ಕಡಿಮೆ ಬಡ್ಡಿ ದರದ ಸಾಲ ವಿತರಣೆಗೆ ಬಂದಿದೆ ಆನ್‌ಲೈನ್ ವೇದಿಕೆ

Spread the love
Share Button

online loan

 

ಈಗ ನಿಮಗೆ ತುರ್ತಾಗಿ 1 ಲಕ್ಷ ರೂ. ಸಾಲದ ಅಗತ್ಯವಿದೆ ಎಂದಿಟ್ಟುಕೊಳ್ಳಿ. ಬ್ಯಾಂಕ್‌ನಲ್ಲಿ ವೈಯಕ್ತಿಕ ಸಾಲಕ್ಕೆ ಅರ್ಜಿ ಹಾಕಿದರೂ, ನಿಮ್ಮ ಕ್ರೆಡಿಟ್ ಸ್ಕೋರ್, ಮರು ಪಾವತಿಯ ಸಾಮರ್ಥ್ಯವನ್ನು ಅಳೆದೂ ತೂಗಿ ಶೇ.18-24 ರಷ್ಟು ಬಡ್ಡಿ ದರದಲ್ಲಿ ಸಾಲವನ್ನು ಕೊಡಬಹುದು. ಇದೇ ಸಂದರ್ಭ ದೇಶದ ಮತ್ತಾವುದೋ ಮೂಲೆಯಲ್ಲಿ ವಾಸಿಸುತ್ತಿರುವ ವ್ಯಕ್ತಿಯ ಕೈಯಲ್ಲಿ 1 ಲಕ್ಷ ರೂ. ದುಡ್ಡಿದ್ದು, ಎಲ್ಲಾದರೂ ಸುರಕ್ಷಿತವಾಗಿ ಹೂಡಿಕೆ ಮಾಡಿ, ಆದಾಯ ಪಡೆಯಬೇಕು ಎಂಬ ನಿರೀಕ್ಷೆಯಲ್ಲಿರಬಹುದು. ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿಯಲ್ಲಿ (ಎಫ್‌ಡಿ) ಇಟ್ಟರೆ ಸುಮಾರು ಶೇ.9-10 ರಷ್ಟು ಉತ್ಪತ್ತಿ ಸಿಗಬಹುದು. ಆದರೆ ಅದೇ ವ್ಯಕ್ತಿ ಆ ಒಂದು ಲಕ್ಷ ರೂ.ಗಳನ್ನು ನಿಮಗೆ ಸಾಲ ಕೊಡುತ್ತಾನೆ. ಹಾಗೂ ನೀವು ಆ ಹಣಕ್ಕೆ ಶೇ.12 ರಷ್ಟು ಬಡ್ಡಿಯನ್ನು ಕೊಟ್ಟರೆ ಹೇಗಿರುತ್ತದೆ? ಆತ ನಿಮ್ಮ ಆದಾಯದ ವಿವರ ಮತ್ತು ಮರುಪಾವತಿಯ ದಾಖಲೆಗಳನ್ನು ಪರಿಶೀಲಿಸಿ, ಒಂದು ಲಕ್ಷ ರೂ. ಸಾಲ ಕೊಡಲು ಒಪ್ಪಿಕೊಳ್ಳಬಹುದು. ಆಗ ಇಬ್ಬರಿಗೂ ಲಾಭವಾಗುತ್ತದೆ. ಸಾಲ ಕೊಡುವವರಿಗೆ ಬ್ಯಾಂಕಿಗಿಂತ ಹೆಚ್ಚು ಬಡ್ಡಿ ದರದ ಅನುಕೂಲ ಖುಷಿ ಕೊಟ್ಟರೆ, ಸಾಲಗಾರರಿಗೆ ಬ್ಯಾಂಕಿಗಿಂತ ಕಡಿಮೆ ಬಡ್ಡಿಗೆ ತುರ್ತಾಗಿ ಸಾಲ ಸಿಕ್ಕಿದ ಸಡಗರ, ಅನುಕೂಲವಾಗುತ್ತದೆ!

ಇದುವರೆಗೆ ಹೀಗೆ ವೈಯಕ್ತಿಕವಾಗಿ ಸಾಲ ಕೊಡುವವರನ್ನು ಹಾಗೂ ಸಾಲದ ಅಗತ್ಯವಿರುವವರನ್ನು ಒಟ್ಟಿಗೆ ಸೇರಿಸಲು, ಹಾಗೂ ಈ ಹಣಕಾಸು ವ್ಯವಹಾರ ಸುಗಮವಾಗುವಂತೆ ನೋಡಿಕೊಳ್ಳಲು ಸೂಕ್ತ ವ್ಯವಸ್ಥೆಯಿರಲಿಲ್ಲ. ಜನ ತಮ್ಮ ಸ್ನೇಹಿತರು, ಬಂಧು ಬಳಗದವರ ನಡುವೆ ಸಾಮಾನ್ಯವಾಗಿ ಮುಂಗಡ ಪಡೆಯುತ್ತಾರೆ. ಎಷ್ಟೋ ಸಲ ಗೆಳೆಯರು, ಬಂಧುಗಳ ಬಳಿಯಿಂದ ಸಾಲ ಕೇಳಲು ಮುಜುಗರ ಅಥವಾ ಬೇರಿನ್ನಾವೊದೋ ಕಾರಣ ಅಡ್ಡಿ ಬರಬಹುದು. ಕೆಲವು ಸಲ ಅವರೂ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಕೊಡಬಹುದು. ಇಲ್ಲಿ ಯಾವುದೇ ಸೂಕ್ತ ದಾಖಲೆ ಪತ್ರಗಳ ಸಲ್ಲಿಕೆಯಾಗಲೀ, ಕರಾರು ಆಗಲಿ ಇರುವುದಿಲ್ಲ.

ಕಡಿಮೆ ಬಡ್ಡಿ ದರದ ಸಾಲಕ್ಕೆ ಪಿ2ಪಿ ಲೆಂಡಿಂಗ್ ಕಂಪನಿಗಳ ಸೇವೆ:

ಇಂತಹ ತಾಪತ್ರಯಗಳಿಲ್ಲದೆ, ಸಾಲ ನೀಡುವವರು ಮತ್ತು ಪಡೆಯುವ ಸಮಾನ ಮನಸ್ಕರನ್ನು ಸೇರಿಸಲು ಕೆಲವು ಕಂಪನಿಗಳು ರಚನೆಯಾಗುತ್ತಿವೆ. ಇಂತಹ ಸಂಸ್ಥೆಗಳನ್ನು ಪಿ2ಪಿ(ಪೀರ್ ಟು ಪೀರ್) ಲೆಂಡಿಂಗ್ ಕಂಪನಿಗಳೆಂದು ಕರೆಯುತ್ತಾರೆ. ಗುರ್‌ಗಾಂವ್ ಮೂಲದ ಫೇರ್‌ಸೆಂಟ್, ಹೈದರಾಬಾದ್ ಮೂಲದ ಐ-ಲೆಂಡ್ ಇಂತಹ ವಹಿವಾಟು ಆರಂಭಿಸಿದೆ. ಭಾರತದ ಮಟ್ಟಿಗೆ ಇಂತಹ ಪರಿಕಲ್ಪನೆ ಹೊಸತು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇಂತಹ ವ್ಯವಸ್ಥೆ ಈಗಾಗಲೇ ಸಂಘಟಿತವಾಗಿ ಬೃಹತ್ ಸ್ವರೂಪದಲ್ಲಿ ಬೆಳೆದಿದೆ. ಉದಾಹರಣೆಗೆ ಅಮೆರಿಕದಲ್ಲಿ ಲೆಂಡಿಂಗ್ ಕ್ಲಬ್ ಎಂಬ ಕಂಪನಿ ಸಾಲಗಾರರು ಮತ್ತು ಹೂಡಿಕೆದಾರರನ್ನು ಒಗ್ಗೂಡಿಸುವ ವಿಶ್ವದ ಅತಿ ದೊಡ್ಡ ಆನ್‌ಲೈನ್ ಮಾರುಕಟ್ಟೆ ತಾಣವಾಗಿ ಹೊರಹೊಮ್ಮಿದೆ. ಇದುವರೆಗೆ 6  ಶತಕೋಟಿ ಡಾಲರ್‌ಗೂ ಹೆಚ್ಚು ಸಾಲವನ್ನು ಈ ಮಾದರಿಯಲ್ಲಿ ವಿತರಿಸಿದ್ದು, ಷೇರು ಮಾರುಕಟ್ಟೆಯನ್ನೂ ಪ್ರವೇಶಿಸಿದೆ. ಜನತೆಗೆ ಕಡಿಮೆ ಬಡ್ಡಿಗೆ ಹೆಚ್ಚು ಸಾಲ ದೊರಕಿಸಿಕೊಡಲು, ಹೂಡಿಕೆಗೆ ಪ್ರತಿಯಾಗಿ ಹೆಚ್ಚು ಆದಾಯ ಒದಗಿಸಿಕೊಡಲು ಬ್ಯಾಂಕಿಂಗ್ ವ್ಯವಸ್ಥೆಯನ್ನೇ ನಾವು ಪರಿವರ್ತಿಸುತ್ತಿದ್ದೇವೆ ಎನ್ನುತ್ತದೆ ಲೆಂಡಿಂಗ್ ಕ್ಲಬ್. ಸಾಂಪ್ರದಾಯಿಕ ಬ್ಯಾಂಕ್‌ಗಳಿಗೆ ಹೋಲಿಸಿದರೆ ನಾವು ಕಡಿಮೆ ಖರ್ಚಿನಲ್ಲಿ ಸಾಲದ ವ್ಯವಸ್ಥೆ ಮಾಡಿಕೊಡುತ್ತೇವೆ. ಸಾಲದ ಮೇಲೆ ಭಾರಿ ಬಡ್ಡಿ ದರಗಳನ್ನು ವಿಸುವ ಬ್ಯಾಂಕ್‌ಗಳು ಅದಕ್ಕೆ ಕಟ್ಟಡ, ಸಿಬ್ಬಂದಿ ವೆಚ್ಚ ಮುಂತಾದ ಕಾರಣಗಳನ್ನು ಕೊಡುತ್ತವೆ. ಆದರೆ ಪಿ೨ಪಿ ಮಾದರಿಯಲ್ಲಿ ತಂತ್ರಜ್ಞಾನದ ನೆರವಿನಿಂದ ಬ್ಯಾಂಕ್‌ಗಳ ಹಂಗೇ ಇಲ್ಲದೆ, ಜನರೇ ನೇರವಾಗಿ ಸಾಲ ಕೊಡುತ್ತಾರೆ.

ಇದು ಹೇಗೆ ಸಾಧ್ಯ?

ಬ್ಯಾಂಕ್‌ಗಳು ಹೂಡಿಕೆದಾರರ ನಿಶ್ಚಿತ ಠೇವಣಿಗೆ ಕೇವಲ ಶೇ. 9-10 ಬಡ್ಡಿ ಕೊಟ್ಟು ಶೇ. 20 -24ರ ಭಾರಿ ಬಡ್ಡಿಗೆ ಗ್ರಾಹಕರಿಗೆ ವೈಯಕ್ತಿಕ ಸಾಲ ಕೊಡುತ್ತವೆ. ದೊಡ್ಡ ಮೊತ್ತದ ಲಾಭವನ್ನು ಜೇಬಿಗೆ ಇಳಿಸುತ್ತವೆ. ಆದರೆ ಪಿ2ಪಿ ಕಂಪನಿಗಳು ನವೀನ ಮಾದರಿಯಲ್ಲಿ, ಆಧುನಿಕ ಬ್ಯಾಂಕಿಂಗ್‌ಗ ಸಂಕೀರ್ಣತೆಯನ್ನು ತೆಗೆದು ಹಾಕುತ್ತಿವೆ. ಹೀಗಾಗಿ ಜನತೆಗೆ ಲಾಭವಾಗುತ್ತದೆ. ತ್ವರಿತವಾಗಿ ಸಾಲ ಸಿಗುತ್ತದೆ. ಇಲ್ಲಿ ಸಾಲಗಾರರು ವೆಬ್ ತಾಣದಲ್ಲಿ ನೋಂದಣಿಯಾಗಬೇಕು. ಸಾಲದ ಮೊತ್ತ, ನಿರೀಕ್ಷೆಯ ಬಡ್ಡಿ ದರ ಮುಂತಾದ ವಿವರಗಳನ್ನು ನಮೂದಿಸಬೇಕು. ವೆಬ್ ಪೋರ್ಟಲ್ ನಿರ್ದಿಷ್ಟ ಶುಲ್ಕವನ್ನು ಪಡೆಯುತ್ತದೆ. ಸಾಲಗಾರರ ವಿಳಾಸ, ಉದ್ಯೋಗ, ಆದಾಯ ಇತ್ಯಾದಿಗಳ ವಿವರಗಳನ್ನು ಪಿ2ಪಿ ಲೆಂಡಿಂಗ್ ಕಂಪನಿ ಪರಿಶೀಲಿಸುತ್ತದೆ. ಇದೇ ಸಂದರ್ಬ ಸಾಲ ಕೊಡಲು ಬಯಸುವವರು ಹೂಡಿಕೆಯ ಮೊತ್ತ, ಬಯಸುವ ಬಡ್ಡಿ ದರವನ್ನು ನಮೂದಿಸಿ ಹಣವನ್ನು ಇಟ್ಟಿರುತ್ತಾರೆ. ಉಭಯ ಬಣಗಳು ಸಮ್ಮತಿಸಿದರೆ ಕಂಪನಿ ಎರಡೂ ಕಡೆಗಳಿಂದ ನಿರ್ದಿಷ್ಟ ಕಮೀಶನ್ ಸ್ವೀಕರಿಸುತ್ತದೆ. ಸಾಲಗಾರರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗುತ್ತದೆ.

ಮರು ಪಾವತಿ ಹೇಗೆ?
ಸಾಲ ಪಡೆದವರು ಪ್ರತಿ ತಿಂಗಳು ಪಿ2ಪಿ ಕಂಪನಿಗೆ ಹಣ ಕೊಡಬೇಕು. ಅದನ್ನು ಸಂಸ್ಥೆ ಸಾಲದಾತರ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ.

ಈ ಪದ್ಧತಿ ಸುರಕ್ಷಿತವೇ?
ಒಂದು ವೇಳೆ ಸಾಲಗಾರರು ಹಣ ಪಡೆದು ಒಂದಷ್ಟು ಕಾಲ ಮಾಸಿಕ ಕಂತುಗಳನ್ನು ಪಾವತಿಸಿ, ನಂತರ ಕೈಕೊಟ್ಟರೆ? ಸಹಜವಾಗಿ ಈ ಪ್ರಶ್ನೆ ನಿಮ್ಮಲ್ಲಿರಬಹುದು. ಪಿ2ಪಿ ಕಂಪನಿಗಳು ತಮ್ಮ ವಹಿವಾಟು ಅತ್ಯಂತ ಸುರಕ್ಷಿತ ಎನ್ನುತ್ತವೆ. ಬ್ಯಾಂಕ್‌ಗಳು ಸಾಲ ನೀಡುವ ಮುನ್ನ ಗ್ರಾಹಕರ ಪೂರ್ವಾಪರಗಳನ್ನು ವಿಚಾರಿಸುವ ರೀತಿಯಲ್ಲಿಯೇ, ಇಲ್ಲಿಯೂ ಕೆಲವು ಪ್ರಕ್ರಿಯೆಗಳಿವೆ. ಆದ್ದರಿಂದ ಆತಂಕ ಅನಗತ್ಯ ಎನ್ನುತ್ತಾರೆ ತಜ್ಞರು. ಹೂಡಿಕೆದಾರರು ತಮ್ಮ ಹಣವನ್ನು ಒಬ್ಬರೇ ಗ್ರಾಹಕರಿಗೆ ನೀಡುವ ಬದಲಿಗೆ 4-5  ಭಿನ್ನ ಗ್ರಾಹಕರಿಗೆ ನೀಡುವುದರಿಂದ ಅಪಾಯದ ಪ್ರಮಾಣ ಕಡಿಮೆಯಾಗುತ್ತದೆ ಎಂಬ ಸಲಹೆಯನ್ನೂ ಪಿ೨ಪಿ ಕಂಪನಿಗಳು ನೀಡುತ್ತವೆ. ಉದಾಹರಣೆಗೆ1 ಲಕ್ಷ ರೂ.ಗಳನ್ನು ಒಬ್ಬರಿಗೇ ಕೊಡುವುದರ ಬದಲು ಐವರಿಗೆ ತಲಾ 20,000 ರೂ.ಗಳಂತೆ ಸಾಲ ಕೊಡಬಹುದು.

ಹೀಗಿದ್ದರೂ, ಇಂತಹ ಸಾಲದ ವಹಿವಾಟಿನ ಮೇಲೆ ನಿಯಂತ್ರಕ ವ್ಯವಸ್ಥೆ ಇರುವುದಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಮಾವಳಿಗಳ ವ್ಯಾಪ್ತಿಗೆ ಬರುವುದಿಲ್ಲ. ನಿಯಂತ್ರಣ ವ್ಯವಸ್ಥೆ ಇಲ್ಲದಿದ್ದಾಗ, ಸಾಲಗಾರರು ಒಂದು ವೇಳೆ ಮರು ಪಾವತಿಗೆ ವಿಫಲರಾದರೆ ನಿಯಂತ್ರಕ ವ್ಯವಸ್ಥೆಯ ನಿಯಮಗಳ ಪ್ರಕಾರ ಇತ್ಯರ್ಥಪಡಿಸಲು ಸಾಧ್ಯವಾಗೆ ಇರಬಹುದು. ಹೀಗಿದ್ದರೂ, ಸಾಲದ ಸಮಾನ ಮಾಸಿಕ ಕಂತುಗಳ (ಇ‌ಎಂಐ) ವಿಳಂಬ ಪಾವತಿ ಶುಲ್ಕ ಹಾಗೂ ಸಾಲದ ಬಾಕಿ ಮರು ವಸೂಲಾತಿಗೆ ಆರಂಭಿಕ ಹಂತದ ಉಪಕ್ರಮಗಳನ್ನು ಸಾಲದಾತರ ಪರವಾಗಿ ಪಿ2ಪಿ ಕಂಪನಿಗಳು ನಿರ್ವಹಿಸುತ್ತವೆ.

ಬ್ಯಾಂಕ್‌ಗಿಂತ ಕಡಿಮೆ ಬಡ್ಡಿಗೆ ಸಾಲ ವಿತರಣೆ ಸಾಧ್ಯ : ರಜತ್ ಗಾಂ

ಆರ್‌ಬಿ‌ಐ ಇತ್ತೀಚೆಗೆ ಬಡ್ಡಿ ದರಗಳನ್ನು ಕಡಿತಗೊಳಿಸಿದೆ. ಇದರಿಂದ ಉದ್ಯಮ ವಲಯ ಖುಷಿ ಪಟ್ಟಿರಬಹುದು. ಆದರೆ ಉಳಿತಾಯ ಮತ್ತು ನಿಶ್ಚಿತ ಠೇವಣಿಗಳ ಮೇಲೆಯೂ ಪರಿಣಾಮ ಬೀರಿದೆ. ಇವುಗಳಲ್ಲಿ ಹೂಡಿಕೆದಾರರಿಗೆ ಸಿಗುವ ಬಡ್ಡಿ ಕಡಿಮೆಯಾಗುತ್ತದೆ. ಆದರೆ ಫೇರ್‌ಸೆಂಟ್ ಡಾಟ್‌ಕಾಮ್‌ನಂತಹ (www.faircent.com) ವೆಬ್‌ಪೋರ್ಟಲ್ ಕಂಪನಿಗಳ ಮೂಲಕ ಸಾಲ ನೀಡುವುದರಿಂದ ಹೆಚ್ಚು ಬಡ್ಡಿ ಆದಾಯವನ್ನು ಸಣ್ಣ ಉಳಿತಾಯಗಾರರು ಪಡೆಯಬಹುದು ಎನ್ನುತ್ತಾರೆ ಸಂಸ್ಥೆಯ ಸ್ಥಾಪಕ, ಸಿ‌ಇ‌ಒ ರಜತ್ ಗಾಂ. ಬ್ಯಾಂಕ್‌ಗಳು ಸಾಮಾನ್ಯವಾಗಿ ಶೇ. 4-5 ರ ಬಡ್ಡಿ ದರದಲ್ಲಿ ಹಣವನ್ನು ಸಂಗ್ರಹಿಸಿ ಶೇ.18- 26 ರ ಬಡ್ಡಿಗೆ ಸಾಲ ವಿತರಿಸುತ್ತವೆ. ಶಾಖೆಗಳ ನಿರ್ವಹಣೆ, ಸಿಬ್ಬಂದಿ ವೇತನಕ್ಕೆ ದೊಡ್ಡ ಮೊತ್ತವನ್ನು ವ್ಯಯಿಸುತ್ತವೆ. ಆದರೆ ಫೇರ್‌ಸೆಂಟ್‌ನಂತಹ ವೆಬ್ ಪೋರ್ಟಲ್‌ಗಳ ಮೂಲಕ ಜನರು ಕಡಿಮೆ ಬಡ್ಡಿಗೆ ಸಾಲ ಪಡೆಯಬಹುದು. ಹೂಡಿಕೆದಾರರು ಬ್ಯಾಂಕ್‌ಗಳಲ್ಲಿ ಸಿಗುವುದಕ್ಕಿಂತ ಹೆಚ್ಚು ಬಡ್ಡಿ ಪಡೆಯಬಹುದು ಎನ್ನುತ್ತಾರೆ ಅವರು. ಮೋದಿ ಸರಕಾರದ `` ಎಲ್ಲರಿಗೂ ಬ್ಯಾಂಕಿಂಗ್” ಅಶಯಕ್ಕೆ ಪೂರಕವಾಗಿ ಫೇರ್‌ಸೆಂಟ್ ಡಾಟ್‌ಕಾಮ್ ಮುಂದುವರಿಯಲಿದೆ ಎನ್ನುತ್ತಾರೆ ರಜತ್ ಗಾಂ.

 

– ಕೇಶವ ಪ್ರಸಾದ್.ಬಿ.ಕಿದೂರು

(ವಿಜಯ ಕರ್ನಾಟಕದಲ್ಲಿ ಪ್ರಕಟಿತ)

2 Responses

  1. Niharika says:

    ಬಹಳ ಉಪಯುಕ್ತ ಮತ್ತು ಅಪರೂಪದ ಮಾಹಿತಿ. ಧನ್ಯವಾದಗಳು

Leave a Reply to chandrashekar Cancel reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: