ಪ್ರಕೃತಿಯ ವೈಚಿತ್ರ- ಜೆನೋಲಾನ್ ಕೇವ್ಸ್
ಅದೊಂದು ಪ್ರಕೃತಿ,ದೇವಿ ತನ್ನನ್ನು ತನ್ನಿಚ್ಛೆಯಂತೆ ತಾನು ಅಲಂಕರಿಸಿಕೊಂಡು ನಿಂತ ಸೊಬಗು. ಒಮ್ಮೆ ಆಸ್ಟ್ರೇಲಿಯಾಕ್ಕೆ ಹೋಗಿದ್ದ ಸಮಯ.
ಸಿಡ್ನಿಯಿಂದ ಸುಮಾರು ನೂರೆಪ್ಪತ್ತೈದು ಕಿ.ಮೀ.ದೂರದ ಜೆನೋಲಾನ್ ಕೇವ್ಸ್ ನೋಡಲು ನನ್ನ ಮೂರುತಿಂಗಳ ಕೂಸು ಮೊಮ್ಮಗಳು ಖುಷಿ ಮತ್ತು ಸುಖಿ ಮಗಳು ನಿವೇದಿತ ಮತ್ತು ಅಳಿಯರೊಡಗೂಡಿ ಹೋಗಿದ್ದೆವು. ಈ ಕೇವ್ಸ್ ತಲುಪಲು ಸುಂದರ ಗುಡ್ಡಸಾಲು ಮತ್ತು ವನಸಿರಿಯ ಮಧ್ಯದಲ್ಲಿ ಸೀಳಿಹೋಗುವ ಸುತ್ತುಬಳಸಿನ ಕಪ್ಪು ಡಾಂಬರುರಸ್ತೆಯಲ್ಲಿ ಚಲಿಸಬೇಕು. ಕಣ್ಮನ ತಣಿಸುವ ಇಕ್ಕೆಲಗಳ ಸೌಂದರ್ಯಕ್ಕೆ ವರ್ಣಿಸಲು ಶಬ್ಧಗಳೇ ಇಲ್ಲ.
ದಾರಿಯುದ್ದಕ್ಕೂ, ‘ಕಿವಿ ಮತ್ತು ಕಾಂಗರು ಪ್ರಾಣಿಗಳು ರಸ್ತೆಗೆ ಬರುತ್ತವ ಎಚ್ಚರ’ ,ಎಂಬ ಪಲಕಗಳು ಕಾಣುತ್ತವೆ. ದಾರಿಯ ಮದ್ಯದಲ್ಲಿ ಮಂಜು ಮುಸುಕಿದ ಬೆಟ್ಟವಿದೆ. ನೀಲಿ ಬಣ್ಣವನ್ನೆಲ್ಲಾ ಬಳಿದುಕೊಂಡು ನಿಂತಿರುವ ಈ ಬೆಟ್ಟವನ್ನು ಓಡಿಹೋಗಿ ಏರಿಬಿಡಬಿಡಬೇಕೆನ್ನುವ ಹಂಬಲ ಉಂಟಾಗುತ್ತದೆ. ಆದರೆ ಅದಕ್ಕೆ ಮೆಟ್ಟಿಲುಗಳಿಲ್ಲ. ಅದರ ಪಕ್ಕಕ್ಕೆ “ತ್ರಿ ಸಿಸ್ಟರ್ಸ್ ರಾಕ್ ” ಇದೆ.ಇದಕ್ಕೊಂದು ಜನಪದ ಕಥೆ ಇದೆ. ಜಾದೂಗಾರನೊಬ್ಬ ತನ್ನ ಮಂತ್ರದಂಡದಿಂದ.ತನ್ನ ಮೂರು ಹೆಣ್ಣುಮಕ್ಕಳನ್ನು ಕಲ್ಲಾಗಿಸಿ ಮಂತ್ರದಂಡವನ್ನು ಕಳೆದುಕೊಂಡನಂತೆ.ಕಲ್ಲಾದ ಮೂರು ಹೆಣ್ಣುಮಕ್ಕಳು ಹಾಗೆಯೇ ನಿಂತಿದ್ದಾರೆ ಎನ್ನುವ ಪ್ರತೀತಿ ಇದೆ. ಇದಕ್ಕೆ Three sisters rock ಎಂದೇ ಕರೆಯುತ್ತಾರೆ.
ಇದನ್ನು ದಾಟಿ ಮುಂದೆ ಸಾಗಿದರೆ ಎರಡು ಕಡೆ ಇರುವ. ಹಸಿರು ಕಣಿವೆಗಳ ಮದ್ಯೆ “ಜೆನೋಲಾನ್ ಕೇವ್ಸ್ “ ತಲುಪುತ್ತೇವೆ . ಮಣ್ಣ ಬಾಗಿಲೊಳಗಿನಿಂದ ನೆಲದ ಒಳಗಿಳಿಯುತ್ತಿದ್ದಂತೆ, ಗರ್ಭದೊಳಗೆ ಭೂಮಿ ತನಗೆ ತಾನೇ ಅಲಂಕರಿಸಿಕೊಂಡು ನಿಂತ ಸ್ವಸುಂದರಿಯ ದರ್ಶನವಾಗುತ್ತದೆ. ಇದೊಂದು ಭೂಮಿಯ. ಮೇಲಿಂದ ಬಿದ್ದ ನೀರು ಒಳಗೆ ಇಳಿದು ಮಣ್ಣಿನ ಮಿಶ್ರಣದೊಡನೆ ಬೆರೆತು ಆಕಾರಗೊಂಡ ಕಲಾಪ್ರಪಂಚ. ಕಂಬಗಳ ಸಾಲು,ಶಿವನ ರೂಪ ತಳೆದ ಅನೇಕ. ಲಿಂಗಾಕಾರಗಳು ಸೂಜಿ ದಾರದಷ್ಟು ಸಣ್ಣ ಸಣ್ಣಕಡ್ಡಿಗಳು, ಮನುಷ್ಯಾಕೃತಿ ಗಳು. ಚಿತ್ರವಿಚಿತ್ರ ಕಲೆ ಅರ್ಧ ಮೈಲು ದೂರಕ್ಕೂ ಹರಡಿಕೊಂಡಿವೆ.ಇದನ್ನು ಒಂಬತ್ತು ಸಾವಿರ ವರ್ಷಗಳ ಹಿಂದೆಯೇ ಬೇಟೆಗಾರನೆಬ್ಬ ಕಂಡುಹಿಡಿದಿದ್ದೆಂದು ಹೇಳುತ್ತಾರೆ. ಅವುಗಳನ್ನು ಬಣ್ಣಿಸಲು ಮಾತುಗಳಿಲ್ಲ.
ಅಷ್ಟರಲ್ಲೇ ಕಿವಿಗೆ ನೀರಿನ ಝಳಝಳ ಸದ್ದು ಕಿವಿಗೆ ಇಂಪಾಗಿ ಕೇಳಿಸುತ್ತದೆ. ನಂತರ ಅರವತ್ತಾರು ಮೆಟ್ಟಿಲುಗಳನ್ನು ಇಳಿದು ಮತ್ತೂ ಭೂಗರ್ಭ ಹೊಕ್ಕರೆ ಬಿಳೀ ಬಣ್ಣದ ಸ್ಪಟಿಕದಂತಿರುವ. ಸ್ವಚ್ಛವಾದ, ತಿಳಿಯಾದ ನದಿಯೊಂದು ಗೋಚರಿಸಿ ರೋಮಾಂಚನವಾಗುತ್ತದೆ. ಅದರ ತಳದಲ್ಲಿ ರುವ ಬಿಳೀ ಮರಳು ಕೂಡಾ
ಸ್ಪಷ್ಟವಾಗಿ. ಕಾಣುತ್ತದೆ. ಭೂಮಿಯ ಒಳಗೆ ಹರಿಯುವ ಗುಪ್ತಗಾಮಿನಿ ನದಿಗಳ ಬಗ್ಗೆ ಕೇಳಿದ್ದೆ. ಆದರೆ ಕಣ್ಣಾರೆ ನೋಡಿದಾಗ ಬೊಗಸೆಯಲ್ಲಿ ಅದರ ನೀರು ಕುಡಿದಾಗ. ಆದ ಸಂತೋಷ ಮರೆಯುವಂತೆಯೇ ಇಲ್ಲ.
ಒಳಗಿನ ಕತ್ತಲೆ ಕಳೆಯಲು ಅಲ್ಲಲ್ಲಿ ಸೋಲಾರ್ ಲೈಟ್ ವ್ಯವಸ್ಥೆ ಇದೆ.ಈ ಪ್ರಕೃತಿ ಕಲಾವಂತಿಕೆಗೆ ಮನುಷ್ಯನ ಮೈಲಿಗೆ ತಗುಲದಂತೆ ಜೋಪಾನ ಮಾಡಿದ್ದಾರೆ. ಎಲ್ಲಿಯಾದರೂ ದುರದೃಷ್ಟವಶಾತ್ ಭೂಮಿ ಕುಸಿದರೆ ಒಳಗೇ ಸಮಾಧಿಯಾಗಲೂಬಹುದು. ದೈರ್ಯಮಾಡಿ ನೋಡಲೇಬೇಕಾದ ಭೂಗರ್ಭ.
ಮತ್ತೆ ಆಚೆ ಬಂದಾಗ ಕತ್ತಲಾಗಿ ಮಂಜು ಮುಸುಕಿ ರಸ್ತೆಯೇ ಕಾಣದೆ ಕಾರು ಎತ್ತ ಸಾಗುತ್ತಿದೆ ತಿಳಿಯದೆ ತೆವಳಿದಂತೆ ಬಂದು ಸಿಡ್ನಿ ಸೇರಬೇಕಾಯಿತು.
ಕೊನೆಗೊಂದು ಮಾತು :
ಸಿಡ್ನಿಗೆ ಹೋದವರು ಬರೀ ಅಪೇರಾಔಸ್ ಮತ್ತು ಹಾರ್ಬರ್ ಬ್ರಿಡ್ಜ್ ನೋಡಿ ಬರಬೇಡಿ 175 ಕಿ.ಮೀ ದೂರದಲ್ಲಿರುವ ಜೆನೋಲಾನ್ ಕೇವ್ಸ್ ಗೂ ತಪ್ಪದೆ ಹೋಗಿ ಬನ್ನಿ. ಅಲ್ಲಿ ನಿಮಗಾಗಿ ಪಾತಾಳಗಂಗೆ ಕಾದಿರುತ್ತಾಳೆ. ಹಾಗೆ ನಾನು ಒಮ್ಮೆ ಬಂದಿದ್ದೆನೆಂದು, ದಾಹ ತೀರಿಸಿದ ನಿನ್ನ ರುಚಿ ಇನ್ನೂ ನನ್ನ ನಾಲಿಗೆಯಲ್ಲಿ ಇದೆಯೆಂದೂ ಮತ್ತು ಕೇಳಿದೆನೆಂದು ಹೇಳಿ. ಇದು ನನ್ನ ಪ್ರವಾಸದ ದಿನಗಳಲ್ಲಿ ನೋಡಿದ ಅತ್ಯುತ್ತಮ ಸ್ಥಳ.
– ಪುಷ್ಪಾ ನಾಗತಿಹಳ್ಳಿ
good information. good article madam.
AMAZING