ಅಮೇರಿಕದಲ್ಲಿ ಕನ್ನಡ ಕುವರಿಯಿಂದ ಹಿಂದೂಸ್ತಾನಿ ಸಂಗೀತದ ಕಂಪು
ಇಂದು ಭಾರತದಲ್ಲಿಯೇ ಹಲವು ಬಗೆಯ ಸಂಕೀರ್ಣ ಮನೋಭಾವಗಳನ್ನು ಯುವಜನತೆಯಲ್ಲಿ ಗಮನಿಸುವಾಗ, ಅಮೆರಿಕೆಯ ಭಾರತೀಯ ಮೂಲದ ಯುವಜನರು ಶಾಸ್ತ್ರೀಯ ಸಂಗೀತ ನಾಟ್ಯಗಳಲ್ಲಿ ಆಸಕ್ತಿ, ಪರಿಣತಿ ತೋರುವುದನ್ನು ನೋಡಿದಾಗ ಹೆಮ್ಮೆ ಎನಿಸುತ್ತದೆ. ಅದರಲ್ಲೂ ಇಲ್ಲಿ ಕರ್ನಾಟಿಕ್ ಸಂಗೀತದಲ್ಲಿ ಸಾಧನೆ ಮಾಡಿದವರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುವರು. ಧಾರವಾಡದಂತಹ ಹಿಂದೂಸ್ತಾನಿ ಸಂಗೀತದ ಪರಂಪರೆಯಿರುವ ನಾಡು ಕರ್ನಾಟಕ. ಆದರೂ ಹಿಂದೂಸ್ತಾನಿ ಸಂಗೀತದಲ್ಲಿ ಸಾಧನೆ ಮಾಡುವ ಕನ್ನಡಿಗರು ಅಮೇರಿಕದಲ್ಲಿ ಕಾಣುವುದು ಅತಿ ವಿರಳ. ಇಂತಹ ವಾತಾವರಣದಲ್ಲಿ ಕನ್ನಡತಿಯೊಬ್ಬಳ ಹಿಂದೂಸ್ತಾನಿ ರಂಗಪ್ರವೇಶ ಎಂದೊಡನೆ ಸಹಜವಾಗಿಯೇ ಹೆಮ್ಮೆ, ಕುತೂಹಲ.
ಅದೊಂದು ಬೇಸಿಗೆಯ ಉರಿಬಿಸಿಲು ತನ್ನ ಕೊನೆಯ ಪ್ರತಾಪದೊಂದಿಗೆ ಬೀಳ್ಕೊಡುತ್ತಿದ್ದ ದಿನ, ಸೆಪ್ಟೆಂಬರ್ 6, 2014. ಬಾಸ್ಟನ್ ಪ್ರಾಂತ್ಯದ ಬಹುತೇಕ ಕನ್ನಡಿಗರು ಹಾಗು ಇತರ ಭಾರತೀಯರು ಹೆಮ್ಮೆಯಿಂದ ಅವೊತ್ತು ಸೇರಿದ್ದರು ಅಶಲ್ಯಾಂಡ್ ಹೈಸ್ಕೂಲಿನ ಸಭಾಂಗಣದಲ್ಲಿ. 500 ಸೀಟಿನ ಆಡಿಟೊರಿಯಮ್ ಜನರಿಂದ ತುಂಬಿತ್ತು. ಇದು ಭಾರತದಲ್ಲಿ ನಡೆದ ಸಂಗತಿಯಾಗಿದ್ದರೆ ಅಷ್ಟೊಂದು ವಿಶೇಷ ಎನಿಸುತ್ತಿರಲಿಲ್ಲವೇನೋ. ಆದರೆ ಹದಿನೈದು ವರುಷದ ಅನೂಶಾ ಅಮೇರಿಕೆಯಲ್ಲಿ ಬೆಳೆಯುತ್ತ ಹಿಂದೂಸ್ತಾನಿ ಸಂಗೀತವನ್ನು ಶಾಸ್ತ್ರೋಕ್ತವಾಗಿ ಅಭ್ಯಸಿಸುತ್ತಾ ರಂಗಪ್ರವೇಶಕ್ಕೆ ಸಿದ್ಧಳಾಗಿದ್ದ ದಿನವದು. ಭಾರತೀಯ ಸಂಸ್ಕೃತಿ, ಸಂಗೀತದಿಂದ ಸಾವಿರಾರು ಮೈಲು ದೂರದ ನಾಡಿನಲ್ಲಿ ಬೆಳೆದರೂ ಎಲ್ಲಿಯೂ ವ್ಯತ್ಯಾಸವೇ ಕಾಣದಂತೆ ಶುದ್ಧ ಸುಸ್ಪಷ್ಟ ಉಚ್ಚಾರದ ಜೊತೆ ರಾಗ ತಾಳ ಭಾವಗಳ ಏರಿಳಿತಗಳ ಮಿಳಿತಗೊಳಿಸಿ ಆಕೆ ಪ್ರಸ್ತುತಪಡಿಸಿದ ರೀತಿ ನಿಜಕ್ಕೂ ಹಲವರಲ್ಲಿ ಬೆರಗು ಮೂಡಿಸಿತ್ತು. ಆದರೆ ಆಕೆಯ ಹಿನ್ನೆಲೆ ತಿಳಿದವರಿಗೆ, ಆಕೆಯ ಹಾಡುಗಾರಿಕೆಯನ್ನು ಮುಂಚಿನಿಂದ ಆಲಿಸಿಕೊಂಡು ಆಕೆಯ ಪರಿಣಿತಿಯಲ್ಲಿನ ಪಕ್ವತೆಯ ಬೆಳೆವಣಿಗೆಯನ್ನು ಗಮನಿಸುತ್ತ ಬಂದವರಿಗೆ ಅವಳ ಲೀಲಾಜಾಲ ಹಾಡುಗಾರಿಕೆ ಹೊಸದೇನಲ್ಲ.
ಅನೂಶಾ ಅಂದು ಸುಮಾರು ಮೂರುಗಂಟೆಗಳಿಗೂ ಹೆಚ್ಚುಕಾಲ ಹಲವು ರಾಗದ ಬೆನ್ನೇರಿ ವಿಹರಿಸಿ ಶ್ರೋತೃಗಳನ್ನೂ ಜೊತೆಯಲ್ಲಿ ಕೊಂಡೊಯ್ದು ಭಾವಲೋಕದಲ್ಲಿ ಮುಳುಗಿಸಿದ್ದಳು. ಆಕೆಗೆ ಜೊತೆ ನೀಡಿದ ಸಮರ್ಥ ಸಂಗೀತ ತಂಡ, ಮುಖ್ಯವಾಗಿ ತಬಲಾದಲ್ಲಿ ಶ್ರೀ ರಾಜೇಶ ಪೈ ಹಾಗು ಹಾರ್ಮೊನಿಯಮ್ ಮೇಲೆ ಶ್ರೀಮತಿ ಸರಿತಾ ದೇಶಪಾಂಡೆ, ಗುರುಹಿರಿಯರ ಹಾರೈಕೆ ಜೊತೆಗಿದ್ದಿದ್ದು ಅಲ್ಲಿ ಎದ್ದು ಕಾಣುತ್ತಿತ್ತು. ರಾಗ ಕೀರವಾಣಿಯಲ್ಲಿ ಸರಸ್ವತಿ ವಂದನೆಯೊಂದಿಗೆ ಆರಂಭವಾದ ಸಂಜೆ ಭೀಮಪಲಾಸಿ, ಮೇಘ, ಅಡಾನಾ, ಛಾಯನಟ್, ಮಾಲಕೌಂಸ್, ಶಿವರಂಜಿನಿ, ಮಾರುಬಿಹಾಗ್ ರಾಗಗಳ ಬಂದಿಶಗಳಿಂದ ಅಲಂಕರಿಸಿಕೊಂಡು ಅನೂಶಾಳ ಲಯಕ್ಕೆ ತಕ್ಕಂತೆ ಸರಿದು ಹೋಗುತ್ತಿತ್ತು. ಬಹು ಪಕ್ವತೆಯಿಂದ ಪ್ರಸ್ತುತಪಡಿಸಿದ ಖಯಾಲ್, ಮಧ್ಯ ಖಯಾಲ್, ವಿಲಂಬಿತ್ ಖಯಾಲ್ ಗಳ ತಾಳಶುದ್ಧಿಯನ್ನು. ಲಲಿತ್ ರಾಗದ ಮೀರಾ ಭಜನೆಯಲ್ಲಿನ ವಿರಹ ಪ್ರೇಮದ ಸಂಕೀರ್ಣ ಭಾವಗಳನ್ನು ಹದಿನೈದರ ಆಕೆ ಹೊಮ್ಮಿಸಿದ ರೀತಿಯಲ್ಲಿ ಅಲ್ಲೊಬ್ಬ ಸಮರ್ಥ ಗಾಯಕಿ ಬೆಳೆದುಬರುತ್ತಿದ್ದದ್ದು ಗೋಚರಿಸುತ್ತಿತ್ತು. ನಡುನಡುವೆ ಕೆಲವು ಕನ್ನಡ ಮತ್ತು ಹಿಂದಿಯ ಭಜನೆ, ಲಘುಸಂಗೀತವೂ ಹಾದುಬಂತು. ಮರಾಠಿ ಅಭಂಗ್, ತರಾನಾ, ದ್ರುಪದ, ಠುಮ್ರಿ, ಮತ್ತು ಕಥಕ್ ನಾಟ್ಯಸಂಗೀತದ ತುಣುಕಗಳೂ ಆಕೆಯ ವೈವಿಧ್ಯತೆಯ ಪ್ರಸ್ತುತಿಗೆ ಸಾಣೆ ಹಿಡಿದವು. ತುಕಾರಾಮರಿಂದ ಪುರಂದರದಾಸರವರೆಗೆ ಹಲವರ ಭಕ್ತಿಯನ್ನು ಸೆರೆಹಿಡಿದಳು. ಗೋಪಿಕೆಯರ ವೃಂದಾವನ, ಯಶೋದೆಯ ಮುದ್ದು, ಕೃಷ್ಣನ ತುಂಟಾಟಗಳ ಒಡಗೂಡಿದ ಸಂಯೋಜನೆಯ ಹಾಡುಗಾರಿಕೆಯಲ್ಲಿ ಭಕ್ತಿ, ಪ್ರೇಮ, ಮೋಹ, ವಿರಹ ಶೃಂಗಾರಗಳಂತಹ ಹಲವು ರಸಗಳನ್ನು ಪ್ರೌಢವಾಗಿ ನಿಭಾಯಿಸಿದ ರೀತಿ ಬಹು ಮೆಚ್ಚುಗೆ ಗಳಿಸಿದವು.
ಅನೂಶಾಳ ರಂಗ ಪ್ರವೇಶ ಆಕೆಯ ಸಂಗೀತ ಜೀವನದ ಒಂದು ಪೂರ್ಣತೆಯ ಘಟ್ಟವಾದರೂ ಒಂದರ್ಥದಲ್ಲಿ ಈಗಷ್ಟೇ ಆರಂಭವಾದ ಪ್ರೌಢ ಪಯಣ. ಅನೂಶಾ ಹುಟ್ಟಿದ್ದು 1999 ಫೆಬ್ರವರಿ 1. ಆಕೆಗೆ ಸುಮಾರು ಒಂದು ತಿಂಗಳದವಳಿದ್ದಾಗಲೇ ದಿವಂಗತ ಸಂಗೀತ ದಿಗ್ಗಜೆ ಗಂಗೂಬಾಯಿ ಹಾನಗಲ್ ಅವರಿಂದ ಆಶೀರ್ವಾದ ಪಡೆದವಳು. ಕುಂದಗೋಳಿನ ಆಕೆಯ ಮನೆತನಕ್ಕೆ ಮುಂಚಿನಿಂದ ಸಂಗೀತದ ಬಾಂಧವ್ಯವಿತ್ತು. ಹೆತ್ತವರೊಂದಿಗೆ ಬಾಸ್ಟನ್ ಪ್ರದೇಶಕ್ಕೆ ವಲಸೆ ಬಂದ ಮಗು ತನ್ನ ಶಾಸ್ತ್ರೋಕ್ತ ಸಂಗೀತಾಭ್ಯಾಸ ಆರಂಭಿಸಿದ್ದು ಬಾಸ್ಟನ್ನಿನ ಲರ್ನಕ್ವೆಸ್ಟ್ ಅಕಾಡೆಮಿಯ ಶ್ರೀಮತಿ ಶುಚಿತಾ ರಾವ್ ಅವರಲ್ಲಿ. ಶಾಸ್ತ್ರೀಯ ಸಂಗೀತವಲ್ಲದೆ ಭಾವಗೀತೆ, ಲಘುಸಂಗೀತ, ಹಿನ್ನೆಲೆ ಗಾಯನ ಇತ್ಯಾದಿ ಪ್ರಕಾರಗಳಲ್ಲಿ ಕೂಡ ಶ್ರೀಮತಿ ಸುನಿತಾ ಅನಂತಸ್ವಾಮಿ, ಶ್ರೀಮತಿ ಮಂಜುಳಾ ಗುರುರಾಜ್, ಕುಮಾರಿ ಮಹಾಲಕ್ಷ್ಮಿ ಶೆಣೈ, ಶ್ರೀ ನರಹರಿ ದಿಕ್ಷಿತ, ಸುರಮಣಿ ದತ್ತಾತ್ರೇಯ ವೇಲನಕರ ಮುಂತಾದ ಪ್ರಖ್ಯಾತನಾಮರಿಂದ ತರಬೇತಿ ಪಡೆದುಕೊಂಡಳು. ಇಲ್ಲಿನ ಹಲವು ಸಂಗೀತ ಸಮಾರಂಭಗಳಲ್ಲಿ, ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಿಟ್ಟಿಸಿಕೊಳ್ಳುತ್ತ ಬಂದಿದ್ದಾಳೆ. ಹಲವು ಭಾಷೆಗಳಲ್ಲಿ ಎಲ್ಲಿಯೂ ಉಚ್ಚಾರ ತಪ್ಪದಂತೆ ಹಾಡುವ ನಾಲಿಗೆ ಅವಳದು. ಹತ್ತನೇ ತರಗತಿಯಲ್ಲಿ ಓದುತ್ತಿರುವ ಅನೂಶಾಗೆ ನರ್ತನ ಹಾಗು ಚಿತ್ರಕಲೆಗಳಲ್ಲಿ ಕೂಡ ಆಸಕ್ತಿಯಿದೆ. ಮುಂದೊಮ್ಮೆ ಪ್ರಸಿದ್ಧ ಕಾರ್ಡಿಯಾಲೊಜಿಸ್ಟ್ ಮತ್ತು ಹಿನ್ನೆಲೆ ಗಾಯಕಿಯಾಗಬೇಕೆಂಬ ಕನಸು ಅವಳದು. ಹೆತ್ತವರಾದ ಶ್ರೀಧರ ಕುಲಕರ್ಣಿ ಮತ್ತು ಜಯಾ ಕುಲಕರ್ಣಿ ಮೂಲತಹ ಹುಬ್ಬಳ್ಳಿಯವರಾಗಿದ್ದು, ಆಕೆಯ ಸಂಗೀತಾಸಕ್ತಿಯನ್ನು ಬಹು ಹೆಮ್ಮೆ ಮತ್ತು ಪ್ರೀತಿಯಿಂದ ಪೋಷಿಸಿಕೊಂಡು ಬಂದಿದ್ದಾರೆ.ದೈವದತ್ತವಾದ ಆಕೆಯ ಕಂಠಕ್ಕೆ ತರಬೇತಿಯ ಹಾದಿ ಇನ್ನೂ ಬಾಕಿಯಿದೆ.
ಅನೂಶಾಳ ಸಂಗೀತ ಪಯಣಕ್ಕೆ ಇಲ್ಲಿನ ಕನ್ನಡಿಗರೆಲ್ಲರ ಹೆಮ್ಮೆಯ ಹಾರೈಕೆಯಿದೆ.
– ವೈಶಾಲಿ ಹೆಗಡೆ
ಸವಾಯಿ ಗಂದರ್ವರ ನಾಡಿನ ಹೆಮ್ಮೆಯ ಪುತ್ರಿಗೆ ನಮ್ಮ ಕುಂದಗೋಳ ತಾಲ್ಲೂಕಿನ ಕಡೆಯಿಂದ ಹೃತ್ಪೂರ್ವಕ ಅನಂತ ಅನಂತ ವಂದನೆಗಳು.ಅವರ ಪ್ರಯತ್ನಕ್ಕೆ ಇನ್ನಷ್ಟು ಮತಷ್ಟು ಪ್ರಶಂಸೆ ಸಿಗಲಿ ಅವರ ಸಂಗೀತದ ಬೆಳಕು ಜಗತ್ತಿನಾದ್ಯಂತ ಎಲ್ಲೆಡೆ ಹರಡಲಿ ಕೀರ್ತಿಪತಾಕೆ ವಿಜೃಂಭಣೆಯಿಂದ ಹಾರಲಿ.
ಹೊರನಾಡಿನಲ್ಲಿದ್ದೂ ಸಂಗೀತದ ಕಂಪನ್ನು ಹರಡುತ್ತಿರುವ ಅರಳು ಪ್ರತಿಭೆ ಕುಮಾರಿ ಅನೂಶಾಳ ಭವಿಷ್ಯ ಉಜ್ವಲವಾಗಲಿ ಎಂದು ನನ್ನ ಹಾರೈಕೆ.
ಹೇಮಾ ಅವರೇ, ಈ ಪ್ರೊಗ್ರಾಮ್ ರಿವ್ಯೂ ಆರ್ಟಿಕಲ್ ಅನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದಕ್ಕೆ ಹಾಗೂ ತಮ್ಮ ಪ್ರೀತಿಯ ಹಾರೈಕೆಗಳಿಗೆ ತುಂಬಾ ಧನ್ಯವಾದಗಳು.
ಜಯಾ ಕುಲಕರ್ಣಿ
ಅನೂಶಾರವರಿಗೆ ಶುಭ ಹಾರೈಕೆಗಳು, ವೈಶಾಲಿಯವರಿಗೆ ಅಭಿನಂದನೆಗಳು 🙂
EXCELLENT
ಚೆನ್ನಾಗಿದೆ
ಕನ್ನಡದ ಕುವರಿಗೆ ಅಭಿನಂದನೆಗಳು.
ಕುಮಾರಿ ಅನೂಶ ಇವಳು ನನ್ನ ಅಣ್ಣನಾದ
ದಿವಂಗತ ವಾಮನ ರಘುನಾಥ್ ಕುಲಕರ್ಣಿ ಇವರ ಮೊಮ್ಮಗಳಗಿದ್ದು ಇವರು ಮೂಲತಹ
ಸವಾಯಿ ಗಂಧರ್ವರ ಊರಾದ ಕುಂದಗೊಲ್ ದವರು. ಕುಮಾರಿ ಅನೂಶ ಇದೆ ವರ್ಷ
ಆಗಸ್ಟ್ ತಿಂಗಳಲ್ಲಿ ಭಾರತಕ್ಕೆ ಬರುವವಳಿದ್ದು, ಆಗ ಅವಳ ಸಂಗೀತ ಕಾರ್ಯಕ್ರಮವನ್ನು. ಮೈಸೂರ್
ಬ್ಯಾಂಗಲೋರ್ ಹಾಗು ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಏರ್ಪಡಿಸುವ ವಿಚಾರವಿದೆ
ಎಲ್ಲ ಸಂಗೀತಾಸಕ್ತರು ಭಾಗವಹಿಸಿ ಪ್ರೋತ್ಸಾಹಿಸಲು ವಿನಂತಿ