“ಹಲಸಿನ ಹಣ್ಣನು ನೆನೆದು ಮುದಗೊಳ್ಳುತಿದೆ ಮನಸು”

Share Button
Surekha Bhimaguli2

ಸುರೇಖಾ ಭಟ್ , ಭೀಮಗುಳಿ

 

ಕಮ್ಮಕ್ಕಿ ಮನೆಯಲ್ಲಿ ಹಲಸಿನ ಹಣ್ಣಿಗಿದ್ದಷ್ಟು ಪ್ರಾಶಸ್ತ್ಯ ಹಲಸಿನ ಇತರ ಪದಾರ್ಥಗಳಿಗಿರಲಿಲ್ಲ. ಹಲಸಿನ ಕಾಯಿ ಎಳೆಯದಿರುವಾಗ ಸಮಾರಂಭಗಳಲ್ಲಿ “ಗುಜ್ಜೆ ಪಲ್ಯ” ಇಷ್ಟಪಟ್ಟು ತಿನ್ನುತ್ತಿದ್ದ ನೆನಪು. ಈಗಲೂ ಇಷ್ಟವೇ… ಅದನ್ನು ಕೊಚ್ಚುವುದು ತ್ರಾಸದಾಯಕವಾದ ಕೆಲಸವಾದ್ದರಿಂದ ನಿತ್ಯ ಅಡುಗೆಯಲ್ಲಿ ಗುಜ್ಜೆ ಪಲ್ಯ ಮಾಡುತ್ತಿದ್ದ ನೆನಪಿಲ್ಲ. ಆಗಾಗ ಹಲಸಿನ ಕಾಯಿ ಹುಳಿ ಮಾಡುವುದಿತ್ತು. ಹಲಸಿನ ಕಾಯಿಯ ದೋಸೆ, ಉಂಡ್ಲಕಾಳು, ಉಪ್ಪಿಗೆ ಹಾಕಿದ ತೊಳೆ ಪಲ್ಯ ಇವುಗಳನ್ನು ನಾನು ದಕ್ಷಿಣಕನ್ನಡಕ್ಕೆ ಸೊಸೆಯಾಗಿ ಸೇರ್ಪಡೆಯಾದ ನಂತರವಷ್ಟೇ ತಿಳಿದುಕೊಂಡದ್ದು.

ನಮ್ಮ ಮನೆಯ ಹಾಡ್ಯದಲ್ಲಿ  ಇದ್ದ ಒಂದು ದೊಡ್ಡ ಹಲಸಿನ ಮರದ ಕಾಯಿಗಳು ಹಪ್ಪಳ ಮಾಡಲು ಯೋಗ್ಯವಾಗಿರುತ್ತಿದ್ದವು. ಬೆಳೆದ ಹಲಸಿನ ಕಾಯಿಯನ್ನು ಮರದಿಂದ ಕೊಯ್ದು, ಇಳಿಸಿ, ಮನೆವರೆಗೆ ಹೊತ್ತು ತಂದು, ಕತ್ತರಿಸಿ ಅದರ ಮೇಣವನ್ನು ಬೈಹುಲ್ಲಿನಿಂದ ಒರೆಸುತ್ತಾ ಶಾಡೆಗಳಾಗಿ ವಿಂಗಡಿಸಿ, ಮೇಣಮಯವಾದ ಮೆಟ್ಟುಕತ್ತಿಯನ್ನು ಬಚ್ಚಲಿನ ಒಲೆಯಲ್ಲಿ ಬಿಸಿಮಾಡಿ ಬೈಹುಲ್ಲಿನಲ್ಲಿ ಒರೆಸಿ ಸ್ವಚ್ಚಗೊಳಿಸುವುದರೊಂದಿಗೆ ಅಪ್ಪ – ಅಣ್ಣನ ಕೆಲಸ ಮುಗಿಯುತ್ತಿತ್ತು.

ನಂತರ ಸೊಳೆಗಳನ್ನು ಬೇರ್ಪಡಿಸುವದು ಅಮ್ಮ ಮತ್ತು ಹೆಣ್ಮಕ್ಕಳ ಕೆಲಸ. ಆ ಸೊಳೆಯನ್ನು ಹದವಾಗಿ ಬೇಯಿಸಿಕೊಂಡು -ಉಪ್ಪು, ಜೀರಿಗೆ ಮೆಣಸಿನ (ಗಾಂಧಾರಿ ಮೆಣಸಿನ) ಪುಡಿಯೊಂದಿಗೆ ಮರದ ವನಕೆಯಲ್ಲಿ ಗುದ್ದಿ, ಹಪ್ಪಳದ ಮೂಲರೂಪದ ಹಿಟ್ಟನ್ನು ಸಿದ್ಧಗೊಳಿಸುವವರೆಗಿನದು ಅಮ್ಮ ಮತ್ತು ದೊಡ್ಡ ಅಕ್ಕಂದಿರ ಕೆಲಸ. ಅದನ್ನು ಸಣ್ಣಸಣ್ಣ ಉಂಡೆಗಳನ್ನಾಗಿ ಮಾಡುತ್ತಾ … ಒಂದೊಂದೇ ಉಂಡೆಯನ್ನು ಗುಳುಂ ಮಾಡುವುದು (ರುಚಿನೋಡುವುದೆಂಬ ಹೆಳೆ ಹೇಳಿಕೊಂಡು) ಸಣ್ಣವರಾದ ನಮ್ಮ ಕೆಲಸ ! ಆ ರುಚಿಕರವಾದ ಹಿಟ್ಟನ ಸ್ವಲ್ಪ ಭಾಗವನ್ನು ಹಾಗೆ ಹಾಗೆ ತಿಂದು ಖಾಲಿ ಮಾಡಿಬಿಡುತ್ತಿದ್ದೆವು ! ಐನೂರು ಹಪ್ಪಳಕ್ಕೆಂದು ಮಾಡಿದ ಹಿಟ್ಟು ನಾನೂರು ಹಪ್ಪಳಕ್ಕಾಗುವಷ್ಟು ಉಳಿದು, ಅದನ್ನು ಉಂಡೆಗಳನ್ನಾಗಿಸುವ ಹೊತ್ತಿಗೆ ಹಪ್ಪಳ ತಯಾರಿಕೆಯ ಇನ್ನೊಂದು ಮಜಲು ಸಂಪನ್ನಗೊಳ್ಳುತ್ತಿತ್ತು !

ಕೆಳಗೊಂದು ಮಣೆ ಇಟ್ಟು – ಅದರ ಮೇಲೆ ಬಾಳೆ ಎಲೆ ಇಟ್ಟು -ಅದಕ್ಕಷ್ಟು ಎಣ್ಣೆ ಹಚ್ಚಿ -ಅದರ ಮೇಲೆಂದು ಹಿಟ್ಟಿನುಂಡೆ ಇಟ್ಟು- ಮೇಲೆ ಮತ್ತೊಂದು ಬಾಳೆ ಎಲೆ ಮುಚ್ಚಿ -ಇನ್ನೊಂದು ಮಣೆಯನ್ನು ಕೆಳಮುಖವಾಗಿಟ್ಟರೆ ನಮ್ಮ ಕೆಲಸ ಶುರು ! ಆ ಮಣೆಯ ಮೇಲೆ ಹತ್ತಿ ಮೂರು ಸುತ್ತು ತಿರುಗಿದರೆ…. ಮೇಲಿನ ಮಣೆ ಎತ್ತಿ ಬಾಳೆ ಎಲೆಯನ್ನು ತೆಗೆದೆವಾದರೆ ದುಂಡಾದ ಹಪ್ಪಳ ! ಆ ಹಪ್ಪಳವಿದ್ದ ಬಾಳೆ ಎಲೆಯನ್ನು ಎತ್ತಿಕೊಂಡು ಹೋಗಿ ಅಲ್ಲೇ.. ಮನೆಯೊಳಗೆ ಸಿಮೆಂಟ್ ನೆಲದ ಮೇಲೆ ಹಾಸಿದ್ದ ಸೀರೆಯ ಮೇಲೆ ಕವಚಿ ಹಾಕಿ ಎಲೆಯನ್ನು ಬಿಡಿಸಿಕೊಂಡರೆ ನಮ್ಮ ಲೆಕ್ಕಕ್ಕೆ ಒಂದು ಹಪ್ಪಳ ಸಿದ್ಧ. ಮತ್ತೆ ನಮ್ಮ ಪಾರ್ಟ್ನರ್ ಇರುವೆಡೆಗೆ ಮತ್ತೊಂದು ಹಪ್ಪಳ ಮಾಡುವುದಕ್ಕಾಗಿ ಓಟ !papad making

ನಮ್ಮಂತೆಯೇ ಮೂರು ಗುಂಪುಗಳು. ಮೂರು ಗುಂಪಿಗೂ ಬೇರೆ ಬೇರೆ ಸೀರೆ. ಅವರವರ ಸೀರೆ ತುಂಬಿಸಿದರೆ ಅಂದಿನ ಹಪ್ಪಳ ಮಾಡುವ ಕಾರ್ಯ ಸುಖಾಂತ್ಯ ! ಮೂರು ಗುಂಪುಗಳ ನಡುವೆ ಆರೋಗ್ಯಕರ ಸ್ಪರ್ಧೆ ! ಯಾರು ಮಾಡಿದ ಹಪ್ಪಳ ಹೆಚ್ಚು ದುಂಡಗಿದೆ ? ಸಮಾನ ಆಕಾರವಿದೆ ? ಯಾರು ಬೇಗ ಟಾಸ್ಕ್ ಮುಗಿಸಿದರು ? ಯಾರು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದರು ? ಬೇಸಿಗೆ ರಜೆಗೆ ಇದಕ್ಕಿಂತ ಉತ್ತಮ ಪ್ರೋಜೆಕ್ಟ್ ಇನ್ನಾವುದಿದ್ದೀತು ? ಇಷ್ಟೆಲ್ಲಾ ಪ್ರಾಯಾಸ ಪಡುತ್ತಿದ್ದದ್ದು ವರ್ಷಕ್ಕೆ ಒಂದೆರಡು ಬಾರಿ ಮಾತ್ರ ! ಬಿರು ಬೇಸಿಗೆಯಲ್ಲಿ ಇನ್ನೂ ಕಾಯಿ ಬಲಿತಿರುತ್ತಿರಲಿಲ್ಲ. ಇನ್ನು ಹಪ್ಪಳ ಮಾಡುವುದು ಹೇಗೆ ? ಮೇ ಕೊನೆಯ ವಾರದಲ್ಲಿ ಹಪ್ಪಳ ಮಾಡುವ ಸಂಭ್ರಮ. ಎಲ್ಲ ಅಕ್ಕಂದಿರೂ ಊರು ಬಿಟ್ಟು ಹಾಸ್ಟೆಲ್ ಜೀವನ ಅನುಭವಿಸುತ್ತಿದ್ದಿದ್ದರಿಂದಲೋ ಏನೋ ಯಾರಿಗೂ ಹಪ್ಪಳ ಬೇಕೇ ಬೇಕೆಂಬ ಚಟವಿರುತ್ತಿರಲಿಲ್ಲ. ಆದಷ್ಟು ಹಪ್ಪಳ ಮಾಡುವುದು ಅಷ್ಟೇ…..

ಇನ್ನು ಹಪ್ಪಳ ಒಣಗಿಸುವುದು ಇನ್ನೊಂದು ಮೋಜು ! ಹಿಂದಿನ ದಿನ ಮನೆಯೊಳಗೆ ಸೀರೆ ಮೇಲೆ ಹಾಕಿದ ಹಪ್ಪಳವನ್ನು ಸೀರೆ ಸಹಿತ ಅಂಗಳಕ್ಕೊಯ್ದು ಬಿಸಿಲಿಗಿಟ್ಟರೆ ಅದನ್ನು ಕಾಯುವುದೊಂದು ಹೆಳೆ ನಮಗೆ ! ಚಿಟ್ಟೆ( ಸಿಮೆಂಟಿನ ಕಟ್ಟೆ) ಮೇಲೆ ಕುಳಿತು ಏನೋ ಓದಿಕೊಳ್ಳುತ್ತಾ… ಹರಟೆಹೊಡೆಯುತ್ತಾ…ಆಡುತ್ತಾ…. ಕಾಗೆ ಓಡಿಸುವ ನೆವದಲ್ಲಿ ಕವಣೆಯಲ್ಲಿ ಕಲ್ಲು ಬೀರುತ್ತಾ…. ಅರೆಒಣಗಿದ ಹಪ್ಪಳವನ್ನು ಕಾಗೆ ಒಯೈದಿತೆಂದು ನಾವೇ ಗುಳುಂ ಮಾಡುತ್ತಾ…. ಹಪ್ಪಳಗಳನ್ನು ಒಣಗಿಸಿ ಮುಗಿಸುವ ದಿನಕ್ಕೆ ನಾಲ್ಕುನೂರಿದ್ದ  ಹಪ್ಪಳ ಮುನ್ನೂರಕ್ಕೆ ಇಳಿದಿರುತ್ತಿತ್ತು ! ಮಧ್ಯೆ ಮಳೆರಾಯನಿಣುಕಿದರೆ ಹಪ್ಪಳವನ್ನು ರಕ್ಷಿಸುವ ಕೆಲಸವನ್ನೂ ಸಮರ್ಥವಾಗಿಯೇ ನಿರ್ವಹಿಸುತ್ತಿದ್ದೆವು !

ಹಲಸಿನ ಹಣ್ಣನ್ನು ಹಣ್ಣು ಎನ್ನುವುದಕ್ಕಿಂತ ಆಹಾರವಾಗಿ ತಿಂದು ಬೆಳೆದವರು ನಾವು. ನಮ್ಮ ಮನೆಯಲ್ಲಿ ಅದರ ಪದಾರ್ಥ ಮಾಡುವುದಕ್ಕಿಂತ ಹಣ್ಣನ್ನೇ ತಿನ್ನುವುದಕ್ಕೆ ಹೆಚ್ಚು ಇಷ್ಟಪಡುತ್ತಿದ್ದೆವು. ಶ್ರಮ ಪಡುವುದಕ್ಕೆ ಉದಾಸೀನ ಎಂದು ಬೇಕಾದರೆ ತಿಳಿದುಕೊಳ್ಳಿ. ನೆಂಟರು ಬಂದಾಗ ಅಥವಾ ಮನೆಯವರೆಲ್ಲರೂ ಊರನಲ್ಲಿ ಸೇರಿದಾಗ ವರ್ಷಕ್ಕೊಮ್ಮೆ ಹಲಸಿನ ಹಣ್ಣಿನ ಪಾಯಸ, ಒಮ್ಮೆ ಕಡುಬು, ಒಮ್ಮೆ ಮುಳುಕ(ಸುಟ್ಟವು) ಮಾಡಿಬಿಟ್ಟರೆ ಮುಗಿಯಿತು. ಆ ವರ್ಷಕ್ಕೆ ಅಷ್ಟೇ. ಮತ್ತೆ ಪ್ರತಿದಿನ ಊಟಕ್ಕೂ ಮೊದಲು ಮಧ್ಯಾನ್ಹ 12 ರ ಹೊತ್ತಿಗೆ ಅಥವಾ ಸಂಜೆ 6 ಗಂಟೆಯ ಹೊತ್ತಿಗೆ- ಪ್ರತಿದಿನವೂ ನಮ್ಮ ಮನೆಯಲ್ಲಿ ಹಲಸಿನ ಹಣ್ಣಿನ ಮೇಳ ! ಅಪ್ಪ ಹಲಸಿನ ಹಣ್ಣನ್ನು ಕೊಯ್ದು ಶಾಡೆ ಶಾಡೆ ಮಾಡಿ ಇಡುತ್ತಿದ್ದ. ನಾವುಗಳು ಯಥಾನುಶಕ್ತಿ ತಿಂದು ತೃಪ್ತರಾಗುತ್ತಿದ್ದೆವು ! ಯಾರಿಗೂ ಬಿಡಿಸಿ ಕೊಡುವ ಕ್ರಮವಿಲ್ಲ. ಮನೆಗೆ ಬಂದ ನೆಂಟರಿರಲಿ… ಅವರಿಗೆ ಕೊಬ್ಬರಿ ಎಣ್ಣೆ ಕೈ ಎದುರು ಹಿಡಿದು “ಹಲಸಿನ ಹಣ್ಣನ್ನು ತಿನ್ನಲು ಬನ್ನಿ” ಎಂದು ಆಹ್ವಾನಿಸುತ್ತಿದ್ದೆವು !

Jackfruit1

ತೋಟದಲ್ಲಿ ಎರಡು – ಗದ್ದೆಯಲ್ಲಿ ಎರಡು ಹಲಸಿನ ಮರಗಳಿದ್ದವು. ತೋಟದ ಮರದಲ್ಲಿ ಒಮ್ಮೆ ಕನ್ನಡಿ ಹಾವು ಇದ್ದುದ್ದನು ನೋಡಿದ ನಾವು ಆ ಮರದತ್ತ ಹೋಗುತ್ತಿದ್ದದ್ದು ಅಪರೂಪ. ಗದ್ದೆಯಲ್ಲಿ ಇದ್ದ ಒಂದು ಮರ ಸಣ್ಣ ಗಾತ್ರದ 200 ರಿಂದ 250 ಕಾಯಿ ಬಿಡುತ್ತಿತ್ತು. ತೆಳು ಸೊಳೆಯ ಹದ ರುಚಿಯ ಹಣ್ಣು. ಯಾವಾಗ ಹೋಗಿ ನೋಡಿದರೂ ಆ ಮರ ಒಂದಾದರೂ ಹಣ್ಣು ನೀಡದಿರುತ್ತಿರಲಿಲ್ಲ. ಆದ್ದರಿಂದ ಆ ಮರವನ್ನು ಕಂಡರೆ ನಮಗೆಲ್ಲ ಒಂದು ರೀತಿಯ ಪ್ರೀತಿ. ಎಪ್ರೀಲ್ ಕೊನೆಯಿಂದ ಜುಲೈವರೆಗೂ ಸಮೃದ್ಧವಾಗಿ ಹಣ್ಣು ಕೊಡುತ್ತಿದ್ದ ಆ ಮರವನ್ನು ನೆನದಾಗ ಒಂದು ಕ್ಷಣ ಮನಸ್ಸು ಮುದಗೊಳ್ಳುತ್ತದೆ. ಗದ್ದೆಯಲ್ಲಿದ್ದ ಇನ್ನೊಂದು ಮರ ವರ್ಷಕ್ಕೆರಡು ಕಾಯಿ ಬಿಡುತ್ತಿತ್ತು- ದೊಡ್ಡ ದೊಡ್ಡ ಕಾಯಿಗಳು – ಅದಕ್ಕೆ ಕುಟುಂಬ ಯೋಜನೆ ಮರ ಎಂದು ಹೆಸರಿಟ್ಟಿದ್ದೆವು ! ಅದರ ರುಚಿ ಹೇಗಿತ್ತೋ ನೆನಪಿಗೇ ಬರುತ್ತಿಲ್ಲ !

ಬೆಂಗಳೂರು ಸೇರಿದ ಮೇಲೆ “ಹಲಸಿನ ಹಣ್ಣನ್ನೂ ದುಡ್ಡು ಕೊಟ್ಟು ತಿನ್ನಬೇಕಾ ?” ಎಂಬ ಪ್ರಶ್ನೆ ಮನದಲ್ಲಿ ಮೂಡಿ, ಕೊಂಡು ತಿನ್ನುವುದಕ್ಕೆ ಮನಸ್ಸು ಹಿಂಜರಿಯುತ್ತಿತ್ತು. ಊರಿಗೆ ಹೋಗುವುದೇ ಅಪರೂಪವಾದ ಮೇಲೆ ಕೊಂಡು ತಿನ್ನದೇ ಬೇರೆ ವಿಧಿಯಿಲ್ಲ ಎಂಬ ಯೋಚನೆ ಮನದಲ್ಲಿ ಮೂಡಿತು. ಈಗ ಸಕತ್ತಾಗಿಯೇ ಹಲಸು ಸಮಾರಾಧನೆ ನಡೆಯುತ್ತದೆ…(ಆದರೂ ನಮಗೆ ಬೇಕೆಂದಾಗಲೆಲ್ಲಾ ಒಳ್ಳೆಯ ಹಣ್ಣು ದೊರೆಯುವುದಿಲ್ಲ.) ಬೆಲೆ ಏನೇ ಇರಲಿ. ಇಡೀ ಹಣ್ಣು ಮನೆ ಸೇರುತ್ತದೆ – ಹಲಸಿನ ಸೀಸನ್ ಮುಗಿಯುವವರೆಗೂ ! ಅಂಗಡಿಯವನೊಪ್ಪಿದರೆ ಇಡೀ ಹಣ್ಣನ್ನು ಅಲ್ಲೇ ಹೆಚ್ಚಿ ,ತಂದು , ಬಿಡಿಸಿ-ನಾಲ್ಕು ದಿನ ತಂಗಳು ಪೆಟ್ಟಿಗೆಯಲ್ಲಿ ಭದ್ರವಾಗಿಟ್ಟು ಜೇನಿನ ಜೊತೆ ಮುಕ್ಕುತ್ತೇವೆ….. ಊಟದ ಬದಲಿಗೆ ! ಜೇನಿನ ಜೊತೆ ತಿಂದರೆ ಅಜೀರ್ಣವಾಗುವುದಿಲ್ಲ ಎಂಬ ವಿಷಯವನ್ನು ಕರಡಿಯ ಕಥೆ ಓದಿ ತಿಳಿದುಕೊಂಡಿದ್ದೇವೆ !!!! ಎಷ್ಟೆಂದರೂ ಪರಂಪರೆ ಮುಂದುವರೆಸಿಕೊಂಡು ಹೋಗುವುದಕ್ಕೆ ಮಕ್ಕಳಿಗೆ ತರಬೇತಿ ನೀಡುವ ಜವಾಬ್ದಾರಿಯೂ ನಮ್ಮ ಮೇಲಿದೆಯಲ್ಲವೇ ! (??!!)

 

– ಸುರೇಖಾ ಭಟ್ ,  ಭೀಮಗುಳಿ

 

 

2 Responses

  1. Niharika says:

    ಸುರಹೊಂನೆಯಲ್ಲಿ ಹಲಸಿನ ಮೇಲ ನಡೆಯುವ ಹಾಗಿದೆ! ಸೂಪರ್..

  2. Divakara Dongre M (Malava) says:

    ಹಪ್ಪಳವ ನೆನೆ ನೆನೆದು….
    ಲೇಖನ ಸೊಗಸಾಗಿದೆ. ಹಲಸಿನ ಹಪ್ಪಳ ತಯಾರಿಕೆಯನ್ನು ಒಂದು ಗೃಹೋದ್ಯಮವಾಗಿ ಮಾಡಿಕೊಂಡು ಸೀಝನ್ ನಲ್ಲಿ ಐವತ್ತು ಸಾವಿರಕ್ಕೂ ಮಿಕ್ಕಿ ವರಮಾನ ಗಳಿಸುವ ಕುಟುಂಬಗಳು ನಮ್ಮಲ್ಲಿವೆ. ಮಾರುಕಟ್ಟೆಯಲ್ಲಿ ಇಂದು ಒಂದು ಹಲಸಿನ ಹಪ್ಪಳಕ್ಕೆ ಮೂರು ರುಪಾಯಿಯ ಬೆಲೆಯಿದೆ. ಹಲಸಿನ ಹಣ್ಣಿನ ತೋಳೆಗಳನ್ನು ಬೇಯಿಸಿ ರುಬ್ಬಿ ಅದನ್ನು ಚಾಪರಗಳ ಮೇಲೆ ಹರವಿ ಒಣಗಿಸಿ ‘ಮಾಂಬಳ’ವಾಗಿಸಿ ಶೇಖರಿಸಿಡುವುದು ವಾಡಿಕೆಯಾಗಿದೆ.

Leave a Reply to Divakara Dongre M (Malava) Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: