಸಲುವಾಗಿ ದುಃಶಾಸನನ ರಕ್ತವನ್ನು ಕುಡಿದಂತೆ ಮಾಡಿದೆ. ದ್ಯೂತದ ಸಮಯದಲ್ಲಿ ದ್ರೌಪದಿಯ ತಲೆಗೂದಲನ್ನು ಹಿಡಿದು ತುಂಬಿದ ಸಭೆಗೆ ದುಃಶಾಸನ ಎಳೆದು ತಂದಾಗ ಕ್ರೋಧಾವಿಷ್ಟನಾದ ನಾನು ಯಾವ ಪ್ರತಿಜ್ಞೆ ಮಾಡಿದ್ದೆನೊ ಆ ಪ್ರತಿಜ್ಞೆಯಂತೆ ನಡೆದುಕೊಳ್ಳದಿದ್ದರೆ ಶಾಶ್ವತವಾಗಿ ಕ್ಷತ್ರಿಯ ಧರ್ಮದಿಂದ ಚ್ಯುತನಾಗಿ ಇರಬೇಕಾಗುತ್ತಿತ್ತು. ಈ ಕಾರಣದಿಂದ ನಾನು ಹಾಗೆ ಮಾಡಬೇಕಾಯಿತು. ಅಮ್ಮ! ನನ್ನನ್ನು ದೋಷಯುಕ್ತನೆಂದು ಸಂದೇಹದಿಂದ ನೋಡುವುದು ಸರಿಯಲ್ಲ.

(ವಿ.ಸೂ: ಮಕ್ಕಳಿಗೆ ಏಕಪಾತ್ರಾಭಿನಯ ಮಾಡಲು ಅನುಕೂಲವಾಗುವಂತೆ ಎರಡು ಪಾತ್ರಗಳ ನಡುವಿನ ಸಂಭಾಷಣೆಯ ರೂಪದಲ್ಲಿ ಇದನ್ನು ಬರೆಯಲಾಗಿದೆ.)

 

– ರುಕ್ಮಿಣಿಮಾಲಾ, ಮೈಸೂರು

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: