ಚೆಂಡೆಯ ತಯಾರಿ…ಚೆಂಡೆವಾದನ
ಮೈಸೂರಿನ ಕಲಾಮಂದಿರದಲ್ಲಿ ‘ಇಂಡಿಯನ್ ಪನೋರಮಾ’ ಕಾರ್ಯೆಕ್ರಮದಲ್ಲಿ ವಿವಿಧ ಭಾರತೀಯ ಭಾಷೆಗಳ ಸಿನೆಮಾ ಪ್ರದರ್ಶನವಿತ್ತು. ಮಲಯಾಳಂ ಭಾಷೆಯ ‘ಸ್ವಪಾನಂ’ ಎಂಬ ಸಿನೆಮಾವನ್ನು ವೀಕ್ಷಿಸಿದೆವು. ಮಲಯಾಳಂ ಭಾಷೆಯ ಕೆಲವೇ ಪದಗಳು ನನಗೆ ಗೊತ್ತಿರುವುದಾದರೂ ಸಬ್-ಟೈಟಲ್ ಇದ್ದಿದುದರಿಂದ ಕಥೆ ಅರ್ಥವಾಯಿತು.
ಚೆಂಡೆವಾದನವನ್ನೇ ಉಸಿರಾಗಿಸಿಕೊಂಡಿದ್ದ ಕಲಾವಿದನೊಬ್ಬನ ಬದುಕಿನ ಸುತ್ತ ಹೆಣೆಯಲಾದ ಈ ಸಿನೆಮಾದ ಕತೆ ಚೆನ್ನಾಗಿದೆ. ಸಿನೆಮಾದುದ್ದಕ್ಕೂ ಚೆಂಡೆಯ ನಿನಾದ ಕಿವಿಯಲ್ಲಿ ರಿಂಗುಣಿಸುತ್ತದೆ. ಸಿನೆಮಾದಲ್ಲಿ ‘ಚೆಂಡೆಯ ತಯಾರಿ’ಯನ್ನೂ ತೋರಿಸಿದ್ದರು. ಸಿಲಿಂಡರ್ ನ ಆಕಾರದ ಚೆಂಡೆಯನ್ನು ತಯಾರಿಸಲು, ತಾಳೆಯ ವರ್ಗಕ್ಕೆ ಸೇರಿದ ‘ಈರನ್ ಪನ (Eeranpana) ‘ ಮರದ ಕಾಂಡವನ್ನು ಬಳಸುತ್ತಾರೆ. ಹಸುವಿನ ಚರ್ಮ ಮತ್ತು ‘ಪನಂಚಿ ಮರ Pananchi maram’ ದ ಬೀಜದ ಅಂಟನ್ನು ಬಳಸಿ, ಹಗ್ಗಗಳನ್ನು ಜೋಡಿಸಿ ಚೆಂಡೆಯನ್ನು ಸಿದ್ಧಗೊಳಿಸುವುದೇ ಒಂದು ಕಲೆ. ಚೆಂಡೆವಾದನವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡುತ್ತಾರೆ.
ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಕಲಾಪ್ರಕಾರಗಳಲ್ಲಿ ಚೆಂಡೆಗೆ ಅಗ್ರಸ್ಥಾನ. ಅಲ್ಲಿನ ಶುಭ ಸಮಾರಂಭಗಳಲ್ಲಿ, ದೇವಾಲಯದ ಉತ್ಸವಗಳಲ್ಲಿ ಮತ್ತು ಯಕ್ಷಗಾನಗಳಲ್ಲಿ ಚೆಂಡೆವಾದನ ಇರಲೇ ಬೇಕು.
(ಚಿತ್ರ, ಮಾಹಿತಿ: ಅಂತರ್ಜಾಲ)
– ಹೇಮಮಾಲಾ.ಬಿ