ನವರಾತ್ರಿ…..ಹುಲಿವೇಷ..
ನವರಾತ್ರಿ ಎಂದರೆ ಇಡೀ ದೇಶದಲ್ಲೇ ಸಡಗರದಿಂದ 9 ದಿನಗಳ ಕಾಲ ಆಚರಿಸುವ ಹಬ್ಬ. ಸ್ತ್ರೀರೂಪಿಣಿ ಶಕ್ತಿ ದೇವತೆಯ ವಿವಿಧ ರೂಪಗಳನ್ನು ಪೂಜಿಸುವ ಸಮಯವಿದು. ಅರಾಧನೆಗಳು ವಿವಿಧ ರೀತಿಯವು…ಅದರಲ್ಲಿ ನವರಾತ್ರಿ ಸಮಯದಲ್ಲಿ ಹಾಕುವ ಹುಲಿ ವೇಷವೂ ಒಂದು. ಇದು ಅವಿಭಜಿತ ದಕ್ಷಿಣಕನ್ನಡ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯ ಆಸು ಪಾಸು ಜಾಸ್ತಿ ಕಂಡುಬರುವುದು.
ಹುಲಿ ವೇಷ ಕುಣಿತವು ತುಳುನಾಡಿನ ಜಾನಪದ ಕಲಾ ಪ್ರಾಕಾರಗಳಲ್ಲೊಂದು. ಶಾರದಾದೇವಿ ಅಥವಾ ಸರಸ್ವತೀದೇವಿಯ ಆರಾಧನೆಯಲ್ಲಿ ಸಾಂಕೇತಿಕವಾಗಿ, ಅವಳಿಗೆ ಪ್ರಿಯವಾದ ಹುಲಿಯ ವೇಷವನ್ನು ಹಾಕುವರು. ಅಲ್ಲದೆ,ಉದುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಹಾಗೂ ಮೂಡಬಿದರೆಯಲ್ಲಿ ಗಣೇಶ ಚತುರ್ಥಿಯ ಸಮಯದಲ್ಲಿ ಹುಲಿಯ ವೇಷವನ್ನು ಹಾಕುವುದುಂಟು.
ಹೆಚ್ಚಾಗಿ 4 ರಿಂದ 10 ಜನ ಯುವಕರು ಮೈಮೇಲೆ ಹುಲಿ ವೇಷದ ಬಣ್ಣ ಬಳಿದು, ಮುಖಕ್ಕೆ ಹುಲಿಯ ಮುಖವಾಡವಿಟ್ಟು,ಬಾಲವನ್ನೂ ಸೇರಿಸಿಕೊಂಡು ಗುಂಪಿನಲ್ಲಿ, ಗುಂಪಿನ ಯಜಮಾನನೊಡನೆ ಹೋಗುವರು. ಜೊತೆಗೆ ಕುಣಿತಕ್ಕೆ ಜತೆಗೊಡಲು ಡೋಲು ಮತ್ತು ತಾಸೆ ಬಡಿಯುವವರೂ ಇರುತ್ತಾರೆ. ಆಯಾಯ ಊರಿನ ಬೀದಿ ಬದಿಯ ಅಂಗಡಿಗಳ ಮುಂದೆ ಹಾಗೂ ಊರಿನ ಮನೆಗಳ ಮುಂದೆ, 5-10 ನಿಮಿಷಗಳ ಕಾಲ ಕುಣಿಯುವರು. ಜನರು ಖುಷಿಯಲ್ಲಿ ಕೊಡುವ ದುಡ್ಡೇ ಅವರ ಅಲ್ಪ ಆದಾಯ. ಹಾಗೆಯೇ ಹರಕೆಗಾಗಿಯೂ ವೇಷ ಹಾಕುವುದುಂಟು.ಅವರಿಗೆ ಸಿಗುವ ದುಡ್ಡು ದೇವರಿಗೆ ಸಮರ್ಪಣೆಯಾಗುತ್ತದೆ. ಮೈಗೆ ಬಳಿದ ಬಣ್ಣ ನವರಾತ್ರಿಯ 9 ದಿನಗಳ ಕಾಲ ತೆಗೆಯುವಂತಿಲ್ಲ. ಈಗೀಗ ಮೈಗೆ ಬಣ್ಣ ಬಳಿಯುವ ಬದಲು ಸಿಂಹ ಅಥವಾ ಹುಲಿ ವೇಷದ ಉಡುಪು ತೊಟ್ಟು ರಾತ್ರಿ ಕಳಚಿಟ್ಟು ಮಲಗಿಬಿಡುತ್ತಾರೆ..!!
ಆ…ಅದೋ…ಅಲ್ಲಿ ಕೇಳಿ ಬರುತ್ತಿದೆ…ಸದ್ದು…ಡಂಗರ..ಟಕ್ಕರ..ಡಂಗರ..ಟಕ್ಕರ..!! ಹೌದು,ಹುಲಿ ವೇಷ ಬಂತೆಂದು ಕಾಣುತ್ತದೆ..! ಅದರ ಹಿಂದೆ ಮಕ್ಕಳ ಹಿಂಡೇ ಇದೆಯಲ್ಲಾ..ನಾನು ಚಿಕ್ಕವಳಿದ್ದಾಗ ಹುಲಿ ವೇಷ ಕಂಡರೆ ಹೆದರಿ ನಡುಗುತ್ತಿದ್ದೆ. ಈಗಿನ ಮಕ್ಕಳು ಧೈರ್ಯವಂತರಪ್ಪಾ. ಆಗ ನಮ್ಮ ಹಳ್ಳಿಯಲ್ಲಿ ಹುಲಿ ವೇಷಗಳು ತುಂಬಾ ಕಡಿಮೆ,ಕೊರಗ ವೇಷಗಳು ತುಂಬಾ ಬರುತ್ತಿದ್ದವು. ಮೈ ಇಡೀ ಕಪ್ಪು ಬಣ್ಣ ಬಳಿದುಕೊಂಡು ತಲೆಗೆ ಮುಟ್ಟಾಳೆ ( ಅಡಿಕೆ ಹಾಳೆಯಿಂದ ಮಾಡಿದ ಟೋಪಿ!) ಇಟ್ಟುಕೊಂಡು,ಕೈಯಲ್ಲಿ ಗೆರಟೆ ಹಿಡಿದುಕೊಂಡು ಬಂದರೆ, ನಿಜಾ ಕೊರಗರೊ ಅಲ್ಲಾ ವೇಷವೊ ಗೊತ್ತಾಗುತ್ತಿರಲಿಲ್ಲ!. ( ಇದು 50 ವರ್ಷಗಳ ಹಿಂದಿನ ಮಾತು) ಕೆಲವರು ಹರಿಕೆಗೆಂದು ವೇಷ ಹಾಕಿದರೆ,ಇನ್ನು ಕೆಲವರು ಸಂಪಾದನೆಗೋಸ್ಕರ..! ಹಾಗಾಗಿ,ಅದು ಇನ್ನ್ಯಾವುದಕ್ಕೋ ಖರ್ಚಾಗಿ ಬಿಡುತ್ತಿತ್ತು..
ಹಿಂದಿನ ಕಾಲದಲ್ಲಿದ್ದಂತೆ, ಪರಂಪರಾಗತ ಹುಲಿ ವೇಷವು ಈಗ ಇಲ್ಲ ಅನ್ನಿಸುತ್ತದೆ. ಸಮರ್ಪಣಾಭಾವದ ಕೊರತೆಯೂ ಕಾಣುತ್ತದೆ. ಎಲ್ಲಾ ಹಣಮಾಡುವ ದಂಧೆಯಂತೆ ಭಾಸವಾಗುತ್ತದೆ..ಆದರೂ, ಕೆಲವಾದರೂ ಚೆನ್ನಾಗಿರುವುದನ್ನು ಅಲ್ಲಲ್ಲಿ ಕಾಣಬಹುದು ಅಲ್ಲದೆ ಹುಲಿ ವೇಷದ ಸ್ಪರ್ಧೆಗಳನ್ನು ಏರ್ಪಡಿಸಿ ಅದಕ್ಕೆ ಪ್ರೋತ್ಸಾಹ ನೀಡುವುದೂ ಕಂಡುಬರುತ್ತಿದೆ.
ಹಾಗಾಗಿ.ಇನ್ನೂಈ ಜಾನಪದ ಕಲೆಯನ್ನು ನೋಡುವ ಭಾಗ್ಯ ಇದೆಯಲ್ಲಾ, ಅದಕ್ಕೆ ಖುಷಿ ಪಡೋಣ ಅಲ್ಲವೇ..??
– ಶಂಕರಿ ಶರ್ಮಾ, ಪುತ್ತೂರು