ವೃತ್ತಿಯೆಂಬ ಪ್ರವೃತ್ತಿ
‘ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ – ದಾಸರ ಹಾಡು ಇದು. ಈ ಭೂಮಿಯಲ್ಲಿ ಹುಟ್ಟಿದ ಕಾರಣ ಬದುಕುವುದು, ಬದುಕಿಗೋಸ್ಕರ ವೃತ್ತಿಯೊಂದನ್ನವಲಂಬಿಸುವುದು ಅನಿವಾರ್ಯ. ಅದೃಷ್ಟ, ಛಲ, ಪ್ರತಿಭೆ, ಸೂಕ್ತ ವಿದ್ಯಾಭ್ಯಾಸವುಳ್ಳವರು ಉನ್ನತ ಹುದ್ದೆಗಳಲ್ಲಿದ್ದರೆ ಕೆಳಮಧ್ಯಮ, ಮಧ್ಯಮ ವರ್ಗದವರು ತಮ್ಮ ಜೀವನ ಸ್ತರದಿಂದ ಕೊಂಚ ಮೇಲ್ವರ್ಗಕ್ಕೆ ಹೋಗುತ್ತಿರುತ್ತಾರೆ. ಫ್ರೊಫೆಷನಲ್ ಕೋರ್ಸ್ಗಳನ್ನು ಕಲಿತು ತಮ್ಮ ಜೀವನವನ್ನೇ ಬದಲಾಯಿಸಿಕೊಂಡವರೂ ಇದ್ದಾರೆ. (ಇದಕ್ಕಾಗಿಯೇ ಮಧ್ಯಮವರ್ಗ ಸೈನ್ಸ್, ಟೆಕ್ನಾಲಾಜಿ ಎಂದು ಸೀಟಿಗೋಸ್ಕರ ಒದ್ದಾಡುತ್ತಿರುತ್ತದೆ.). ಅತಿ ಶ್ರೀಮಂತರನ್ನು ಹೊರತುಪಡಿಸಿದರೆ ಈಗಿನ ಜಮಾನದಲ್ಲಿ ಹೆಣ್ಣು ಗಂಡೆನ್ನದೆ ಜೀವನದ ಬಂಡಿ ಸಾಗಿಸಲು ದುಡಿಯುವುದು ಅನಿವಾರ್ಯ. ಇದು ಮಹಿಳೆಯರ ಸ್ವಾಭಿಮಾನದ, ವ್ಯಕ್ತಿತ್ವ ವಿಕಾಸದ ಪ್ರಶ್ನೆ ಕೂಡ. ಈಗ ಹೈಸ್ಕೂಲಿನಲ್ಲಿ, ಕಾಲೇಜಿನಲ್ಲಿ ಓದುತ್ತಿರುವ ಹೆಚ್ಚಿನ ಹೆಣ್ಣು ಮಕ್ಕಳು ಉದ್ಯೋಗಕ್ಕೆ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ. ಕೌಟುಂಬಿಕ ಚೌಕಟ್ಟನ್ನು ಮೀರಿ ಬೇರೆ ಬೇರೆ ಪಾತ್ರಗಳನ್ನು ನಿಭಾಯಿಸುವ, ವೃತ್ತಿಪರ ಮಹಿಳೆಯರೇ ತುಂಬಿರುವ ಮುಂದಿನ ತಲೆಮಾರು ಖಂಡಿತ ವಿಭಿನ್ನವಾಗಿರುತ್ತದೆ.
ಒಂದು ಕಾಲದಲ್ಲಿ ಕೇವಲ ಎಸ್ಸೆಸ್ಸೆಲ್ಸಿ, ಡಿಗ್ರಿ ಇದ್ದರೆ ಉದ್ಯೋಗ ದೊರೆಯುತ್ತಿತ್ತು. (ಅದನ್ನು ಪಡೆಯಲೇ ಹಠ ಸಾಹಸ ಪಡಬೇಕಿತ್ತು ಕೂಡ). ಈಗ ಎಷ್ಟು ವಿದ್ಯಾಭ್ಯಾಸವಿದ್ದರೂ ಅತ್ಯುನ್ನತ ಶ್ರೇಣಿ, ಪ್ರಭಾವ ಇವೆಲ್ಲ ಇಲ್ಲದಿದ್ದರೆ ಕಣ್ಣು ಕೋರೈಸುವ ಉದ್ಯೋಗವಂತೂ ಸಿಗುವುದಿಲ್ಲ. ಸಾಧಾರಣವಾಗಿ ಹುಡುಗಿಯರು ರಿಸೆಪ್ಶನಿಸ್ಟ್, ಟೈಪಿಂಗ್, ಸೆಕ್ರೆಟರಿ, ಇನ್ನೂ ಗ್ಲಾಮರ್ ಇದ್ದವರು ಏರ್ ಹೋಸ್ಟೆಸ್ಗಳಾಗಿ, ಟೂರಿಸಂ, ಹಾಸ್ಪಿಟಾಲಿಟಿ, ಇದೀಗ ಮಾಧ್ಯಮ ಕ್ಷೇತ್ರಗಳಲ್ಲಿರುತ್ತಾರೆ. ಇನ್ನೂ ಸ್ವಲ್ಪ ಅಕಡೆಮಿಕ್ ಆಗಿರುವವರು ಟೀಚಿಂಗ್, ಬ್ಯಾಂಕಿಂಗ್, ಮಾರ್ಕೆಟಿಂಗ್, ಹೆಚ್ಆರ್ಡಿ ಹೀಗೆ ಸ್ವಲ್ಪ ಭಿನ್ನ ಕ್ಷೇತ್ರಗಳಲ್ಲಿರುತ್ತಾರೆ. ಇವುಗಳಲ್ಲಿ ಹೆಚ್ಚಿನವೂ ಖಾಸಗಿ ಸ್ವಾಮ್ಯದ್ದೇ ಆಗಿದ್ದು ಸಮಯ ಪರಿಪಾಲನೆ, ಟಾರ್ಗೆಟ್ಗಳು ಪ್ರಮುಖವಾಗಿರುತ್ತದೆ. ‘ಕ್ಯಾಪಿಟಲಿಸಂ’ ಎಂದೇನೇ ಹೇಳಲಿ ದೆಶದ ಹೆಚ್ಚಿನ ಜನತೆ ಖಾಸಗಿ ಕ್ಷೇತ್ರವನ್ನು ಅವಲಂಬಿಸಿರುವುದು ಸತ್ಯ.
ಇವಲ್ಲದೆ ಸ್ವಂತ ಉದ್ಯೋಗದ ಛಲ ಹೊಂದಿರುವವರು ಹಲವರು. ಅವರು ಸಾಮಾನ್ಯವಾಗಿ ಬ್ಯೂಟಿಪಾರ್ಲರ್, ಟೈಲರಿಂಗ್, ಫ್ಯಾಷನ್ ಡಿಸೈನಿಂಗ್, ಪ್ಲೇಹೋಂ, ನರ್ಸರಿ ಈ ರೀತಿಯ ಪೂರಕ ಬಿಸಿನೆಸ್ ಹೊಂದಿರುತ್ತಾರೆ. ಮಲ್ಲಿಗೆ, ವೀಳ್ಯದೆಲೆ ಕೃಷಿ, ಹಪ್ಪಳ ಸಂಡಿಗೆಯಂತಹ ಗೃಹೋದ್ಯಮದಲ್ಲಿ ತತ್ಪರರಾಗಿರುವವರು ಇನ್ನು ಕೆಲವರು. ಒಟ್ಟಿನಲ್ಲಿ ದುಡಿಮೆ ಈಗ ವ್ಯಕ್ತಿತ್ವ ವಿಕಸನದಷ್ಟೇ ಆರ್ಥಿಕ ಅಗತ್ಯಗಳಿಗೂ ಅನಿವಾರ್ಯವಾಗಿದೆ. ಒಂದು ಕಾಲದಲ್ಲಿ ಮದುವೆಯಾದ ಮೇಲೆ ಕೆಲಸ ಬಿಡಬೇಕು ಎಂದು ಶರತ್ತು ವಿಧಿಸುತ್ತಿದ್ದರೆ, ಈಗ ಉದ್ಯೋಗವಿಲ್ಲದ ಹುಡುಗಿಗೆ ಮದುವೆಯೇ ಆಗದಿದ್ದರೂ ಆಶ್ಚರ್ಯವಿಲ್ಲ.
ಸಮಯದ ಅಭಾವ, ಒತ್ತಡ ಎಂದೆಲ್ಲ ಒದ್ದಾಡುತ್ತಿದ್ದರೂ ‘ವೃತ್ತಿ’ ಹೆಣ್ಣಿಗೆ ಆತ್ಮವಿಶ್ವಾಸವನ್ನೂ. ಸಮಯಕ್ಕೊಂದು ಚೌಕಟ್ಟನ್ನು, ದಿನಚರಿಗೊಂದು ಉದ್ದೇಶವನ್ನೂ ಕೊಟ್ಟು ಆಕೆಯನ್ನು ಚುರುಕಿನ, ವ್ಯವಹಾರ ಕೌಶಲವುಳ್ಳ ವ್ಯಕ್ತಿಯನ್ನಾಗಿಸುತ್ತದೆ. ತಮ್ಮ ಹಕ್ಕುಗಳಿಗೋಸ್ಕರ ದನಿಯೆತ್ತಲಾದರೂ ಆಕೆಗೆ ಆರ್ಥಿಕ ಬಲ ಬೇಕು. ಔದ್ಯೋಗಿಕ ವಲಯದ ಹೆಣ್ಣು ಮಕ್ಕಳು ಗೃಹಕೃತ್ಯಗಳಲ್ಲಿ ಹಿಂದೆ ಬೀಳುವುದು, ಮಕ್ಕಳಿಗೆ ಸಮಯ ಕೊಡಲು ಸಮಯ ಕೊಡಲು ಸಾಧ್ಯವಾಗದಿರುವುದು ಹೌದು. ಅದೇ ಸಮಯ ಸರಿಯಾಗಿ ನಿಭಾಯಿಸಿದಲ್ಲಿ ಆಕೆಯ ದುಡಿಮೆ ಸದೃಢವಾದ, ಗೌರವಯುತ ಕುಟುಂಬ ಜೀವನಕ್ಕೆ ಸಾಥಿಯಾಗುತ್ತದೆ. ಮಕ್ಕಳು ಕೂಡ ಅಮ್ಮನನ್ನೇ ಅತಿಯಾಗಿ ಅವಲಂಬಿಸದೆ ಸ್ವತಂತ್ರ ವ್ಯಕ್ತಿತ್ವವುಳ್ಳವರಾಗಿ ಬೆಳೆಯುತ್ತಾರೆ.
ಇದಿಷ್ಟು ಧನಾತ್ಮಕ ಅಂಶಗಳಾದರೆ ನೆಗೆಟಿವ್ ವಿಷಯಗಳೂ ವಾಸ್ತವವೇ. ಸರಿಯಾದ ಸಹಾಯ ಮನೆಯಲ್ಲಿ ಇಲ್ಲದಿದ್ದರೆ ಅವರು ಎರಡೂ ಕಡೆ ದುಡಿದು ಮೂಳೆ ಚಕ್ಕಳವಾಗುತ್ತಾರೆ. ಈಗಿನ ಕಾಲದಲ್ಲಿಯೂ ತನ್ನ ಅಷ್ಟೂ ಸಂಪಾದನೆಯನ್ನು ಗಂಡನ ಕೈಗಿತ್ತು ಕೃತಾರ್ಥರಾಗುವ ಸತೀ ಮಣಿಯರಿದ್ದಾರೆಂದರೆ ನೀವು ನಂಬಬೇಕು. ಇನ್ನು ದುಡಿಯುವ ಮಹಿಳೆ ತನ್ನ ಮಾತುಕತೆ, ವರ್ತನೆಗಳ ಬಗ್ಗೆ ಎಚ್ಚರಿಕೆಯಿಂದ ಇಲ್ಲದಿದ್ದರೆ ಅನಗತ್ಯ ಗಾಸಿಪ್ಗೆ ಆಹಾರವಾಗುವ ಸಾಧ್ಯತೆ. ಅದೇ ರೀತಿ ‘ ಸ್ಟ್ರಿಕ್ಟ್’ ಆಗಿದ್ದರೆ ಘಟವಾಣಿ ಎಂದೂ ಮೃದುವಾಗಿದ್ದರೆ ‘ವೀಕ್’ ಎಂದೂ ನಾಮಧೇಯಗಳು ಬೇರೆ.
ತಾಯ್ತನದ ಜವಾಬ್ದಾರಿಗಳು, ಹಬ್ಬಹರಿದಿನಗಳ ಒತ್ತಡ, ನೆಂಟರೊಡನೆ ಸಂಬಂಧ ಹೀಗೆ ಅನೇಕ ಬಾಧ್ಯತೆಗಳು ಅವರಿಗೆ. ಹೀಗಾಗಿಯೇ ಎಸ್ಸೆಸ್ಸೆಲ್ಸಿ, ಡಿಗ್ರಿಗಳಲ್ಲಿ ರ್ಯಾಂಕ್ ಬಂದರೂ ಅತ್ಯುನ್ನತ ಹುದ್ದೆಗಳಲ್ಲಿ ವನಿತೆಯರಿರುವುದು ಕಡಿಮೆ. ರಾತ್ರಿ ಪಾಳಿಯ ಕೆಲಸ, ದೂರದೂರಿಗೆ ಪ್ರಯಾಣ ಇವುಗಳಿಲ್ಲದ ‘ಸೇಫ್’ ಕೆಲಸಗಳಿಗೆ ಆದ್ಯತೆ ಕೊಡಬೇಕಾಗುತ್ತದೆ.
ಇವೆಲ್ಲವನ್ನು ಮೀರಿಯೂ ಮಹಿಳೆಯರು ತಮ್ಮೆಲ್ಲ ಶಕ್ತಿ ಸಾಮರ್ಥ್ಯ ಬಳಸಿ ಪ್ರಗತಿ ಪಥದಲ್ಲಿ ಮುಂದುವರಿಯುತ್ತಿದ್ದಾರೆ. ಎಳೆಯ ಹುಡುಗಿಯರ ಕಣ್ಣ ಮಿಂಚು, ಮಧ್ಯ ವಯಸ್ಸಿನವರ ಆತ್ಮವಿಶ್ವಾಸ, ರಿಟೈರ್ಡ್ ಆಗುವವರ ನಡಿಗೆಯಲ್ಲಿನ ಸಂತೃಪ್ತಿ. ಹೀಗೆ ಲಲನೆಯರ ಲವಲವಿಕೆ ಇಮ್ಮಡಿಸಲಿ ಎಂದು ಹಾರೈಕೆ.
– ಜಯಶ್ರೀ.ಬಿ.ಕದ್ರಿ
ಜಾಗತೀಕರಣದಿಂದಾದ ಅನಾನುಕೂಲಗಳನ್ನು ಪಕ್ಕಕ್ಕಿಟ್ಟು ಅನುಕೂಲಗಳನ್ನು ಗಮನಿಸಿ ತೊಡಗಿದರೆ, ಅವಕಾಶಗಳ ದೊಡ್ಡ ಬಾಗಿಲೇ ತೆರೆದು ಸ್ವಾಗತಿಸುತ್ತದೆ. ಜಾಣತನದ ಆಯ್ಕೆ (Intelligent choice) ಎಲ್ಲರನ್ನೂ ಸ್ವಾವಲಂಬಿಗಳನ್ನಾಗಿಸುತ್ತದೆ.
ಉತ್ತಮವಾದ ಬರಹ 🙂
Thank you Vinay