ಮನೆಯೊಡತಿಯೂ ಮಳೆಗಾಲವೂ…………

Share Button
Sangeetha

ಸಂಗೀತ ರವಿರಾಜ್

ಮಳೆ ಎಲ್ಲವನ್ನು ಆರ್ದ್ರಗೊಳಿಸುತ್ತದೆ. ನೆಲವನ್ನು , ನೆಲೆಯನ್ನು ಜೊತೆಗೆ ಮನಸ್ಸನ್ನು. ಮಳೆಗೆ ಮನಸೋಲದವರು ವಿರಳಾತೀತರಲ್ಲಿ ವಿರಳ. ಅಂತೆಯೇ ಮುಂಗಾರಿನ ಮುನ್ಸೂಚನೆಯೊಂದಿಗೆ ಮಳೆಗಾಲಕ್ಕೆ ಬೇಕಾದ ಪೂರ್ವಾಪರಗಳನ್ನು ಜೋಡಿಸದವರು ವಿರಳ! ಮನೆಯೊಡತಿಯ ಮಳೆಗಾಲವೆ ಹೀಗೆ ಪ್ರಾರಂಭಗೊಳ್ಳುತ್ತದೆ. ಮಳೆಗಾಲಕ್ಕೆ ಬೇಕಾದ ಸೌದೆಯೊಂದಿಗೆ ಶುರುವಾದ ಜೋಡಣೆ ದನಕರುಗಳಿಗೆ ಬೈ ಹುಲ್ಲು, ಮನೆಮಕ್ಕಳಿಗೆ ಹಪ್ಪಳ ಸಂಡಿಗೆ, ಉಪ್ಪಿನಕಾಯಿ, ಹಲಸಿನ ಬೀಜ ಇತ್ಯಾದಿಗಳನ್ನು ಜೋಡಿಸುವುದರಲ್ಲೆ ಮಗ್ನಳಾಗುತ್ತಾಳೆ ಮನೆಯೊಡತಿ. ಗೃಹಿಣಿಯ ಮನಸ್ಸಿನ ಪರಿಯೆ ಹೀಗೆ! ಮನೆಮಂದಿಗೆಲ್ಲಾ ಅರ್ಥವಾಗದ ಸೂಕ್ಷ್ಮ ವಿಚಾರಗಳು ತಿಳಿಯುವುದೇ ಈಕೆಗೆ. ಬಿರುಸಿನ ಮಳೆಗೆ ಬಟ್ಟೆ ಒಣಹಾಕಲು ಮನೆಯ ಸುತ್ತಮುತ್ತ ಎಲ್ಲೂ ನೀರು ಬೀಳದ ಸ್ಥಳದಲ್ಲಿ ಹಗ್ಗವನ್ನೋ, ತಂತಿಯನ್ನೋ ಕಟ್ಟುತ್ತಾಳೆ. ಚೂರುಪಾರು ಹಳೆಯದಾದ ಕೊಡೆಯನ್ನು ಸರಿಪಡಿಸುತ್ತಾಳೆ, ನೀರು ಸೋರುವ ಸ್ಥಳದಲ್ಲಿ ಹಂಚನ್ನು ಸರಿಪಡಿಸಲು ತಿಳಿಸುತ್ತಾಳೆ. ಇತ್ಯಾದಿ ಸೂಕ್ಷ್ಮ ವಿಚಾರಗಳು ಮನೆಯೊಡತಿಗಲ್ಲದೆ ಇನ್ಯಾರಿಗೆ ನೆನಪಾಗುತ್ತದೆ ಹೇಳಿ?

ಹಳ್ಳಿ ಮನೆಯ ಸೌದೆ‌ಒಲೆಯ ಒಡತಿಯ ತಯಾರಿಗಳು ಇನ್ನೂ ವಿಶೇಷವಾಗಿರುತ್ತದೆ.ಒಲೆಯ ಮೇಲಿನ ಬೆಸುಗೆ ಎಂಬ ಸಂಗ್ರಾಹಕದಲ್ಲಿ ತರೇಹವಾರಿ ತಿನಿಸುಗಳು ಸಂಗ್ರಹವಾಗಿರುತ್ತದೆ.ಮುಂಗಾರು ಮಳೆ ಸನ್ನಿಹಿತವಾಗುವ ಮೊದಲೇ ಹಲಸಿನ ಕಾಯಿಯ ಹಪ್ಪಳ ತಯಾರಿಸಿ ಒಣಗಿಸಿ ಮಳೆಗಾಲಕ್ಕೆ ಸನ್ನದ್ಧಳಾಗುತ್ತಾಳೆ. ಕೈಗೂಸುಗಳಿರುವ ಮನೆಗಳಲ್ಲಿ ಅವರಿಗೆ ಬೇಕಾದ ಧಾನ್ಯ ಆಹಾರಗಳನ್ನು ಮೊದಲೇ ಒಣಗಿಸಿ ತಯಾರಿಸಿಟ್ಟಿರುತ್ತಾಳೆ. ಮಜ್ಜಿಗೆ ಮೆಣಸು, ಸಂಡಿಗೆ ಮೊದಲಾದ ಎಣ್ಣೆಯಲ್ಲಿ ಕರಿಯುವ ತಿನಿಸುಗಳನ್ನು ತಯಾರಿಸಿ ಮಳೆಗಾಲದೂಟದ ಬಾಯಿಚಪಲಕ್ಕೆ ಅಣಿಗೊಳಿಸುತ್ತಾಳೆ. ಹಲಸಿನ ಬೀಜ ಸಂಗ್ರಹಿಸಿ ಅದರ ತಿನಿಸನ್ನು ಮಕ್ಕಳಿಗೆ ಕೊಟ್ಟು ಸಹಪಾಠಿಗಳಿಗೆ ಹಂಚಿ ತಿನ್ನಲು ಹೇಳುತ್ತಾಳೆ. ಮಳೆಗಾಲದಲ್ಲಿ ಮಾತ್ರವೆ ದಕ್ಕುವ ಅಣಬೆ, ಕಣಲೆ, ಪತ್ರೊಡೆ, ಚಂಗುಳಿ ಸೇರಿದಂತೆ ಹಲಸಿನ ತರಹೇವಾರಿ ತಿನಿಸುಗಳನ್ನು ತಪ್ಪದೆ ತಯಾರಿಸುತ್ತಾಳೆ. ಮಳೆಗಾಲದಲ್ಲಿ ತಿಂಡಿಪೋತರಾಗುವ ಗಂಡಂದಿರಿಗಂತು ಮನೆಯೊಳಗಡೆ ಸುಗ್ಗಿಕಾಲ.ಎಂದೂ ಮಾಡದ ಈರುಳ್ಳಿ ಬಜೆ, ಗೋಳಿಬಜೆ, ಬನ್ಸ್ ಇವುಗಳ ಸುವಾಸನೆ ಮನೆಯೊಳಗೆ ತೇಲುತ್ತದೆ. ಗೇರುಬೀಜವನ್ನು ಕೆಂಡದಲ್ಲಿ ಸುಟ್ಟು ತಿರುಳನ್ನು ಮಕ್ಕಳಿಗೆ ಮೊಮ್ಮಕ್ಕಳಿಗೆ ತಿನ್ನಿಸುತ್ತಾಳೆ. ಮಳೆಗಾಲದ ಈ ಮಹಿಮೆಗಳಿಗೆ ಮನೆಯೊಡತಿ ಮಾತ್ರವೇ ಸ್ಪಂದಿಸುತ್ತಾಳೆ ನಿಜ!

