ಸಿಟಿಗಳು ಸ್ಮಾರ್ಟ್ ಆಗುವಾಗ ಹಳ್ಳಿಗಳು ನಿರ್ಲಕ್ಷಕ್ಕೊಳಗಾಗದಿರಲಿ

Spread the love
Share Button

Lakshmeesha J Hegade1
ನಾನಾಗ ಪ್ರಾಥಮಿಕ ಶಾಲೆಯಲ್ಲಿದ್ದೆ.ಒಂದು ಸಲ ಉತ್ತರಪತ್ರಿಕೆಯಲ್ಲಿ ಭಾರತ ‘ಅಭಿವೃದ್ಧಿ ಹೊಂದಿದ ರಾಷ್ಟ್ರ’ ಎಂದು ಬರೆದಿದ್ದೆ.ನಮ್ಮ ಕ್ಲಾಸ್ ಟೀಚರ್ ಎಲ್ಲರ ಮುಂದೆ ಅದನ್ನು ಓದಿ ಹೇಳಿ ಭಾರತ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ.ಅಭಿವೃದ್ಧಿ ಹೊಂದಿದ ದೇಶ ಎಂದು ಬರೆಯಬೇಡಿ ಎಂದು ಹೇಳಿದರು.ನಾನಂತೂ ಅಂದಿನಿಂದಲೂ ಕಾಯುತ್ತಲೇ ಇದ್ದೇನೆ,ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಭಾರತ ಬದಲಾಗುವುದು ಯಾವಾಗ ಎಂದು.ಅದು ಇವತ್ತಿಗೂ ಸಾಧ್ಯವಾಗಿಲ್ಲ.ಇದೀಗ ಕೇಂದ್ರದ ಎನ್.ಡಿ.ಎ. ಸರ್ಕಾರ ದೇಶದ ಹಲವು ನಗರಗಳನ್ನು ‘ಸ್ಮಾರ್ಟ್ ಸಿಟಿ’ ಮಾಡಲು ಹೊರಟಿದೆ.ದೇಶ ಅಭಿವೃದ್ಧಿಯಾಗಬೇಕಾದರೆ ಕೈಗಾರಿಕೆಗಳು ಬೆಳಯಬೇಕು,G.D.P.(Gross domestic Product) ಹೆಚ್ಚಾಗಬೇಕು ಎಂದೆಲ್ಲ ಕಾರಣಗಳನ್ನು ನೀಡಿ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಲು ಸ್ಮಾರ್ಟ್ ಸಿಟಿಗಳ ನಿರ್ಮಾಣಕ್ಕೆ ನಮ್ಮ ಸರ್ಕಾರ ನಾಂದಿ ಹಾಡಿದೆ.ಕರ್ನಾಟಕದ ನಗರಗಳಾದ ಮಂಗಳೂರು,ಶಿವಮೊಗ್ಗ,ಬೆಳಗಾವಿ,ದಾವಣಗೆರೆ ಕೂಡಾ ಸ್ಮಾರ್ಟ್ ಸಿಟಿಗಳಾಗಲಿವೆಯಂತೆ.ಸಿಟಿಗಳೇನೋ ಸ್ಮಾರ್ಟ್ ಆಗುತ್ತವೆ ಆದರೆ ನಮ್ಮ ಹಳ್ಳಿಗಳ ಕಥೆಯೇನು?

ಸ್ವಚ್ಛಭಾರತಕ್ಕೆ ಸಂದೇಶ ಕೊಡಲು ಬೇಕಾಗಿದ್ದ ಗಾಂಧೀಜಿ ಗ್ರಾಮಭಾರತದ ಪರಿಕಲ್ಪನೆ ಬಂದಾಗ ನಮ್ಮ ಕೇಂದ್ರ ಸರ್ಕಾರಕ್ಕೆ ಬೇಡವಾದರು.ಕೈಗಾರಿಕೀಕರಣದ ನೆಪದಲ್ಲಿ ಸಣ್ಣ ಉದ್ಯಮಗಳ ನಾಶವಾಗುತ್ತಿರುವಾಗ ಅವರಿಗೆ ಗಾಂಧಿ ಕಾಣಲೇ ಇಲ್ಲ.ಮೇಕ್ ಇನ್ ಇಂಡಿಯಾ ಹೆಸರಲ್ಲಿ ವಿದೇಶಗಳಿಂದ ಕಂಪೆನಿಗಳು ಬಂದು ಇಲ್ಲಿ ಉದ್ಯಮ ಸ್ಥಾಪಿಸಲಿವೆಯಂತೆ.ಅವಕ್ಕೆ ಬೇಕಾದ ಭೂಮಿ ಬರುವುದೆಲ್ಲಿಂದ?ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು ಗ್ರಾಮೀಣ ಪ್ರದೇಶಗಳ ಭೂಮಿಯನ್ನು ಕೈಗಾರಿಕೀಕರಣಕ್ಕೆ ದಾನ ನೀಡಲು ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಪ್ರಯತ್ನಿಸುತ್ತಿದೆ.

ಸ್ಮಾರ್ಟ್ ಸಿಟಿ ಕಲ್ಪನೆ ಮತ್ತು ಅದರ ಸಾಕಾರ ಎರಡೂ ಒಳ್ಳೆಯದೇ.ಆದರೆ ನಮ್ಮ ಹಳ್ಳಿಗಳೇಕೆ ಸ್ಮಾರ್ಟ್ ಆಗಬಾರದು?ಉದಾಹರಣೆಗೆ ನಮ್ಮ ಮನೆಯಲ್ಲಿ ಯಾರೋ ಖಾಯಿಲೆಯಿಂದ ನರಳುತ್ತಿರುತ್ತಾರೆ.ನಮ್ಮ ಮನೆಗೆ ಸುಣ್ಣ-ಬಣ್ಣ ಮಾಡಿಸಿ ನವೀಕರಿಸಲೂ ನಮಗೆ ಆಸೆಯಿರುತ್ತದೆ.ಆದರೆ ಮೊದಲು ನಾವು ಖಾಯಿಲೆ ಇರುವವರಿಗೆ ಉತ್ತಮ ಚಿಕಿತ್ಸೆ ಕೊಡಿಸಿ ಅವರು ಗುಣಮುಖರಾದ ಮೇಲೆ ಮನೆಯನ್ನು ನವೀಕರಿಸುತ್ತೇವೆ ತಾನೆ?ಈಗ ಸಾರ್ಟ್ ಸಿಟಿ ಮತ್ತು ಹಳ್ಳಿಗಳ ಅಭಿವೃದ್ಧಿಯಲ್ಲಿ ಆಗಬೇಕಾದ್ದು ಇದೇ.ಹಾಗಂತ ನಮ್ಮ ಹಳ್ಳಿಗಳು ಸಂಪೂರ್ಣವಾಗಿ ರೋಗಗ್ರಸ್ಥವಾಗಿವೆ ಅಂತ ಅಲ್ಲ.ಮೊದಲು ಹಳ್ಳಿಗಳ ಯೋಗಕ್ಷೇಮ ನೋಡಿಕೊಂಡು ನಂತರ ಸಿಟಿಗಳನ್ನು ಸ್ಮಾರ್ಟ್ ಆಗಿಸಿದರೆ ಅದಕ್ಕೊಂದು ಅರ್ಥ ಬರುತ್ತದೆ.ಸಿಟಿಯಲ್ಲಿರುವ ಜನರಿಗೆ ಸ್ಮಾರ್ಟ್ ಆಗುವ ಹಕ್ಕಿದ್ದರೆ ಹಳ್ಳಿಗರಿಗೇಕೆ ಸ್ಮಾರ್ಟ್ ಆಗುವ ಹಕ್ಕಿಲ್ಲ?

smart city

ದೇಶದ ಬೆನ್ನೆಲುಬಾದ ರೈತರು ಹೆಚ್ಚಿನ ಸಂಖ್ಯೆಯಲ್ಲಿರುವುದು ಹಳ್ಳಿಗಳಲ್ಲಿ.ನಮ್ಮ ಹೊಟ್ಟೆ ತುಂಬಿಸಬೇಕಾದರೆ ರೈತ ಆರೋಗ್ಯವಾಗಿದ್ದು ದಿನವೂ ದುಡಿಯಬೇಕು.ಆದರೆ ಆರೋಗ್ಯ ನಮ್ಮ ಹಳ್ಳಿಗಳ ರೈತರಿಗೆ ಸಿಗುತ್ತಿಲ್ಲ.ದೇಶದ ಹಳ್ಳಿ ಹಳ್ಳಿಗಳಲ್ಲಿ ಪ್ರಾಥಮಿಕ ಆರೋಗ್ಯ ಕೆಂದ್ರಗಳೇನೋ ಇವೆ.ಆದರೆ ಅವುಗಳಿರುವ ಸ್ಥಿತಿ ನೋಡಿದರೆ ಜನರು ಅಲ್ಲಿಗೆ ಹೋಗುವ ಮನಸ್ಸು ಮಾಡುವುದಿಲ್ಲ.ಗ್ರಾಮೀಣ ಭಾಗಗಳಲ್ಲಿ ದೇಶಾದ್ಯಂತ ವೈದ್ಯರ ಕೊರತೆಯಿದೆ,ಸಮರ್ಪಕ ಔಷಧಿಗಳ ಪೂರೈಕೆಯಿಲ್ಲ.ಇದಕ್ಕೆ ನಮ್ಮ ಕರ್ನಾಟಕವೂ ಹೊರತಲ್ಲ.ಅದಕ್ಕೆ ಈಗ ಸರ್ಕಾರ ಎಂಬಿಬಿಎಸ್ ಮುಗಿದ ನಂತರ ಒಂದು ವರ್ಷ ಗ್ರಾಮೀಣ ಸೇವೆಯನ್ನು ಕಡ್ದಾಯಗೊಳಿಸಿದೆ.ಅಂದರೆ ತರಬೇತಿಯಲ್ಲಿರುವ ವೈದ್ಯರು ಹಳ್ಳಿಗಳಿಗೆ ಹೋಗಿ ಅಲ್ಲಿನ ಜನರ ಹಿತ ಕಾಯಬೇಕು.ಅದು ಒಳ್ಳೆಯದೇ.ಆದರೆ ತಜ್ಞ ವೈದ್ಯರಿಂದ ತಾವಿರುವ ಸ್ಥಳದಲ್ಲೇ ಉತ್ತಮ ಚಿಕಿತ್ಸೆ ಪಡೆಯುವುದು ದೇಶದ ಎಲ್ಲಾ ಪ್ರಜೆಗಳ ಹಕ್ಕು.ಗ್ರಾಮೀಣ ಭಾಗದ ಬಹುತೇಕ ಜನರು ತಜ್ಞ ವೈದ್ಯರ ಆರೋಗ್ಯ ಸೇವೆಯಿಂದ ವಂಚಿತರಾಗಿದ್ದಾರೆ.ಸಾಮಾನ್ಯ ಜ್ವರ,ವಾಂತಿ-ಭೇದಿಗಳಿಗೂ ನಗರಗಳಲ್ಲಿರುವ ಆಸ್ಪತ್ರೆಗಳಿಗೇ ಬರುತ್ತಾರೆ.ಹೆರಿಗೆಗಳನ್ನು ಪ್ರಾಥಮಿಕ ಆರೋಗ್ಯ ಕೆಂದ್ರಗಳಲ್ಲಿ ನಡೆಸಲು ವೈದ್ಯರು ಒಪ್ಪಿದರೂ ನಗರದ ಒಳ್ಳೆಯ ಆಸ್ಪತ್ರೆಗಳಿಗೇ ಗರ್ಭಿಣಿಯರು ಹೆರಲು ಬರುತ್ತಾರೆ.ಅದಕ್ಕೆ ವೈದ್ಯರನ್ನು ಸಂಪೂರ್ಣವಾಗಿ ದೂರುವಂತೆಯೂ ಇಲ್ಲ.ಸೂಕ್ತ ವೇತನ ಕೊಟ್ಟರೆ,ಉತ್ತಮ ಜೀವರಕ್ಷಕ ಔಷಧಿಗಳು,ವಾಸಕ್ಕೆ ಯೋಗ್ಯ ಸ್ಥಳ ಕೊಟ್ಟರೆ ಗ್ರಾಮೀಣ ಸೇವೆ ಸಲ್ಲಿಸಲು ಸಿದ್ಧ ಎಂದು ವೈದ್ಯರು ಲಾಗಾಯ್ತಿನಿಂದ ಹೇಳುತ್ತಾ ಇದ್ದರೂ ರಾಜ್ಯ,ಕೇಂದ್ರ ಸರ್ಕಾರಗಳೆರಡೂ ತಲೆ ಕೆಡಿಸಿಕೊಂಡಿಲ್ಲ.ಸುಮ್ಮನೇ ಹೋಗಿ ಗದ್ದಲ ಮಾಡಿದರೂ ಸಂಸದರ ಭತ್ಯೆ ಪ್ರತಿಯೊಬ್ಬರಿಗೂ ದಿನಕ್ಕೆ 2000 ರೂಪಾಯಿ ಕೊಡಲು ನಮ್ಮ ಸರ್ಕಾರದ ಬಳಿ ದುಡ್ಡಿದೆ,ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜಾಹಿರಾತು ಹಾಕಿಸಲು ಹಣವಿದೆ.ಆದರೆ ಜನರ ಆರೋಗ್ಯದ ಹಿತ ಕಾಯುವ ಗ್ರಾಮೀಣ ಪ್ರದೇಶದ ಆಸ್ಪತ್ರೆಗಳ ವೈದ್ಯರಿಗೆ ಸೂಕ್ತ ವೇತನವನ್ನು,ಸೌಲಭ್ಯವನ್ನು ಕೊಡಲು ಸರ್ಕಾರ ಮೀನ ಮೇಷ ಎಣಿಸುತ್ತದೆ.

ಸಿಟಿಗಳು ಸ್ಮಾರ್ಟ್ ಆದರೆ ಅಲ್ಲಿನ ಜನರು ತಿನ್ನುವ ಅನ್ನ ಬರಬೇಕಾದ್ದು ಹಳ್ಳಿಯ ರೈತನಿಂದಲೇ.ಸಿಟಿಗಳು ಅಭಿವೃದ್ಧಿಗೊಂಡು ಕಂಗೊಳಿಸುತ್ತಿರುವಾಗ ಹಳ್ಳಿಯ ಜನರು,ರೈತರು ಸೂಕ್ತ ಆರೋಗ್ಯಸೇವೆ ಸಿಗದೇ ಪರದಾಡುವುದು ಎಷ್ಟು ಸರಿ?ಗರ್ಭಿಣಿ ಹೆಂಗಸರು ನಿಯಮಿತ ತಪಾಸಣೆಗೆಂದು ನಗರಗಳ ಸರ್ಕಾರಿ ತಾಲೂಕು,ಜಿಲ್ಲಾ ಆಸ್ಪತ್ರೆಗಳಿಗೆ ಬಂದರೆ ನಿಮ್ಮ ಊರುಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದರೂ ಇಲ್ಲಿಗೆ ಬಂದದ್ದೇಕೆ ಎಂದು ವೈದ್ಯರು ಅವರನ್ನು ಪ್ರಶ್ನಿಸುತ್ತಾರೆ.ಇದನ್ನುಸ್ವತಃ ನಾನೇ ಗಮನಿಸಿದ್ದೇನೆ.ಅತ್ತ ಹಳ್ಳಿಯಲ್ಲಿಯೂ ಇತ್ತ ನಗರದ ಆಸ್ಪತ್ರೆಗಳಲ್ಲಿಯೂ ಸರಿಯಾಗಿ ಸ್ಪಂದನೆ ದೊರೆಯದಿದ್ದರೆ ಅವರು ಏನು ಮಾಡಬೇಕು?ಹಾಗಂತ ಇಂಥ ಸೂಕ್ಷ್ಮ ಸಂಗತಿಗಳು ನಮ್ಮ ಸರ್ಕಾರಕ್ಕೆ ತಿಳಿದಿಲ್ಲವೆಂದಲ್ಲ.ಆದರೆ ಜಗತ್ತಿನ ಮುಂದೆ ನಮ್ಮ ದೇಶವನ್ನು Developed country ಎಂದು ತೋರಿಸುವ ಪ್ರಯತ್ನದಲ್ಲಿ ಅದಕ್ಕೆ ಹಳ್ಳಿಗಳು ನೆನಪಾಗುತ್ತಿಲ್ಲವಷ್ಟೇ.

smart village

 

ಇಂಟರ್ನೆಟ್ ಇಲ್ಲದ ಸ್ಮಾರ್ಟ್ ಸಿಟಿಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.ಇಂದು ಇಂಟರ್ನೆಟ್ ನಮ್ಮೆಲ್ಲರ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಹೋಗಿದೆ.ಆದರೆ ವೇಗದ ಇಂಟರ್ನೆಟ್ ಇಂದು ನಗರಗಳಿಗೆ ಮಾತ್ರ ಸೀಮಿತವಾಗಿದೆ.ಬಹುತೇಕ ಹಳ್ಳಿಗಳಲ್ಲಿ 2G ಸೇವೆಯಿದ್ದರೆ ಇನ್ನೂ ಅನೇಕ ಹಳ್ಳಿಗಳು ಅಂತರ್ಜಾಲದ ಸೌಲಭ್ಯದಿಂದ ವಂಚಿತವಾಗಿವೆ.ವೇಗದ ಇಂಟರ್ನೆಟ್ ಬಳಸುವ ಹಕ್ಕು ನಗರದ ಜನರಿಗೆ ಹೇಗಿದೆಯೋ ಹಾಗೆಯೇ ಹಳ್ಳಿಗರಿಗೂ 3G ಇಂಟರ್ನೆಟ್ ಸೇವೆ ಪಡೆಯುವ ಹಕ್ಕಿದೆ.ಆದರೆ ಸಿಗುತ್ತಿಲ್ಲವಲ್ಲ.ಸರ್ಕಾರದ ಯಾವುದೇ ಸೌಲಭ್ಯಕ್ಕಾಗಿ ಆನ್ಲೈನ್ ನಲ್ಲಿ ಅರ್ಜಿ ಹಾಕುವುದಿದ್ದರೆ ಗ್ರಾಮೀಣ ಪ್ರದೇಶದ ಜನರು ನಗರಕ್ಕೇ ಬರಬೇಕು.ಹಳ್ಳಿಗಳ 2G ಸ್ಪೀಡ್ ನಲ್ಲಿ ಫೈಲ್,ಫೋಟೋಗಳು ಅಪ್ಲೋಡ್ ಆಗುವುದೇ ಇಲ್ಲ.ಎಲ್ಲೋ ಅಪವಾದವೆಂಬಂತೆ ದೇಶದ ಕೆಲವು ಗ್ರಾಮಗಳಲ್ಲಿ ಹೈಸ್ಪೀಡ್ ಇಂಟರ್ನೆಟ್ ಇರಬಹುದು.ಇಂಟರ್ನೆಟ್ ಬೇಕೆಂದರೆ ವಿದ್ಯುತ್ ಬೇಕು.ದೇಶದ ಬಹುತೇಕ ರಾಜ್ಯಗಳಲ್ಲಿ 24 ಗಂಟೆಗಳ ಸತತ ವಿದ್ಯುತ್ ಪಡೆಯುವುದು ಇನ್ನೂ ಕನಸಾಗೇ ಉಳಿದಿದೆ.ಕೆಲವು ಹಳ್ಳಿಗಳಲ್ಲಿ ನೀರಾವರಿಗೆ ಬೇಕಾದ ವಿದ್ಯುತ್ ಕೂಡಾ ನಮ್ಮ ರೈತರಿಗೆ ಸಿಗುತ್ತಿಲ್ಲ.

ಹಳ್ಳಿಗಳನ್ನು ಇಂಥ ಮೂಲಭೂತ ಸೌಕರ್ಯಗಳಿಂದ ಇನ್ನೂ ದೂರವಾಗೇ ಇಟ್ಟು ದೇಶದ ನಗರಗಳನ್ನು ಸ್ಮಾರ್ಟ್ ಸಿಟಿ ಮಾಡುತ್ತೇವೆ ಎಂದು ಹೊರಟಿರುವುದು ಒಂಥರಾ ಅಭಾಸವಾಗಿ ಕಾಣುತ್ತಿದೆ.ಪ್ರತಿಯೊಬ್ಬ ಸಂಸದರು ಗ್ರಾಮಗಳನ್ನು ದತ್ತು ತೆಗೆದುಕೊಂಡು ಅವುಗಳನ್ನು ಮಾದರಿ ಗ್ರಾಮಗಳನ್ನಾಗಿಸಬೇಕೆಂದು ಅಧಿಕಾರಕ್ಕೆ ಬಂದ ಕೂಡಲೇ ನಮ್ಮ ಪ್ರಧಾನಿ ತಿಳಿಸಿದ್ದಾರೆ.ಆದರೆ ಆರೋಗ್ಯ ಸೇವೆ,ವಿದ್ಯುತ್,ಕೃಷಿಗೆ ಬೇಕಾದ ಭೂಮಿ,ನೀರು ಸರಿಯಾಗಿ ಸಿಗದೇ ಗ್ರಾಮಗಳು ಅಭಿವೃದ್ಧಿಯಾಗುವುದಾದರೂ ಹೇಗೆ?ಅವು ಸುಂದರ ಹಸಿರು ಪ್ರಕೃತಿ ಬಿಟ್ಟರೆ ಮತ್ತೆ ಯಾವುದರಲ್ಲಿಯೂ ನಗರಗಳಿಗಿಂತ ಕಡಿಮೆಯಿಲ್ಲವೆಂದು ಅನ್ನಿಸುವುದಾದರೂ ಹೇಗೆ?

ನಮ್ಮಲ್ಲಿ ವೈದ್ಯನ ಮಗ ವೈದ್ಯನಾಗುತ್ತಾನೆ.ಇಂಜಿನಿಯರ್ ನ ಮಗ ಇಂಜಿನಿಯರ್,ನಟ ನಟಿಯರ ಮಕ್ಕಳು ನಟರಾಗುತ್ತಾರೆ.ಆದರೆ ರೈತನ ಮಗ ಮಾತ್ರ ರೈತನಾಗಲು ಸದಾ ಹಿಂಜರಿಯುತ್ತಾನೆ.ಆಧುನಿಕ ಜಗತ್ತಿನ ಸೌಂದರ್ಯಕ್ಕೆ ಸಿಲುಕಿ ತಾನೂ ನಗರವಾಸಿಯಾಗಲು ಹಾತೊರೆಯುತ್ತಾನೆ.ಹಳ್ಳಿಯಲ್ಲಿ ನಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಇಂಗ್ಲೀಷ್ ಶಿಕ್ಷಣ ದೊರೆಯುತ್ತಿಲ್ಲ.ಅದಕ್ಕೆ ತಕ್ಕ ಅಧ್ಯಾಪಕರ ಕೊರತೆಯಿದೆ.ನಮ್ಮ ಬಜೆಟ್ ನಲ್ಲಿ ಹೆಚ್ಚು ಹಣ ವ್ಯಯಿಸುವುದು ಶಿಕ್ಷಣ ಕ್ಷೇತ್ರಕ್ಕೆ.ಹಾಗಿದ್ದೂ ಬಹುತೇಕ ಹಳ್ಳಿಯ ಮಕ್ಕಳಿಗೆ ನಗರದ ಶಾಲೆಗಳ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ.ಹಳ್ಳಿಗರೂ ತಮ್ಮ ಮಕ್ಕಳನ್ನು ನಗರದ ಕಾನ್ವೆಂಟ್ ಗಳಿಗೇ ಸೇರಿಸುತ್ತಿದ್ದಾರೆ.ತಮ್ಮ ಮಕ್ಕಳು ತಮ್ಮಂತೆ ರೈತರಾಗುವುದು ಬೇಡ ಎನ್ನುತ್ತಿದ್ದಾರೆ.ಸ್ಮಾರ್ಟ್ ಸಿಟಿಗಳಿಗೆ ಹೋಗಿ ಮಕ್ಕಳು ಸ್ಮಾರ್ಟ್ ಆಗಲಿ ಎಂಬ ಭಾವನೆ ಅವರಲ್ಲಿ ಬೆಳೆದು ನಿಂತಿದೆ.ತಾವು ಹಳ್ಳಿಯ ಜನರು ಎಂಬ ಕೀಳರಿಮೆ ಹಳ್ಳಿಗರಲ್ಲಿ ನಿಧಾನಕ್ಕೆ ಮೂಡತೊಡಗಿದೆ.ತಾನೊಬ್ಬ ರೈತ ಎಂದು ಆತ ತಲೆತಗ್ಗಿಸಿ ಹೇಳಬೇಕಾದ ಸ್ಥಿತಿ ಇನ್ನೂ ಇದೆ.ನಗರದ ಜನರು ಏನು ಪುಣ್ಯ ಮಾಡಿದ್ದಾರೆಂದು ಅವರಿಗೆ ಸ್ಮಾರ್ಟ್ ಸಿಟಿಯಲ್ಲಿ ಬದುಕುವ ಯೋಗವಿದೆ?ಹಾಗೆಯೇ ಹಳ್ಳಿಯ ಜನ ಯಾವ ಪಾಪ ಮಾಡಿದ್ದಾರೆಂದು ಹಳ್ಳಿಗಳ ಅಭಿವೃದ್ಧಿಯನ್ನು ನಿರ್ಲಕ್ಷಿಸಲಾಗುತ್ತಿದೆ?

ಹೇಳುತ್ತಾ ಹೋದರೆ ಇನ್ನೂ ಇದೆ.ಹಳ್ಳಿಯ ಮಕ್ಕಳಲ್ಲಿ ಅಪೌಷ್ಟಿಕತೆ ಇನ್ನೂ ಹೋಗಿಲ್ಲ,ಬಯಲು ಶೌಚ ಇನ್ನೂ ಕಣ್ಣಿಗೆ ಬೀಳುತ್ತದೆ.ಸ್ವಚ್ಛತೆಯ ಮಹತ್ವ ಗೊತ್ತಿಲ್ಲದ ಜನರು,ಶಾಲೆಗೇ ಹೋಗದೇ ಅಲೆಯುವ ಮಕ್ಕಳು ನಮ್ಮ ಹಳ್ಳಿಗಳಲ್ಲಿ ಇಂದಿಗೂ ಕಂಡು ಬರುತ್ತಾರೆ.ನಗರಕ್ಕೆ ಹತ್ತಿರದಲ್ಲೇ ಇರುವ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳನ್ನು ಹದಿನೆಂಟು ವರ್ಷ ತುಂಬುವ ಮೊದಲೇ ಮದುವೆ ಮಾಡುತ್ತಾರೆ.ಇಂಥ ಅಪಸವ್ಯಗಳನ್ನು ಸರಿಪಡಿಸುವತ್ತ ನಮ್ಮ ಸರ್ಕಾರಗಳು ಗಮನ ಹರಿಸಿ ನಂತರ ಸ್ಮಾರ್ಟ್ ಸಿಟಿ ನಿಧಾನಕ್ಕೆ ನಿರ್ಮಿಸಬಹುದಿತ್ತು.ಅಂಥ ಧಾವಂತ ತೋರಿ ಸ್ಮಾರ್ಟ್ ಆಗಲಿರುವ ನಗರಗಳ ಹೆಸರನ್ನೂ ಬಿಡುಗಡೆ ಮಾಡಬೇಕಿರಲಿಲ್ಲ.ತನ್ನ ಬಾಳೂ ಬಂಗಾರವಾಗುತ್ತದೆ ಎಂದು ಹಳ್ಳಿಯ ರೈತ ಕಾಯುತ್ತಲೇ ಇರುತ್ತಾನೆ.ಅತ್ತ ಆತನದೇ ಭೂಮಿಯಲ್ಲಿ ದೊಡ್ಡ ಕಂಪೆನಿಗಳು ತಲೆಯೆತ್ತುತ್ತವೆ.ನಗರೀಕರಣ,ಕೈಗಾರಿಕೀಕರಣದ ಹೆಸರಲ್ಲಿ ನಮ್ಮ ಹಳ್ಳಿಗಳ ಕಡೆ ಗಮನವೇ ಹರಿಸದೆ ನಿರ್ಲಕ್ಷ ಮಾಡಿದರೆ ಭಾರತ ಸ್ಮಾರ್ಟ್ ಸಿಟಿಗಳಿದ್ದೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗೇ ಉಳಿಯುತ್ತದೆ.ಕೇಂದ್ರದಲ್ಲಿ ಸಂಪೂರ್ಣ ಬಹುಮತದ ಸರ್ಕಾರವಿದೆ.ಇಂಥ ಅವಕಾಶವನ್ನು ದೇಶದ ಕಟ್ಟಕಡೆಯ ಶ್ರೀಸಾಮಾನ್ಯ ಪ್ರಜೆಯ ಅಭಿವೃದ್ಧಿಗೆ ಬಳಸಬೇಕೇ ಹೊರತು ನಗರೀಕರಣ ಮಾಡಲು ಭೂಸ್ವಾಧೀನ ಕಾಯ್ದೆಗೆ ಒಪ್ಪಿಗೆ ಕೊಡಲೇಬೇಕು ಎಂದು ವಿಪಕ್ಷಗಳೊಂದಿಗೆ ಗುದ್ದಾಡುವುದು ಅಷ್ಟಾಗಿ ಸರಿ ಕಾಣುವುದಿಲ್ಲ.

ನಮ್ಮ ಪ್ರಧಾನಿಯ ಮಾತನ್ನು ದೇಶದ ಜನ ಕೇಳುತ್ತಾರೆ.ಪ್ರಧಾನಿ ಸ್ವಚ್ಛ ಭಾರತ ಮಾಡಿ ಎಂದರು,ಜನ ಮಾಡಿದರು.ಅವರ ಮಾತಿಗೆ ಬೆಲೆ ಕೊಟ್ಟು ಜನ ಮಗಳ ಜೊತೆ ಸೆಲ್ಫೀ ತೆಗೆಸಿಕೊಂಡರು.ಆದರೆ ದೇಶದ ಹಳ್ಳಿಯ ರೈತ ಮಾತ್ರ ತನಗೆ ಆಶಾದಾಯಕವಾದ ಮಾತನ್ನು ಪ್ರಧಾನಿ ಆಡುತ್ತಾರೆ ಎಂದು ಕಾಯುತ್ತಲೇ ಇದ್ದಾನೆ.ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಮನಸ್ಸಿಗೆ ಸ್ಪೂರ್ತಿ ತುಂಬುವಂಥ ‘ಮನ್ ಕೀ ಬಾತ್’ ಅನ್ನು ಪ್ರಧಾನಿ ಆಡಿದರೆ,ಹಳ್ಳಿಗಳನ್ನು ಉತ್ತಮವಾಗಿಸಿ ನಂತರ ನಗರೀಕರಣ,ಕೈಗಾರಿಕೀಕರಣ ಮಾಡಿದರೆ ದೇಶಕ್ಕೆ ಅಚ್ಛೇದಿನ್’ ಬಂದು ಇಪ್ಪತ್ತೊಂದನೇ ಶತಮಾನ ಭಾರತದ ಸುವರ್ಣಯುಗವಾಗುತ್ತದೆ.

 

 – ಲಕ್ಷ್ಮೀಶ ಜೆ.ಹೆಗಡೆ

1 Response

  1. ಬಸವರಾಜ ಜೋತಿಬಾ ಜಗತಾಪ says:

    ರೈತರ ಕಷ್ಟಕ್ಕೆ ಎಕೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬ ವಿಷಯದ ಬಗ್ಗೆ ಯಾರು ಯೋಚನೆ ಮಾಡುತ್ತಿಲ್ಲ.ನಿಮ್ಮ ಬರಹಗಳ ಮುಖಾಂತರ ಇನ್ನೂ ಹೆಚ್ಚೆಚ್ಚು ಜನರ ಮನಸಿಗೆ ರೈತರ ಮನದ ನೋವುಗಳನ್ನ ತಲುಪಿಸಿ ಅಂತ ವಿನಂತಿ.ಜನ ಧನ ಆಯಿತು.ಸೆಲ್ಪಿ ವಿತ್ ಡಾಟರ್ ಆಯಿತು.ಇನ್ನೂ ರೈತರ ಬಗ್ಗೆ ಯಾವ ಯೋಜನೇ ಇದೆ ಅಂತಾ ಕಾಯಬೇಕಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: