ಕಿರಾತಕಡ್ಡಿಯ ಕಷಾಯವೂ…. ಕ್ಯಾಂಪ್ಕೋ ಚಾಕಲೇಟೂ…….
ಕಿರಾತಕಡ್ಡಿಗೂ ನಮ್ಮ ಮನೆಗೂ ಅವಿನಾಭಾವದ ಹೊಂದಾಣಿಕೆ. ಮೊದಲಿಂದಲೇ ಹೀಗಾ ಎಂದರೆ ಅಲ್ಲ. ಆಮೇಲಾಮೇಲೆ ಇಂಗ್ಲಿಷ್ ಔಷಧಿ ಯಾಕೆ ಅಗತ್ಯ; ನಮ್ಮ ಕಾಲಬುಡದಲ್ಲಿ ಪ್ರಕೃತಿ ಕೊಟ್ಟ , ಅದೂ ಯಾವುದೇ ಸೈಡ್ ಇಫೆಕ್ಟ್ ಇಲ್ಲದ ಔಷಧ ಇದ್ದಾಗ ಅನ್ನಿಸಿದ್ದು ಸತ್ಯ. ಕಿರಾತಕಡ್ಡಿ ಅಂದರೆ ಅದ್ಯಾವ ಕಡ್ಡಿ ಅಂತ ಹುಬ್ಬೆತ್ತಿದವರೂ ಇದ್ದಾರೆ. ಅದು ಕಡ್ಡಿ ಅಲ್ಲ. ಹೆಸರು ಮಾತ್ರಾ ಹಾಗೆ ಅಷ್ಟೆ .
ಅಪರೂಪಕ್ಕೊಮ್ಮೆ ನನ್ನ ಹಸ್ಬೆಂಡ್ ಗೆ ಜ್ವರ ಬರುವುದಿದೆ. ಬಹುಶ ವರ್ಷಕೊಮ್ಮೆ . ಆಗ ಅವರೇ ಕಿರಾತಕಡ್ಡಿ ಕೊಯ್ದು ಕುದಿಸಿ ಅದಕ್ಕೆ ನಾಲ್ಕು ಒಳ್ಳೆಮೆಣಸು, ಶುಂಠಿ, ಸ್ವಲ್ಪ ಬೆಲ್ಲ ಹಾಕಿ ಕಷಾಯ ಮಾಡಿ ತಲೆದಿಂಬಿನ ಹತ್ತಿರ ಇಟ್ಟುಕೊಂಡು ಬಿಸಿ ಬಿಸಿಯಾಗಿ ಕುಡಿಯುತ್ತಾರೆ. ನಾಲ್ಕಾರು ಬಾರಿ ಕುಡಿದಾಗ ಆ ತನಕ ಮಲಗಿದವರು ಎದ್ದು “ಸ್ವಲ್ಪ ಕಾಸರಗೋಡಿನಲ್ಲಿ ಕೆಲಸವಿದೆ. ಬರುವಾಗ ಸಂಜೆ ಆಗ್ತದೆ” ಅಂತ ಹೇಳಿ ಎದ್ದು ಹೊರಡುತ್ತಾರೆ. “ಜ್ವರ ಯಾರಿಗೆ” ಅಂತ ಕೇಳಿದ್ರೆ ” ಅದೆಲ್ಲ ಕಮ್ಮಿ ಆಗಿದೆ ಅನ್ನುವ ಉತ್ತರ.