Roasted cashew

ಪಡಸಾಲೆಯಲ್ಲಿ ನಿರುಮ್ಮಳಳಾಗಿ ಅಮ್ಮ , ಅಜ್ಜಿಯರು ಕಾಲು ಚಾಚಿ ಕುಳಿತರೆಂದರೆ ಅದು ಮಳೆಗಾಲ. ಬಿಗಡಾಯಿಸುವ ಮಳೆಗೆ ಏನೂ ಕೆಲಸ ಸಲ್ಲದು ಎಂಬ ಗುನುಗುವಿಕೆಯೊಂದಿಗೆ ಅದೊಂದು ನವಿರು ಭಾವನೆ ಹೊಮ್ಮಿಸುವ ಸಮಯ. ಮಳೆ ಮತ್ತು ಮನಸ್ಸು ಅಕ್ಕ ಪಕ್ಕ ಕುಳಿತು ಮಾತನಾಡುವ, ತೊಯ್ದಾಡುವ ಆಪ್ತ ಕ್ಷಣ ಗೃಹಿಣಿಗೆ ದಕ್ಕುವುದೆ ಈ ಸುಂದರ ಮಳೆಗಾಲ. ಎಂದೋ ಹೊಲಿಯಬೇಕಿದ್ದ ಮಕ್ಕಳ ಬಟ್ಟೆಗಳನ್ನು ಹೊಲಿಯುತ್ತಾ, ಆಲ್ಬಮ್ ನೋಡುತ್ತಾ, ಬಾಲ್ಯದ ಮಧುರ ನೆನಪುಗಳನ್ನು ಮನೆಮಂದಿಯೊಂದಿಗೆ ಹಂಚಿಕೊಳ್ಳುತ್ತಾ ಅಮ್ಮ ಹಗುರಾಗುತ್ತಾಳೆ. ಹೊಸದಾಗಿ ಮದುವೆಯಾದ ಗೃಹಿಣಿಯರು ಆಟಿ ತಿಂಗಳ ಬರುವಿಕೆಗೆ ಕಾಯುತ್ತಾ ತವರಿನ ಹಾದಿ ಹಿಡಿಯುತ್ತಾರೆ. ಅಮ್ಮಂದಿರು ಅಷ್ಟೆ ಮಳೆಗಾಲದಲ್ಲಿ ಒಂದೆರಡು ದಿನಗಳ ಮಟ್ಟಿಗೆ ತವರಿಗೆ ಅಥವ ಸಂಬಧಿಕರ ಮನೆಗಳಿಗೆ ಹೋಗುವ ಬೋನಸ್ ಟ್ರಿಪ್ ಅನ್ನು ಖಂಡಿತಾ ತಪ್ಪಿಸಿಕೊಳ್ಳುವುದಿಲ್ಲ. ಏಕೆಂದರೆ ಆತ್ಮೀಯರನ್ನು ಭೇಟಿ ಮಾಡಿ ಬೆಚ್ಚಗಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಪುಳಕಗೊಳ್ಳುವ ಸಂತಸದ ಸಮಯವನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. ಸಂಬಂಧಿಕರ ಮನೆಯಿಂದ ತಿರುಗಿ ಬಂದಾಗ ತಂದ ಹಣ್ಣಿನ ಬೀಜಗಳನ್ನು, ಹೂವಿನ ಗಿಡಗಳನ್ನು ನೆಟ್ಟು ಸಂಭ್ರಮಿಸುತ್ತಾಳೆ. ಗುಡುಗು ಮಿಂಚು ಸಹಿತ ಮಳೆ ಶುರುವಾದೊಡನೆ ಛಂಗನೆ ಟಿವಿ ಫೋನ್, ಫ್ರಿಡ್ಜ್ ಗಳ ಕನೆಕ್ಷನ್ ತೆಗೆದಿಡಲು ದೌಡಾಯಿಸುತ್ತಾಳೆ.ಸೋರುತ್ತಿರುವ ಸ್ಥಳಕ್ಕೆ ಪಾತ್ರೆಯನ್ನೋ, ಬಕೆಟನ್ನೋ ಓಡೋಡಿ ಇಡುತ್ತಾಳೆ. ತಂದಿರಿಸಿದ ತುಷಾರ , ತರಂಗವನ್ನೊಮ್ಮೆ ತಿರುವಿ ಹಾಕುತ್ತಾಳೆ. ಕಣ್ಣಾಲಿ ಕದಲಿಸಲು ಮನಸಾಗದ ಮಳೆಗಾಲವ ನೋಡುತ್ತಾ ನಾಳೆಯ ಇಡ್ಲಿಗೆ ಅಕ್ಕಿ ಉದ್ದು ನೆನೆಹಾಕುತ್ತಾಳೆ .ಇವೆಲ್ಲದರ ಜೊತೆಗೆ ಯಾಕೆಂದು ತಿಳಿಯದ ಎರಡು ಹನಿ ಕಣ್ಣೀರನ್ನು ಧರೆಗಿಸಲು ಮರೆಯೋಲ್ಲ ನೋಡಿ.

