ಗುರು ವಂದನೆ..ಅಕ್ಷರ ವಂದನೆ..

Spread the love
Share Button

Smitha

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಎಂಬ ಪುಟ್ಟ ಊರು ಹೇಗೆ ಡಾ.ಕುರುಂಜಿ ವೆಂಕಟ್ರಮಣ ಗೌಡರ ಪರಿಶ್ರಮದಿಂದ ವಿದ್ಯಾನಗರವಾಗಿ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿತೋ,ಅಂತೆಯೇ ಸುಳ್ಯದಲ್ಲೊಂದು ಸಾಂಸ್ಕೃತಿಕ ಸಂಚಲನವನ್ನುಂಟು ಮಾಡಿ ಸುಳ್ಯವನ್ನು ಸಾಂಸ್ಕೃತಿಕ ನಗರಿಯನ್ನಾಗಿ ಮಾಡಿದ ಡಾ. ಶಿಶಿಲರ ಸಾಧನೆಯೂ ಅಷ್ಟೇ ಮುಖ್ಯವೆನ್ನಿಸುತ್ತದೆ.

ಅರ್ಥ ಶಾಸ್ತ್ರದ ಉಪನ್ಯಾಸಕರಾದ ಶಿಶಿಲರು,ಅರ್ಥಶಾಸ್ತ್ರವೆಂಬ ಕಬ್ಬಿಣದ ಕಡಲೆಯನ್ನು ಸಾಹಿತ್ಯಕ್ಕೆ ತೀರಾ ಹತ್ತಿರ ತಂದು,ಕಥೆಯಂತೆ ,ಕವಿತೆಯಂತೆ ಭೋಧಿಸಿದ್ದರಿಂದಲೇ ಅರ್ಥಶಾಸ್ತ್ರಕ್ಕೂ,ಸಾಹಿತ್ಯಕ್ಕೂ, ನಮಗೂ ಒಂದು ರೀತಿಯಾದ ಬಿಡಿಸಲಾಗದ ಬಂಧ ಇನ್ನಿಲ್ಲದಂತೆ ಬೆಸೆದುಕೊಂಡದ್ದು.ಅರ್ಥ ಶಾಸ್ತದ ತರಗತಿಯೆಂಬುದು ನಮಗೆಲ್ಲರಿಗೂ ಸಾಹಿತ್ಯ,ಸಂಗೀತ, ಸಂಸ್ಕೃತಿ, ಜೀವನಾನುಭವ,ಜೀವನ ವಿಧಾನವನ್ನ ಕಲಿಸಿಕೊಡುವಂತಹ ಅದ್ಭುತ ತಾಣವೇ ಆಗಿತ್ತು.ದಿನದ ಒಂದು ಗಂಟೆಯಲ್ಲಿ ನಾವು ಕಲಿತ್ತದ್ದಾದರೂ ಎಷ್ಟೆಲ್ಲ?ಕತೆ ಓದಿದೆವು,ಕವಿತೆ ಬರೆದೆವು,ಪುಟ ಪುಟಗಳಿಂದ ಆಯ್ದು ತಂದು ನುಡಿಮುತ್ತುಗಳನ್ನು ಸಂಗ್ರಹಿಸಿದೆವು.ಚಾರಣ ಹತ್ತಿದೆವು.ಅರ್ಥಶಾಸ್ತ್ರವನ್ನು ಮೆಚ್ಚಿಕೊಂಡಷ್ಟೇ ಪ್ರೀತಿಯಿಂದ ಸಾಹಿತ್ಯವನ್ನೂ,ಓದುವ ಗೀಳನ್ನೂ ಹಚ್ಚಿಕೊಂಡೆವು.ಅರ್ಥಶಾಸ್ತ್ರದ ತರಗತಿಗೆ ಶಿಶಿಲರು ಅಧ್ಯಾಪಕರಾಗಿ ಬರದೇ ಇರುತ್ತಿದ್ದರೆ..ನಮಗ್ಯಾರಿಗೂ ಈ ಪರಿಯಲ್ಲಿ ಅರ್ಥಶಾಸ್ತ್ರವೂ ಆಪ್ತವಾಗುತ್ತಿರಲಿಲ್ಲ, ಸಾಹಿತ್ಯದ ಗಂಧ ಗಾಳಿಯೂ ಹತ್ತಿರಕ್ಕೆ ಸುಳಿಯುತ್ತಿರಲಿಲ್ಲ. ಇಂತಹ ಒಂದು ಭಾಗ್ಯ ಎಷ್ಟು ಮಂದಿ ವಿದ್ಯಾರ್ಥಿಗಳಿಗೆ ದಕ್ಕಲು ಸಾಧ್ಯ?ಅಂತ ಈ ಹೊತ್ತಲ್ಲಿ ನಮಗೆ ನಾವೇ ಹೆಮ್ಮೆ ಪಟ್ಟುಕೊಳ್ಳುತ್ತಿದ್ದೇವೆ.

ಇಂಗ್ಲೀಷಿನಲ್ಲಿ ಅರ್ಥ ಶಾಸ್ತ್ರವನ್ನು ಅರ್ಥೈಕೊಳ್ಳಲಾಗದ ಹಳ್ಳಿ ಗಾಡಿನ ಮಕ್ಕಳಿಗೆ ನೂರಕ್ಕಿಂತ ಹೆಚ್ಚು ಕನ್ನಡದಲ್ಲಿ ಅರ್ಥಶಾಸ್ತ್ರ ಕೃತಿಗಳನ್ನು ರಚಿಸಿ ಇಡೀ ಕರ್ನಾಟಕದ ಉದ್ದಗಲಕ್ಕೂ ಶಿಷ್ಯರನ್ನು ಸಂಪಾದಿಸಿದ್ದು ಸುಲಭದ ಮಾತೇನಲ್ಲ.ಶಿಶಿಲರೆಂಬ ಗುರು ಯಾಕಾಗಿ ಇವತ್ತು ಸುಳ್ಯದಾಚೆಗೂ ಮೀರಿ ಹೆಸರು ಮಾಡಿದ್ದಾರೆಂದರೆ ಅದನ್ನ ಪದಗಳಲ್ಲಿ ಹಿಡಿದಿಡಲು ಪ್ರಯತ್ನಿಸುವುದು ಅಸಾಧ್ಯದ ಮಾತು.ತನ್ನ ವೃತ್ತಿ ಜೀವನದಾಚೆಯೂ ಚಾಚಿಕೊಂಡು ಸಮಾಜ ಸೇವೆ,ಸಾಹಿತ್ಯ,ಸಾಂಸ್ಕೃತಿಕ ರಂಗಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ತಾನೂ ಬೆಳೆದು ಇತರರನ್ನು ಬೆಳೆಸಿದ ವಿಶಾಲ ಹೃದಯಿ, ಸುಳ್ಯದ ಬಹುದೊಡ್ಡ ಆಸ್ತಿ.ಸುಳ್ಯದ ದೊಡ್ಡೇರಿಯಲ್ಲೊಂದು ತಾವೇ ಮುಂದಾಳತ್ವ ವಹಿಸಿ,ಖುದ್ದು ಮುತುವರ್ಜಿ ವಹಿಸಿ, ಇನ್ಫೋಸಿಸ್ ತೂಗು ಸೇತುವೆ ನಿರ್ಮಿಸಿ ತಮ್ಮ ಬಿಡುವಿಲ್ಲದ ದಿನಚರಿಗಳ ನಡುವೆಯೂ ಜನ ಸಮುದಾಯದ ಬವಣೆಗಳನ್ನು ಅರಿತು ಜನಪರ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಷ್ಟು ಬಿಡುವು ಮತ್ತು ವ್ಯವಧಾನ ಶಿಶಿಲರ ನಿಸ್ಪ್ರಹ ಮನಸ್ಸಿಗಷ್ಟೇ ಸಾಧ್ಯವಾಗುವ ಮಾತು.ತಮ್ಮ ಮರಣಾನಂತರ ವೈದ್ಯಕೀಯ ಉದ್ದೇಶಗಳಿಗಾಗಿ ತಮ್ಮ ದೇಹವನ್ನ ಕೆ.ವಿ.ಜಿ. ಮೆಡಿಕಲ್ ಕಾಲೇಜಿಗೆ ದಾನ ನೀಡುವ ಒಪ್ಪಂದ ಮಾಡಿಕೊಂಡ ಗುರುಗಳ ದಿಟ್ಟತನ ಈ ಪೀಳಿಗೆಯ ನಿಜದ ಆದರ್ಶಪ್ರಾಯ.

 

 

ನಿಂತ ನೆಲದಲ್ಲೇ ತಮ್ಮ ವಿಶಿಷ್ಟ ನಿಲುವಿನಿಂದ ಹೆಸರು ಮಾಡುವ ಶಿಶಿಲರು, 2007 ರ ಜುಲೈ 7 ರಂದು ಬೆಳಗ್ಗೆ 7 ಗಂಟೆ, 7 ನಿಮಿಷ, 7 ಸೆಕೆಂಡಿಗೆ, 7 ಮಂದಿಯಿಂದ, 7 ಅರ್ಥಶಾಸ್ತ್ರದ ಕೃತಿಗಳನ್ನ ಬಿಡುಗಡೆ ಗೊಳಿಸಿದಂತಹ ದಾಖಲೆ ಮತ್ತು ಹೆಗ್ಗಳಿಕೆ ಒಂದು ಕಡೆಯಾದರೆ, ಅಕಾಸ್ಮಾತ್ ರಸ್ತೆ ಅಪಘಾತದಲ್ಲಿ ಕಾಲು ಮುರಿದುಕೊಂಡು ಆಸ್ಪತ್ರೆಗೆ ದಾಖಲಾದರೂ ತನ್ನ ದುರ್ವಿಧಿಗೆ ಹಳಿಯದೆ,ಕೀಳರಿಮೆಯಿಂದ ನರಳದೆ, ಸಂಕಟವನ್ನು ಸುತರಾಂ ಹತ್ತಿರಕ್ಕೂ ಸುಳಿಯಗೊಡದೆ ಆ ಹತ್ತು ತಿಂಗಳ ವಿಶ್ರಾಂತಿಯ ದಿನಗಳಲ್ಲಿ ಹತ್ತು ವಿಭಿನ್ನ ಸಾಹಿತ್ಯ ಕೃತಿಗಳನ್ನು ರಚಿಸಿ,ಮತ್ತೆ ಯಥಾವತ್ತಾಗಿ ಮೊದಲಿನಂತೆ ೨೦೧೦ರ ಅಕ್ಟೋಬರ್ ೧೦ರಂದು,ಎಲ್ಲಾ ಹತ್ತು ಹತ್ತಕ್ಕೆ ಪುಸ್ತಕ ಬಿಡುಗಡೆ ಮಾಡಿದಂತಹ ಛಲ ಮತ್ತುಬತ್ತದ ಕ್ರೀಯಾಶೀಲತೆಯಿಂದಾಗಿಯೇ ಇವತ್ತು ಶಿಶಿಲರೆಂದರೆ ಅಸಮಾನ್ಯ ವ್ಯಕ್ತಿತ್ವದ ಮೇಷ್ರು.

ಕತೆ,ಕಾದಂಬರಿಗಳು,ಪ್ರವಾಸ ಕಥನ,ಅನುಭವ ಕಥನ,ಮೃಗಾಯ ಸಾಹಿತ್ಯ,ಯಕ್ಷಗಾನ,ನಾಟಕ..ಹೀಗೆ ಶಿಶಿಲರ ಬರವಣಿಗೆಯ ವೇಗ ಎಷ್ಟಿದೆಯೆಂದರೆ ನಾವು ದಾಪುಗಾಲು ಹಾಕಿ ಓಡಿಕೊಂಡು ಓದಿದರೂ ಸಾಧ್ಯವಾಗದಷ್ಟು.ಇತ್ತೀಚಿನ ಒಂದಷ್ಟು ವರ್ಷಗಳಲ್ಲಿ ಸುಳ್ಯದಿಂದ ಹೊರ ಹೊಮ್ಮಿದ ಸಾಹಿತ್ಯದ ಪ್ರತಿಭೆಗಳಿಗೆಲ್ಲಾ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಶಿಶಿಲರೇ ಗುರುವೆಂಬುದು ಎಲ್ಲರೂ ಕಣ್ಣು ಮುಚ್ಚಿ ಹೇಳಿ ಬಿಡಬಹುದಾದಂತಹ ವಾಸ್ತವ ಸತ್ಯ.ಮತ್ತು ಶಿಶಿಲರು ನಮ್ಮ ಗುರುವೆಂದು ನಾವು ಹೇಳಿಕೊಂಡು ಬೀಗುವುದು ಕೂಡ ನಮಗೆಲ್ಲರಿಗೂ ಖುಶಿಯ ವಿಷಯ .ಜಾತಿ ಸಂಕೋಲೆಗಳಿಂದ ಬಿಡಿಸಿಕೊಂಡು ದೂರ ನಿಂತು ಎಲ್ಲಾ ಧರ್ಮದವರನ್ನು ತನ್ನ ಬಂಧುಗಳೆಂದು ಪರಿಭಾವಿಸುವ,ಸ್ವತ: ತಾವೇ ಅಂತರ್‌ಧರ್ಮೀಯ ವಿವಾಹವಾಗಿ,ನುಡಿದಂತೆ ನಡೆದು ಆದರ್ಶ ಮೆರೆದ ಮೇಷ್ಟ್ರೊಬ್ಬ ಶುದ್ಧ ವಿಶ್ವ ಮಾನವತಾವಾದಿ.

ಇದೇ ಮೊನ್ನೆ ಮೊನ್ನೆಯಷ್ಟೇ ಕಳೆದ ಡಿಸೆಂಬರ್ ೩೧ಕ್ಕೆ ನಿವೃತ್ತರಾದ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಪ್ರಾಚಾರ್ಯ ಡಾ. ಪ್ರಭಾಕರ ಶಿಶಿಲರ ೬೦ನೇ ಹುಟ್ಟು ಹಬ್ಬದ ಪ್ರಯುಕ್ತ ಡಿಸೆಂಬರ್ ೧೫ರಂದು ನಡೆದ ಸಮಾರಂಭವೇ ಒಂದು ಅಭೂತಪೂರ್ವ ಅವಿಸ್ಮರಣೀಯ ದಿನ.ಅಕ್ಷರ ವಂದನೆ ಮತ್ತು ಗುರು ವಂದನೆಯೆಂಬ ಅಪರೂಪ ಕ್ಷಣ.ಈ ಹೊತ್ತಲ್ಲಿ ತನ್ನ ಬೆಳವಣಿಗೆಗೆ ಕಾರಣೀಭೂತರಾದಂತ ೬ ಜನ ಗುರುವರ್ಯರನ್ನು ನೆನೆದು ವಂದಿಸುವುದು,ಅವರಿಂದಲೇ ರೂಪುಗೊಂಡ ,ಸಾಧನೆಗೈದ ೬ ಜನ ಶಿಷ್ಯರ ಮೂಲಕ ಅವರದೇ ಕೃತಿಗಳನ್ನ ಬಿಡುಗಡೆಗೊಳಿಸುವುದು.ಇದು ಯಾರ ಅರಿವಿಗೂ ನಿಲುಕದ ಅಸಮಾನ್ಯ ಯೋಚನೆ.ಯಾಕೆಂದರೆ,ಸ್ವಯಂಘೋಷಿತ ಗುರುಗಳೆಂದು ಕರೆಸಿಕೊಳ್ಳುವವರನ್ನು ವೇದಿಕೆಗೆ ಕರೆ ತಂದು ಅವರಿಗೆ ಅಡ್ಡಬೀಳುವವರ ಮುಂದೆ,ತನಗೆ ಅಕ್ಷರ ಕಲಿಸಿದ ಗುರುಗಳನ್ನು ವೇದಿಕೆಯಲ್ಲಿ ಕುಳ್ಳಿರಿಸಿ ಅವರ ಪಾದಕ್ಕೆ ಮಣಿವವರೆಲ್ಲಿ?ಗಣ್ಯ ವ್ಯಕ್ತಿಗಳ ಹಸ್ತದಿಂದ ಪುಸ್ತಕ ಬಿಡುಗಡೆ ಮಾಡಿಕೊಂಡು ಬೀಗುವವರ ಮುಂದೆ ತನ್ನ ಶಿಷ್ಯರಿಂದಲೇ ಪುಸ್ತಕ ಬಿಡುಗಡೆ ಮಾಡುವಂತಹ ಶಿಶಿಲರ ಔಧಾರ್ಯವೆಲ್ಲಿ?ಹೀಗೆ ಹೊಸ ಮೌಲ್ಯಗಳನ್ನ ಸೃಷ್ಟಿಸಿ ಭಿನ್ನವಾಗಿ ನಿಲ್ಲುವ ಶಿಶಿಲರಿಗೆ ಶಿಶಿಲರೇ ಸಾಟಿ.

ಅಂದು ಅಂತಿಮ ಪದವಿಯ ಕೊನೇಯ ವರ್ಷ.ಪರೀಕ್ಷೆಗಳೆಲ್ಲಾ ಮುಗಿದು ಕಾಲೇಜಿಗೆ ವಿದಾಯ ಹೇಳಲೇ ಬೇಕಾದ ಸಮಯದಲ್ಲಿ ಯಾಕೋ ನಮಗೆ ತಟ್ಟನೆ ಶಿಶಿಲರು ನೆನಪಾಗುತ್ತಾರೆ.ಪುಟ್ಟ ಕಾಣಿಕೆಯೊಂದನ್ನ ಹಿಡಿದುಕೊಂಡು ಗುರುಗಳ ಮನೆ ಕಡೆ ಹೋಗಬೇಕೆನ್ನುವಾಗ ದಾರಿಯಲ್ಲಿ ಸ್ವತ: ಗುರುಗಳೇ ಇದಿರಾಗಿ ,ಈ ಕಾಣಿಕೆ ಕೋಡೋದು ,ತಗೋಳ್ಳೋದು ಇವೆಲ್ಲಾ ನನಗೆ ಇಷ್ಟ ಆಗಲ್ಲ.ಪ್ರೀತಿ ವಿಶ್ವಾಸ ಹೀಗೆ ಇಟ್ಟುಕೊಂಡು ಮುಂದೆ ಬೆಳೀರಿ ಅಂತ ಮನದುಂಬಿ ಹರಿಸಿದ ಅತಿ ದೊಡ್ಡ ಕಾಣಿಕೆಯನ್ನ ನಮ್ಮ ಪುಟ್ಟ ಹೃದಯದೊಳಗಿಟ್ಟು ಬಂದ ನೆನಪು ಆಗಾಗ್ಗೆ ನಮಗೆ ಈಗ ದಾರಿದೀಪವಾಗುತ್ತಿರುವಾಗ…ನಿನ್ನೆಯವರೆಗೆ ಪಾಠ ಮಾಡುತ್ತಿದ್ದ ಇಕನಾಮಿಕ್ಸ್ ಮೇಷ್ಟ್ರು ನಾಳೆಯಿಂದ ಕ್ಲಾಸ್ ತೆಗೆದುಕೊಳ್ಳೋದಿಲ್ಲ ಅಂದಾಗ ನೆಹರು ಮೆಮೋರಿಯಲ್ ಕಾಲೇಜಿನ ಮಕ್ಕಳ ಮನಸ್ಥಿತಿ ಹೇಗಿರಬೇಡ?

ನಮ್ಮೆಲ್ಲರ ಗುರುಗಳು ಅಧ್ಯಾಪನ ವೃತ್ತಿಯಿಂದ ನಿವೃತ್ತರಾಗುತ್ತಿರುವ ಈ ಹೊತ್ತಲ್ಲಿ,ನಾವೆಲ್ಲಾ ಶಿಶಿಲರ ಸ್ಟೂಡೆಂಟ್ಸ್ ಅಂತ ಹಿಗ್ಗಿನಿಂದ ಹೆಮ್ಮೆ ಪಟ್ಟುಕೊಳ್ಳುವಾಗ,ನಮಗೆ ದಕ್ಕಿದ ಭಾಗ್ಯ ನಮ್ಮ ಮಕ್ಕಳಿಗೂ ದಕ್ಕಲಿ,ಶಿಶಿಲರಂತ ಗುರುಗಳು ಹೆಚ್ಚಾಗಲಿ ಅಂತ ನೆನೆದುಕೊಳ್ಳುತ್ತಾ ಈ ಮೂಲಕ ಗುರುಗಳಿಗೊಂದು ನನ್ನ ಗುರುವಂದನೆ,ಜೊತೆಗೆ ಅಕ್ಷರ ವಂದನೆ.

 

-ಸ್ಮಿತಾ ಅಮೃತರಾಜ್, ಸಂಪಾಜೆ.

2 Responses

  1. Hema says:

    ಗುರುವಂದನೆ ಲೇಖನ ಬಹಳ ಚೆನ್ನಾಗಿ ಬಂದಿದೆ. ಇಂತಹ ಗುರುವನ್ನು ಪಡೆದ ನೀವು ನಿಜಕ್ಕೂ ಧನ್ಯರು.
    ಪರಸ್ಪರ ಗೌರವ ಕ್ಷೀಣಿಸುತ್ತಿರುವ ಈ ದಿನಗಳಲ್ಲಿ ಗುರುವನ್ನು ಗೌರವಿಸಿ ಬರೆದ ನೀವು ಸಹೃದಯಿ, ಉತ್ತಮ ಶಿಷ್ಯೆ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: