ಕಷ್ಟಕಾಲ ಬಂದಾಗ…….!

Share Button

Divakara Dongre

ಪಿಯೂಷೇಣ ಸುರಾಃ ಶ್ರೀಯಾಃ ಮುರರಿಪು ಮರ್ಯಾದಯಾ ಮೇದಿನಿ
ಶಕ್ರಃ ಕಲ್ಪರುಹಾ ಶಶಾಂಕಕಲಯಾ ಶ್ರೀ ಶಂಕರಸ್ತೋಷಿತಃ |
ಮೈನಕಾದಿನಗಾ ನಿಜೋದರಗೃಹೇ ಯತ್ನೇನ ಸಂರಕ್ಷಿತಃ
ತಚ್ಚೂಲೀಕರಣೆ ಘಟೋದ್ಭವಮುನಿಃ ಕೆನಾಪಿ ನೋ ವಾರಿತಃ ||

ಬಹಳ ಹಿಂದೆ ಪರ್ವತಗಳಿಗೆ ರೆಕ್ಕೆಯಿತ್ತು. ಆಗೆಲ್ಲ ಅವುಗಳು ಒಂದೆಡೆಯಿಂದ ಇನ್ನೊಂದೆಡೆಗೆ ಹಾರುತ್ತಿದ್ದವು. ಪರ್ವತಗಳ ಈ ಹಾರಾಟದಿಂದಾಗಿ ಮೂರು ಲೋಕಗಳಿಗೂ ತೊಂದರೆಯುಂಟಾಗುತ್ತಿತ್ತು. ಇದನ್ನು ಗಮನಿಸಿದ ದೇವೇಂದ್ರ ತನ್ನ ವಜ್ರಾಯುಧದಿಂದ ಪರ್ವತಗಳ ರೆಕ್ಕೆಗಳನ್ನು ಕತ್ತರಿಸಿದ. ಪರಿಣಾಮ, ಪರ್ವತಗಳು ಹಾರುವುದಕ್ಕಾಗದೇ ತಾವಿದ್ದಲ್ಲೇ ನೆಲೆನಿಂತವು. ಆದರೆ ಹಿಮಾಲಯನ ಪುತ್ರ ಮೈನಾಕ ಮಾತ್ರ ಅದು ಹೇಗೋ ಇಂದ್ರನ ವಜ್ರಾಯುಧದಿಂದ ತಪ್ಪಿಸಿಕೊಂಡು ಸಮುದ್ರದಲ್ಲಿ ಅವಿತು ಕುಳಿತ. ಆಶ್ರಯವನ್ನು ಬೇಡಿ ಬಂದವರಿಗೆ ರಕ್ಷಣೆಯನ್ನು ನೀಡುವುದು ಸಜ್ಜನರ ಗುಣ. ಹೀಗೆ ತನ್ನನ್ನಾಶ್ರಯಿಸಿ ಬಂದ ಮೈನಾಕ ಮತ್ತು ಅವನ ಜತೆಯಲ್ಲಿ ಬಂದ ಪರ್ವತಗಳಿಗೆ ಆಶ್ರಯವಿತ್ತ ಸಮುದ್ರರಾಜನ ಉದಾರತೆಯಿಂದ ಮೈನಾಕನ ರೆಕ್ಕೆಗಳು ಉಳಿದವು. ಸಮುದ್ರರಾಜನ ಉದಾರತೆಗೆ ಮೂರುಲೋಕಗಳಲ್ಲಿ ಯಾರು ಸಾಟಿಯಲ್ಲ.

ಸಮುದ್ರ ಮಥನದ ಪ್ರಸಂಗವನ್ನೇ ನೆನಪಿಸಿಕೊಳ್ಳೋಣ. ಈ ಮಥನದ ಸಮಯದಲ್ಲಿ ತನ್ನಲ್ಲಿರುವ ಸರ್ವಸ್ವವನ್ನು ಆತ ದೇವತೆಗಳಿಗೆ ಹಂಚಿಬಿಟ್ಟ. ತನ್ನಲಿರುವ ಲಕ್ಷ್ಮಿಯನ್ನು ಆತ ಮಹಾವಿಷ್ಣುವಿಗೆ ನೀಡಿದ. ದೇವೇಂದ್ರನಿಗೆ ಬಯಸಿದುದನ್ನು ನೀಡುವ ಕಲ್ಪವೃಕ್ಷವನ್ನು, ಕಾಮಧೇನು, ಐರಾವತಗಳನ್ನು ನೀಡಿದ. ಭಗವಾನ್ ಶಂಕರನಿಗೆ ತನ್ನಲ್ಲಿದ್ದ ಚಂದ್ರಕಳೆಯನ್ನು ನೀಡಿದ. ಶಂಕರ ಅದನ್ನು ಸಂತೋಷದಿಂದ ತನ್ನ ತಲೆಯ ಮೇಲಿರಿಸಿಕೊಂಡು ದೇದೀಪ್ಯಮಾನನಾದ. ಈ ರೀತಿಯಲ್ಲಿ ಸ್ವರ್ಗದ ದೇವತೆಗಳನ್ನೆಲ್ಲ ಸಮುದ್ರರಾಜ ತೃಪ್ತಿಪಡಿಸಿದ. ಮೈನಾಕನಿಗೆ ಆಶ್ರಯವಿತ್ತದ್ದಲ್ಲದೆ ಸಮುದ್ರರಾಜ ತನ್ನನ್ನು ಶೋಷಿಸ್ತುರುವ ಅಗ್ನಿಗೂ ವಡವಾನಲನಾಗಿರುವಂತೆ ತನ್ನಲ್ಲಿ ಆಶ್ರಯವನ್ನಿತ್ತ. ಈ ಎಲ್ಲ ಘಟನೆಗಳು ಸಮುದ್ರರಾಜನ ಸಹಿಷ್ಣುತೆಗೆ, ಪರೋಪಕಾರ ಗುಣಕ್ಕೆ, ಹೃದಯವೈಶಾಲ್ಯತೆಗೆ ಸಾಕ್ಷಿ.

ಇಷ್ಟೆಲ್ಲ ಸದ್ಗುಣಗಳನ್ನು ಹೊಂದಿದ ಸಮುದ್ರರಾಜನೇ ಉಪಕೃತರಾದ ದೇವತೆಗಳಿಂದ ಅನಾದರಕ್ಕೊಳಗಾದ ಘಟನೆಯೊಂದು ಹೀಗಿದೆ. ಕಾಲೇಯನೆಂಬ ದಾನವ ಸಮುದ್ರದಲ್ಲಿ ಅಡಗಿಕೊಂಡು ದೇವತೆಗಳನ್ನು ಪೀಡಿಸುತ್ತಿದ್ದ. ಇದರ ಅರಿವು ಸ್ವತಃ ಸಮದ್ರರಾಜನಿಗೂ ಇರಲಿಲ್ಲ. ದೇವತೆಗಳೊಂದು ಉಪಾಯ ಹೂಡಿದರು. ಸಮುದ್ರನಲ್ಲಿ ಅಡಗಿದ್ದ ಕಾಲೇಯನನ್ನು ಸಂಹರಿಸಲು ಅಗಸ್ತ್ಯ ಮುನಿಯ ಮೊರೆಹೊಕ್ಕರು. ದೇವತೆಗಳ ವಿನಂತಿಯನ್ನು ಮನ್ನಿಸಿದ ಅಗಸ್ತ್ಯ ಮುನಿಗಳು ಸಮುದ್ರತೀರಕ್ಕೆ ಬಂದರು. ಸಮುದ್ರವನ್ನೇ ಆಪೋಷನ ತೆಗೆದುಕೊಂಡು ಕಾಲೇಯನ ಠಾವನ್ನು ಕಂಡುಹುಡುಕುವ ಉಪಾಯ ಅವರದು. ಲೋಕಕಲ್ಯಾಣಕ್ಕಾಗಿ ಕಾಲೇಯನನ್ನು ಸಂಹರಿಸುವಲ್ಲಿ ದೇವತೆಗಳಿಗೆ ನೆರವಾಗುವ ಅಗಸ್ತ್ಯ ಮುನಿಗಳ ಕಾರ್ಯವೇನೊ ಸ್ತುತ್ಯರ್ಹವೇ. ಆದರೇ ಉದಾರಿಯಾದ, ದೇವತೆಗಳಿಗೆ ತನ್ನ ಸಂಪತ್ತೆಲ್ಲವನ್ನು ನೀಡಿದ ಸಮುದ್ರರಾಜನ ಗತಿ? ಅವನು ಅಗಸ್ತ್ಯ ಮುನಿಗಳ ಉದರವನ್ನು ಸೇರಿ ಅಕ್ಷರಶಃ ನಿರ್ನಾಮವಾಗುವ ಪರಿಸ್ಥಿತಿ. ಸಮುದ್ರರಾಜನ ಈ ಕಷ್ಟಕಾಲದಲ್ಲಿ ಅವನಿಂದ ಉಪಕೃತರಾದ ದೇವತೆಗಳು ಅವನ ನೆರವಿಗೆ ಬರಬಹುದಿತ್ತಲ್ಲ? ಬಂದರೆ? ಖಂಡಿತ ಇಲ್ಲ.

Agatsya drinking ocean

ಲಕ್ಷ್ಮಿಯನ್ನು ಪಡೆದ ಮಹಾವಿಷ್ಣು ಬರಲಿಲ್ಲ.
ಚಂದ್ರನನ್ನು ಪಡೆದ ಚಂದ್ರಮೌಳಿ (ಶಿವ)ಯ ಸುಳಿವಿಲ್ಲ.
ಕಾಮಧೇನು, ಕಲ್ಪವೃಕ್ಷಗಳನ್ನು ಸಮುದ್ರರಾಜನಿಂದ ಬಳುವಳಿ ಪಡೆದ ದೇವೇಂದ್ರ ಸಮುದ್ರರಾಜನ ಕಡೆಗೆ ತಿರುಗಿಯೂ ನೋಡಲಿಲ್ಲ.
ನಮ್ಮಿಂದ ಉಪಕೃತರಾದವರು ನಮ್ಮ ಕಷ್ಟಕಾಲಕ್ಕೊದಗಿ ಬರುವುದಿಲ್ಲ ಎಂಬುದನ್ನು ಈ ಕಥೆ ನಮಗೆ ತಿಳಿಸುತ್ತದೆ.

 

– ದಿವಾಕರ ಡೋಂಗ್ರೆ ಎಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: