ಆಶ್ಲೇಷ

Share Button
Adarsha Vasishta

ಆದರ್ಶ .ಬಿ. ವಸಿಷ್ಠ

 

ಹಟ್ಟಿಯ ಹೊರಗೆ ಜೋರು ಮಳೆ. ಕೆಂಪಿ ಹಟ್ಟಿಯ ಹೊಸಲಿನ ಬಳಿ ಕುಳಿತು ಗಂಡ ಮಾದನ ಬರುವಿಕೆಗಾಗಿ ಕಾಯುತ್ತಾ ಅಕ್ಕಿ ಆರಿಸುತ್ತಿದ್ದಳು. ಒಳಗೆ ವರ್ಷ ತುಂಬಿದ ಕಂದ ಮಲಗಿತ್ತು. ‘ಯಾಕ್ ಇನ್ನೂ ಬಂದಿಲ್ಲ ಇವ್ನು … ಏಟ್ ಹೊತ್ತಾಯ್ತು ಓಗಿ … ಸಾಹೇಬ್ರು ಏನ್ ಏಳಿದ್ರೋ ಏನೋ !!! ’ ಎಂದು ಮನದೊಳಗೇ ಯೋಚಿಸುತ್ತಾ, ಹೆದರಿಕೆ ತುಂಬಿದ ತನ್ನ ಬಟ್ಟಲು ಕಂಗಳಿಂದ ಮನೆಯ ಮುಂದಿನ ದಾರಿಯನ್ನೇ ನೋಡತೊಡಗಿದಳು. ಸೂರಿಂದ ನೀರು ಜೋಳ್ಳೆಂದು ಬೀಳುತ್ತಿತ್ತು. ಕಗ್ಗಾಡಿನಿಂದ ಸೀಳಿ ಬರುವ ಕಾಲುದಾರಿ ಮಳೆಯ ಕಾರಣ ಅಸ್ಪಷ್ಟವಾಗಿ ಕಾಣುತಿತ್ತು. ಎಲ್ಲೆಲ್ಲೂ ಆಶ್ಲೇಷ ಮಳೆಯ ಜೋರು ಆರ್ಭಟವೇ. ಹಾಡಿಯ ಹತ್ತಿರದಲ್ಲೇ ಹರಿಯುವ ಕೆಂಪು ಹೊಳೆ, ಮೈತುಂಬಿ ಹರಿಯುತ್ತಾ, ತನ್ನನ್ನು ಏಕೆ ‘ಕೆಂಪುಹೊಳೆ’ ಎಂದು ಕರೆಯುತ್ತಾರೆ ಎನ್ನುವುದಕ್ಕೆ ಉತ್ತರ ನೀಡುತ್ತಿತ್ತು. ಸುತ್ತಲೂ ಹಬ್ಬಿರುವ ಹಸಿರ ಮಲೆ. ಭೂತಾಯಿ ಮಲೆನಾಡಿನ ಪ್ರಚಂಡ ಮಳೆಯಲ್ಲಿ ಮಿಂದು, ಹಚ್ಚ ಹಸಿರ ಸೀರೆಯನ್ನುಟ್ಟು ನಲಿದಾಡುತ್ತಿರುವ ದೃಶ್ಯ ಮನೋಹರವಗಿತ್ತು. ಹೊಸಿಲಿನ ಬಳಿ ಕುಳಿತು, ಮಳೆಯ ನೋಡುತ್ತಾ, ಕೆಂಪಿ, ನಿಟ್ಟುಸಿರು ಬಿಡುತ್ತಾ, ‘ಇನ್ನೆಷ್ಟು ದಿನವೋ .. ‘  ಎನ್ನುವಾಗ ಹಿಂದಿನದೆಲ್ಲ ನೆನಪಾಗತೊಡಗಿತು.

ಕೆಂಪಿ ಮತ್ತು ಅವಳ ಗಂಡ ಮಾದ ಇದ್ದದ್ದು ಬಿಸಲೆ ಅರಣ್ಯದ ತೆಪ್ಪಲಲ್ಲಿ. ಇವರ ಮನೆಯ ಜತೆಗೆ ಇನ್ನಷ್ಟು ಮನೆಗಳೂ ಇದ್ದವು. ಕೆಂಪಿ ಹುಟ್ಟಿದಾಗಿನಿಂದಲೂ ಅವಳಿಗೆ ಗೊತ್ತಿರುವ ಪ್ರಪಂಚ ಎಂದರೆ ಅವಳ ಹಾಡಿ, ಅದರ ಸುತ್ತಮುತ್ತಲಿನ ದೊಡ್ಡ ಕಾನನ. ಸಣ್ಣ ಪುಟ್ಟ ಝರಿಗಳು , ಕೆಂಪುಹೊಳೆ ಸುತ್ತ ಬೆಳೆಯುವ ಹಲವಾರು ತರಹದ ಕಂಗೊಳಿಸುವ ಹೂಗಳ ಮಧ್ಯದಲ್ಲೇ ಬೆಳೆದವಳು ಕೆಂಪಿ. ಇವರ ಹಾಡಿಯಲ್ಲಿ ಇದ್ದದ್ದು ಮೂರೋ, ನಾಲ್ಕೋ ಮನೆಗಳು. ಇಲ್ಲಿಯ ಜನ ಯಾವುದೇ ಒಂದು ಕೆಲಸಕ್ಕೆ ಗಂಟು ಬಿದ್ದವರಲ್ಲ. ಕಾಡಿನಲ್ಲಿ ಗೂಡುಕಟ್ಟುವ ಜೇನು ಸಂಪಾದಿಸಿ ಕೂಡುರಸ್ತೆಯ ಜೇನು ಸೊಸೈಟಿಗೆ ಮಾರುವುದರಿಂದ ಹಿಡಿದು ಹೊಳೆಯ ದಡದಲ್ಲಿ ಸೊಂಪಾಗಿ ಬೆಳೆಯುವ ಬಿದಿರಿನಿಂದ ಬುಟ್ಟಿ ಮಾಡಿ ಮಾರುವ ತನಕ ಎಲ್ಲಾ ಕಾಯಕವನ್ನೂ ಮಾಡಿಕೊಂಡು ಬಂದವರು. ಕೆಂಪಿಯನ್ನು ಹೊರಗೆ ಮದುವೆ ಮಾಡಿಕೊಟ್ಟರೆ, ಮಗಳು ಕಣ್ಣ ಮುಂದೆ ಇರುವುದಿಲ್ಲವಲ್ಲ ಎಂದು ಹೆದರಿದ ಅವಳ ತಾಯ್ತಂದೆಯರು ಅದೇ ಹಾಡಿಯ ಮಾದನಿಗೆ ಕೊಟ್ಟು ಮದುವೆ ಮಾಡಿದರು. ಮಾದನೂ ಹಾಡಿಯ ಇತರ ಗಂಡಸರಂತೆ ಕುಲಕಸುಬಿನಲ್ಲಿ ಲೀನವಾಗಿದ್ದವ. ಪ್ರಕೃತಿಯ ಮಕ್ಕಳಾದ ಇವರ ಜೀವನ ಸುತ್ತಲ ಪ್ರಶಾಂತ ವಾತಾವರಣದಂತೆ ಶಾಂತಿಯಿಂದ ಸಾಗುತಿತ್ತು .

tribal-huts

ಈಗ್ಗೆ ಎರಡು ತಿಂಗಳ ಹಿಂದೆ ನಡೆದ ಘಟನೆ ಇದು. ಒಂದು ದಿನ ಮಾದ ಮನೆಯಲ್ಲಿರಲಿಲ್ಲ. ಕೆಂಪಿ ಪಕ್ಕದ ಹಟ್ಟಿಯ  ಹೆಂಗಸರುಗಳೊಡನೆ ಹರಟುತ್ತಾ ಕುಳಿತಿದ್ದಳು. ದೂರದಲೆಲ್ಲೋ ಮೊಟರಿನ ಶಬ್ದವಾಯಿತು. ಹಾಡಿಯ ಅನತಿ ದೂರದಲ್ಲೇ ಅರಣ್ಯ ಇಲಾಖೆಯ ಜೀಪೊಂದು ಬಂದು ನಿಂತಿತು. ತಮ್ಮ ಹಾಡಿಗೆ ಕರೆಯದೇ ಬಂದ ಅತಿಥಿಗಳನ್ನು ಬೆದರುಗಣ್ಣುಗಳಿಂದ ನೋಡುತ್ತಾ ನಿಂತರು ಕೆಂಪಿ ಮತ್ತು ಅವಳ ಸಂಗಡಿಗರು. ಜೀಪಿನಿಂದ ಇಳಿದು ತಮ್ಮ ಬಳಿ ಬರುತ್ತಿದ್ದ ಖಾಕಿ ವೇಷಧಾರಿಗಳನ್ನು ಕಂಡು ಕೆಂಪಿಗೆ ಆಶ್ಚರ್ಯ ಮತ್ತು ಹೆದರಿಕೆ ಎರಡೂ ಒಮ್ಮೆಲೇ ಆಗತೊಡಗಿದವು. ಹಾಡಿಯ ಬಳಿ ಬಂದವನೇ ರೇಂಜರ್ ಕುಮಾರ, ” ಯಾರದು … ಬಾಮ್ಮಾ ಇಲ್ಲಿ ” ಎಂದು ಅಧಿಕಾರಯುಕ್ತ ದನಿಯಲ್ಲಿ ಕೂಗು ಹಾಕಿದ. ಹಾಡಿಯ ಹೆಂಗಸರುಗಳೆಲ್ಲ ಅವನ ಬಳಿ ಬಾಗಿ ನಿಂತರು. ಕಾಡು ನನ್ನದೇ ಎನ್ನುವ ಧೂರ್ತತನದಿಂದ ಕುಮಾರ ,   “ ನೋಡ್ರಮ್ಮ … ನೀವು ಇನ್ನು ಇಲ್ಲಿ ಇರೋ ಹಾಗಿಲ್ಲ… ಸರ್ಕಾರ ಈ ಜಾಗಾನ ವಶಪಡಿಸಿಕೊಳ್ಳಿ ಅಂತ ನಮಗೆ ಆರ್ಡರ್ ಮಾಡಿದೆ ಇಲ್ಲಿ ದೊಡ್ಡ ಸಾಹೇಬ್ರ ಒಂದು ಪ್ರವಾಸಿ ರೆಸಾರ್ಟ್ ಕಟ್ಟಬೇಕು ಅಂತ ಪ್ಲಾನ್ ಮಾಡಿದೆ. ಆದ್ದರಿಂದ ನೀವ್ಗಳು ಈಗಲೇ ಇಲ್ಲಿಂದ ಹೊರಡಬೇಕು … ”  ಎಂದು ಕೈಲೀದ್ದ ಬಿಳಿ ಹಾಳೆಯ ಚೂರೊಂದನ್ನು ಅವರ ಮುಖಕ್ಕೆ ಹಿಡಿದ. ಕೆಂಪಿ ಮತ್ತು ಸಂಗಡಿಗರಿಗೆ ಜಂಘಾಬಲವೇ ಅಡಗಿಹೋಯಿತು. ಅವರಲ್ಲಿ ಯಾರಿಗೂ ಈತ ಏನು ಹೇಳುತಿದ್ದಾನೆ ಎನ್ನುವ ಸ್ಪಷ್ಟ ಅರಿವು ಆಗದಿದ್ದರೂ, ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸುತ್ತಿದ್ದಾರೆ ಎನ್ನುವ ಮಾತಂತೂ ಅರ್ಥವಾಗಿತ್ತು.

ಪಚಕ್… ಪಚಕ್ … ಎಂದು ರಾಡಿ ತುಳಿಯುತ್ತಾ ದಾಪುಗಾಲು ಹಾಕಿ ಬಂದ ಮಾದ, ಹಟ್ಟಿಯ ಸೂರಿಗೆ ಬಂದವನೇ, ಗೊರಗವನ್ನು ತಲೆಯಿಂದ ತೆಗೆಯುತ್ತಾ, ” ಏ ಕೆಂಪಿ… ಯಾನಾ ಯೇಚ್ನೆ ಮಾಡ್ತಾ ಅಂಗೇ ಕುಂತ್ಬುಟ್ಟೆ .. ” ಎಂದು ಗಾಢ ಚಿಂತೆಯ ಸಮುದ್ರದಲ್ಲಿ ತೇಲುತ್ತಿದ್ದ ಕೆಂಪಿಯ ಮನೋನಾವೆಯನ್ನು ಲಂಗರು ಹಾಕಿ ನಿಲ್ಲಿಸಿ ಅವಳನ್ನು ಎಚ್ಚರಿಸಿದ. ಮಾದನನ್ನು ಕಂಡ ಕೂಡಲೇ , ” ಏನಂದ್ರು ಸಾಹೇಬ್ರು .. ಇಲ್ಲೇ ಇರಬಯ್ದಂತಾ ??? … ಓದ್ ಸಲ ಓಟ್ ಕೇಳಾಕ್ ಬಂದ ಸಾಹೇಬ್ರು , ನಿಮ್ಗೆ ಇಲ್ಲೇ ಎಲ್ಲಾ ಸೌಲತ್ತು ಮಾಡ್ಕೊಡ್ತೀನಿ ಅಂತ ಏಳಿದ್ರಲ್ಲ .. ಅವ್ರೆ ನಮ್ನ ಇಲ್ಲಿಂದ ಒರಕ್ ಆಕ್ತಾರಾ ?? ಇಲ್ಲ ಇಲ್ಲ … ಆಮ್ಯಾಗೆ ನಾವು ಓಗಕಿಲ್ಲ ಅಂದ್ರೆ ಆತಪ್ಪ ..ನಮ್ ಜಾಗ ಇದು ..  ” ಎಂದು ಆಸೆ, ಭರವಸೆಯುಕ್ತ ದನಿಯಲ್ಲಿ ಹೇಳತೊಡಗಿದಳು. ಮಾದ ಮತ್ತು ಅವನ ಸಂಗಡಿಗರು ಸ್ಥಳೀಯ ರಾಜಕಾರಣಿಗಳ, ಅಧಿಕಾರಿಗಳ  ಮನೆ ಬಾಗಿಲು ಅಲೆದು ಅಲೆದು ಬಂದರೂ ಏನೂ ಪ್ರಯೋಜನವಾಗಿರಲಿಲ್ಲ. ಸರ್ಕಾರ ಅವರಿರುವ ಜಾಗವನ್ನು ಒಂದು ಪ್ರೈವೇಟ್ ಕಂಪನಿಗೆ ಕೊಟ್ಟಾಗಿತ್ತು. ಇವರೆಲ್ಲರನ್ನು ಒಕ್ಕಲೆಬ್ಬಿಸುವ ಕಾರ್ಯಕ್ಕೆ ಶಂಕುಸ್ಥಾಪನೆ ಆಗಿಹೋಗಿತ್ತು. ಇವರ ಬದುಕಿನ ಸ್ಮಶಾನದ ಮೇಲೆ “ಪ್ರವಾಸಿ ರೆಸಾರ್ಟ್ ” ತಲೆಯೆತ್ತಲಿತ್ತು. ರಾಜಕಾರಣಿಗಳ, ಫುಡಾರಿಗಳ, ಹಣವಂತರ ಮೋಜು ಮಸ್ತಿಗೆ ಲಾಯಕ್ಕಾದ ಜಾಗವನ್ನು ಕಂಪನಿಯವರು ಬಿಡುವಂತಿರಲಿಲ್ಲ. ಹೊಟ್ಟೆ ತುಂಬಿದವರಿಗೆ ಹಸಿವಿನ ಅರ್ಥ ತಿಳಿಯುವುದೂ ಇಲ್ಲ… ಮಳೆಯನ್ನೇ ನೋಡುತ್ತಾ ನಿಂತ ಮಾದ, ” ಇಲ್ಲ … ನಾಳೀಕ್ ಗುಡ್ಲು ಬುಡ್ಬೇಕು … “ ಎನ್ನುತ್ತಾ ನಿರುಮ್ಮಳನಾದ. ಆಶ್ಲೇಷ ಮಳೆ ಬಿಮ್ಮನೆ ಸುರಿಯುತ್ತಲೇ ಇತ್ತು. ಆಗಸ ಕರಿಮೊಡದಿಂದ ತುಂಬಿಯೇ ಇತ್ತು . ಸೂರ್ಯ ಎತ್ತಲೋ ಮರೆಯಾಗಿದ್ದ … ಹಗಲಲ್ಲೂ , ಬಡಜನರ ಬಾಳಲ್ಲೂ.

 

– ಆದರ್ಶ .ಬಿ. ವಸಿಷ್ಠ 

1 Response

  1. Shruthi Sharma says:

    Nice.. 🙂

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: