ಬರೇಲಿಯಲ್ಲಿ ವೀರ ವನಿತೆಯರು
2010 ರ “ರಾಷ್ಟ್ರ ಸೇವಿಕಾ ಸಮಿತಿ”ಯ ವಿಜಯದಶಮಿ ಉತ್ಸವಕ್ಕೆ “ವೀರವನಿತೆಯರು” ರೂಪಕ ಪ್ರಸ್ತುತಪಡಿಸಿದ್ದೆವು. ಆ ರೂಪಕ, ಉತ್ತರಪ್ರದೇಶದ ಬರೇಲಿಯಲ್ಲಿ (ಜನವರಿ 26 ರಿಂದ 30, 2011) ನಡೆಯಲಿದ್ದ ” 6 ನೇ ಅಂತರಾಷ್ಟ್ರೀಯ ರಂಗ ಉತ್ಸವ” ( ಇನ್ಟರ್ ನ್ಯಾಷನಲ್ ಥಿಯೇಟರ್ ಫೆಸ್ಟಿವಲ್) ಕ್ಕೆ ಸಮಾಜ ಸೇವಾ ಸಮಿತಿ ಕಡೆಯಿಂದ ಆಯ್ಕೆ ಆಯಿತು. ನಾವು 10 ಜನ ಹೆಂಗಸರು ಸೇರಿ ಬರೇಲಿಲಿ ಕಾರ್ಯಕ್ರಮ ಕೊಡುವುದಕ್ಕೆಂದು ಹೊರಟೆವು. ನಮ್ಮ ಉತ್ಸಾಹ ನೋಡಬೇಕಿತ್ತು ! ಪ್ರಯಾಣದ ದಿನ ಹತ್ತಿರ ಬಂದ ಹಾಗೆ, ದೆಹಲಿ ಮತ್ತೆ ಬರೇಲಿಯ ಚಳಿ ತಡೆಯಲು ಸ್ವೆಟ್ಟರು, ಶಾಲು ಅಲ್ಲದೆ ಥರ್ಮಲ್ ವೇರ್ ನಮ್ಮ ಬ್ಯಾಗ್ ಸೇರಿತು. ಬ್ಯಾಗು ಭಾರಾ.. ಭಾರ. ಆದ್ರೆ ಈ ಸಾರಿ ಲಗ್ಗೇಜು ಹೊತ್ತುಕೊಂಡು ಹೋಗುವುದು ನಾವೇ ಅಲ್ವಾ ? ಜೊತೆಗೆ ಪತಿಪರಮೇಶ್ವರ ಇಲ್ಲವಲ್ಲ !
ಸಂಪರ್ಕಕ್ರಾಂತಿ ರೈಲಿನಲ್ಲಿ ಯಶವಂತಪುರದಿಂದ ನಮ್ಮ ಪ್ರಯಾಣ ಶುರು. ಎಲ್ಲ ಹೆಂಗಸರ ಕುಟುಂಬವೇ ರೈಲ್ವೆಸ್ಟೇಶನ್ ಗೆ ಬಂದಿತ್ತು. ಎಷ್ಟೋ ವರ್ಷದಿಂದ ಮನೆ ಒಳಗೆ ಬೀಡುಬಿಟ್ಟ ಅಮ್ಮ ಹೀಗೆ ಹೊರ ಹೊರಟ ಸಂದರ್ಭಕ್ಕೆ ಸಾಕ್ಷಿಯಾಗಲು ಬಂದ ಕುಟುಂಬದ ಎಲ್ಲರಿಂದಲೂ ಒಂದೇ ಮಾತು “ಜೋಪಾನ” ಹೇಳಿ. ಅವರೆಲ್ಲರ ಹಾರೈಕೆ ಜೊತೆ ಆರಂಭವಾದ ನಮ್ಮ ಪ್ರಯಾಣ, ಮಾರನೆ ದಿನ ಸಮೂಹ ಗೀತೆಗಳ ಅಭ್ಯಾಸ, ಭಜನೆ, ಹಾಸ್ಯ, ನಗು ಜೊತೆ ಕಳೆದದ್ದೇ ಗೊತ್ತಾಗಲಿಲ್ಲ.
ಬರೇಲಿಯಲ್ಲಿ ವಿಪರೀತ ಚಳಿ(-2°). ಸಿಮೆಂಟ್ ನೆಲದ ಮೇಲೆ ಕಾಲು ಇಡೋದಕ್ಕೆ ಆಗೋಲ್ಲ ! ಆಯೋಜಕರು ನಮಗೆ ಒದಗಿಸಿದ್ದ ಕಲ್ಯಾಣಮಂಟಪದ ವಸತಿ ವ್ಯವಸ್ಥೆ ಒಂದು ಕಡೆ, ಊಟದ ವ್ಯವಸ್ಥೆ ಇನ್ನೊಂದು ಕಡೆ, ನಾವು ಕಾರ್ಯಕ್ರಮ ಕೊಡಬೇಕಿದ್ದ ಕಲಾಕ್ಷೇತ್ರ ಮತ್ತೊಂದು ಕಡೆ. ಒಂದಕ್ಕೂ ಇನ್ನೊಂದಕ್ಕೂ 1 ರಿಂದ 2 ಕಿಲೋಮೀಟರ್ ದೂರ. ಟಾಂಗಾದವರು 10 ರುಪಾಯಿಗೆ ಒಂದುಕಡೆಯಿಂದ ಇನ್ನೋದು ಕಡೆಗೆ ಕರೆದುಕೊಂಡು ಹೋಗುತ್ತಿದ್ದರು. ನಮ್ಮ ಹೆಂಗಸರ ತಂಡದ ಸದಸ್ಯರೆಲ್ಲ 30 ರಿಂದ 60 ವರ್ಷ ಪ್ರಾಯದವರು. ಕಾರ್ಯಕ್ರಮಕ್ಕೆ ನೋಂದಣಿ ಮಾಡಿಸಿದೆವು. ಅವರು ಕೊಟ್ಟ ರೊಟ್ಟಿ ಊಟ ಉಂಡೆವು. ಅಂದು ಮದ್ಯಾಹ್ನ ನಡೆಯಲಿದ್ದ ಮೆರವಣಿಗೆ ಕಾರ್ಯಕ್ರಮಕ್ಕೆ ಸಿದ್ಧರಾದೆವು. ಕರ್ನಾಟಕ ದ್ವಜದ ಬಣ್ಣದ ಸೀರೆ ಉಟ್ಟು ಮೆರವಣಿಗೆ 4 – 5 ಕಿಲೋಮೀಟರ್ ನಡಿಗೆಯಲ್ಲಿ ಪಾಲ್ಗೊಂಡೆವು. ಬರೇಲಿಯಲ್ಲಿ “ಜಗಮಗ” ಮಿಂಚಿದೆವು ! ಅಲ್ಲಿಯ ದಿನಪತ್ರಿಕೆಲಿ ಜಾಗ ಗಿಟ್ಟಿಸಿಕೊಂಡೆವು.
ಕತ್ತಲಾದಂತೆ ಚಳಿ ಏರುವುದಕ್ಕೆ ಶುರುವಾಯ್ತು. ಅಲ್ಲಿನ ಆಹಾರ, ವಸತಿ ನಮಗೆ ದೊಡ್ಡ ಸಮಸ್ಯೆ ಆಯ್ತು. ನಮ್ಮ ಗುಂಪಿನ “ಭಾರತ ಮಾತೆ ವೇಷಧಾರಿ” ಸತ್ಯವತಿ, ಅವರ ದೂರದ ನೆಂಟರ ಮೂಲಕ ಬರೇಲಿಯಲ್ಲಿದ್ದ ಸಕ್ಸೇನ ದಂಪತಿಗಳ ವಿಳಾಸ ಪತ್ತೆ ಹಚ್ಚಿದರು. ನಮಗೆ ಉಳಿಯುವುದಕ್ಕೆ ವ್ಯವಸ್ಥೆಯಾಗುತ್ತದಾ ? ಎಂಬುದು ನಮ್ಮ ನಿರೀಕ್ಷೆ. ಪುಣ್ಯಕ್ಕೆ ಶ್ರೀಯುತ ಸಕ್ಸೇನ ದಂಪತಿಗಳಿಂದ, ಅವರ ಬಂಗಲೆಗೆ, ನಮ್ಮ ಮಹಿಳಾ ತಂಡಕ್ಕೆ ಆದರದ ಸ್ವಾಗತ ಸಿಕ್ಕಿತು. “ಅಬ್ಬಾ !…. ಬದುಕಿಗೊಂಡೆವು !” ಹೇಳಿಕೊಂಡು, ಅಂದು ರಾತ್ರಿಯೇ ಅತ್ಯಂತ ವಿನಯದಿಂದ ಅವರ ಬಂಗಲೆಯನ್ನು “ಆಕ್ರಮಿಸಿದೆವು“………….
ನಮಗೆ ಅವರ ಅಡುಗೆ ಕೋಣೆ ಮುಕ್ತವಾಗಿ ಧಕ್ಕಿತ್ತು. ನಾನು ಮತ್ತು ಸುವರ್ಣ ಬೆಳಗಿನ ತಿಂಡಿಗಾಗಿ ಉಪ್ಪಿಟ್ಟು ತಯಾರಿಸಿದೆವು. ಮನೆಯವರಿಗೆ ಮೊದಲು ಕೊಟ್ಟು, ನಾವೂ ತೃಪ್ತಿಯಾಗುವಷ್ಟು(ತಿಂದು ಎಷ್ಟು ದಿನವಾಯ್ತು ? ಎನ್ನುವಂತೆ) ತಿಂದೆವು. ಬೆಳಗಿನ ಕೋಲಾಟ ಪ್ರದರ್ಶನ ಕೊಟ್ಟು, ಸಂಜೆಯ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಿದ್ದಯಿತು. ಕಲಾಕ್ಷೇತ್ರದಲ್ಲಿ ವೇಷಭೂಷಣ ಮಾಡಿಕೊಳ್ಳಲು ಸರಿಯಾದ ಸ್ಥಳಾವಕಾಶ ಇರದ ಕಾರಣ, ಸಕ್ಸೇನ ಅವರ ಮನೆಯಲ್ಲಿಯೇ “ವೀರವನಿತೆಯರು” ರೂಪಕಕ್ಕೆ ತಕ್ಕಂತೆ ವೇಷ ಧರಿಸಿ, ಕಲಾಕ್ಷೇತ್ರದತ್ತ ಹೊರಟೆವು. ಟಾಂಗಾದಲ್ಲಿ “ರಾಣಿಯರ ಗತ್ತಿ”ನಲ್ಲಿ ನಮ್ಮ ಪ್ರಯಾಣ ! ಬರೇಲಿಯ ಜನತೆ ಕಣ್ಣರಳಿಸಿ ನಮ್ಮನ್ನೆ ನೋಡುತ್ತಿತ್ತು !
ಕಲಾಕ್ಷೇತ್ರದಲ್ಲಿ ನಮ್ಮ ಕಾರ್ಯಕ್ರಮ ಕೊಡಲು ಸಜ್ಜಾಗಿ ರಂಗಸ್ಥಳದ ಪಕ್ಕದಲ್ಲಿ ಕಾದು ನಿಂತರೆ, ಎಷ್ಟು ಹೊತ್ತಾದರೂ ನಮ್ಮ ಸರದಿ ಬರಲಿಲ್ಲ ! ಮತ್ತೆ ಕೇಳಿತು “ಸುರೇಖಾ…………. ಸಮಾಜ ಸೇವಾ ಸಮಿತಿ, ಕರ್ನಾಟಕ್ – ಸೋಲೋ ಪರ್ಫಾರ್ಮೆನ್ಸ್ ….“. ಅಬ್ಬಕ್ಕಾ ರಾಣಿಯ ಧಿರಿಸಿನಲ್ಲಿ ನನ್ನ ಏಕಪಾತ್ರಾಭಿನಯ ! ಹಾಸ್ಯ ಪ್ರಧಾನ ಏಕಪಾತ್ರಾಭಿನಯಕ್ಕೆ ನನ್ನ ಧಿರಿಸು ಸ್ವಲ್ಪವೂ ಹೊಂದಾಣಿಕೆಯಾಗುತ್ತಿರಲಿಲ್ಲ. ಆಯೋಜಕರಲ್ಲಿ ಯಾರೋ ಒಬ್ಬರು ರಂಗದ ಮೇಲೆ ಬಂದರು “ಸುರೇಖಾ ಕೌನ್ ಹೈ ? ಆವೋ ಡಾನ್ಸ್ ಕರ್ಲೋ ” ಹೇಳ್ತಾ ಇದ್ದಾರೆ ! ಅವರಿಗೆ ಬೇಕಾಗಿ ನಾನು ಡ್ಯಾನ್ಸ್ ಮಾಡಬೇಕಾ ? ಬೇರೇನೂ ಮಾಡಲು ತೋಚಲಿಲ್ಲ. ಕಿರೀಟವನ್ನು ಕಳಚಿಟ್ಟು, ಖಡ್ಗವನ್ನು ಕೆಳಗಿಟ್ಟೆ. ರಂಗದ ಮಧ್ಯಕ್ಕೆ ಬಂದು ಏಕಪಾತ್ರಾಭಿನಯ ಮಾಡಿದೆ ! ನಮ್ಮ ಕನ್ನಡ ಭಾಷೆ ಅವರಿಗೆ ಅರ್ಥವಾಗದಿದ್ದರೂ, ಅಭಿನಯದಿಂದಲೇ ಅರ್ಥಮಾಡಿಕೊಂಡ ಪ್ರೇಕ್ಷಕರು, ಜೆಡ್ಜ್ ಗಳು ಹಾಸ್ಯವನ್ನು ಆಸ್ವಾದಿಸಿದರು. ಏಕಪಾತ್ರಾಭಿನಯ ಮುಗಿಯುತ್ತಾ ಇದ್ದಹಾಗೆ, “ವೀರ ವನಿತೆಯರು” ರೂಪಕ. ಅಬ್ಬಕ್ಕಾ ರಾಣಿಯೇ ಮೊದಲು ಹೋಗಬೇಕಲ್ಲ….. ಗಡಿಬಿಡಿಯಲ್ಲಿ ಕಿರೀಟ ತೊಟ್ಟು- ಖಡ್ಗ ಹಿಡಿದು ರಂಗಕ್ಕೆ ಹೋದ್ದೇ….. ಮತ್ತೆ ನೋಡಿದರೆ ನಾವು ಕೊಡಲಿದ್ದ ಕಾರ್ಯಕ್ರಮಗಳನ್ನು ಒಟ್ಟಿಗೆ ಬರೆಸಿದ್ದು ಈ ಅವಾಂತರಕ್ಕೆ ಕಾರಣ ಆಗಿತ್ತು !
ಅಂದು ನಾವು ಪ್ರದರ್ಶಿಸಿದ ರೂಪಕ ಆಯೋಜಕರ, ಪ್ರೇಕ್ಷಕರ ಮನ ಗೆದ್ದಿತ್ತು. ಅಲ್ಲಿನ ಮಾಧ್ಯಮದವರು ನಮ್ಮ ಗುಂಪಿನ ಫೋಟೋ ತೆಗೆದದ್ದೇ ತೆಗೆದ್ದದ್ದು ! ನಮ್ಮ ರೂಪಕದ ನಿರ್ದೇಶಕಿ ಪ್ರಜ್ಯೋತಿ ಭಟ್ ಸಂದರ್ಶನವನ್ನೂ ತೆಗೆದುಕೊಂಡರು. ನಮಗೆ ಯಾರಿಗೂ ಸರಿಯಾಗಿ ಹಿಂದಿ ಬಾರದ್ದ ಕಾರಣ, ಅದು ಯಾವ ಚಾನಲ್ ನಲ್ಲಿ, ಎಷ್ಟು ಹೊತ್ತಿಗೆ ಪ್ರಸಾರ ಆಗುತ್ತೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗಲಿಲ್ಲ !
ಮಾರನೆಯ ದಿನ ಕಾರ್ಯಕ್ರಮದ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ, ಸರದಿ ಬರುವವರೆಗೆ ಕಾಯ್ದು ಕಾರ್ಯಕ್ರಮ ಕೊಡುವುದು ನಮಗೆ ಕಷ್ಟ ಹೇಳಿ ಅನ್ನಿಸಿತು. “ಹಚ್ಚೇವು ಕನ್ನಡದ ದೀಪ” ನೃತ್ಯ ಆಗುವಾಗ, ಈ ಕಾಯುವ ಕೆಲಸ ಬೇಡ ಎಂದು, ತಿಂಗಳಿನಿಂದ ಅಭ್ಯಾಸ ಮಾಡಿದ್ದ ಸಮೂಹ ಗೀತೆಗಳ ಗಾಯನವನ್ನು ರದ್ದು ಪಡಿಸಿದೆವು. ಮರುದಿನಕ್ಕೆ ಹರಿದ್ವಾರ-ಹೃಷಿಕೇಶ ಪ್ರವಾಸವನ್ನು ಹಮ್ಮಿಕೊಂಡೆವು.
5 ನೇ ದಿನ ಮತ್ತೆ ಮೆರವಣಿಗೆ 5-6 ಕಿಲೋಮೀಟರ್ ನಡಿಗೆ. ಮದ್ಯೆ ಮದ್ಯೆ ಹಾಡು-ಡ್ಯಾನ್ಸು. (ಇಲ್ಲಿ -ನಮ್ಮೂರಲ್ಲಿ ಹಾಂಗೆಲ್ಲ ರಸ್ತೆ ಮೇಲೆ ಕುಣಿಯೋಕಾಗುತ್ತಾ ?) ಊರಿನ ಜನರೆಲ್ಲ , ಬೇರೆ ಬೇರೆ ರಾಜ್ಯದಿಂದ ಅವರ ಊರಿಗೆ ಬಂದು ಕಾರ್ಯಕ್ರಮ ಕೊಟ್ಟ ನಮ್ಮ ಮೇಲೆ (ಒಟ್ಟು ಸ್ಪರ್ಧಿಗಳು ಸುಮಾರು 800 ಜನ ಇದ್ದೆವು) ಹೂ ಎರಚಿದರು. ಚಹಾ ಕೊಟ್ಟರು, ಸಿಹಿ ಹಂಚಿದರು, ಫೋಟೋ ತೆಗೆದರು. ಮೆರವಣಿಗೆ ಆದ ಮತ್ತೆ, ಸಂಜೆ 7 ಕ್ಕೆಲ್ಲ ಮುಕ್ತಾಯ ಸಮಾರಂಭ ಶುರುವಾಯ್ತು. ಎಷ್ಟು ಹೊತ್ತು ಕಾದರೂ ನಮ್ಮ ಹೆಸರಿಲ್ಲ. ಅಂತೂ 9.30 ಸುಮಾರಿಗೆ ನಮ್ಮ ಹೆಸರು ಪ್ರಕಟ ಆಯ್ತು. ಮೊದಲ ದಿನ ಮೆರವಣಿಗೆಯಲ್ಲಿ ಆಕರ್ಷಣೀಯವಾಗಿ ಭಾಗವಹಿಸಿದ್ದಕ್ಕಾಗಿ “ಬೆಸ್ಟ್ ಪರ್ಫಾರ್ಮೆನ್ಸ್ ಅವಾರ್ಡ್“, ನಮ್ಮ “ವೀರವನಿತೆಯರು” ರೂಪಕಕ್ಕೆ “ಸ್ಪೆಶಲ್ ಪರ್ಫಾರ್ಮೆನ್ಸ್ ಅವಾರ್ಡ್“, ನನ್ನ ಏಕಪಾತ್ರಾಭಿನಯಕ್ಕೆ ಮೊದಲ ಬಹುಮಾನ, ಕೋಲಾಟಕ್ಕೆ ಎರಡನೆಯ ಬಹುಮಾನ ಸಿಕ್ಕಿತ್ತು !
ಮರುದಿನ ಬೆಳಿಗ್ಗೆ ಸಕ್ಸೇನ ದಂಪತಿಗಳಿಗೆ ನಮಸ್ಕರಿಸಿ, ಆಶೀರ್ವಾದ ಪಡೆದು, ಅಲ್ಲಿಂದ ರೈಲು ಹತ್ತಿದೆವು. ಮರುದಿನ ದೆಹಲಿಗೆ – ಅಲ್ಲಿಂದ ಬೆಂಗಳೂರಿಗೆ. ಬರೇಲಿಯ ಸಿಹಿ-ಕಹಿ ಅನುಭವಗಳೊಂದಿಗೆ ಬೆಂಗಳೂರು ತಲುಪಿದಾಗ ಸಾಕಪ್ಪಾ ಸಾಕು ಅನ್ನಿಸಿದ್ದು ಸತ್ಯ ! ಆದರೆ ಹೇಳಿಕೊಳ್ಳೋ ಹಾಗಿಲ್ಲ. ಎಂಥಕ್ಕೇ ಹೇಳಿದರೆ ನಾವು “ವೀರವನಿತೆಯರು” ಅಲ್ಲವಾ ?
ಬಹಳ ಚೆನ್ನಾಗಿದೆ ನಿಮ್ಮ ಬಹುಮುಖ ಪ್ರತಿಭೆಗಳ ಅನಾವರಣ, ಅನುಭವ ಮತ್ತು ನಿರೂಪಣೆ . ನನಗೇನಾದರೂ ಮುಂಚಿತವಾಗಿ ತಿಳಿಸಿದ್ದಿದ್ದಾದರೆ. ‘ಕಾರ್ಯಕ್ರಮ’ ಕೊಡುವಷ್ಟು ಪ್ರತಿಭೆ ಇಲ್ಲವಾದುದರಿಂದ ‘ಟಾಂಗಾದಲ್ಲಿ “ರಾಣಿಯರ ಗತ್ತಿ”ನಲ್ಲಿ ನಮ್ಮ ಪ್ರಯಾಣ’ ಕಾದರೂ ಕಂಪೆನಿ ಕೊಡುತ್ತಿದ್ದೆ!
ಆಹಾ! ಲೇಖನ ಮುದಕೊಟ್ಟಿತು.. 🙂
ಬಹಳ ಚೆನ್ನಾಗಿದೆ…ನಿಮ್ಮ ಪರವೂರಿನ ಕಾರ್ಯಕ್ರಮಗಳು ಮತ್ತು ಅದನ್ನು ವಿವಿರಿಸಿದ ಶೈಲಿ.
Bahala chennagide.nimma lekhana