ಇನ್ನು ನಮ್ಮಲ್ಲಿ ಉಳಿದವರು ನಾವು ಮೂವರು. ಮಳೆಗೆ ನೆನೆದು ಬಂದು ಅಥವಾ ಜಡಿಮಳೆಗೆ ಅಭ್ಯಂಜನ ಮುಗಿಸಿ ತಲೆ ಸರಿ ಒರೆಸ್ಕೊಳ್ಳದೆ ಹಾಕ್….ಶೀ….ಹಾಕ್ಶೀ ಅಂತ ಆರಂಭಿಸಿದಾಗ ನನಗೆ ಗಾಬರಿ. ಆಕ್ಶೀ ..ಯ ಮಧ್ಯೆಯೇ ನನಗೆ ಉಪದೇಶ- ವರ್ಷಕ್ಕೊಮ್ಮೆ ಜ್ವರ ಬರಬೇಕು.ಅದು ಒಳ್ಳೆಯದು ಅಂತ. ರಾತ್ರೆ ಇಡೀ ಒದ್ದೆಬಟ್ಟೆ ಹಣೆಗೆ ಹಾಕಿ ಜಾಗರಣೆ ನಾನಲ್ವಾ ಮಾಡಬೇಕಾದ್ದು. ಹಾಗೆಂದು ಔಷಧಿ ಬೇಕಾ ಅಂದರೆ ಊಹೂಂ ಬೇಡ. ” ಕಿರಾತಕಡ್ಡಿ ಕೊಡು” ಅದ್ಯಾವ ಹೊತ್ತಿಗೆ ಅದಕ್ಕೆ ಡಿಮಾಂಡ್ ಮಾಡಿದರೂ ಕೈಗೆಟಕುವ ಹಾಗೆ ಇದೆ. ಕೊಯ್ದು, ಕುದಿಸಿ ಯಥಾಪ್ರಕಾರ ಒಳ್ಳೆಮೆಣಸು( ಪೆಪ್ಪರ್) ಬೆಲ್ಲ ಜಜ್ಜಿ ಹಾಕಿದರೆ ಮುಗೀತು. ತಯಾರಿ ಸುಲಭ ಆದರೆ ಅದಕ್ಕಿಂತ ಕಠಿಣದ ಕೆಲಸ ಕುಡಿಸುವುದು. ಅದು ಕಹಿ ಅಂತ ಗೊತ್ತು. ಬಾಯಿ ಚಪ್ಪರಿಸುತ್ತ ರುಚಿ ನೋಡದೆ ನೇರ ಗಂಟಲಿಗೆ ಹಾಕಿ ಕುಡಿದರಾಯ್ತು ಅಂತ ನಾನು. ನೆಟ್ಟಗೆ ನಿಂತು, ಕೂತು ನೇರ ಗಂಟಲಿಗೆ ಅವರಿಂದಲೇ ಹಾಕಲು ಆಗುವುದಿಲ್ಲ.ಮಕ್ಕಳು ಅದೆಷ್ಟೇ ದೊಡ್ಡವರಾದರೂ ಅಮ್ಮನಿಗೆ ಮಕ್ಕಳೇ ಅಲ್ವಾ ಸರಿ . ಕಾಲಿನ ಮೇಲೆ ಮಲಕ್ಕೊ ಅಂತ ಕಾಲು ನೀಡಿದರೆ ಆರಾಮ ಉದ್ದಕ್ಕೆ ಮಲಗುವುದು ನಿಜ. ಕಷಾಯ ಬಾಯ ಹತ್ತಿರ ತಂದರೆ ತಕ್ಷಣ ಬಾಯಿ ಮುಚ್ಚಿ ಬಿಡುವುದು. ರೇಗಿದರೆ “ಈ ಸಲ ಕುಡೀತೇನೆ” ಅಂತ ಭರವಸೆ. ಪುನಹ ಅದೇ ರಿಪೀಟ್. ನಮ್ಮ ದೇವರ ಸತ್ಯ ನಮ್ಗೆ ಗೊತ್ತಿಲ್ವಾ?
” ಅದು ಕಹೀ………..” ಅನ್ನುವ ರಾಗ. ಆಗ ಬಲಗೈಲಿ ಹಿಡಿದ ಕಷಾಯದ ಲೋಟ ಪಕ್ಕಕ್ಕೆ ಇಟ್ಟು ಆ ಮೊದಲೇ ಇಟ್ಟುಕೊಂಡಿದ್ದ ಮಂತ್ರದಂಡ ಕ್ಯಾಂಪ್ಕೋ ಚಾಕಲೇಟು ಎತ್ತಿ ಹಿಡಿದಾಗ ” ಮೊದಲು ಅದನ್ನೇ ಕೊಟ್ಟುಬಿಡು” ಅನ್ನುವ ದುರಾಸೆ” ಮೊದಲು ಕಿರಾತಕಡ್ದಿ , ಮತ್ತೆ ಚಾಕಲೇಟು” ನನ್ನ ಉತ್ತರ. ನಾಲ್ಕಾರು ಬಾರಿ ಬಾಯಿ ತೆರೆದು ಕಷಾಯ ಹತ್ತಿರ ತಂದಾಗ ಥಟಕ್ಕೆಂದು ಬಾಯಿ ಮುಚ್ಚಿ ಬಿಡುವ ಬುದ್ಧಿವಂತಿಕೆ. ಸರಿ. ಅಮ್ಮನಿಗೆ ಸಿಟ್ಟು ಬಂತು ಅಂತ ಗೊತ್ತಾದಾಗ ತೆಪ್ಪಗೆ ಬಾಯಿತೆರೆದು ” ಚಾಕಲೇಟು ಕೈಗೆ ಕೊಡು” ಅಂತ ಕೈಲಿಟ್ಟುಕೊಂಡು ಬಾಯಿ ತೆರೆದ ತಕ್ಷಣ ನಾನು “ನೇರ ಗಂಟಲಿಗೆ ಹಾಕಿಬಿಡುತ್ತೇನೆ.ರುಚಿ ನೋಡದೆ ನುಂಗು” ಅನ್ನುತ್ತ ಹಾಕಿಬಿಡುವುದೆ. ಎರಡೇ ಗುಟುಕು ಸಾಕಾಗುತ್ತದೆ. ಅಷ್ಟು ಕುಡಿಯಲು ಇಷ್ಟು ಆಟ. ಆ ತನಕ ಮಲಗಿದವರೆದ್ದು ಚಾಕಲೇಟು ಬಾಯಿಗೆ ಹಾಕುತ್ತ ಎದ್ದು ಹೊರಡುತ್ತಾರೆ. ಜ್ವರಕ್ಕೆ ದಿನಕ್ಕೆ ಮೂರು ಹೊತ್ತು ಕುಡಿ ಅಂದರೆ ಮೂರು ಹೊತ್ತಿಗೂ ಚಾಕಲೇಟು ಬೇಕು. ಹೋಗಲಿ. ಇಷ್ಟೆಲ್ಲ ಕಷ್ಟ ಯಾಕೆ? ಡಾಕ್ಟರ್ ಬಳಿ ಹೋಗುವುದಾ? ಅಂದರೆ ” ಎಲ್ಲ ಡಾಕ್ಟರ್ಸ್ ಆಂಟಿ ಬಯೋಟಿಕ್ಸ್ ಕೊಡ್ತಾರೆ. ಅದು ಬೇಡ. ಇದೇ ಇರಲಿ. ಹಾಗೆ ಆಂಟಿ ಬಯೋಟಿಕ್ಸ್ ತಗೊಳ್ಳಬಾರ್ದು” ಅಂತ ಉತ್ತರ. ಕಿರಾತಕಡ್ಡಿ ಮೂರು ಬಾರಿ ತಪ್ಪಿಸದೆ ಕುಡಿದೂ ಕುಡೀತಾರೆ. ಜ್ವರ ತಗ್ಗಿ ಸಂಜೆಗೇ ನಿತ್ಯದ ಚಟುವಟಿಕೆ ಶುರು.
ಇಷ್ಟೆಲ್ಲ ಔಷಧೀಯ ಗುಣ ಹೊಂದಿದ ಕಿರಾತಕಡ್ಡಿ ಒಂದು ಸಸ್ಯ, ಸಣ್ಣಕ್ಕೆ, ಹೆಚ್ಚೆಂದರೆ ಎರಡು ಅಡಿ ಬೆಳೆಯುತ್ತದೆ. ಎರಡಿಂಚು ಉದ್ದದ ಹಸಿರೆಲೆ. ಗಿಡ ಗುಂಪಾಗಿ ಹಬ್ಬಿ ಬೆಳೆಯುತ್ತದೆ. ಮಾರಕ ಚಿಕುನ್ ಗುನ್ಯಾ ಜನರನ್ನು ಬಾಧಿಸಿ ಹಿಂಡಿಹಿಪ್ಪೆ ಮಾಡಿ ಎಸೆದಾಗ ಈ ಅದ್ಭುತ ಔಷಧೀಯ ಸಸ್ಯ ಚಿಕುನ್ ಗುನ್ಯಾದ ಜ್ವರ ಗುಣ ಪಡಿಸಿ ಅದರ ಮಾರಕ ಪರಿಣಾಮವಾದ ತಡೆಯಲಸಾಧ್ಯವಾದ ಮೈಕೈ ನೋವು, ನಡೆಯಲಾಗದ ಕಠಿಣಾವಸ್ಥೆ, ಶರೀರವೆಲ್ಲ ಕೆಂಪಾಗುವಿಕೆ ( ಟೊಮೆಟೋ ಜ್ವರ) ಹಾಸಿಗೆ ಹಿಡಿಸಿ ಮೇಲೇಳಲಾಗದ ಸಂಕಷ್ಟ ಇದೆಲ್ಲಕ್ಕೆ ಪರಿಹಾರವಾಗಿ ಕಿರಾತಕಡ್ದಿ ಶಾಮಕವಾಗಿ ಪರಿಣಮಿಸಿತ್ತು. ಅಮೃತ ಬಳ್ಳಿ ಮತ್ತು ಕಿರಾತಕಡ್ಡಿಗಾಗಿ ಜನ ಮೈಲಿ ಮೈಲಿ ದೂರ ಅರಸುತ್ತ ಹೋಗಿದ್ದಿದೆ. ಶುದ್ಧ ಆಯುರ್ವೇದ ಚಿಕಿತ್ಸಾ ಪದ್ಧತಿಯ ಈ ಔಷಧ ಮನೆ ಮದ್ದು ಕೂಡಾ ನಿಜ. ನೆಟ್ಟಗೆ ನಿಲ್ಲಲೂ ಅಸಾಧ್ಯವಾಗಿದ್ದವರು ನೋವಿನಿಂದ ಬಿಡುಗಡೆ ಹೊಂದಿ ನಿಟ್ಟುಸಿರು ಬಿಟ್ಟರೆ ಅದರ ಹಿಂದೆ ಕಿರಾತಕಡ್ಡಿ ಇದೆ. ಇಂಗ್ಲಿಷ್ ಔಷಧಿಯ ಅಡ್ಡ ಪರಿಣಾಮ ಇಲ್ಲಿ ಇಲ್ಲ. ಸ್ವಲ್ಪ ಕಹಿ ಮಾತ್ರಾ. ಒಂದೆರಡು ದಿನ ಕುಡಿದರೆ ಜ್ವರ ಬಿಡುತ್ತದೆ. ಜ್ವರವಿಲ್ಲದಾಗಲೂ ಕುಡಿಯಬಹುದು. ಮನುಷ್ಯ ಶರೀರಕ್ಕೆ ಅಗತ್ಯವಿರುವ ರೆಸಿಸ್ಟೆನ್ಸ್ ಪವರ್ ಹೆಚ್ಚಿಸುವ ಈ ಅಮೂಲ್ಯ ಗಿಡಮೂಲಿಕೆ ಪ್ರಕೃತಿಯ ಅಪೂರ್ವ ಕೊಡುಗೆ ಮತ್ತು ಪ್ರಕೃತಿಯಲ್ಲೇ ಲಭ್ಯ. ಮನೆಯ ಹಿತ್ತಲ ಗಿಡ ಕಿರಾತಕಡ್ಡಿ. ಬೆಳೆಸಲು ಸುಲಭ. ಆಯಸ್ಸು ಹೆಚ್ಚು ಗಿಡಕ್ಕೆ. ಅಗತ್ಯವಿದ್ದಾಗ ಸಮೂಲ ಕಿತ್ತು ಕುದಿಸಿ ಕುಡಿಯಬಹುದು.
ಈಗ ನಮ್ಮಲ್ಲಿ ಜ್ವರ ಯಾರಿಗಾದರೂ ಬಂದಾಗ ಪೇಶೆಂಟೇ ‘‘ ಕಿರಾತಕಡ್ಡಿ ಕುಡಿಸಿಬಿಡು’‘ ಅಂತ ಸೂಚನೆ ಕೊಡುತ್ತಾರೆ. ಸಾಧಾರಣದ ಜ್ವರ ತಗ್ಗಿ ಗುಣವಾಗುತ್ತದೆ. ನಮ್ಮ ವೈದ್ಯರಿಗೆ ಫೋನ್ ಮಾಡಿದರೆ ಅವರೂ ಕಿರಾತಕಡ್ದಿ ಕೊಡಿ ಇಂದು. ನಾಳೆಗೆ ಕಮ್ಮಿ ಇಲ್ಲವಾದರೆ ಬನ್ನಿ” ಅಂತ ಹೇಳುವವರು. ಶೀತದ ಜ್ವರ, ನೆನೆದ ಕಾರಣಕ್ಕೆ, ಐಸ್ಕ್ರೀಂ ತಿಂದು, ಆಹಾರ ವ್ಯತ್ಯಾಸಕ್ಕೆ, ಹವೆ ವೈಪರೀತ್ಯಕ್ಕೆ, ಈ ಕಷಾಯ ಬೆಸ್ಟ್. ಅದು ಬಿಟ್ಟು ಮಾರಕ ಸಾಂಕ್ರಾಮಿಕ ಜ್ವರ ಹಬ್ಬುವ ಸಂದರ್ಭ, ಟೈಫಾಯ್ಡ್, ನ್ಯುಮೋನಿಯಾ, ಮಲೇರಿಯಾ ದ ಹಾಗಿನ ಜೀವಕಂಟಕ ತರುವ ಜ್ವರಗಳಲ್ಲಿ ಡಾಕ್ಟರ್ ಮೂಲಕ ಪರೀಕ್ಷೆ, ಅವರು ಪ್ರಿಸ್ಕ್ರೈಬ್ ಮಾಡುವ ಮೆಡಿಸಿನ್ ಸೇವನೆ ಅತ್ಯಾವಶ್ಯಕ. ಕಿರಾತಕಡ್ಡಿ ಹಗುರವಾದ ಜ್ವರಗಳಲ್ಲಿ ರಾಮಬಾಣ ಅನ್ನುವುದು ಸತ್ಯ.
ಕಿರಾತಕಡ್ಡಿಯನ್ನು ನೆಲಬೇವು ಮತ್ತು ಕಾಲಮೇಷ ಎಂದೂ ಕರೆಯಲಾಗುತ್ತದೆ. ಇದರ ಸಸ್ಯಶಾಸ್ತ್ರೀಯ ಹೆಸರು Andrographis Paniculate . ಕಿರಾತಕಡ್ಡಿಯ ಔಷಧೀಯ ಗುಣಕ್ಕೆ ಮನಸೋತ ಕೆಲವು ಕಂಪೆನಿಗಳು Herbal Tea Bag ರೂಪದಲ್ಲಿ ಮಾರುಕಟ್ಟೆಯನ್ನೂ ಸೃಷ್ಟಿಸಿವೆ.
– ಕೃಷ್ಣವೇಣಿ ಕಿದೂರು
ಉತ್ತಮ ನಿರೂಪಣೆಯೊಂದಿಗೆ ಉಪಯುಕ್ತ ಮಾಹಿತಿ ಲಭ್ಯವಾಯಿತು. ,
ಮಲೇರಿಯ ಜ್ವರಕ್ಕೂ ಉತ್ತಮ ಎನ್ನುತ್ತಾರೆ. ಮಧುಮೇಹಕ್ಕೂ ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಎರಡು ಚಿಗುರು ತಿನ್ನುತ್ತಾರೆ. ಒಟ್ಟಿನ ಮೇಲೆ ದಿವ್ಯೌಷಧ.
ಮೆಡಂ ನಮಸ್ಕಾರ, ಈ ನೆಲಬೇವು ಚರ್ಮ ದ ಕಾಯಿಲೆಗೆ ಬರುವುದೆ?