ಅಂಡಮಾನ್ ನ ಕೋರಲ್ ಐಲ್ಯಾಂಡ್
.
.
ಅಂಡಮಾನ್ ದ್ವೀಪಸಮೂಹಗಳಲ್ಲಿ ಕೋರಲ್ ಐಲ್ಯಾಂಡ್ ವಿಶಿಷ್ಟ. ನಾವು ಹತ್ತಿದ ನೌಕೆ ಸಮುದ್ರದಲ್ಲಿ ಕರೆದೊಯ್ದಿತ್ತು. ತುಸು ದೂರವೇ ನಿಂತ ನೌಕೆಯಿಂದ ಇಳಿಸಿ ಪುಟ್ಟ ದೋಣಿಗೆ ಹತ್ತಿಸಿ ಬೀಚ್ ತಲಪಿಸುತ್ತಿದ್ದರು. ಸುತ್ತ ಆಳ ಸಮುದ್ರ. ನೀರು ಸೀಳುತ್ತ ಬೋಟ್ ಸಾಗುತ್ತಿತ್ತು. ” ಅಕಸ್ಮಾತ್ ಇಲ್ಲಿ ಏನಾದರೂ ಆದರೆ ರಕ್ಷಣೆಗೆ ಏನಿಲ್ಲ. ಲೈಫ್ ಜಾಕೆಟ್ ಇಲ್ಲ. ಮುಳುಗಿದವರನ್ನು ಎತ್ತಲು ನುರಿತ ಈಜುಗಾರರೇ ಇಲ್ಲಿಲ್ಲ. ಇದ್ಯಾಕೋ ಸರಿ ಕಾಣುವುದಿಲ್ಲ.” ನಮ್ಮಲ್ಲೊಬ್ಬರ ಅಭಿಪ್ರಾಯ ಅಕ್ಷರಶ ಸತ್ಯ. ಬೋಟ್ ಮುಳುಗಿದ್ದೇ ಆದರೆ ಸಾಗರ ತಳ ಸೇರಬೇಕು. ಹೆಣ ಬಿಡಿ, ಎಲುಬು ಕೂಡಾ ಸಿಗಲಾರದು.
.
.
ಬೋಟ್ ನಲ್ಲಿ ಕೂತ ಹಾಗೆ ಅಡಿಗೆ ಅಳವಡಿಸಿದ ವಿಶಿಷ್ಟ ಗಾಜಿನ ಮೂಲಕ ಸಾಗರದಡಿಯಲ್ಲಿನ ಹವಳದ ದಿಬ್ಬಗಳು ಕಾಣುತ್ತಿದ್ದವು. ಅದೇ ಅಲ್ಲಿಯ ವಿಶೇಷ. ಯಥಾಪ್ರಕಾರ ಮರದ ಆಸನಗಳು ಸಮುದ್ರ ಕಿನಾರೆಯಲ್ಲಿತ್ತು. ಕೋರಲ್ ದ್ವೀಪದಲ್ಲಿ ಅನೇಕರು ವಿಶೇಷವಾದ ಸಾಧನವನ್ನು ಮುಖಕ್ಕೆ ಕಟ್ಟಿಕೊಂಡು ನೀರಿನಾಳದಲ್ಲಿನ ಹವಳದ ದಿಬ್ಬಗಳನ್ನು ನೋಡುವ ಸಲುವಾಗಿ ಸಾಗರದಾಳಕ್ಕೆ ಇಳಿದಿದ್ದರು. ಆ ಸಾಧನಗಳ ಸಂಖ್ಯೆ ಕಡಿಮೆ ಇದ್ದ ಕಾರಣ ಬೇಗನೆ ಹೊರಡಲಾಗಲಿಲ್ಲ. ಕೋರಲ್ ದ್ವೀಪದ ಹಿಂಭಾಗದಲ್ಲಿ ದಟ್ಟಕಾಡು. ಅದೂ ಮೈಲಿ ಮೈಲಿ ಉದ್ದಕ್ಕೆ. ಬದಿಗೆ ಸಾಲು ಸಾಲು ತೆಂಗಿನ ಮರಗಳು. ಅದರಿಂದಾಚೆಗೆ ಅಡಿಕೆ ಮರಗಳು ಗೊನೆ ಹೊತ್ತು ಗಾಳಿಗೆ ತೊನೆಯುತ್ತಾ ಇತ್ತು. ಅಲ್ಲಿ ಯಾಕೋ ಹೆಚ್ಚು ಹೊತ್ತು ಕಳೆಯಲು ಮನಸ್ಸಾಗದೆ ಹೊರಟು ನೌಕೆಗೆ ಬಂದೆವು. ಅದರಲ್ಲಿ ಕೂತು ಆ ಸುಂದರ ದ್ವೀಪದ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದೆವು.
;
ನೌಕೆಯ ಕ್ಯಾಪ್ಟನ್ ನಮ್ಮ ಜೊತೆ ಮಾತಾಡುತ್ತ ವಿವರಿಸಿದರು. ಅವರೇ ಹೇಳೀದ ಹಾಗೆ ಆ ಸಾಲು ಸಾಲು ಅರಣ್ಯ “ಖೇತಾನ್” ಗ್ರೂಪ್ ನವರದು. ಮೂವತ್ತು ವರ್ಷದ ಲೀಸ್ ಗೆ ಪಡಕೊಂಡಿದ್ದಾರೆ. ಕ್ರಮವಾಗಿ ಬೆಳೆ ಕೊಯ್ದು ಕೋಲ್ಕತ್ತಾ ಕ್ಕೆ ಒಯ್ಯುತ್ತಾರೆ. ನಿಬಿಡ ಕಾಡಿನಲ್ಲಿ ಧಾರಾಳವಾಗಿ ವೆನಿಲ್ಲಾ ಇದೆ.ಅಡಿಕೆ ಬೆಳೆ ಗುಟ್ಕಾ ತಯಾರಿಗೆ ಕೋಲ್ಕತ್ತಾ ಕ್ಕೆ ತಲಪುತ್ತದೆ. ಕೋರಲ್ ಬೀಚು ಸೇರಿದ ಹಾಗೆ ವೈಪರ್, ಹಾರ್ಬರ್ ಕ್ರೂಸ್ ತನಕ ಖೇತಾನ್ ಒಡೆತನದಲ್ಲಿತ್ತು. ಅಲ್ಲಿನ ನಿವಾಸಿಯೊಬ್ಬರು ಕೇಳಿಸಿಕೊಳ್ಳುತ್ತಿದ್ದವರು ಹೆಮ್ಮೆಯಿಂದ ಹೇಳಿದರು ” ಕೋಲ್ಕತ್ತಾ ಸಾಬ್ ಕೆಲಸಗಾರರಿಗೆ ದಿನಕ್ಕೆ ಇನ್ನೂರು ರೂಪಾಯಿ ಸಂಬಳ ಕೊಡುತ್ತಾರೆ”
;
ಜೀವ ಕೈಲಿ ಹಿಡಿದೇ ಆಳ ಸಮುದ್ರ ಯಾವುದೇ ಜೀವರಕ್ಷಕ ವಿಲ್ಲದೆ ದಾಟಿ ನೆಲ ಮೆಟ್ಟಿದಾಗ ಮೊದಲು ಕೈ ಮುಗಿದಿದ್ದು ಮದವೂರ ಗಣಪತಿಗೆ.
;
– ಕೃಷ್ಣವೇಣಿ ಕಿದೂರು