ಸ್ವಚ್ಛತೆಯ ಗೀಳು
ಒಮ್ಮೆ ನನ್ನ ಸ್ನೇಹಿತೆಯೊಬ್ಬರ ಮನೆಗೆ ನನ್ನ ಐದು ವರ್ಷದ ಮಗನ ಜೊತೆ ಹೋಗಿದ್ದೆ. ಮನೆ ಒಳಗೆ ಪ್ರವೇಶಿಸಿದ ನನಗೆ ಯಾವುದೊ ಹೊಸ ಶೋರೂಮ್ ಪ್ರವೇಶಿಸಿದ ಹಾಗೆನಿಸಿತು. ಹಾಲ್ನಲ್ಲಿ ಹಾಕಿದ್ದ ಸೋಫಾಸೆಟ್ಟುಗಳು, ಕುರ್ಚಿಗಳು ಮತ್ತು ಅವುಗಳ ಮೇಲಿನ ದಿಂಬುಗಳು ಒಂದಿಂಚೂ ಆಚೀಚಾಗದೆ ಪರ್ಫೆಕ್ಟಾಗಿ ಜೋಡಿಸಲ್ಪಟ್ಟಿದ್ದವು. ಒಂಚೂರು ಧೂಳಿರದ ಶೋಕೇಸಿನಲ್ಲಿ ಬೊಂಬೆಗಳು ಸುಂದರವಾಗಿ ಕುಳಿತಿದ್ದವು. ಸಾಮಾನುಗಳು ಆಯಾ ಜಾಗದಲ್ಲಿ ನೀಟಾಗಿ ಜೋಡಿಸಲ್ಪಟ್ಟಿದ್ದವು. ಕಿಟಕಿ ಬಾಗಿಲುಗಳೆಲ್ಲ ಹಾಕಲ್ಪಟ್ಟು(ಸೆಖೆಯಾಗುತ್ತಿದ್ದರೂ) ಅದರಿಂದ ಇಸ್ತ್ರಿ ಮಾಡಿದ ಡಿಸೈನಿನ ಕರ್ಟನ್ಗಳು ಸಮಾನಾಂತರವಾಗಿ ಇಳಿಬೀಳಲ್ಪಟ್ಟಿದ್ದವು. ಹಾಲಿನ ಮಧ್ಯದಲ್ಲಿ ನೆಲಕ್ಕೆ ಹೊಚ್ಚ ಹೊಸ ಕಾರ್ಪೆಟ್ನ್ನು ಹಾಸಲಾಗಿತ್ತು. ಕಾರ್ಪೆಟ್ನ್ನು ಮೆತ್ತಗೆ ದಾಟಿ, ಹಗುರವಾಗಿ ಸೋಫಾ ಮೇಲೆ ಮುದುರಿ ಕುಳಿತು, ಹಾಲಿನ ಅಂದ ಚೆಂದ ನೋಡಿ ಆಶ್ಚರ್ಯ ಪಡುತ್ತಿರಬೇಕಾದರೆ ನನ್ನ ಮಗ ಸೋಫಾ ಹತ್ತಿ ಅದರ ಮೆತ್ತನೆಗೆ ಖುಷಿಗೊಂಡು ಥೈಥೈ ಕುಣಿಯಲಾರಂಬಿಸಿದ. ಸೋಫಾ ಮೇಲಿನ ಸೆಟಪ್ ಧಪಧಪ ಕೆಳಗೆ ಬಿದ್ದವು. ನನ್ನ ಸ್ನೇಹಿತೆಯ ಗಂಡನ ಮುಖ ಮೊದಲು ಕೆಂಪಗಾಗಿ ನಂತರ ಕಪ್ಪಾಯಿತು. ಸೋಫಾ ಮೇಲೆ ಹಾಗೆಲ್ಲ ಕುಣಿಬಾರದು ಪುಟ್ಟಾ, ನೋಡು ಹೀಗೆ ಮೆಲ್ಲಗೆ ಕುಳಿತುಕೊಳ್ಳಬೇಕು ಎಂದು ಹಲ್ಲುಕಚ್ಚಿಕೊಂಡು ಹೇಳಿ ಕುಳಿತುಕೊಳ್ಳುವ ಒಂದು ಡೆಮೊ ಕೊಟ್ಟರು. ಮಕ್ಕಳಿಗೆ ಅರ್ಥವಾಗುತ್ತದೆಯೆ! ಮಗನನ್ನು ಸುಮ್ಮನಿರಿಸಲಾಗದ ನಾನು ಬೇಗ ಮಾತು ಮುಗಿಸಿ ಅಲ್ಲಿಂದ ಜಾಗ ಖಾಲಿ ಮಾಡಿದೆ.
ಹೀಗೆ ಕೆಲವರು ತಮ್ಮ ಮನೆಯನ್ನು ಎಷ್ಟು ಸ್ವಚ್ಛವಾಗಿ, ಓರಣವಾಗಿಟ್ಟುಕೊಂಡಿರುತ್ತಾರೆಂದರೆ ಮನೆಗೆ ಬಂದ ಅತಿಥಿಗಳಿಗೆ ಆರಾಮವಾಗಿ ಕುಳಿತುಕೊಳ್ಳಲೂ ಕಷ್ಟವಾಗುತ್ತದೆ. ನಮ್ಮ ಪಕ್ಕದಮನೆ ಆಂಟಿ ತಮ್ಮ ಮನೆಯನ್ನು ರಾತ್ರಿ ಹತ್ತು ಗಂಟೆಯ ಸಮಯದಲ್ಲೂ ಉಜ್ಜಿ ಉಜ್ಜಿ ಕ್ಲೀನ್ ಮಾಡುತ್ತಾರೆ. ನಮ್ಮ ಸಂಬಂಧಿಕರೊಬ್ಬರಿಗೆ ತಮ್ಮ ಹೆಂಡತಿ ತೊಳೆದ ಪಾತ್ರವನ್ನು ಇನ್ನೊಮ್ಮೆ ತೊಳೆದು, ಒರೆಸಿ, ನೀಟಾಗಿ ಶೆಲ್ಫ್ ಮಲೆ ಜೋಡಿಸದಿದ್ದರೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲವಂತೆ. ಕೆಲವರಿಗೆ ದಿನಾ ತೊಳೆದ ಕಾರನ್ನೆ ತೊಳೆದು ಫಳಗುಟ್ಟಿಸುವುದು, ಉಜ್ಜಿದ ಬಚ್ಚಲನ್ನೇ ಉಜ್ಜಿ ಉಜ್ಜಿ ಕನ್ನಡಿ ಮಾಡುವುದು, ಮನೆ ಸಾಮಾನುಗಳನ್ನು ಓರಣ ಮಾಡುತ್ತಲೆ ಇರುವುದು, ಧೂಳು ಒರಸುತ್ತಲೆ ಇರುವುದು ಗೀಳಾಗಿರುತ್ತದೆ. ನಮ್ಮ ಊರಿನಲ್ಲಿ ಪಕ್ಕದ ಮನೆಯ ಮಹಿಳೆಯೊಬ್ಬರು ದಿನದಲ್ಲಿ ಇಪ್ಪತ್ತು ಸಲ ಬಾವಿಕಟ್ಟೆಗೆ ಬಂದು, ಬಾವಿ ನೀರು ಸೇದಿ, ಬಾವಿಕಟ್ಟೆಯನ್ನೆಲ್ಲ ತೊಳೆದು, ತಮ್ಮ ಕಾಲನ್ನೂ ತೊಳೆದು ಕೊಳ್ಳುತ್ತಾರೆ.
ನಮ್ಮ ಸುತ್ತಮುತ್ತಲನ್ನು ಸ್ವಚ್ಛವಾಗಿ, ಓರಣವಾಗಿ ಮತ್ತು ಸುಂದರವಾಗಿಟ್ಟುಕೊಳ್ಳುವುದು ಒಳ್ಳೆಯ ವಿಷಯ. ಆದರೆ ಅದೆ ಅತಿಯಾಗಿ, ಗೀಳಾದರೆ ಅದು ನಮ್ಮನ್ನು ಬೇನೆಯಾಗಿ ಕಾಡುತ್ತದೆ. ಇದಕ್ಕೆ ಕನ್ನಡದಲ್ಲಿ ಗೀಳು ಬೇನೆ, ಇಂಗ್ಲೀಷಿನಲ್ಲಿ ಒಬ್ಸೆಸಿವ್ ಕಂಪಲ್ಸಿವ್ ಡಿಸ್ಆರ್ಡರ್((obsessive compulsive disorder) ಎಂದು ಕರೆಯುತ್ತಾರೆ. ಪದೇ ಪದೇ ಕೈಕಾಲು ತೊಳೆದುಕೊಳ್ಳುವುದು, ಸ್ನಾನ ಮಾಡುವುದು ಅಥವಾ ಹಲ್ಲುಜ್ಜುವುದನ್ನು washing compulsion ಎನ್ನುತ್ತಾರೆ. ಪದೇ ಪದೇ ಮನೆಯನ್ನು ಮತ್ತು ಮನೆಯಲ್ಲಿರುವ ವಸ್ತುಗಳನ್ನು ತೊಳೆಯುವುದು, ಉಜ್ಜುವುದು, ಧೂಳು ತೆಗೆಯುವುದು, ಓರಣ ಮಾಡುವುದನ್ನು cleaning compulsion ಎನ್ನುತ್ತಾರೆ.
ಈ ಬೇನೆ ನಮ್ಮ ಮನಃಶಾಂತಿಯನ್ನು ಕದಡುವುದರ ಜೊತೆಗೆ ಮನೆಯಲ್ಲಿ ಬೇರೆಯವರೊಡಗಿನ ನಮ್ಮ ಸಂಬಂಧವನ್ನು ಹಾಳುಮಾಡುತ್ತದೆ. ಈ ತೊಂದರೆಯಿರುವವರು ಸದಾ ಮನೆಯಲ್ಲಿನ ಕಸ, ಧೂಳು, ಹರಡಿರುವ ಸಾಮಾನುಗಳ ಬಗ್ಗೆಯೇ ಯೋಚಿಸುತ್ತಾ ಸ್ವಚ್ಛ ಮಾಡುತ್ತಲೆ ಇರುತ್ತಾರೆ. ಬಿಡುವಿನ ಸಮಯದಲ್ಲಿ ಹವ್ಯಾಸಗಳನ್ನಿಟ್ಟುಕೊಳ್ಳುವ ಬದಲು ಸದಾ ತೊಳೆಯುವುದು, ಬಳಿಯುವುದು ಮಾಡುತ್ತಿರುತ್ತಾರೆ. ಇದರಿಂದಲೆ ಸುಸ್ತಾಗಿ ಮನೆಯವರ ಮೇಲೆ ರೇಗುವುದೂ ಮಾಡುತ್ತಾರೆ.
ಈ ಬೇನೆಗೆ ಹಲವಾರು ಕಾರಣಗಳಿವೆ. ಕೆಲವರು ರೋಗಾಣು ಮತ್ತು ಸೋಂಕಿನಿಂದ ಬರುವ ಖಾಯಿಲೆಯ ಭಯದಿಂದ ಪದೇ ಪದೇ ಕೈಕಾಲು ತೊಳೆದುಕೊಳ್ಳುವುದು, ಮನೆ ತೊಳೆದು ಉಜ್ಜುವುದನ್ನು ಮಾಡುತ್ತಾರೆ. ಕೆಲವರು ಸ್ವಚ್ಛತೆ ಮತ್ತು ಓರಣವಾಗಿರುವುದೆ ಪರಮ ಶ್ರೇಷ್ಠವೆಂದು ನಂಬಿರುತ್ತಾರೆ. ಇನ್ನು ಕೆಲವರು ತಮ್ಮ ಮೇಲ್ಮಟ್ಟವನ್ನು ತೋರಿಸಲು ತಮ್ಮ ಸುತ್ತ ಮುತ್ತ ಓರಣ ಮಾಡುತ್ತಲೆ ಇರುತ್ತಾರೆ. ಮತ್ತೆ ಕೆಲವರು ಕ್ಲೀನ್ ಮಾಡಿ, ತಮ್ಮ ಆತಂಕ, ದುಗುಡಗಳಿಂದ ಬಿಡುಗಡೆ ಪಡೆಯಲು ಹೋಗಿ ಇನ್ನಷ್ಟು ಆತಂಕಕ್ಕೀಡಾಗುತ್ತಾರೆ. ಈ ಸಮಸ್ಯೆ ಮನಃಶಾಂತಿಯನ್ನು ಕದಡುತ್ತಿದ್ದರೆ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದರೆ, ಬೇರೆಯವರೊಡಗಿನ ಸಂಬಂಧವನ್ನು ಹದಗೆಡಿಸುತ್ತಿದ್ದರೆ ತಕ್ಷಣ ಮನಶಾಸ್ತ್ರಜ್ಞರನ್ನು ಭೇಟಿ ಮಾಡಿ ಗುಣ ಪಡಿಸಿಕೊಳ್ಳುವುದು ಒಳ್ಳೆಯದು.
-ಪೂರ್ಣಿಮಾ ಕೆ
ಟ್ರೂ ಮೇಡಂ, ವೆರಿ ನೈಸ್
ನೈಸ್ ಒನ್ .. 🙂
ವೆರಿ ನೈಸ್
ತುಂಬ ಚೆನ್ನಾಗಿದೆ ನೀಲಮ್ಮ Banur