rainy seasons

ಮನೆಯೊಡತಿಗೆ ಮನೆಯೊಡತಿಯೆ ಸಾಟಿ. ತಂತಿ ಮೇಲೆ ಪೋಣಿಸಿದ ನೀರ ಕಣಜದ ಸಾಲುಗಳನ್ನು ಕೈಯಲ್ಲಿ ತುಂಬಿಕೊಳ್ಳುತ್ತಾ ಬಟ್ಟೆ ಒಣಗಲು ಹಾಕುವ ಆಕೆಯ ನಿತ್ಯದ ಸುಂದರ ಕಾಯಕಕ್ಕೆ ಏನೆಂದು ಹೆಸರಿಡೋಣ? ತತ್ವಜ್ಞಾನಿ ಸಾಕ್ರಟಿಸ್, ಮಳೆನೀರಿನಲ್ಲಿ ತೊಯ್ದು ತೊಪ್ಪೆಯಾದ ಮೇಲೆ “ಆಹಾ ಇದು ಆ ದೇವರು ಮಾಡಿದ ಮಜ್ಜನ ಎಂದಿದ್ದನಂತೆ” ನಮ್ಮ ಗೃಹಲಕ್ಷ್ಮಿಯರು ಸೆರಗನ್ನು ತಲೆಯ ಮೇಲೆ ಹೊದ್ದು ಅವಸರದಲ್ಲಿ ಏನಾದರು ಮಾಡಿ ಅಚಾನಕ್ಕಾಗಿ ತೊಯ್ದು ತೊಪ್ಪೆಯಾದರು ಮತ್ತದೆ ಹಸನ್ಮುಖಿಗಳಾಗಿರುತ್ತಾರೆ. ಹೀಗಿದ್ದ ಮೇಲೆ ಪ್ರತಿ ಮನೆಯ ಅಮ್ಮನು, ಅತ್ತೆಯು, ಅಜ್ಜಿಯು ಅವರವರ ಭಾವಕ್ಕೆ ತಕ್ಕಂತೆ ತತ್ವಜ್ಞಾನಿಗಳು ಅಲ್ಲವೇ? ಎದೆ ತುಂಬಿ ಬರುವ ಮಳೆಗಾಲದಲ್ಲಿ ಮಧುರ ಮನಸ್ಸಿನ ಮನೆಯೊಡತಿ ಮಳೆ ನಿಂತ ಗಗನದಡಿಯ ಶುಭ್ರತೆಯಂತೆ ಮಿಂಚುತ್ತಿರಲಿ ಎಂಬುದಾಗಿ ಆಶಿಸೋಣ.

 

– ಸಂಗೀತ ರವಿರಾಜ್

6 Responses

  1. Dinesh Naik says:

    SUPER

  2. Shruthi Sharma says:

    ವಾಹ್ ವಾಹ್! ಸೂಪರ್!! 🙂

  3. Sneha Prasanna says:

    ಉತ್ತಮ ಬರಹ…:)

  4. sangeetha raviraj says:

    ವಂದನೆಗಳು

  5. V K Valpadi says:

    ತುಂಬಾ ಹಿಡಿಸಿತು ಈ ನಿಮ್ಮ ಬರೆಹ.

  6. ಮಳೆಗಾಲ ಪೇಟೆಯಲ್ಲಿ ಬೇರೆ ಹಳ್ಳಿಯಲ್ಲಿ ಬೇರೆಯೇ ಮುದ ನೀಡುತ್ತದೆ
    ಪೇಟೆಯಲ್ಲಿ ಹಿಡೀ ಶಾಪಾ ಹಾಕುವವರಾದರೆ ಹಳ್ಳಿಗಳಲ್ಲಿ ಸಂಭ್ರಮ ಪಡುವರು
    ಚೆನ್ನಾಗಿದೆ ಮನೆಯೊಡತಿಯ ಸಂಭ್ರಮ ಧನ್ಯವಾದ
    ಹಾಗೇ ಮನೆಯೊಡೆಯನಿಗೂ ಹಳ್ಳಿಗಳಲ್ಲಿ ಕೆಲಸ ಮಿತಿಯೇ ಜಾಸ್ತಿ….
    ಅದಕ್ಕೇ ಆರೋಗ್ಯ ಆಹಾರ ವಾತಾವರಣ ಎಲ್ಲವು ಆಹ್ಲಾದಕರವಾಗಿಯೇ ಇರುತ್ತದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: