ಆಳ್ವಾಸ್ ನುಡಿಸಿರಿ 2014
ಶ್ರೀ ಮೋಹನ್ ಆಳ್ವರ ಬಗ್ಗೆ , ಅವರ ಶಿಕ್ಷಣ ಸಂಸ್ಥೆಗಳ ಬಗ್ಗೆ, ನುಡಿಸಿರಿ ಕಾರ್ಯಕ್ರಮದ ಬಗ್ಗೆ ಪತ್ರಿಕೆಗಳಲ್ಲಿ ಜನರ ಬಾಯಿಯಲ್ಲಿ ಮೆಚ್ಛುಗೆ ನುಡಿಗಳನ್ನು ವಿವರವಾಗಿ ಕೇಳಿದ್ದ ನನಗೆ ಒಮ್ಮೆ ಇವರ ಕಾರ್ಯಕ್ರಮ ನೋಡಿ ಬರುವ ಆಕಾಂಕ್ಷೆ ಬಹಳವಾಗಿತ್ತು.
ನನಗೆ ಇಂತಹ ಸುವರ್ಣಾವಕಾಶ ಮೈಸೂರಿನಲ್ಲಿ ಒಮ್ಮೆ ದೊರಕಿತು. ಈಗ್ಗೆ ಸುಮಾರು 2-3 ವರ್ಷಗಳ ಹಿಂದೆ ಮೈಸೂರಿನ ಕಲಾಮಂದಿರದಲ್ಲಿ ಆಳ್ವಾಸ್ ಸಂಸ್ಥೆಯ ಮಕ್ಕಳು ನಡೆಸಿಕೊಟ್ಟ ಕಾರ್ಯಕ್ರಮ ನೋಡಿದ ಮೇಲೆ ಇನ್ನೂ ತುಡಿತ ಹೆಚ್ಚಾಯಿತು.ಎಂತಹ ಅದ್ಭುತ ಕಾರ್ಯಕ್ರಮ ಅದಾಗಿತ್ತೆಂದರೆ ಕಲಾ ಮಂದಿರದಲ್ಲಿ ಕೂರಲು ಜಾಗವಿಲ್ಲದಷ್ಟು ಜನ ಸೇರಿದ್ದರು.
ನಮ್ಮ ಸ್ನೇಹಿತರಾದ ಶ್ರೀ ದಾಮೋದರ್ ಅವರು ಸಂಪಾಜೆಯಲ್ಲಿದ್ದು, ಅವರು ಪ್ರತಿ ವರ್ಷ ನುಡಿಸಿರಿ ಕಾರ್ಯಕ್ರಮ ಇದ್ದಾಗ ಹೋಗುವುದಲ್ಲದೆ ನಮಗೂ ವಿಷಯ ತಿಳಿಸುತ್ತಿದ್ದರು. 2104 ರ ನುಡಿಸಿರಿ ಕಾರ್ಯಕ್ರಮದ ಬಗ್ಗೆ ತಿಳಿಸಿದಾಗ ನಾನು ಮತ್ತು ನನ್ನ ಪತಿಯವರ ಹೆಸರನ್ನು ರಿಜಿಸ್ಟರ್ ಮಾಡಿಸಲು ಹೇಳಿದೆ. ಅವರು ತಿಳಿಸಿದಂತೆ ನಾವು ದಿ. 12/11/2014ರಂದು ಹೊರಟು ಅವರ ಊರು ಕಲ್ಗುಂಡಿಯ ಹತ್ತಿರದ ಚೆಂಬು ಗ್ರಾಮ ತಲಪಿದೆವು. ಒಂದು ರಾತ್ರಿ ಅವರ ಮನೆಯ ಆತಿಥ್ಯ ಸ್ವೀಕರಿಸಿದೆವು. ಮರುದಿನ ಶ್ರೀ ದಾಮೋದರ್ ಮತ್ತು ಶ್ರೀಮತಿ ಸರಸ್ವತಿಯವರೊಟ್ಟಿಗೆ ಮೂಡಬಿದ್ರೆಗೆ ಹೊರಟೆವು. ಸುಮಾರು 12 ಘಂಟೆಗೆ ಮೂಡಬಿದ್ರೆ ತಲಪಿದೆವು. ಮುನ್ನಾದಿನವಾದರೂ ಅಹ್ವಾನಿತರಿಗೆ ಮಧ್ಯಾಹ್ನದ ಊಟ ಸಹ ಏರ್ಪಾಡಾಗಿತ್ತು. ಎಲ್ಲರೂ ಸಮಾರಂಭದ ತಯಾರಿಯಲ್ಲಿ ತೊಡಗಿದ್ದರು. ವಿದ್ಯಾಗಿರಿಯಲ್ಲಿನ ಬೃಹತ್ ವಿದ್ಯಾಸಂಸ್ಥೆಗಳನ್ನು ನೋಡಿ ಖುಶಿಯಾಯಿತು. ಶ್ರೀ ಮೋಹನ್ ಆಳ್ವಾರವರ ಅಪಾರ ಸಾಧನೆ ಬಗ್ಗೆ ನಿಜಕ್ಕೂ ಹೆಮ್ಮೆಯಾಯಿತು.
ಕಾರ್ಯಕ್ರಮಗಳನ್ನು ಒಟ್ಟು ಐದು ವೇದಿಕೆಗಳಲ್ಲಿ ಆಯೋಜಿಸಲಾಗಿತ್ತು.
- ರತ್ನಾಕರ ವರ್ಣಿ ವೇದಿಕೆ
- ಕವಿ ಸುಬ್ಬಣ್ಣ ಬಯಲು ರಂಗ ಮಂದಿರ
- ಡಾ. ಎಸ್. ಆಚಾರ್ಯ ಸಭಾಂಗಣ
- ಕು.ಶಿ.ಹರಿದಾಸ ಭಟ್ಟ ವೇದಿಕೆ
- ಸ್ವರಣ್ ರಾಜ್ ವೇದಿಕೆ
ದಿ. 14/11/2014ರಂದು ಶುಕ್ರವಾರ ಉದ್ಘಾಟನೆ ಸಮಾರಂಭ. ನೋಡಲು ಎರಡು ಕಣ್ಣು ಸಾಲದು. ವಿವಿಧ ಕಲಾವಿದರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅವರ ವೈವಿಧ್ಯಮಯ ತೊಡಿಗೆಗಳು. ಪೋಷಾಕುಗಳು , ಜನಪದ ಮುಖುವಾಡಗಳು ಕಣ್ಣಿಗೆ ಹಬ್ಬವನ್ನು ಮನಸ್ಸಿಗೆ ಮುದವನ್ನು ನೀಡಿದುವು. ಈ ಸಮಾರಂಭಕ್ಕೆ ಆಗಮಿಸಿದ್ದ ಕಲಾವಿದರನ್ನು ನೋಡಿದಾಗ ಶ್ರೀ ಮೋಹನ ಆಳ್ವರು ಎಂತಹ ಕಲಾಭಿಮಾನಿಗಳು ಎಂಬುದು ಅರಿವಾಗುತ್ತದೆ. ಎಲ್ಲ ರೀತಿಯ ಕಲೆಗಳನ್ನು ಬೆಳಗುವ ನಿಟ್ಟಿನಲ್ಲಿ ಅವರ ಪ್ರಾಮಾಣಿಕ ಪ್ರಯತ್ನವಿದು.
ಸುಮಾರು 5000 ಕ್ಕೂಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮ ವೀಕ್ಷಿಸಲು ರಾಜ್ಯದ ಎಲ್ಲೆಡೆಯಿಂದಲೂ ಆಗಮಿಸಿದ್ದರು. ಸಾವಿರ ಸಂಖ್ಯೆಯಲ್ಲಿ ಬಂದ ಜನರಿಗೆ ಉಳಿಯಲು ಉಚಿತ ಕೊಠಡಿಗಳು, ಊಟ ತಿಂಡಿಯವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಇದಕ್ಕಾಗಿ ಅಲ್ಲಿನ ಕಾರ್ಯಕಾರಿ ಮಂಡಲಿಯವರು , ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿಯವರು ಕಾರ್ಯ ನಿರ್ವಹಣೆಯಲ್ಲಿ ಭಾಗವಹಿಸಿದ ಎಲ್ಲ ಕೆಲಸಗಾರರು ಅಭಿನಂದನಾರ್ಹರು. ಪ್ಲಾಸ್ಟಿಕ್ ಉಪಯೋಗ ಮಾಡದೆ ಅಡಿಕೆ ಹಾಳೆಯ ತಟ್ಟೆ ಉಪಯೋಗಿಸಿದ್ದು ಶ್ಲಾಘನೀಯ. ಎಲ್ಲಾ ಸಮಾರಂಭಗಳಲ್ಲಿ ಜನರು ಪ್ಲಾಸ್ಟಿಕ್ ಉಪಯೋಗಿಸದೆ ಇರಲು ತೀರ್ಮಾನಿಸಿದರೆ ನಮ್ಮ ದೇಶದ ಪರಯಾವರಣವನ್ನು ಅಚ್ಚುಕಟ್ಟಾಗಿ ಇಡಲು, ನಿರ್ಮಲ ದೇಶವನ್ನಾಗಿ ಮಾಡುವುದು ಕಷ್ಟವಲ್ಲ.
ಶುಚಿರುಚಿಯಾದ ಊಟ-ತಿಂಡಿಗಳನ್ನು ಕೊಟ್ಟುದುದಲ್ಲದೆ ಶುಚಿತ್ವವನ್ನು ಕಾಪಾಡಲಾಗಿತ್ತು. ಇಡೀ ಕ್ಯಾಂಪಸ್ ನಲ್ಲಿ ಎಲ್ಲಿಯೂ ಪ್ಲಾಸ್ಟಿಕ್ ಆಗಲಿ ಕಸವನ್ನಾಗಲೀ ಕಾಣಲಿಲ್ಲ. ಧರ್ಮಸ್ಠಳ ವಿದ್ಯಾಸಂಸ್ಥೆಯ ಮಕ್ಕಳೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಈ ಕೆಲಸಗಳಲ್ಲಿ ಪಾಲ್ಗೊಂಡಿರುವುದನ್ನು ನಾವು ಕಂಡೆವು. ಒಟ್ಟಾರೆಯಾಗಿ ಅವರ ಶಿಸ್ತು ಮತ್ತು ಕಾರ್ಯತತ್ಪರತೆ ನಿಜಕ್ಕೂ ಅನುಕರಣೀಯ.
ವೇದಿಕೆಗಳನ್ನೂ ತುಂಬಾ ಸುಂದರವಾಗಿ ಸಜ್ಜುಗೊಳಿಸಲಾಗಿತ್ತು ಹಾಗೂ ಇಡೀ ಕ್ಯಾಂಪಸ್ ಆನ್ನು ವಿದ್ಯುದ್ದೀಪಗಳಿಂದ ಮತ್ತು ಹೂವುಗಳಿಂದ ಅಲಂಕರಿಸಿದ್ದು ಒಂದು ಆಹ್ಲಾದಕರ ವಾತಾವರಣ. ಸಂಭ್ರಮ ಎಲ್ಲೆಡೆ ತುಂಬಿ ತುಳುಕಾಡುತಿತ್ತು.
ಎಲ್ಲಾ ವೇದಿಕೆಗಳಲ್ಲೂ ಬೆಳಗ್ಗೆಯಿಂದ ಸಂಜೆಯ ವರೆಗೆ ವಿವಿಧ ಕಾರ್ಯಕ್ರಮಗಳ ಜೊತೆಗೆ ಭಾಷೆ , ಶಿಕ್ಷಣ, ಇತಿಹಾಸ, ವರ್ತಮಾನದ ಆತಂಕಗಳು,ಕಲೆ, ಮಾಧ್ಯಮ, ಸಾಹಿತ್ಯ, ರಾಜಕಾರಣ, ಸ್ತ್ರೀ ಸಂವೇದನೆ, ಅಧ್ಯಾತ್ಮ, ಕೃಷಿ, ಪರಿಸರ ಇತ್ಯಾದಿ ವಿಚಾರಗಳಲ್ಲಿ ಗೋಷ್ಠಿಗಳನ್ನು ಅಯೋಜಿಸಲಾಗಿತ್ತು. ಕೃಷಿ ಬಗ್ಗೆ ಮಾತನಾಡಿದ ಶ್ರೀ ಶಿವಾನಂದ ಕಳವೆಯವರು ಕೃಷಿಕರು ವಾಣಿಜ್ಯ ಬೆಳೆಗಳಿಗೆ ಮನಸೋತಿದ್ದಾರೆ. ಇತಿಮಿತಿ ಇಲ್ಲದ ರಾಸಾಯನಿಕ ಗೊಬ್ಬರದ ಉಪಯೋಗದಿಂದ ಆಗುತ್ತಿರುವ ದುಷ್ಪರಿಣಾಮಗಳು, ಭೂಮಿ ಬರಡಾಗುತ್ತಿರುವ ಬಗ್ಗೆ ರೈತರಿಗೆ ಮಾರ್ಗದರ್ಶನವಾಗುವಂತಹ ವಿಚಾರಗಳ ಬಗ್ಗೆ ವಿವರಿಸಿದರು.
ಶ್ರೀ ನಾಗೇಶ್ ಹೆಗಡೆಯವರು ಪರಿಸರವನ್ನು ಸಂರಕ್ಷಿಸುವ ಬಗ್ಗೆ ತುಂಬ ಸೊಗಸಾಗಿ ಮಾತನಾಡಿದರು. ನಮ್ಮ ಭೂ ಸಂಪತ್ತು , ಜಲಸಂಪತ್ತು , ಪಶುಸಂಪತ್ತು , ಪ್ರಾಣಿಸಂಪತ್ತು ಈಗಾಗಲೇ ನಾಶವಾಗಿದ್ದು ಅಳಿದುಳಿದ ಸಂಪತ್ತನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳುವ ಬಗ್ಗೆ ಭಾವನಾನಾತ್ಮಕವಾಗಿ ವಿಚಾರ ಮಂಡಿಸಿದರು. ಮೈನಿಂಗ್ ಮಾಡಿ ಪರಿಸರ ನಾಶಮಾಡುವುದರ ಬಗ್ಗೆ , ಕಾಡನ್ನು ಅತಿಕ್ರಮಣ ಮಾಡುವ ಮಾಡುತ್ತಿರುವ ಬಗ್ಗೆ , ರೆಸಾರ್ಟ್ ಗಳನ್ನಾಗಿ ಪರಿವರ್ತಿಸಲು ಅನುಮತಿ ನೀಡುತ್ತಿರುವ ಬಗ್ಗೆ ಅರಿವು ಮೂಡಿಸಿದರು. ಜನಪರವಲ್ಲದ ಕಾರ್ಯಕ್ರಮಗಳನ್ನು ಯೋಚನೆಗಳನ್ನು , ಪರಿಸರಕ್ಕೆ ಮಾರಕವಾಗುವಂತಹ ಯಾವುದೇ ಯೋಜನೆಗಳನ್ನು ಅನುಷ್ಠಾನಗೊಳಿಸದಂತೆ ಹೋರಾಟ ನಡೆಸಬೇಕು. ಆಗಲೇ ನಮ್ಮ ಮುಂದಿನ ಜನಾಂಗಕ್ಕೆ ಸುಂದರ ಪ್ರಪಂಚ ಕೊಡಲು ಸಾಧ್ಯ. ನಮ್ಮ ಸಂಪದ್ಭರಿತ ದೇಶವನ್ನು ಬರಡು ಭೂಮಿಯನ್ನಾಗಿ ಮಾಡಲು ಬಿಡಬಾರದು, ಇಂತಹ ವಿಚಾರಗೋಷ್ಠಿಗಳು ಎಲ್ಲೆಡೆಯೂ ನಡೆದು ಜನರು ಜಾಗೃತರಾಗಬೇಕು .
ಶ್ರೀ ಗುರುರಾಜ್ ಕರ್ಜಗಿ ಇವರೂ ಸಹ ಭಾಷೆ ಮತ್ತು ಶಿಕ್ಷಣದ ಬಗ್ಗೆ ವಿಚಾರಗಳನ್ನು ಮನ ಮುಟ್ಟುವಂತೆ ಮಂಡಿಸಿದರು .ನಾವು ಎಲ್ಲ ವಿಚಾರ ಗೋಷ್ಠಿಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ನಾವು ನೋಡಿದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತುಂಬಾ ಮೆಚ್ಚಿಗೆಯಾದದ್ದು ಆಳ್ವಾಸ್ ಸಾಂಸ್ಕೃತಿಕ ವೈಭವ. ಈ ಕಾರ್ಯಕ್ರಮ ಎಷ್ಟು ಸುಂದರವಾಗಿ ಮೂಡಿ ಬಂತು ಎಂಬುದನ್ನು ಬಾಯಿಮಾತಿನಲ್ಲಿ ಹೇಳಲು ಆಗುವುದಿಲ್ಲ. ಅದನ್ನು ನೋಡಿಯೇ ಆನಂದ ಪಡಬೇಕು. ಎಲ್ಲಾ ರಾಜ್ಯಗಳ ವಿಶೇಷ ಕಲಾ ನೃತ್ಯಗಳನ್ನು ಕಿಕ್ಕಿರಿದ ಜನಸ್ತೋಮ ರಾತ್ರಿ 1 ಘಂಟೆಯ ವರೆಗೂ ವೀಕ್ಷಿಸಿದ್ದು ಇದಕ್ಕೆ ಸಾಕ್ಷಿ. ಭಾಗವಹಿಸಿದ ಮಕ್ಕಳ ಉತ್ಸಾಹ ಅಭಿನಂದನೀಯ. ಈ ಕಾರ್ಯಕ್ರಮ ನಮ್ಮ ಮೈಮನವನ್ನು ಪುಳಕಿತಗೊಳಿಸಿತು. ನಮ್ಮ ಸ್ನೇಹಿತರಾದ ಶ್ರೀ ದಾಮೋದರ್ ರವರ ಮೊಮ್ಮಗಳು ಆಳ್ವಾಸ್ ನಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದು, ಅವಳು ಸಹ ಗುಂಪು ಹಾಡುಗಾರಿಕೆಯಲ್ಲಿ ಭಾಗವಹಿಸಿದ್ದಳು. ಪ್ರಾರ್ಥನೆಯಿಂದ ಆರಂಭಿಸಿ ಪ್ರತಿ ಕಾರ್ಯಕ್ರಮದ ನಂತರ ಇವರು ಹಾಡುತ್ತಿದ್ದ ಸುಮಧುರ ಹಾಡುಗಳು ಪ್ರೇಕ್ಷಕರನ್ನು ರಂಜಿಸಿದುವು.
ಈ ಕಾರ್ಯಕ್ರಮಗಳಲ್ಲದೆ , ಜಾನಪದೆ ಕಲೆಗಳಾದ ಡೊಳ್ಳು ಕುಣಿತ, ಕೀಲು ಕುದುರೆ ನೃತ್ಯ, ಕೋಲೆಬಸವ, ಚೆಂಡೆವಾದ್ಯ, ಯಕ್ಷಗಾನ, ಕಂಸಾಳೆ, ಸೋಮನಕುಣಿತ, ಛದ್ಮವೇಷ, ಮಲ್ಲಕಂಬ, ಕೊರವರ ಕುಣಿತ……ಇತ್ಯಾದಿ ಹತ್ತು ಹಲವಾರು ವಿಶೇಷ ಆಕರ್ಷಣೆಗಳು ನಮ್ಮ ಮನಸ್ಸಿಗೆ ಮುದ ನೀಡಿದುವು.
ಇಂಥಹ ಸಮಾಜಪರ ,ಶಿಕ್ಷಣದ ಏಳಿಗೆ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಲು ಶ್ರಮಿಸುತ್ತಿರುವ ಶ್ರೀ ಮೋಹನ್ ಆಳ್ವ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇಂತವರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ ಎಂದು ಆಶಿಸುತ್ತೇನೆ.
– ನೀಲಮ್ಮ ಕಲ್ಮರಡಪ್ಪ, ಮೈಸೂರು
ತುಂಬಾ ಚೆನ್ನಾಗಿ ಬರೆದಿದ್ದಿರ ಮೇಡಂ. ನಾನೂ ನುಡಿಸಿರಿಗೆ ಹೋಗಬೇಕಿತ್ತು ಅನಿಸಿತು.
ಸೂಪರ್ ಆರ್ಟಿಕಲ್ . ವಿವರವಾಗಿ ಸಾಂದ್ರವಾಗಿ ಬರೆದಿದ್ದೀರಿ.
GREAT JOB
ಬಹಳ ಚೆನ್ನಾಗಿ ಬರೆದಿದ್ದೀರಿ